varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 26 Apr, 2020
ಪಿ.ಎ.ರೈ

ಕೊರೋನ ವಿರುದ್ಧದ ಹೋರಾಟವು ತಮ್ಮ ಜೀವಿತಾವಧಿಯಲ್ಲೇ ಅತಿ ದೊಡ್ಡ ಅದೃಶ್ಯ ಯುದ್ಧವಾಗಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಗಡಿಯಲ್ಲಿ ನಡೆದ ಸಜಿಕರ್ಲ್ ಸ್ಟ್ರೈಕ್‌ಗಳ ಗತಿಯೇನು?

ಕೊರೋನಕ್ಕೆ ಚೀನಾ ಕಾರಣವಾಗಿದ್ದರೆ ಪರಿಣಾಮ ಎದುರಿಸಲೇಬೇಕು - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕ ಕಾರಣವಾಗಿದ್ದರೆ ಪರಿಣಾಮ ಎದುರಿಸುವ ಅಗತ್ಯವಿಲ್ಲವೆ?

ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ ಸಾಮಾಜಿಕ ಮಾಧ್ಯಮದ ಕೆಲ ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಅಲ್ಲಿ ಹುಡುಕಿದ್ದು ರಾಜಕೀಯ ಅಲ್ಲ, ಸಾಮಾಜಿಕ ಅಂತರ.

  ಭವಿಷ್ಯದಲ್ಲಿ ಮಾನವ ಕುಲವೇ ಒಂದಾಗಿ ನಿಲ್ಲುವ, ಪುಟಿದೇಳುವಂತಹ ದಿನಗಳು ಬರಲಿವೆ -ನರೇಂದ್ರಮೋದಿ, ಪ್ರಧಾನಿ
 ಅಯ್ಯೋ ಇನ್ನೇನು ಆಪತ್ತು ಕಾದಿದೆಯೋ?

ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
 ಸಂವಿಧಾನದ ಅಗತ್ಯವಿಲ್ಲ ಎಂದೇ?

ದೇಶಕ್ಕೆ (ಕೊರೋನ) ಸಂಕಷ್ಟ ಬಂದಾಗ ಜಾತಿ, ಮತ, ಧರ್ಮ, ಪಕ್ಷಗಳ ಸಹಕಾರ ದೊರೆತಿದೆ - ನಳಿನ್‌ಕುಮಾರ್ ಕಟೀಲು, ಸಂಸದ

ಆದರೆ ರಾಜಕಾರಣಿಗಳ ಸಹಕಾರ ಮಾತ್ರ ದೊರಕಿಲ್ಲ ಎನ್ನುವ ಆರೋಪಗಳಿವೆ.

ಗೂಂಡಾಗಿರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು -ಯಡಿಯೂರಪ್ಪ, ಮುಖ್ಯಮಂತ್ರಿ

 ಕೊರೋನದ ವಿರುದ್ಧ ಕ್ರಮ ಎಲ್ಲಿಯವರೆಗೆ ಬಂತು?

ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು -ಯು.ಟಿ.ಖಾದರ್, ಮಾಜಿ ಸಚಿವ
ನಿಮ್ಮದೇನಿದ್ದರೂ ಹಣದ ಮೇಲೆ ರಾಜಕೀಯ ಇರಬೇಕು.

ನಮ್ಮ ತಂದೆ ನನಗೆ ಕಷ್ಟಪಟ್ಟು ದುಡಿಯುವುದನ್ನು ಕಲಿಸಿದ್ದಾರೆ -ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಕಷ್ಟಪಟ್ಟು ದುಡಿಯಲು ಕಷ್ಟವಾದ ಕಾರಣಕ್ಕೆ ಸನ್ಯಾಸ ಸ್ವೀಕರಿಸಿದ ವದಂತಿಗಳಿವೆ.

ಭಾರತವು ಮುಸ್ಲಿಮರ ಪಾಲಿನ ಸ್ವರ್ಗವಾಗಿದೆ - ಮುಖ್ತರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಆ ಸ್ವರ್ಗವನ್ನು ನರಕ ಮಾಡಬೇಡಿ ಎನ್ನುವುದೇ ತಮ್ಮ ಪ್ರಧಾನಿಯ ಬಳಿ ದೇಶವಾಸಿಗಳ ಮನವಿ.

ಇದು ಒಂದಾಗಬೇಕಾದ ಸಮಯವೇ ಹೊರತು, ಒಡೆಯುವ ಸಮಯವಲ್ಲ - ಝಮೀರ್ ಅಹ್ಮದ್‌ಖಾನ್, ಶಾಸಕ

ಸುರಕ್ಷಿತ ಅಂತರದ ಜೊತೆಗೆ ಒಂದಾಗಬೇಕಾದ ಸಮಯ.

ಕಾನೂನು ಎಲ್ಲರಿಗಿಂತ ದೊಡ್ಡದು -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅದು ತಮ್ಮ ಬಂಧನವಾದಾಗಲೇ ಸಾಬೀತಾಗಿದೆ.

ಮೋದಿ ಸರಕಾರ ಬಡವರ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸಿ ಶ್ರೀಮಂತರ ಕೈತೊಳೆಯುತ್ತಿದೆ -ರಾಹುಲ್‌ಗಾಂಧಿ, ಕಾಂಗ್ರೆಸ್ ಮುಖಂಡ

 ಬಡವರ ರಕ್ತದಿಂದ ಶ್ರೀಮಂತರ ಕೈತೊಳೆಸುವ ಉದ್ದೇಶ.
  
ಈಗ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದಿದ್ದರೆ ಕರ್ನಾಟಕ ಕೊರೋನ ರಾಜ್ಯವಾಗುತ್ತಿತ್ತು - ಎಚ್.ವಿಶ್ವನಾಥ್, ಮಾಜಿ ಶಾಸಕ
 ಮತ್ತೆ ಈಗ ಕರ್ನಾಟಕ ಆಗಿರುವುದು ಏನು?

 ಕುಡುಕರ ಸಂಘದ ಅಧ್ಯಕ್ಷರು ನನಗೆ ಫೋನ್‌ಮಾಡಿ ಮದ್ಯ ವ್ಯಾಪಾರ ಆರಂಭಿಸಲು ಒತ್ತಾಯಿಸಿದ್ದಾರೆ - ಎಚ್.ನಾಗೇಶ್, ಸಚಿವ
ಕುಡಿದು ನೀಡಿದ ಹೇಳಿಕೆಯಂತಿದೆ.

ಕೊರೋನ ನಿಗ್ರಹ ಮತ್ತು ಪರೀಕ್ಷೆಯಲ್ಲಿ ಕರ್ನಾಟಕ ನಂ-1 ಸ್ಥಾನದಲ್ಲಿದೆ - ಡಾ.ಸುಧಾಕರ್, ಸಚಿವ

ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜುತ್ತಾ ನೀಡಿದ ಹೇಳಿಕೆ.

ಪೊಲೀಸರಿಗೆ ಲಾಠಿ, ರಿವಾಲ್ವರ್ ಕೊಟ್ಟಿರುವುದು ಪ್ರದರ್ಶನಕ್ಕಲ್ಲ -ಕೋಟ ಶ್ರೀನಿವಾಸ ಪೂಜಾರಿ, ಸಚಿವ

 ಹೆಣ ಸುಡಲು ಅಡ್ಡಿ ಪಡಿಸಿದವರ ವಿರುದ್ಧ ಬಳಸಬೇಕಿತ್ತು ಎಂದು ಹೇಳುತ್ತೀರಾ?

 ಭಾರತವನ್ನು ಸರ್ವನಾಶಮಾಡಲು ‘ಕೊರೋನ ಜಿಹಾದ್’ ನಡೆಸಲಾಗುತ್ತಿದೆ - ಅನಂತಕುಮಾರ್ ಹೆಗಡೆ, ಸಂಸದ
  ಭಾರತವನ್ನು ನಾಶ ಮಾಡಲು ನಿಮ್ಮಂತಹ ವೈರಸ್‌ಗಳೇ ಧಾರಾಳ ಸಾಕು ಎನ್ನುವುದು ಕೊರೋನ ಅಭಿಮತ.

ಈಗಿರುವ ರಾಜಕೀಯ ನಾಯಕರೆಲ್ಲ ರಾಜಕೀಯದಲ್ಲಿ ನನಗಿಂತ ಚಿಕ್ಕವರು - ವಿ.ಸೋಮಣ್ಣ, ಸಚಿವ
ಚಿಕ್ಕವರೆಲ್ಲ ಸೇರಿ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವ ಉದ್ದೇಶದಲ್ಲಿದ್ದಾರಂತೆ.

ನಾನು ಹಾಲಿ ಮುಖ್ಯಮಂತ್ರಿ ಆಗಿದ್ದರೆ ರೈತರಿಗೆ 5 ಸಾವಿರ ಕೊಟಿ ರೂ.ಪ್ಯಾಕೇಜ್ ನೀಡುತ್ತಿದ್ದೆ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

 ತಮ್ಮ ಮಗನ ಮದುವೆ ಸಮಾರಂಭದಲ್ಲೇ ಅದನ್ನು ಘೋಷಿಸುವ ಉದ್ದೇಶವೂ ಇತ್ತೆಂದು ಕಾಣುತ್ತದೆ.

 ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಗುಂಡಿನ ಮಳೆಗೆರೆಯಬೇಕು - ರೇಣುಕಾಚಾರ್ಯ, ಶಾಸಕ

ಹಾಗಿದ್ದರೆ ನಿಮ್ಮ ಮೇಲೆ ಈಗಾಗಲೇ ಮಳೆ ಗೆರೆದು ಆಗಿ ಬಿಡುತ್ತಿತ್ತು.

ಸತ್ಯಕ್ಕೆ ಯಾವುದೇ ಸಾಕ್ಷಿ ಒದಗಿಸುವ ಅಗತ್ಯತೆ ಇರುವುದಿಲ್ಲ - ಅಮಿತ್‌ಶಾ, ಕೇಂದ್ರ ಸಚಿವ
ಸಾಕ್ಷದ ಕೊರತೆಯಿಂದ ಬಿಡುಗಡೆಯಾದವರ ಮಾತು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು