varthabharthi


ಗಲ್ಫ್ ಸುದ್ದಿ

ಹೊರ ಬರಲಾಗದೆ ಕಂಗಾಲು

ನಿದ್ದೆಗೆ ಜಾರಿ ದುಬೈ ವಿಮಾನ ನಿಲ್ದಾಣದಲ್ಲಿ ಬಾಕಿಯಾದ ಭಾರತೀಯ

ವಾರ್ತಾ ಭಾರತಿ : 24 Mar, 2020

ದುಬೈ, ಮಾ. 24: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ಭಾರತೀಯ ನಾಗರಿಕರೊಬ್ಬರು ದುಬೈ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದ್ದಾರೆ. ಭಾರತಕ್ಕೆ ಮರಳುವ ವಿಮಾನಕ್ಕಾಗಿ ಕಾಯುತ್ತಿದ್ದಾಗ ಅವರು ನಿದ್ದೆಗೆ ಶರಣಾದರು ಹಾಗೂ ವಿಮಾನವು ಅವರನ್ನು ಬಿಟ್ಟು ಹೊರಟಿತು ಎಂದು ‘ಗಲ್ಫ್ ನ್ಯೂಸ್’ ಸೋಮವಾರ ವರದಿ ಮಾಡಿದೆ.

ಪುಣೆ ನಿವಾಸಿ 37 ವರ್ಷದ ಅರುಣ್ ಸಿಂಗ್ ದುಬೈಯ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ವಲಸೆ ಮತ್ತು ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಿದ ಬಳಿಕ ಮಾರ್ಚ್ 22ರ ಮುಂಜಾನೆ 4 ಗಂಟೆಗೆ ಅಹ್ಮದಾಬಾದ್‌ಗೆ ಹೋಗುವ ವಿಮಾನವನ್ನು ಏರಬೇಕಾಗಿತ್ತು. ಆಗ ಅವರು ನಿದ್ದೆಗೆ ಶರಣಾದರು. ವಿಮಾನವನ್ನು ಏರಲು ನೀಡುವ ಅಂತಿಮ ಕರೆಯ ಕೆಲವು ನಿಮಿಷಗಳ ಬಳಿಕ ಅವರಿಗೆ ಎಚ್ಚರವಾದರೂ ವಿಮಾನ ಹೋಗಿಯಾಗಿತ್ತು ಎಂದು ಪತ್ರಿಕೆ ಹೇಳಿದೆ.

ಆ ಬಳಿಕ ಯುಎಇ, ಕೊರೋನವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ ಹಾಗೂ ಆ ದೇಶದ ವೀಸಾ ಹೊಂದಿದವರು ದೇಶದೊಳಕ್ಕೆ ಬರುವುದನ್ನು ನಿಷೇಧಿಸಿದೆ.

ನಿರ್ಬಂಧಗಳ ಹಿನ್ನೆಲೆಯಲ್ಲಿ ಅವರಿಗೆ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಅವಕಾಶ ನಿರಾಕರಿಸಲಾಗಿದೆ. ಸದ್ಯ ಅವರು ವಿಮಾನ ನಿಲ್ದಾಣದಲ್ಲೇ ದಿನಗಳೆಯುತ್ತಿದ್ದಾರೆ.

ಯುಎಇಯಲ್ಲಿ 198 ಮಂದಿಗೆ ಕೊರೋನವೈರಸ್ ಸೋಂಕು ತಗಲಿದೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ.

ವಿಮಾನ ನಿಲ್ದಾಣದಲ್ಲೇ ಜೀವನ

‘‘ಈಗ ವಿಮಾನ ನಿಲ್ದಾಣದಲ್ಲಿ ಅಂಗಡಿಗಳು ತೆರೆದಿವೆ. ನಾನು ಆಹಾರ ಮತ್ತು ಇತರ ವಸ್ತುಗಳನ್ನು ಖರೀದಿಸುತ್ತಿದ್ದೇನೆ. ಬುಧವಾರದ ಬಳಿಕ ಎಲ್ಲ ಮುಚ್ಚುತ್ತದೆ ಎಂದು ಅವರು ಹೇಳುತ್ತಿದ್ದಾರೆ. ಅದರ ನಂತರ ಏನು ಎಂದು ಗೊತ್ತಿಲ್ಲ’’ ಎಂದು ಅರುಣ್ ಸಿಂಗ್ ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)