varthabharthi


ಅನುಗಾಲ

ವಿಮರ್ಶೆಗೆ ಗೋಪಾಲಕೃಷ್ಣ ಅಡಿಗರ ಕಾಣ್ಕೆ

ವಾರ್ತಾ ಭಾರತಿ : 2 Apr, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾಗ-3

ಅಡಿಗರು ಮನುಷ್ಯರು ಎಂಬುದನ್ನು ನೆನಪಿಸಿಕೊಂಡರೆ ಅವರ ಈ ದೋಷಗಳು ಅವರ ಕಾವ್ಯದ ಅಥವಾ ವಿಮರ್ಶೆಯ ಮೌಲ್ಯವನ್ನು ಕುಂಠಿತಗೊಳಿಸುವುದಿಲ್ಲ. ಅವರೇ ಹೇಳಿದಂತೆ ಮತ್ತು ಈ ಲೇಖನದ ಆರಂಭದಲ್ಲಿ ಸ್ಮರಿಸಿದಂತೆ ಕಾಣ್ಕೆ-ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವು. ಛಿದ್ರಾನ್ವೇಷಿಗಳಿಗೆ ಅಡಿಗರ ಪ್ರಜ್ಞೆ ಕಣ್ಕಟ್ಟಿನಂತೆ ಕಂಡರೆ ಹಂಸಕ್ಷೀರ ನ್ಯಾಯಪಾಲಕರಿಗೆ ಅವರೊಬ್ಬ ಮುಕ್ತಕಾಣ್ಕೆಗಾರರಂತೆ ಕಾಣಬಹುದು.
 (ಹಿಂದಿನ ವಾರದಿಂದ ಮುಂದುವರಿದಿದೆ) ಅಡಿಗರ ‘ಪುಷ್ಪಕವಿಯ ಪರಾಕು’ ಕವನವು ಒಂದು ಮಾದರಿಯ ಕವಿಗಳನ್ನೆಲ್ಲರನ್ನೂ ವಿಡಂಬಿಸಿದೆಯೆಂದರೆ ತೆಳ್ಳಗಿನ ಮಾತಾದೀತು. ಅವರು ಕೆ.ಎಸ್.ನರಸಿಂಹ ಸ್ವಾಮಿಯವರನ್ನೇ ಟೀಕಿಸಿದ್ದಾರೆಂಬುದು ಜನಜನಿತ. ಅವರು ಹೀಗೆ ಟೀಕಿಸುವ ಕಾಲದಲ್ಲಿ ಕೆಎಸ್‌ನ ಅವರು ಕನ್ನಡದ ಅತ್ಯಂತ ಜನಪ್ರಿಯ ಕವಿಯಾಗಿದ್ದರು ಮತ್ತು ಇತರ ನವೋದಯ ಕವಿಗಳಿಗಿಂತ ಭಿನ್ನವಾದ ತಮ್ಮದೇ ಮಾದರಿಯನ್ನು ಸೃಷ್ಟಿಸಿದ್ದರು. ಇದು ಅನಗತ್ಯ ವಿವಾದವನ್ನೂ ಸೃಷ್ಟಿಸಿತು. ಈ ಟೀಕೆಯನ್ನು ಕೆಎಸ್‌ನ ಅವರನ್ನು ತೀವ್ರವಾಗಿ ಬಾಧಿಸಿತು ಎಂಬುದಕ್ಕೆ ಅವರು ಕವಿತೆಗಳ ಮೂಲಕವೇ ನೀಡಿದ ಈ ಉತ್ತರಗಳು ಸಾಕ್ಷಿ: ‘‘ಇವನ ಅನುಭವ ತೆಳುವು ಎಂಬ ಟೀಕೆಗೆ ನಕ್ಕೆ ಎಂಟು ಮಕ್ಕಳು ನನಗೆ, ಉತ್ತರಿಸಿದೆ; ಅಂದವರ ಬಾಯಿಗಿದೊ ನಾನು ಬೇವಿನ ಚಕ್ಕೆ ನನ್ನ ದನಿಯನು ಕೂಡ ಎತ್ತರಿಸಿದೆ.’’ (ಮಲ್ಲಿಗೆಯ ಮಾಲೆ, ದುಂಡು ಮಲ್ಲಿಗೆ);

‘‘ಗೋಪಾಲಕೃಷ್ಣ ಅಡಿಗರು ಒಮ್ಮೆ ಹೇಳಿದರು ನನ್ನ ಅನುಭವವೆ ತೆಳುವೆಂದು; ಒಪ್ಪುತ್ತೇನೆ, ಅವರವರ ಪ್ರತಿಭೆ ಅವರವರದಾಗಿರುವಾಗ ನನ್ನ ದನಿ ಅಡಿಗರದು ಎಂತು ಆದೀತು, ಬಿಡಿ, ಅವರ ದನಿ ಯಕ್ಷಗಾನದ ರೀತಿ: ನನ್ನ ದನಿ ತಂಪಾದ ಸಂಜೆಯಲಿ ಗೆಳೆಯರಿಬ್ಬರು ಕುಳಿತು ಎತ್ತರಕ್ಕೇರದೆಯೆ ಮಾತನಾಡುವ ರೀತಿ.’’; ‘‘ಅವರವರ ಅನುಭವದ ಆಯ್ಕೆ ಅವರವರಿಷ್ಟ. ಅವರ ನಂಬಿಕೆ ಅವರ ದೇವರಾಗಿರುವಾಗ, ಅದ ಹೊತ್ತು ಮುಂದುವರಿಯುವುದು ಸೌಜನ್ಯ. ಕವಿತೆಯುತ್ಸಾಹದಲಿ ಡೊಂಕುನುಡಿಗಳು ಬೇಡ; ಅಡ್ಡದಾರಿಯ ಹಿಡಿದು ಮಾತಾಡುವುದು ಬೇಡ. ಕವಿತೆಗಿಂತಲು ಬದುಕು ಜಟಿಲ. ಈ ಲೋಕ ನಮ್ಮ ಅರಿವಿಗೆ ಮೀರಿಹುದು; ಇಲ್ಲಿ ಉಟ್ಟರೂ ಬೆತ್ತಲೆ, ಉಂಡರೂ ಹಸಿವು.’’ (ಅಡಿಗರ ಮಾತು, ಸಂಜೆ ಹಾಡು ಸಂಕಲನ, ವಿ.ಸೀ.ಸಂಪದ, 1ನೇ ಮುದ್ರಣ, 2000);
 
‘‘ವಿಷಯ ತಿಳಿದವರು ಮೃದುವಾಗಿ ನುಡಿವರು ಗೆಳೆಯ, ವಿಷಯ ತಿಳಿಯದ ಮಂದಿ ಬರಿದೆ ಅಬ್ಬರಿಸುವರು; ನುಡಿಯಲೋ ಬೇಡವೊ ಎಂದು ಮಧ್ಯಮ ವರ್ಗ, ಲೋಕದಲಿ ನಮಗೆ ಸಿಕ್ಕುವರು ಇಂಥವರೆ ಬಿಡು. ಎಲ್ಲರೂ ತಿಳಿದವರೆ, ಎಲ್ಲರೂ ನುಡಿವವರೆ! ಪಿಸುಮಾತಿನಲ್ಲಿ ತಿಳಿವುದು ಅರ್ಥವೆಂದಾಗ ಯಕ್ಷಗಾನದ ಧಾಟಿಯನ್ನು ಕವಿತೆಗೆ ತಂದು ಅಬ್ಬರಿಸುವವರೆ ಬಲು ಹೆಚ್ಚೆಂದು ತೋರುವುದು. ಬುದ್ಧಿವಂತರು ಮಾತ್ರ ಗದ್ಯವನು ಬಳಸುವರು ದನಿಯನೆತ್ತರಿಸುವುದು ನವ್ಯಕವಿಗಳ ರೀತಿ, ನಿಜವಾದ ವಿಷಯ ಹೀಗಿದೆ: ನನ್ನ ಬಲ್ಲವರು ಶ್ರೀಗಂಧ ಹಾರವನು ನನ್ನ ಕೊರಳಿಗೆ ಹಾಕಿ ಕೈಕುಲುಕಿ ಹೊರಟು ಹೋಗುವರು ಕತ್ತಲೆಯಲ್ಲಿ. ತನ್ನ ಪಾಡಿಗೆ ತಾನೆ ತಿರುಗುತ್ತಲಿದೆ ಭೂಮಿ! (ವಿಷಯ ತಿಳಿದವರು, ಸಂಜೆ ಹಾಡು ಸಂಕಲನ, ವಿ.ಸೀ.ಸಂಪದ, 1ನೇ ಮುದ್ರಣ, 2000)

(ಈ ಸಾಲುಗಳನ್ನು ಅಡಿಗರನ್ನು ಆಕ್ಷೇಪಿಸುವುದಕ್ಕಾಗಿ ಉಲ್ಲೇಖಿಸಿಲ್ಲ; ಇಬ್ಬರು ಕವಿಹೃದಯಿಗಳ ತಾಕಲಾಟವನ್ನು ಗಮನಿಸುವುದಕ್ಕಾಗಿ ಉಲ್ಲೇಖಿಸಿದ್ದೇನೆ.)

ಕೆಎಸ್‌ನ ಅವರಂತಹ ದುಂಡುಮಲ್ಲಿಗೆ ಕವಿಯನ್ನು ಹಿಂಡಿ ಅವರಿಂದ ಇಷ್ಟು ಕಟುವಾಗಿ ಪ್ರತಿಕ್ರಿಯಿಸಿಕೊಳ್ಳುವ ವಾತಾವರಣ ಸೃಷ್ಟಿಸುವ ಅನಿವಾರ್ಯತೆ ಹೋಗಲಿ, ಅಗತ್ಯವೂ ಅಡಿಗರಿಗಿರಲಿಲ್ಲ. ಕೆಲವೊಮ್ಮೆ ಹೀಗೆ ಅಡಿಗರೂ ಪುರುಷೋತ್ತಮನನ್ನು ಕೆತ್ತುವ ಕಾಯಕದ ನಡುವೆ ‘ಮೃಣ್ಮಯ’ದ ಕೆಡುಕುಗಳಿಂದಲೂ ದೂರವಾಗಲಿಲ್ಲ. ನವೋದಯದ ಸೌಜನ್ಯ, ವಿನಯಶೀಲತೆ, ಸಮನ್ವಯ ಸಿದ್ಧಾಂತ ಇವುಗಳ ಗುಣಾಂಶವನ್ನು ಹೀರುವಲ್ಲಿ ಅಡಿಗರ ಗುಣ-ಅವಗುಣಗಳ ವಿವೇಕವೇ ವಿಮರ್ಶೆ ಎಂಬ ಸೂತ್ರವು ಸೋತಿದೆ. ಈ ಅಂಶವನ್ನು ಬೇಂದ್ರೆ ಮೊದಲೇ ಅಡಿಗರಲ್ಲಿ ಪರೋಕ್ಷವಾಗಿಯಾದರೂ ಗುರುತಿಸಿ ಅವರ ಕಾವ್ಯವಾಹಿನಿ ತನ್ನ ರಭಸದಂತೆ ತನ್ನ ಪ್ರಶಾಂತಿಯನ್ನೂ ನಾಡಿಗೆ ನೀಡಿ ಧನ್ಯತೆಯನ್ನು ಪಡೆಯಲಿ ಎಂದಿದ್ದರು. (ಇಷ್ಟಾದರೂ ಇಂದಿನ ವಿಮರ್ಶಾ ಪ್ರಪಂಚದಲ್ಲಿ ಅಡಿಗರು ಸಂತರಂತೆ ಕಾಣುತ್ತಾರೆ!)
  
ಕವಿ, ವಿಮರ್ಶಕ ತನ್ನ ಗ್ರಹಿಕೆಯಲ್ಲಿ ಋಷಿಕೆಲಸವನ್ನೂ ಮಾಡಬೇಕು. ಸಾಹಿತ್ಯವಷ್ಟೇ ಅಲ್ಲ; ಬದುಕಿಗೂ ಆತ ತನ್ನ ಪಂಚಾಂಗವನ್ನೂ, ಪಂಚೇಂದ್ರಿಯಗಳನ್ನೂ ತೆರೆದಿಡಬೇಕು. ಅಡಿಗರು ತಮ್ಮ ಸಮಕಾಲೀನ ಸಂಘಟನೆಗಳನ್ನು, ಪ್ರತಿಪಾದಿಸಿದ ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಿಕ ಆಶಯಗಳನ್ನು ಕೆಲವೊಮ್ಮೆಯಾದರೂ ತೊರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಟೀಕಿಸುತ್ತಲೇ ಅವರು ಈ ಅಕಾಡಮಿಗಳ ಪ್ರಶಸ್ತಿಗಳನ್ನು ಅನುಕ್ರಮವಾಗಿ 1974 ಮತ್ತು 1975ರಲ್ಲಿ ಸ್ವೀಕರಿಸಿದ್ದಾರೆ. ಇದು ಅರ್ಹತೆಯ ಪ್ರಶ್ನೆಯಲ್ಲ; ಅವರು ಅರ್ಹರೇ. ಆದರೆ ಆತ್ಮಸಾಕ್ಷಿಯ ಪ್ರಶ್ನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಅವರಷ್ಟು ಟೀಕಿಸಿದ ಪ್ರಬುದ್ಧರು ಬೇರೆ ಇಲ್ಲ. ‘‘ಸಾಹಿತ್ಯ ಪರಿಷತ್ತು: ಸಾಹಿತಿಗಳಿಗೆ ಸವಾಲು’’ ಎಂಬ ಲೇಖನದಲ್ಲಿ ಅವರು ಈ ಬಗ್ಗೆ ವಿವರವಾದ ಸಮರ್ಥನೀಯವಾದ ಅಂದರೆ ಪುರಾವೆ ಸಹಿತವಾದ ವಾದವನ್ನು ಮಂಡಿಸಿದ್ದಾರೆ; ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ‘‘ಸಾಹಿತ್ಯಕ್ಕೆ ಸಂಬಂಧ ಪಡದ ಕಾರಣಗಳಿಗಾಗಿಯೇ (ಸಾಹಿತ್ಯ) ಪರಿಷತ್ತು ಸಾಹಿತಿಗಳನ್ನು ಗೌರವಿಸುತ್ತ ಬಂದಿದೆ.’’ ಅಥವಾ ‘‘ಹೀಗಾಗಿ ಸಾಹಿತಿಯಾಗಿ ಹೊಕ್ಕವನು ರಾಜಕೀಯಪಟುವಾಗಿ ಹೊರಬರುವ ಅಪಾಯವೇ ಹೆಚ್ಚು.’’ ಜಿ.ಪಿ. ರಾಜರತ್ನಂ ಅವರನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕರೆತಂದು ಗೌರವಿಸದ ಪರಿಷತ್ತನ್ನು ಅವರು ತೀವ್ರವಾಗಿ ಟೀಕಿಸಿದ್ದರು. ಅಷ್ಟೇ ಅಲ್ಲ, ‘‘ಈ ದಿಕ್ಕಿನಲ್ಲಿ ಕನ್ನಡ ಸಾಹಿತಿಗಳೆಲ್ಲರೂ ಆಳವಾಗಿ ಯೋಚಿಸಿ ತಕ್ಕ ಕಾರ್ಯಕ್ರಮ ಹಾಕಿಕೊಂಡು ಸಾರ್ಥಕವಾಗಬಲ್ಲ ಇನ್ನೊಂದು ಸಾಹಿತ್ಯ ಸಂಸ್ಥೆಯನ್ನು ಯಾರ ಹಂಗೂ ಇಲ್ಲದೆ ಸ್ವತಃ ಸಾಹಿತಿಗಳೇ ಕಟ್ಟುವುದು ಅಗತ್ಯ’’ ಎಂಬ ನಿರ್ಣಯಕ್ಕೆ ಬಂದಿದ್ದರು. ಹೀಗೆ ಹೇಳಿದ ಅಡಿಗರು ತಮ್ಮ ನಿರ್ಣಯವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಲಿಲ್ಲ; ಪರಿಷತ್ತೂ ಬದಲಾಗಲಿಲ್ಲ.

ಬದಲಿಗೆ ಅಡಿಗರು 1979ರ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆಯನ್ನು ಸ್ವೀಕರಿಸಿದರು. ಈ ಗೊಂದಲದ ಅರಿವಿದ್ದ ಅಡಿಗರು ತಮ್ಮ ಅಧ್ಯಕ್ಷ ಭಾಷಣದಲ್ಲಿ ‘‘ಸಾಹಿತ್ಯ ಪರಿಷತ್ತನ್ನು ಮತ್ತೆ ಮತ್ತೆ ಟೀಕಿಸುತ್ತ ಬಂದಿರುವ, ಈಗಲೂ ಟೀಕಿಸುವ, ಬಹುಶಃ ಇನ್ನು ಮುಂದೆಯೂ ಟೀಕಿಸಬಹುದಾದ ನನ್ನನ್ನೂ ಈ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದೀರಿ’’ ಎಂದರು. ಈ ಮೂಲಕ ಪರಿಷತ್ತು ಅವರ ಟೀಕೆಗಳಿಗೆ ಮೌನವಾಗಿ ಉತ್ತರಿಸಿದ್ದು ಮಾತ್ರವಲ್ಲ ಅವರ ಪ್ರಶ್ನೆಗಳಿಗೆ ಅವರೇ ನಿರುತ್ತರರಾಗುವಂತೆ ಮಾಡಿತು. ರಾಜಕೀಯವಾಗಿಯೂ ಅಡಿಗರು ಗೊಂದಲ ಕ್ಕೀಡಾದದ್ದಿದೆ. ಅವರು ಸದಾ ಪ್ರಭುತ್ವಕ್ಕೆದುರಾಗಿದ್ದರು. ನಿಜಲಿಂಗಪ್ಪನವರು ಬರಹೇಳಿದಾಗಲೂ ದಿಟ್ಟತನದಿಂದ ಉತ್ತರಿಸಿ ಬೆಟ್ಟವೇ ಮುಹಮ್ಮದನಲ್ಲಿಗೆ ಬರುವಂತೆ ಮಾಡಿದವರು. ಇಂತಹ ಆಡಳಿತ ವಿರೋಧಿ ಬೌದ್ಧಿಕ ನಡೆಯಿಂದಾಗಿ ಅವರು ಕೆಲಸವನ್ನೂ ಕಳೆದುಕೊಂಡರು. ಪ್ರಶಸ್ತಿ-ಪುರಸ್ಕಾರಗಳಿಗಾಗಿ ಪ್ರಭುತ್ವದ ಹಿಂದೆ ಅವರು ಹೋದವರಲ್ಲ. ಎಡ-ಬಲಗಳನ್ನು ಸಮಾನಾಂತರದಲ್ಲಿ ಇಟ್ಟು ಸಮಾಜವಾದಿ ಧೋರಣೆಯೊಂದಿಗೆ ತನ್ನ ನಿಲುವನ್ನು ಸ್ಥಾಪಿಸಿಕೊಂಡವರು. ಅವರ ಕಾವ್ಯದಲ್ಲಿ ಈ ಬಗ್ಗೆ ಸ್ಪಷ್ಟ ಇಂಗಿತಗಳಿವೆ. ಆದರೆ 1971ರಲ್ಲಿ ಬೆಂಗಳೂರಿನಲ್ಲಿ ಕೆಂಗಲ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿದರು; ಸೋತರು. 1985ರಲ್ಲಿ ಮತ್ತೆ ಅವರು ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಈ ಎರಡೂ ಸಂದರ್ಭಗಳಲ್ಲಿ ಅವರು ಬಲಪಂಥೀಯ ಪಕ್ಷದ ಪರವಾಗಿ ಸ್ಪರ್ಧಿಸಿದ್ದು ಅವರ ಸಾಹಿತ್ಯಾಭಿಮಾನಿಗಳ ಹುಬ್ಬೇರಿಸಿತು. ಆದರೂ ಲಂಕೇಶಾದಿಯಾಗಿ ಅನೇಕ ಎಡಪಂಥೀಯರೂ ಅವರಿಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ ಅವರು ತಮ್ಮ ಕಾಲದ ಸಾಹಿತ್ಯಲೋಕದ ಸಾಕ್ಷಿಪ್ರಜ್ಞೆಯಾಗಿದ್ದರೆಂಬುದನ್ನು ಮತ್ತು ಆಧುನಿಕ ಕನ್ನಡ ಸಾಹಿತ್ಯವನ್ನು ಅವರ ಹೊರತಾಗಿ ನೋಡಲು ಸಾಧ್ಯವಿಲ್ಲವೆಂಬುದು ಬಹುಕಾಲದ ಸತ್ಯವಾಗಿ ಉಳಿಯಬಹುದೆಂಬುದನ್ನು ನಿರಾಕರಿಸಲಾಗದು.

(ಮುಗಿಯಿತು)


(ತಾಂತ್ರಿಕ ಕಾರಣಗಳಿಂದ ‘ಅನುಗಾಲ’ ನಿನ್ನೆ (ಗುರುವಾರ) ಪ್ರಕಟಗೊಂಡಿರಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇವೆ- ಸಂ.) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)