varthabharthi


ವೈವಿಧ್ಯ

ಸಿಎಎ: ದೇಶೀಯ ನೀತಿಗಳು ವಿಶ್ವಸಂಸ್ಥೆಯ ನಿಯಮಗಳನ್ನು ಗೌರವಿಸಬೇಕೇ?

ವಾರ್ತಾ ಭಾರತಿ : 18 Mar, 2020
ರಾಮ್ ಪುನಿಯಾನಿ

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಹೈಕಮಿಶನರ್ ಮಿಶೆಲ್ ಬ್ಯಾಶಲೆಟ್ ಸಿಎಎಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಇಂಟರ್‌ವೆನ್ಶನ್ ದಾವೆಯೊಂದನ್ನು ಹೂಡಿದ್ದಾರೆ. ಆಕೆಯ ಅರ್ಜಿ ಸಲ್ಲಿಕೆಗೆ ಪ್ರತಿಕ್ರಿಯಿಸುತ್ತ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಆಕೆ ಸಿಎಎಯನ್ನು ಟೀಕಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯುಎನ್‌ಎಚ್‌ಸಿಆರ್‌ನ ಕ್ರಮ ತಪ್ಪು ಮತ್ತು ಅದಕ್ಕೆ ದೇಶದ ಗಡಿಭಾಗದ ಭಯೋತ್ಪಾದನೆಯ ಸಮಸ್ಯೆಯ ಅರಿವಿಲ್ಲ ಎಂದಿದ್ದಾರೆ. ಆದರೆ ನಮ್ಮ ಮುಂದಿರುವುದು ಸಾವಿರಾರು ಮಂದಿ, ಮುಖ್ಯವಾಗಿ ಮುಸ್ಲಿಮರು, ದೇಶರಹಿತರೆಂದು ಘೋಷಿಸಲ್ಪಡುವ ಸಾಧ್ಯತೆ.

ಸಿಎಎ ಪ್ರಶ್ನೆ ಈಗಾಗಲೇ ವ್ಯಾಪಕವಾಗಿ ಚರ್ಚೆಗೊಳಗಾಗಿದೆ. ಅದಕ್ಕೆ ದೇಶಾದ್ಯಂತ ಬೃಹತ್ತಾಗಿ ಪ್ರತಿಭಟನೆ ವ್ಯಕ್ತವಾಗಿದ್ದರೂ ಸರಕಾರ ತಾನು ಇಟ್ಟಿರುವ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದೆ. ಇದು (ಸಿಎಎ) ಭಾರತದ ಆಂತರಿಕ ವಿಷಯ, ಇಲ್ಲಿ ಭಾರತದ ಸಾರ್ವಭೌಮತ್ವವಷ್ಟೇ ಮುಖ್ಯ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ಇಂದಿನ ಯುಗದಲ್ಲಿ ಯಾವುದೇ ಸಾರ್ವಭೌಮ ದೇಶ, ಅಂತರ್‌ರಾಷ್ಟ್ರೀಯ ಒಪ್ಪಂದವು ಹೇಳುವ ನಾಗರಿಕ ಹಾಗೂ ರಾಜಕೀಯ (ಐಸಿಸಿಪಿಆರ್) ಹಕ್ಕುಗಳು ಎತ್ತಿಹಿಡಿಯುವ ಪೌರತ್ವವನ್ನು ಪರಿಗಣಿಸಲೇ ಬೇಕಾಗುತ್ತದೆ.

ಹೀಗೆ ಬೃಹತ್ ಸಂಖ್ಯೆಯ ಜನರ ಪೌರತ್ವದ ಹಕ್ಕಿನ ಮೇಲೆ ಪರಿಣಾಮ ಬೀರುವ ಸಿಎಎಯಂತಹ ನೀತಿಗಳನ್ನು ಕೇವಲ ಆಂತರಿಕ ವಿಷಯವೆಂದು ಪರಿಗಣಿಸಲು ಸಾಧ್ಯವೇ? ಜಗತ್ತು ಒಂದು ಜಾಗತಿಕ ಹಳ್ಳಿಯಾಗಿರುವಾಗ, ಕಳೆದ ಕೆಲವು ದಶಕಗಳಲ್ಲಿ ಕೆಲವಾರು ಜಾಗತಿಕ ನಿಯಮಗಳನ್ನು ರೂಪಿಸಲಾಗಿದೆ. ಮಾನವ ಹಕ್ಕುಗಳನ್ನು ಮತ್ತು ವಲಸೆಗಳಿಗೆ ಸಂಬಂಧಿಸಿ ನಿಯಮಗಳನ್ನು ರಚಿಸಲಾಗಿದೆ. ಐಸಿಸಿಪಿಆರ್ ಸೇರಿದಂತೆ ಇಂತಹ ನಿಯಮಗಳಿರುವ ಹಲವು ಒಡಂಬಡಿಕೆಗಳಿಗೆ ಭಾರತ ಕೂಡ ಸಹಿ ಹಾಕಿದೆ. ನಮ್ಮ ಮುಂದೆ ಇರುವುದು ವಿಶ್ವದಾದ್ಯಂತ ಎಲ್ಲ ಜನರ ಮಾನವ ಹಕ್ಕುಗಳನ್ನು ರಕ್ಷಿಸಲು ಬಯಸುವ ಸಂಘಟನೆಗಳು ಪ್ರತಿಪಾದಿಸುವ ವೌಲ್ಯಗಳು ಹಾಗೂ ಅಭಿಪ್ರಾಯಗಳು. ಈ ವಿಷಯದಲ್ಲಿ ಈಗ ಭಾರತ ವಿಶ್ವಸಂಸ್ಥೆಯನ್ನು ಒಂದು ‘‘ವಿದೇಶೀ ಸಂಸ್ಥೆ’’ ಎಂದು ಕರೆಯುತ್ತಿದೆ ಮತ್ತು ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಹಕ್ಕು ಅದಕ್ಕಿಲ್ಲ ಎಂದು ಹೇಳುತ್ತಿದೆ. ನಿಜ ವಿಷಯವೆಂದರೆ, ವಿಶ್ವಸಂಸ್ಥೆಯ ಒಡಂಬಡಿಕೆಗೆ ಹಲವು ದೇಶಗಳು ಸಹಿ ಹಾಕಿರುವುದರಿಂದ, ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಹಲವು ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿವೆ ಮತ್ತು ಅಮಿಕಸ್ (ನ್ಯಾಯಾಲಯದ ಗೆಳೆಯ)ನಾಗಿ ಹಲವು ದೇಶಗಳಲ್ಲಿ ಕಾನೂನಿನ ಮಟ್ಟದಲ್ಲಿ ಮಧ್ಯಪ್ರವೇಶಿಸುತ್ತಿವೆ. ಉದಾಹರಣೆಗೆ ಅವುಗಳು ಅಮೆರಿಕದ ಸುಪ್ರೀಂ ಕೋರ್ಟ್, ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್, ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ ಹೀಗೆ ಮಧ್ಯಪ್ರವೇಶಿಸಿ ಜನರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನ ಮಾಡಿವೆ.

ಹಲವು ರಾಷ್ಟ್ರಗಳು ಜಂಟಿಯಾಗಿ ನೀತಿಗಳನ್ನು ರೂಪಿಸಿವೆ. ಈ ಮಧ್ಯಪ್ರವೇಶಗಳು ಯಾವ್ಯಾವ ರೀತಿಯ ಜಾಗತಿಕ ನಿಯಮಗಳನ್ನು ರೂಪಿಸಿ ರಚಿಸಲಾಗಿದೆ ಎಂಬುದನ್ನು ತಮ್ಮ ದೇಶದೊಳಗೆ, ಮಾನವ ಹಕ್ಕುಗಳನ್ನು ಉಲ್ಲಂಘಿಸುವ ದೇಶಗಳಿಗೆ ಜ್ಞಾಪಿಸುತ್ತವೆ ಮತ್ತು ಆ ದೇಶಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದನ್ನು ಸೂಚಿಸುತ್ತವೆ. ಯುಎನ್‌ಎಚ್‌ಸಿಆರ್, ಸ್ಪೈನ್ ಮತ್ತು ಇಟಲಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯದಲ್ಲಿ ಮಧ್ಯಪ್ರವೇಶ ಮಾಡಿದೆ.

ಆಗಾಗ, ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್‌ನಂತಹ ಸಂಘಟನೆಗಳು ವಿವಿಧ ದೇಶಗಳ ಮಾನವ ಹಕ್ಕುಗಳ ಸ್ಥಿತಿಯನ್ನು ಪರಿಶೀಲಿಸುತ್ತಿರುತ್ತವೆ. ಇದು ಆ ದೇಶಗಳಿಗೆ ಇರಿಸುಮುರುಸು ಉಂಟುಮಾಡುತ್ತದೆ. ಆದರೆ ‘ಆಂತರಿಕ ವ್ಯವಹಾರ’, ‘ಸಾರ್ವಭೌಮತ್ವ’ ಹಾಗೂ ಮಾನವ ಹಕ್ಕುಗಳ ಕುರಿತಾದ ನಿಯಮಗಳ ನಡುವಿನ ವೈದೃಶ್ಯವನ್ನು ಹೋಗಲಾಡಿಸುವುದು ಹೇಗೆ? ಇದು ವಿಶ್ವದಾದ್ಯಂತ ಸ್ವಾತಂತ್ರ ಸೂಚ್ಯಂಕಗಳು ಹಾಗೂ ಪ್ರಜಾಸತ್ತಾತ್ಮಕ ವೌಲ್ಯಗಳು ಕುಸಿಯುತ್ತಿರುವಾಗ ಒಂದು ಕಠಿಣವಾದ ಸವಾಲು. ಭಾರತದಲ್ಲಿ ಕೂಡ ಈ ಸೂಚ್ಯಂಕದಲ್ಲಿ ಇಳಿಕೆಯಾಗಿದೆ.

ಸಮಾನತೆ ಮತ್ತು ತಾರತಮ್ಯ ರಹಿತತೆಯ ದೃಷ್ಟಿಯಿಂದ ನಾವು ಭಾರತದ ವಿಷಯದಲ್ಲಿ ವಿಶ್ವಸಂಸ್ಥೆಯ ಮಧ್ಯಪ್ರವೇಶವನ್ನು ಗಮನಿಸಬೇಕಾಗಿದೆ. ಸರಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪುನರ್‌ಚಿಂತನೆ ನಡೆಸುವಂತೆ ಪ್ರಜಾಸತ್ತಾತ್ಮಕ ಸ್ಫೂರ್ತಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿದೆ. ಶಾಹೀನ್‌ಬಾಗ್‌ನಲ್ಲಿ ನಡೆದಿರುವುದನ್ನು ಗಮನಿಸಿ ಸರಕಾರವು ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅಂತರ್‌ರಾಷ್ಟ್ರೀಯ ನೈತಿಕತೆಗೆ ಅದು ಗೌರವ ನೀಡಬೇಕಾಗಿದೆ.

ಕಂದಮಾಲ್‌ನಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಎಸಗಿದಾಗ ಕ್ರಿಶ್ಚಿಯನ್ ಸಮುದಾಯ ಅದರ ವಿರುದ್ಧ ಸಾಕಷ್ಟು ಗಟ್ಟಿಯಾಗಿ ಧ್ವನಿ ಎತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈಗ ದಿಲ್ಲಿಯ ಹಿಂಸೆಯ ವಿರುದ್ಧ ಮುಸ್ಲಿಮ್ ಬಹುಸಂಖ್ಯಾತ ಹಲವು ದೇಶಗಳು ಧ್ವನಿ ಎತ್ತಿವೆ. ಮುಸ್ಲಿಮ್ ರಾಷ್ಟ್ರಗಳೊಂದಿಗೆ ತನಗಿರುವ ಉತ್ತಮ ಸಂಬಂಧ ಕಾಂಗ್ರೆಸ್‌ನ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದು ಹೇಳುವ ಮೋದಿಯವರು, ತನ್ನ ಸ್ವಪ್ರಶಂಸೆಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ ಭಾರತದಲ್ಲಿ ಮೋದಿ ಆಡಳಿತ ಮಾಡುತ್ತಿರುವ ಅವಾಂತರಗಳ ವಿರುದ್ಧ ಇರಾನ್, ಮಲೇಶ್ಯ, ಇಂಡೋನೇಶ್ಯ ಮತ್ತು ಹಲವು ಮುಸ್ಲಿಮ್ ಬಹುಸಂಖ್ಯಾತ ದೇಶಗಳು ಧ್ವನಿ ಎತ್ತಿವೆ. ಬಾಂಗ್ಲಾದೇಶ ಕೂಡ ಪ್ರತಿಭಟಿಸಿದೆ. ಆದ್ದರಿಂದ ‘ಆಂತರಿಕ ವಿಷಯ’ ಇತ್ಯಾದಿಗಿಂತ ಹೆಚ್ಚಾಗಿ ಸಿಎಎ ಕುರಿತಾದ ನೈತಿಕ ಮುಖದ ಬಗ್ಗೆ ಯೋಚಿಸಬೇಕಾಗಿದೆ.

ಭಾರತ ಸರಕಾರವು ತನ್ನ ಅಂತರ್‌ರಾಷ್ಟ್ರೀಯ ಬಾಧ್ಯತೆಗಳು, ಸಿಎಎಯಿಂದಾಗಿ ವಿಶ್ವದಲ್ಲಿ ಹದಗೆಡುತ್ತಿರುವ ಭಾರತದ ಪ್ರತಿಷ್ಠೆ ಮತ್ತು ದಿಲ್ಲಿಯಲ್ಲಿ ನಡೆದ ಭಯಾನಕ ಹಿಂಸೆಯ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡೀತೆಂದು ಭಾವಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)