varthabharthi


ಅನುಗಾಲ

ಯಾತನೆಯ ದಿನಗಳ ನಡುವೆ...

ವಾರ್ತಾ ಭಾರತಿ : 9 Apr, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬಹುಮತವಿದ್ದಾಗ ದ್ರೌಪದಿವಸ್ತ್ರಾಪಹಾರವೂ ಸಾಧ್ಯವೆಂಬುದನ್ನು ಮಹಾಭಾರತವೇ (ನಿ)ರೂಪಿಸಿದೆ. ಇನ್ನು ಭಾರತಕ್ಕೇನು ಕಷ್ಟ? ಈಗಂತೂ ಎಲ್ಲೂ ಕೃಷ್ಣನ ಕಾಪು ಕಾಣದು. ಜನವರಿಯಲ್ಲೇ ಪತ್ತೆಯಾದ ಸಾಂಕ್ರಾಮಿಕವನ್ನು ತಡೆಗಟ್ಟುವ ಸಲುವಾಗಿ ಹಲವು ವಾರಗಳ ಆನಂತರ ಅಂದರೆ ಮಾರ್ಚ್ 25ರಿಂದ ಆರಂಭವಾದ ಶಾರ್ವರಿ ಸಂವತ್ಸರದ ಯುಗಾದಿಯ ಮುನ್ನಾ ದಿನ ರಾತ್ರಿ 8 ಗಂಟೆಗೆ ಭಾರತದ ಪ್ರಧಾನಿ ಅದೇ ಮಧ್ಯರಾತ್ರಿಯಿಂದ 21 ದಿನಗಳ ಕಾಲ ಭಾರತಕ್ಕೆ ‘ಬೀಗಮುದ್ರೆ’ ಅಥವಾ ‘ದಿಗ್ಬಂಧನ’ ಹಾಕಲಾಗುವುದೆಂದು ಘೋಷಿಸಿದರು. ಎಲ್ಲವೂ ಸರಿಯಾಗಿ ಸತ್ಯವಾಗಿ ನಡೆದರೆ ಎಪ್ರಿಲ್ 14ರಂದು ಭಾರತೀಯರು ಬಂಧಮುಕ್ತರಾಗಬೇಕು!

ಸಾಮಾನ್ಯವಾಗಿ ಸ್ವಾತಂತ್ರ ಮತ್ತು ಗಣರಾಜ್ಯೋತ್ಸವಗಳ ಮುನ್ನಣ ದಿನ ರಾತ್ರಿ ರಾಷ್ಟ್ರಪತಿ ಮತ್ತು ಪ್ರಧಾನಿ ದೇಶದ ಪ್ರಜೆಗಳನ್ನುದ್ದೇಶಿಸಿ ಭಾಷಣ ಮಾಡುವುದು ಪದ್ಧತಿ. ರಾತ್ರಿ 8 ಗಂಟೆಯಾಯಿತೆಂದರೆ ಇಂತಹ ಭಾಷಣಗಳಿಗೆ ನಮ್ಮ ಬಾನುಲಿ ಕೇಂದ್ರಗಳು ಹೆಸರುವಾಸಿ. ಅದೊಂದು ಕಾಟಾಚಾರವೆಂಬಂತೆ ಜನರು ಅಲಕ್ಷಿಸುವವರೆಗೆ ಈ ಸಂಪ್ರದಾಯ ಮುಂದುವರಿಯುತ್ತಿದೆ. ಸಂಸತ್ತು, ರಾಜ್ಯ ಶಾಸನಸಭೆಗಳ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿ, ರಾಜ್ಯಪಾಲರು ಮಾಡುವ ಭಾಷಣದಂತೆ ಇವು. ಪತ್ರಿಕೆಗಳಿಗೆ ಜಾಗ ತುಂಬಿಸಲು ಒಂದಷ್ಟು ಬರಿಗುಲ್ಲು, ನಿದೆಗೇಡು!

ತೈಲ ಬೆಲೆಯನ್ನು ಏರಿಸುವಾಗ ಮಧ್ಯರಾತ್ರಿಯಿಂದಲೇ ಬೆಲೆಯೇರಿಕೆಯ ಅನಿರೀಕ್ಷಿತ ವಾರ್ತೆ ಕೆಲವೇ ಗಂಟೆಗಳ ಮೊದಲು ಘೋಷಣೆಯಾಗುತ್ತದೆ. ಅದಕ್ಕೆ ಕಾರಣವಿದೆ. ನಾಳೆ ತೈಲ ಬೆಲೆ ಏರುವುದೆಂದು ಇಂದೇ ಅಥವಾ ಅದಕ್ಕೂ ಮೊದಲೇ ಗೊತ್ತಾದರೆ ಜನರು ಹುಚ್ಚುಗಟ್ಟಿ ಇಂದನವನ್ನು ತುಂಬಿಸಿಕೊಳ್ಳುತ್ತಾರೆ ಮತ್ತು ಇದರಿಂದ ಏರಿದ ಬೆಲೆಗೆ ಮಾರುವುದರಿಂದ ತೈಲ ಕಂಪೆನಿಗಳಿಗೆ ಮತ್ತು ಆ ಮೂಲಕ ಸರಕಾರಕ್ಕೆ ದಕ್ಕುವ ಲಾಭ ಇಲ್ಲದಾಗುತ್ತದೆ. ನಿಜಕ್ಕೂ ಈ ಲಾಭವು ಸರಕಾರಕ್ಕೋ, ತೈಲ ಕಂಪೆನಿಗಳಿಗೋ ಅಥವಾ ವಿತರಕರಿಗೋ ನಿಖರವಾಗಿ ಹೇಳಲಾಗದು. 2016ರಲ್ಲಿ ಪ್ರಧಾನಿ ಕಪ್ಪುಹಣವನ್ನು ಅಗೆವ ತಮ್ಮ ಸಾಹಸವಾಗಿ 500 ಮತ್ತು 1,000 ರೂಪಾಯಿ ನೋಟುಗಳ ಅಮಾನ್ಯೀಕರಣದ ಘೋಷಣೆಯನ್ನು ಹೀಗೆಯೇ ಮಾಡಿ ಇಡೀ ದೇಶವನ್ನು ಅಲ್ಲೋಲಕಲ್ಲೋಲ ಮಾಡಿದರು. ಜನರು ಬಾಂಬು ದಾಳಿಗೆ ಬೆದರಿದವರಂತೆ ಬ್ಯಾಂಕುಗಳ ಮುಂದೆ ದಿನಗಟ್ಟಲೆ ಕ್ಯೂ ನಿಂತರು. ಅಳಿದುಳಿದ ಉಳಿತಾಯದ ನಗದನ್ನು ಪಾವತಿಸಲು ಬಹುಸಂಖ್ಯಾತ ಬಡವರು ತಮ್ಮಲ್ಲಿದ್ದ ಅಷ್ಟೂ ಹಣವನ್ನು ಈ ಪಾವತಿಗಾಗಿಯೇ ವ್ಯಯಿಸಿದ ಉದಾಹರಣೆಗಳೂ ಇದ್ದವು. ಕೊನೆಗೂ ಈ ಕ್ರಮವು ಸರಕಾರದ ಬೊಕ್ಕಸಕ್ಕೆ ಹಲವು ಶತಕೋಟಿ ನಷ್ಟಮಾಡಿದ್ದು ಬಿಟ್ಟರೆ ಬೇರೆ ಸಾಧನೆಯಾಗಲಿಲ್ಲ. ಕಪ್ಪು ಕಪ್ಪಾಗಿಯೇ ಮತ್ತು ಬಿಳಿ ಬಿಳಿಯಾಗಿಯೇ ಉಳಿಯಿತು. ಈ ಕಾದಾಟದಲ್ಲಿ ಪ್ರಜೆಯೆಂಬ ಮಗು ಬಡವಾಯಿತು. 1975ರಲ್ಲಿ ಇಂದಿರಾ ಗಾಂಧಿ ತುರ್ತುಸ್ಥಿತಿಯನ್ನು ಹೀಗೆಯೇ ಘೋಷಿಸಿದ್ದರು. ಮೋದಿ ಅದೇ ಹಾದಿ ತುಳಿದರು. ಡಾನ್ ಕ್ವಿಕ್ಸೋಟನ ಸಾಹಸಯಾತ್ರೆ ಮುಂದುವರಿಯಿತು. ಬಹುಮತವಿದ್ದಾಗ ದ್ರೌಪದಿವಸ್ತ್ರಾಪಹಾರವೂ ಸಾಧ್ಯವೆಂಬುದನ್ನು ಮಹಾಭಾರತವೇ (ನಿ)ರೂಪಿಸಿದೆ. ಇನ್ನು ಭಾರತಕ್ಕೇನು ಕಷ್ಟ? ಈಗಂತೂ ಎಲ್ಲೂ ಕೃಷ್ಣನ ಕಾಪು ಕಾಣದು. ಜನವರಿಯಲ್ಲೇ ಪತ್ತೆಯಾದ ಸಾಂಕ್ರಾಮಿಕವನ್ನು ತಡೆಗಟ್ಟುವ ಸಲುವಾಗಿ ಹಲವು ವಾರಗಳ ಆನಂತರ ಅಂದರೆ ಮಾರ್ಚ್ 25ರಿಂದ ಆರಂಭವಾದ ಶಾರ್ವರಿ ಸಂವತ್ಸರದ ಯುಗಾದಿಯ ಮುನ್ನಾ ದಿನ ರಾತ್ರಿ 8 ಗಂಟೆಗೆ ಭಾರತದ ಪ್ರಧಾನಿಯವರು ಅದೇ ಮಧ್ಯರಾತ್ರಿಯಿಂದ 21 ದಿನಗಳ ಕಾಲ ಭಾರತಕ್ಕೆ ‘ಬೀಗಮುದ್ರೆ’ ಅಥವಾ ‘ದಿಗ್ಬಂಧನ’ ಹಾಕಲಾಗುವುದೆಂದು ಘೋಷಿಸಿದರು. ಎಲ್ಲವೂ ಸರಿಯಾಗಿ ಸತ್ಯವಾಗಿ ನಡೆದರೆ ಎಪ್ರಿಲ್ 14ರಂದು ಭಾರತೀಯರು ಬಂಧಮುಕ್ತರಾಗಬೇಕು!

ಈ ಘೋಷಣೆಗೆ ಕೆಲವೇ ದಿನಗಳ ಮೊದಲು ಮೂರು ದಿನಗಳ ಮುಂಗಡ ಸೂಚನೆಯನ್ನು ನೀಡಿ ಇಡೀ ದೇಶದ ಜನ ಕೈಚಪ್ಪಾಳೆ ತಟ್ಟಬೇಕೆಂದು ಪ್ರಧಾನಿ ಹೇಳಿದ್ದರು. ಪರಿಣಾಮವಾಗಿ ಅವರ ಬೆಂಬಲಿಗಕೋಟಿ, ಮತ್ತು ಮಂದಿಯೊಂದಿಗೆ ಗೋವಿಂದ ಹೇಳುವ ಮುಗ್ಧರೂ ಅಜ್ಞರೂ, ಕೈಗಳು ಕೆಂಪಾಗುವಂತೆ ಇಡೀ ದೇಶದಲ್ಲಿ ಸದ್ದುಮಾಡಿದರೆಂ(ಬು)ದು ಸುದ್ದಿಯಾಯಿತು. ಕೈಚಪ್ಪಾಳೆ ಮಾತ್ರವಲ್ಲ, ಶಂಖ-ಜಾಗಟೆ, ಬ್ಯಾಂಡ್-ಓಲಗದೊಂದಿಗೆ ಬೀದಿಗಿಳಿದ ಉತ್ಸಾಹಿಪಡೆಗಳ ಸಮೂಹಸನ್ನಿಯಿಂದಾಗಿ ಎಲ್ಲಬಗೆಯ ಸದ್ದೂ ಬಿತ್ತರವಾಯಿತು. ಈ ನಡೆಯ ಉಪಯೋಗವು ಸಾಬೀತಾಗದಿದ್ದರೂ ಇದು ಸರಕಾರದ ಬೆಂಗಾವಲುಪಡೆಯನ್ನು ಹುರಿದುಂಬಿಸುವ ತಂತ್ರವೆಂಬಲ್ಲಿಗೆ ಪ್ರಜ್ಞಾವಂತರು ಮೌನವಾಗಬೇಕಾಯಿತು. ಇಂತಹ ಪೊಳ್ಳುತನಕ್ಕೆ ಮೂರು ದಿನಗಳ ಕಾಲಾವಕಾಶ ನೀಡಿದ ಪ್ರಧಾನಿ ‘ಲಾಕ್‌ಡೌನ್’ ಎಂಬ ಅಘೋಷಿತ, ತುರ್ತುಪರಿಸ್ಥಿತಿಯನ್ನೂ ಮೀರಿದ, ಯಾತನಾಶಿಬಿರದ ನಿರ್ಮಾಣಕ್ಕೆ ಕೇವಲ 4 ಗಂಟೆಗಳ ಅವಧಿಯನ್ನು ನೀಡಿದರೇಕೆ ಎಂಬುದು ನೇತಾಜಿ ಸಾವಿನ ರಹಸ್ಯಕ್ಕಿಂತಲೂ ಗಂಭೀರವಾಗಿ ಇತಿಹಾಸದ ಪುಟಗಳನ್ನು ಸೇರಬಹುದು. ಆದರೆ ಪ್ರಧಾನಿಯ ನಡೆಯನ್ನು ಗಮನಿಸಿದವರಿಗೆ ಅವರು ಕೈಗೊಳ್ಳುವ ನಿರ್ಧಾರದ ರಹಸ್ಯವೂ ಅವರಿಗೂ ಗೊತ್ತಿರಲಾರದು ಎಂಬುದರ ಅರಿವಿದ್ದೀತು. ಕವಿಯೊಬ್ಬ ತಾನು ಬರೆದ ಕವನದ ಅರ್ಥವನ್ನು ಯಾರೋ ಕೇಳಿದಾಗ ‘ಇದನ್ನು ಬರೆಯುವಾಗ ಇದರ ಅರ್ಥ ನನಗೂ ದೇವರಿಗೂ ಗೊತ್ತಿತ್ತು; ಈಗ ದೇವರಿಗೆ ಮಾತ್ರ ಗೊತ್ತು!’ ಎಂದನಂತೆ!

  

ಈ ಯಾತನೆಯ ದಿನಗಳನ್ನು ಗುಣುಗುಣಿಸುವ ಮೊದಲು ಎಪ್ರಿಲ್ 5ರ 2 ದಿನಗಳ ಮೊದಲೇ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಿದರು. ಅಪನಂಬಿಕೆಯನ್ನೂ ಸ್ವಲ್ಪ ಕಾಲ ಅಮಾನತ್ತಿನಲ್ಲಿಟ್ಟು ಈ ಬಾರಿ ಪ್ರಧಾನಿ ಏನಾದರೂ ಮಹತ್ತರ ರಾಷ್ಟ್ರೀಯ-ಅಂತರ್‌ರ್ರಾಷ್ಟ್ರೀಯ ವಿಚಾರಗಳನ್ನು ಹೇಳುತ್ತಾರೆಂದು ನಿರೀಕ್ಷಿಸಿದವರಿಗೆ ಮತ್ತೆ ಸೋಲಾಯಿತು. ಘನಗಂಭೀರ ಸ್ವರದಲ್ಲೇ ಪ್ರಧಾನಿ ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲ ಬೆಳಕನ್ನು ಆರಿಸಿ ದೀಪ, ಮೊಂಬತ್ತಿ, ಮೊಬೈಲ್‌ಟಾರ್ಚ್ ಮುಂತಾದ ಸಾಧನಗಳ ಮೂಲಕ ಬೆಳಕು ಬೀರಬೇಕೆಂದು ಹೇಳಿದರು. ಈ ಸಿದ್ಧತೆಗಾಗಿಯೇ ಅವರು 2 ದಿನಗಳ ಕಾಲಾವಕಾಶ ನೀಡಿದರೆಂದು ಊಹಿಸಬೇಕು. ಈ ನಡೆಗೆ ಸಮರ್ಥನೆ ನೀಡಲು ನಮ್ಮ ಮಾಧ್ಯಮಗಳು ಜ್ಯೋತಿಷಿಗಳನ್ನೂ, ಜಗತ್ತು ಅನುಸರಿಸುವ ವಿಜ್ಞಾನಕ್ಕಿಂತಲೂ ನಮ್ಮ ನಂಬಿಕೆಯೇ ಶ್ರೇಷ್ಠವೆಂಬ ದೇಸಿತಜ್ಞರನ್ನೂ, ಮಾತನಾಡಿಸಿದರು. ಜನರು ಎಂದಿನಂತೆಯೇ-ಅಲ್ಲ-ಮುನ್ನಿನಂತೆಯೇ-ಆ ದಿನ ದೀಪಾವಳಿ ಆಚರಿಸಿದರು. ಕೆಲವರಿಂದ ವರ್ಷದುದ್ದಕ್ಕೂ ಸಿಕ್ಕುವ ಪಟಾಕಿಗಳ ದೈತ್ಯನರ್ತನವೂ ಆಯಿತು. ಬೀದಿ ದೀಪಗಳು ಎಂದಿನಂತೆಯೇ (ಆದರೆ ಪವರ್‌ಕಟ್ ರಹಿತವಾಗಿ!) ಉರಿಯುತ್ತಿದ್ದವು. ಈ ಕತ್ತಲು-ಬೆಳಕಿನಾಟವು, ಕೈಚಪ್ಪಾಳೆಗೆ ಸಾಥ್ ನೀಡಿದ್ದರೆ ಒಮ್ಮೆಗೇ ಮುಗಿದುಹೋಗುತ್ತಿತ್ತು. ಆದರೆ ಕಿಕ್ಕಿರಿದ ಘಟನೆಗಳ ಮೂಲಕವೇ ಆಳುವವರಿಗೆ ಈ ತಂತ್ರಗಳು ಹೊಸದೇನಲ್ಲ. 2 ಬಾರಿ ನಡೆದದ್ದು 3ನೇ ಬಾರಿಯೂ ನಡೆಯುತ್ತದೆಂಬ ನಂಬಿಕೆ ನಮ್ಮಲ್ಲಿದೆ. ಪಂಚಭೂತಗಳಲ್ಲಿ ಶಬ್ದಗುಣವಾದ ಆಕಾಶ, ಬೆಳಕಾಗುವ ಬೆಂಕಿ, ಆಯಿತು. ಗಾಳಿ, ಭೂಮಿ, ನೀರು ಎಂಬ ಇನ್ನೂ 3 ಭೂತಗಳಿವೆ. ಅವು ಹೇಗೆ ಪ್ರತ್ಯಕ್ಷವಾಗುತ್ತಾವೋ ಗೊತ್ತಿಲ್ಲ. ಈ ಪಂಚಭೂತಗಳನ್ನು ವೇದಪೂರ್ವಕಾಲದಲ್ಲಿ ಆರಾಧಿಸುತ್ತಿದ್ದರಂತೆ. ಆದ್ದರಿಂದ ಭಾರತವು ಅರ್ವಾಚೀನ ಕಾಲದತ್ತ ನಡೆಯುತ್ತಿದೆಯೆಂಬುದು ಸ್ಪಷ್ಟ. ಭಾರತವೀಗ ದೇವರುಗಳಿಲ್ಲದ ರಾಜ್ಯವಾಗಿರುವಾಗ ಪೂಜೆ ನಡೆಸುವುದು ಕಷ್ಟ. ಒಂದು ರೀತಿಯಲ್ಲಿ ಇದೂ ಒಳ್ಳೆಯದೇ: ಮನುಷ್ಯ ಸ್ವಾವಲಂಬಿಯಾಗುವುದಕ್ಕೆ ಕಾರಣವಾಗಲೂ ಸಾಕು. ಭಕ್ತನೊಬ್ಬ ದೇವರಲ್ಲಿ ‘ನಾನು ನಿನ್ನನ್ನು ಇಷ್ಟು ನಂಬಿಯೂ ನನಗೆ ಇಷ್ಟೊಂದು ಶ್ರಮ ನೀಡುತ್ತೀಯಲ್ಲ’ ಎಂದನಂತೆ. ಅದಕ್ಕೆ ದೇವರು ‘ನಿನಗೆ ಬುದ್ಧಿ ನೀಡಿದ್ದೇ ನೀನು ಸ್ವಾವಲಂಬಿಯಾಗಿ ನಿನ್ನ ಬುದ್ಧಿಯನ್ನು ನೆಚ್ಚಿ ಬದುಕು ಎಂದೇ ಹೊರತು ನನ್ನನ್ನು ನಂಬಿ ಬದುಕು ಎಂದಲ್ಲ!’ ಎಂದನಂತೆ! ಈ ದೇಶದ ಅಪಾರ ಸಂಖ್ಯೆಯ ಮುಗ್ಧ ಪ್ರಜೆಗಳು ಆಳುವವರನ್ನೇ ನಂಬಿ ಮುಂದಿನ ದಿನಾಂಕವನ್ನು ಮತ್ತು ಅದು ಏನಿರಬಹುದು ಎಂದು ಕಾಯುತ್ತಿದ್ದಾರೆ. ಪ್ರಧಾನಿ ಇದನ್ನು 21 ದಿನಗಳ ಕುರುಕ್ಷೇತ್ರವೆಂದು ಬಣ್ಣಿಸಿದ್ದಾರೆ. ಪ್ರಧಾನಿ ಇಷ್ಟು ಅವಸರವಾಗಿ ಇಷ್ಟು ಕಡಿಮೆ (4 ಗಂಟೆಗಳ!) ಕಾಲಾವಧಿಯನ್ನು ನೀಡಿ ಲಾಕ್‌ಡೌನ್ ಘೋಷಣೆ ಮಾಡಿದ್ದರ ಪರಿಣಾಮವು ಎಷ್ಟೊಂದು ದುರಂತವೆಂದು ಕಳೆದ ಕೆಲವು ದಿನಗಳು ತೋರಿಸಿಕೊಟ್ಟಿವೆ. ಕುರುಕ್ಷೇತ್ರ- ಹೌದು. ಅದು ದುರಂತದಲ್ಲಿ ಮುಗಿ ಯಿತೆಂಬುದು ಮಹಾಭಾರತವನ್ನು ಅರ್ಥಮಾಡಿಕೊಂಡವರಿಗೆ ಅರಿವಿದ್ದೀತು. 21 ದಿನಗಳು ಎಷ್ಟು ದೀರ್ಘವೆಂಬುದು ಇಂತಹ ಸಂದರ್ಭದಲ್ಲಷ್ಟೇ ಗೊತ್ತಾಗುವುದು. ರಜಾದ ಮಜಾ ಅನುಭವಿಸಬಹುದೆಂದು ತಿಳಿದವರಿಗೆ ನಿರಾಸೆಯಾಗಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ, ಇದ್ದರೂ ಅದು ಸೀಮಿತ ಅವಶ್ಯಕತೆಗಳಿಗೆ, ಮತ್ತು ಸ್ಥಳೀಯ ಆಡಳಿತ ಯಂತ್ರ ನಿರ್ಧರಿಸಿದಂತೆ. ಸಾರಿಗೆ ವ್ಯವಸ್ಥೆಯಿಲ್ಲ. ಈ ದಿಗ್ಬಂಧನವನ್ನು ಜನರು ಸ್ವಯಿಚ್ಛೆಯಿಂದ ಮಾಡಬೇಕು. ಮನೆಯೊಳಗಿರುವ ಯಾತನೆ ಹೇಳತೀರದು ಆದರೂ ಸ್ವಯಂರಕ್ಷಣೆಗಾಗಿ, ಲೋಕಕಲ್ಯಾಣಕ್ಕಾಗಿ ಮಾಡಲೇ ಬೇಕು. ವಿಧಿಯಿಲ್ಲ. ಆದರೆ ಭಾರತದ ಒಂದು ಮುಖ್ಯ ಲಕ್ಷಣವೇ ಕಾನೂನೆಂಬ ಸಮುದ್ರದ ಉಲ್ಲಂಘನೆ. ಸೀತೆಯನ್ನೂ ಕಾಣದೇ ಬರುವ ಹನುಮದ್ವಿಕಾಸ. ಎಷ್ಟೇ ಹೇಳಿದರೂ ಬೀದಿಗಿಳಿಯದೆ ದಿನಚರಿ ಮುಗಿಯದು. ಅದಕ್ಕೆ ಹಲವು ಕಾರಣಗಳು, ನೆಪಗಳು. ಆದ್ದರಿಂದ ಬಲವಂತದ ಅನುಷ್ಠಾನ ಅನಿವಾರ್ಯ. ಸಮಸ್ಯೆಯೆಂದರೆ ಪೊಲೀಸರು ವಿವೇಚನೆ ಬಳಸದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವುದರಿಂದಾಗಿ ಶಿಸ್ತಿನ ಹೆಸರಲ್ಲಿ ಇಲ್ಲೀಗ ಖಾಂಡವವನದಹನ ನಡೆಯುತ್ತಿದೆ. ಪ್ಲೆೆಟೋ ಹೇಳಿದಂತೆ ದೊಡ್ಡವರು, ಪ್ರಭಾವಶಾಲಿಗಳು, ಸಿರಿವಂತರು ಪಾರಾಗುತ್ತಾರೆ. ಸಿಗುವವರು ಚಿಕ್ಕವರು, ಅಶಕ್ತರು, ಅನಾಥರು. ರಕ್ಷಿಸುವ ದೇವರು ಹೇಗೂ ಇಲ್ಲವಲ್ಲ!

ಸರಕಾರವೇನೋ ನಿಗದಿತ ಅವಧಿಯಲ್ಲಿ ಪಡಿತರ, ಔಷಧಿ, ಅವಶ್ಯಕ ಸಾಮಗ್ರಿಗಳ, ಖರೀದಿಗೆ ಅವಕಾಶ ನೀಡಿದೆ. ಅಗತ್ಯ ಕೆಲಸಕ್ಕೆ ಬ್ಯಾಂಕಿಗೂ ಹೋಗಬಹುದು. ಗಣಕೀಕೃತ ಸವಲತ್ತನ್ನು ಬಳಸಿದರೆ ಅನುಕೂಲವೆಂದು ಅವೇ ಹೇಳಿವೆ. ಇವೆಲ್ಲ ಒಂದು ಮಾರಕ ಕಾಯಿಲೆಯನ್ನು ಓಡಿಸಲು ನಡೆಸುವ ನ್ಯಾಯೋಚಿತ ನಡೆಗಳೇ ಸರಿ. ಉದ್ದೇಶ ಬಹು ದೊಡ್ಡದು. ಆದರೆ ಅದರ ಗುಣ- ಅವಗುಣಗಳನ್ನು ವಿವೇಚಿಸದೆ ಕಾರ್ಯ ರೂಪಕ್ಕೆ ತಂದರೆ ಏನಾಗುತ್ತದೆಂಬುದು ಈಗಾಗಲೇ ಗೊತ್ತಾಗಿದೆ. ಸಂಬಳ ಪಡೆಯುವವರಿಗೆ ಅನಿರೀಕ್ಷಿತ ವಿಶ್ರಾಂತಿ. ಸಾಫ್ಟ್ ವೇರ್ ಕಂಪೆನಿಗಳುತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ನೀಡಿವೆ. ಪಿಂಚಣಿದಾರರಿಗೆ ನಷ್ಟವಿಲ್ಲ. ಅಚಾನಕ್ ಇವೆಲ್ಲವನ್ನೂ ನಿಲ್ಲಿಸಿದರೆ? ದೇವರೂ ಗತಿಯಿಲ್ಲ. ಆದರೆ ಬೀದಿಬದಿಯ ದೇವರ ಮಕ್ಕಳಿಗೆ, ಕೂಲಿ ಕಾರ್ಮಿಕರಿಗೆ, ಸ್ವತಂತ್ರ ವ್ಯಾಪಾರ-ವ್ಯವಹಾರ-ವೃತ್ತಿ ನಡೆಸುವವರಿಗೆ ಇದರ ತಕ್ಷಣದ ಆಘಾತವನ್ನು ತಡೆಯುವುದು ಸುಲಭವಲ್ಲ. ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು, ಸವಲತ್ತುಗಳನ್ನು ಖರೀದಿಸಲು/ಪಡೆಯಲು, ಬೇಕಾದ ಹಣಸಂಪಾದನೆಯ ಮಾರ್ಗವು ಯಾವುದು? ಇದನ್ನು ಸರಕಾರ ಗುರುತಿಸಿಲ್ಲ. ಅಂಗಡಿಗಳು, ಹೊಟೇಲ್‌ಗಳು, ಲಾಡ್ಜ್ ಗಳು, ಥಿಯೇಟರ್‌ಗಳು, ಮಾಲ್‌ಗಳು ಮುಚ್ಚಿವೆ. ಅದರ ಒಡೆಯರು ಬದುಕನ್ನು ಹೇಗೆ ಕಾಣಬೇಕು? ತಮ್ಮ ನೌಕರರಿಗೆ ಸಂಬಳ ಹೇಗೆ ಕೊಡಬೇಕು? ಟ್ಯಾಕ್ಸಿ-ಆಟೋ ಚಾಲಕರು ಮನೆಯಿಂದಲೇ ಹೇಗೆ ಕೆಲಸಮಾಡಬೇಕು? ಕರ್ನಾಟಕ ರಾಜ್ಯ ರಸ್ತೆಸಾರಿಗೆಸಂಸ್ಥೆಯೊಂದೇ ದಿನಕ್ಕೆ 9 ಕೋಟಿ ರುಪಾಯಿಗಳ ನಷ್ಟ ಅನುಭವಿಸುತ್ತಿದೆಯಂತೆ. ನ್ಯಾಯಾಲಯಗಳು ಎಪ್ರಿಲ್ 14ರ ವರೆಗೆ ಮುಚ್ಚಿವೆ. ಜೈಲಿನೊಳಗೆ ಜನಸಂದಣಿ ಹೆಚ್ಚಿ ರೋಗ ಸೋಂಕುವುದನ್ನು ತಪ್ಪಿಸಲುತೀರಾ ತುರ್ತು ಪ್ರಕರಣಗಳನ್ನಷ್ಟೇ ವಿಚಾರಿಸಲಾಗುವುದು. ಶಿಕ್ಷೆ ಅನುಭವಿಸುತ್ತಿರುವ ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ದೀರ್ಘಾವಧೀ ಜೈಲುಶಿಕ್ಷೆಯ ಮತ್ತು ಬಹಳ ಗಂಭೀರ ಆರೋಪಗಳನ್ನು ಹೊತ್ತಿರುವವರನ್ನು ಹೊರತುಪಡಿಸಿ ಇತರರನ್ನು ಬಿಡುಗಡೆ ಮಾಡಲಾಗುವುದು. ಒಳಗಿದ್ದರೆ ಅವರಿಗೆ ಬಿಟ್ಟಿ ತಿಂಡಿ-ಊಟವಾದರೂ ಇದೆ. ಹೊರ ಬಂದರೆ ಅವರ ಬದುಕಿನ ಹಾದಿ ಯಾವುದು? ಕತ್ತಲೆಯಿಂದ ಕತ್ತಲೆಗೆ! ನಗರವಾಸಿಗಳಾಗಿರುವ ಇಂತಹ ದುರದೃಷ್ಟಶಾಲಿಗಳು ದೊಡ್ಡ ಪ್ರಮಾಣದಲ್ಲಿ ಮರಳಿ ಮಣ್ಣಿಗೆ ಸಾಗುತ್ತಿದ್ದಾರೆ. ಆದರೆ ಅದೂ ಸಾಧ್ಯವಾಗದೆ ಕಾನೂನು ಕ್ರಮವನ್ನೆದುರಿಸುತ್ತಿದ್ದಾರೆ. ಮಳೆ ಬರುವಾಗ ಕೊಡೆಯಿಲ್ಲದೆ ಮನೆಗೆ ಓಡಿ ಬರುವ ಮಕ್ಕಳಂತೆ ಈ ಪರಿಪಾಟಲು. ದಡ ಕಾಣದ ಕಡಲಿನ ಯಾನ.

ಇದನ್ನೆಲ್ಲ ಹೇಳಿದರೆ ‘ನೀವಾದರೆ ಏನು ಮಾಡುತ್ತಿದ್ದಿರಿ?’ ಎಂಬ ಪ್ರಶ್ನೆ ಎದುರಾಗುತ್ತದೆ. ಇದನ್ನು ಆಳುವವರು ಪ್ರಜೆಗಳಿಗೆ ಕೇಳಬಾರದು. ಅಧಿಕಾರದ ಚುಕ್ಕಾಣಿ ಹಿಡಿದವರು ಸಾಕಷ್ಟು ತಯಾರಿ ನಡೆಸಿಯೇ ಕ್ರಮ ಕೈಗೊಳ್ಳಬೇಕು; ಪರಿಹಾರಕ್ಕೆ ಸೂಕ್ತ ದಾರಿ ಹುಡುಕಬೇಕು. ವೈಫಲ್ಯಕ್ಕೆ ಇತರರನ್ನು ಹೊಣೆ ಮಾಡಿ ನುಣುಚಿಕೊಳ್ಳಬಾರದು. 21 ದಿನಗಳ ‘ಕುರುಕ್ಷೇತ್ರ’ ಎಪ್ರಿಲ್ 14ರಂದು ಕೊನೆಗಾಣುವುದೆಂದು, ಆದರೆ ರಣಾಂಗಣವು 18ನೇ ದಿನದ ರಣಭೂಮಿಯಂತೆ ರಕ್ತಸಿಕ್ತವಾಗದೆಂದು ಆಶಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)