varthabharthi


ಅನುಗಾಲ

ಈಸಿದ, ಇದ್ದು ಜೈಸಿದ ಕವಿ-ನಿಸಾರ್ ಅಹಮದ್

ವಾರ್ತಾ ಭಾರತಿ : 6 May, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಿಸಾರ್ ಅಹಮದ್ ಅವರು ವಿಮರ್ಶೆಗಳನ್ನು, ಅನುವಾದಗಳನ್ನು, ಮಕ್ಕಳ ಸಾಹಿತ್ಯಗಳನ್ನು ಬರೆದರೂ ಅವೆಲ್ಲ ಮೈಲಿಗಲ್ಲಾಗುವ, ನಿರ್ಣಯಾತ್ಮಕವಾದಂತಹ ಚಹರೆಯನ್ನು ಬಿಟ್ಟು ಹೋದಂತಿಲ್ಲ; ಅವರು ಮುಖ್ಯವಾಗಿ ಮತ್ತು ಪೂರ್ಣವಾಗಿ ಕವಿ. ನೈಜ ಕಾವ್ಯ ಎಲ್ಲ ಕಟ್ಟುಗಳನ್ನು ಹರಿದುಕೊಂಡು ಸ್ವಚ್ಛಂದವಾಗಿ ಹರಿಯುತ್ತದೆ; ಹಾರಾಡುತ್ತದೆ. ಅಲ್ಲಿ ನಮ್ಮವರು, ನಿಮ್ಮವರು ಅನ್ಯರು ಎಂಬ ಪರಿಕಲ್ಪನೆಯೇ ಇಲ್ಲ. ಅಡಿಗರ ಕಾವ್ಯಪಂಥದ ಉಚ್ಛ್ರಾಯ ಕಾಲದಲ್ಲಿ ಕವಿತೆ ಬರೆಯಲಾರಂಭಿಸಿದ ನಿಸಾರ್ ಅಹಮದ್ ನವೋದಯದ ರಮ್ಯತೆಯನ್ನು ಕಳೆದುಕೊಂಡವರಲ್ಲ, ಮತ್ತು ನವ್ಯದ ಸಾರವನ್ನು ಸಂಪಾದಿಸಿಯೂ ಅದರ ಒಣ ಅತಿಯನ್ನು ಬಳಸಿಕೊಂಡವರೂ ಅಲ್ಲ.


ಕೆ.ಎಸ್. ನಿಸಾರ್ ಅಹಮದ್ ಅವರ ‘ರಾಮನ್ ಸತ್ತ ಸುದ್ದಿ’ ಕವನದಲ್ಲಿ ಅವರು ಈ ಸುದ್ದಿಯನ್ನು ಹಳ್ಳಿಯ ಹನುಮನಿಗೆ ಹೇಳಲಾಗದೆ ಅವನ ಪಾಡನ್ನು ನೋಡಲಾಗದೆ, ಅದೇ ಪ್ರಶ್ನಾರ್ಥಕ ಮತ್ತು ಆತಂಕದ ವಿಚಾರವಾಗಿ ಕಾಡಿದಾಗ ಇದೆಲ್ಲ ಅರ್ಥವಾಗದೆ ‘ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು....’ ಎಂದು ಕವಿತೆಯನ್ನು ಮುಗಿಸುತ್ತಾರೆ. ಈ ಲೋಕಾಂತ ಪ್ರಜ್ಞೆಯು ತಾನು ಗುರುತಿಸಿದ ಅನೇಕ ಮಹಾವ್ಯಕ್ತಿ(ತ್ವ) ಗಳ ಪ್ರಭೆಯೊಂದಿಗೆ ಬೆಳಗುವುದು ನಿಸಾರ್ ವಿಶೇಷ. ಯಾರಾದರೂ ಸತ್ತ ತಕ್ಷಣ ಅವರ ಬಗ್ಗೆ ಶ್ರದ್ಧಾಂಜಲಿ ಬರೆಯುವುದು ನನಗೊಗ್ಗದ ಜಾಯಮಾನ. ಆದರೆ ಅವರ ಈ ಮೊದಲು ಉಲ್ಲೇಖಿಸಿದ ಕವನ (ಮತ್ತದರ ಉಲ್ಲೇಖಿತ ಸಾಲುಗಳು) ಮಾತ್ರವಲ್ಲ, ಅವರ ‘ಬಾಪೂ’, ‘ನೆಹರು’, ‘ತೀ.ನಂ.ಶ್ರೀ.’, ‘ಮಾಸ್ತಿ’, ‘ಕೆಂಪುತೋಟ ಮತ್ತು ಡಾ.ಎಚ್ಚೆನ್’, ಮತ್ತಿತರ ಕವನಗಳಲ್ಲಿ ಕಾಣುವ ಇಂತಹ ಲೋಕಾಂತ ಪ್ರಜ್ಞೆಯನ್ನು ಅನುಭವಿಸಿದಾಗ ಅವರ ಬಗ್ಗೆ ಯಾವಾಗಲೂ ಬರೆಯಬಹುದು, ಮತ್ತು ಅವರು ಇದ್ದಾರೆ, ಇಲ್ಲ ಎಂಬ ಲೌಕಿಕ ತಿಳಿವಳಿಕೆ ಒಂದು ಹಂತದಲ್ಲಿ ಮರೆಯಾಗಲೇಬೇಕು ಮತ್ತು ಅವರು ತಮ್ಮ ಕವಿತೆಗಳಿಂದಲೇ ನಮ್ಮೆಡನಿರುವಂತಾಗಬೇಕು ಎಂಬ ಭಾವದೊಂದಿಗೆ ಅವರ ಕಾವ್ಯವನ್ನು ಸಂಕ್ಷಿಪ್ತವಾಗಿ ಮೆಲುಕುಹಾಕಿದ್ದೇನೆ.

ನಾನು ಮೊತ್ತ ಮೊದಲಿಗೆ ಕೊಂಡುತಂದು ಓದಿದ ನಿಸಾರ್ ಅಹಮದ್ ಅವರ ಕವನಸಂಗ್ರಹವೆಂದರೆ ‘ಸಂಜೆ ಐದರ ಮಳೆ’. ಬಾಕಿನ ಅವರ ಮುಖಪುಟದೊಂದಿಗೆ ಅಕ್ಷರಪ್ರಕಾಶನವು ತಂದ ಗಂಭೀರ ಸ್ವರೂಪದ ಸೃಷ್ಟಿ ಈ ಕೃತಿ. (ಆ ಕಾಲದಲ್ಲಿ ಅಕ್ಷರದಿಂದ ಬರುವ ಕೃತಿಗಳೆಲ್ಲ ಹೀಗೆಯೇ ಇರುತ್ತಿದ್ದವು; ಅತ್ತ ನವೋದಯದ ಸರಳವೂ ಅಲ್ಲದ, ಇತ್ತ ನವ್ಯೋತ್ತರದ ವರ್ಣರಂಜಿತವೂ ಅಲ್ಲದ ಆಕರ್ಷಕ ಹೊದಿಕೆ ಮತ್ತು ಮುದ್ರಣ!) ಆಗಿನ್ನೂ ನಾನು ನವ್ಯದ ಹೊಸ ಓದುಗ. ಅರ್ಥವಾಯಿತೋ ಎಂದರೆ ಉತ್ತರಿಸಲಾಗದ ಆದರೆ ಒಂದು ಪುಸ್ತಕ ಕೊಡಬಹುದಾದ ಸಂವೇದನಾಶೀಲ ಥ್ರಿಲ್ಲನ್ನು ಅನುಭವಿಸುವ ಅಮೆಚ್ಯೂರ್ ಸಾಹಿತ್ಯಾಭಿಮಾನಿ. ಅದರಲ್ಲಿದ್ದ ‘ಅಮೆರಿಕ, ಅಮೆರಿಕ’, ‘ಮಾಸ್ತಿ’, ‘ಗಾಂಧಿಬಝಾರಿನ ಬೆಳಗು’, ‘ಗಾಂಧಿ ಬಝಾರಿನ ಸಂಜೆ’, ‘ಅಮ್ಮ, ಆಚಾರ, ನಾನು’, ‘ನಿರ್ಧಾರ’, ‘ಬಾಪೂ’, ‘ಮಾರಾಟಗಾತಿಯ ಮಾತುಕತೆ’, ‘ನಿಮ್ಮಿಡನಿದ್ದೂ ನಿಮ್ಮಂತಾಗದೆ’, ‘ಪಾಠ’, ಈ ಕವಿತೆಗಳು ಒಂದಿಲ್ಲೊಂದು ಕಾರಣಕ್ಕೆ ಇಂದಿಗೂ ಮತ್ತೆ ಮತ್ತೆ ಓದಿಸಿಕೊಳ್ಳುತ್ತಿವೆ. ಆನಂತರ ನಿಸಾರ್ ಅಹಮದ್ ಅವರ ಇತರ ಹಳೆಯ ಹೊಸ ಸಂಕಲನಗಳನ್ನು ಗಮನಿಸುವ ಪಾಠವಾಯಿತು. (ಮೊದಮೊದಲಿಗೆ ನಮಗೆ ಇಂತಹ ಕೃತಿಗಳಿಗೆಲ್ಲ ಮಾರ್ಗದರ್ಶಿಯಾಗಿ ತಮ್ಮ ಗ್ರಂಥಾಲಯದಿಂದ ಒದಗಿಸುತ್ತಿದ್ದದ್ದು ನಮ್ಮೂರಿನ ನನ್ನ ಹಿರಿಯ ಸಂಬಂಧಿ ಶ್ರೀ ಸುಬ್ರಾಯ ಚೊಕ್ಕಾಡಿ.

ಕನ್ನಡದ ಈ ಹಿರಿಯ ಕವಿಯೂ ನಿಸಾರ್ ಅಹಮದ್ ಅವರ ಸಮಕಾಲೀನರೇ ಹೌದು.) ಹೀಗೆ ನಿಸಾರ್ ಅಹಮದ್ ಅವರ ಆ ಮೊದಲಿನ ‘ಮನಸು ಗಾಂಧಿ ಬಝಾರು’, ‘ನೆನೆದವರ ಮನದಲ್ಲಿ’, ‘ಸುಮುಹೂರ್ತ’, ಸಂಕಲನಗಳನ್ನು ಓದಲು ಅವಕಾಶವಾಯಿತು. ಬಳಿಕ ‘ನಾನೆಂಬ ಪರಕೀಯ’, ‘ನಿತ್ಯೋತ್ಸವ’, ‘ಸ್ವಯಂಸೇವೆಯ ಗಿಳಿಗಳು’, ‘ನವೋಲ್ಲಾಸ’ ಮತ್ತಿತರ ಕವಿತಾ ಸಂಗ್ರಹಗಳನ್ನು ನಿಯಮಿತವಾಗಿ ಓದುತ್ತಿದ್ದೆ. ಅವರು ಕವಿತೆಗಳಲ್ಲದೆ ಇನ್ನೇನಾದರೂ ಬರೆದಿರಬಹುದು ಎಂಬ ಭಾವನೆಯೇ ಬಾರದಂತೆ ಅವರ ಕವಿತೆಗಳು ಮರಳುಮಾಡಿದ್ದವು. 1981ರಲ್ಲಿ ಶ್ರಿ ಶಂಭಾಜೋಶಿಯವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ನಾನು ಕಾರ್ಯದರ್ಶಿಯಾಗಿದ್ದೆ. ಈ ಸಮ್ಮೇಳನಕ್ಕೆ ನಿಸಾರ್ ಅಹಮದ್ ಒಬ್ಬ ಅತಿಥಿಯಾಗಿದ್ದರು. ಮಾಮೂಲಾಗಿ ನವ್ಯಕವಿಯೆಂದರೆ ಜುಬ್ಬಾ ಪೈಜಾಮ/ಪ್ಯಾಂಟು, ಗಡ್ಡ ಇತ್ಯಾದಿಗಳನ್ನು ನಿರೀಕ್ಷಿಸಿದ್ದ ನಮಗೆ ಅವರ ಒಪ್ಪ-ಓರಣ, ಸೂಟು-ಬೂಟು-ಟೈ ವಿಚಿತ್ರವಾಗಿ ಕಂಡಿತ್ತು! ಆದರೂ ಮಡಿಕೇರಿಯ ಹವೆಗೆ ಮತ್ತು ಕೊಡಗಿನ ಸಂಸ್ಕೃತಿಗೆ ಸ್ಪಂದಿಸಿ ಹೀಗೆ ಬಂದಿರಬೇಕೆಂದು ಊಹಿಸಿದ್ದೆವು. ವೇದಿಕೆಯಲ್ಲಿದ್ದ ನಿಸಾರ್ ಅಹಮದ್ ಅವರ ಖ್ಯಾತಿಯನ್ನು ಹೊಗಳುವ ಉತ್ಸಾಹದಲ್ಲಿ ನಮ್ಮ ಪದಾಧಿಕಾರಿಯೊಬ್ಬರು ತಮ್ಮ ಭಾಷಣದಲ್ಲಿ ‘ಕೀರ್ತಿಶೇಷ ಶ್ರೀ ಕೆ.ಎಸ್.ನಿಸಾರ್ ಅಹಮದ್’ ಎಂದು ಸಂಬೋಧಿಸಿದ್ದರು!

1983-84ರಲ್ಲಿ ನಿಸಾರ್ ಅಹಮದ್ ಅವರು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದಾಗ ಅಕಾಡಮಿಯ ಆಶ್ರಯದಲ್ಲಿ ಕೊಡಗಿನ ಮಡಿಕೇರಿಯಲ್ಲಿ ಒಂದು ದಿನದ ಸಾಹಿತ್ಯ ಸಂಕಿರಣವನ್ನು ಮಾಡಲು ನಾವು ಕೆಲವು ಗೆಳೆಯರು ಉತ್ಸಾಹಿತರಾಗಿ ಈ ಕುರಿತು ಅವರನ್ನು ಭೇಟಿಯಾದೆವು. ಅವರಿಗಿಂತ ಸಾಕಷ್ಟು ಎಳೆಯರಾಗಿದ್ದ ನಮ್ಮನ್ನು ಅವರು ಪ್ರೀತಿಯಿಂದ ಮಾತನಾಡಿಸಿದ್ದಲ್ಲದೆ ಪೂರ್ಣ ಪ್ರೋತ್ಸಾಹ ಮತ್ತು ಬೆಂಬಲವನ್ನು ಸೂಚಿಸಿದರು. ಸ್ಮರಣಿಕೆಯಾಗಿ ಪುಸ್ತಕಗಳನ್ನೇ ನೀಡಬೇಕೆಂದರು. ಆಗ ಅವರು ನೀಡಿದ್ದ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಎಂಬ ಅನುವಾದಿತ ನಾಟಕ ಕೃತಿಯನ್ನು ನಾನು ಸ್ಮರಣಿಕೆಯಾಗಿ ಪಡೆದಿದ್ದು ಅದು ಈಗಲೂ ನನ್ನಲ್ಲಿ ಅವರ ನೆನಪಿನ ಗುರುತಾಗಿ ಉಳಿದಿದೆ. ಸಂಕಿರಣವು ಯಶಸ್ವಿಯಾಯಿತು. ಕವಿ ನಿಸಾರ್ ಅಹಮದ್ ಮಡಿಕೇರಿಗೆ ಬಂದದ್ದು ಆಗ ಚರಿತ್ರಾರ್ಹ. ಈಚೆಗೆ ಅನೇಕರು ಬಂದು ಹೋಗಿದ್ದಾರೆ. ಹಲವರಂತೂ ಈಚೆಗೆ ಖಾಸಗಿಯಾಗಿ ‘ರಂಗದಿಂದೊಂದಿಷ್ಟು ದೂರ’ ಎಂಬ ಹಾಗೆ ‘ಸಾಹಿತ್ಯದಿಂದೊಂದಿಷ್ಟು ದೂರ’ ಬಂದು ‘ಹೋಂ ಸ್ಟೇ’ಗಳಲ್ಲಿ ಉಳಿದು ಹೋಗುವುದರಿಂದ ಗೊತ್ತಾಗುವುದೇ ಆನಂತರ. - ‘ವೈಟಿಂಗ್ ಫಾರ್ ಗೋಡೋ’ವಿನಂತೆ! ನನ್ನ ಮೊದಲ ಕವಿತಾಸಂಕಲನ ‘ಸ್ವಯಂಪ್ರಭೆ’ 1997ರಲ್ಲಿ ಪ್ರಕಟವಾದಾಗ ಚೊಚ್ಚಲ ಹೆರಿಗೆಯ ಉತ್ಸಾಹದಲ್ಲಿ ಅನೇಕರಿಗೆ ಕಳುಹಿಸಿದಂತೆ ಅವರಿಗೂ ಗೌರವ ಪ್ರತಿ ಕಳುಹಿಸಿದ್ದೆ.

ಆಗ ಈಗಿನಂತೆ ‘ಇ-ಮೇಲ್’ ಅಥವಾ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ (ಸಾಮಾಜಿಕವೆಂದು ಹೇಳಿಕೊಳ್ಳುವ) ಯಾಂತ್ರಿಕ ಸೌಕರ್ಯ, ಸೌಲಭ್ಯಗಳು ಎಲ್ಲರಲ್ಲೂ ಇಲ್ಲದ್ದರಿಂದ ಪ್ರತಿಕ್ರಿಯೆ ನೀಡಬೇಕೆಂದವರಿಗೆ ಪತ್ರ ಇಲ್ಲವೇ ಫೋನಿನ ಹೊರತು ಬೇರೆ ಮಾಧ್ಯಮಗಳಿರಲಿಲ್ಲ. ಫೋನ್ ಸಹಿತ ಬೇಕೆಂದಾಗ ಸಿಗುತ್ತಿರಲಿಲ್ಲ. ನಿಸಾರ್ ಅಹಮದ್ ನನಗೆ (ಸಹಜವಾಗಿಯೇ ಮೆಚ್ಚುಗೆಯ) ಪತ್ರವನ್ನು ಬರೆದಿದ್ದರು. ಅದರಿಂದ ನಾನು ಉಬ್ಬುವ, ಹಿಗ್ಗುವ ಪ್ರಮೇಯವಿರಲಿಲ್ಲ. (ನವ್ಯಯುಗ ನನ್ನಂತಹ ಬಹುತೇಕ ಬರಹಗಾರರಿಗೆ ನಿಷ್ಠುರ ಮತ್ತು ಸ್ವಲ್ಪಮಟ್ಟಿಗೆ ನಿರಾಕರಣೆಯನ್ನು ಎದುರಿಸುವ ಪ್ರವೃತ್ತಿಯನ್ನು ಹೇಳಿಕೊಟ್ಟಿತ್ತು!) ಆದರೆ ಅವರು ಎಲ್ಲ ಕವಿತೆಗಳನ್ನೂ ಓದಿದ್ದರ ಸೂಚಕವಾಗಿ ಅವುಗಳಿಂದ ಕೆಲವಾದರೂ ಸಾಲುಗಳನ್ನು ಉಲ್ಲೇಖಿಸಿದ್ದರು ಎಂಬುದು ನನಗೆ ಸಮಾಧಾನ ತಂದಿತು. ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಸಾರ್ ಅಹಮದ್ ಅಧ್ಯಕ್ಷರಾಗಿದ್ದರು. ಹಲವಾರು ಕಾರಣಗಳಿಗಾಗಿ ಅದು ವಿವಾದಗ್ರಸ್ತವಾದದ್ದೂ ಹೌದು. ಆ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದ್ದೆ. 2012ರಲ್ಲಿ ಮೂಡುಬಿದಿರೆಯಲ್ಲಿ ನಡೆದ ‘ನುಡಿಸಿರಿ’ ವಾರ್ಷಿಕ ಅಧಿವೇಶನಕ್ಕೆ ನಿಸಾರ್ ಅಹಮದ್ ಅವರು ಅಧ್ಯಕ್ಷರಾಗಿದ್ದರು.

ಅಲ್ಲಿ ‘ಕವಿಸಮಯ’ದಲ್ಲಿ ಮಾತನಾಡಲು ಮತ್ತು ನನ್ನದೊಂದು ಕವಿತೆಯನ್ನು ಓದಲು ಹಾಗೂ ಅಲ್ಲಿ ಹಾಡಿಸಿಕೊಳ್ಳಲು ನಾನೂ ಭಾಗವಹಿಸಿದ್ದೆ. ‘ಸಂಜೆ ಐದರ ಮಳೆ’ಯ ಕವಿಯೆಂದೇ ನಾನು ಅವರನ್ನು ಸಂಬೋಧಿಸಿದ್ದೆ. ಧಾರವಾಡದ ‘ಸಾಹಿತ್ಯ ಸಂಭ್ರಮ’ವೂ ಸೇರಿದಂತೆ ಅನೇಕಬಾರಿ ಅಲ್ಲಿ, ಇಲ್ಲಿ ಅವರನ್ನು ಭೇಟಿಯಾಗಿದ್ದರೂ ನನ್ನ ಅವರ ಪರಿಚಯ ಕವಿತೆಗಳ ಮೂಲಕವೇ ಹೊರತು ವೈಯಕ್ತಿಕವಲ್ಲ. ಪ್ರಜ್ಞಾಪೂರ್ವಕ ಇಲ್ಲವೇ ಜಾಣ ಅಲಕ್ಷ್ಯದ ಈ ಕಾಲದಲ್ಲಿ ನನ್ನ ಪ್ರತೀ ಕೃತಿಯನ್ನು ನೀಡಿದಾಗಲೂ ಅವರು ಪ್ರತಿಕ್ರಿಯಿಸಿದ್ದರೆಂಬುದೇ ಸಂತೋಷದ ವಿಷಯ. ನಿಸಾರ್ ಅಹಮದ್ ಅವರು ವಿಮರ್ಶೆಗಳನ್ನು, ಅನುವಾದಗಳನ್ನು, ಮಕ್ಕಳ ಸಾಹಿತ್ಯಗಳನ್ನು ಬರೆದರೂ ಅವೆಲ್ಲ ಮೈಲಿಗಲ್ಲಾಗುವ, ನಿರ್ಣಯಾತ್ಮಕವಾದಂತಹ ಚಹರೆಯನ್ನು ಬಿಟ್ಟು ಹೋದಂತಿಲ್ಲ; ಅವರು ಮುಖ್ಯವಾಗಿ ಮತ್ತು ಪೂರ್ಣವಾಗಿ ಕವಿ. ನೈಜ ಕಾವ್ಯ ಎಲ್ಲ ಕಟ್ಟುಗಳನ್ನು ಹರಿದುಕೊಂಡು ಸ್ವಚ್ಛಂದವಾಗಿ ಹರಿಯುತ್ತದೆ; ಹಾರಾಡುತ್ತದೆ. ಅಲ್ಲಿ ನಮ್ಮವರು, ನಿಮ್ಮವರು ಅನ್ಯರು ಎಂಬ ಪರಿಕಲ್ಪನೆಯೇ ಇಲ್ಲ. ಅಡಿಗರ ಕಾವ್ಯಪಂಥದ ಉಚ್ಛ್ರಾಯ ಕಾಲದಲ್ಲಿ ಕವಿತೆ ಬರೆಯಲಾರಂಭಿಸಿದ ನಿಸಾರ್ ಅಹಮದ್ ನವೋದಯದ ರಮ್ಯತೆಯನ್ನು ಕಳೆದುಕೊಂಡವರಲ್ಲ, ಮತ್ತು ನವ್ಯದ ಸಾರವನ್ನು ಸಂಪಾದಿಸಿಯೂ ಅದರ ಒಣ ಅತಿಯನ್ನು ಬಳಸಿಕೊಂಡವರೂ ಅಲ್ಲ.

ತಾತ್ವಿಕವಾಗಿ ಅವರು ಯಾರ ಉತ್ತರಾಧಿಕಾರಿಯೂ ಅಲ್ಲ. ಆದರೆ ಅಡಿಗರ ಶಾಖೆಯು ಆದಿಶಂಕರರ ಪೀಠದಂತೆ ನಾಲ್ಕು ಕವಲೊಡೆದಿದೆಯೆಂದು ಭಾವಿಸಿದರೆ ಅದರಲ್ಲಿ, ಅಡಿಗರ ಸಮಕಾಲೀನರಾದ ರಾಮಚಂದ್ರಶರ್ಮ, ಅಡಿಗರ ಆನಂತರದ ಎ.ಕೆ.ರಾಮಾನುಜನ್, ಕೆ.ವಿ.ತಿರುಮಲೇಶ್ ಮತ್ತು ನಿಸಾರ್ ಅಹಮದ್ ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುತ್ತಾರೆಂದು ಅನ್ನಿಸುತ್ತದೆ. ನಿಸಾರ್ ಅವರೂ ಅಡಿಗರಂತೆ ತನ್ನದು ತನ್ನದೇ ನುಡಿಯಾಗಬೇಕೆಂದು ಹಪಹಪಿಸಿದವರು. ‘ಅವರಿವರ ಸೋಂಕಿಂದ ಮಡಿಗೆಡುತಲಿಹುದು ನುಡಿ’ ಎಂದು ಬರೆದರು; ‘ನನ್ನ ದನಿ, ನನ್ನದೇ ಆದ ದನಿ, ನನ್ನಾಸೆ ಹೊನ್ನಗಣಿ ಎಲ್ಲಿರುವುದೋ!’ ಎಂದು ಹುಡುಕಿದವರು. ಅಡಿಗರ ಆನಂತರದಲ್ಲಿ ನವ್ಯಕವಿಗಳ ಗುಂಪೊಂದು ಗೇಯಕವಿತೆಗಳನ್ನೇ ಬರೆದು ಪ್ರಸಿದ್ಧರಾದದ್ದೂ ಇದೆ. ಅಂತಹವರು ಪಾಪ, ಎಷ್ಟೇ ಒಳ್ಳೆಯ ಕವಿತೆಗಳನ್ನು ಕನ್ನಡ ಲೋಕಕ್ಕೆ ನೀಡಿದ್ದರೂ ಅವರನ್ನು ಜನರು ಈ ‘ಹಾಡು’ಗಳಿಂದ ಗುರುತಿಸುತ್ತಿರುವುದು ದುರದೃಷ್ಟಕರ.

ಬೇಂದ್ರೆಯವರು ಮತ್ತು ಆನಂತರ ಕಂಬಾರರು ತಾವು ಬರೆದ ಕವಿತೆಗಳನ್ನೇ ಹಾಡಾಗಿಸಿದರು. ಇಂತಹವರು ಜನಪ್ರಿಯರೂ ಆದರು; ಶ್ರೇಷ್ಠರೂ ಆದರು. ಆದರೆ ನವ್ಯದ ಕೆಲವರಾದರೂ ಕವಿತೆಗಳಿಂದ ಪ್ರತ್ಯೇಕವಾಗಿ ಹಾಡಿಗಾಗಿಯೇ ಹಾಡುಗಳನ್ನು ಬರೆದರು. ಹೀಗಾಗಿ ಅವರು ಜನಪ್ರಿಯರಾಗಿರುವುದು ತಮ್ಮ ಹಾಡುಗಳಿಂದ, ಮತ್ತು ಈ ಸುಗಮ ಪ್ರವೃತ್ತಿ ಅವರ ಕಾವ್ಯದ ಶ್ರೇಷ್ಠತೆಯನ್ನು ಸ್ವಲ್ಪ ಮಟ್ಟಿಗಾದರೂ ಅಪಮೌಲ್ಯಗೊಳಿಸಿತು. ಆದರೆ ನಿಸಾರ್ ಅಹಮದ್ ಈ ಶಾಪಕ್ಕೆ ತುತ್ತಾಗಲಿಲ್ಲ. ಅವರ ಕವಿತೆಗಳು ಹಾಡುಗಳಾಗುವ ಮೊದಲೇ ಅವರು ಪ್ರತಿಷ್ಠಿತ ಕವಿಗಳಾಗಿದ್ದರು. ಅವರ ಕೆಲವು ಕವಿತೆಗಳೇ ಹಾಡಾದವು. ‘ಕನ್ನಡ’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ‘ಕುರಿಗಳು, ಸಾರ್, ಕುರಿಗಳು’ ಅಥವಾ ‘ನಿತ್ಯೋತ್ಸವ’ ಮುಂತಾದವು ಕವಿತೆಗಳೇ ಆಗಿ ಬರೆದವುಗಳು. ಅವು ತಮ್ಮ ಪಾಡಿಗೆ ತಾವು ಹಾಡಾದವು. ಹಾಗೆಂದು ಅವರು ಇತರ ಹಾಡುಗಬ್ಬದ ಕವಿಗಳಷ್ಟು ಜನಪ್ರಿಯರಲ್ಲ. ಅವರ ಹಾಡುಗಳ ಜನಪ್ರಿಯತೆ ಅವರ ಶ್ರೇಷ್ಠತೆಯ ಮಾನದಂಡವೂ ಆಗಲಿಲ್ಲ; ಅವರ ಕಾವ್ಯಶಕ್ತಿಯನ್ನು ಅಪಮೌಲ್ಯಗೊಳಿಸುವ ಸರಕುಗಳಾಗಿ ಬಳಕೆಯಾಗಲೂ ಇಲ್ಲ. ಒಳ್ಳೆಯ ಕವಿತೆಗಳಾಗಿಯೂ ಸಾಹಿತ್ಯದ ಗಂಭೀರ ಚರ್ಚೆಯಲ್ಲಿ ಅವರ ಹಾಡುಗಳು ಚರ್ಚೆಯಾಗುವುದಿಲ್ಲ. (ನಿಸಾರ್ ಅಹಮದ್ ಅವರ ಕವಿತ್ವವನ್ನು ಕೈಬಿಡುವ ಭರದಲ್ಲಿ ಒಬ್ಬ ಗಣ್ಯರು ‘ನಿತ್ಯೋತ್ಸವ’ ಕವಿತೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕೈಪಿಡಿಯಂತಿದೆ ಎಂದು ಹೇಳಿದ್ದೂ ಇದೆ!)

ನಿಸಾರ್ ಅಹಮದ್ ಮಡಿವಂತ ಭಾಷೆಯನ್ನಾಗಲೀ, ಜಾತಿ-ಮತ- ಸಂಪ್ರದಾಯವನ್ನಾಗಲೀ, ಸೀಮಿತ ರಾಷ್ಟ್ರೀಯತೆಯನ್ನಾಗಲೀ ಬಯಸಲೂ ಇಲ್ಲ; ಬಳಸಲೂ ಇಲ್ಲ. ಇದರಿಂದಾಗಿ ಅವರಿಗೆ ಕವಿತೆಗಳಲ್ಲಿ ಭಾವ- ವಿಚಾರ ಸಂಬಂಧವು ಸುಲಭವಾಗಿ ದಕ್ಕಿದೆ. ‘ರಂಗೋಲಿ ಮತ್ತು ಮಗ’, ‘ಅಮ್ಮ, ಆಚಾರ ಮತ್ತು ನಾನು’, ‘ವಿಮರ್ಶಕ ಅಂದರಿಕಿ ಮಂಚಿವಾಡಯ್ಯ’ ಆಗಲೀ, ‘ಮಾರಾಟಗಾತಿಯ ಮಾತುಕತೆ’ಯಾಗಲೀ ಹೂದೋಟದಲ್ಲಿ ಹಾಡುತ್ತ, ಕುಣಿಯುತ್ತ, ಕೈಗೆಟುಕಿದ ಹೂಗಳನ್ನು ಕೊಯ್ಯುವ ಪುಟ್ಟ ಹುಡುಗಿಯ ಉತ್ಸಾಹದಂತೆ ಪದಗಳೊಂದಿಗೆ ಆಡುತ್ತವೆ ಮಾತ್ರವಲ್ಲ, ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುತ್ತವೆ. ಸಂಸ್ಕೃತಿಯ ಪಾಠ ಹೇಳುವಾಗ, ನಾಗರಿಕತೆಯ ಪೊಳ್ಳುತನವನ್ನು ಟೀಕಿಸುವಾಗ, ನಿಸಾರ್ ಅಹಮದ್ ತಾತ್ವಿಕ ಮೆಟ್ಟಲನ್ನೇರುತ್ತಾರೆ. ‘ಪಾಠ’ ಎಂಬ ಕವಿತೆ ಈ ಅಂಶವನ್ನು ನಿರೂಪಿಸುತ್ತದೆ. ‘ಕುರಿಗಳು ಸಾರ್ ಕುರಿಗಳು’ ಕವಿತೆ ಸ್ವರೂಪದಲ್ಲೂ ವಸ್ತುವಿನಲ್ಲೂ ಸಾರ್ವಕಾಲಿಕ ಸಮಾಜೋರಾಜಕೀಯ ಭಾಷ್ಯವಾಗಿದೆ. ಆದರೂ ಸಾಹಿತ್ಯದ ಒಳಗೆಲ್ಲೋ ಬಸವಣ್ಣನ ಈ ನಾಡಿನಲ್ಲಿ ‘ಇವನಾರವ?’ ಎಂಬ ಪ್ರಶ್ನೆ ಉಳಿದುಕೊಂಡಿದೆ.

‘ದಾಸರೆಂದರೆ ನಮ್ಮ ವರ ಪುರಂದರರಯ್ಯ: ಇದ್ದು ಇಲ್ಲೇ ಅಲ್ಲಿಗೇರಿದವರು; ಸಹಜ ಮುಕ್ತಿಯ ನೌಕೆ ಬರುವವರೆಗೂ ಇಲ್ಲೆ ಈಸಿದವರು, ಇದ್ದು ಜೈಸಿದವರು’ ಎಂದು ಬರೆದ ನಿಸಾರ್ ಅಹಮದ್ ಅವರೇ ‘ನಿಮ್ಮಿಡನಿದ್ದೂ ನಿಮ್ಮಂತಾಗದೆ, ಜಗ್ಗಿದ ಕಡೆ ಬಾಗದೆ, ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ, ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ, ಅದು ಬಲು ಕಷ್ಟದ ಕೆಲಸ’ ಎಂದು ಮುಂತಾಗಿ ಬರೆಯುವ ಅನಿವಾರ್ಯತೆಯ ಸಂಕಟ ಮತ್ತು ಒತ್ತಡವನ್ನನುಭವಿಸಿದರು. (ಅವರ ಆತಂಕವನ್ನು ಇಂದು ಅನೇಕರು ನಿಜವಾಗಿಸುತ್ತಿದ್ದಾರೆ!) ಯಾವುದೇ ಗುಂಪಿಗೂ ಸೇರದ ನಿಸಾರ್ ಅಹಮದ್ ಕನ್ನಡದ ವಿಮರ್ಶಕರ ಕಣ್ಣಿಗೂ ಅಷ್ಟಾಗಿ ಬೀಳದವರು. ಅಭಿನಂದನಾ ಗ್ರಂಥದ ಹೊರತಾಗಿ ಅವರನ್ನು ಗಂಭೀರವಾಗಿ ಬೆಲೆಕಟ್ಟಿದವರು ಕಡಿಮೆ. ‘ತೀ.ನಂ.ಶ್ರೀ.’ ಕವಿತೆಯಲ್ಲಿ ಅವರು ಹೇಳುವ ‘ಇದ್ದಾಗ ಇದ್ದಂತೆ ಕಾಣಿಸದೆ, ಕಾಣಿಸದೆ ಇದ್ದಾಗ ಇದ್ದಂತೆ ಭಾಸವಾದವ ನೀನು ಇದ್ದಕಿದ್ದಂತೆ’ ಎಂಬ ಸಾಲು ನಿಸಾರ್ ಅಹಮದ್ ಅವರಿಗೂ ಅನ್ವಯಿಸುತ್ತದೆ. ‘ಕೈಮರ ಊರ ತೋರದಿದ್ದರು, ದಾರಿ ತೋರದಿರುವುದೆ’ ಎಂಬ ಹಾಗೆ ಅವರು ಶ್ರೀಸಾಮಾನ್ಯನ ಪ್ರತಿನಿಧಿಯಾಗಿಯೇ ಬದುಕಿದರು. ಸ್ವಂತ ದಿನಗಳನ್ನು, ಶ್ರೀಮಂತ ದಿನಗಳನ್ನು, ಪ್ರೀತಿ ಮಿಕ್ಕ ಚಿನ್ನದಂಥ ದಿನಗಳನ್ನು ಸೃಷ್ಟಿಸಿ ಹೋದರು. ಅದಕ್ಕೇ ಅವರು ಭೌತಿಕವಾಗಿ ಮರೆಯಾದಾಗ ಸಾಹಿತ್ಯಲೋಕ ಅವರ ದುಡಿಮೆಗೆ ತಕ್ಕ ಪಗಾರ ನೀಡದ ಒಂದು ತರಹದ ಅಪರಾಧ ಪ್ರಜ್ಞೆಯಿಂದ ಬಳಲಿದರೂ ಅಚ್ಚರಿಯಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)