varthabharthi


ಅನುಗಾಲ

ಮಾಸ್ತಿ ಕಂಡ ವಾಲ್ಮೀಕಿ ರಾಮಾಯಣ

ವಾರ್ತಾ ಭಾರತಿ : 20 May, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮಾಸ್ತಿಯವರು ಬರೆದ ಕಾಲದಲ್ಲಿ ರಾಮನ, ರಾಮಾಯಣದ ಕುರಿತು ಇಷ್ಟು ವೈಚಾರಿಕತೆಯನ್ನು ಒಪ್ಪಿಕೊಳ್ಳುವ ಮಂದಿ ಇದ್ದಿರಲಾರರು. ಪ್ರಾಯಃ ಮಾಸ್ತಿಯವರ ಈ ಕೃತಿಯನ್ನು ಇತರ ಆಸ್ತಿಕ ವಿದ್ವಾಂಸರು ಆಕ್ಷೇಪಿಸಿ ಅಲಕ್ಷಿಸಿರಬಹುದು. ಮಾಸ್ತಿಯವರ ಒಟ್ಟು ಜೀವನ ದರ್ಶನವು ಸಾಂಪ್ರದಾಯಿಕವೂ, ಹಿಂದೂರಾಷ್ಟ್ರೀಯವೂ ಎಂದು ವಿಶ್ಲೇಷಿಸಿದ ಮಂದಿ ಆ ಕಾರಣಕ್ಕೇ ಈ ಕೃತಿಯನ್ನು ಗಮನಿಸಿರಲಾರರು. ಬಹುತೇಕ ಮಾಸ್ತಿ ಸಾಹಿತ್ಯ ‘ದರ್ಶನ’ವೆಂದು ಶೀರ್ಷಿಕೆ ಯಿಟ್ಟುಕೊಂಡು ಬಂದ ಕೃತಿಗಳು ತಮಗಿಷ್ಟವಾದ ಅವರ ಕೆಲವು ಕಥೆಗಳನ್ನು ಉಲ್ಲೇಖಿಸಿ ಸಮಾಧಾನಪಟ್ಟದ್ದನ್ನು ಕಾಣುತ್ತೇವೆ.


(ಹಿಂದಿನ ವಾರದಿಂದ ಮುಂದುವರಿದದ್ದು)

ವಾಲ್ಮೀಕಿ ರಾಮಾಯಣವೆಂದು ನಾವು ಉಲ್ಲೇಖಿಸುವ ಕೃತಿಯಲ್ಲಿ ಅನೇಕ ಪ್ರಕ್ಷಿಪ್ತ ಭಾಗಗಳಿವೆಯೆಂದು ಮಾಸ್ತಿಯವರು ಗುರುತಿಸಿದ್ದಾರೆಂದು ಈ ಉದಾಹರಣೆಗಳಿಂದ ತಿಳಿಯಬಹುದು. ಮಾಸ್ತಿಯವರು ಕೃತಿಯ ಒಳಹೊಕ್ಕು ಈ ಭಾಗಗಳನ್ನು ಅನ್ವೇಷಿಸಿದ್ದಾರೆ. ಇಡಿಯ ಉತ್ತರಕಾಂಡವೇ ಪ್ರಕ್ಷಿಪ್ತವೆಂದು ಆರಂಭದಲ್ಲೇ ಹೇಳಿದ ಮಾಸ್ತಿ ಆನಂತರ ಇತರ ಭಾಗಗಳಿಗೂ ಲಗ್ಗೆಯಿಟ್ಟಿದ್ದಾರೆ. ಅವರು ಗುರುತಿಸಿದ ಇಂತಹ ಭಾಗಗಳೆಂದರೆ- ಲಂಕಾ ದಹನ ಮತ್ತು ಆದಿತ್ಯ ಹೃದಯ, ಇವನ್ನು ಕುರಿತು ಅವರು ಮಾಡುವ ಟೀಕೆಗಳು ಅತ್ಯಂತ ಸುಸಂಗತ: (ಲಂಕಾದಹನದ) ‘ಹಿಂದಣ ಭಾಗವನ್ನು ನೋಡಿದರೆ ಇಂತಹ ಸಂದರ್ಭ ಬರತಕ್ಕದ್ದಿಲ್ಲ. ಹನುಮಂತನು ಸೀತೆಯನ್ನು ನೋಡಿಕೊಂಡು ರಹಸ್ಯವಾಗಿ ಹೊರಟುಹೋಗತಕ್ಕದ್ದೇ ಇಲ್ಲಿ ಅವಶ್ಯಕ. ಇಂಥದರಲ್ಲಿ ಇವನು ಊರನ್ನು ಸುಟ್ಟು ಗಲಭೆ ಮಾಡಿ ಎರಡು ತಿಂಗಳ ಕಾಲ ಇನ್ನೂ ಅಲ್ಲಿಯೇ ಇರಬೇಕಾದ ಸೀತಾದೇವಿಯನ್ನು ಸಂದಿಗ್ಧ ಸ್ಥಿತಿಯಲ್ಲಿ ಬಿಟ್ಟುಹೋದನೆನ್ನುವುದು ಅವಿವೇಕವಾಗಿ ಕಾಣುತ್ತದೆ. ಇಂಥ ಮಾತನ್ನು ಕವಿ ಹೇಳುವುದು ಸಾಧ್ಯವಿಲ್ಲ; ಹನುಮಂತನು ಲಂಕೆಗೆ ಹೋಗಿ ಸುಮ್ಮನೆ ಬರುವುದುಂಟೇ ಎಂದು ಯಾರೋ ಅದನ್ನು ಅವನಿಂದ ಸುಡಿಸಿ ತಮ್ಮ ಚಪಲವನ್ನು ಹರಸಿಕೊಂಡಿರಬೇಕು.’ (ಇಲ್ಲಿ ಮಾಸ್ತಿ ಬಳಸಿದ ‘ಚಪಲ’ ಎಂಬ ಪದದ ವ್ಯಂಗ್ಯ ಮಹತ್ವದ್ದು.)

ಹಾಗೆಯೇ ಆದಿತ್ಯ ಹೃದಯದ ಪ್ರಸಂಗವು ಪ್ರಕ್ಷಿಪ್ತವೆಂದು ಹೇಳಲು ಅವರು ಸಮರ್ಥನೆಯನ್ನು ನೀಡುತ್ತಾರೆ. ಅಧ್ಯಯನ ಶೀಲರಿಗೆ ಕಾವ್ಯದಲ್ಲಿ ಈ ಪ್ರಸಂಗವು ಕಥೆಗೆ ಹೊಂದಿಕೆಯಾಗುವುದಿಲ್ಲವೆಂಬುದು ಅರಿವಾಗುತ್ತದೆ. (ಭಕ್ತಿ ಮತ್ತು ಪ್ರೀತಿ ಬಹುತೇಕ ಕುರುಡು ಅಥವಾ ಸಮೀಪದೃಷ್ಟಿದೋಷದ್ದು!) ಈ ಭಾಗದ ರಾಮನ ಚಿಂತೆಗೆ ಕಾರಣವೂ ಇಲ್ಲ. ಮಾಸ್ತಿ ಹೇಳುವಂತೆ ‘ಆದಿತ್ಯ ಹೃದಯ ಎಷ್ಟು ದೊಡ್ಡದೆಂದು ತೋರಿಸುವುದಕ್ಕಾಗಿ ಇಲ್ಲಿ ರಾಮನಿಗೆ ಇಲ್ಲದ ಶ್ರಾಂತಿಯನ್ನೂ ಚಿಂತೆಯನ್ನೂ ಆರೋಪಿಸಿರುವಂತೆ ಕಾಣುತ್ತದೆ. ಶ್ರಾಂತಿಚಿಂತೆಗಳಿಂದ ಕೂಡಿದ್ದ ರಾಮನು ಅಗಸ್ತ್ಯನಿಂದ ಆದಿತ್ಯಹೃದಯವನ್ನು ಉಪದೇಶಮಾಡಿಸಿಕೊಂಡು ಸಮರೋನ್ಮುಖ ನಾದನು ಎಂದು ತೋರಿಸುವುದಕ್ಕಾಗಿ ಸೌರಮತದ ಮಹನೀಯರು ಯಾರೋ ತಮ್ಮ ಮತ ಪ್ರಚಾರಕ್ಕೆ ಬಂದ ಕಾಲದಲ್ಲಿ ಅದಕ್ಕೆ ಪ್ರಶಸ್ತಿಯನ್ನು ಸಂಪಾದಿಸುವ ಉದ್ದೇಶದಿಂದ ಈ ಸರ್ಗವನ್ನು ಇಲ್ಲಿ ಸೇರಿಸಿರಬೇಕು.’

ಪ್ರಾಯಃ ಇತರ ಕೆಲವಾದರೂ ಪ್ರಸಂಗಗಳನ್ನು ಮಾಸ್ತಿ ಗುರುತಿಸಿದ್ದರೂ ಕೃತಿಯ ಗಾತ್ರ-ಪಾತ್ರ ಮಿತಿಯಲ್ಲಿ ಕಾಣಿಸಿರಲಾರರು. ಇದನ್ನು ಅವರ ಮುಂದೆ ಹೇಳುವ ಈ ವಾಕ್ಯಗಳಿಂದ ಗುರುತಿಸಬಹುದು: ‘ಹೀಗೆ ರಾಮಾಯಣದಲ್ಲಿ ಬರಬರುತ್ತ, ಅಲ್ಲೆರಡು ಮಾತು, ಇಲ್ಲೊಂದು ಸರ್ಗ, ಇನ್ನೊಂದು ಕಡೆ ಒಂದು ಕಥಾ ಸಂದರ್ಭ, ಹೀಗೆ ಇತರರು, ವಿಷಯವನ್ನು ಸೇರಿಸಿ ವಾಲ್ಮೀಕಿ ಬರೆದ ಕಾವ್ಯವನ್ನು ಹಿಗ್ಗಿಸಿದ್ದಾರೆ. ಆದರೆ ಮೊತ್ತದಲ್ಲಿ ಇಂಥ ಪ್ರಕ್ಷೇಪಣ ಹೊರಕ್ಕೆ ಕಾಣುತ್ತದೆ, ಒಳಗೆ ಬೆರೆತಿಲ್ಲ; ವಾಲ್ಮೀಕಿಯ ಕವಿತೆಯ ಯೋಗ್ಯತೆಯನ್ನು ಕಡಿಮೆಮಾಡಿಲ್ಲ.’ ಮಾಸ್ತಿ ಈ ಪ್ರಸಂಗಗಳನ್ನಲ್ಲದೆ ಋಷ್ಯಶೃಂಗನ ಆಖ್ಯಾನ, ಭರದ್ವಾಜಾಶ್ರಮದಲ್ಲಿ ನಡೆದ ಸಂಗತಿ, ಇವುಗಳ ಕುರಿತೂ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಜಾಬಾಲಿಯ ಪ್ರಸಂಗವು ವೈದಿಕತೆ ಮತ್ತು ಬೌದ್ಧ ಧರ್ಮದ ನಡುವಣ ವಾದದಂತೆ ಕಾಣುವುದರಿಂದ ಅದು ಪ್ರಕ್ಷಿಪ್ತವೆಂದೇ ಅವರು ತಿಳಿಯುತ್ತಾರೆ.

ಮಾಸ್ತಿಯವರು ಬರೆದ ಕಾಲದಲ್ಲಿ ರಾಮನ, ರಾಮಾಯಣದ ಕುರಿತು ಇಷ್ಟು ವೈಚಾರಿಕತೆಯನ್ನು ಒಪ್ಪಿಕೊಳ್ಳುವ ಮಂದಿ ಇದ್ದಿರಲಾರರು. ಪ್ರಾಯಃ ಮಾಸ್ತಿಯವರ ಈ ಕೃತಿಯನ್ನು ಇತರ ಆಸ್ತಿಕ ವಿದ್ವಾಂಸರು ಆಕ್ಷೇಪಿಸಿ ಅಲಕ್ಷಿಸಿರಬಹುದು. ಮಾಸ್ತಿಯವರ ಒಟ್ಟು ಜೀವನ ದರ್ಶನವು ಸಾಂಪ್ರದಾಯಿಕವೂ, ಹಿಂದೂರಾಷ್ಟ್ರೀಯವೂ ಎಂದು ವಿಶ್ಲೇಷಿಸಿದ ಮಂದಿ ಆ ಕಾರಣಕ್ಕೇ ಈ ಕೃತಿಯನ್ನು ಗಮನಿಸಿರಲಾರರು. ಬಹುತೇಕ ಮಾಸ್ತಿ ಸಾಹಿತ್ಯ ‘ದರ್ಶನ’ವೆಂದು ಶೀರ್ಷಿಕೆಯಿಟ್ಟುಕೊಂಡು ಬಂದ ಕೃತಿಗಳು ತಮಗಿಷ್ಟವಾದ ಅವರ ಕೆಲವು ಕಥೆಗಳನ್ನು ಉಲ್ಲೇಖಿಸಿ ಸಮಾಧಾನಪಟ್ಟದ್ದನ್ನು ಕಾಣುತ್ತೇವೆ. ‘ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ’ ವೆಂಬ ಕೃತಿಯನ್ನು ನೋಡಿದರೆ ಅಲ್ಲಿ ‘ಸಮಗ್ರ’ ಕೃತಿಗಳ ಉಲ್ಲೇಖವೇ ಇಲ್ಲ; ಉಲ್ಲೇಖಿತ ಕೃತಿಗಳ ಕುರಿತೂ ‘ದರ್ಶನ’ವಾಗುವಂತಹ ಒಳನೋಟಗಳೂ ಕೆಲವೇ ಇವೆ. ಇವು ಕನಕ ದರ್ಶನವೂ ಅಲ್ಲ. ಅಂಧ-ಗಜನ್ಯಾಯದ ಸುರುಳಿಗಳು.

ಹಾಗೆ ನೋಡಿದರೆ ವಿ.ಎಂ. ಇನಾಂದಾರರು ಬರೆದ ‘ಮಾಸ್ತಿ ಕಾದಂಬರಿ ದರ್ಶನ’ವೆಂಬ ಕೃತಿಯು ಮಿತಿಯನ್ನಿಟ್ಟುಕೊಂಡೇ ಅವರ ಕಾದಂಬರಿಗಳನ್ನಾದರೂ ಮೌಲ್ಯಮಾಪನಕ್ಕೊಳಪಡಿಸಿದೆ ಮತ್ತು ಅವುಗಳ ಮೂಲಕ ಮಾಸ್ತಿಯವರ ಸಣ್ಣ-ದೊಡ್ಡ ಕಾದಂಬರಿಗಳಲ್ಲಿ ಕಂಡ ಜೀವನ ದರ್ಶನವನ್ನು ದಾಖಲಿಸಿದೆ. ಕಾವ್ಯದ ಒಟ್ಟು ನೈಜತೆಯನ್ನು, ಕರ್ತೃತ್ವವನ್ನು ಕುರಿತು ಇಷ್ಟನ್ನು ಹೇಳಿದ ಮೇಲೆ, ವಾಲ್ಮೀಕಿಯೇ ಬರೆದದ್ದು ಎಂದು ತಾವು ಗುರುತಿಸಿದ ಆರು ಕಾಂಡಗಳ ಆಶಯವನ್ನು, ರಚನಾವಿನ್ಯಾಸವನ್ನು ಮಾಸ್ತಿ ವಿವೇಚಿಸುತ್ತಾರೆ. ಹೇಗೆ ವಾಲ್ಮೀಕಿಯು ರಾಮನ ಚರಿತ್ರೆಯನ್ನು ಬರೆಯುವುದೇ ತನ್ನ ಮೂಲ ಉದ್ದೇಶವೆಂದು ಬಗೆದನೆಂಬುದಕ್ಕೆ ಇಲ್ಲಿ ಸೂಚನೆಗಳು ಸಿಗುತ್ತವೆ. ಮಾಸ್ತಿಯವರ ವಿಸ್ತೃತ ಅನ್ಯ ಓದು ಇಲ್ಲಿ ಅವರಿಗೆ ನೆರವಾಗಿದೆ. ಅವರು ರಾಮಾಯಣ ಮತ್ತು ವಿಶ್ವದ ಇತರ ಮೌಲಿಕ ಕಾವ್ಯಗಳನ್ನು ಹೋಲಿಸಿ ಸಾಮ್ಯತೆಯನ್ನೂ ಭಿನ್ನತೆಗಳನ್ನೂ ಹೇಳಿದ್ದಾರೆ. ಕನ್ನಡದ ಅನೇಕ ಸಾಂಪ್ರದಾಯಿಕ ವಿದ್ವಾಂಸರಂತೆ ಮಾಸ್ತಿಯವರೂ ಹಣೆಗೆ ನಾಮ ಧರಿಸಿ ತಮ್ಮ ನಿತ್ಯಾಚಾರಗಳನ್ನು ಅನುಸರಿಸುವವರೇ. ಆದರೆ ಉಳಿದ ವಿದ್ವಾಂಸರಲ್ಲಿ ಈ ನಿಯಮನಿಷ್ಠೆಗಳು ಅವರ ವಿದ್ವತ್ತನ್ನು ಮತ್ತು ಧೋರಣೆಯನ್ನು ಪ್ರಭಾವಿಸಿವೆ, ಮತ್ತು ಕೆಲವೆಡೆಯಾದರೂ ನುಂಗಿಹಾಕಿವೆ; ಅಂಥವರು ರಾಮಾಯಣ-ಭಾರತ ಮತ್ತಿತರ ಭಾರತೀಯ ಕೃತಿಗಳ ಸಮೀಕ್ಷೆಗಿಳಿದರೆಂದರೆ ಅವನ್ನು ಏಕಪಕ್ಷೀಯವಾಗಿ ವಿಶ್ವದ ಸಾರ್ವಕಾಲಿಕ ಏಕೈಕ ಶ್ರೇಷ್ಠ ಕೃತಿಗಳೆಂದು ಬಣ್ಣಿಸುತ್ತಾರೆ.

ಮಾಸ್ತಿ ಹಾಗಲ್ಲ. ಅವರ ದೃಷ್ಟಿ ಎಲ್ಲ ಪ್ರತಿಭೆಗಳನ್ನು ಪಾಂಡಿತ್ಯಗಳನ್ನು ಏಕಪ್ರಕಾರವಾಗಿ ನೋಡುವಷ್ಟು, ಗೌರವಿಸುವಷ್ಟು ವಿಶಾಲವಾದದ್ದು. ಬಾಲಕಾಂಡದ ಬಗ್ಗೆ ಮಾಸ್ತಿ ಅಷ್ಟಾಗಿ ಬರೆದಿಲ್ಲ. ಬಾಲಲೀಲೆಗಳ ಬಗ್ಗೆ ವಾಲ್ಮೀಕಿ ಬರೆದಿಲ್ಲವೆನ್ನುವುದನ್ನು ಅವರು ಇದೇ ಕೃತಿಯ ಇನ್ನೊಂದು ಸಂದರ್ಭದಲ್ಲಿ ಹೇಳುತ್ತಾರೆ. ಅಯೋಧ್ಯಾಕಾಂಡ ರಾಮನ ವನವಾಸವನ್ನು ನಿರ್ಧರಿಸಿ ರಾಮಾಯಣವೆಂಬ ವೃಕ್ಷಕ್ಕೆ ಆಧಾರವಾಗಿರುವ ಕಾಂಡ. (ರಾಮಾಯಣವೆಂದರೆ ರಾಮಪಯಣ!) ವಾಲ್ಮೀಕಿಯು ವಾಚ್ಯವಾಗಿ ಹೇಳದೆಯೂ ಮಾಸ್ತಿಯವರು ಗಮನಿಸಿದ ಒಂದು ಸಂಬಂಧವೆಂದರೆ ಕೌಸಲ್ಯೆ-ಕೈಕೆಯರ ನಡುವಣ ವಿರಸಭಾವ; ಸಾಮರಸ್ಯದ ಅಭಾವ. ಇದಕ್ಕೆ ಅವರು ಸಾಂಸಾರಿಕ ದೃಷ್ಟಿಕೋನಗಳನ್ನು, ಮತ್ತು ಅರಸೊತ್ತಿಗೆಯ ಕಟ್ಟುಪಾಡುಗಳನ್ನು, ಪಟ್ಟದ ಹಾಗೂ ಪ್ರೀತಿಯ ಸಂವೇದನೆಗಳನ್ನು ಗುರಿಯಾಗಿಸುತ್ತಾರೆ. ರಾಮಾಯಣದ ಬಹುಪಾಲು ಎಲ್ಲ ಪಾತ್ರಗಳನ್ನೂ ಮಾಸ್ತಿ ವಿಮರ್ಶಿಸಿದ್ದಾರೆ. ಆದರೆ ಇವೆಲ್ಲವೂ ವಾಲ್ಮೀಕಿ ಎಂಬ ಚೌಕಟ್ಟಿನ ಕಿಟಿಕಿಯ ಮೂಲಕ. ಊರ್ಮಿಳೆಯ ಒಂಟಿತನದ, ವಿರಹದ, ತ್ಯಾಗದ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿಲ್ಲವೆಂಬುದನ್ನು ಮಾಸ್ತಿ ಉಲ್ಲೇಖಿಸುತ್ತಾರೆ. (ಡಾಪ್ರಧಾನ್‌ಗುರುದತ್ತ ಮತ್ತು ಡಾಮೇ.ರಾಜೇಶ್ವರಯ್ಯ ಇವರು ತಮ್ಮ ‘ಊರ್ಮಿಳಾ- ಔತ್ತರೇಯ ವಿರಹಿಣಿ-ದಾಕ್ಷಿಣಾತ್ಯ ತಪಸ್ವಿನಿ’ ಎಂಬ ವಿಮರ್ಶಾಕೃತಿಯಲ್ಲೂ ಈ ವಿಚಾರವನ್ನು ಗಮನಿಸಿದ್ದಾರೆ.) ಮಾಸ್ತಿ ಕಥೆಯ ಮುಖ್ಯಭಾಗಗಳನ್ನು ವಿವರಿಸುತ್ತಾರೆ. ಅದರಲ್ಲೂ ಮಾನವ/ಮಾನವೀಯ ಸಂಬಂಧಗಳನ್ನು ವಿಶ್ಲೇಷಿಸುವುದು ಮಾಸ್ತಿಯವರಿಗೆ ತಮ್ಮ ಕತೆಗಳಲ್ಲಿ ಮಾತ್ರವಲ್ಲ, ವಿಮರ್ಶೆಗಳಲ್ಲೂ ಪ್ರೀತಿಯೆಂಬುದು ಇಲ್ಲಿ ಕಾಣುತ್ತದೆ.

ಕೌಸಲ್ಯೆ ರಾಮನಾಗಮನವಾದೊಡನೆ ಅವನನ್ನು ‘ಕುಳಿತುಕೋ ಊಟಮಾಡು’ ಎಂದು ಹೇಳುವುದು ಮಾಸ್ತಿಯವರಿಗೆ ಮುಖ್ಯವಾಗುತ್ತದೆ. ‘ಊರಿಗೆ ಅರಸನಾದರು ತಾಯಿಗೆ ಮಗ’ ಎಂಬ ನಾಣ್ಣುಡಿಯಂತೆ ಇಲ್ಲ ರಾಜ್ಯಾಭಿಷೇಕಗೊಳ್ಳುವ ರಾಮ ಕೌಸಲ್ಯೆಗೆ ಮಗ. ‘ವಾಲ್ಮೀಕಿಯ ಜೀವನವಿಜ್ಞಾನ ಇಂತಹ ಸಂದರ್ಭದಲ್ಲಿ, ಇಂತಹ ಸಣ್ಣ ವಿಷಯದಲ್ಲಿ, ಪರಿಪೂರ್ಣವಾಗಿ ಬೆಳಗುತ್ತದೆ’ ಎನ್ನುತ್ತಾರೆ ಮಾಸ್ತಿ. ಅವರು ಗುರುತಿಸುವ ಇನ್ನೊಂದು ಮಹತ್ವದ ವಿಚಾರವೆಂದರೆ ‘ರಾಮನನ್ನು ಕಾಡಿಗೆ ಅಟ್ಟುತ್ತಿದ್ದದ್ದು ಕೈಕಯಿಯೂ ಅಲ್ಲ, ದಶರಥನೂ ಅಲ್ಲ; ರಾಮನಲ್ಲಿಯೇ ಇದ್ದ ಧರ್ಮವಿವೇಚನೆ’; ಇನ್ನೂ ಆಳಕ್ಕಿಳಿದು ‘ಕತ್ತಿಯ ಅಲಗಿನಂತೆ ಸೂಕ್ಷ್ಮವಾದ ಧರ್ಮದ ಪಥದಲ್ಲಿ ರಾಮನು ಎಡೆತಪ್ಪದೆ ನಡೆಯಲಪೇಕ್ಷಿಸಿದನು. ಆ ಪಥ ಕತ್ತಿಯ ಅಲಗಿನಂತೆ ಹರಿತವಾದದ್ದೂ ಹೌದು. ಉಳಿದವರಿಗೆ ಆ ಪಥ ಇಷ್ಟು ಹರಿತವೆಂದು ಕಂಡಿತು; ಇಷ್ಟು ಸೂಕ್ಷ್ಮವೆಂದು ಕಾಣದೆಹೋಯಿತು.’

‘ಹರಿತ’ ಮತ್ತು ‘ಸೂಕ್ಷ್ಮ’ ಎಂಬೀ ಎರಡು ಪದಗಳ ನಡುವಣ ಸೂಕ್ಷ್ಮ ಅಂತರವನ್ನು ಮಾಸ್ತಿ ಗ್ರಹಿಸಿದ್ದಾರೆ. ವಾಲ್ಮೀಕಿ ಬರೆಯುವ ‘ಎಲ್ಲಕ್ಕಿಂತ ಧರ್ಮ ಹಿರಿದು. ಧರ್ಮದಲ್ಲಿ ಸತ್ಯ ಮುಖ್ಯ.’ ಎಂಬುದು ಮಾಸ್ತಿಯವರ ಮುಖ್ಯ ಚಿಂತನೆ. ಇದು ಎಲ್ಲ ಜಾತಿ-ಮತ-ಧರ್ಮಗಳನ್ನು ಮೀರಿದ ಚಿಂತನೆ. ಪ್ರಾಯಃ ಇದು ಮಾಸ್ತಿಯವರಿಗೆ ಆರೋಪಿತವಾದ ಮತ್ತು ಅವರೇ ಒಂದೆಡೆ ಒಪ್ಪಿದ ‘ಹಿಂದೂ ರಾಷ್ಟ್ರೀಯತೆ’ಯನ್ನು ಮೀರಿದ ವಿಶ್ವವ್ಯಾಪಿ ಮಾನವತಾವಾದ. ವಾಲ್ಮೀಕಿಯ ಮಾನವಸ್ವಭಾವಪರಿಜ್ಞಾನ ಮಾಸ್ತಿ ಚಿಂತನಕ್ಕೆ ಹೊಂದಿಕೆಯಾಗುತ್ತದೆ. ಅಯೋಧ್ಯಾಕಾಂಡದ ಹೊರತಾಗಿ ಮಾಸ್ತಿಯವರು ಈ ಕೃತಿಯಲ್ಲಿ ಉಳಿದ ಕಾಂಡಗಳನ್ನು ಪ್ರತ್ಯೇಕವಾಗಿ ನಿರೂಪಿಸಿಲ್ಲ.

ಅವರ ಪ್ರಕಾರ ‘ಅಯೋಧ್ಯಾಕಾಂಡವು ಕಥನಾರ್ಹವಾದ ವಿಷಯಗಳಿಂದ ತುಂಬಿದೆ’. ನಂತರ ಅವರು ರಾಮಾಯಣದ ಕಥೆ ಮತ್ತು ಪಾತ್ರಗಳನ್ನು ಪರಿಶೀಲಿಸುತ್ತಾರೆ. ದಶರಥ, ಕೌಸಲ್ಯೆ, ಕೈಕಯಿ, ಸುಮಿತ್ರೆ, ಈ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸುತ್ತಾರೆ. ಕೌಸಲ್ಯೆಯ ಪಾತ್ರವನ್ನು ವಿವರಿಸಿ ಕೊನೆಗೆ ಅವರು ಉಪಸಂಹರಿಸುವುದು ಈ ವಾಕ್ಯಗಳಲ್ಲಿ: ‘ರಾಮನ ತಾಯಿ ಎಲ್ಲ ತಾಯಂತೆ ಹೆಣ್ಣು. ಆದರೆ ರಾಮನನ್ನು ಹೆತ್ತ ಹೆಣ್ಣು.’ ಎಷ್ಟು ಅರ್ಥಗರ್ಭಿತ! ಎಲ್ಲಿ ಬೇಕೋ ಅಲ್ಲಿ ಪ್ರಸಂಗಗಳನ್ನು ವಿವರಿಸುತ್ತಾರೆ. ಅದನ್ನು ಅವರು ಹೇಳುವುದು ಹೀಗೆ: ‘..ನಮಗೆ ಬೇಕಾಗಿರುವುದು ರಾಮಾಯಣದ ಕಥೆಯಲ್ಲ; ಅದನ್ನು ವಾಲ್ಮೀಕಿ ಹೇಳುವ ರೀತಿ.’ ಮಹಾಕಾವ್ಯದ ಪದ್ಧತಿಯನುಸಾರ ಕಥೆಯನ್ನು ಹೇಗೆ ವಿಸ್ತರಿಸಲಾಯಿತು ಮತ್ತು ಅದರಲ್ಲಿ ವಿವರಗಳು ಹೇಗೆ ಸೇರಿಕೊಳ್ಳುತ್ತವೆಯೆಂಬುದನ್ನು ಅವರು ಸೋದಾಹರಣವಾಗಿ ಹೇಳುತ್ತಾರೆ: ‘ಅದರ ಒಂದೊಂದು ಹೆಜ್ಜೆಯೂ ಕೊನೆಯಷ್ಟೇ ಮುಖ್ಯ. ಮಹಾಕಾವ್ಯದಲ್ಲಿ ಕಾವ್ಯಸುಖ ಇರುವುದು ಕಥೆ ಕೊನೆಗೆ ಮುಟ್ಟುವುದರಿಂದ ಅಲ್ಲ.’ ಹಾಗೆಯೇ ಸಾಂದರ್ಭಿಕವಾಗಿ ಅವರು ಮಹಾಭಾರತದ ಭೂಮಿಕೆಯನ್ನು, ಪ್ರಸ್ತುತತೆಯನ್ನು ಕೆಲವೇ ವಾಕ್ಯಗಳಲ್ಲಿ ಹೇಳುವ ಮೂಲಕ ಅದಕ್ಕೂ ರಾಮಾಯಣಕ್ಕೂ ಇರುವ ವ್ಯತ್ಯಾಸ, ವೈದೃಶ್ಯಗಳನ್ನು ಸೂಚಿಸುತ್ತಾರೆ: ‘ಭಾರತದ ಕಥೆ ಒಂದು ಕಥೆಯಲ್ಲ; ಒಂದು ಜೀವನದ ಅಥವಾ ಸಂಸಾರದ ಹತ್ತು ದಿವಸದ ಚರಿತ್ರೆಯಲ್ಲ. ಅದರ ವಿಸ್ತಾರ ಬಹುಮಟ್ಟಿಗೆ ಉಪಕಥೆಗಳಿಂದ ಬಂದಿರತಕ್ಕದ್ದು. ಮುಖ್ಯ ಕಥೆಯ ವಿಸ್ತಾರವಾದರೂ ಅದರ ಇತಿಹಾಸ ಸ್ವಭಾವದಿಂದ ಬಂದಿರತಕ್ಕದ್ದು. ಎಂದರೆ ಭಾರತ ಗ್ರಂಥದ ವಸ್ತು. ಮನುಷ್ಯನ ಜೀವನದ ಚಿತ್ರವಲ್ಲ. ಒಂದು ರಾಷ್ಟ್ರದ ಜೀವನದ ಚಿತ್ರ.’

ಮುಂದಣ ಜೀವನ ಚಿತ್ರಗಳು ಎಂಬ ಭಾಗದಲ್ಲಿ ಸೀತಾಪಹರಣ, ಹನುಮಂತನ ದೌತ್ಯ, ಅಗ್ನಿಪ್ರವೇಶದ ಕಥೆಗಳಿಗೆ ಮಾಸ್ತಿ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಕವಿವಾಲ್ಮೀಕಿ ನೀಡಿದ ಸಮರ್ಥನೆಗಳ ವಿನಃ ಮಾಸ್ತಿ ತಮ್ಮ ವಾದವನ್ನು ಹೂಡುವುದಿಲ್ಲ. ಹಾಗೆಯೇ ಅಯೋಧ್ಯಾಕಾಂಡದ ಸಂದರ್ಭದಲ್ಲಿ ಮಾಡಿದಂತೆ ಇಲ್ಲಿ ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ, ರಾವಣ ಇವರ ಪಾತ್ರ ಪರಿಶೀಲನವಿದೆ. ರಾಮನ ಪಾತ್ರ ಪರಿಶೀಲನದಲ್ಲಿ ಧರ್ಮದ ಸೂಕ್ಷ್ಮ ವ್ಯಾಖ್ಯಾನವಿದೆ. ಇಲ್ಲಿ ಮಾಸ್ತಿಯವರು ಸೂಚಿಸುವ ‘ಧರ್ಮ’ವು ಜಾತಿ-ಮತಗಳಿಗೆ ಸಂಬಂಧಿಸಿದ್ದಲ್ಲ. ಅದು ಬದುಕಿಗೆ ಸಂಬಂಧಿಸಿದ್ದು; ಮನುಷ್ಯಧರ್ಮ. ‘ಧರ್ಮ ಮುಖ್ಯ; ಅದನ್ನು ಸಾಧಿಸಬೇಕು; ಅದರಿಂದ ಸುಖವೂ ಬಂದರೆ ಅದನ್ನು ಅನುಭವಿಸಬಹುದು; ಆದರೆ ಧರ್ಮವನ್ನು ಬಿಟ್ಟು ಸುಖಕ್ಕೆ ಅಶಿಸಬಾರದು. ಯಾವುದಾದರೂ ಸಂದರ್ಭದಲ್ಲಿ ದಾರಿ ಯಾವುದು ಎಂದು ನಿರ್ಧರಿಸಬೇಕಾದಾಗ ಇವುಗಳಲ್ಲಿ ಧರ್ಮದ ದಾರಿ ಯಾವುದೆಂದು ಕೇಳಬೇಕು. ಇದೂ ಧರ್ಮವೇ, ಅದೂ ಧರ್ಮವೇ ಎಂದು ಕಂಡಾಗ, ಇನ್ನೊಬ್ಬರ ಧರ್ಮ ಯಾವುದು ಎಂದು ಕೇಳುವುದಕ್ಕೆ ಪ್ರತಿಯಾಗಿ, ನನ್ನ ಧರ್ಮ ಯಾವುದು ಎಂದು ತಿಳಿದು ಅದನ್ನು ಮಾಡಬೇಕು.

ಆ ಇನ್ನೊಬ್ಬರ ಧರ್ಮವನ್ನೂ ತಮ್ಮ ಧರ್ಮವನ್ನೂ ನಿರ್ಣಯಿಸುವುದರಲ್ಲಿ ತನಗೆ ಯಾವುದರಲ್ಲಿ ಸುಖವೆನ್ನುವುದರಿಂದ ನಿರ್ಣಯ ಆ ಕಡೆಗೆ ಹೋಗದಂತೆ ಎಚ್ಚರದಿಂದ ಇರಬೇಕು’. ಪ್ರಾಯಃ ಜಾತಿ-ಮತ ಎಂದು ಇಂದು ವ್ಯಾಖ್ಯಾನಗೊಳ್ಳುವ ‘ಧರ್ಮ’ಕ್ಕೂ ಇದೇ ಮಾನದಂಡ ಅವಶ್ಯಕ. ಮಾಸ್ತಿಯವರ ಈ ಜೀವನದೃಷ್ಟಿಯನ್ನಿರಿಸಿಕೊಂಡರೆ ಮತೀಯ ಕಲಹಗಳುಂಟಾಗಲಾರವು ಮತ್ತು ರಾಜಕಾರಣವು ಲಾಭದಾಯಕ ಉದ್ದಿಮೆಯಾಗಲಾರದು. ಅಯೋಧ್ಯೆಯನ್ನು ಬಿಟ್ಟುಹೋದ ನಂತರ ರಾಮ-ಸೀತೆ-ಲಕ್ಷ್ಮಣರ ಸಂಕಟವನ್ನು ಹೇಳುತ್ತ ಸುಮಂತ್ರನು ಎಲ್ಲವನ್ನೂ ವಿವರಿಸಿ ಕೊನೆಗೆ ಸೀತೆಯನ್ನು ಉಲ್ಲೇಖಿಸಿ ಆಕೆ ಕೋಸಲದ ಎಲ್ಲೆಯಲ್ಲಿ ನಿಂತು ಅಯೋಧ್ಯೆಯ ಕಡೆಗೆ ನೋಡುತ್ತ ಮೌನದಿಂದ ಕಣ್ಣೀರು ಸುರಿಸಿದಳು ಎನ್ನುವುದರ ಕುರಿತು ಮಾಸ್ತಿಯವರು ಅನನ್ಯವಾದ ರೀತಿಯಲ್ಲಿ ‘ವಾಲ್ಮೀಕಿಯ ಈ ಮೂರ್ತಿಶಿಲ್ಪ ಈ ಗಂಭೀರ ಸಂದರ್ಭದಲ್ಲಿ ಮಾತು ಸೋತ ಕಡೆ ಮೌನದಿಂದ ಅದರ ಕೆಲಸವನ್ನು ಸಾಧಿಸುತ್ತದೆ’ ಎಂದಿದ್ದಾರೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)