varthabharthi


ಪ್ರಚಲಿತ

ವೈಜ್ಞಾನಿಕ ಮನೋಭಾವ ಮತ್ತು ಅಂಧಶ್ರದ್ಧೆ

ವಾರ್ತಾ ಭಾರತಿ : 5 Apr, 2020
ಸನತ್ ಕುಮಾರ್ ಬೆಳಗಲಿ

ಈಗ ಕೊರೋನ ಎದುರು ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ನಮ್ಮ ವೈದ್ಯ ಸಮೂಹದ ಯೋಧರಿಗೆ ಬೇಕಾಗಿರುವುದು ಮೊಂಬತ್ತಿಗಳ ಪ್ರಹಸನವಲ್ಲ, ಅವರಿಗೆ ತುರ್ತಾಗಿ ಆಧುನಿಕ ವೈದ್ಯಕೀಯ ಕಿಟ್‌ಗಳು, ಮಾಸ್ಕ್‌ಗಳು, ಟೆಸ್ಟ್ ಲ್ಯಾಬ್‌ಗಳು ಬೇಕಾಗಿವೆ. ದೇಶದ ಎಲ್ಲ ನಾಗರಿಕರ ಪರೀಕ್ಷೆಯಾಗಬೇಕು, ಸರಕಾರ ಅವುಗಳನ್ನೊದಗಿಸದೇ ದೀಪ, ಮೊಂಬತ್ತಿಗಳ ಪ್ರಹಸನ ನಡೆಸುವುದರಲ್ಲಿ ಅರ್ಥವಿಲ್ಲ. ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ. ಭಾರತದಲ್ಲಿ ಮೊದಲ ಒಂದು ಸಾವಿರ ಪಾಸಿಟಿವ್ ಪ್ರಕರಣಗಳು ಗೋಚರಿಸಲು 56 ದಿನಗಳು ಬೇಕಾದವು. ಎರಡನೇ 1,000 ಪಾಸಿಟಿವ್ ಪ್ರಕರಣ ಕಾಣಲು ನಾಲ್ಕು ದಿನಗಳು ಬೇಕಾದವು. ಈಗ ಕೇವಲ ಎರಡು ದಿನಗಳಲ್ಲಿ 1,000 ಪ್ರಕರಣಗಳು ದಾಖಲಾಗಿವೆ.



ಇದು ಕೆಲ ತಿಂಗಳ ಹಿಂದಿನ ಮಾತು. ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತಾಡಲು ಬಂದಿದ್ದರು. ಅಂದು ಅವರಾಡಿದ ಮಾತುಗಳು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿವೆ.
ಅಂದು ಅವರು ಅತಿಥಿಯಾಗಿ ಮಾತನಾಡುತ್ತಾ ದೇವರು, ವಸ್ತು, ವಾಹನಗಳಿಗೆ ಮಂಗಳಾರತಿ ಮಾಡುತ್ತೇವೆ. ಹಾಗೆಂದು ರಾಕೆಟ್ ಬುಡದಲ್ಲಿ ಮಂಗಳಾರತಿ ಎತ್ತಿದರೆ ಏನಾದೀತು ಊಹಿಸಿ ಎಂದು ಸಭಿಕರನ್ನು ಕೇಳಿದರು.

ನಂಬಿಕೆ ಇರಲಿ ಮೂಢನಂಬಿಕೆ ಏಕೆ ಎಂದು ಪ್ರಶ್ನಿಸಿದ ಪ್ರೊ.ರಾವ್ ಅವರು ದೇವರೆಂಬುದು ಹಲವರ ನಂಬಿಕೆ ಓಕೆ, ನಂಬಿ ತಕರಾರಿಲ್ಲ. ಆದರೆ ಹೋಮ ಹವನದಿಂದ ಮಳೆ ಬರುತ್ತದೆ ಎನ್ನುವುದನ್ನು ಒಪ್ಪಲಾಗದು ಎಂದು ಖಂಡ ತುಂಡವಾಗಿ ಹೇಳಿದರು.
ಇಡೀ ಮನುಕುಲಕ್ಕೆ ಕಂಟಕಕಾರಿಯಾಗಿ ಪರಿಣಮಿಸಿರುವ ಕೊರೋನ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಹೇರಲಾದ ಲಾಕ್‌ಡೌನ್ ರವಿವಾರ 9ನೇ ದಿನ ಪೂರೈಸಿದ್ದರಿಂದ ರಾತ್ರಿ 12 ಗಂಟೆಗೆ ಜನರು ದೀಪ, ಮೊಂಬತ್ತಿ, ಟಾರ್ಚ್ ಅಥವಾ ಮೊಬೈಲ್ ಫೋನ್ ಫ್ಲಾಷ್‌ಲೈಟ್‌ಗಳನ್ನು 9 ನಿಮಿಷ ಬೆಳಗಿಸಬೇಕು ಆ ಸಮಯದಲ್ಲಿ ಮನೆಯ ವಿದ್ಯುತ್ ದೀಪಗಳನ್ನು ಆರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ನೀಡಿದ ಕರೆಯನ್ನು ನೋಡಿದಾಗ ಒಮ್ಮೆಲೆ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರ ಮಾತುಗಳು ನೆನಪಿಗೆ ಬಂದವು.

ಪ್ರಧಾನಿ ನರೇಂದ್ರ ಮೋದಿ ಯಾವ ಉದ್ದೇಶದಿಂದ ಈ ಕರೆ ನೀಡಿದರೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಬೌದ್ಧಿಕ ವಲಯಗಳಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಈ ಮಾತು ಅಪಹಾಸ್ಯಕ್ಕೀಡಾಯಿತು. ದೇಶದ ಪ್ರಧಾನಿಯಾಗಿ ಕೋವಿಡ್‌_-19 ಎಂಬ ಪಿಡುಗನ್ನು ಎದುರಿಸಲು ಸರಕಾರ ಕೈಗೊಂಡ ಕ್ರಮಗಳು, ಮುಂದೆ ರೂಪಿಸಿದ ಯೋಜನೆಗಳು, ವೈದ್ಯಕೀಯ ಸಿದ್ಧತೆಗಳು, ಟೆಸ್ಟ್ ಲ್ಯಾಬ್ ನಂತಹ ಉಪಕರಣಗಳ ಲಭ್ಯತೆ, ಹೀಗೆ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ದೇಶದ ನಾಗರಿಕರಲ್ಲಿ ಧೈರ್ಯ ಮತ್ತು ಭರವಸೆ ತುಂಬುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಕಳೆದ ಬಾರಿ ಟಿವಿಯಲ್ಲಿ ಬಂದಾಗ ಚಪ್ಪಾಳೆ ಹೊಡೆಯಲು ಹೇಳಿದ ಪ್ರಧಾನಿ ಈ ಬಾರಿ ಹೀಗೆ ಹೇಳಿದರು. ಅವರ ಕರೆಯಂತೆ ಹಲವರು ಲೈಟ್ ಆರಿಸಿ ದೀಪಗಳನ್ನು ಬೆಳಗಿದರು.

ನರೇಂದ್ರ ಮೋದಿ ಈ ಕರೆಯ ಬಗ್ಗೆ ಅವರ ಹಿನ್ನೆಲೆ ಗೊತ್ತಿದ್ದವರಿಗೆ ಅಚ್ಚರಿಯಾಗುವುದಿಲ್ಲ. ಗುಜರಾತ್‌ನ ಗ್ರಾಮೀಣ ಪ್ರದೇಶದಿಂದ ಬಂದ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಸಂಘದ ಪ್ರಚಾರಕರಾಗಿ ದುಡಿದವರು. ಸಂಘಕ್ಕೂ ವಿಜ್ಞಾನಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಅಡಿಪಾಯ ಹಾಕಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಸಂಘ ಇಂದಿಗೂ ದ್ವೇಷಿಸುತ್ತಿದೆ. ಹೀಗಾಗಿ ಮೋದಿ ಅವರಿಂದ ಇಂತಹ ಮಾತುಗಳನ್ನಲ್ಲದೆ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಅಂತಹವರು ಇದೇ ಸಂಘದಲ್ಲೇ ಬೆಳೆದಿದ್ದರೂ ಅವರು ಮೂಢನಂಬಿಕೆ, ಕಂದಾಚಾರಗಳ ಬಗ್ಗೆ ಅಷ್ಟು ವ್ಯಾಮೋಹ ಹೊಂದಿರಲಿಲ್ಲ. ಆರೆಸ್ಸೆಸ್ ಆಚೆಗಿನ ಸಾಹಿತ್ಯ,ವಿಜ್ಞಾನ, ರಾಜಕೀಯದ ಓದು ಅಟಲ್ ವ್ಯಕ್ತಿತ್ವವನ್ನು ಸಂಘದ ಆಚೆಗೂ ಬೆಳೆಯಲು ಕಾರಣವಾಯಿತು. ಆದರೆ ಮೋದಿ ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ. ಸಂಘ ಬಿಜೆಪಿಗೆ ಡೆಪ್ಯುಟ್ ಮಾಡಿದ ನಂತರ ರಾಜಕೀಯ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡರು. ಅದೇ ಅವರನ್ನು ಈ ಎತ್ತರಕ್ಕೆ ತಂದಿದೆ.

ಸಂಘಪರಿವಾರ ವೈಜ್ಞಾನಿಕ ಮನೋಭಾವವನ್ನು ಒಪ್ಪುವುದಿಲ್ಲ. ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಶಕ್ತಿಯಲ್ಲಿ ಅದು ಪರಿಹಾರ ಕಂಡುಕೊಳ್ಳುತ್ತದೆ. ಸ್ವಾತಂತ್ರ ನಂತರ ಭಾರತ ರೂಪಿಸಿಕೊಂಡ ವೈಜ್ಞಾನಿಕ ಶಿಕ್ಷಣ ಪದ್ಧತಿಯನ್ನು, ವೈಜ್ಞಾನಿಕ ಸಾಧನೆಗಳನ್ನು ಅದು ಒಪ್ಪುವುದಿಲ್ಲ. ಪೂಜೆ, ಪುರಸ್ಕಾರ, ಪ್ರಾರ್ಥನೆ, ಮೊದಲಾದವುಗಳ ಮೂಲಕ ತನಗೆ ಅನುಕೂಲಕರವಾದ ಪ್ರಕೃತಿ ಶಕ್ತಿಗಳನ್ನು ಅಂದರೆ ಬಿಸಿಲು, ಮಳೆ, ಸಸ್ಯ ಸಂಪತ್ತು, ಮುಂತಾದವುಗಳನ್ನು ಒಲಿಸಿಕೊಳ್ಳಬಹುದು, ನಿಯಂತ್ರಿಸಿಕೊಳ್ಳಬಹುದು, ಅನನುಕೂಲಕರವಾದ ಕತ್ತಲೆ, ಗುಡುಗು, ಸಿಡಿಲು, ಪ್ರವಾಹ, ಕಾಡ್ಗಿಚ್ಚು, ದೈಹಿಕ ಕಾಯಿಲೆ ಕಸಾಲೆಗಳನ್ನು ದೂರವಿಡಬಹುದೆಂಬುದು ಮನುಷ್ಯನ ನಂಬಿಕೆ ಹುಸಿಯಾಗುತ್ತಲೇ ಬಂದಿದೆ. ಎಷ್ಟೇ ಪೂಜೆ, ಪ್ರಾರ್ಥನೆ, ಜಪ, ತಪ, ಹೋಮ ಹವನ ಮಾಡಿದರೂ ಮನುಷ್ಯನ ಸಂಕಷ್ಟ ಅವುಗಳಿಂದ ನಿವಾರಣೆಯಾಗಿಲ್ಲ. ಆದರೂ ಕಂದಾಚಾರದಿಂದ ಮನುಷ್ಯ ಹೊರಗೆ ಬಂದಿಲ್ಲ.ಸಂಘಪರಿವಾರ ಇಂತಹ ಅಂಧ ಶ್ರದ್ಧೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಸಂಘಪರಿವಾರದ ಪ್ರಭಾವದ ಬುದ್ಧ್ದಿ ಜೀವಿಗಳು ಭಾರತದಲ್ಲಿ ಒಂದು ಕಾಲದಲ್ಲಿ ನಮ್ಮ ಯೋಗಿಗಳು ಗ್ರಹದಿಂದ ಗ್ರಹಕ್ಕೆ ವಿಮಾನದಂತಹ ವಾಹನಗಳಲ್ಲಿ ಸಂಚರಿಸುತ್ತಿದ್ದರು ಎಂದು ಹೇಳಿ ನಗೆಗೀಡಾಗಿದ್ದರು. ನಮ್ಮ ಮೋದಿ ಶಸ್ತ್ರ ಚಿಕಿತ್ಸೆ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಇತ್ತು, ನಮ್ಮ ಋಷಿ ಮುನಿಗಳು ಅದರಲ್ಲಿ ಪಾರಂಗತರಾಗಿದ್ದರು, ಗಣಪತಿಯ ರುಂಡ ಮುಂಡಗಳನ್ನು ಇಂತಹ ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸಲಾಗಿತ್ತು ಎಂದು ಹೇಳಿದ್ದರು.

ಕೊರೋನ ವೈರಸ್ ಈ ಮೂಢ ನಂಬಿಕೆಗಳ ಭ್ರಮೆಯನ್ನು ಕರಗಿಸಿದೆ. ದೇವಾಲಯಗಳ ಬಾಗಿಲುಗಳು ಮುಚ್ಚಿವೆ. ಇದರಿಂದ ದೇವರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಆರ್ಥಿಕತೆಗೆ ಭಾರೀ ಏಟು ಬಿದ್ದಿದೆ. ಪುರೋಹಿತಶಾಹಿಗಳ ಆದಾಯಕ್ಕೆ ಪೆಟ್ಟು ಬಿದ್ದಿದೆ. ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಖದೀಮರ ದೇಶಿ ಸ್ವಿಸ್ ಬ್ಯಾಂಕ್‌ಗಳು ಹಾಗೂ ಕಪ್ಪುಹಣದ ತಿಜೋರಿಗಳೆಂದು ಹೆಸರಾಗಿದ್ದ ಮಠಾಧೀಶರ, ನಕಲಿ ಬಾಬಾಗಳ ಅಲೌಕಿಕ ಶಕ್ತಿಯೂ ಕೊರೋನ ಎದುರು ತತ್ತರಿಸಿ ಗಡ, ಗಡ ನಡಗುತ್ತಿದೆ. ಆದ್ದರಿಂದ ಇವುಗಳ ಪ್ರಭಾವ ಕಡಿಮೆಯಾಗದಂತೆ ಜೀವ ನೀಡುವುದು ಆಳುವ ವರ್ಗದ ಆರ್ಥಿಕ ಹಿತಾಸಕ್ತಿಯೂ ಆಗಿದೆ.ಅದರ ಜೊತೆಗೆ ನಮ್ಮ ಪ್ರಧಾನಿ ಅವರ ಸಂಘ ಹಿತಾಸಕ್ತಿಯೂ ಸೇರಿದೆ. ಈ ಹಿತಾಸಕ್ತಿಗಳನ್ನು ಕಾಪಾಡಲು ಈ ದೀಪ, ಮೊಂಬತ್ತಿಗಳ ಪ್ರಹಸನ ನಡೆದಿದೆ.

ಜಗತ್ತು ಇಂದು ವಿಜ್ಞಾನದ ಸತ್ಯವನ್ನು ಒಪ್ಪಿಕೊಂಡಿದೆ. ಆದರೆ ಕಂದಾಚಾರವನ್ನು ಪೂರ್ತಿಯಾಗಿ ಕೈ ಬಿಟ್ಟಿಲ್ಲ. ಅದನ್ನೇ ಸಿ.ಎನ್.ಆರ್.ರಾವ್ ರಾಕೆಟ್ ಬುಡದಲ್ಲಿ ಮಂಗಳಾರತಿ ಎಂದು ಲೇವಡಿ ಮಾಡಿದ್ದರು. ಈಗಲೂ ವಿಜ್ಞಾನ ಪ್ರಯೋಗಾಲಯಗಳನ್ನು ಉದ್ಘಾಟಿಸುವಾಗಲೂ ಹೋಮ ಹವನಗಳನ್ನು ನಡೆಸುತ್ತಾರೆ.ಅಣು ಭೌತ ವಿಜ್ಞಾನಿಗಳು ಪವಾಡ ಪುರುಷರ, ನಕಲಿ ದೇವ ಮಾನವರ ಪಾದದ ಬಳಿ ಕೂತುಕೊಳ್ಳುತ್ತಾರೆ. ಖಗೋಳ ವಿಜ್ಞಾನಿಗಳು ಪ್ರಯೋಗಾಲಯದಿಂದ ಮನೆಗೆ ಮರಳಿದ ಬಳಿಕ ಗ್ರಹಣ ಕಾಲದ ಪುಣ್ಯ ಸ್ನಾನ ಮಾಡುತ್ತಾರೆ. ರಾಷ್ಟ್ರೀಯ ನಾಯಕರು ತಿರುಪತಿಗೆ ಹೋಗಿ ತಲೆ ಬೋಳಿಸಿಕೊಳ್ಳುತ್ತಾರೆ.

ಈಗ ಕೊರೋನ ಎದುರು ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ನಮ್ಮ ವೈದ್ಯ ಸಮೂಹದ ಯೋಧರಿಗೆ ಬೇಕಾಗಿರುವುದು ಮೊಂಬತ್ತಿಗಳ ಪ್ರಹಸನವಲ್ಲ, ಅವರಿಗೆ ತುರ್ತಾಗಿ ಆಧುನಿಕ ವೈದ್ಯಕೀಯ ಕಿಟ್ ಗಳು, ಮಾಸ್ಕ್ ಗಳು, ಟೆಸ್ಟ್ ಲ್ಯಾಬ್‌ಗಳು ಬೇಕಾಗಿವೆೆ. ದೇಶದ ಎಲ್ಲ ನಾಗರಿಕರ ಪರೀಕ್ಷೆಯಾಗಬೇಕು, ಸರಕಾರ ಅವುಗಳನ್ನೊದಗಿಸದೇ ದೀಪ, ಮೊಂಬತ್ತಿಗಳ ಪ್ರಹಸನ ನಡೆಸುವುದರಲ್ಲಿ ಅರ್ಥವಿಲ್ಲ.

 ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ. ಭಾರತದಲ್ಲಿ ಮೊದಲ ಒಂದು ಸಾವಿರ ಪಾಸಿಟಿವ್ ಪ್ರಕರಣಗಳು ಗೋಚರಿಸಲು 56 ದಿನಗಳು ಬೇಕಾದವು. ಎರಡನೇ 1,000 ಪಾಸಿಟಿವ್ ಪ್ರಕರಣ ಕಾಣಲು ನಾಲ್ಕು ದಿನಗಳು ಬೇಕಾದವು. ಈಗ ಕೇವಲ ಎರಡು ದಿನಗಳಲ್ಲಿ 1000 ಪ್ರಕರಣಗಳು ದಾಖಲಾಗಿವೆ. ಈ ಕೊರೋನ ವೈರಾಣು ಅತ್ಯಂತ ವೇಗವಾಗಿ ಹಬ್ಬುತ್ತಿದೆ.
ಹೀಗೆ ನಿಷ್ಕಾಳಜಿ ವಹಿಸಿ ಚಪ್ಪಾಳೆ ಹೊಡೆಯುವ, ದೀಪ, ಮೊಂಬತ್ತಿ ಸುಡುವ ಪ್ರಹಸನ ನಡೆಸುವುದರಲ್ಲಿ ಏನರ್ಥವಿದೆ.

ಮೋದಿ ನೇತೃತ್ವದ ಕೇಂದ್ರ ಸರಕಾರ ಇದರ ಬಗ್ಗೆ ಮೊದಲು ನಿರ್ಲಕ್ಷ ಧೋರಣೆ ತಾಳಿತು.ಆರಂಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರೋನ ವೈರಾಣು ನಿಗ್ರಹಕ್ಕೆ ಅಗತ್ಯವಾದ personal protective equipment kitt (ppe, mitt) ಗಾಗಿ ಬೇಡಿಕೆ ಮುಂದಿಟ್ಟರು. ಆದರೆ ಐದು ವಾರಗಳಾದರೂ ಕೇಂದ್ರ ಸರಕಾರ ಪೂರೈಸಲಿಲ್ಲ. ಈ ಉಪಕರಣಗಳನ್ನು ತಯಾರಿಸಲು ಉತ್ಪಾದಕರು ಸಿದ್ಧವಿದ್ದರು. ಆದರೆ ಸರಕಾರ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ವೈದ್ಯರು ಮೈ ಮೇಲೆ ರೈನ್ ಕೋಟ್, ಹೆಲ್ಮೆಟ್ ಹಾಕಿಕೊಂಡು ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)