varthabharthi


ಅನುಗಾಲ

ಕೊರೋನ: ಮುಂದುವರಿದ ಕುರುಕ್ಷೇತ್ರ

ವಾರ್ತಾ ಭಾರತಿ : 15 Apr, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೋವಿಡ್-19ರ ಲಾಕ್‌ಡೌನ್ ಸಮಯದಲ್ಲಿ ಸಮಯವನ್ನು ‘ಕಳೆಯುವುದು ಇಲ್ಲವೇ ಕೊಲ್ಲುವುದು’ ನಮಗೆ ಅನಿವಾರ್ಯ. ಬದುಕಿಡೀ ಸೆರೆಮನೆಯಲ್ಲಿ ಕಳೆಯುವ ಮೃಗಾಲಯದ ಪ್ರಾಣಿಗಳನ್ನು ಗ್ರಹಿಸಿದರೆ ಇನ್ನೊಂದು ಕಾಲದಲ್ಲಿ ಮನುಷ್ಯನನ್ನೂ ಇದೇ ರೀತಿ ಪಂಜರದಲ್ಲಿಟ್ಟು ಆನಂದಿಸುವ, ಮನುಷ್ಯನಿಗಿಂತ ಹೆಚ್ಚು ಶಕ್ತ ಜೀವಿಗಳು ಸೃಷ್ಟಿಯಾಗಬಹುದೇನೋ ಎಂಬ ಕಲ್ಪನೆಯಲ್ಲೇ ಮೈಜುಮ್ಮೆನ್ನುತ್ತದೆ. ಈ ಕೆಲವೇ ದಿನಗಳ ನಿರ್ಜನ ಸ್ಥಿತಿಯಲ್ಲಿ ವನ್ಯಪ್ರಾಣಿಗಳು ನಿಜಕ್ಕೂ ಸ್ವತಂತ್ರವಾಗಿ ಹಾರಾಡುವಾಗ, ಅಡ್ಡಾಡುವಾಗ, ಮನುಷ್ಯನು ಈ ಜೀವವೈವಿಧ್ಯಕ್ಕೆ ಮಾಡಿದ ಅನ್ಯಾಯಗಳು ಧುತ್ತೆಂದು ಕಣ್ಣೆದುರು ನಿಲ್ಲುತ್ತವೆ.


ಪ್ರಧಾನಿ ಮೋದಿಯವರು ಘೋಷಿಸಿದ 21 ದಿನಗಳ ಕುರುಕ್ಷೇತ್ರ ಅನಿವಾರ್ಯ ಕಾರಣಗಳಿಂದಾಗಿ ಮುಂದುವರಿದಿದೆ. ಮೇ 3ರವರೆಗೂ ಈ ಗತಿ ಮುಂದುವರಿಯಲಿದೆ. ಅಲ್ಲಿಂದ ಮುಂದೆ? ಗೊತ್ತಿಲ್ಲ. ಶನಿಪ್ರವೇಶವನ್ನು ತಡೆಯಲು ಹನುಮ; ‘ನಾಳೆ ಬಾ’ ಎಂದನಂತೆ. ಆ ನಾಳೆ ನಿತ್ಯ ನೂತನ. ಅದಕ್ಕಿಂತ ಹೆಚ್ಚಿನ ನಿಖರತೆ ಪ್ರಧಾನಿಯ ಮಾತುಗಳಲ್ಲಿದೆ. ಪ್ರಜೆಗಳಿಗೆ ಸಾಕಷ್ಟು ಹಿತನುಡಿದಿದ್ದಾರೆ. ಏನೇನು ಮಾಡಬೇಕೆಂದು ಹೇಳಿದ್ದಾರೆ. ಎಂತಹ ತನು-ಮನ-ಧನತ್ಯಾಗಕ್ಕೂ ಸಿದ್ಧರಾಗಬೇಕೆಂದು ಸಲಹೆ ನೀಡಿದ್ದಾರೆ. ಪ್ರಜೆಗಳಿಗೆ ಮನಸ್ಸಿದೆ; ಧನವಿಲ್ಲ. ಜನರೇ ಈ ದೇಶದ ಸಂಪತ್ತು. ಚೀನಾದ ಹೊರತಾಗಿ ಇನ್ನೆಲ್ಲೂ ಇಷ್ಟು ಜನರಿಲ್ಲ. ಆದ್ದರಿಂದ ಇನ್ನು ನೀಡಬೇಕಾದ್ದು ತನು ಮಾತ್ರ. ಯಾರೋ ಒಬ್ಬ ಋಣಾತ್ಮಕ ಮಾತುಗಳನ್ನಾಡಬೇಡಿ ಎಂದಿದ್ದಾನೆ. ಕಷ್ಟ ಬರುವಂತಹದ್ದೇ. ಅದಕ್ಕಾಗಿ ನಿರಾಶರಾಗಬಾರದು. ಎಷ್ಟೇ ದೀರ್ಘ ಕತ್ತಲಿನ ಆನಂತರವೂ ಬೆಳಗಾಗುತ್ತದೆ; ಬೆಳಕಾಗುತ್ತದೆ. ಆದ್ದರಿಂದ ಆ ಸುವರ್ಣ ಕ್ಷಣಗಳಿಗಾಗಿ ಕಾಯಬೇಕು- ನಾವು ಬದುಕುಳಿದರೆ.

ಕುರುಕ್ಷೇತ್ರ ರಣಾಂಗಣಕ್ಕೆ ಧರ್ಮಕ್ಷೇತ್ರವೆಂದು ಯಾಕೆ ಹೆಸರಿಟ್ಟರೆಂಬುದು ಭಗವದ್ಗೀತೆಗಿಂತಲೂ ಹೆಚ್ಚಾಗಿ ಈಗ ಸ್ಪಷ್ಟವಾದೀತು. ಧೃತರಾಷ್ಟ್ರ ಸಂಜಯನನ್ನು ಕೇಳಿದ್ದೇ ಹೀಗೆ: ‘ಧರ್ಮಕ್ಷೇತ್ರೇ ಕುರುಕ್ಷೇತ್ರೇ’ ಎಂದರೆ ‘ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ’. ಆದ್ದರಿಂದ 18ದಿನಗಳಲ್ಲಿ ಯುದ್ಧ ಕೊನೆಗೊಳ್ಳಬೇಕು. ಅದು ನಮ್ಮ 5 ದಿನಗಳ ಕ್ರಿಕೆಟ್ ಪಂದ್ಯದಂತೆ. ಅಲ್ಲಿ ನಿಗದಿತ ಓವರಿನ ಕ್ರಿಕೆಟ್ ಪಂದ್ಯದಂತೆ ಹೆಚ್ಚುವರಿ ಓವರಿನಲ್ಲಿ ಸೋಲು-ಗೆಲುವು ನಿರ್ಧಾರವಾಗುವುದಿಲ್ಲ. ಆದ್ದರಿಂದಲೇ ಕೊನೆಯ ದಿನ ಕೌರವನಿಗೆ ಸಹಾಯವಾಗಬಲ್ಲ ಬಲರಾಮನನ್ನು ಕೃಷ್ಣ ಕಳ್ಳನೆಪ ಹೂಡಿ (ನಿತ್ರಾಣದ, ಮುದಿಗೋವನ್ನು ಬಲರಾಮನು ಕೃಷ್ಣನ ಕೋರಿಕೆಯಂತೆ ಪಕ್ಕಕ್ಕೆ ತಳ್ಳಿದಾಗ ಅದು ಸತ್ತುಹೋಗಿ ಗೋಹತ್ಯೆಯ ಪಾಪದ ಪ್ರಾಯಶ್ಚಿತ್ತವಾಗಿ) ತೀರ್ಥಯಾತ್ರೆಗೆ ಕಳುಹಿಸಿದ್ದು. ಬಲರಾಮನಿದ್ದಿದ್ದರೆ ಮಹಾಭಾರತ ಹೇಗೆ ಕೊನೆಗೊಳ್ಳುತ್ತಿತ್ತೋ ಗೊತ್ತಿಲ್ಲ. ಕೌರವ-ಪಾಂಡವರೆಂಬ ದಾಯಾದಿಗಳ ಬದಲು ಬಲರಾಮ-ಕೃಷ್ಣರ ಸೋದರ ಕಲಹದಲ್ಲಿ ಪರ್ಯಾವಸಾನವಾಗುತ್ತಿತ್ತೇನೋ? (ಅಲ್ಲೂ ಗೋವೇ ನಮ್ಮ ಧರ್ಮವನ್ನು ರಕ್ಷಿಸಿದ್ದು!) ಆದರೆ ಕುರುಕ್ಷೇತ್ರವು ಧರ್ಮಕ್ಷೇತ್ರವೆಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡಿದ್ದರು. ಮಹಾಭಾರತವೇನಾದರೂ ಇಂದು ನಡೆದಿದ್ದರೆ ಬಲರಾಮ ಬರುವ ವರೆಗೂ ಕೌರವನು ಕಾಯುತ್ತಿದ್ದ ಅಥವಾ ಕಾಯಿಸುತ್ತಿದ್ದ. ನಮ್ಮ ಪ್ರಧಾನಿಯವರು ಕುರುಕ್ಷೇತ್ರವನ್ನು ವಿಸ್ತರಿಸಿದಾಗ ಅವರ ಉದ್ದೇಶ ಎಷ್ಟೇ ಒಳ್ಳೆಯದಾಗಿದ್ದರೂ ಯಾಕೋ ಇದೂ ನೆನಪಾಯಿತು.

ಈಗ ಬಂದಿರುವ ರೋಗಾಣು ನಿಜಕ್ಕೂ ವೈರಾಣು. ಅದು ಭುಜತಟ್ಟಿ ಮನುಷ್ಯನನ್ನು ಯುದ್ಧಕ್ಕೆ ಕರೆದಿದೆ. ನಾವು ಓಡಿ ಹೋಗುವ ಕಾಲವಲ್ಲ. ಹಾಗೆಂದು ಎದುರಿಸಲು ಸಿದ್ಧತೆ ಸಾಲದು. ಈಗ ಖೋಖೋ ಆಟದಂತೆ ಅತ್ತಿತ್ತ ತಪ್ಪಿಸಿಕೊಳ್ಳುತ್ತ ಅಡ್ಡಾಡುವುದು. ಕೊರೋನಕ್ಕೆ ದಣಿವುಂಟುಮಾಡುವುದು. ಅದಕ್ಕಿಂತ ಮೊದಲು ನಮಗೇ ದಣಿವಾದರೆ? ಆದರೆ ಅನಿವಾರ್ಯ. ಪ್ರಧಾನಿ ಹೇಳಿದಂತೆ ಪ್ರಜೆಗಳು ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕು. ಇದಕ್ಕೆ ನಾವು ತೆರುವ ಬೆಲೆ ಭಾರೀ ದೊಡ್ಡದು. ರಾಷ್ಟ್ರಪತಿಗಳಿಂದ ಶಾಸಕರವರೆಗೂ ಈ ತ್ಯಾಗಕ್ಕೆ ಶೇ.30 ರಿಯಾಯಿತಿ/ವಿನಾಯಿತಿ ಘೋಷಿಸಿದರೆ, ನ್ಯಾಯಾಧೀಶರಿಂದ ಮೊದಲ್ಗೊಂಡು ಸರಕಾರಿ ಮತ್ತಿತರ ನೌಕರರಿಗೆ ಈ ತ್ಯಾಗಸೂತ್ರ ಅನ್ವಯವಾಗುವುದಿಲ್ಲ. ಪ್ರಜೆಗಳು ಬಿಡಿ; ತ್ಯಾಗ-ಬಲಿದಾನಕ್ಕಾಗಿಯೇ ಇರುವವರು. ಅವರು ಮಾಡುವ ಶೇ.100 ತ್ಯಾಗವೂ ಕಡಿಮೆಯೇ. ಈ ತ್ಯಾಗಿಗಳು-ಬಲಿದಾನಿಗಳು ಉಳಿದರೆ ನಿಕಟ ಭವಿಷ್ಯದಲ್ಲಿ, ಅಳಿದರೆ ಮುಂದಿನ ತಲೆಮಾರು ಸ್ಮರಿಸೀತು. ಎಷ್ಟಾದರೂ ದೊರೆಗಳು ಜನಸೇವಕರು; ಅಧಿಕಾರಿಗಳು/ನೌಕರರು ಅವರ ಅಗತ್ಯ ಸೇವಾ ಪರಿಕರ್ಮಿಗಳು; ಉಳಿದ ಪ್ರಜೆಗಳು ಪ್ರಜೆಗಳಲ್ಲ, ಪ್ರಭುಗಳು!

ನಮ್ಮ ಪವಾಡಪುರುಷರು, ಸಂತರು, ಜ್ಯೋತಿಷಿಗಳು ತಮ್ಮಲ್ಲಿ ಕೊರೋನವೂ ಸೇರಿದಂತೆ ಯಾವುದೇ ಸಲಹೆಗಳಿಗೆ ಬಂದ ಸಂಕಟಗ್ರಸ್ತರಿಗೆ ಹೋಮ, ಯಾಗ, ಜಪ-ತಪ-ಯೋಗ, ಇನ್ನಿತರ ಪರಿಹಾರಗಳನ್ನು ಹೇಳಿ, ದಕ್ಷಿಣೆಗಳನ್ನು ಪಡೆದು ಆಶೀರ್ವದಿಸಿ, ಸಂತೃಪ್ತರಾಗುತ್ತಾರೆ. ಆದರೆ ತಮ್ಮ ಸ್ವಂತ ಅನಾರೋಗ್ಯಕ್ಕೆ ಪಂಚತಾರಾ ಆಸ್ಪತ್ರೆಗಳಿಗೆ ಧಾವಿಸುತ್ತಾರೆ. ಮನುಷ್ಯರಿಗೆ ತಮ್ಮ ಸ್ವಂತಕ್ಕೆ ಪವಾಡಶಕ್ತಿಯಿಲ್ಲ. ಇದು ಕಲಿಕಾಲ. ಆದ್ದರಿಂದ ನಮ್ಮ ಪರಂಪರೆಯ, ಸಾಂಪ್ರದಾಯಿಕ ಯೋಜನೆಗಳು, ಯೋಚನೆಗಳು ಮುಗ್ಧರನ್ನೂ ಮಾನಸಿಕವಾಗಿ ಅಂಧರಾದವರನ್ನೂ ಒಲಿಸಬಹುದು. ಲಾಕ್‌ಡೌನ್ ತನ್ನ ಉದ್ದೇಶದಲ್ಲಿ ಅನಿವಾರ್ಯ. ಆದರೆ ಜನರ ಪರಿಸ್ಥಿತಿ ಏನಾಗಬೇಕು? ಜನರಿಲ್ಲದ ದೇಶ ಏನಾಗಬೇಕು? ಜನರು ಕೊರೋನದಿಂದ ಸಾಯಬಾರದು ಎಂಬಷ್ಟರ ಮಟ್ಟಿಗೆ ಈ ಯೋಜನೆಗಳು, ಯೋಚನೆಗಳು ಸಾರ್ಥಕ. ಸಂತೋಷಗಳು ಒಂದೇ ಥರದವಾಗಿರುತ್ತವೆಂಬುದನ್ನು ಈಚೆಗಿನ ಕೈಚಪ್ಪಾಳೆಯಿಂದ ಬೆಳಕಿನ ಹಬ್ಬದಿಂದ ಮನಗಂಡೆವು. ಆದರೆ ದುಃಖಗಳು, ಸಂಕಟಗಳು ಭಿನ್ನ. ಮನುಷ್ಯರ ದುರ್ಗತಿಗಳ ಸುದ್ದಿಯನ್ನು ಕೇಳುತ್ತೇವೆ; ಓದುತ್ತೇವೆ; ನೋಡುತ್ತೇವೆ. ಗ್ರಾಮೀಣ ಪ್ರದೇಶದ ಮನುಷ್ಯರ ಮತ್ತು ಅವರು ಸಾಕುವ ಹಸುಗಳ ಚಿಕ್ಕ ಉದಾಹರಣೆಯನ್ನು ನೀಡಬಹುದು: ಅತೀ ಹತ್ತಿರದ ಪಶುವೈದ್ಯಸಾಲೆಗೆ 15 ಮೈಲಿಗಳು. ಕೃಷಿಕನ ಮನೆಯ ದನವೊಂದು ಕರು ಹಾಕಿದೆ. ಅದಕ್ಕೆ ಔಷಧಿ ಬೇಕು. ರಸ್ತೆಗಿಳಿಯುವಂತಿಲ್ಲ. ಕಷ್ಟಪಟ್ಟು ಬೆಳೆಸಿದ, ಉಳಿಸಿದ ಒಂದಿಷ್ಟು ಕೃಷಿ ಉತ್ಪನ್ನಗಳಿವೆ. ಅವನ್ನು ಬಹುಕಾಲ ಇಡುವಂತಿಲ್ಲ; ಕೆಡುತ್ತವೆ. ಮಾರಬಹುದೆಂದರೆ ಕೊಳ್ಳುವವರಿಲ್ಲ. ಕೈಯಲ್ಲಿ ಹಣವಿಲ್ಲ. ಈಗ ಔಷಧಿಗೆ, ಹಿಂಡಿ ಮುಂತಾದ ಅಗತ್ಯಗಳಿಗೆ ಹೇಗೆ ಹೋಗುವುದು? ಹೇಗೆ ದೊರಕಿಸಿಕೊಳ್ಳುವುದು? ಬಸ್ ವ್ಯವಸ್ಥೆಯಿಲ್ಲ. ಪಟ್ಟಣಗಳಲ್ಲಿ ಅಂಗಡಿಗಳು ತೆರೆಯುವುದಿಲ್ಲ.

ಕೊರೋನದಿಂದ ಜನರ ರಕ್ಷಣೆಗೆ ಇರುವ ಪೊಲೀಸಿಗೆ ಮಾತು ಕೇಳುವ ತಾಳ್ಮೆಯಿಲ್ಲ. ಅವನ ಲಾಠಿಯೇ ಮಾತನಾಡುತ್ತದೆ. ಅವನ ಪಾಲಿಗೆ ಶಿಸ್ತೆಂದರೆ ನಿಯಮಗಳ, ಆದೇಶಗಳ, ಪಾಲನೆ. ಉಳಿದದ್ದೆಲ್ಲವೂ ನಮ್ಮ ನ್ಯಾಯಪಾಲನಾ ವ್ಯವಸ್ಥೆಯಂತೆ ಕುರುಡು; ಕಿವುಡು. ಎಲ್ಲೋ ಅಪರೂಪಕ್ಕೆ ಕೆಲವು ಮನುಷ್ಯಹೃದಯೀ ಅಧಿಕಾರಿಗಳಿರಬಹುದಾದರೂ ಉಳಿದೆಡೆ ಗತಿಯೇನು? ವೃದ್ಧಾಪ್ಯದಲ್ಲಿ ಆಸರೆಯ ನೆಲೆ, ಪ್ರೀತಿಯ ಸೆಲೆಯಾಗಿರಬಹುದಾಗಿದ್ದ ಮತ್ತು ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಸಂವೇದನಾಶೀಲ ತಂದೆಯೊಬ್ಬರು ಈ ಆತಂಕಕಾರೀ ಕ್ಷಣಗಳ ನಡುವೆ ‘ಒಮ್ಮಿಮ್ಮೆ ಇಂದಿನ ಉಗ್ರ ದಿನಗಳನ್ನು ನೋಡಿದರೆ ಆತ ಹೋದ ಅಂತ ದುಃಖ ಪಡುವ ಬದಲು ಪಾರಾದ ಎನ್ನಬೇಕೇ ಎಂದು ಅನ್ನಿಸುವಷ್ಟು ನಾನು ಕ್ರೂರಿಯಾಗಿದ್ದೇನೆ’ ಎಂದರು. ನಮ್ಮ ನಿಯಂತ್ರಣಕ್ಕೆ ಮೀರಿದ ದುರ್ಭರ ಸ್ಥಿತಿ-ಗತಿಗಳನ್ನು ನೋಡಿ ಡಿ.ವಿ.ಜಿ.ಯವರು ‘ಹೊಲಿ ನಿನ್ನ ತುಟಿಗಳನು’ ಎಂದರು. ಸುಮ್ಮನಿರಬೇಕು. ನಮ್ಮೂರಿನಲ್ಲಿ ತಾಯಂದಿರು ಉಮ್ಮಳಿಸಿ ಬರುವ ದುಃಖವನ್ನು ತಡೆಯುವುದಕ್ಕಾಗಿ ಸೆರಗಿನ ತುದಿಯಿಂದ ಬಾಯನ್ನು ಮುಚ್ಚಿ ಕೊಳ್ಳುತ್ತಿದ್ದರು. ಹಾಗಿರಬೇಕು.

ಅವರಿಗೆ ವಿಶೇಷವಾಗಿ ವಿದ್ಯೆಯಿರಲಿಲ್ಲ; ಆದರೆ ಬುದ್ಧಿ ಮತ್ತು ವಿವೇಕವಿತ್ತು. ಹೇಗೋ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುತ್ತಿದ್ದರು. ಮನೆಯಲ್ಲಿ ಏನೂ ಇಲ್ಲದಿದ್ದಾಗಲೂ ಅದು ಇತರರಿಗೆ ಗೊತ್ತಾಗದಂತೆ ಆಸುಪಾಸಿನ ಮನೆಗಳಿಂದ ಕಡತಂದೋ, ಮನೆಯ ಸುತ್ತ ಬೆಳೆವ ಸೊಪ್ಪು-ತರಕಾರಿ ಕೊನೆಗೆ ಗಿಡಗಳ ಹೂಗಳನ್ನೋ ಎಲೆಗಳನ್ನೋ, ಮೂಲಿಕೆಗಳಂತೆ ಅಡುಗೆಗೆ ಬಳಸಿ ಹೊಟ್ಟೆ ಖಾಲಿಯಿರದಂತೆ ನೋಡಿಕೊಳ್ಳುತ್ತಿದ್ದರು. ಹಾಲಿಲ್ಲದಿದ್ದರೆ ಇಂದು ಎಲ್ಲರಿಗೂ ಕಣ್ಣಕಾಫಿ/ಚಾ (ಕಣ್ಣ ಎಂದರೆ ‘ಹಾಲಿಲ್ಲದೆ ತನ್ನದೇ ಬಣ್ಣ ಹೊಂದಿದ ಕಾಪಿ/ಚಾ’) ಎಂದು ನಗೆಯಾಡುತ್ತ ನೀಡುವ ಆ ಪಾನೀಯ ಪ್ರೀತಿಯ ಮೋಡಿಯಲ್ಲಿ ಹಾಲುಹಾಕಿದ ಕಾಫಿ/ಚಾಕ್ಕಿಂತಲೂ ಸಿಹಿಯಾಗಿ ರುತ್ತಿತ್ತು. ಮುಂದಿನ ದಿನಗಳಲ್ಲಿ ಹೀಗೂ ಆಗಬಹುದೇನೋ? ಗೊತ್ತಿಲ್ಲ. ಭಾರತ ಮಾತ್ರವಲ್ಲ, ಜಗತ್ತೇ ಅದೃಶ್ಯ, ಬಹುಪಾಲು ಅಶರೀರಪ್ರಾಣಿಯಾಗಿರುವ ಒಂದು ವೈರಾಣುವಿನ ದಾಳಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿದೆ. ಈಗ ನಾವು ಅದರಿಂದ ಪಾರಾಗಿ ಬದುಕಿದರೆ ಬೇಡಿ ತಿಂದೇನು ಎಂಬ ದುರ್ಭರ ಸಂದರ್ಭದಲ್ಲಿದ್ದೇವೆ. ನಿಸ್ಸಂಶಯವಾಗಿ ಇದನ್ನು ನಿಭಾಯಿಸಲು ಎಂಟೆದೆಯಿದ್ದರೂ ಸಾಲದು. ಜರ್ಮನಿಯ ವಿತ್ತಸಚಿವರೊಬ್ಬರು ತಾನು ಇದನ್ನು ಎದುರಿಸಲು ಶಕ್ತರಲ್ಲ ಎಂಬ ನಿರಾಶೆಯೊಂದಿಗೆ ಆತ್ಮಹತ್ಯೆಗೆ ಶರಣಾದರು. ಅದೃಷ್ಟಕ್ಕೆ ಅನೇಕ ದೇಶಗಳು ಪ್ರವಾಹದೆದುರು ಸೆಣಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.

ಜಯ ಯಾರ ಪಾಲು, ಮತ್ತು ಇದರ ಕೊನೆಯೇನು ಎಂಬುದನ್ನು ಈಗಲೇ ಏನೂ ಹೇಳಲಾಗದು. ಒಂದು ವೇಳೆ ಇದರಿಂದ ಪಾರಾದರೂ ನಿಜಕ್ಕೂ ಬೇಡಿ ಬದುಕಬಲ್ಲೆವೇ, ಭವಿಷ್ಯ ಹೇಗಿದ್ದೀತು ಎಂಬುದನ್ನು ಊಹಿಸಲಾರದ ಸಂಕಟದಲ್ಲಿ ಯೋಚಿಸಬಲ್ಲ ಮನಸ್ಸುಗಳು ಸಿಲುಕಿವೆ. ಮಾಜಿ ರಾಷ್ಟ್ರಪತಿ ಡಾಅಬ್ದುಲ್‌ಕಲಾಮ್ ಮತ್ತು ಅವರ ಸಹೋದ್ಯೋಗಿ ವೈ.ಎಸ್.ರಾಜನ್ ಸೇರಿ 1998ರಲ್ಲಿ ‘ಭಾರತ 2020, ಹೊಸ ಸಹಸ್ರಮಾನಕ್ಕೆ ಒಂದು ದರ್ಶನ’ ಎಂಬ ಪುಸ್ತಕವನ್ನು ಬರೆದರು. ಈ ಕೃತಿಯ ಸೂತ್ರವಾಕ್ಯವಾಗಿ ಅವರು ಒಂದು ಘಟನೆಯನ್ನು ಪ್ರಸ್ತಾವಿಸುತ್ತಾರೆ: ಡಾಕಲಾಮ್ ಅವರ ಒಂದಾನೊಂದು ಭಾಷಣದ ಆನಂತರ ಒಬ್ಬಳು 10 ವರ್ಷ ವಯಸ್ಸಿನ ಹುಡುಗಿ ಅವರ ಹಸ್ತಾಕ್ಷರವನ್ನು ಬಯಸಿ ಬಳಿಗೆ ಬಂದಳು. ಅವರು ‘ನಿನ್ನ ಮಹತ್ವಾಕಾಂಕ್ಷೆಯೇನು?’ ಎಂದು ಪ್ರಶ್ನಿಸಿದರು. ಆ ಹುಡುಗಿ ಯಾವ ಅಳುಕೂ ಇಲ್ಲದೆ ‘ನಾನು ಅಭಿವೃದ್ಧಿಗೊಂಡ ಭಾರತದಲ್ಲಿ ಬದುಕಲಿಚ್ಛಿಸುತ್ತೇನೆ’ ಎಂದು ಉತ್ತರಿಸಿದಳು. ಇಷ್ಟು ಪ್ರಸ್ತಾವನೆಯೊಂದಿಗೆ ಲೇಖಕರು ಆ ಕೃತಿಯನ್ನು ಅವಳಿಗೆ ಮತ್ತು ಅವಳಂತೆಯೇ ಮಹತ್ವಾಕಾಂಕ್ಷೆ ಹೊಂದಿದ ಮಿಲಿಯಗಟ್ಟಲೆ ಭಾರತೀಯರಿಗೆ ಅರ್ಪಣೆಮಾಡಿದ್ದಾರೆ. ಅವರು ಈ ಕೃತಿಯಲ್ಲಿ ‘2020, ಅಥವಾ ಅದಕ್ಕೂ ಮುಂಚಿತವಾಗಿಯೇ ಭಾರತವು ಒಂದು ಅಭಿವೃದ್ಧಿ ಹೊಂದಿದ ದೇಶವಾಗುತ್ತದೆಯೆಂಬುದು ಒಂದು ಕನಸಲ್ಲ. ಅನೇಕ ಭಾರತೀಯರ ಮನಸ್ಸುಗಳಲ್ಲಿ ಅದೊಂದು ದರ್ಶನವಾಗಿಯಷ್ಟೇ ಉಳಿಯಬೇಕಾಗಿಲ್ಲ. ಅದು ನಾವೆಲ್ಲ ಕೈಗೆತ್ತಿಕೊಳ್ಳಬಲ್ಲ ಮತ್ತು ಯಶಸ್ಸನ್ನು ಪಡೆಯಬಲ್ಲ ಒಂದು ಧ್ಯೇಯ’ ಎನ್ನುತ್ತಾರೆ.

ಡಾಕಲಾಮ್ ಈಗಿಲ್ಲ. ಅವರ ಕನಸು ಇನ್ನೂ ನನಸಾಗಿಲ್ಲ. ರಾಜಕಾರಣದ ಒಳಸುಳಿಗಳಿಂದಾಗಿ ಮತ್ತು ಮನುಷ್ಯನು ಸಂಕುಚಿತ ಗೋಡೆಗಳನ್ನು ಕಟ್ಟಿ ಕೃತಕ ಗಡಿರೇಖೆಗಳನ್ನು ನಿರ್ಮಿಸಿದ್ದರಿಂದಾಗಿ ನಡುವೆ ಕಂದಕಗಳಿರುವ ನಡುಗಡ್ಡೆಗಳು, ಪರಸ್ಪರ ಅಡ್ಡವಾಗಿರುವ ಗುಡ್ಡಗಳು ನಿರ್ಮಾಣವಾಗಿ ದೇಶವು ಒಂದು ಸ್ವರ್ಗೀಯ ಕಲ್ಪನೆಯ ಮಹೋನ್ನತ ಮಂದಿರವಾಗಿಲ್ಲ. ವಿಷಾದದ ನಡುವೆಯೂ ನಗುವುದಾದರೆ 20-20 ಎಂಬ ಹೊಸ ಕ್ರಿಕೆಟ್ ಮಾದರಿ ಮಾತ್ರ ಸೃಷ್ಟಿಯಾಗಿದೆ ಎಂಬಲ್ಲಿಗೆ ಕಲಾಮ್ ಅವರ ಕನಸು ಮುಗಿಯುತ್ತದೆ. ಕೇವಲ ಎರಡು ದಶಕಗಳಲ್ಲಿ ಭಾರತವು ತಲುಪಿದ ಸಂಕ್ರಮಣ ಸ್ಥಿತಿಯನ್ನು ಗಮನಿಸಿದರೆ ಡಾಕಲಾಮ್ ಈ ಉಗ್ರತೆಯಿಂದ ಪಾರಾದರೇನೋ ಅನ್ನಿಸುತ್ತದೆ. ಕೋವಿಡ್-19ರ ಲಾಕ್‌ಡೌನ್ ಸಮಯದಲ್ಲಿ ಸಮಯವನ್ನು ‘ಕಳೆಯುವುದು ಇಲ್ಲವೇ ಕೊಲ್ಲುವುದು’ ನಮಗೆ ಅನಿವಾರ್ಯ. ಬದುಕಿಡೀ ಸೆರೆಮನೆಯಲ್ಲಿ ಕಳೆಯುವ ಮೃಗಾಲಯದ ಪ್ರಾಣಿಗಳನ್ನು ಗ್ರಹಿಸಿದರೆ ಇನ್ನೊಂದು ಕಾಲದಲ್ಲಿ ಮನುಷ್ಯನನ್ನೂ ಇದೇ ರೀತಿ ಪಂಜರದಲ್ಲಿಟ್ಟು ಆನಂದಿಸುವ, ಮನುಷ್ಯನಿಗಿಂತ ಹೆಚ್ಚು ಶಕ್ತ ಜೀವಿಗಳು ಸೃಷ್ಟಿಯಾಗಬಹುದೇನೋ ಎಂಬ ಕಲ್ಪನೆಯಲ್ಲೇ ಮೈಜುಮ್ಮೆನ್ನುತ್ತದೆ.

ಈ ಕೆಲವೇ ದಿನಗಳ ನಿರ್ಜನ ಸ್ಥಿತಿಯಲ್ಲಿ ವನ್ಯಪ್ರಾಣಿಗಳು ನಿಜಕ್ಕೂ ಸ್ವತಂತ್ರವಾಗಿ ಹಾರಾಡುವಾಗ, ಅಡ್ಡಾಡುವಾಗ, ಮನುಷ್ಯನು ಈ ಜೀವವೈವಿಧ್ಯಕ್ಕೆ ಮಾಡಿದ ಅನ್ಯಾಯಗಳು ಧುತ್ತೆಂದು ಕಣ್ಣೆದುರು ನಿಲ್ಲುತ್ತವೆ. ಎಲ್ಲ ಯುದ್ಧಗಳೂ ಶಾಂತಿ ಸ್ಥಾಪನೆಗಾಗಿ ನಡೆಯುವ ಕೊನೆಯ ಯುದ್ಧವೆಂದೇ ಬಿಂಬಿತವಾಗುತ್ತವೆ. ಇನ್ನೊಂದು ಯುದ್ಧವು ನಡೆಯದಂತೆ ಮುನ್ನೆಚ್ಚರಿಕೆಯಿಂದ ಹೆಣೆಯುವ ಯಾವ ವ್ಯೆಹಗಳಾಗಲೀ, ಸ್ಥಾಪಿಸುವ ಯಾವ ಸಂಸ್ಥೆಗಳಾಗಲೀ ನಿರೀಕ್ಷಿತ ಯಶಸ್ಸನ್ನು ಪಡೆದಿಲ್ಲ. ನಮ್ಮ ಜಾಗ್ರತೆಯ ವಿಧಾನಗಳು ತೀರ ಸಮೀಪದೃಷ್ಟಿಯವುಗಳು. ಅವು ಹೆಚ್ಚೆಂದರೆ ಇನ್ನೊಂದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದಂತಹವುಗಳು. ಮುಂದಿನ ತಲೆಮಾರನ್ನು ಯೋಚಿಸುವುದನ್ನು ನಾವು ಬಹುಪಾಲು ಬಿಟ್ಟುಕೊಟ್ಟಿದ್ದೇವೆ. ಭೌತಿಕ ಸುಖಭೋಗಗಳೇ ನಮ್ಮ ಕೊನೆಯ ವಾಂಛೆಯೆಂಬಂತೆ ಬದುಕುತ್ತಿದ್ದೇವೆ. ಎಲ್ಲರೂ ಸುಖಿಗಳಾಗಿರುವ ಒಂದು ರಾಜ್ಯವನ್ನು ಕಟ್ಟುವ ಬದಲು ನಾನಷ್ಟೇ ಮೇಲೇರಬಲ್ಲ ಏಣಿಯನ್ನು ಇನ್ನೊಬ್ಬನ ಭುಜದ ಮೇಲೆ ಇಟ್ಟು ನಡೆಯುತ್ತಿದ್ದೇವೆ. ಇದಕ್ಕೆ ಮನುಷ್ಯನ ಸ್ವಾರ್ಥ, ಮತ್ಸರ, ಅಹಂಕಾರ, ಸಂಕುಚಿತ ಮನೋಭಾವವೇ ಕಾರಣವೆಂದರೆ ಅದೀಗ ಚರ್ವಿತಚರ್ವಣವಾದ ಮಾತಾಗುತ್ತದೆ. ಮನುಷ್ಯನ ವಿಲಕ್ಷಣ ಲಕ್ಷಣಗಳನ್ನು ವಿವರಿಸಬೇಕಾದರೆ ಈ ಕಾಲಕ್ಕೆ ಹೊಂದುವ ಹೊಸ ಪದಗಳ ಆವಿಷ್ಕಾರವಾಗಬೇಕೇನೋ? ಕುವೆಂಪು ಬರೆದಂತೆ ‘ಕ್ರೌರ್ಯ, ವಿನಾಶ, ಅವಿವೇಕ, ದುರ್ಲಂಘ್ಯ, ವಿಧಿ, ಸರ್ವ ವಿಫಲತೆ, ಸಂಸ್ಕೃತಿಯ ಸಾವು’ ಈ ಸೃಷ್ಟಿಯ ಮತ್ತು ವರ್ತಮಾನಸ್ಥಿತಿಯ ಪ್ರತಿಮೆಗಳಾಗಿ ಉಳಿದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)