varthabharthi


ಪ್ರಚಲಿತ

ಬೀದಿಗೆ ಬಿದ್ದವರ ಬದುಕಿಗೆ ಕವಿದ ಕಾರ್ಗತ್ತಲು

ವಾರ್ತಾ ಭಾರತಿ : 3 May, 2020
ಸನತ್ ಕುಮಾರ್ ಬೆಳಗಲಿ

ಕಳೆದ ಒಂದೂವರೆ ತಿಂಗಳಿಂದ ಮನೆ ಬಿಟ್ಟು ಹೊರಗೆ ಹೋಗಿಲ್ಲ. ದೇಶದ ಎಲ್ಲ ಕಡೆ ಲಾಕ್‌ಡೌನ್ ಆಗಿದ್ದರೂ ಅಡುಗೆ ಮನೆಗೆ ಬೀಗ ಬಿದ್ದಿಲ್ಲ. ಮೂರು ಹೊತ್ತು ಅವರು ಕಷ್ಟಪಟ್ಟು ಮಾಡಿದ್ದನ್ನು ತಿಂದು, ಅದೇ ಟಿವಿ, ಅದೇ ಪತ್ರಿಕೆ ನೋಡಿ ಸಾಕಾಗಿದೆ. ಪುಸ್ತಕದ ಓದು ಒಮ್ಮಿಮ್ಮೆ ಬೇಸರವೆನಿಸುತ್ತದೆ. ಅರವತ್ತಾದ ಮೇಲೆ ಓದು ಸಾಕೆನಿಸುತ್ತದೆ. ಹಳೆಯ ಕಡತ ತಗೆದು ನೋಡುವಾಗ ಖುಷಿಯಾಗುತ್ತದೆ.

ಕಮ್ಯುನಿಸ್ಟ್ ಚಳವಳಿಯ ಒಡನಾಟ, ಕಟ್ಟೀಮನಿಯವರ ಪತ್ರಗಳು, ಪ್ರಗತಿಪಂಥ, ಪತ್ರಿಕೋದ್ಯಮ ಹೀಗೇ ನೆನಪುಗಳನ್ನೆಲ್ಲ ಬರೆಯಬೇಕೆನಿಸಿದರೂ ಆಗುತ್ತಿಲ್ಲ. ಕಾರಣ, ವೈಯಕ್ತಿಕ ಬದುಕಿನಲ್ಲಿ ಅಷ್ಟೊಂದು ಒತ್ತಡವಿಲ್ಲದಿದ್ದರೂ ಬಾಗಿಲಾಚೆಯ ಬದುಕು ನಮ್ಮಂಥವರ ನಿತ್ಯದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಯಾರೊಂದಿಗಾದರೂ ದೂರವಾಣಿಯಲ್ಲಿ ಮಾತಾಡಬೇಕೆನಿಸಿದರೂ ಅವರಿಗೆ ಬೇಸರವಾದೀತೇನೊ ಎಂಬ ಆತಂಕ. ಕೆಲವರು ಇಂಥ ಸಂಕಟದ ಸನ್ನಿವೇಶದ ಬಗ್ಗೆ ಹಂಚಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ.

ಕೊರೋನ ವೈರಸ್ ಅಪ್ಪಳಿಸಿದ ನಂತರ ನಾವೆಲ್ಲ ಸುಸಜ್ಜಿತ ಮನೆಗಳಲ್ಲಿ ಬಂದಿಯಾಗಿದ್ದೇವೆ. ಆದರೆ ಮನೆಯೇ ಇಲ್ಲದ ಲಕ್ಷಾಂತರ ಜನ ಬೀದಿಯ ಮೇಲಿದ್ದಾರೆ. ಇಲ್ಲವೇ, ಒಂದೇ ಅಂಕಣದ ಮನೆಯಲ್ಲಿ ಐದಾರು ಜನರಿದ್ದಾರೆ. ಅವರು ಬದುಕುವುದು, ಕಿಚನ್, ಜಳಕ ಎಲ್ಲ ಆ ಹಂದಿ ಗೂಡಿನಂಥ ಮನೆಯಲ್ಲಿ. ಇಂಥವರು ಕೊರೋನದಿಂದ ಹೇಗೆ ರಕ್ಷಣೆ ಪಡೆಯಬೇಕು? ಈ ದೇಶದ ಸುಮಾರು 14 ಕೋಟಿ ಕಾರ್ಮಿಕರು ತಮ್ಮೂರುಗಳನ್ನು ಬಿಟ್ಟು ದೂರದ ಮುಂಬೈ, ಬೆಂಗಳೂರು, ಚೆನ್ನೈ, ದಿಲ್ಲಿಯಂತಹ ಮಹಾನಗರ ಗಳಿಗೆ ದುಡಿಯಲು ಹೋಗಿ ಅತಂತ್ರರಾಗಿದ್ದಾರೆ.

ಹಲವರು 500, 1,500 ಕಿ.ಮೀ. ನಡೆದು ಊರು ಸೇರಿದ್ದಾರೆ. ಕೆಲವರು ದಾರಿಯಲ್ಲೇ ಹಸಿವಿನಿಂದ ಕುಸಿದು ಬಿದ್ದು ಸತ್ತಿದ್ದಾರೆ. ಇನ್ನು ರಾಜಸ್ಥಾನದ ಕೆಲ ಕಾರ್ಮಿಕರು ಬೆಂಗಳೂರಿನಿಂದ ಸೈಕಲ್ ಮೇಲೆ 1,800 ಮೈಲಿ ದೂರದ ತಮ್ಮ ಊರಿಗೆ ಹೊರಟಿದ್ದಾರೆ. ಇನ್ನು ಉಳಿದ ಕೆಲವರು ತಮ್ಮ ಊರನ್ನು ಸೇರಲು ರೈಲು ಹಳಿಯ ಗುಂಟ ನಡೆಯುತ್ತಲೇ ಇದ್ದಾರೆ. 13 ವರ್ಷದ ಮಗುವೊಂದು ತೆಲಂಗಾಣದ ಒಂದೂ ಮೂಲೆಯಿಂದ ಛತ್ತೀಸ್‌ಗಡದ ತನ್ನ ಊರು ಸೇರಲು ಸಂಬಂಧಿಕರೊಂದಿಗೆ ಹೊರಟು ಉರಿವ ಬಿಸಿಲಲ್ಲಿ ದಾರಿಯಲ್ಲೇ ಅಸು ನೀಗಿದೆ. ಇನ್ನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ, ದಕ್ಷಿಣದಿಂದ ಉತ್ತರಕ್ಕೆ ಬಂದ ಲಾರಿ ಚಾಲಕರ ಯಾತನೆಯ ಕತೆ ಯಾರಿಗೂ ಬೇಡ. ಎಲ್ಲೆಲ್ಲೋ ಅರೆ ತೆರೆದ ದಾಬಾಗಳ ಎದುರು ನಿಂತಿದ್ದಾರೆ.

ಪ್ರಧಾನ ಮಂತ್ರಿ ಮಾರ್ಚ್ 24ರಂದು ದೂರದರ್ಶನದಲ್ಲಿ ರಾತ್ರಿ 8 ಗಂಟೆಗೆ ಕಾಣಿಸಿಕೊಂಡು ಅಂದು ರಾತ್ರಿ 12 ರಿಂದಲೇ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಎಂದು ಘೋಷಿಸಿರದಿದ್ದರೆ ಈ ನೊಂದ ಜೀವಿಗಳು ಇಷ್ಟು ಯಾತನೆ ಪಡಬೇಕಾಗಿರಲಿಲ್ಲ. ಈ ಲಾಕ್ ಡೌನ್ ಘೋಷಣೆ ಮಾಡುವಾಗ ಮೂರು ದಿನ ಕಾಲಾವಕಾಶ ನೀಡಿದ್ದರೆ, ವಲಸೆ ಕಾರ್ಮಿಕರು ಹೇಗೋ ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದರು. ಆಗ ಅವರ ಬಳಿ ಊರಿಗೆ ಹೋಗುವಷ್ಟು ಹಣವಿತ್ತು. ಆದರೆ ಈಗ ಈ ವಲಸೆ ಕಾರ್ಮಿಕರ ಬಳಿ ಹಣ ಖಾಲಿಯಾಗಿದೆ. ನ್ಯಾಯವಾಗಿ ಇವರನ್ನು ಅವರವರ ಊರುಗಳಿಗೆ ಉಚಿತವಾಗಿ ಕಳಿಸಲು ವ್ಯವಸ್ಥೆ ಮಾಡಬೇಕಾಗಿದ್ದು ಸರಕಾರದ ಕರ್ತವ್ಯ. ಆದರೆ, ಈ ವಲಸೆ ಕಾರ್ಮಿಕರನ್ನು ಸಾಗಿಸಲು ಶ್ರಮಿಕ ರೈಲುಗಳನ್ನು ವ್ಯವಸ್ಥೆ ಮಾಡಿ ಅವರಿಂದ ಸೂಪರ್ ಫಾಸ್ಟ್ ರೈಲಿನ ದರ ವಸೂಲಿ ಮಾಡುತ್ತಿರುವುದು ಮನುಷ್ಯತ್ವವಲ್ಲ. ಕರ್ನಾಟಕ ಸರಕಾರ ಕೂಡ ಸಾರಿಗೆ ಸಂಸ್ಥೆ ಯ ಬಸ್ಸುಗಳಲ್ಲಿ ವಲಸೆ ಕಾರ್ಮಿಕರಿಂದ ದುಡ್ಡು ವಸೂಲಿ ಮಾಡುತ್ತಿರುವುದು ನ್ಯಾಯವಲ್ಲ.

ಕೊರೋನ ಎದುರಿಸಲೆಂದೇ ಪ್ರಧಾನ ಮಂತ್ರಿ ಕೇರ್ಸ್ ಎಂಬ ವಿಶೇಷ ನಿಧಿ ಸ್ಥಾಪಿಸಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಅಷ್ಟೇ ಅಲ್ಲ, ವಿಶ್ವ ಬ್ಯಾಂಕ್ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ವಿಶೇಷ ನೆರವು ನೀಡಿದೆ . ಆಸಿಯಾನ್ ಬ್ಯಾಂಕ್ ಸಾವಿರಾರು ಕೋಟಿ ರೂಪಾಯಿ ನೀಡಿದೆ. ನಮ್ಮ ಜನ ಕಷ್ಟಪಡುತ್ತಿರುವಾಗ ಕೇಂದ್ರ ಸರಕಾರ ಈ ಹಣವನ್ನೇಕೆ ಕೊಡುತ್ತಿಲ್ಲ? ಕೊರೋನ ಎದುರಿಸಲು ರಾಜ್ಯ ಸರಕಾರಗಳಿಗೂ ನೆರವು ನೀಡುತ್ತಿಲ್ಲ. ಜಿಎಸ್ಟಿ ಕರದಲ್ಲಿ ರಾಜ್ಯಗಳ ಪಾಲನ್ನೂ ಕೊಟ್ಟಿಲ್ಲ. ಕೊರೋನ ಹೆಸರಿನಲ್ಲಿ ಸಂಗ್ರಹವಾದ ಈ ಹಣವನ್ನು ಚೋಕ್ಸಿ, ಮಲ್ಯಗಳ 68 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಬಳಸಿಕೊಳ್ಳಲಾಯಿತೇ?

ಕೊರೋನ ವೈರಸ್ ನಿಂದ ಪಾರಾಗಲು ಮನೆ ಸೇರಿ ಕೊಳ್ಳಿ,ಹೊರಗೆ ಬರಬೇಡಿ ಎಂದು ಹೇಳುತ್ತಿರುವುದು ಯಾರಿಗಾಗಿ? ಆರು ತಿಂಗಳು ದುಡಿಯದಿದ್ದರೂ ತೊಂದರೆಯಾಗದ ಅನುಕೂಲಸ್ಥ ವರ್ಗದ ಜನರಿಗೆ ಮಾತ್ರವಲ್ಲವೇ? ಮನೆಯಲ್ಲಿ ಆರಾಮವಾಗಿದ್ದು ಬಿಸಿ ಬಿಸಿ ಊಟ, ನಿದ್ರೆ ಮಾಡಿ, ಸಾಹಿತ್ಯ ಓದಿಕೊಂಡು, ಆನ್ ಲೈನ್ ನಲ್ಲಿ ಕತೆ, ಕಾದಂಬರಿ ಓದುವವರಿಗೆ ಇದು ಸರಿ. ಅವರೂ ಬಹಳ ದಿನ ಹೀಗಿರಲು ಆಗುವುದಿಲ್ಲ ಅದು ಬೇರೆ ಮಾತು. ಆದರೆ ಅಂದೇ ದುಡಿದು ಅಂದೇ ಅಂಗಡಿಗೆ ಹೋಗಿ ರೇಷನ್ ತಂದು , ಬೇಯಿಸಿಕೊಂಡು ತಿನ್ನುವವರಿಗೆ ಇಂಥ ಸಲಹೆ ಕ್ರೂರ ವ್ಯಂಗ್ಯವಾಗುತ್ತದೆ.

ಜಾಗತೀಕರಣ ಮತ್ತು ಉದಾರೀಕರಣದ ಕರಾಳ ಶಕೆ ಆರಂಭವಾದ ನಂತರ ನಮ್ಮ ಸರಕಾರದ ಕಣ್ಣಿಗೆ ಬರೀ ಕೋಟ್ಯಧಿಪತಿಗಳು ಮಾತ್ರ ಕಾಣುತ್ತಾರೆ.ತಮ್ಮ ಮೈ ಬೆವರಿನಿಂದ ರಕ್ತವನ್ನು ನೀರು ಮಾಡಿಕೊಂಡು ಈ ದೇಶವನ್ನು ಕಟ್ಟಿದ ಬಡ ದುಡಿಯುವ ಜನ ಕಾಣುವುದಿಲ್ಲ. ‘ಬಡ’ ಎಂಬ ಶಬ್ದವನ್ನು ಇಲ್ಲಿ ಬಳಸುವುದು ಕೂಡ ಸರಿಯಲ್ಲ. ಭಾರತದ ಕಮ್ಯುನಿಸ್ಟ್ ಚಳವಳಿಯ ಅಗ್ರಗಣ್ಯ ನೇತಾರರಾಗಿದ್ದ ಶ್ರೀಪಾದ ಅಮೃತ ಡಾಂಗೆ ಅವರು ಶ್ರಮಿಕರನ್ನು ಬಡವರೆಂದು ಕರೆಯಬಾರದೆಂದು ಪದೇ ಪದೇ ಹೇಳುತ್ತಿದ್ದರು. ‘ನಾವು ಬಡವರಲ್ಲ, ಈ ಜಗತ್ತಿನ ದೇಶದ ಸಂಪತ್ತಿನ ಸೃಷ್ಟಿಕರ್ತರು’ ಎಂದು ಡಾಂಗೆ ಹೇಳುತ್ತಿದ್ದರು. ಆದರೆ ಆ ಸೃಷ್ಟಿಕರ್ತರೇ ಈಗ ಬೀದಿಗೆ ಬಿದ್ದಿದ್ದಾರೆ.

‘ದೇವಾಲಯಗಳು ಬಂದ್ ಆಗಿ ಪುರೋಹಿತರಿಗೆ ತೊಂದರೆಯಾಗಿದೆ. ಸರಕಾರ ಅವರ ನೆರವಿಗೆ ಬರಬೇಕು’ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಆದರೆ, ಅವರಿಗಿಂತ ಕಷ್ಟದಲ್ಲಿರುವ ಸವಿತಾ ಸಮಾಜದ, ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕರು, ಅಕ್ಕಸಾಲಿಗರು, ಗಾಣಿಗರು, ಕುಂಬಾರರು, ನೇಕಾರರು, ಮೇದಾರರು, ರಸ್ತೆ ಗಳಲ್ಲಿ ಚಪ್ಪಲಿ ಮಾರಾಟ ಮಾಡುವ,ರಿಪೇರಿ ಮಾಡುವ ಸಮಗಾರ ಬಂಧುಗಳು ದೇಶಪಾಂಡೆ ಅವರಿಗೆ ಕಾಣಿಸಲಿಲ್ಲ. ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾಡಿದರು.

ನಿಜ, ನಿತ್ಯದ ದುಡಿಮೆಯಿಂದ ಜೀವಿಸುವ ಈ ಶ್ರಮಜೀವಿಗಳ ಬದುಕು ಹಸಿವಿನ ಕತ್ತಲೆಗೆ ದೂಡಲ್ಪಟ್ಟಿದೆ. ಹೇರ್ ಕಟಿಂಗ್ ಸಲೂನ್ ಗಳನ್ನು ಇಟ್ಟು ಕೊಂಡು ಬದುಕು ಸಾಗಿಸುವ 25 ಲಕ್ಷ ಮಂದಿ ಕರ್ನಾಟಕದಲ್ಲಿದ್ದಾರೆ. ಇವರಿಗೆ ಕೆಲವು ಕಡೆ ಸವಿತಾ ಸಮಾಜದವರು ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಕಡೆ ಇವರನ್ನು ಹಡಪದ ಸಮಾಜದವರು ಎಂದು ಕರೆಯುತ್ತಾರೆ. ಬಸವಣ್ಣನವರ 12ನೇ ಶತಮಾನದ ವಚನ ಚಳವಳಿಯಲ್ಲಿ ಈ ಸಮಾಜದ ಹಡಪದ ಅಪ್ಪಣ್ಣ ಪ್ರಮುಖ ಪಾತ್ರ ವಹಿಸಿದ್ದ. 50 ವರ್ಷಗಳ ಹಿಂದೆ ನಾವು ಚಿಕ್ಕವರಿದ್ದಾಗ ಈ ಹಡಪದ ಸಮಾಜದ ಶ್ರಮಿಕರು ಮನೆ ಮನೆಗೆ ಬಂದು ಕಟಿಂಗ್ ಮಾಡಿ ಅದಕ್ಕೆ ಪ್ರತಿಯಾಗಿ ಜೋಳ, ಕಾಳು ಒಯ್ಯುತ್ತಿದ್ದರು.

ಈಗ ಅಂಗಡಿಗಳನ್ನು ಬಾಡಿಗೆ ಪಡೆದು ಸಲೂನ್‌ಗಳನ್ನು ನಡೆಸುತ್ತಿದ್ದಾರೆ. ಕೊರೋನ ಇವರ ಅನ್ನವನ್ನು ಕಸಿದುಕೊಂಡಿದೆ. ಕಳೆದ ಒಂದೂವರೆ ತಿಂಗಳಿಂದ ಇವರು ಸಲೂನ್ ಬಾಗಿಲನ್ನು ತೆಗೆದಿಲ್ಲ. ಕೊರೋನ ಬಂದ ನಂತರ ವೈಯಕ್ತಿಕ ಅಂತರ ಕಡ್ಡಾಯವಾಯಿತು. ಒಂದು ಮೀಟರ್ ಅಂತರವಾದರೂ ಇಬ್ಬರ ನಡುವೆ ಇರಬೇಕಂತೆ. ಆದರೆ ಕ್ಷೌರಿಕ ವೃತ್ತಿಯಲ್ಲಿ ಅದು ಅಸಾಧ್ಯ, ಹೀಗಾಗಿ ಸವಿತಾ, ಹಡಪದ ಸಮಾಜದವರು ಬೀದಿಗೆ ಬಿದ್ದಿದ್ದಾರೆ. ವಿದೇಶದಲ್ಲಿರುವ ಸಾಹುಕಾರರ ಮಕ್ಕಳನ್ನು ಸ್ವದೇಶಕ್ಕೆ ತರುವ ಆತುರದಲ್ಲರುವ ಸರಕಾರಕ್ಕೆ ಈ ನಿರ್ಲಕ್ಷಿತ ಜನ ಕಾಣುವುದಿಲ್ಲ. ಅದೇ ರೀತಿ ಮಡಿವಾಳರ ಬದುಕೂ ಅತಂತ್ರವಾಗಿದೆ. ಜನರ ಬಟ್ಟೆ ತೊಳೆದು, ಇಸ್ತ್ರಿ ಮಾಡಿ ನಾವೆಲ್ಲ ಕೋರ್ಟು,ಕಚೇರಿ,ರಸ್ತೆಗಳಲ್ಲಿ ಎದೆಯುಬ್ಬಿಸಿ ತಿರುಗಾಡುವಂತೆ ಮಾಡುತ್ತಿದ್ದ ದೋಬಿಗಳ,ಮಡಿವಾಳರ ಸ್ಥಿತಿ ಚಿಂತಾಜನಕವಾಗಿದೆ. ದಿಗ್ಬಂಧನ ಘೋಷಣೆಯಾದಾಗಿನಿಂದ ಅವರ ಉದ್ಯೋಗ ನಿಂತು ಹೋಗಿದೆ.

ಅದೇರೀತಿ ಅಕ್ಕ ಸಾಲಿಗರು, ಚಮ್ಮಾರರು, ಆಟೊ ಚಾಲಕರು, ಗಾಣಿಗರು, ನೇಕಾರರು, ಟೇಲರ್‌ಗಳು, ಚಹಾ ಹೊಟೇಲ್‌ಗಳ ಕಾರ್ಮಿಕರು, ಹಮಾಲಿಗಳು, ಸಣ್ಣ ಪುಟ್ಟ ವ್ಯಾಪಾರಿಗಳು, ಕುಂಬಾರರು, ಪಿಂಜಾರರು ಹೀಗೆ ಸರಕಾರಕ್ಕೆ ಭಾರವಾಗದೆ ತಾವು ದುಡಿದು ತಮ್ಮ ಮನೆಯವರಿಗೆಲ್ಲ ಅನ್ನ ಹಾಕುತ್ತಿದ್ದ ಪರೋಕ್ಷವಾಗಿ ರಾಷ್ಟ್ರದ ಆರ್ಥಿಕತೆಗೆ ಹನಿ ಹನಿಯಾಗಿ ಸಂಪತ್ತು ಹರಿಸುತ್ತಿದ್ದ ಕಾಯಕ ಜೀವಿಗಳ ಬದುಕಿಗೆ ಈಗ ಕತ್ತಲಾವರಿಸಿದೆ. ಈ ಸರಕಾರಕ್ಕೆ, ಸಮಾಜಕ್ಕೆ ಅಂತಃಕರಣ ಎಂಬುದಿದ್ದರೆ ಸಂವಿಧಾನದ ಮೇಲೆ ಶ್ರದ್ಧೆ ಇದ್ದರೆ ಈ ನೊಂದ ಜೀವಿಗಳ ನೆರವಿಗೆ ಬರಲಿ. ಆದರೆ, ಕೊರೋನ ವಿರುದ್ಧ ದಿಗ್ಬಂಧನ ಪ್ರಯೋಗ ಮಾಡಿದ ಕೇಂದ್ರ ಸರಕಾರ ಈಗ ‘ದೇವರ’ ಮೇಲೆ ಭಾರ ಹಾಕಿ ದಿಗ್ಬಂಧನ ಸಡಿಲುಗೊಳಿಸಲು ನಿರ್ಧರಿಸಿದೆ. ಯಾವ ದೇವರೂ ನೆರವಿಗೆ ಬರುವುದಿಲ್ಲ. ನಮ್ಮ ಆರೋಗ್ಯ ನಾವೇ ಕಾಪಾಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)