varthabharthi


ವೈವಿಧ್ಯ

ಭಾರತವು ‘ಕೋವಿಡ್19’ ಮಹಾಸಾಂಕ್ರಾಮಿಕವು ಕೋಲಾಹಲಕಾರಿಯಾಗದಂತೆ ತಡೆಯಬಲ್ಲದೇ?

ವಾರ್ತಾ ಭಾರತಿ : 20 Mar, 2020
ಐ. ಪಿ. ವಾಜಪೇಯಿ (ಮಾರ್ಚ್18ರಂದು ಎನ್‌ಡಿಟಿವಿಯ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದ ಬರಹದ ಅನುವಾದ)

‘ಕೋವಿಡ್19’ರ ಸೋಂಕು ಇರುವ ದೇಶಗಳಿಂದ ಜನರನ್ನು ಬರದಂತೆ ತಡೆಯುವ, ಶಾಲೆ-ಕಾಲೇಜುಗಳನ್ನು ಮುಚ್ಚುವ ಮತ್ತು ಐಟಿ-ಬಿಟಿ ನೌಕರರು ಮನೆಯಿಂದಲೇ ಕೆಲಸ ಮಾಡುವ ಮೂರು ಕ್ರಮಗಳನ್ನು ಜಾರಿಗೆ ತಂದ ಈ ಅಧಿಕಾರಶಾಹಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ನಿದ್ದೆಗೆ ಜಾರಿಬಿಟ್ಟಿದೆ. ಇದಕ್ಕೆ ಕಾರಣ ತಮಗೇ ಎಲ್ಲಾ ತಿಳಿದಿದೆ ಎನ್ನುವ ಹುಂಬತನ. ನಿಧಾನವಾಗಿ ಸೋಂಕು ಪೀಡಿತರ ಸಂಖ್ಯೆ ಏರುತ್ತಿರುವುದನ್ನು ನೋಡಿದಾಗ, ಸೋಂಕು ಹರಡುವ ಮೂರನೇ ಹಂತಕ್ಕೆ ನಾವು ಸಮೀಪವಿದ್ದೇವೆ ಎನಿಸುತ್ತದೆ. ಮೂರನೇ ಹಂತದಲ್ಲಿ ಸೋಂಕು ಸಮುದಾಯದ ಮೂಲಕ ಹರಡತೊಡಗುತ್ತದೆ. ಒಂದು ವೇಳೆ ಮೂರನೇ ಹಂತಕ್ಕೆ ಸೋಂಕು ಹರಡದಂತೆ ನೋಡಿಕೊಂಡಿದ್ದೇವೆ ಎನ್ನುವುದು ಸತ್ಯವಾದರೂ, ಮುಂದಿನ ದಿನಗಳನ್ನು ಹೇಗೆ ನಿಭಾಯಿಸಲಾಗುತ್ತ್ತದೆ ಎನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ.

‘‘ಸದಾ ಸಿದ್ಧನಾಗಿರು’’ ಇದು ಸ್ಕೌಟ್ಸ್‌ನವರ ಗುರಿ. ದುರಂತವೆಂದರೆ, ಅಮೆರಿಕ, ಚೀನಾ ದೇಶಗಳ ಸರಕಾರಗಳನ್ನು ಒಳಗೊಂಡಂತೆ ಬಹುತೇಕ ಸರಕಾರಗಳು ಇದನ್ನು ಮರೆತ ಕಾರಣ, ಇಂದು ಜನರು ‘ಕೋವಿಡ್19’ರ ಪ್ರಭಾವಕ್ಕೆ ಸಿಲುಕಿ ನರಳುತ್ತಿದ್ದಾರೆ.

ಭಾರತದ ಆರಂಭಿಕ ಕ್ರಮಗಳು ಸ್ವಲ್ಪಮಟ್ಟಿಗೆ ಸಹಾಯ ಮಾಡಿದ್ದು ನಿಜವಾದರೂ, ಒಂದು ದೇಶವಾಗಿ ಹೊರಜಗತ್ತಿನೊಂದಿಗೆ ನಾವು ಕಡಿಮೆ ಪ್ರಮಾಣದ ಸಂಪರ್ಕವನ್ನು ಹೊಂದಿರುವ ಕಾರಣ (ಉದಾ: ದಕ್ಷಿಣ ಕೊರಿಯ, ಇಟಲಿ ಮುಂತಾದ ದೇಶಗಳ ಜನರಂತೆ ನಮ್ಮಲ್ಲಿ ಹೆಚ್ಚು ಓಡಾಡುವವರ ಸಂಖ್ಯೆ ಕಡಿಮೆ) ಈ ಭೀಕರ ಸಾಂಕ್ರಾಮಿಕ ರೋಗದಿಂದ ನಾವು ತಕ್ಕಮಟ್ಟಿಗೆ ಸುರಕ್ಷಿತವಾಗಿದ್ದಂತೆ ತೋರುತ್ತದೆ. ಇದರ ಜೊತೆಗೆ ಇನ್ನೊಂದು ತರ್ಕವೂ ಇದೆ. ಅದೇನೆಂದರೆ, ನಾವು ಸಾಕಷ್ಟು ಪರೀಕ್ಷೆಗಳನ್ನು ಮಾಡದೇ ಇರುವುದರಿಂದ (ಕೋವಿಡ್19 ಅನ್ನು ಪತ್ತೆಹಚ್ಚುವ ವೈದ್ಯಕೀಯ ಪರೀಕ್ಷೆಗಳು) ಸೋಂಕು ಇರುವವರ ಸಂಖ್ಯೆ ಕಡಿಮೆ ಎಂದಾಗಿದೆ! ಬಹುಶಃ ಸತ್ಯ ಇವರೆಡರ ನಡುವೆ ಎಲ್ಲೋ ಅಡಗಿದೆ.

ಇತಿಹಾಸವನ್ನು ಹೊರಳಿ ನೋಡಿದಾಗ, ನಾವು ಅಪೂರ್ಣ ತಯಾರಿ ಮಾಡಿಕೊಂಡ ಅನೇಕ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಎಷ್ಟೋ ಬಾರಿ ಯಾವುದೇ ತಯಾರಿಯನ್ನೇ ಮಾಡಿಕೊಳ್ಳದೆ ಸಿಕ್ಕಿಬಿದ್ದಿರುವುದೂ ಇದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಇವುಗಳನ್ನು ಜಾರಿಗೆ ತಂದ ಉದಾಹರಣೆಗಳನ್ನೇ ನೋಡಿದರೆ ಒಂದಂತೂ ಸ್ಪಷ್ಟವಾಗುತ್ತದೆ: ಜನ ಸಮುದಾಯ ಪಾಲುದಾರರಾಗಿರುವ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳಲು ಹೋಗಿ, ಗಲಿಬಿಲಿ ಮಾಡಿಕೊಂಡು ನಾವು ಹೀನಾಯವಾಗಿ ಸೋತ್ತಿದ್ದೇವೆಯೇ ಹೊರತು, ಯಶಸ್ವಿಯಾಗಿ ಗೆದ್ದಿರುವ ಉದಾಹರಣೆಗಳೇ ಇಲ್ಲ. ನಮ್ಮ ಅಧಿಕಾರಶಾಹಿಯ ಪರಿಸ್ಥಿತಿ ಹೇಗಿದೆ ಎಂದರೆ, ಸಮಸ್ಯೆಯನ್ನು ಬಗೆಹರಿಸಲು ಹೋಗಿ ಇನ್ನಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆಯೇ ವಿನಃ ಪರಿಹರಿಸುವ ಸಾಧ್ಯತೆಯೇ ಇರುವುದಿಲ್ಲ.

‘ಕೋವಿಡ್19’ರ ಸೋಂಕು ಇರುವ ದೇಶಗಳಿಂದ ಜನರನ್ನು ಬರದಂತೆ ತಡೆಯುವ, ಶಾಲೆ-ಕಾಲೇಜುಗಳನ್ನು ಮುಚ್ಚುವ ಮತ್ತು ಐಟಿ-ಬಿಟಿ ನೌಕರರು ಮನೆಯಿಂದಲೇ ಕೆಲಸ ಮಾಡುವ ಮೂರು ಕ್ರಮಗಳನ್ನು ಜಾರಿಗೆ ತಂದ ಈ ಅಧಿಕಾರಶಾಹಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ನಿದ್ದೆಗೆ ಜಾರಿಬಿಟ್ಟಿದೆ. ಇದಕ್ಕೆ ಕಾರಣ ತಮಗೇ ಎಲ್ಲಾ ತಿಳಿದಿದೆ ಎನ್ನುವ ಹುಂಬತನ. ನಿಧಾನವಾಗಿ ಸೋಂಕು ಪೀಡಿತರ ಸಂಖ್ಯೆ ಏರುತ್ತಿರುವುದನ್ನು ನೋಡಿದಾಗ, ಸೋಂಕು ಹರಡುವ ಮೂರನೇ ಹಂತಕ್ಕೆ ನಾವು ಸಮೀಪವಿದ್ದೇವೆ ಎನಿಸುತ್ತದೆ. ಮೂರನೇ ಹಂತದಲ್ಲಿ ಸೋಂಕು ಸಮುದಾಯದ ಮೂಲಕ ಹರಡತೊಡಗುತ್ತದೆ. ಒಂದು ವೇಳೆ ಮೂರನೇ ಹಂತಕ್ಕೆ ಸೋಂಕು ಹರಡದಂತೆ ನೋಡಿಕೊಂಡಿದ್ದೇವೆ ಎನ್ನುವುದು ಸತ್ಯವಾದರೂ, ಮುಂದಿನ ದಿನಗಳನ್ನು ಹೇಗೆ ನಿಭಾಯಿಸಲಾಗುತ್ತ್ತದೆ ಎನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ. ಇಲ್ಲಿ ಎರಡು ಸಾಧ್ಯತೆಗಳನ್ನು ನೋಡಬೇಕಿದೆ: 1. ಮೂರನೇ ಹಂತಕ್ಕೆ ಸೋಂಕು ಹರಡದಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳು. 2. ಅತ್ಯಂತ ಭೀಕರ ಪರಿಸ್ಥಿತಿಯನ್ನು ನಿಭಾಯಿಸುವ ತಯಾರಿ. ಇವುಗಳನ್ನು ಈಗಲೇ ಮಾಡದೇ ಹೋದರೆ, ಈಗಿರುವ ಗಾಬರಿ ಕೊೀಲಾಹಲದ ಸ್ಥಿತಿಗೆ ದಾರಿಯಾಗಿಬಿಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳನ್ನು ಮತ್ತು ವೈದ್ಯರನ್ನೂ ಒಳಗೊಂಡಂತೆ ಎಲ್ಲರೂ ಆರಂಭದಿಂದಲೂ ಹೇಳುತ್ತಿರುವುದು ಒಂದೇ ಮಾತು: ಸಾಧ್ಯವಾದಷ್ಟು ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿ. ಸರಕಾರದ ಪ್ರಕಾರ ಕಳೆದ ವಾರ 500 ಜನರನ್ನು ಪರೀಕ್ಷಿಸಿದೆ (ಎಲ್ಲರೂ ನೆಗೆಟಿವ್) ಮತ್ತು ಈ ವಾರ 500 ಜನರನ್ನು ಪರೀಕ್ಷೆಗೆ ಒಳಪಡಿಸಿದೆ. 1.4 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 1000 ಜನರನ್ನು ಹದಿನಾಲ್ಕು ದಿನಗಳಲ್ಲಿ ಪರೀಕ್ಷಿಸಲಾಗಿದೆ! ಮತದಾನ ಹೇಗಾಯಿತು ಎಂದು ಅರಿಯಲು ಎಕ್ಸಿಟ್ ಪೋಲ್‌ಗಳು ಸರಾಸರಿ ಒಂದು ಲಕ್ಷ ಜನರನ್ನು ಕೇಳಿನೋಡುತ್ತವೆ; ಆದರೂ ಅವುಗಳ ಫಲಿತಾಂಶ ಬಹಳಷ್ಟು ಬಾರಿ ತಪ್ಪಾಗುತ್ತದೆ! ಇಂತಹುದರಲ್ಲಿ, ಕೇವಲ ಒಂದು ಸಾವಿರ ಜನರನ್ನು ಪರೀಕ್ಷಿಸಿ, ನೂರು ಕೋಟಿ ಜನರ ಆರೋಗ್ಯ ಸ್ಥಿತಿಯನ್ನು ಹೇಳುತ್ತೇವೆ ಎನ್ನುವ ಹುಂಬತನವನ್ನು ಏನನ್ನೋಣ?

ಹೋಗಲಿ ಈ ಪರೀಕ್ಷೆಯನ್ನು ಕೇರಳದಲ್ಲೋ ಅಥವಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರದಲ್ಲೋ ಮಾಡಿ ನೋಡಿದರೇ? ಊಹೂಂ. ಇಲ್ಲ! ಸುಮಾರು 50 ಪರೀಕ್ಷಾ ಕೇಂದ್ರಗಳು ತಮ್ಮ ಸುತ್ತಮುತ್ತಲಿನ ಜನರನ್ನು ಪರೀಕ್ಷಿಸಿ ನೋಡಿ ಹೇಳಿರುವ ಫಲಿತಾಂಶವಿದು! ಇರಲಿ, ನಾವಿನ್ನೂ ಎರಡನೇ ಹಂತದಲ್ಲೇ ಇದ್ದೇವೆ (ಸೋಂಕಿತ ವ್ಯಕ್ತಿಯ ಜೊತೆಯಲ್ಲಿರುವವರಿಗೆ ಮಾತ್ರ ಸೋಂಕು ಹರಡುವ ಪರಿಸ್ಥಿತಿ) ಎಂದುಕೊಂಡರೂ, ಮೂರನೇ ಹಂತಕ್ಕೆ ಪರಿಸ್ಥಿತಿ ಜಾರಿಹೋಗದಂತೆ ಏನು ಕ್ರಮವಹಿಸಿದ್ದೇವೆ? ಮೂರನೇ ಹಂತವನ್ನು ತಡೆಯದೇ ಹೋದಲ್ಲಿ, ನಾಲ್ಕನೇ ಹಂತವನ್ನು (ಮಹಾಸಾಂಕ್ರಾಮಿಕ) ತಡೆಯುವ ಬಗೆ ಹೇಗೆ? ಒಂದು ವಿಷಯ ನೆನಪಿರಬೇಕು. ಮೂರನೇ ಹಂತವನ್ನು ನಾವು ತಡೆಗಟ್ಟಲು ಸೋತರೆ, ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಸೋಂಕು ಎಷ್ಟು ವೇಗವಾಗಿ ಹರಡುತ್ತದೆ ಎಂದರೆ, ಇದುವರೆಗೂ ಮನುಷ್ಯನ ಇತಿಹಾಸದಲ್ಲಿ ಕಂಡುಕೇಳರಿಯದ ಪರಿಸ್ಥಿತಿ ಇದಾಗಿರುತ್ತದೆ.

ಅಸಂಖ್ಯಾತ ಸ್ಲಂಗಳಿಂದ ಕೂಡಿರುವ ನಮ್ಮ ಮಹಾನಗರಗಳಲ್ಲಿ ಒಂದು ಕೋಣೆಯ ಇಲ್ಲವೇ ಎರಡು ಕೋಣೆಯ ಮನೆಗಳನ್ನು ಹೊಂದಿರುವವರ ಸಂಖ್ಯೆಯೇ ಜಾಸ್ತಿ. ಬಹುತೇಕ ಕುಟುಂಬಗಳು ಶೌಚಾಲಯಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ಹೊಂದಿರುವಂತಹವು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಸೂತ್ರ ಕೆಲಸ ಮಾಡುವುದಿಲ್ಲ. ವಠಾರವೊಂದರಲ್ಲಿ ವಾಸಿಸುವ ಒಬ್ಬರೋ ಇಬ್ಬರೋ ಸೋಂಕುಪೀಡಿತರಾದರೆ ಸಾಕು, ಉಳಿದವರನ್ನು ರಕ್ಷಿಸಲು ಅವಕಾಶವಿದೆಯೇ? ಕ್ಷಣಾರ್ಧದಲ್ಲಿ ವಠಾರದಿಂದ ವಠಾರಕ್ಕೆ ಸೋಂಕು ಹರಡಿರುತ್ತದೆ.

ನಮ್ಮಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಮೂರು ಅಡಿ ಅಂತರವನ್ನು ಕಾಪಾಡುವ ಬಗೆಯಾದರೂ ಹೇಗೆ? ರಸ್ತೆ ದಾಟಬೇಕಾದರೆ ಒಬ್ಬರ ಮೇಲೆ ಒಬ್ಬರು ಬಿದ್ದು, ನೂಕಾಡಿ ತಳ್ಳಾಡಿ ಓಡಾಡುವ ಅನಿವಾರ್ಯ ಸ್ಥಿತಿ ನಮ್ಮದು. ಅರೆ ಸಾಕ್ಷರರನ್ನು, ಬಡವರನ್ನು ಮತ್ತು ಅಶಿಸ್ತಿನ ಸ್ವಭಾವವನ್ನು ಹೊಂದಿರುವ ಸಮಾಜವನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರು ಅವರೇ ಸ್ವತಃ ಸ್ವಯಂ ಶಿಸ್ತನ್ನು ಪಾಲಿಸಿಕೊಂಡು ಪ್ರತ್ಯೇಕತೆಯನ್ನೋ ಇಲ್ಲವೇ ಮೂರು ಅಡಿಗಳ ಅಂತರವನ್ನೋ ಅನುಸರಿಸುತ್ತಾರೆಂದು ನಿರೀಕ್ಷಿಸುವುದು ಸಾದುವೇ? (ಸ್ಲಂಗಳಲ್ಲಿರುವ ಎಷ್ಟೋ ರಸ್ತೆಗಳು ಮೂರು ಅಡಿ ಅಗಲವನ್ನೂ ಹೊಂದಿರುವುದಿಲ್ಲ!)

ಈಗಾಗಲೇ ಅನೇಕ ಸೋಂಕು ಪೀಡಿತರು ಆಸ್ಪತ್ರೆಗಳಿಂದ ತಪ್ಪಿಸಿಕೊಂಡು ಓಡಿ ಹೋದ ವರದಿಗಳಿವೆ. ಒಂದು ವೇಳೆ ಸಮಸ್ಯೆ ತೀವ್ರತರದ ಸ್ವರೂಪವನ್ನು ಪಡೆದುಕೊಂಡಲ್ಲಿ, ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯ ವೈದ್ಯರನ್ನು, ಸೀಮಿತ ಆಸ್ಪತ್ರೆಗಳನ್ನು ಮತ್ತು ವೆಂಟಿಲೇಟರ್‌ಗಳನ್ನು ನಾವು ಹೊಂದಿದ್ದೇವೆ. ಹಾಗಾಗಿ, ಬ್ರಿಟಿಷರಂತೆ ಸೋಂಕು ಹರಡಲು ಅವಕಾಶ ನೀಡಿ, ವಯಸ್ಸಾದವರನ್ನೂ ಮತ್ತು ದುರ್ಬಲರನ್ನೂ ಸೋಂಕಿನ ಅಪಾಯಕ್ಕೆ ದೂಡುವ ಬದಲು, ಮುಂದೆ ಹೇಳುವ ಕ್ರಮಗಳನ್ನು ಅನುಸರಿಸುವ ಯತ್ನ ಮಾಡೋಣ:

1. ಕನಿಷ್ಠ ಹತ್ತು ಲಕ್ಷಕ್ಕೂ ಹೆಚ್ಚು ಸೋಂಕು ಪರೀಕ್ಷಾ ಕಿಟ್‌ಗಳನ್ನು ಖರೀದಿಸೋಣ.

2. ಒಂದಲ್ಲ ಎರಡು/ಮೂರು ರೀತಿಯ ಪರೀಕ್ಷಾ ಕಿಟ್‌ಗಳನ್ನು ಬಳಸೋಣ. ಇಲ್ಲವೇ ಹೊಸದಾಗಿ ಕಂಡುಹಿಡಿಯೋಣ.

3. ವಿಶ್ವವಿದ್ಯಾನಿಲಯಗಳಲ್ಲಿ ಕಾಲೇಜುಗಳಲ್ಲಿ ಇರುವ ಎಲ್ಲಾ ವಸತಿ ವ್ಯವಸ್ಥೆಗಳನ್ನು ಕ್ವಾರಂಟೀನ್(ಪ್ರತ್ಯೇಕಿಸುವ ವ್ಯವಸ್ಥೆಗಳು) ವ್ಯವಸ್ಥೆಗಳಾಗಿ ಪರಿವರ್ತಿಸೋಣ. ಸೋಂಕು ಪೀಡಿತರನ್ನು ಅವರ ಮನೆಯ ಪರಿಸರದಿಂದ ಮತ್ತು ವಸತಿ ಪ್ರದೇಶಗಳಿಂದ ದೂರವಿಟ್ಟು ನಿಗಾವಹಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳೋಣ.

4. ಹೊರದೇಶಗಳಿಂದ ಬರುವವರನ್ನು ಖಡ್ಡಾಯವಾಗಿ ಎರಡು ವಾರ ಪ್ರತ್ಯೇಕವಾಗಿ ಇರಿಸೋಣ. ಇವರನ್ನು ಮೇಲೆ ಹೇಳಿದ ವಸತಿ ವ್ಯವಸ್ಥೆಗಳಲ್ಲಿ ಇರಿಸಬಹುದಾಗಿದೆ.

5. ನಗರ ಪ್ರದೇಶಗಳನ್ನು ಎರಡು ವಾರಗಳವರೆಗೆ ಬಂದ್ ಮಾಡಿಬಿಡೋಣ. ಇದರಿಂದ ಒಂದಿಷ್ಟು ಆರ್ಥಿಕ ಹೊಡೆತಗಳು ಆಗಬಹುದಾದರೂ, ಉಪಯೋಗವೇ ಹೆಚ್ಚಿರುತ್ತದೆ.

6. ನಗರಗಳಿಗೆ ವಲಸೆ ಬಂದಿರುವ ಎಲ್ಲಾ ಕಾರ್ಮಿಕರನ್ನು ಅವರವರ ಊರಿಗೆ ಹಿಂದಿರುಗುವಂತೆ ಮನವೊಲಿಸೋಣ.

ಮೇಲೆ ಹೇಳಿರುವ ಕ್ರಮಗಳಿಂದ ಕೆಲವು ಸಮಸ್ಯೆಗಳು ಸೃಷ್ಟಿಯಾಗುವುದು ಖಚಿತವಾಗಿರುತ್ತದೆ. ಇವುಗಳಿಗೆ ಮುಂದೆ ಹೇಳುವ ಪರಿಹಾರಗಳನ್ನು ಬಳಸಿಕೊಳ್ಳಬಹುದು:

1. ದಿನಗೂಲಿ ಕಾರ್ಮಿಕರ ಪರಿಸ್ಥಿತಿಯೇನು? ಕೆಲಸ ಇಲ್ಲ ಎಂದರೆ, ಇವರಿಗೆ ಕೂಲಿ ಇಲ್ಲ ಎಂದಾಗುತ್ತದೆ. ರೈತರಿಗೆ ಆರು ಸಾವಿರ ರೂ. ನೀಡಿದಂತೆ, ಇವರಿಗೂ ಸಹಾಯಧನ ನೀಡುವ ಯೋಜನೆಯನ್ನು ರೂಪಿಸಬಹುದು. ಇಲ್ಲ ಉಚಿತವಾಗಿ ಇವರಿಗೆ ರೇಷನ್ ಅಂಗಡಿಗಳ ಮೂಲಕ ಪಡಿತರ ನೀಡಬಹುದಾಗಿದೆ.

2. ಕಂಪೆನಿಗಳು ಎರಡು ವಾರ ಸಂಬಳ ಸಹಿತ ರಜೆಯನ್ನು ನೀಡಲು ಸಿದ್ಧವಾಗುತ್ತವೆಯೇ? ಈ ಕುರಿತು ಸರಕಾರ ಕಾನೂನು ರಚಿಸಬೇಕಾಗಬಹದು ಇಲ್ಲವೇ ತೆರಿಗೆ ಸಡಿಲತೆಯ ಮಾರ್ಗವನ್ನು ಅನಸರಿಬಹುದು.

3. ಅಗತ್ಯ ವಸ್ತುಗಳ ಕಥೆಯೇನು? ಪಡಿತರ ಅಂಗಡಿಗಳಲ್ಲಿ ಅಗತ್ಯವಿರುವಷ್ಟು ವಸ್ತುಗಳನ್ನು ದಾಸ್ತಾನು ಮಾಡಿ ಶೇಖರಿಸಿಟ್ಟುಕೊಳ್ಳಬಹುದು. ರೇಷನ್ ಅಂಗಡಿಗಳ ಮೂಲಕವೇ ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ಪೂರೈಕೆ ಮಾಡಬಹುದು.

ಹೌದು. ನಾವೂ ನೀವು ಹೆದರಬೇಕಾದ ಅಗತ್ಯವಿರುವುದಿಲ್ಲ. ಅನ್ಯ ದೇಶಗಳು ಇದುವರೆಗೆ ಗಳಿಸಿಕೊಂಡಿರುವ ಜ್ಞಾನದ ಆಧಾರದ ಮೇಲೆ, ಇದನ್ನು ನಿಭಾಯಿಸುವ ಹಾದಿಯಲ್ಲಿ ನಾವೂ ನೀವೂ ಕ್ರಮಿಸೋಣ. ಒಂದು ವೇಳೆ ಸಮಸ್ಯೆ ಬಿಗುಡಾಯಿಸದಿದ್ದರೆ, ನಮಗೆ ಅಂತಹ ನಷ್ಟವೇನೂ ಇರುವುದಿಲ್ಲ. ಅದೇ ಸಮಸ್ಯೆ ಜಟಿಲಗೊಂಡು, ನಮ್ಮಲ್ಲಿ ತಯಾರಿಯ ಕೊರತೆ ಇದೆ ಎಂದಾದಲ್ಲಿ, ಬಹಳ ದಿನಗಳವರೆಗೆ ಮುಂದೇನು ಎನ್ನುವ ಗೊತ್ತುಗುರಿಯಿಲ್ಲದೇ ಅಲೆದಾಡುವ ಸನ್ನಿವೇಶ ಸೃಷ್ಟಿಯಾಗಿಬಿಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)