ಕರ್ನಾಟಕ
ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ರಾತ್ರಿ ಬಸ್ ಸಂಚಾರ ಆರಂಭ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಬಳ್ಳಾರಿ, ಮೇ 22: ರಾಜ್ಯದ ಕೆಲವೆಡೆ ಈಗಾಗಲೇ ರಾತ್ರಿ ವೇಳೆ ಕೆಎಸ್ಸಾರ್ಟಿಸಿ ಬಸ್ ಸಂಚಾರಗಳು ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ರಾಜ್ಯದಾದ್ಯಂತ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆ ಬಸ್ಗಳನ್ನು ಓಡಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಶುಕ್ರವಾರ ಹೊಸಪೇಟೆ ನಗರದಲ್ಲಿ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30ರಂದು ಕೇಂದ್ರದ ನೂತನ ಮಾರ್ಗಸೂಚಿ ಬರಲಿದ್ದು, ಅದನ್ನು ನೋಡಿಕೊಂಡು ರಾತ್ರಿ ಬಸ್ ಸಂಚಾರಕ್ಕೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.
ಸರಕಾರಿ ನೌಕರರಿಗೆ ಯಾವುದೇ ನಿವೃತ್ತಿ ವೇತನ ಇಲ್ಲ. ಹೀಗಾಗಿ, ನಮ್ಮ ಇಲಾಖೆಯಲ್ಲಿ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಇಡೀ ರಾಜ್ಯದಲ್ಲೇ ಹೊಸಪೇಟೆ ವಿಭಾಗ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಎಲ್ಲ ವಿಭಾಗಗಳು ನಷ್ಟದಲ್ಲಿದ್ದಾಗ ಹೊಸಪೇಟೆ ವಿಭಾಗ ಲಾಭದ ಹಾದಿಯಲ್ಲಿ ನಡೆಯುತ್ತಿದೆ. ಎಲ್ಲ ಅಧಿಕಾರಿಗಳ ಶ್ರಮದಿಂದ ಇದು ಸಾಧ್ಯವಾಗಿದ್ದು, ಅವರು ಅಭಿನಂದನಾರ್ಹರು. ಜೊತೆಗೆ ನನಗೂ ಈ ವಿಭಾಗದ ಮೇಲೆ ಹೆಮ್ಮೆ ಇದೆ ಎಂದು ತಿಳಿಸಿದರು.
ವಿಭಾಗೀಯ ನಿಯಂತ್ರಣಾದಿಕಾರಿ ಜಿ.ಶೀನಯ್ಯ, ವಿಭಾಗೀಯ ಸಂಚಾರ ಅಧಿಕಾರಿ ಈಶ್ವರಪ್ಪ ಹೊಸಮನಿ, ಭದ್ರತಾ ಅಧಿಕಾರಿ ರಾಜಶೇಖರ್, ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಅಲ್ತಾಫ್ ಹುಸೇನ್, ಡಿಪೊ ಅಧಿಕಾರಿ ನೀಲ್ಲಪ್ಪ ಹಾಜರಿದ್ದರು.
ಆಟೋ ಚಾಲಕರ ಖಾತೆಗೆ ಹಣ ಜಮೆ
ಆಟೊ ಚಾಲಕರಿಗೆ ರಾಜ್ಯ ಸರಕಾರ ಘೋಷಿಸಿರುವ ಪರಿಹಾರ ಕೆಲ ಕಾರಣಗಳಿಂದ ನಿಂತಿದ್ದು, ಈಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಎಲ್ಲ ಆಟೊ ಚಾಲಕರಿಗೆ ಯಾವುದೇ ಷರತ್ತಿಲ್ಲದೆ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು.
-ಲಕ್ಷ್ಮಣ ಸವದಿ, ಸಾರಿಗೆ ಸಚಿವ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ