varthabharthi


ವೈವಿಧ್ಯ

ಭಾರತದ ಪ್ರಜಾಪ್ರಭುತ್ವದ ರಕ್ಷಣೆಗೆ ದೇಶ ಕಟ್ಟಿದವರ ದೂರದೃಷ್ಟಿಯನ್ನು ಪಾಲಿಸಿ

ವಾರ್ತಾ ಭಾರತಿ : 21 Mar, 2020
ಬಾನ್ ಕಿ ಮೂನ್, ವಿಶ್ವಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ

ಒಂದು ಧಾರ್ಮಿಕ ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟುವ ಮತ್ತು ಕೆಲವು ಭಾರತೀಯರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸುವ ಮೂಲಕ ತನ್ನ ಅಭಿವೃದ್ಧಿ ಸವಾಲುಗಳನ್ನು ಭಾರತವು ಎದುರಿಸಲು ಸಾಧ್ಯವಿಲ್ಲ. ಆದರೆ ಸಿಎಎ ಮತ್ತು ಮೋದಿ ಸರಕಾರ ಉದ್ದೇಶಿಸಿರುವ ಇತರ ಶಾಸಕಾತ್ಮಕ ಕ್ರಮಗಳು ನಿಖರವಾಗಿ ಇದನ್ನೇ ಸೂಚಿಸುತ್ತವೆ ಎನ್ನುವುದು ನನಗೆ ಆತಂಕವನ್ನುಂಟು ಮಾಡಿದೆ. ಇತರರಿಗೆ ಮುಕ್ತವಾಗಿ ದೊರೆಯುವ ಪೌರತ್ವವನ್ನು ಒಂದು ಧರ್ಮಕ್ಕೆ ಸೇರಿದ ಜನರಿಗೆ ನಿರಾಕರಿಸಲ್ಪಟ್ಟಾಗ ಅದು ಇತ್ತೀಚಿನ ಮಾನವ ಇತಿಹಾಸದ ಕೆಲವೊಂದು ಅತ್ಯಂತ ಕರಾಳ ಯುಗಗಳನ್ನು ನೆನಪಿಸುತ್ತದೆ.

ಭಾರತಕ್ಕೆ 21ನೇ ಶತಮಾನದ ಅಗ್ರ ಶಕ್ತಿಗಳಲ್ಲೊಂದಾಗುವ ಸಾಮರ್ಥ್ಯವಿದೆ. ಅದು ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ದೇಶವಾಗಿದೆ ಮತ್ತು ಜಾಗತಿಕ ಉದ್ಯಮ, ಶಿಕ್ಷಣ, ಐಟಿ ಮನೋರಂಜನೆ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಪ್ರತಿಭಾವಂತ ಪ್ರಜೆಗಳ ಅಗಾಧ ಸಂಪನ್ಮೂಲವನ್ನು ಹೊಂದಿದೆ. ತನ್ನ ಪ್ರಜಾಸತ್ತಾತ್ಮಕ ಮತ್ತು ಅಹಿಂಸೆಯ ಸಂಪ್ರದಾಯಗಳೊಂದಿಗೆ ಭಾರತವು ವಿಶ್ವಕ್ಕೆ ಬಹಳಷ್ಟನ್ನು ಬೋಧಿಸಬಲ್ಲದು ಮತ್ತು ಇದೇ ಕಾರಣದಿಂದ ನಾನು ಸೇರಿದಂತೆ ಭಾರತದ ಮಿತ್ರರು ಇತ್ತೀಚಿನ ವಾರಗಳಲ್ಲಿ ದಿಲ್ಲಿಯ ವರ್ಚಸ್ಸನ್ನು ಮುಕ್ಕಾಗಿಸಿದ ಕೋಮು ಹಿಂಸಾಚಾರಗಳಿಂದಾಗಿ ತೀವ್ರವಾಗಿ ನಿರಾಶರಾಗಿದ್ದೇವೆ ಮತ್ತು ಈ ಹಿಂಸಾಚಾರ ನಮ್ಮನ್ನು ಬಡಿದೆಬ್ಬಿಸಿದೆ.

ಭಾರತವನ್ನು ಸ್ವಾತಂತ್ರದತ್ತ ಮುನ್ನಡೆಸಿದ್ದ ಮಹಾತ್ಮಾ ಗಾಂಧಿಯವರ ಆದರ್ಶಗಳಿಂದ ವಿಶ್ವಾದ್ಯಂತ ಕೋಟ್ಯಂತರ ಜನರು ಸ್ಫೂರ್ತಿ ಪಡೆದಿದ್ದಾರೆ. ವರ್ಣಭೇದದ ವಿರುದ್ಧ ಹೋರಾಡಿದ್ದ ನೆಲ್ಸನ್ ಮಂಡೇಲಾ ಅವರು ಗಾಂಧಿಯವರ ಕಟ್ಟಾ ಆರಾಧಕರಲ್ಲೋರ್ವರಾಗಿದ್ದರು. 2008ರಲ್ಲಿ ತನಗೆ ಗಾಂಧಿ ಪುರಸ್ಕಾರ ಪ್ರದಾನ ಸಂದರ್ಭದಲ್ಲಿ ಮಂಡೇಲಾ ಅವರು ಅಂತರ್‌ರಾಷ್ಟ್ರಿಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾನತೆಯನ್ನು ವಾಸ್ತವಗೊಳಿಸಲು ಒಂದಾಗಿ ಶ್ರಮಿಸುವಂತೆ ದಕ್ಷಿಣ ಆಫ್ರಿಕಾ ಮತ್ತು ಭಾರತದಂತಹ ಉದಯೋನ್ಮುಖ ಶಕ್ತಿಗಳಿಗೆ ಕರೆ ನೀಡಿದ್ದರು. ಅವರ ಶಬ್ದಗಳು ಇಂದಿಗೂ ಪ್ರಸ್ತುತವಾಗಿವೆ.

ವಿಶ್ವಾದ್ಯಂತ ಶಾಂತಿ ಮತ್ತು ನ್ಯಾಯಕ್ಕಾಗಿ ಶ್ರಮಿಸಲು ಮಂಡೇಲಾ ಅವರು ಸ್ಥಾಪಿಸಿದ್ದ ಸ್ವತಂತ್ರ ಜಾಗತಿಕ ನಾಯಕರ ಗುಂಪು ‘ದಿ ಎಲ್ಡರ್ಸ್’ನ ಉಪಾಧ್ಯಕ್ಷನಾಗಿ ಮಾತನಾಡುವಾಗ ಗಾಂಧೀಜಿಯವರ ದೂರದೃಷ್ಟಿಗೆ ಈಗ ಕೋಮು ಹಿಂಸಾಚಾರ ಮತ್ತು ವಿಭಜನಕಾರಿ ರಾಜಕಾರಣ ಬೆದರಿಕೆಯನ್ನೊಡ್ಡಿವೆ ಎಂಬ ತೀವ್ರ ಕಳವಳ ನನ್ನನ್ನು ಬಾಧಿಸುತ್ತಿದೆ.

ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿಯ ಮೂಲಕ ಭಾರತೀಯ ಪೌರತ್ವವನ್ನು ಮತ್ತು ಅದಕ್ಕೆ ಯಾರು ಅರ್ಹರು ಎನ್ನುವುದನ್ನು ಮರುವ್ಯಾಖ್ಯಾನಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ದಿಲ್ಲಿಯಲ್ಲಿ ಬಡವರು, ಕಾರ್ಮಿಕರು ಮುಖ್ಯವಾಗಿ ಮುಸ್ಲಿಮರ ಮೇಲಿನ ದಾಳಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.

ಈ ಕ್ರಮಗಳು ಕಾನೂನಿನ ಮುಂದೆ ಎಲ್ಲ ಪ್ರಜೆಗಳು ಸಮಾನರು ಎಂದು ಸ್ಪಷ್ಟವಾಗಿ ಹೇಳಿರುವ ಭಾರತೀಯ ಸಂವಿಧಾನದ ವಿಧಿ 14ಕ್ಕೆ ಅನುಗುಣವಾಗಿಲ್ಲ ಎಂದು ಕಂಡುಬರುತ್ತಿವೆ. ಈ ಎಲ್ಲ ಬೆಳವಣಿಗೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯ ಮತ್ತು ವಿಶ್ವದಲ್ಲಿ ಅದರ ಸ್ಥಾನದ ಬಗ್ಗೆ ಅನ್ವೇಷಕ ಪ್ರಶ್ನೆಗಳನ್ನೆತ್ತಿವೆ. ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದಾಗ ಕಠೋರ ಸಾಮ್ರಾಜ್ಯಶಾಹಿಯು ಅದಕ್ಕೆ ಮಣಿದಿತ್ತು. ಇಂದು ತಮ್ಮ ದೇಶವು ಸಾಗುತ್ತಿರುವ ದಿಕ್ಕಿಗೆ ಭಾರತೀಯರು ಮಾತ್ರ ಹೊಣೆಗಾರರಾಗಿದ್ದಾರೆ.

ಒಂದು ಧಾರ್ಮಿಕ ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟುವ ಮತ್ತು ಕೆಲವು ಭಾರತೀಯರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸುವ ಮೂಲಕ ತನ್ನ ಅಭಿವೃದ್ಧಿ ಸವಾಲುಗಳನ್ನು ಭಾರತವು ಎದುರಿಸಲು ಸಾಧ್ಯವಿಲ್ಲ. ಆದರೆ ಸಿಎಎ ಮತ್ತು ಮೋದಿ ಸರಕಾರ ಉದ್ದೇಶಿಸಿರುವ ಇತರ ಶಾಸಕಾತ್ಮಕ ಕ್ರಮಗಳು ನಿಖರವಾಗಿ ಇದನ್ನೇ ಸೂಚಿಸುತ್ತವೆ ಎನ್ನುವುದು ನನಗೆ ಆತಂಕವನ್ನುಂಟು ಮಾಡಿದೆ. ಇತರರಿಗೆ ಮುಕ್ತವಾಗಿ ದೊರೆಯುವ ಪೌರತ್ವವನ್ನು ಒಂದು ಧರ್ಮಕ್ಕೆ ಸೇರಿದ ಜನರಿಗೆ ನಿರಾಕರಿಸಲ್ಪಟ್ಟಾಗ ಅದು ಇತ್ತೀಚಿನ ಮಾನವ ಇತಿಹಾಸದ ಕೆಲವೊಂದು ಅತ್ಯಂತ ಕರಾಳ ಯುಗಗಳನ್ನು ನೆನಪಿಸುತ್ತದೆ.

ಗೋಹತ್ಯೆ, ಬೀಫ್ ಸೇವನೆ ಮತ್ತು ಅಂತರ್‌ಧರ್ಮೀಯ ಸಂಬಂಧಗಳಂತಹ ಸೂಕ್ಷ್ಮ ವಿಷಯಗಳ ಕುರಿತು ವದಂತಿಗಳ ಆಧಾರದಲ್ಲಿ ಭಾರತದ ಮುಸ್ಲಿಮರ ವಿರುದ್ಧ ನಿರಂಕುಶ ದಾಳಿಗಳು ನಾನು ಸೇರಿದಂತೆ ಅಂತರ್‌ರಾಷ್ಟ್ರೀಯ ವೀಕ್ಷಕರಲ್ಲಿ ಆತಂಕಗಳನ್ನು ಹೆಚ್ಚಿಸುತ್ತಿವೆ. ಇವು ಸಾಮಾಜಿಕ ಬಂಧದ ಮೇಲೆ ಮತ್ತು ಸಮಾಜದ ಪ್ರಜಾಸತ್ತಾತ್ಮಕ ಸ್ವರೂಪದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ. ಭಾರತವು ರಾಷ್ಟ್ರವಾದ ಮತ್ತು ಧಾರ್ಮಿಕ ತಾರತಮ್ಯದ ಇದೇ ದಾರಿಯಲ್ಲಿ ಮುಂದುವರಿದರೆ ಅದು ತಲೆಮಾರುಗಳವರೆಗೆ ದೇಶದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುವ ರಾಜಕೀಯ ಮತ್ತು ಸಾಮಾಜಿಕ ದುರಂತವಾಗಲಿದೆ.

ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳು ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಬೆದರಿಕೆಯ ಬಗ್ಗೆ ಸಮಾನ ಕಳವಳಗಳನ್ನು ವ್ಯಕ್ತಪಡಿಸಿರುವ ಮುಸ್ಲಿಮರು, ಹಿಂದೂಗಳು ಮತ್ತು ಇತರ ಧರ್ಮಗಳ ಭಾರತೀಯರನ್ನು ಒಂದಾಗಿಸಿದೆ. ಇತ್ತೀಚಿನ ಹಿಂಸಾಚಾರದ ಸಂತ್ರಸ್ತರನ್ನು ಬೆಂಬಲಿಸಲು ದಿಲ್ಲಿಯಲ್ಲಿ ಶ್ರಮಿಸುತ್ತಿರುವ ನಾಗರಿಕ ಸಮಾಜದ ಗುಂಪುಗಳಲ್ಲಿಯೂ ಒಗ್ಗಟ್ಟಿನ ಈ ಬದ್ಧತೆಯು ಸ್ಪಷ್ಟವಾಗಿದೆ.

2018ರಲ್ಲಿ ನಾನು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೊತೆಗೆ ಅಲ್ಲಿಯ ಮೊಹಲ್ಲಾ ಕ್ಲಿನಿಕ್‌ವೊಂದಕ್ಕೆ ಭೇಟಿ ನೀಡಿದ್ದೆ ಮತ್ತು ಸಂಪತ್ತು, ಧರ್ಮ ಅಥವಾ ವರ್ಗವನ್ನು ಪರಿಗಣಿಸದೆ ಮುಕ್ತ ಮತ್ತು ಸಾರ್ವತ್ರಿಕ ಸೇವೆಗಳ ಮಾದರಿಯಿಂದ ಪ್ರಭಾವಿತನಾಗಿದ್ದೆ. ಮುಕ್ತ, ಏಕೀಕೃತ ಮತ್ತು ಸಾಮೂಹಿಕ ಕ್ರೋಡೀಕರಣದ ಮೂಲಕ ಮಾತ್ರ ಭಾರತವು ಶಾಶ್ವತ ಶಾಂತಿ, ನ್ಯಾಯ ಮತ್ತು ಸಮೃದ್ಧಿಯನ್ನು ಸಾಧಿಸಲು ಸಾಧ್ಯ. ದೇಶದ ಸ್ಥಾಪಕರು ಈ ಅಗತ್ಯವನ್ನು ಮನಗಂಡಿದ್ದರು. ಅವರ ದೂರದೃಷ್ಟಿಯು ಭಾರತದ ಭವಿಷ್ಯದ ಹೃದಯದಲ್ಲಿರಲೇಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)