varthabharthi


ರಾಷ್ಟ್ರೀಯ

ಮಾಸ್ಕ್ ಧರಿಸದ ಮಕ್ಕಳು: ವಿವಾದ ಸೃಷ್ಟಿಸಿದ ಬಿಜೆಪಿ ಪ್ರತಿಭಟನೆ

ವಾರ್ತಾ ಭಾರತಿ : 22 May, 2020

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ರಾಜ್ಯ ಸರ್ಕಾರ ನಿಭಾಯಿಸಿದ ಬಗ್ಗೆ ವಿರೋಧ ಪಕ್ಷವಾದ ಬಿಜೆಪಿ ಶಿವಸೇನೆ- ಎನ್‍ಸಿಪಿ- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿ ಶುಕ್ರವಾರ ಪ್ರತಿಭಟನೆಯನ್ನೂ ನಡೆಸಿತು. ಆದರೆ ಪ್ರತಿಭಟನೆಯಲ್ಲಿ ಮಾಸ್ಕ್ ಧರಿಸದ ಮಕ್ಕಳು ಪಾಲ್ಗೊಂಡ ಕಾರಣದಿಂದ ಈ ಪ್ರತಿಭಟನೆಯೇ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಮಾಸ್ಕ್ ಧರಿಸದ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿದ್ದು, ದೇಶದ ಒಟ್ಟು ಪ್ರಕರಣಗಳ ಐದನೇ ಒಂದರಷ್ಟು ಪ್ರಕರಣಗಳು ಮುಂಬೈ ಮಹಾನಗರದಲ್ಲೇ ವರದಿಯಾಗಿವೆ.

ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಹಲವು ಮಂದಿ ಗಣ್ಯರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಪ್ಪು ಮಾಸ್ಕ್ ಧರಿಸಿ ಭಾಗವಹಿಸಿದ್ದರು. ಪ್ರತಿಭಟನೆಯ ಚಿತ್ರ ಟ್ವೀಟ್ ಮಾಡಿದ ಫಡ್ನವೀಸ್, “ಅಧಿಕ ಪ್ರಕರಣ, ಅಧಿಕ ಸಾವು. ಆರೋಗ್ಯ ಸೇವಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದು ಸರ್ಕಾರದ ವೈಫಲ್ಯ. ನಾವು ಸರ್ಕಾರಕ್ಕೆ ಸಹಕರಿಸಿದ್ದೆವು. ಆದರೆ ಜನ ಎಷ್ಟು ಸಹಿಸಲು ಸಾಧ್ಯ? ಮಹಾರಾಷ್ಟ್ರ ಬಚಾವೋ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೆ”ಎಂದು ಶೀರ್ಷಿಕೆ ನೀಡಿದ್ದರು.

ಹಲವು ಕಡೆಗಳಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಟ್ವಿಟರ್ ನಲ್ಲಿ ಹರಿದಾಡಿದ ಚಿತ್ರದಲ್ಲಿ ಮಕ್ಕಳು ಮಾಸ್ಕ್ ಕೆಳಗೆ ಮಾಡಿದ್ದಾರೆ. ಆದರೆ ಇದು ಫಡ್ನವೀಸ್ ಪಾಲ್ಗೊಂಡ ಪ್ರತಿಭಟನೆಯ ಚಿತ್ರವಲ್ಲ. ಆದರೆ ಲಾಕ್‍ಡೌನ್ ಅವಧಿಯಲ್ಲಿ ಪ್ರತಿಭಟನೆ ನಡೆಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಮಕ್ಕಳನ್ನು ತೊಡಗಿಸಿಕೊಂಡ ಬಗ್ಗೆ ಕಟು ಟೀಕೆ ವ್ಯಕ್ತವಾಗಿದೆ. ಲಾಕ್‍ಡೌನ್‍ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಶಿವಸೇನೆ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)