varthabharthi


ಅನುಗಾಲ

ಮಾಸ್ತಿ ಕಂಡ ವಾಲ್ಮೀಕಿ ರಾಮಾಯಣ

ವಾರ್ತಾ ಭಾರತಿ : 13 May, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

300ಕ್ಕೂ ಹೆಚ್ಚು ರಾಮಾಯಣಗಳಿವೆಯೆಂದು ಎ.ಕೆ.ರಾಮಾನುಜನ್ ಅಭಿಪ್ರಾಯಪಟ್ಟಿದ್ದಾರೆ. ಅದನ್ನೆಲ್ಲ ವಿವರಿಸುವುದು ಕಷ್ಟವಾದರೂ ವಾಲ್ಮೀಕಿಯ ಆನಂತರ ಸಂಸ್ಕೃತದಲ್ಲೂ ಕನ್ನಡ ಮತ್ತಿತರ ಭಾಷೆಗಳಲ್ಲೂ ದೇಶ-ವಿದೇಶಗಳಲ್ಲೂ ರಾಮಾಯಣ ವಿವಿಧ ಕಾವ್ಯ-ಶಿಲ್ಪ-ಚಿತ್ರರೂಪಗಳಲ್ಲಿ ಪುನರಾವತಾರ ಕಂಡಿದೆ. ‘ಅಧ್ಯಾತ್ಮರಾಮಾಯಣ’, ‘ಪಂಪರಾಮಾಯಣ’, ‘ಕುಮುದೇಂದು ರಾಮಾಯಣ’, ‘ತೊರವೆ ರಾಮಾಯಣ’ ಈ ಪೈಕಿ ತಕ್ಷಣ ನೆನಪಿಗೆ ಬರುವಂಥವು.ರಾಮಾಯಣವನ್ನು ಅನೇಕರು ಅನೇಕ ವಿಧದಿಂದ ಕಂಡಿದ್ದಾರೆ. ಅದು ಪುರಾಣವೆಂದು ಪ್ರಸಿದ್ಧವಾದರೂ ಚರಿತ್ರೆಯೆಂದು ಭಾವಿಸಿದ ಮುಗ್ಧರೂ ಇದ್ದಾರೆ. ಸಂಸ್ಕೃತದಿಂದ ಮೊದಲ್ಗೊಂಡು ಅನೇಕ ಭಾಷೆಗಳಲ್ಲಿ, ಗದ್ಯ-ಪದ್ಯ-ನಾಟಕ-ಜಾನಪದ- ಸಿನೆಮಾ ಮಾಧ್ಯಮಗಳಲ್ಲಿ, ಅಧ್ಯಾತ್ಮಗಳ ವಿವಿಧ ರೂಪಗಳಲ್ಲೂ ಜನರ ಮುಂದಿದೆ. ಅದನ್ನು ದೇವರ ಪೀಠದಲ್ಲಿಟ್ಟು ಬದುಕಿಡೀ ನಿತ್ಯ ಪೂಜೆ ಮಾಡಿಯೂ ಓದದವರಿದ್ದಾರೆ. ಅಂತಹವರ ಪಾಲಿಗೆ ಅದೊಂದು ಪವಿತ್ರ ಗ್ರಂಥ. ಇನ್ನು ಕೆಲವರು ಅದನ್ನೊಂದು ಜ್ಞಾನಮೂಲವೆಂದು ತಿಳಿದು ಅದರ ಕಥೆ ಕೇಳಿ ಪುಣ್ಯ ಸಂಪಾದಿಸಿ ಸುಮ್ಮನಾದವರು. ಮತ್ತೂ ಕೆಲವರು ಅದನ್ನು ಯಾವುದಾದರೊಂದು ಮಾಧ್ಯಮದಲ್ಲಿ ಓದಿ, ನೋಡಿ ಸಂತೋಷಪಟ್ಟವರು. ಮತ್ತೂ ಕೆಲವರು ಅದನ್ನು ಅಧ್ಯಯನ ಮಾಡಿ ತಮತಮಗೆ ತೋರಿದ ರೀತಿಯಲ್ಲಿ ತಮ್ಮ ಹಿನ್ನೆಲೆ-ಸಂಸ್ಕಾರಕ್ಕನುಗುಣವಾಗಿ ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ. ಮಣ್ಣಿನ ಮುದ್ದೆಯನ್ನು ಭಿನ್ನ ರೀತಿಯಲ್ಲಿ ಬೇರೆ ಬೇರೆ ಆಕೃತಿಗಳಾಗಿ ರೂಪಿಸಿದಂತೆ ಅದನ್ನು ಪ್ರಕೃತಿಯಿಂದ-ವಿಕೃತಿಯವರೆಗೂ ಚಿತ್ರಿಸಿದವರಿದ್ದಾರೆ. ತಾವು ಹೇಳಿದ್ದು ಸರಿಯೆಂದು ಭಾವಿಸಿದವರೂ, ತಾವು ಹೇಳಿದ್ದು ಮಾತ್ರ ಸರಿಯೆಂದು ವಾದಿಸಿದವರೂ ಇದ್ದಾರೆ.

ಕೆಲವರಿಗೆ ಇದು ತಮ್ಮ ಜ್ಞಾನ ಪ್ರತಿಷ್ಠೆಯ ಸಂಕೇತವಾದರೆ, ಕೆಲವರಿಗೆ ಇದು ತಮ್ಮ ಸಂಸ್ಕಾರದ ಕುರುಹು. ಕೆಲವರಿಗೆ ಭಕ್ತಿ, ಕೆಲವರಿಗೆ ಭಾವ, ಕೆಲವರಿಗೆ ಶ್ಲೋಕ-ಮಂತ್ರ-ಶಾಸ್ತ್ರ ವಿಚಾರ, ಕೆಲವರಿಗೆ ಮನರಂಜನೆ, ಕೆಲವರಿಗೆ ಗೊಡ್ಡುಪುರಾಣ, ಕೆಲವರಿಗೆ ಆಸಕ್ತಿ, ಕೆಲವರಿಗೆ ವ್ಯವಹಾರ, ಕೊನೆಗೆ ಕೆಲವರಿಗೆ ಇದೊಂದು ರಾಜಕೀಯ, ಆರ್ಥಿಕ, ಸಾಮಾಜಿಕ ಸ್ವಹಿತಾಸಕ್ತಿ. ಈ ಎಲ್ಲವನ್ನೂ ತುಂಬಿಟ್ಟುಕೊಂಡು ಬಹುಕಾಲ ಉಳಿದ, ಮತ್ತು ಉಳಿಯಬಹುದಾದ ವಸ್ತು ‘ರಾಮಾಯಣ’. ರಾಮಾಯಣ ಧಾರಾವಾಹಿಯನ್ನು ಪ್ರಸಾರಮಾಡುವ ಟಿವಿಗೆ ಪೂಜೆಮಾಡಿದವರೂ ಇದ್ದಾರೆ. ‘ಇದೊಳ್ಳೆ ರಾಮಾಯಣ’ ಎಂಬ ಸಿನೆಮಾವೂ ಬಂದಿತು. ‘ನಿನ್ನ ರಾಮಾಯಣ ಸಾಕು’ ಎಂಬ ಉಕ್ತಿಯೂ ಸೇರಿಕೊಂಡಿತು. ಕುತೂಹಲಕ್ಕೆಂದು ಕೆಲವು ಕೋಶಗಳನ್ನು ಹುಡುಕಿದರೆ ರಾಮಾಯಣಕ್ಕೆ ಸಂಬಂಧಪಟ್ಟ ಇಂತಹ ಗಾದೆಗಳ ಗೊಂಚಲೇ ಸಿಕ್ಕಿತು: ‘ರಾಮನಂಥಾ ರಾಜನಿಲ್ಲ, ಕಾಮನಂಥಾ ಪುರುಷನಿಲ್ಲ’, ‘ಬಲದಲ್ಲಿ ವಾಲಿ ಮೇಲು, ಚಲದಲ್ಲಿ ರಾಮ ಮೇಲು’, ‘ಬೆಳಗಾನಾ ರಾಮಾಯಣ ಕೇಳಿ, ರಾಮನಿಗೆ ಸೀತೆ ಏನಾಗಬೇಕೆಂದ’, ‘ರಾಮನಾಮ ಜಪ ಮಾಡುವುದು, ತಲೆಕೂದಲಿಂದ ಕುತ್ತಿಗೆ ಕುಯ್ಯುವುದು’, ‘ಮಜ್ಜಿಗೆಗೆ ತಕ್ಕ ರಾಮಾಯಣ ಹೇಳಿದ’ ಇತ್ಯಾದಿ. ರಾಮಾಯಣದ ಮೂಲಕ ರಾಮ ಬಹಳಷ್ಟು ಜನರಿಗೆ ದೇವರು. ಮಂದಿರಗಳಲ್ಲೂ, ಮನೆಗಳಲ್ಲೂ, ಸಾರ್ವಜನಿಕವಾಗಿಯೂ ಪೂಜೆಗೊಳ್ಳುವ ಆಳರಸ. ಅಂಥವನೊಬ್ಬನಿದ್ದ ಎಂಬ ವಾದದೊಂದಿಗೆ ರಾಮ ಭಗವಂತನ ಅವತಾರ ಎಂದೇ ನಂಬಿದವರ ಸಂಖ್ಯೆ ಹೆಚ್ಚು.

ಆಧುನಿಕ ಜಗತ್ತಿನ ಇತ್ತೀಚೆಗಿನ ದಶಕಗಳಲ್ಲಿ ರಾಮ ಬೀದಿಗೆ ಬಂದಿದ್ದಾನೆ. ರಾಜಕೀಯಕ್ಕೆ ಯಥೇಚ್ಛವಾಗಿ ಬಳಕೆಯಾದ. ಯಾರೂ ದ್ವೇಷಿಸಲಾರದ, ದ್ವೇಷಿಸಬಾರದ ವ್ಯಕ್ತಿತ್ವದಂತಿದ್ದ ಮತ್ತು ಅಸಂಖ್ಯ ಜನರಿಂದ ಅಭಿಮಾನದಿಂದ, ಇಷ್ಟಾರ್ಥಸಿದ್ಧಿಗಾಗಿ, ಬಯಸಿಕೊಂಡಿದ್ದ ರಾಮ ತನ್ನದಲ್ಲದ ತಪ್ಪಿಗಾಗಿ ಜನರಿಂದ ಬೈಸಿಕೊಂಡದ್ದು ಉತ್ತರಕಾಂಡದ ಅಗಸನಿಂದ ಆರಂಭವಾಗಿ ಇಂದಿಗೂ ಮುಂದುವರಿದಿದೆ. ವಾಲ್ಮೀಕಿ ಬರೆದ ರಾಮಾಯಣವೇ ರಾಮನ, ರಾಮಾಯಣದ ಕಲ್ಪನೆಗೆ ಮೂಲ. ಅವನಿಗಿಂತ ಮೊದಲು ರಾಮಾಯಣವನ್ನಾಗಲೀ, ರಾಮಕಥೆಯನ್ನಾಗಲೀ ಯಾರೂ ಬರೆದದ್ದು ದಾಖಲೆಯಲ್ಲಿಲ್ಲ; ಅದಕ್ಕೆ ಪೂರಕವಾದ ನಂಬಿಕೆಯೂ ಇಲ್ಲ. ಕುಮಾರವ್ಯಾಸ ಭಾರತ ಬರೆಯುವುದಕ್ಕೆ ಕಾರಣವಿದು: ‘ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ರಾಮಾಯಣ ಭೂಮಿಗೆ ಭಾರವಾಯಿತೆಂದು ಅವನು ಹೇಳಿಲ್ಲ; ಅವನ ಪಾಲಿಗೆ ಭಾರವಾದದ್ದು ಈ ಭಾರೀ ಸಂಖ್ಯೆಯ ಕವಿಗಳು! ಜನರನ್ನು ಮತ್ತೆ ಮತ್ತೆ ಅದೇ ಹಾದಿಯಲ್ಲಿ ಓಡಿಸಿ ನರಳಿಸುವುದು ತನಗಿಷ್ಟವಿಲ್ಲವೆಂಬ ಧ್ವನಿ ಅವನದ್ದು. ಆದರೆ ಶಿಖರದಲ್ಲಿ ಯಾವತ್ತೂ ಜಾಗವಿರುತ್ತದೆಂಬ ಮಾತನ್ನು ನೆನಪಿಟ್ಟುಕೊಂಡರೆ ತನಗಿಂತ ಹಿಂದಿನ ರಾಮಾಯಣದ ಕವಿಗಳ ಜೊತೆ ಸ್ಪರ್ಧಿಸುವ ಅನಿವಾರ್ಯತೆಯನ್ನು ಉದ್ದೇಶಪೂರ್ವಕವಾಗಿಯೇ ಕುಮಾರವ್ಯಾಸ ದೂರವಿಟ್ಟಂತೆ ಕಾಣುತ್ತದೆ.

300ಕ್ಕೂ ಹೆಚ್ಚು ರಾಮಾಯಣಗಳಿವೆಯೆಂದು ಎ.ಕೆ.ರಾಮಾನುಜನ್ ಅಭಿಪ್ರಾಯಪಟ್ಟಿದ್ದಾರೆ. ಅದನ್ನೆಲ್ಲ ವಿವರಿಸುವುದು ಕಷ್ಟವಾದರೂ ವಾಲ್ಮೀಕಿಯ ಆನಂತರ ಸಂಸ್ಕೃತದಲ್ಲೂ ಕನ್ನಡ ಮತ್ತಿತರ ಭಾಷೆಗಳಲ್ಲೂ ದೇಶ-ವಿದೇಶಗಳಲ್ಲೂ ರಾಮಾಯಣ ವಿವಿಧ ಕಾವ್ಯ-ಶಿಲ್ಪ-ಚಿತ್ರರೂಪಗಳಲ್ಲಿ ಪುನರಾವತಾರ ಕಂಡಿದೆ. ‘ಅಧ್ಯಾತ್ಮರಾಮಾಯಣ’, ‘ಪಂಪರಾಮಾಯಣ’, ‘ಕುಮುದೇಂದು ರಾಮಾಯಣ’, ‘ತೊರವೆ ರಾಮಾಯಣ’ ಈ ಪೈಕಿ ತಕ್ಷಣ ನೆನಪಿಗೆ ಬರುವಂಥವು. ‘ರಾಮಚರಿತ ಮಾನಸ’ ಹಿಂದಿಯಲ್ಲಿ ಪ್ರಸಿದ್ಧವಾದ ಕೃತಿ. ವೆಂಕಾಮಾತ್ಯ ಕವಿ ವಿರಚಿತ ‘ಶ್ರೀಮದ್ರಾಮಾಯಣಂ’ ಜನಸಾಮಾನ್ಯರಲ್ಲಿ ಅಷ್ಟಾಗಿ ಪರಿಚಯವಿಲ್ಲದಿದ್ದರೂ ವಿದ್ವತ್ಪರಂಪರೆಯಲ್ಲಿ ಹೆಸರುಗಳಿಸಿದ ಕೃತಿ. ಜಾನಪದರಲ್ಲಿ ಬೇಕಷ್ಟು ಐತಿಹ್ಯಗಳಿವೆ. ಇವೆಲ್ಲ ಇಲ್ಲಿನ ಚರ್ಚೆಗೆ ಹೊರತು.

ಮಾಸ್ತಿಯವರು 1938ರಲ್ಲಿ ‘ಆದಿಕವಿ ವಾಲ್ಮೀಕಿ’ ಕೃತಿಯನ್ನು ಬರೆದರು. ಶೀರ್ಷಿಕೆಯನ್ನು ಗಮನಿಸಿದರೆ ಇದು ವಾಲ್ಮೀಕಿಯನ್ನು ಕುರಿತು ಬರೆದಂತೆ ಅನ್ನಿಸಿದರೂ ಇದು ನಿಜಾರ್ಥದಲ್ಲಿ ವಾಲ್ಮೀಕಿ ರಾಮಾಯಣದ ಸಾರಾಂಶ ಮತ್ತು ವಿಮರ್ಶೆ. ಕಾವ್ಯದ ಹೊರಗೂ ಒಳಗೂ ಇರುವ ವಾಲ್ಮೀಕಿಯ ಪಾತ್ರದ ಕುರಿತು ಮಾಸ್ತಿಯವರು ವಿವರವಾಗಿ ಹೇಳದಿದ್ದರೂ ಕಾವ್ಯದ ರಚನೆಯ, ಕಥಾಸಂವಿಧಾನದ, ಕಾವ್ಯಾತ್ಮಕತೆಯ, ಪಾತ್ರಗಳ, ಮತ್ತು ಒಟ್ಟಾರೆ ದೃಷ್ಟಿಕೋನದ ಕುರಿತು ತಮ್ಮ ಅಭಿಪ್ರಾಯಗಳನ್ನು ನಿರ್ಮಮವಾಗಿ ಮಂಡಿಸಿದ್ದಾರೆ. ಇದರಲ್ಲಿ ತಾನು ಸಂಪ್ರದಾಯದ, ಪರಂಪರೆಯ ಪರವಾಗಿಯೋ ಭಿನ್ನವಾಗಿಯೋ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅವರು ಮೂಡಿಸಿಕೊಳ್ಳದಿರುವುದು ಅವರ ವೈಶಿಷ್ಟ್ಯ. ಹೀಗಾಗಿ ಅವರ ವಿಶ್ಲೇಷಣೆಯಲ್ಲಿ ವಾದ ಮತ್ತು ವಕೀಲಿಕೆಯಿಲ್ಲ. (ಮಾಸ್ತಿಯವರು ಬರೆದ ಸುಮಾರು ಒಂದು ದಶಕದ ಆನಂತರ ಅಂದರೆ 1944ರಲ್ಲಿ ರೈಟ್ ಆನರಬಲ್ ವಿ.ಎಸ್.ಶ್ರೀನಿವಾಸ ಶಾಸ್ತ್ರಿಯವರು ಇಂಗ್ಲಿಷಿನಲ್ಲಿ ಮಾಡಿದ, ಮತ್ತು ಮುಂದೆ ಕೃತಿಯಾಗಿ ಬಂದ ಉಪನ್ಯಾಸ ಮಾಲಿಕೆಯನ್ನು ಗಮನಿಸಿದರೆ ಮಾಸ್ತಿಯವರ ವಸ್ತುನಿಷ್ಠತೆಯ ಅರಿವಾಗುತ್ತದೆ. ಶ್ರೀನಿವಾಸ ಶಾಸ್ತ್ರಿಗಳು ಪರ-ವಿರೋಧವಿರುವ ವಿವಾದಗಳಲ್ಲಿ ತಾವೂ ಭಾಗವಹಿಸಿ ವಾದಿಸುತ್ತಾರೆ.)

ಮಾಸ್ತಿಯವರು ರಾಮಾಯಣವನ್ನು ಕಾವ್ಯವೆಂದಷ್ಟೇ ಕಂಡಿದ್ದಾರೆ. ಈಗ ಲಭ್ಯವಿರುವ ರಾಮಾಯಣ ಕಾವ್ಯದಲ್ಲಿ ಮೂಲಕಾವ್ಯವೆಷ್ಟು ಮತ್ತು ಪೂರಕ ಪ್ರಕ್ಷಿಪ್ತವೆಷ್ಟು ಎಂಬುದನ್ನು ಅವರು ಅಳೆದಿದ್ದಾರೆ. ಮಾಸ್ತಿಯವರ ದೃಷ್ಟಿಯಲ್ಲಿ ವಾಲ್ಮೀಕಿಯು ರಾಮಾಯಣವನ್ನು ಬರೆದ ಕಾಲದಲ್ಲಿ ಕಾವ್ಯ ಮತ್ತು ಮತ ಬೇರೆ ಎಂಬ ಭಾವನೆಯು ಬಹಳವಾಗಿ ಬೆಳೆದಿರಲಿಲ್ಲ. ಆದರೆ ಇದು ಪಲ್ಲಟವಾದಂತೆ ರಾಮಾಯಣವು ಕಾವ್ಯವಾಗಿಯೇ ಶ್ರೇಷ್ಠವಾಗುವ ಬದಲಿಗೆ ಒಂದು ಮತಗ್ರಂಥವೆಂಬಂತೆ ಪ್ರಸಿದ್ಧಿಯಾಯಿತು. ‘ಉತ್ತಮ ವಸ್ತುಗಳನ್ನು ಪ್ರಬಲರಾದ ಜನರು ತಮ್ಮದೆಂದು ಆಕ್ರಮಿಸುವುದಕ್ಕೆ ಯತ್ನಮಾಡುವುದೊಂದು ವಾಡಿಕೆ. ಇಂಥದೊಂದು ಲೋಭಕ್ಕೆ ಸೆರೆಸಿಕ್ಕಿ ಧರ್ಮಗ್ರಂಥವೆನಿಸಿಕೊಂಡಿರುವ ರಾಮಾಯಣವನ್ನು ಈ ಬಂಧನದಿಂದ ಬಿಡಿಸಿ ಒಂದು ಕಾವ್ಯವೆಂದು ಗಣಿಸುವುದು ನಿಜವಾಗಿ ಅದಕ್ಕೆ ಒಂದು ಸೇವೆಯೆನ್ನಬೇಕು’ ಎನ್ನುತ್ತಾರೆ ಮಾಸ್ತಿ. ಈ ಪ್ರವಾದಿತನದ ಮಾತನ್ನು ಒಪ್ಪಿಕೊಳ್ಳಬೇಕಾದರೆ ಇಂದು ಭಾರತೀಯತೆಯ ಹೆಸರಿನಲ್ಲಿ ಸ್ವಾಮಿವಿವೇಕಾನಂದ, ಭಗತ್‌ಸಿಂಗ್, ಮುಂತಾದವರನ್ನು ಮಾತ್ರವಲ್ಲ ಸ್ವತಃ ಶ್ರೀರಾಮನನ್ನೇ ಧಾರ್ಮಿಕ, ಮತೀಯ, ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡದ್ದನ್ನು ನೋಡಿದರೆ ಸಾಕು. ಪ್ರಾಯಃ ಇಂದಿನ ಭಾರತ ಕಲಿಯಬೇಕಾದ ಪಾಠಗಳನ್ನು ಮಾಸ್ತಿಯವರ ಈ ವಾಕ್ಯಗಳು ಹೇಳುತ್ತವೆ: ‘ಇತಿಹಾಸದ ಪ್ರಸಾರದಲ್ಲಿ ಮತಗಳು ಮೂರು ದಿನಕ್ಕೆ ಕಟ್ಟಿದ ಅರಗಿನ ಮನೆಗಳು. ಅವು ಇಂದಲ್ಲದಿದ್ದರೆ ನಾಳೆ ಉರಿದು ಬೂದಿಯಾಗುವವು. ಧರ್ಮ ಅವುಗಳಲ್ಲಿ ಮಲಗಿದ್ದರೆ ಸುಟ್ಟುಹೋಗುವುದೇ ನಿಜ.’

 ಈ ದೃಷ್ಟಿಯಿಂದ ಯೋಚಿಸುವ ಮಾಸ್ತಿ ತನ್ನ ಕಾಲದಿಂದ ಹೆಚ್ಚಿನ ಅಧುನಿಕರಾಗಿ ಕಾಣುತ್ತಾರೆ. ಅವರ ಪಾಲಿಗೆ ರಾಮಚಂದ್ರನು ಅವತಾರಪುರುಷನಲ್ಲ; ‘ಮನುಷ್ಯನಾಗಿ ಬಂದ ದೇವರು ಎಂದು ತಿಳಿಯುವುದಕ್ಕೆ ಪ್ರತಿಯಾಗಿ ನಡತೆಯಿಂದ ದೇವರಾದ ಮನುಷ್ಯ’. ಇದು ಅರ್ಥವಾಗಬೇಕಾದರೆ ನಿತ್ಯ ಜೀವನದಲ್ಲಿ ‘ಅವನು ದೇವರಂಥ ಮನುಷ್ಯ’ ಎಂದು ಜಾತಿ, ಮತ, ಧರ್ಮಗಳ ಕಟ್ಟಿಲ್ಲದೆ ಬಳಸುವ ಉಕ್ತಿಯನ್ನು ನೆನಪುಮಾಡಿಕೊಳ್ಳಬೇಕು. ಇಷ್ಟೇ ಅಲ್ಲ, ಮಾಸ್ತಿಯವರ ಆಧುನಿಕತೆಯನ್ನು ಮತ್ತು ವಿಮರ್ಶಾಪ್ರಜ್ಞೆಯನ್ನು ಅರಿಯಬೇಕಾದರೆ ಅವರು ವಾಲ್ಮೀಕಿ ರಾಮಾಯಣದ ಬಹುಮುಖ್ಯ ಸೂತ್ರವೆನಿಸಿದ ಕ್ರೌಂಚಮಿಥುನದ ಪ್ರಸಂಗವನ್ನು ದೃಷ್ಟಿಸಿದ ರೀತಿಯನ್ನು ಗಮನಿಸಬೇಕು. ರಾಮಾಯಣದಲ್ಲಿ ನಾರದರು ಬರುವುದು, ಬ್ರಹ್ಮನು ಬಂದು ಮಾತಾಡಿದ್ದು ಇವೆಲ್ಲ ಬರುತ್ತವೆ. ಇಂದಿಗೂ ವಿದ್ವಾಂಸರನೇಕರು ರಾಮನನ್ನು ದಶಾವತಾರದೊಂದು ಭಾಗವಾಗಿಯೇ ಕಂಡು ಭಕ್ತಿಯೊಂದೇ ಉದ್ದೇಶವಾಗಿ ಪವಾಡಸದೃಶವಾಗಿ ವಿವರಿಸುವ ವಾಡಿಕೆಯಿದೆ. ರಾಮಾಯಣವನ್ನು ಓದುವ, ಕೇಳುವ, ನೋಡುವ ಜನರೆೆಲ್ಲ ಕಾಣಿಕೆಡಬ್ಬವನ್ನು ತುಂಬಿಸುವ ಭಕ್ತಾಭಿಮಾನಿಗಳಾಗಿಯೇ ಅವರಿಗೆ ಕಾಣುತ್ತಾರೆ. ಕಾವ್ಯಾಸಕ್ತರಾಗಿ ಅಥವಾ ಜ್ಞಾನಪಿಪಾಸುಗಳಾಗಿ ಅಲ್ಲ. ಆದರೆ ಬೇಡನು ಕ್ರೌಂಚದ್ವಯಗಳಲ್ಲೊಂದನ್ನು ಕೊಂದದ್ದಷ್ಟೇ ನಿಜವಿರಬಹುದೆಂದು ಭಾವಿಸುವ ಮಾಸ್ತಿಯವರು ‘ಮೊದಲ ನಾಲ್ಕು ಸರ್ಗವನ್ನು ಯಾರೋ ಬರೆದಿರಬೇಕು’ ಎಂದು ಹೇಳಿ ಈ ಪ್ರಸಂಗದ ಉದಾತ್ತತೆಯನ್ನು ಮತ್ತು ಮಾನವೀಯತೆಯನ್ನಷ್ಟೇ ಎತ್ತಿಕೊಳ್ಳುತ್ತ ‘ಈ ಸಂಗತಿಯಲ್ಲಿ ಕಾಣಬರುವ ಒಂದೆರಡು ಭಾವಗಳನ್ನು ನಾವು ಅಕ್ಷರಶಃ ವಾಸ್ತವವೆಂದು ಗ್ರಹಿಸಬೇಕಾದದಿಲ್ಲ’ ಎನ್ನುತ್ತಾರೆ.

ಜೀವಿಯ ನೋವು ಮತ್ತು ಪ್ರಪಂಚದ ಎಲ್ಲ ಯಾತನೆಯ ಪ್ರತಿನಿಧಿಯಾಗಿ ಈ ಹಕ್ಕಿಗಳ ಸಾವು-ನೋವನ್ನು ಕಂಡ ಮೇಲೆ ಅದಕ್ಕೆ ರೂಪನ್ನು ಕೊಡುವ ಮಾತಷ್ಟೇ ವಾಲ್ಮೀಕಿಗೆ ಅಗತ್ಯವಿತ್ತು ಎನ್ನುತ್ತಾರೆ ಮಾಸ್ತಿ. ಇದೇ ಸಂದರ್ಭದಲ್ಲಿ ಅವರು ಹೇಳುವ ಕಾವ್ಯಮೀಮಾಂಸೆ ಬಹು ಮುಖ್ಯ. ಮಾಸ್ತಿ ‘ಕವಿಯ ಕೃತಿ ಅವನ ಉದ್ದೇಶ ಎಷ್ಟೋ ಅಷ್ಟು ಫಲವನ್ನು ಸಾಧಿಸಿ ಮುಗಿಯುವುದಿಲ್ಲ. ಅದು ಸರಿಯಾದ ಭಾವನೆಯಿಂದ ಹೊರಟಿದ್ದೇ ಒಂದಾದರೆ ಅವನು ಎಣಿಸದ ಅತ್ಯುನ್ನತ ಫಲಗಳನ್ನು ಅವನಿಗೆ ತಿಳಿಯದಂತೆ ಸಾಧಿಸಬಹುದು’ ಎನ್ನುತ್ತಾರೆ. ಹೀಗಾಗಿ ಅವರಿಗೆ ರಾಮಾಯಣದ ಅನೇಕ ಭಾಗಗಳು (ನ್ಯಾಯವಾಗಿಯೇ) ಪ್ರಕ್ಷಿಪ್ತವಾಗಿ ಕಾಣಿಸಿವೆ. ರಾಮಾಯಣವನ್ನು ವಾಲ್ಮೀಕಿ ಬರೆದ ಕಾಲವನ್ನು ಮಾಸ್ತಿಯವರು ಸಾಂದರ್ಭಿಕವಾಗಿ ವಿವೇಚಿಸಿದ್ದಾರೆ. ಅವರ ದೃಷ್ಟಿಯಲ್ಲಿ ವಾಲ್ಮೀಕಿ ರಾಮಾಯಣವನ್ನು ಬರೆದಾಗ ರಾಮನೇ ದೇಶವನ್ನು ಆಳುತ್ತಿದ್ದ.

ತನ್ನ ದೊರೆಯನ್ನು ನಾಯಕನನ್ನಾಗಿಸಿ ಸಾಹಿತ್ಯ ಸೃಷ್ಟಿ ಮಾಡಿದ ಕವಿಗಳು ಆನಂತರ ಬೇಕಷ್ಟು ಬಂದಿದ್ದಾರೆ. ಪಂಪ, ರನ್ನ ಮುಂತಾದ ಕವಿಗಳೆಲ್ಲ ಈ ವರ್ಗದವರು. ವಾಲ್ಮೀಕಿ ಈ ಪರಂಪರೆಯನ್ನು ಹುಟ್ಟುಹಾಕಿರಬಹುದು. ಮಾಸ್ತಿಯವರ ಪ್ರಕಾರ ಆರು ಕಾಂಡದ ರಾಮಾಯಣವನ್ನು ಹಾಡಿದವರು ಕುಶೀಲವರು. ಇವರನ್ನು ನಂತರದ ಕವಿಗಳು ಕತೆಗೆ ಜೋಡಿಸಿ ಕುಶಲವರನ್ನಾಗಿಸಿದರು. ಇದನ್ನು ಮಾಸ್ತಿ ಕೃತಿಯಿಂದಲೇ ವಿವರಿಸುತ್ತಾರೆ. ಉತ್ತರಕಾಂಡದಲ್ಲಿ ಯಾದವಕುಲದ ವಾಸುದೇವನ ಮಾತು ಬಂದಿದೆಯೆಂಬುದನ್ನು ಮಾಸ್ತಿ ನೆನಪಿಸಿ. ‘ಉತ್ತರಕಾಂಡವನ್ನು ಬರೆದು ವಾಲ್ಮೀಕಿಯ ಕಾವ್ಯಕ್ಕೆ ಸೇರಿಸಿದವರೋ ಅವರ ನಂತರ ಬಂದ ಯಾರೋ ಅದಕ್ಕೆ ವಾಲ್ಮೀಕಿಯ ಬರಹದ ಗೌರವ ದೊರೆಯಬೇಕೆಂಬ ಅಪೇಕ್ಷೆಯಿಂದ ಇದನ್ನು ಸೇರಿಸಿರಬೇಕು’ ಎಂದು ಹೇಳಿ ‘ಉತ್ತರಕಾಂಡ ವಾಲ್ಮೀಕಿಯ ಕೃತಿಯಲ್ಲವೆಂಬ ಮಾತನ್ನು ನಮ್ಮ ಜನ ಶಾಸ್ತ್ರದೃಷ್ಟಿಯಿಂದ ಒಪ್ಪುವುದಿಲ್ಲವಾದರೂ ನಡತೆಯಿಂದ ಸರಿಯೆಂದು ಒಪ್ಪಿದ್ದಾರೆ’ ಎನ್ನುವುದನ್ನೂ ಪ್ರಸ್ತಾವಿಸಿ ‘ಆದ್ದರಿಂದಲೇ ಇಂದಿಗೂ ಏಳನೆಯ ಕಾಂಡವನ್ನು ಯಾರೂ ಪಾರಾಯಣ ಮಾಡುವುದಿಲ್ಲ.’ ಎಂಬ ಸತ್ಯವನ್ನೂ ಉಲ್ಲೇಖಿಸುತ್ತಾರೆ. ಹೀಗೆ ಸತ್ಯದ ಪ್ರತಿಪಾದನೆಯ, ಕಾವ್ಯದ ಶ್ರದ್ಧೆಯ, ಮಡಿಕೆಯಲ್ಲಿ ಸಾಂಪ್ರದಾಯಿಕ ನಂಬಿಕೆಯ ಬದನೆಕಾಯಿ ಬೇಯುವುದಿಲ್ಲವೆಂಬುದನ್ನು ಮಾಸ್ತಿ ಮನವರಿಕೆಮಾಡಿಕೊಡುತ್ತಾರೆ.

ಮಾಸ್ತಿಯವರ ಪಾಲಿಗೆ ಇನ್ನೊಂದು ಮುಖ್ಯ ಸಂಗತಿಯೆಂದರೆ ರಾಮನನ್ನು ವಿಷ್ಣುವಿನ ಅವತಾರವಾಗಿಸಿದ್ದು ಮತ್ತು ವಿಷ್ಣು-ಶಿವರ ನಡುವ ಸ್ಪರ್ಧೆ. ಲಭ್ಯವಿರುವ ರಾಮಾಯಣದಲ್ಲಿ ರಾಮನು ಶಿವನನ್ನು ಆರಾಧಿಸಿದ ಕತೆ ಮತ್ತು ಶಿವನು ರಾಮನನ್ನು ಶ್ರೇಷ್ಠನೆಂದು ಕೊಂಡಾಡಿದ ಪ್ರಸಂಗವು ಸೇರಿಕೊಂಡಿದೆ. ಅವರು ವ್ಯಂಗ್ಯವಾಗಿಯೇ ‘ಶಿವನೂ ವಿಷ್ಣುವೂ ಎರಡು ದೇವರಾದಂದಿನಿಂದ ತಮ್ಮ ಭಕ್ತರ ಪ್ರತಿಷ್ಠೆಯ ಸಲುವಾಗಿ ಕಾಳಗದ ಕಣದಲ್ಲಿಕಾದುತ್ತಲೇ ಇದ್ದಾರೆ; ಇದು ಅವರ ಹಣೆಯ ಬರಹ’ ಎನ್ನುತ್ತಾರೆ. ಮುಂದುವರಿದು, ‘ನಮ್ಮ ದೇಶದ ಕಾವ್ಯಗಳಲ್ಲಿ, ಪುರಾಣಗಳಲ್ಲಿ, ಕಲೆಯಲ್ಲಿ, ಶಾಸ್ತ್ರದಲ್ಲಿ, ಶಿವಭಕ್ತರು ವಿಷ್ಣುವಿನಿಂದಲೂ ವಿಷ್ಣುಭಕ್ತರು ಶಿವನಿಂದಲೂ ತಮ್ಮ ದೇವರ ಮಹಿಮೆಯನ್ನು ಹೊಗಳಿಸಿ ತಮ್ಮ ದೇವರಿಗೆ ಸೇವೆ ಮಾಡಿಸಿ ತಮ್ಮ ದೊಡ್ಡಸ್ತಿಕೆಯನ್ನು ಸಿದ್ಧಾಂತ ಮಾಡುತ್ತ ಬಂದಿರುವುದು ಕಾಣುತ್ತದೆ. ರಾಮಾಯಣ ಇಂಥವರಿಂದ ತಪ್ಪಿಸಿಕೊಳ್ಳಲಾಗಲಿಲ್ಲ’ ಎಂದು ವ್ಯಥೆಪಡುತ್ತಾರೆ.

(ಮುಂದುವರಿಯುತ್ತದೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)