varthabharthi


ಅನುಗಾಲ

ಶಾಪಗ್ರಸ್ತ ಸೆರೆ

ವಾರ್ತಾ ಭಾರತಿ : 22 Apr, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬದಲಾದ ಪರಿಸ್ಥಿತಿಯಲ್ಲಿ ಪಾಕಿಸ್ತಾನವೆಂಬುದು ಅಪ್ರಸ್ತುತವಾಗಿದೆ. ಇಲ್ಲವಾದರೆ ಬೆಳಗಾಗೆದ್ದು ಯಾರ್ಯಾರ ನೆನೆಯಲಿ ಎಂಬಲ್ಲಿ ಪಾಕಿಸ್ತಾನದ ಹೆಸರು ಅಗ್ರಪೀಠದಲ್ಲಿತ್ತು. ಈಗದು ಮಾಯವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಚೀನಾ ಅಪಾಯಕಾರಿಯೆಂಬುದು ದೇಶದ ಬಗ್ಗೆ ಯೋಚಿಸಬಲ್ಲ ಎಲ್ಲ ಪ್ರಜ್ಞಾವಂತರಿಗೆ ಮತ್ತು ಆಳುವ ಸರಕಾರಕ್ಕೂ ತಿಳಿದಿದೆ. ಹೇಳುವ ಮನಸ್ಸಿಲ್ಲವೋ ಧೈರ್ಯವಿಲ್ಲವೋ ಗೊತ್ತಿಲ್ಲ. ಚೀನಾದೊಂದಿಗೆ ಅರೆಮನಸ್ಸಿನ ಹುಸಿಮುನಿಸಷ್ಟೇ ಗೋಚರವಾಗುತ್ತಿದೆ.


ದೇಶದೆಲ್ಲೆಡೆ ವಿಧಿಸಿದ ‘ಲಾಕ್‌ಡೌನ್’ ಎಂಬ ದಿಗ್ಬಂಧನವು ಈಗಾಗಲೇ ಅಮೋಘ 4ನೇ ವಾರಗಳನ್ನು ದಾಟಿ ಸಹಜವಾಗಿಯೇ 5ನೇ ವಾರಕ್ಕೆ ಕಾಲಿಟ್ಟಿದೆ. 4 ವಾರಗಳು ದಾಟಿವೆಯೆಂಬುದು ಅಂತಹ ಯಶಸ್ಸೇನೂ ಅಲ್ಲ. ಇದು ಉತ್ಸವವೂ ಅಲ್ಲ, ಮನರಂಜನೆಯೂ ಅಲ್ಲ. ಅಹರ್ನಿಶಿ ದುಡಿಯುವ ಆರೋಗ್ಯಪಾಲಕರ ಪರಿಶ್ರಮದ ನಡುವೆಯೂ ಸೋಂಕು ಹಬ್ಬುತ್ತಿದೆ. ಕಾನೂನನ್ನು ಗೌರವಿಸುವವರು ಶ್ರದ್ಧೆಯಿಂದ ಅವುಡುಗಚ್ಚಿ ಮನೆಯೊಳಗೆ ಕೂತರೆ, ಕಾನೂನು ಮುರಿಯುವವರು ಯಾವತ್ತೂ ಕಾನೂನು ಮುರಿಯುವವರೇ. ಅವರಿಗೆ ಅದೇ ಸಾಧನೆ. ಕೋತಿಗಳು ತಾವು ಕೆಟ್ಟದ್ದಲ್ಲದೆ ಕಾಡನ್ನೇ ಕೆಡಿಸುತ್ತಿವೆ! ಶಾಲೆಗಳಲ್ಲಿ ಗೈರು ಹಾಜರಾದ ಮಕ್ಕಳ ಮೇಲಿನ ಸಿಟ್ಟಿಗೆ ಅಧ್ಯಾಪಕರು ಹಾಜರಾದ ಮಕ್ಕಳನ್ನು ಬೆಂಚು ಮೇಲೆ ನಿಲ್ಲಿಸುತ್ತಿದ್ದರು! ಹೀಗೆ ಈ ಕಾನೂನು ಮುರುಕರಿಂದಾಗಿ ಕೊರೋನದ ಭೀತಿಗಿಂತಲೂ ಲಾಕ್‌ಡೌನ್‌ನ ದಿಗ್ಬಂಧನದ ಶಿಕ್ಷೆ ವಿಸ್ತರಿಸುವ ಭೀತಿ ಇತರರಿಗೆ ಇನ್ನಷ್ಟು ಹೆಚ್ಚಾಗಿದೆ. ಮೇ 3 ಲಾಕ್‌ಡೌನ್‌ನ ಕೊನೆಯ ದಿನವೆಂದೇನೂ ಖಾತ್ರಿಯಿಲ್ಲ. 135 ಕೋಟಿ ಜನರಲ್ಲಿ ಒಂದಿಷ್ಟು ಹಸಿವು, ಬಡತನ, ಆರ್ಥಿಕ ಮುಗ್ಗಟ್ಟು ಇವಕ್ಕೆ ಸಿಲುಕಿ ಸತ್ತರೇನೂ ನಷ್ಟವಿಲ್ಲ. ಆದರೆ ಕೊರೋನದಿಂದ ಮಾತ್ರ ಸಾಯತಕ್ಕದ್ದಲ್ಲ ಎಂಬ ಹಾಗೆ ದೇಶವನ್ನಾಳುವವರು ಪುಸ್ತಕದ ಬದನೆಕಾಯಿಯ ಕಾನೂನಿನ ಕಠಿಣ ಅನುಷ್ಠಾನದಲ್ಲಿದ್ದಾರೆ.

ಕೇರಳವು ತನ್ನ ಸಮಸ್ಯೆಗಳನ್ನು ನೀಗಿಕೊಂಡು ಬಹುಪಾಲು ಸಹಜ ಸ್ಥಿತಿಗೆ ಮರಳಿ ದೇಶಕ್ಕೆ ಆದರ್ಶವಾಗಿ ಅದನ್ನು ಎಲ್ಲೆಡೆ ಅನುಸರಿಸಲು ಗುಟ್ಟಾಗಿಯಾದರೂ (ಏಕೆಂದರೆ ಬಹಿರಂಗವಾಗಿ ಹೊಗಳಿದರೆ ಎಡಪಕ್ಷವೊಂದರ ಬೆನ್ನು ತಟ್ಟಿದಂತಾಗುತ್ತದೆಯಲ್ಲ!) ಕೇಂದ್ರವು ಇತರ ರಾಜ್ಯಗಳಿಗೆ ಸೂಚಿಸಿದೆ ಯಂತೆ. ಆದರೆ ಕೇರಳವು ಈ ಹಂತದಲ್ಲಿ ಜನರಿಗೆ ಒಂದಿಷ್ಟು ಸೌಜನ್ಯದ ಸೌಕರ್ಯವನ್ನು ಮಾಡಲಾರಂಭಿಸಿದ್ದೇ ಕೇಂದ್ರದ ಕಣ್ಣು ಕೆಂಪಾಗಿದೆ. ರಾಜನೊಬ್ಬ ತನಗೆ ಗಂಡುಮಗು ಹುಟ್ಟಿದಾಗ ಜ್ಯೋತಿಷಿಯನ್ನು ಕರೆಸಿ ಮಗುವಿನ ಭವಿಷ್ಯ ಕೇಳಿದನಂತೆ. ಜ್ಯೋತಿಷಿಯೊಂದಿಗೆ ಆತನ 6-7 ವರ್ಷ ವಯಸ್ಸಿನ ಮಗನೂ ಬಂದಿದ್ದನಂತೆ. ಜ್ಯೋತಿಷಿ ಸಾಕಷ್ಟು ಪರೀಕ್ಷಿಸಿ ‘ರಾಜನೇ ನಿಮ್ಮ ಮಗನಿಗೆ ಅರುವತ್ತು ವರ್ಷ ಆಯುಸ್ಸಿದೆ. ಆಗ ಆತನು ಮರದಿಂದ ಬಿದ್ದು ಮೃತನಾಗಲೂಬಹುದು’ ಎಂದನಂತೆ. ‘ಅರುವತ್ತು ವರ್ಷ ಸಾಕಷ್ಟಾಯಿತು, ಪರವಾಗಿಲ್ಲ’ ಎಂದು ರಾಜನು ಸಮಾಧಾನಪಟ್ಟಾಗ ಜ್ಯೋತಿಷಿಯ ಮಗ ಜ್ಯೋತಿಷಿಯ ಕಿವಿಯಲ್ಲಿ ‘ಅರುವತ್ತು ಆರೂ ಆಗಬಹುದು, ಮರ ಮಣೆಯೂ ಆಗಬಹುದು’ ಎಂದು ಪಿಸುಗುಟ್ಟಿದನಂತೆ. ಜ್ಯೋತಿಷಿ ‘ಸುಮ್ಮನಿರು’ ಎಂದನಂತೆ. ರಾಜನು ಏನೆಂದು ಕೇಳಲು ಏನೂ ಇಲ್ಲ ಮಕ್ಕಳಾಟಿಕೆ ಎಂದು ಜ್ಯೋತಿಷಿ ಸಮಜಾಯಿಷಿಕೆ ನೀಡಿದನಂತೆ. ರಾಜಕುಮಾರನು ಆರನೇ ವರ್ಷ ಪೂರ್ತಿಮಾಡಿದಾಗ ಒಂದು ದಿನ ಊಟಮಾಡುತ್ತ ಮುಗ್ಗರಿಸಿ ಊಟದ ತಟ್ಟೆಯ ಮೇಲೆ ಬಿದ್ದು ಮೂಗಿಗೆ ದ್ರವರೂಪದ ಆಹಾರ ಹೋಗಿ ಉಸಿರುಗಟ್ಟಿ ಸತ್ತನಂತೆ! ಜ್ಯೋತಿಷ್ಯವನ್ನು ವೈಭವೀಕರಿಸಲಾಗಲೀ ಅದನ್ನು ನಂಬುವುದಕ್ಕಾಗಲೀ ಇದನ್ನು ಹೇಳಿಲ್ಲ. ಕೊರೋನ ತಂದೊಡ್ಡಿದ ಅನಿಶ್ಚಿತತೆಗೆ ಅದೊಂದು ರೂಪಕ.

ಪ್ರಧಾನಿ ಮೊದಲ ಬಾರಿ ಲಾಕ್‌ಡೌನ್ ಘೋಷಿಸಿದಾಗ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಂತಿಲ್ಲ. ಮೊನ್ನೆ ಅದನ್ನು ವಿಸ್ತರಿಸುವುದಕ್ಕೆ ಮಾತ್ರ ರಾಜ್ಯ ಸರಕಾರಗಳ ಮೇಲೆ ಅಪವಾದ ಹೇರಿದಂತಿತ್ತು. ಒಂದು ರೀತಿಯಲ್ಲಿ ಕೆಲವು ರಾಜ್ಯ ಸರಕಾರಗಳು ಅತ್ಯುತ್ಸಾಹವನ್ನು ತೋರಿದವು. ಭಾಜಪದ ರಾಜ್ಯ ಸರಕಾರಗಳು ಲಾಕ್‌ಡೌನ್ ಅನ್ನು ವಿಸ್ತರಿಸುವ ಮೊದಲೇ ಕಾಂಗ್ರೆಸ್ ಆಡಳಿತದ ಪಂಜಾಬ್, ಎಎಪಿ ಆಡಳಿತದ ದಿಲ್ಲಿಗಳಲ್ಲಿ ವಿಸ್ತರಿಸಿದವು. ದಿಲ್ಲಿ ಸರಕಾರ ಕೇಂದ್ರದ ಪ್ರೀತಿಯನ್ನು ಗೆಲ್ಲುವುದಕ್ಕಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆಯೆಂಬುದು ಕೇಜ್ರಿವಾಲ್ ಗೆಲುವಿನ ಆನಂತರದ ಘಟನೆಗಳು ನಿರೂಪಿಸಿವೆ. ಕಾಂಗ್ರೆಸ್ ತನ್ನ ನಿಯಂತ್ರಣದಲ್ಲಿ ತನ್ನ ಪಕ್ಷದ ಯಾವ ರಾಜ್ಯಗಳಿವೆ ಮತ್ತು ತಾನು ಮತ್ತು ಈ ಸರಕಾರಗಳು ಯಾವ ನಿರ್ಣಯಗಳನ್ನು ಹೇಗೆ ಮತ್ತು ಯಾವಾಗ ಕೈಗೊಳ್ಳಬೇಕೆಂಬುದೇ ಗೊತ್ತಿಲ್ಲ. ಹಿಂದೆ ಗೋವಾ, ಮತ್ತು ಇತ್ತೀಚೆಗೆ ಮಧ್ಯಪ್ರದೇಶ ಹೀಗೆ ಕಾಂಗ್ರೆಸ್ ಪಾರ್ಶ್ವವಾಯು ರೋಗ ಪೀಡೆಯೊಂದಿಗೆ ಜೀವಿಸುತ್ತಿದೆ. ಪಂಜಾಬಿನಲ್ಲಿ ಅದರದ್ದೇ ಸರಕಾರವಿದ್ದರೂ ಅಲ್ಲಿನ ಮುಖ್ಯಮಂತ್ರಿ ಸ್ವತಂತ್ರ ನವಾಬರಂತೆ ಕಾರ್ಯವೆಸಗುತ್ತಿರುವುದು ಸರ್ವವಿದಿತ. ಹೀಗಾಗಿ ಕಾಂಗ್ರೆಸ್ ತನ್ನ ವ್ಯಾಪ್ತಿಯಲ್ಲಿ ಏಕಪ್ರಕಾರವಾಗಿ ನಿರ್ಧರಿಸುವ ಬದಲು ಒಂದೊಂದು ರಾಜ್ಯವೂ ವಾಹನದ ಸವೆದ ಟೈರುಗಳಂತೆ ಒಂದೊಂದು ದಿಕ್ಕಿನಲ್ಲಿ ಚಲಿಸುತ್ತಿವೆ. ಕೇಂದ್ರಕ್ಕೆ ಬೇಕಾದದ್ದೂ ಅದೇ! ಭಾರತದಲ್ಲಿ ರಾಜಕೀಯಕ್ಕೆ ಸಮಯ, ಸಂದರ್ಭವೆಂಬುದಿಲ್ಲ. ಹುಟ್ಟಿನಲ್ಲೂ, ಸಾವಿನಲ್ಲೂ, ಬದುಕಿನ ಸಂಕಟಗಳಲ್ಲೂ! ಆದ್ದರಿಂದ ಲಾಕ್‌ಡೌನ್‌ನ ಗತಿಯೇನೆಂದು ಈಗ ಹೇಳಲಾಗದು. ಅದು ಯಾವುದಾದರೂ ಕಾರಣ/ನೆಪದಿಂದ ಅನಿರ್ದಿಷ್ಟಾವಧಿಗೆ ಮುಂದುವರಿದರೆ ಅಚ್ಚರಿಯಿಲ್ಲ!

ಹೀಗಾದರೆ ಮುಂದಿನ ಗತಿಯೇನು ಎಂದು ಗಂಭೀರವಾಗಿ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವಾತ್ಮಕವಾದ ಒಂದು ಸಂಘರ್ಷದಲ್ಲಿ ಭಾರತವೂ ತಲ್ಲಣಗೊಂಡಿದೆ ಎಂದಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಜಗತ್ತಿನ ಇತರ ರಾಷ್ಟ್ರಗಳಿಗಿಲ್ಲದ ಸಮಸ್ಯೆಗಳು ಭಾರತಕ್ಕಿವೆ. ಇಲ್ಲಿ ಹಲವಾರು ಜಾತಿ-ಮತ-ಧರ್ಮಗಳಿವೆ; ಭಾಷೆಗಳಿವೆ; ಜಗತ್ತಿನ ಎರಡನೆಯ ಅತೀ ಹೆಚ್ಚು ಜನಸಂಖ್ಯೆಯಿದೆ; ಜಗತ್ತಿನ ಯಾವೊಂದು ರಾಷ್ಟ್ರದಲ್ಲೂ ಇಲ್ಲದಷ್ಟು ಬಡತನರೇಖೆಗೂ ಕೆಳಗಿನ, ವಸತಿಹೀನರು ಮತ್ತು ಅನಕ್ಷರಸ್ಥರು ಇಲ್ಲಿದ್ದಾರೆ. ರೋಗದ ನದಿಯು ತನ್ನ ಪಾತ್ರಗಳನ್ನು ಹಿಗ್ಗಿಸಿಕೊಳ್ಳುತ್ತ ಮೇರೆ ಮೀರಿ ಹರಿಯುತ್ತಿದ್ದರೆ ಇವರೆಲ್ಲರನ್ನೂ ಬಗಲಿನಲ್ಲಿಟ್ಟುಕೊಂಡು ದಾಟಿಸುವ ಶಕ್ತಿ ಈ ರಾಷ್ಟ್ರಕ್ಕಿದೆಯೇ? ಇದೆಯೆಂದು ಅಶಿಸೋಣ. ಆದರೆ ವಾಸ್ತವದ ಅರಿವಿಲ್ಲದ ಆಶಯವು ಪೊಳ್ಳು ದೇಶಭಕ್ತಿಯನ್ನು ಹುಟ್ಟುಹಾಕುತ್ತದೆಯೇ ವಿನಾ ಚಿಕ್ಕಾಸಿನಷ್ಟು ಜನಹಿತವನ್ನುಂಟುಮಾಡುವುದಿಲ್ಲ. ಎಲ್ಲ ದುರಂತಗಳನ್ನೂ ಒಂದೇ ಸಮುದಾಯದ ವಿರುದ್ಧ ಎತ್ತಿಕಟ್ಟುವ ತಂತ್ರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಯದೆಂಬುದು ಭಾರತ ಸರಕಾರಕ್ಕೂ ಗೊತ್ತಿದೆ. ಆದ್ದರಿಂದಲೇ ಪ್ರಧಾನಿಯವರು ಕೊರೋನದ ಜಾತ್ಯತೀತತೆಯನ್ನು ಪ್ರಮುಖವಾಗಿ ಪ್ರಸ್ತಾವಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಈ ಕುರಿತು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಪಾಕಿಸ್ತಾನವೆಂಬುದು ಅಪ್ರಸ್ತುತವಾಗಿದೆ. ಇಲ್ಲವಾದರೆ ಬೆಳಗಾಗೆದ್ದು ಯಾರ್ಯಾರ ನೆನೆಯಲಿ ಎಂಬಲ್ಲಿ ಪಾಕಿಸ್ತಾನದ ಹೆಸರು ಅಗ್ರಪೀಠದಲ್ಲಿತ್ತು. ಈಗದು ಮಾಯವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಚೀನಾ ಅಪಾಯಕಾರಿಯೆಂಬುದು ದೇಶದ ಬಗ್ಗೆ ಯೋಚಿಸಬಲ್ಲ ಎಲ್ಲ ಪ್ರಜ್ಞಾವಂತರಿಗೆ ಮತ್ತು ಆಳುವ ಸರಕಾರಕ್ಕೂ ತಿಳಿದಿದೆ. ಹೇಳುವ ಮನಸ್ಸಿಲ್ಲವೋ ಧೈರ್ಯವಿಲ್ಲವೋ ಗೊತ್ತಿಲ್ಲ. ಚೀನಾದೊಂದಿಗೆ ಅರೆಮನಸ್ಸಿನ ಹುಸಿಮುನಿಸಷ್ಟೇ ಗೋಚರವಾಗುತ್ತಿದೆ. ಈಗ ಚೀನಾ ಕೊರೋನ ಹುಟ್ಟಿಗೆ ಕಾರಣಕರ್ತರೆಂಬ ಸಂಶಯಿತರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿದೆ. ಅಮೆರಿಕದಂತಹ ಬಲಿಷ್ಠ ದೇಶಗಳು ಚೀನಾವನ್ನು ಪರೋಕ್ಷವಾಗಿಯಾದರೂ ಹೆಸರಿಸಿದರೆ, ಭಾರತ ಆ ಹಂತಕ್ಕೂ ಏರಲಿಲ್ಲ. ಚೀನಾ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿದ್ದು ಬಹಿರಂಗ ಸತ್ಯ. ಭಾರತವು ಚೀನಾಕ್ಕೆ ರಫ್ತು ಮಾಡುವ ಸರಕುಗಳ ಐದು ಪಟ್ಟು ಸರಕುಗಳನ್ನು ಅಲ್ಲಿಂದ ಆಮದು ಮಾಡುತ್ತಿದೆ. ಕೊರೋನದ ಪ್ರಸಂಗದಲ್ಲೂ ನಮ್ಮಲ್ಲಿಲ್ಲದ ವೈದ್ಯಕೀಯ ಸಲಕರಣೆಗಳನ್ನು ಭಾರೀ ಪ್ರಮಾಣದಲ್ಲಿ ಚೀನಾದಿಂದಲೇ ತರಿಸಿಕೊಳ್ಳುವ ಅನಿವಾರ್ಯತೆಯು ಭಾರತಕ್ಕೆ ಬಂದೊದಗಿದೆ. ‘ವೈರಿಯೊಂದಿಗೆ ಶಯನ’ (Sleeping with the enemy ಇದೊಂದು ಹಾಲಿವುಡ್ ಸಿನೆಮಾ!) ಎಂಬಂತೆ ಈ ಹೇಳಲಾಗದ ಸಂಕಟ! ಇವೆಲ್ಲ ನಿತ್ಯಪ್ರಲಾಪ. ಲಾಕ್‌ಡೌನ್‌ನ ಬಿಡುವಲ್ಲಿ ಸ್ವಲ್ಪ ವಿಶಾಲವಾಗಿ ಕಣ್ಣಾಡಿಸಿದರೆ ಈ ಯುದ್ಧಕಾಲೇ ಶಸ್ತ್ರಾಭ್ಯಾಸದ ಅನಿವಾರ್ಯವು ನಮಗೊದಗಿದ್ದು ಆಳುವವರ ದೃಷ್ಟಿದೋಷದಿಂದ ಮತ್ತು ಯುದ್ಧೋನ್ಮಾದದಿಂದ ಎಂಬುದು ಸ್ಪಷ್ಟ.

ಕೊರೋನದಂತೆ ಇದೂ ಪಕ್ಷಾತೀತವಾಗಿ ಕಳೆದ ಏಳು ದಶಕಗಳಿಂದ ಆವರಿಸಿದ ಕಾಯಿಲೆ. ಶಾಂತಿಯ ಹೆಸರಿನಲ್ಲಿ ಅಮೆರಿಕ-ಸೋವಿಯೆಟ್‌ಒಕ್ಕೂಟಗಳೆಂಬ ಸುಂದೋಪಸುಂದರಿಗೆ ತಿಲೋತ್ತಮೆಯಂತಿದ್ದ ಭಾರತವು ರಕ್ಷಣೆಗಾಗಲೀ ಆರೋಗ್ಯಕ್ಕಾಗಲೀ ವಿಶೇಷ ಆದ್ಯತೆಯನ್ನು ನೀಡಿರಲಿಲ್ಲವಾದರೂ ಕೃಷಿಗೆ ಒತ್ತು ನೀಡಿತ್ತು; ಹಲವಾರು ಶೈಕ್ಷಣಿಕ ಯೋಜನೆಗಳನ್ನಾದರೂ ಹಾಕಿಕೊಂಡಿತ್ತು. ಇದರಿಂದಾಗಿಯೇ ಇಂದು ಭಾರತವು ಆಹಾರದಲ್ಲಿ ಸ್ವಾವಲಂಬಿಯಾಗಿದೆ; ವಿದೇಶಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗದಲ್ಲಿದ್ದು ಕೆಲವರಾದರೂ ಉನ್ನತ ಸ್ಥಾನಗಳನ್ನು ತಲುಪಿದ್ದಾರೆ. ಆರ್ಥಿಕವಾಗಿ ಪ್ರಬಲವೆನಿಸಿಕೊಂಡ ಎಲ್ಲ ರಾಷ್ಟ್ರಗಳೂ ಶಸ್ತ್ರಾಸ್ತ್ರಗಳನ್ನು ಮಾರಿಯೇ ಸಂಪಾದಿಸಿದ್ದು. ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆಂದರೆ ಎಲ್ಲ ರಾಷ್ಟ್ರಗಳಿಗೂ ಭಾರತವು ಬೇಕು. ಭಾರತಕ್ಕೂ ಈ ಪ್ರಾಬಲ್ಯವನ್ನು ಬೇರೆ ರೀತಿಯಲ್ಲಿ ಸಂಪಾದಿಸಬಹುದೆಂಬುದು ಇನ್ನೂ ಅರಿವಿಗೆ ಬಂದಿಲ್ಲ. ರಕ್ಷಣೆ ಬೇಕು; ಎಷ್ಟು ಅಗತ್ಯವೋ ಅಷ್ಟು. ಇನ್ನೂ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಭಾರತವೀಗ ಶಸ್ತ್ರಾಸ್ತ್ರ ಆಮದಿನಲ್ಲಿ ವಿಶ್ವದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ನಮ್ಮ ಶೇ.60 ರಕ್ಷಣಾ ಅಗತ್ಯಗಳು ಆಮದಾುತ್ತಿವೆ. ನಾವೂ ಅಲ್ಪ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ರಫ್ತು ಮಾಡುತ್ತೇವೆ: ಮ್ಯಾನ್ಮಾರ್, ಮೊರೀಷಿಯಸ್, ಶ್ರೀಲಂಕಾಗಳಿಗೆ. ನಾವೀಗ ವಿಶ್ವದಲ್ಲೇ 5ನೇ ಅತೀ ಹೆಚ್ಚು ರಕ್ಷಣಾವೆಚ್ಚಗಾರರು. ಈಚೆಗೆ ಅಮೆರಿಕ-ರಶ್ಯಗಳಿಂದ ಬಂದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆಯಾಗಿದೆಯಾದರೂ (ಕಳೆದ ತಿಂಗಳು ಟ್ರಂಪ್ ಬಂದಾಗ 21 ಸಾವಿರ ಕೋಟಿ ರೂ. ಮೌಲ್ಯದ ಆಮದಿಗೆ ಭಾರತ ಸಹಿ ಹಾಕಿದ್ದರಿಂದ ಅಮೆರಿಕ ಮತ್ತೆ ಮುನ್ನೆಲೆಗೆ ಬಂದಿದೆ) ಫಾನ್ಸ್ಸ್‌ನಿಂದ ಖರೀದಿ ಪ್ರಮಾಣವು ಶೇ. 715 ಹೆಚ್ಚಾಗಿದೆ (ಇತ್ತೀಚೆಗಿನ 36 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನ ಈ ಭಾರೀ ಹೆಚ್ಚಳಕ್ಕೆ ಕಾರಣ); ಇಸ್ರೇಲಿನಿಂದ ಖರೀದಿ ಪ್ರಮಾಣವು ಶೇ.175 ಹಿಗ್ಗಿದೆ; ಇಷ್ಟಾದರೂ ನಮ್ಮ ಸೈನಿಕ ಬಲವು ಪಾಕಿಸ್ತಾನವನ್ನು ಎದುರಿಸಲು ಸಾಕೇ ವಿನಾ ಚೀನಾವನ್ನಲ್ಲ. ನಮ್ಮ ‘ಮೇಕ್ ಇನ್ ಇಂಡಿಯಾ’ ತಂತ್ರವು ಘೋಷಣೆಯಲ್ಲಷ್ಟೇ ಉಳಿದಿದೆ.

21ನೇ ಶತಮಾನದಲ್ಲಿ ಭಾರತವು ಆರೋಗ್ಯ, ಕೃಷಿ ಮತ್ತು ಶಿಕ್ಷಣಕ್ಕೆ ಕೊಡಬೇಕಾದ ಆದ್ಯತೆಯನ್ನು ಕೊಟ್ಟಿಲ್ಲ. 2025ರ ನಮ್ಮ ಗುರಿಯಾದ ಶೇ.2.5 ಜಿಡಿಪಿ ಸಾಧಿಸಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯಾಗಬೇಕು. ಈ ಬಾರಿಯ ಮುಂಗಡ ಪತ್ರವನ್ನು ನೋಡಿದರೆ ಆರೋಗ್ಯಕ್ಕೆ 70 ಸಾವಿರ ಕೋಟಿ ರೂ., ಶಿಕ್ಷಣಕ್ಕೆ 99 ಸಾವಿರ ಕೋಟಿ ರೂ. ಮತ್ತು ಕೃಷಿಗೆ 2.83 ಲಕ್ಷ ಕೋಟಿ ರೂ.ಯನ್ನು (+ಕೃಷಿಸಾಲಕ್ಕಾಗಿ 1.5 ಲಕ್ಷ ಕೋಟಿ ರೂ.) ನಿಗದಿಗೊಳಿಸಿದ್ದರೆ ರಕ್ಷಣೆಗೆ 3.3 ಲಕ್ಷ ಕೋಟಿ ರೂ. ಮತ್ತು 1.33 ಕೋಟಿ ರೂ.ಯಷ್ಟು ನಿವೃತ್ತಿ ವೇತನ ಮತ್ತಿತರ ವೆಚ್ಚದ ಹಣವನ್ನು ಕಾದಿರಿಸಿದೆ. ಪ್ರಸ್ತುತ ಆರೋಗ್ಯ ನಿರ್ವಹಣೆಗೆ ಸರಕಾರವು ಸಾಕಷ್ಟು ಹಣ/ಆಸಕ್ತಿ ನೀಡಿಲ್ಲ. ನಮ್ಮಲ್ಲಿ ಶೇ. 70 ಹಣವು ಖಾಸಗಿ ಕ್ಷೇತ್ರಗಳಿಂದ ಆರೋಗ್ಯ ನಿರ್ವಹಣೆಗೆ ವೆಚ್ಚವಾಗುತ್ತಿದೆ. ಕೇವಲ ಶೇ. 30 ಮಾತ್ರ ಸರಕಾರದ ಕೊಡುಗೆ. (ಇತರೆಡೆ ಈ ಕೊಡುಗೆ ಹೀಗಿದೆ: ಬ್ರಿಟನ್ ಶೇ.83, ಅಮೆರಿಕ ಶೇ.48, ಚೀನಾ ಶೇ.56, ಬ್ರೆಝಿಲ್ ಶೇ.46 ಇತ್ಯಾದಿ.) ನಮಗಿಂತ ಕೆಳ ಸ್ಥಾನದಲ್ಲಿರುವ ದೇಶಗಳೆಂದರೆ ಹೈಟಿ, ಸುಡಾನ್, ಬಾಂಗ್ಲಾದೇಶ ಮುಂತಾದವುಗಳು. ನಮ್ಮಲ್ಲಿ ಸಾಕಷ್ಟು ಸರಕಾರಿ ಆಸ್ಪತ್ರೆಗಳಿಲ್ಲ, ವೈದ್ಯರಿಲ್ಲ, ವೈದ್ಯಕೀಯ ಸೌಲಭ್ಯಗಳಿಲ್ಲ. ನಮ್ಮ ಪೂಜೆ-ಪುನಸ್ಕಾರಗಳು, ಗಿಡಮೂಲಿಕೆಗಳು, ದೇಶಿ ನಂಬಿಕೆಗಳು ತೀವ್ರ ಅನಾರೋಗ್ಯವನ್ನು ಸಾಂಕ್ರಾಮಿಕಗಳನ್ನು ತಡೆಯಲಾರವು. ಶಸ್ತ್ರಾಸ್ತ್ರಗಳ ಮಹಾನ್ ಮಾರಾಟಗಾರ ರಾಷ್ಟ್ರಗಳು ಈಗ ತಮ್ಮ ಹಣದಿಂದ ಕೊರೋನವನ್ನು ಓಡಿಸುವುದರಲ್ಲಿ ವಿಫಲವಾಗಿವೆ! ನಾವು ಗಮನಿಸಬೇಕಾದ್ದೆಂದರೆ- ಚೀನಾದ ಹೊರತಾಗಿ ಈ ಯಾವ ಪ್ರಬಲ ದೇಶಗಳಿಗೂ ಜನಸಂಖ್ಯಾ ಸಮಸ್ಯೆಯಿಲ್ಲ. ಶಿಕ್ಷಣ ಸಮಸ್ಯೆಯಿಲ್ಲ. ಅವು ನಮ್ಮಷ್ಟು ಪರಾವಲಂಬಿಗಳಲ್ಲ. ನಮ್ಮ ವಲಸೆ ಕಾರ್ಮಿಕರು ತಲ್ಲಣಗೊಂಡಂತೆ ಈ ಯಾವ ದೇಶಗಳಲ್ಲೂ ನಡೆದಿಲ್ಲ. ನಮ್ಮಲ್ಲಿ ಬಂದ ನೆಂಟರು ಎರಡು ದಿನ ಉಳಿದೇ ಹೋಗುತ್ತಾರೆ; ವಿದೇಶಗಳಂತೆ ತಕ್ಷಣ ಒಂದು ಕಪ್ ಕುಡಿದು ಹೋಗುವುದಿಲ್ಲ. ಕಾಯಿಲೆಯೂ ಹೀಗೆಯೇ!

ಇಂದು ಎಲ್ಲ ದೇಶಗಳು ತಮ್ಮ ದೇಶದವರನ್ನು ಮರಳಿ ಕರೆಸಿಕೊಂಡರೆ ಭಾರತಕ್ಕೆ ಅದು ಸಾಧ್ಯವಾಗುತ್ತಿಲ್ಲ. ಮಧ್ಯಪೂರ್ವ ದೇಶಗಳಲ್ಲೇ ಸುಮಾರು 3.3 ಮಿಲಿಯ ಭಾರತೀಯರು ಚಾಕರಿಯಲ್ಲಿದ್ದಾರೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯ ಮುಂತಾದ ಮುಂದುವರಿದ ರಾಷ್ಟ್ರಗಳಲ್ಲಿ ಇರುವವರ ಸಂಖ್ಯೆ ಪ್ರತ್ಯೇಕ. ಇವರೆಲ್ಲ ಬಂದರೆ ಅವರಿಗೆ ಜಾಗ, ಉದ್ಯೋಗ ಮಾಡಿಕೊಡುವುದೆಲ್ಲಿ? ಮಾಡಿಕೊಟ್ಟರೂ ಅವರು ಮುಖ್ಯ ವಾಹಿನಿಗೆ ಪ್ರವೇಶಿಸುವುದಾದರೂ ಹೇಗೆ?
ಅನಾರೋಗ್ಯದ ಚಕ್ರವ್ಯೆಹದೊಳಗಿದ್ದೇವೆ. ಕಣ್ಣುಗಳನ್ನು ದೊಡ್ಡದಾಗಿ ಅರಳಿಸಬೇಕು, ಕಿವಿಯನ್ನು, ಮೆದುಳನ್ನು ತೆರೆದಿಡಬೇಕು. ಸತ್ಯ ಅರ್ಥವಾಗಬೇಕು. ಲಾಕ್‌ಡೌನ್‌ನ ದಿನಗಳು ವ್ಯರ್ಥವಾಗದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)