varthabharthi


Social Media

ಟ್ಯಾಗೋರರ ರಾಷ್ಟ್ರಗೀತೆ ಕುರಿತ ಅಪಪ್ರಚಾರ ಮತ್ತು ಎಂ.ವಿ.ಕಾಮತರ ಪುಸ್ತಕ

ವಾರ್ತಾ ಭಾರತಿ : 7 May, 2020
ಎನ್.ಎ.ಮಹಮ್ಮದ್ ಇಸ್ಮಾಯೀಲ್

ರವೀಂದ್ರನಾಥ ಟ್ಯಾಗೋರ್

ಇಂದು (ಮೇ 7) ಗುರುದೇವ ರವೀಂದ್ರನಾಥ ಟ್ಯಾಗೋರರು ಹುಟ್ಟಿದ ದಿನ. ಭಾರತ ಮತ್ತು ಬಾಂಗ್ಲಾದೇಶಗಳೆರಡಕ್ಕೂ ರಾಷ್ಟ್ರಗೀತೆಯನ್ನು ಕೊಟ್ಟ ಈ ಮಹಾಕವಿಯ ಕುರಿತು ಅನೇಕ ಅಪಪ್ರಚಾರಗಳನ್ನು ಸಂಘ ಪರಿವಾರ ಸದಾ ನಡೆಸುತ್ತಲೇ ಇದೆ. ಸ್ವತಃ ಸುಭಾಷ್ ಚಂದ್ರ ಬೋಸ್ ರಾಷ್ಟ್ರಗೀತೆಯಾಗಿ ಆರಿಸಿದ ಜನಗಣಮನ ಗೀತೆಯ ಬಗೆಗಿನ ಅಪಪ್ರಚಾರವೂ ಇದರಲ್ಲೊಂದು.

ಕವಿ ರವೀಂದ್ರರು ಈ ಗೀತೆಯನ್ನು ಪಂಚಮ ಜಾರ್ಜ್‌ನ ಸ್ವಾಗತಕ್ಕಾಗಿ ಬರೆದರು ಎಂಬ ಸುಳ್ಳೊಂದನ್ನು ಸಂಘ ಪರಿವಾರ ಮತ್ತು ಅದರ ಐಡಿಯಾಲಜಿಯನ್ನು ಪ್ರಚಾರ ಮಾಡುವ ಅನೇಕರು ಸಾವಿರಾರು ಬಾರಿ ಹೇಳಿದ್ದಾರೆ. ಇದನ್ನು ಅತಿ ಹೆಚ್ಚು ಪ್ರಚಾರ ಮಾಡಿದ ಕುಖ್ಯಾತಿ ಇರುವುದು ರಾಜೀವ್ ದೀಕ್ಷಿತ್‌ಗೆ‌. ಯಾವ ಆಧಾರಗಳೂ ಇಲ್ಲದೆ ಸುಳ್ಳನ್ನು ಸುಲಲಿತವಾಗಿ ಹೇಳುತ್ತಾ ಹೋಗುವ ಇಂಥ ಭಾಷಣಕಾರರು ಮಾಡಿರುವ ಅನಾಹುತಗಳು ಒಂದೆರಡಲ್ಲ. ಕನ್ನಡದಲ್ಲಿಯೂ ಇಂಥ ಕೆಲ ಜಂತುಗಳು ಈ ಸುಳ್ಳನ್ನು ಸಾಕಷ್ಟು ಪ್ರಚಾರ ಮಾಡಿವೆ.

ಈ ಸುಳ್ಳನ್ನು ಸಾಬೀತು ಮಾಡುವುದಕ್ಕೆ ನಾವು ಬೇರೆಲ್ಲೂ ಹುಡುಕಬೇಕಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕಾವೃತ್ತಿಯನ್ನು ಆರಂಭಿಸಿದ, ಸಂಘಪರಿವಾರದ ಐಡಿಯಾಲಜಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವುಗಳ ಪ್ರಚಾರವನ್ನೇ ತಮ್ಮ ಲೇಖನೋದ್ಯೋಗದ ಬಹುಮುಖ್ಯ ಭಾಗವನ್ನಾಗಿ ಮಾಡಿಕೊಂಡ ಎಂ.ವಿ.ಕಾಮತ್ ಅವರ ಬರಹವೇ ಸಾಕು.

ಕಾಮತರ 'Letters to Gouri' ಪುಸ್ತಕದಲ್ಲಿ 'ಜನ ಗಣ ಮನ' ಗೀತೆಗೆ ಸಂಬಂಧಿಸಿದ ಒಂದು ಅಧ್ಯಾಯವಿದೆ. ಅದರಲ್ಲಿ ಅವರು ಇದು ಹೇಗೆ ರಾಷ್ಟ್ರಗೀತೆಯಾಗಿ ಆಯ್ಕೆಯಾಯಿತು ಎಂಬುದನ್ನು ಸ್ಪಷ್ಟ ಆಧಾರಗಳು ಮತ್ತು ದಿನಾಂಕಗಳ ಜೊತೆ ವಿವರಿಸಿದ್ದಾರೆ. ಜನ ಗಣ ಮನ ಗೀತೆಗೆ ಮೊದಲು 'ರಾಷ್ಟ್ರಗೀತೆ'ಯ ಮಾನ್ಯತೆ ನೀಡಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್. ಇದನ್ನು ಟ್ಯಾಗೋರರು ಬರೆದದ್ದು ಕಾಂಗ್ರೆಸ್‌ನ 26ನೇ ಅಧಿವೇಶನದಲ್ಲಿ ಹಾಡುವುದಕ್ಕಾಗಿ. 1911ರ ಡಿಸೆಂಬರ್ 17ರಂದು ಈ ಗೀತೆಯನ್ನು ಹಾಡಿದ ಮೇಲೆ ದೇಶಬಂಧು ಚಿತ್ತರಂಜನ್ ದಾಸ್ ಅವರು ಹೇಳಿದ್ದು ಹೀಗೆ 'at the very outset I do desire to refer to the song to which you have just listened. It is a song of the glory and victory of India. We stand here today on this platform for the glory and victory of India'.

ಎಂ.ವಿ.ಕಾಮತ್ ಅವರ ಪುಸ್ತಕದಲ್ಲಿ ಜನಗಣ ಮನದ ಪ್ರಸ್ತಾಪವಿರುವ ಲೇಖನದ ಪುಟಗಳೂ ಇಲ್ಲಿಯೇ ಇವೆ. ಈ ಪುಸ್ತಕದ ಮೊದಲ ಆವೃತ್ತಿ 1996ರಲ್ಲಿ ಬಂದಿತ್ತು. ಪ್ರಕಾಶಕರು: ಯುಬಿಎಸ್‌ಪಿಡಿ.

ಕೃಪೆ: ಲೇಖಕರ ಫೇಸ್ ಬುಕ್ ಪೋಸ್ಟ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)