varthabharthi


ಅನುಗಾಲ

ಮನುಷ್ಯನೆಂಬ ಮೃಗ

ವಾರ್ತಾ ಭಾರತಿ : 29 Apr, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗೊತ್ತಿಲ್ಲದಿರುವುದು ತಪ್ಪಲ್ಲ; ಆದರೆ ತನಗೆ, ತಮಗೆ ಗೊತ್ತಿಲ್ಲವೆಂದು ಗೊತ್ತಿಲ್ಲದಿರುವುದು ತಪ್ಪು. ದುರದೃಷ್ಟವಶಾತ್ ಈ ಗೊತ್ತಿಲ್ಲದಿರುವಿಕೆಯ ಪರಿಣಾಮಕ್ಕೆ ಬಲಿಯಾಗುವುದು ಸಮಕಾಲೀನ ಸಮಾಜ; ಜಗತ್ತು. ಆದರೆ ವಿವೇಕಿಗಳಂತೆ ಕಾಣುವ ವಿದ್ಯಾವಂತರು ಹೊಗಳು ಭಟ್ಟರು ತಮ್ಮ ಬುದ್ಧಿಯನ್ನು ಭದ್ರತಾ ಕೊಠಡಿಗಳಲ್ಲಿಟ್ಟು, ಮಿದುಳೆಂಬ ಭಾಗವನ್ನು ದೊರೆಗೆ ಅಡವಿಟ್ಟು ಉಳಿದಂತೆ ಕೊರಳಿಗಿಂತ ಮೇಲಿನ ದೇಹಭಾಗವನ್ನು ಮೇಲೆ-ಕೆಳಗೆ ನಿಯಮಿತವಾಗಿ, ಕಾಲಾನುಚಿತವಾಗಿ ಚಲಿಸುವುದನ್ನು ಮಾತ್ರ ಕಲಿತಿದ್ದಾರೆ.ಭೂಮಿಯ ಮೇಲಣ ಜಗತ್ತು ಕೊರೋನ ಎಂಬ ವೈರಾಣುವನ್ನು ಎದುರಿಸಲು ಅತೀವ ಪ್ರಯತ್ನವನ್ನು ನಡೆಸುತ್ತಿದೆ. ಈ ದುಸ್ಥಿತಿಯ ಪರಿಣಾಮವಾಗಿ ಎದುರಾದ ಆರ್ಥಿಕ ಹಿಂಜರಿತವನ್ನು ಎದುರಿಸಲಾಗದೆ ಆಸೆ ಮತ್ತು ಭರವಸೆಯಲ್ಲೇ ಕಾಲ ಕಳೆಯುತ್ತಿದೆ. ಪೌರಾಣಿಕ ರಾಕ್ಷಸ ಚಕ್ರವರ್ತಿಗಳ ಆಸ್ಥಾನದಲ್ಲಿ ಅಷ್ಟದಿಕ್ಪಾಲಕರನ್ನು ಕಟ್ಟಿಹಾಕಿ ದುಡಿಸಲಾಗುತ್ತಿತ್ತೆಂಬ ನಂಬಿಕೆಯ ಕಥೆಗಳಿವೆ. ಅವರ ಶಕ್ತಿ-ಯುಕ್ತಿಯೇನಿದ್ದರೂ ಈ ರಾಕ್ಷಸೀಯ ಶಕ್ತಿಗಳಿಗೆ ಪೂರಕ. ಹಾಗೆಯೇ ಜ್ಞಾನಿಗಳೆಂದು ಭಾವಿಸಲ್ಪಟ್ಟ ಪುರೋಹಿತರು, ಸಾಧು-ಸಂತ-ಋಷಿಗಳು ಮಾರಣಹೋಮವನ್ನು ಮಾಡಲೂ ತಯಾರಿದ್ದವರೇ. ತ್ರಿಮೂರ್ತಿಗಳಂತೂ ಈ ರಾಕ್ಷಸ ಭಕ್ತರಿಗೆ ಬೇಕಾದ ವರಗಳನ್ನು ದಯಪಾಲಿಸಿ ಅವರ ಮರಣವನ್ನು ಎಷ್ಟು ದೂರ ಸಾಧ್ಯವೋ ಅಷ್ಟೂ ದೂರಕ್ಕೆ ತಳ್ಳಿ ಲೋಕದ ಸಂಕಟವನ್ನು ನೋಡಿ ತಮ್ಮ ವರಶಕ್ತಿಯ ಕುರಿತು ಹಸನ್ಮುಖರಾಗುವವರೇ.

ಇಂತಹ ದುಷ್ಟಶಕ್ತಿಗಳಿಂದ ಜಗತ್ತು ಪಾರಾಗುವ ಹದಿನೆಂಟನೇ ರೀಲಿನ ಹೊತ್ತಿನಲ್ಲಿ ಅಸಂಖ್ಯ ಜೀವಿಗಳು ನರಳಿರುತ್ತವೆ; ಪ್ರಾಣತೊರೆದಿರುತ್ತವೆ; ಅಸ್ತಿತ್ವವನ್ನೇ ಅರ್ಥಹೀನಗೊಳಿಸುತ್ತವೆ. ಈಗ ಆಗುತ್ತಿರುವುದೂ ಅದೇ. ಹೀಗೆ ವರ ನೀಡಿದ ದೇವರುಗಳು ಅಂತರ್ಧಾನರಾಗಿದ್ದಾರೆ. ಇಲ್ಲವೇ ಸುಸ್ತಾಗಿದ್ದಾರೆ. ಅವರಿಗೆ ಕೊರೋನ ಪೀಡೆಯಿಂದಾಗಿ ವಸತಿ ಸೌಕರ್ಯವೂ ಇಲ್ಲ. ಆಹಾರವೂ ಇಲ್ಲ. ಹೊಗಳಿಕೆಯಂತೂ ಮೊದಲೇ ಇಲ್ಲ. ದೇಶದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ರಾಜಕೀಯ ಅಧಿಕಾರದ ಅನುಶಾಸನ ಪರ್ವ ನಡೆಯುತ್ತಿದೆ. ರೋಗ ಸೋಂಕಿತರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ. ವೈದ್ಯಕೀಯ ಚಿಕಿತ್ಸೆಗಿಂತ ಮೊದಲೇ ಅವರಿಗೆ ಪೊಲೀಸರಿಂದ ಚಿಕಿತ್ಸೆಯಾದ ಸಂದರ್ಭಗಳೂ ಇವೆ. ವೈದ್ಯಕೀಯ ಚಿಕಿತ್ಸೆಯ ಹೊತ್ತಿಗೆ ಅವರು ಗತಪ್ರಾಣರಾಗುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರವು ರಾಜಕಾರಣಕ್ಕೆ ಅಧೀನವಾಗಿ ಗುಲಾಮರಂತೆ ದುಡಿಯಬೇಕಾಗಿದೆ. ಇವರ ಪೈಕಿ ಅನೇಕ ಜೀವಗಳು ಬಲಿಯಾದಾಗಲೂ ರಾಜಕಾರಣಿಗಳು ಮಾತ್ರವಲ್ಲ, ರಾಜಕೀಯ ಪ್ರಜ್ಞಾಜೀವಿಗಳು ತಮ್ಮ ಹಠಮಾರಿತನವನ್ನು (ಎಲ್ಲ ಹಠಗಳಲ್ಲೂ ಈ ‘ಮಾರಿ’ಯಿದೆ) ಬಿಡರು.

ಇದರಿಂದಾಗಿ ವೈದ್ಯರು ತಮ್ಮ ತಿಳಿವಳಿಕೆ ಮತ್ತು ಇಚ್ಛೆಗನುಗುಣವಾಗಿ ದುಡಿಯಲು ಅವಕಾಶವಿಲ್ಲ. ಮೊನ್ನೆ ಮೊನ್ನೆ ಚೆನ್ನೈಯಲ್ಲಿ ಪ್ರಾಣತೆತ್ತ ವೈದ್ಯರೊಬ್ಬರ ಅಂತ್ಯಸಂಸ್ಕಾರಕ್ಕೆ ಜನರು ಅಡ್ಡಿಪಡಿಸಿದ್ದರ ವಿರುದ್ಧ ಯಾವ ಕಠಿಣ ಕ್ರಮವನ್ನೂ ಕೈಗೊಳ್ಳಲು ಸರಕಾರವು ವಿಫಲವಾಯಿತು. ಸಾವು ಅಷ್ಟು ಅಗ್ಗವಾಗಿದೆ ಮತ್ತು ಜನರು ತಾವೇ ನಾಡಪ್ರಭುಗಳಂತೆಯೂ ಅಲ್ಲ, ಕಾನೂನು-ನ್ಯಾಯ ಇವೆಲ್ಲವುಗಳಿಗೂ ಮೇಲಿನವರಂತೆ, ಸರ್ವಜ್ಞರಂತೆ ವ್ಯವಹರಿಸುತ್ತಿದ್ದಾರೆ. ಆರ್ಥಿಕವಾಗಿ ಸಶಕ್ತವಾಗುವುದು ಅಗತ್ಯ. ಆದರೆ ಇಂತಹ ಸಂಕೀರ್ಣ ಮತ್ತು ಸಂದಿಗ್ಧ ವಿಚಾರಗಳ ಬಗ್ಗೆ ಅರ್ಥಶಾಸ್ತ್ರಜ್ಞರ ನೆರವನ್ನು ಸರಕಾರಗಳು ಬಯಸುತ್ತಿಲ್ಲ. ರಾಜಕಾರಣಿಗಳೇ ಎಲ್ಲವನ್ನೂ ತಿಳಿದವರಾದ್ದರಿಂದ ಅವರು ವೈದ್ಯರನ್ನಾಗಲಿ, ಆರ್ಥಿಕ ತಜ್ಞರನ್ನಾಗಲಿ ಕೇಳುವ ಮನಸ್ಥಿತಿಯಲ್ಲಿಲ್ಲ. ಹುಚ್ಚುದೊರೆ ತಾನು ಕೈಗೊಂಡ ನಿರ್ಧಾರಗಳನ್ನು ಸಮರ್ಥಿಸಲು ಆಸ್ಥಾನ ವಿದೂಷಕರನ್ನು ನೇಮಿಸಲಾಗುತ್ತಿದೆ. ಒಟ್ಟಿನಲ್ಲಿ ಪೌರಾಣಿಕ ನಿರಂಕುಶ ದೊರೆಗಳಂತೆ ರಾಜನೇ ಸೃಷ್ಟಿ-ಸ್ಥಿತಿ-ಲಯಕಾರಕರಾಗಿ ಈ ಮೂರಂಶಗಳಲ್ಲಿ ಮೊದಲನೆಯ ಎರಡನ್ನು ಕೈಬಿಟ್ಟು ಮೂರನೆಯ ಲಯಕಾರಕ ಹಾದಿಯನ್ನು ಸುಗಮಗೊಳಿಸಲಾಗುತ್ತಿದೆ.

ಗೊತ್ತಿಲ್ಲದಿರುವುದು ತಪ್ಪಲ್ಲ; ಆದರೆ ತನಗೆ, ತಮಗೆ ಗೊತ್ತಿಲ್ಲವೆಂದು ಗೊತ್ತಿಲ್ಲದಿರುವುದು ತಪ್ಪು. ದುರದೃಷ್ಟವಶಾತ್ ಈ ಗೊತ್ತಿಲ್ಲದಿರುವಿಕೆಯ ಪರಿಣಾಮಕ್ಕೆ ಬಲಿಯಾಗುವುದು ಸಮಕಾಲೀನ ಸಮಾಜ; ಜಗತ್ತು. ಆದರೆ ವಿವೇಕಿಗಳಂತೆ ಕಾಣುವ ವಿದ್ಯಾವಂತರು ಹೊಗಳು ಭಟ್ಟರು ತಮ್ಮ ಬುದ್ಧಿಯನ್ನು ಭದ್ರತಾ ಕೊಠಡಿಗಳಲ್ಲಿಟ್ಟು, ಮಿದುಳೆಂಬ ಭಾಗವನ್ನು ದೊರೆಗೆ ಅಡವಿಟ್ಟು ಉಳಿದಂತೆ ಕೊರಳಿಗಿಂತ ಮೇಲಿನ ದೇಹಭಾಗವನ್ನು ಮೇಲೆ-ಕೆಳಗೆ ನಿಯಮಿತವಾಗಿ, ಕಾಲಾನುಚಿತವಾಗಿ ಚಲಿಸುವುದನ್ನು ಮಾತ್ರ ಕಲಿತಿದ್ದಾರೆ. ಇವೂ ಅಲ್ಲದೆ ಎಲ್ಲದನ್ನೂ ರಾಜಕೀಯಗೊಳಿಸುವುದು ವಿಷಾದನೀಯ. ಇದರಿಂದಾಗಿ ದಿನಕ್ಕೊಂದು ವಿಭಿನ್ನ ಮತ್ತು ಮೇಲ್ನೋಟಕ್ಕೇ ಮೂರ್ಖತನದ್ದೆಂದು ಪ್ರಜ್ಞಾವಂತರಿಗೆ ಅರಿವಾಗುವ ಟೀಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುತ್ತೇವೆ. ನಮ್ಮ ಮಾಧ್ಯಮಗಳಂತೂ ಬಹುಪಾಲು ಭ್ರಷ್ಟವಾಗಿವೆ; ಅಪ್ರಾಮಾಣಿಕವೂ ಆಗಿವೆ. ಮಾಧ್ಯಮಗಳ ವರದಿಗಳನ್ನು ಓದದಿದ್ದರೆ ಸಮಾಚಾರವಿಲ್ಲ; ಓದಿದರೆ ವಿಕೃತ ಮತ್ತು ಸುಳ್ಳುಸಮಾಚಾರವೆಂಬ ಹಂತಕ್ಕೆ ಬಂದಿವೆ. ನೊಣಗಳು ಹೂವಿನ ಮೇಲೂ ಕೂರುತ್ತವೆ; ಅಮೇಧ್ಯದ ಮೇಲೂ ಕೂರುತ್ತವೆ.

ಅವಕ್ಕೆ ದುಂಬಿಯಂತಹ ವಿವೇಚನೆಯಿಲ್ಲದಿದ್ದಾಗ ಅವು ಒಳ್ಳೆಯದನ್ನೂ ಕೆಟ್ಟದ್ದನ್ನೂ ಅಸಮಾನವಾಗಿ ಹಂಚುತ್ತವೆ; ಕೆಟ್ಟದ್ದನ್ನು ಸ್ವಲ್ಪ ಹೆಚ್ಚಾಗಿ! ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮೂವರು ಮನುಷ್ಯರ ದುರದೃಷ್ಟಕರ ಮತ್ತು ಅಮಾನವೀಯ ಮತ್ತು ಅಮಾನುಷ ಹತ್ಯೆಯಾಯಿತು. ಮಾಧ್ಯಮಗಳು ಈ ಪೈಕಿ ಇಬ್ಬರು ಸಾಧುಗಳು ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಿದವು. ಆದರೆ ಅವರ ಸಾಧುತ್ವವು ಅವರನ್ನು ಬದುಕುಳಿಸಲಿಲ್ಲ. ಆ ಇನ್ನೊಬ್ಬ ಸಾಮಾನ್ಯನಂತೆ ಅವರೂ ಶವಗಳಾದರು. ಈ ಮೂವರ ಮೇಲೆ ಹಲ್ಲೆ ಮಾಡಿದವರು ಬೇರೆ ಕೋಮಿನವರು (ಈಗ ಸಮುದಾಯದವರು ಎಂಬ ಪದವನ್ನು ಅಧಿಕೃತವಾಗಿ ಬಳಸಲಾಗುತ್ತಿದೆ!) ಎಂಬ ತಪ್ಪು ಗ್ರಹಿಕೆಯಿಂದ ದೇಶದೆಲ್ಲೆಡೆ ಮಾಧ್ಯಮಗಳು ವಿದ್ಯುದಾಲಿಂಗನವನ್ನು ಸೃಷ್ಟಿಸಿದವು. ಇದಕ್ಕೆ ಪೂರಕವಾಗಿಯೆಂಬಂತೆ ದೇಶದ ಗೃಹ ಮಂತ್ರಿ ಮಾತ್ರವಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ (ಅವರೂ ಒಬ್ಬ ಯೋಗಿ) ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದರು. ಇನ್ನೂ ಕೆಲವರು ಈ ಬಗ್ಗೆ ಸಾಮಾಜಿಕ ಕ್ಷೋಭೆಯನ್ನು ತರುವ ಹೇಳಿಕೆಗಳನ್ನು ನೀಡಿದರು. ತಡವಾಗಿಯಾದರೂ ಸತ್ತವರೂ ಕೊಂದವನೂ ಒಂದೇ ಕೋಮು, ಸಮುದಾಯಕ್ಕೆ ಸೇರಿದವರು ಎಂದು ಪ್ರಕಟವಾದಾಕ್ಷಣ ಈ ಕೊಂಬು-ಕಹಳೆಗಳು ನೇಪಥ್ಯಕ್ಕೆ ನಿರ್ಗಮಿಸಿದವು.

ಈಗಷ್ಟೇ ಯೋಗಿಯ ರಾಜ್ಯವಾದ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಇಬ್ಬರು ಮನುಷ್ಯರ ಅಂತಹದೇ ಅಮಾನವೀಯ ಮತ್ತು ಅಮಾನುಷ ಹತ್ಯೆಯಾಯಿತು. (ಎಲ್ಲ ಹತ್ಯೆಗಳೂ ಅಮಾನವೀಯವೇ!) ಈ ಬಾರಿ ಸತ್ತವರನ್ನು ಮನುಷ್ಯರೆಂದು ಗುರುತಿಸದೆ ಅರ್ಚಕರೆಂದೇ ಉಲ್ಲೇಖಿಸಲಾಯಿತು. ಆದರೆ ಕೊಂದವನೂ ಸತ್ತವರೂ ಒಂದೇ ಕೋಮಿಗೆ ಸೇರಿದ್ದರಿಂದ ಮಾಧ್ಯಮಗಳಿಗಾಗಲಿ, ಆಳುವವರಿಗಾಗಲಿ ದೋಷಾರೋಪಣೆಗೆ ಸುಗ್ರಾಸ ಸಿಗಲಿಲ್ಲ. ಅದು ಒಂದು ಅಪರಾಧವೆಂದಷ್ಟೇ ಉಲ್ಲೇಖವಾಗಿದೆ. ಆದರೆ ತಮಾಷೆಯಿರುವುದು ಮನುಷ್ಯರ ಪ್ರತಿಕ್ರಿಯೆಯಲ್ಲಿ. ಉತ್ತರ ಪ್ರದೇಶದ ಈ ಹತ್ಯೆಯಾದ ತಕ್ಷಣ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಅವರು ಈ ಹಿಂದೆ ನೀಡಿದ ಸಲಹೆಯನ್ನೇ ಅವರಿಗೆ ಹಿಂದಿರುಗಿಸಿದರೆಂದು ಮತ್ತು ವಿಶೇಷವಾಗಿ ಅದನ್ನು ಮತೀಯವಾಗಿ ಬಳಸಿಕೊಳ್ಳಬಾರದೆಂದೂ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರ ಸರಕಾರಕ್ಕೂ ಉತ್ತರ ಪ್ರದೇಶ ಸರಕಾರಕ್ಕೂ ಇದು ನಿಜಕ್ಕೂ ಇರುಸುಮುರುಸಿನ ಸಂದರ್ಭ. ಈ ದೇಶಕ್ಕೊಂದು ಸಂಸ್ಕೃತಿಯಿದೆಯೇ ಅಥವಾ ಇತ್ತೇ ಎಂಬ ಕುರಿತು ಹೊಸ ಸಂಶೋಧನೆಯನ್ನು ಮಾಡಬೇಕಿದೆ. ಮಹಿಳೆಯರನ್ನು ಗೌರವಿಸುವುದು ಈ ದೇಶದ ಸಂಸ್ಕೃತಿಯೆಂದು ಒಂದು ಸ್ವಯಂಘೋಷಿತ ತಜ್ಞರ ತಂಡವು ವಿಶ್ವದೆಲ್ಲೆಡೆ ಹೇಳುತ್ತಾ ಬಂದರೂ ನಡೆನುಡಿಗಳಲ್ಲಿ ಹೆಣ್ಣನ್ನು ಅಪಹಾಸ್ಯಕ್ಕೆ, ಅವಮಾನಕ್ಕೆ, ದುರಾಚಾರಕ್ಕೆ ಗುರಿಯಾಗಿಸುವುದೇ ಭಾರತೀಯ ಸಂಸ್ಕೃತಿಯೆಂದು ತೋರಿಸಿಕೊಟ್ಟಿದೆ.

ಸಂತರಂತೆ ಬದುಕಬೇಕೆಂದು ನಿರೀಕ್ಷಿಸಲಾಗಿದ್ದ ಮಾಧ್ಯಮಕಾರರು ರಾಜಕಾರಣಿಗಳಿಗಿಂತ, ಗೂಂಡಾಗಳಿಗಿಂತ ಕೆಟ್ಟದಾಗಿ ಮತ್ತು ಮೃಗೀಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಉದಾಹರಣೆಗಳ ಅಗತ್ಯವಿಲ್ಲ. ಇವೆಲ್ಲವನ್ನೂ ನಿರ್ವಹಿಸಬೇಕಾದ ಆಡಳಿತವು ಸುಮ್ಮನಿದೆ. ಹಿಂಸಿಸುವವನನ್ನು ಪ್ರೋತ್ಸಾಹಿಸುತ್ತಲೇ ಬಲಿಪಶುವಿನ ಕುರಿತ ಮರುಕದ ಮಾತುಗಳು ನಿತ್ಯಸೂತ್ರವಾಗಿವೆ. ಎಲ್ಲರೂ ಒಗ್ಗಟ್ಟಾಗಿ ಈ ಸಂಕಟವನ್ನು ಎದುರಿಸಬೇಕೆನ್ನುತ್ತಲೇ ಅಡ್ಡಾ ನೀಟಾ ವಿಭಜಿಸುವ ಕತ್ತಿ ತನ್ನ ಕೆಲಸವನ್ನು ಮಾಡುತ್ತಲೇ ಇದೆ. ಸಾಮಾನ್ಯವಾಗಿ ಮೃಗಗಳೆಂದು ಉಲ್ಲೇಖಿಸುವುದು ಮನುಷ್ಯನ ಹೊರತಾದ ಇತರ ಪ್ರಾಣಿಗಳನ್ನು. ಆದರೆ ಅವು ಸಂಭಾವಿತವಾಗಿಯೇ ಬದುಕಿದ್ದಾವೆ. ಹಸಿವಾದಾಗ, ಹಸಿವಿದ್ದಾಗ ಮಾತ್ರ ತಮ್ಮ ಪ್ರಕೃತಿಯಂತೆ ಸಸ್ಯಾಹಾರ-ಮಾಂಸಾಹಾರದ ಜೀವೋಪಾಯಗಳನ್ನು ನಿರ್ವಹಿಸುತ್ತಾವೆಯೇ ಹೊರತು ವೈರದಿಂದಲ್ಲ. ಹೊಟ್ಟೆತುಂಬಿದ ಯಾವುದೇ ಪ್ರಾಣಿಯೂ ತನ್ನ ಜೀವವು ಅಪಾಯದಲ್ಲಿಲ್ಲದ ಪಕ್ಷದಲ್ಲಿ ಎದುರಿದ್ದವರ ಮೇಲೆ ಆಕ್ರಮಣ ಮಾಡುವುದಿಲ್ಲ. ಮನುಷ್ಯ ಮಾತ್ರ ಮೃಗಯಾವಿಹಾರಿ. ಮೋಜಿಗಾಗಿ ಇನ್ನೊಂದು ಜೀವವನ್ನು ನಿರ್ನಾಮ ಮಾಡಬಲ್ಲ. ಮನುಷ್ಯ ಹುಟ್ಟಿದ್ದೇ ಇನ್ನೊಬ್ಬ ಮನುಷ್ಯನ, ಪ್ರಾಣಿ-ಪಕ್ಷಿಗಳ, ಸಸ್ಯಜೀವಿಗಳ ಹುಟ್ಟಡಗಿಸುವುದಕ್ಕೆ ಎಂಬಂತೆ ಜೀವ ವಿಕಾಸ ನಿರೂಪಿಸಿದೆ.

ಅನಾದಿಯಿಂದ ಇದ್ದ ಬಹಳಷ್ಟು ಜೀವಿಗಳು ಈಗ ನಶಿಸಿ ಹೋಗಿವೆ; ಇನ್ನುಳಿದವು ನಶಿಸಿ ಹೋಗುವ ಹಂತದಲ್ಲಿವೆ. ವಿನಾಶದ ಅಂಚಿನಲ್ಲಿರುವ ಅನೇಕ ಉಪಯುಕ್ತ ಜೀವಿಗಳನ್ನು ನಿರ್ನಾಮ ಮಾಡುವಲ್ಲಿ ಮನುಷ್ಯ ತನ್ನ ಅಧಿಕಾರ, ಬಲವನ್ನು ಬಳಸಿದ್ದಾನಲ್ಲದೆ, ಸಂಕೋಚ, ಲಜ್ಜೆ, ದೂರದೃಷ್ಟಿ-ಇವುಗಳನ್ನು ಬದಿಗೊತ್ತಿದ್ದಾನೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಬ್ಬ ರಾಜಕಾರಣಿಯೇ. ಅತ್ಯಂತ ಮೃಗೀಯವಾದವನೊಬ್ಬ ನಾಯಕನಾಗುತ್ತಾನೆ. ಉಳಿದವು ಅವನ ಬೆಂಬಲಿಗರಾಗುತ್ತಾರೆ ಇಲ್ಲವೇ ಅವನನ್ನು ಪ್ರತಿಭಟಿಸಲಾಗದೇ ಉಳಿಯುತ್ತಾರೆ ಅಥವಾ ಅಳಿಯುತ್ತಾರೆ. ಮೃಗೀಯ ಎಂಬುದನ್ನು ಸಾಂದರ್ಭಿಕವಾಗಿ ಬಳಸಿದ್ದೇನೆ. ಎಷ್ಟೊಂದು ಜೀವ ವೈವಿಧ್ಯಗಳು ಈ ಜಗತ್ತಿನಲ್ಲಿದ್ದವು ಮತ್ತು ಅದು ಹೇಗೋ ಅವುಗಳ ಪೈಕಿ ಅಸಂಖ್ಯ ವೈವಿಧ್ಯಗಳು ಇನ್ನೂ ಉಳಿದಿದ್ದರೆ ಅದು ಪ್ರಕೃತಿಯ ಚಮತ್ಕಾರ ಕರುಣೆಯಿಂದಲ್ಲದೆಮನುಷ್ಯಕಾರಣಗಳಿಂದಲ್ಲ. ಒಂದರ್ಥದಲ್ಲಿ ಮನುಷ್ಯನೇ ಈ ಉಳಿವಿಗೂ ಕಾರಣ. ಆತನಿಗೆ ಇನ್ನೂ ಪೂರ್ಣ ಲಯಶಕ್ತಿ ಬಂದೊದಗಿಲ್ಲ. ಆದ್ದರಿಂದ ಹಾಗೇನಾದರೂ ಅಂತಹ ಶಕ್ತಿಯೊದಗಿದಲ್ಲಿ ಭಗವಂತನೂ ಸೇರಿದಂತೆ ತನ್ನ ಹೊರತಾದ ಒಂದು ಅಣುವೂ ಜಗತ್ತಿನಲ್ಲಿ ಉಳಿಯಲು ಮನುಷ್ಯನು ಅವಕಾಶಮಾಡಿಕೊಡನು. ಸರ್ವಾಧಿಕಾರಿಗಾದರೂ ತನ್ನಿಂದ ಹಿಂಸೆ ಅನುಭವಿಸಲಾದರೂ ಪ್ರಜೆಗಳು ಬೇಕು. ಈ ಪ್ರಜೆಗಳು ಮನುಷ್ಯರೇ ಆಗಿರಬೇಕು. ಆದರೆ ಉಳಿದ ಜೀವಿಗಳಿಗೆ ಪರೋಪಕಾರದ ಹಂಗಿಲ್ಲ; ಪರೋಪಯೋಗದ ಹಂಗು ಮಾತ್ರ.

ಅನೇಕ ಇಂತಹ ಸರ್ವಾಧಿಕಾರಿಗಳು ಪುರಾಣದಲ್ಲೂ ಚರಿತ್ರೆಯಲ್ಲೂ ದಾಟಿಹೋಗಿದ್ದಾರೆ. ಉತ್ತರ ಕೊರಿಯಾದ ಸರ್ವಾಧಿಕಾರಿಯ ಉದಾಹರಣೆ ನಮ್ಮೆದುರಿಗೇ ಇದೆ! (ಪ್ರಜೆಗಳೇ ಇಲ್ಲದ ಒಬ್ಬ ದೊರೆಯ ಪ್ರಸಂಗವು ‘ಪುಟ್ಟ ರಾಜಕುಮಾರ’ ಎಂಬ ಮಾಯಾವಾಸ್ತವ ಕಾದಂಬರಿಯಲ್ಲಿ ಉಲ್ಲೇಖವಿದೆ!) ಆದ್ದರಿಂದ ಈಗ ನಡೆಯುವ ಯಾವುದೇ ಹತ್ಯೆಯನ್ನು ಮತ್ತು ಮನುಷ್ಯರು ನಡೆಸುವ ಎಲ್ಲ ಅಕ್ರಮಗಳನ್ನು, ಅಪರಾಧಗಳನ್ನು ‘ಮಾನವೀಯ’ ಅಥವಾ ‘ಮಾನುಷ’ ಎಂದೇ ಉಲ್ಲೇಖಿಸಬಹುದು. ಮಾನವರು ನಡೆಸಬಾರದ್ದು, ನಡೆಸಲಾಗದ್ದು ಅಮಾನವೀಯವೆಂದು ಪ್ರತೀತಿಯಿತ್ತು. ಆದರೆ ಈಗ ಇಂತಹ ಅಕ್ರಮಗಳನ್ನೂ ಅಪರಾಧಗಳನ್ನೂ ಮನುಷ್ಯರು ಮಾತ್ರ ನಡೆಸುವುದರಿಂದ ಮತ್ತು ಪ್ರಾಣಿಗಳು ನಡೆಸದಿರುವುದರಿಂದ ಇವನ್ನು ಮನುಷ್ಯರಿಗೆ ವಿಶಿಷ್ಟವಾದವುಗಳೆಂದು ನಂಬಬಹುದು.

ಎಂತಹ ಸಂಕಟದ ಪರಿಸ್ಥಿತಿಯಲ್ಲೂ ಮನುಷ್ಯ ತನ್ನ ಮದ, ಮತ್ಸರ, ಮೋಹವೇ ಇತ್ಯಾದಿ ಅವಗುಣಗಳನ್ನು ಬಿಡಲೊಲ್ಲ. ಅದರಲ್ಲೂ ಆಧುನಿಕ ಯುಗದಲ್ಲಿ ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈ ವೇಗಕ್ಕೆ ಕಾರಣವನ್ನು ಸರಳವಾಗಿ ಮತ್ತು ಸುಲಭವಾಗಿ ಹೇಳಬಹುದಾದರೆ ಓಟ ಇಳಿಮುಖವಾದಾಗ ವೇಗ ಹೆಚ್ಚುತ್ತದೆ. ಒಂದು ಹಂತದ ವರೆಗೆ ನಾಗರಿಕತೆಯು ಏರುಮುಖವಾಗಿತ್ತು. ಚಲನೆ ನಿಧಾನವಾಗಿತ್ತು. ಆಯಾಸದಾಯಕವಾಗಿತ್ತು. ಆದರೂ ಎಲ್ಲ ಜೀವಿಗಳೂ ಮನುಷ್ಯರಾಗಲು ಹಂತಹಂತವಾಗಿ ಪ್ರಯತ್ನಿಸಿದರು. ಈ ಸ್ಪರ್ಧೆಯಲ್ಲಿ ಸೋತವರು ಮಣ್ಣಾದರು; ಇನ್ನು ಕೆಲವರು ತಾವಿದ್ದಲ್ಲೇ ಉಳಿದರು. ಮನುಷ್ಯ ಎಲ್ಲ ಅರ್ಥದಲ್ಲೂ ಇಳಿಮುಖನಾಗಿದ್ದಾನೆ. ವಿಜ್ಞಾನಿಗಳ ಹೇಳಿಕೆಯಂತೆಯೂ ಈಗ ಭೂಮಿಯೆಂಬ ಈ ಜಗತ್ತು ತನ್ನ ಅಪರಾಹ್ನದಲ್ಲಿದೆ. ಆದರೆ ಆದಷ್ಟು ಬೇಗ ಇದನ್ನು ಸಂಜೆಯಾಗಿಸುವುದಕ್ಕೆ ಮತ್ತು ಕತ್ತಲಾಗಿಸುವುದಕ್ಕೆ ಮನುಷ್ಯರೆಲ್ಲರೂ ತಮ್ಮ ಯಥಾಶಕ್ತಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ಸತ್ತವರು ಪುಣ್ಯಾತ್ಮರೆಂದು ಭಾವಿಸದೆ ಗತ್ಯಂತರವಿಲ್ಲ.

ಅತ್ಯಂತ ದುರ್ಭರ ಸ್ಥಿತಿಯಲ್ಲಿ ಪರಸ್ಪರ ಅವಲಂಬನ ಅಗತ್ಯವಾಗಿದೆ ಮತ್ತು ಜೀವಿಗಳು ಅಂತಹ ಪರಾವಲಂಬನಕ್ಕೆ ಹಾತೊರೆಯುತ್ತಾರೆ ಎಂಬ ನಂಬಿಕೆಯಿದೆ. ಆದರೆ ಮನುಷ್ಯನ ಇತಿಹಾಸ ಇಂತಹ ನಂಬಿಕೆಗಳನ್ನು ಸೃಷ್ಟಿಸುತ್ತದೆ ಮತ್ತು ಅವನ್ನು ಸುಳ್ಳೆಂದು ಸಾಬೀತುಮಾಡುತ್ತದೆ. ವರ್ತಮಾನವಂತೂ ‘ನಭೂತೋ’ ಸ್ಥಿತಿಯನ್ನು ತಂದೊಡ್ಡಿದೆ. ಆದರೆ ಎಲ್ಲಿಯವರೆಗೆ ಮನುಷ್ಯನ ವಿಕೃತಿಯೇ ವಿಜೃಂಭಿಸುತ್ತದೆಯೋ ಅಲ್ಲಿಯವರೆಗೆ ಈಗ ಕವಿದ ಕಾರ್ಮೋಡವು ಸರಿಯಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)