ಗಲ್ಫ್ ಸುದ್ದಿ
ಯೂಸುಫ್ ಅಲಿಯವರ ಲುಲು ಗ್ರೂಪ್ ನಲ್ಲಿ 7,600 ಕೋಟಿ ರೂ. ಹೂಡಿಕೆ ಮಾಡಿದ ಯುಎಇ ಸಂಸ್ಥಾಪಕರ ಪುತ್ರ

ಕೊಚ್ಚಿ: ಅಬುಧಾಬಿ ರಾಜ ಮನೆತನದ ಶೇಖ್ ತಹ್ನೂನ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಒಡೆತನದ ಸಂಸ್ಥೆಯೊಂದು ಲುಲು ಹೈಪರ್ ಮಾರ್ಕೆಟ್ಗಳನ್ನು ಹೊಂದಿರುವ ಲುಲು ಗ್ರೂಪ್ ನಲ್ಲಿ ಸುಮಾರು 7,600 ಕೋಟಿ ರೂ. ಹೂಡಿಕೆ ಮಾಡಿದೆ.
ಶೇಖ್ ಅಲ್ ನಹ್ಯಾನ್ ಅವರು ಸಂಯುಕ್ತ ಅರಬ್ ಸಂಸ್ಥಾನದ ಸ್ಥಾಪಕ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪುತ್ರರಾಗಿದ್ದು ಸದ್ಯ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಲುಲು ಸಮೂಹದ ಭಾರತೀಯ ಘಟಕಗಳನ್ನು ಹೊರತು ಪಡಿಸಿ ಈ ಸಂಸ್ಥೆಯ ಶೇ 20ರಷ್ಟು ಷೇರುಗಳಲ್ಲಿ ಇತರರು ಹೂಡಿಕೆ ಮಾಡುತ್ತಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ. ಲುಲು ಗ್ರೂಪ್ ಮಧ್ಯ ಪೂರ್ವ ದೇಶಗಳು, ಭಾರತ ಹಾಗೂ ಇತರ ಈಶಾನ್ಯ ದೇಶಗಳಲ್ಲಿ 188 ಹೈಪರ್ ಮಾರ್ಕೆಟ್ಗಳು ಹಾಗೂ ಸೂಪರ್ ಮಾರ್ಕೆಟ್ಗಳನ್ನು ನಡೆಸುತ್ತಿದೆ. ಲುಲು ಗ್ರೂಪ್ನ ವಿವಿಧ ಹೈಪರ್ ಮಾರ್ಕೆಟ್ಗಳಲ್ಲಿ 30,000ಕ್ಕೂ ಅಧಿಕ ಭಾರತೀಯರಿದ್ದು ಭಾರತದ ಹೊರಗಿನ ದೇಶಗಳಲ್ಲಿ ಗರಿಷ್ಠ ಭಾರತೀಯರಿಗೆ ಉದ್ಯೋಗ ನೀಡಿದ ಏಕೈಕ ಅತಿ ದೊಡ್ಡ ಕಂಪೆನಿ ಇದೆಂದು ಪರಿಗಣಿತವಾಗಿದೆ.
ಕೇರಳದ ತ್ರಿಶ್ಶೂರು ಮೂಲದ ಎಂ.ಎ. ಯೂಸುಫ್ ಅಲಿ ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಶಾಪಿಂಗ್ ಮಾಲ್ ಹೊರತುಪಡಿಸಿ ಅವರು ಮಧ್ಯ ಪೂರ್ವ ದೇಶಗಳು ಹಾಗೂ ಯುರೋಪ್ನಾದ್ಯಂತ ಐಷಾರಾಮಿ ಹೋಟೆಲ್ಗಳ ಒಡೆಯರಾಗಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ