varthabharthi


ಕರ್ನಾಟಕ

ಚಿಕ್ಕಮಗಳೂರು: ಮತ್ತೆ ಐವರಲ್ಲಿ ಕೊರೋನ ಸೋಂಕು ದೃಢ; ಸೋಂಕಿತರ ಸಂಖ್ಯೆ 10ಕ್ಕೇರಿಕೆ

ವಾರ್ತಾ ಭಾರತಿ : 22 May, 2020

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮೇ 22: ಕಾಫಿನಾಡಿನಲ್ಲಿ ಮತ್ತೆ ಐವರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 10 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ. ಜಿಲ್ಲೆಗೆ ಇತ್ತೀಚೆಗೆ ಮಹಾರಾಷ್ಟ್ರದಿಂದ ಬಂದವರಲ್ಲೇ ಕೊರೋನ ವೈರಾಣು ಕಂಡು ಬರುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕಳೆದ ಮೇ 19ರಂದು ಒಂದೇ ದಿನ ಐದು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರೂ ಸೇರಿದಂತೆ ತರೀಕೆರೆ ತಾಲೂಕಿನ ಕೋಡಿ ಕ್ಯಾಂಪ್ ನಿವಾಸಿಯಾಗಿರುವ ಗರ್ಭಿಣಿ ಮಹಿಳೆ ಹಾಗೂ ಮುಂಬಯಿಯಿಂದ ಇತ್ತೀಚೆಗಷ್ಟೆ ನರಸಿಂಹರಾಜಪುರ ತಾಲೂಕಿನ ಸೀತೂರಿಗೆ ಆಗಮಿಸಿದ್ದ 9 ಮಂದಿಯ ಪೈಕಿ ಒಂದೇ ಕುಟುಂಬಕ್ಕೆ ಸೇರಿದ್ದ ಇಬ್ಬರು ಬಾಲಕರು ಹಾಗೂ ಓರ್ವ ಬಾಲಕಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು.

ಇದೀಗ ಜಿಲ್ಲೆಯಲ್ಲಿ ಮತ್ತೆ ಐವರಲ್ಲಿ ಕೊರೋನ ಸೋಂಕು ಇರುವುದು ವೈದ್ಯಕೀಯ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಈ ಐವರು ಇತ್ತೀಚೆಗೆ ನರಸಿಂಹರಾಜ ಪುರ ತಾಲೂಕಿಗೆ ಮುಂಬಯಿಯಿಂದ ಆಗಮಿಸಿದ್ದ ಕಾರ್ಮಿಕ ಕುಟುಂಬದವರಾಗಿದ್ದು, ಶುಕ್ರವಾರ ಕೊರೋನ ಸೋಂಕಿಗೆ ತುತ್ತಾದವರು ಹಾಗೂ ಮೇ 19ರಂದು ನರಸಿಂಹರಾಜಪುರ ತಾಲೂಕಿನಲ್ಲಿ ಬೆಳಕಿಗೆ ಬಂದ ಮೂವರು ಕೊರೋನ ಸೋಂಕಿತರು ಸೇರಿದಂತೆ ಒಟ್ಟು 9 ಮಂದಿ ಮೇ 16ರಂದು ಮುಂಬಯಿಯಿಂದ ಟಿಟಿ ವಾಹನದಲ್ಲಿ ನರಸಿಂಹರಾಜಪುರ ತಾಲೂಕಿನ ಸೀತೂರಿಗೆ ಆಗಮಿಸಿದ್ದರು. ಹೀಗೆ ಬಂದ 9ಮಂದಿಯನ್ನು ಜಿಲ್ಲಾಡಳಿತ ಕೊಪ್ಪ ತಾಲೂಕಿನ ಹರಂದೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‍ ಗೊಳಪಡಿಸಿತ್ತು. ಈ 9 ಮಂದಿಯಲ್ಲಿ ಕೊರೋನ ಸೋಂಕಿನ ಲಕ್ಷಣಗಳಿರದಿದ್ದರೂ ಜಿಲ್ಲಾಡಳಿತ ರೂಟಿನ್ ಟೆಸ್ಟ್ ಗಾಗಿ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಹಾಸನ ಹಾಗೂ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿತ್ತೆಂದು ತಿಳಿದು ಬಂದಿದೆ.

ಈ ಪೈಕಿ ಹಾಸನಕ್ಕೆ ಕಳುಹಿಸಲಾಗಿದ್ದ ಪ್ರಯೋಗಾಲಯದ ವರದಿಯಲ್ಲಿ ಮೇ 16ರಂದು ಕೊಪ್ಪ ತಾಲೂಕಿನ ವಸತಿ ಶಾಲೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ 7 ವರ್ಷದ ಬಾಲಕ, 10 ವರ್ಷದ ಬಾಲಕ ಹಾಗೂ 17 ವರ್ಷದ ಬಾಲಕಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಐವರ ಪ್ರಯೋಗಾಲಯದ ವರದಿ ಮೇ 22ರಂದು ಶುಕ್ರವಾರ ಜಿಲ್ಲಾಡಳಿತದ ಕೈ ಸೇರಿದ್ದು, 6 ಮಂದಿಯ ವರದಿ ಪೈಕಿ ಐವರ ವರದಿಯಲ್ಲಿ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿದೆ. ಶುಕ್ರವಾರ ದೃಢಪಟ್ಟಿರುವ ಪ್ರಕರಣಗಳ ಪೈಕಿ 7 ವರ್ಷದ ಬಾಲಕ, 14 ವರ್ಷದ ಬಾಲಕಿ, 49 ವರ್ಷದ ಪುರುಷ, 48 ವರ್ಷದ ಮಹಿಳೆ ಹಾಗೂ 46 ವರ್ಷದ ಪುರುಷ ಇದ್ದು, ಇವರೆಲ್ಲರೂ ಇತ್ತೀಚೆಗೆ ಮಹಾರಾಷ್ಟ್ರದಿಂದ ನರಸಿಂಹರಾಜಪುರಕ್ಕೆ ಒಂದೇ ವಾಹನದಲ್ಲಿ ಬಂದಿದ್ದವರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಇದೀಗ ಕೊರೋನ ಸೋಂಕಿಗೊಳಗಾಗಿರುವವರ ಸಂಖ್ಯೆ 10ಕ್ಕೇರಿದ್ದು, ಮೂಡಿಗೆರೆಯ ಸರಕಾರಿ ವೈದ್ಯ, ತರೀಕೆರೆಯ ಗರ್ಭಿಣಿ ಮಹಿಳೆ ಹಾಗೂ ನರಸಿಂಹರಾಜಪುರ ತಾಲೂಕಿ ಸೀತೂರು ಗ್ರಾಮದ ಒಂದೇ ಕುಟುಂಬದ 8 ಮಂದಿ ಸೋಂಕಿತರನ್ನು ಚಿಕ್ಕಮಗಳೂರು ನಗರದ ಜಿಲ್ಲಾ ಸರಕಾರ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಕೊರೋನ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೋಂಕಿತರಿಗೆ ತಜ್ಞ ವೈದ್ಯರ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ ದೃಢಪಟ್ಟಿರುವ 10 ಕೊರೋನ ಪಾಸಿಟಿವ್ ಪ್ರಕಣರಣಗಳ ಪೈಕಿ ಮೂಡಿಗೆರೆಯ ಸರಕಾರಿ ವೈದ್ಯರನ್ನು ಹೊರತುಪಡಿಸಿ ಉಳಿದ 9 ಮಂದಿ ಮಹಾರಾಷ್ಟ್ರದಿಂದ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದರು. ರಾಜ್ಯ ಸರಕಾರ ಅಂತಾರಾಜ್ಯ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಇವರು ಜಿಲ್ಲೆಗೆ ಆಗಮಿಸಿದ್ದರು. ನರಸಿಂಹರಾಜಪುರ ತಾಲೂಕಿನ ಸೀತೂರಿಗೆ ಟಿಟಿ ವಾಹನದಲ್ಲಿ ಮುಂಬಯಿಯಿಂದ ಆಗಮಿಸಿದ್ದ 9 ಮಂದಿ ಒಂದೇ ಕುಟುಂಬದ ಸದಸ್ಯರಾಗಿದ್ದು, 9 ಮಂದಿಯ ಪೈಕಿ ಮೇ 19ರಂದು 3 ಮಂದಿ ಹಾಗೂ ಮೇ 22ರಂದು 5 ಮಂದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಇತ್ತೀಚೆಗೆ ಮಹಾರಾಷ್ಟ್ರದಿಂದ 200ಕ್ಕೂ ಹೆಚ್ಚು ಮಂದಿ ಜಿಲ್ಲೆಗೆ ಆಗಮಿಸಿದ್ದು, ಎಲ್ಲರನ್ನೂ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. 10 ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ಆಗಮಿಸಿದ್ದ 9 ಮಂದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿರುವುದರಿಂದ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಂಬಯಿಯಿಂದ ಮೇ 16ರಂದು ನರಸಿಂಹರಾಜಪುರ ತಾಲೂಕಿಗೆ ಒಂದೇ ಕುಟುಂಬದ 9 ಮಂದಿ ಬಂದಿದ್ದರು. ಇವರನ್ನು ಕೊಪ್ಪ ತಾಲೂಕಿನನಲ್ಲಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಒಳಪಡಿಸಲಾಗಿತ್ತು. 90 ದಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈ ಪೈಕಿ ಮೇ 19ರಂದು 3 ಮಂದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಶುಕ್ರವಾರ ಮತ್ತೆ ಐವರ ವರದಿ ಬಂದಿದ್ದು, ಐವರಲ್ಲೂ ಸೋಂಕು ಇರುವುದು ದೃಢಪಟ್ಟಿದೆ. ಈ ಕುಟುಂಬದ ಇನ್ನೂ ಓರ್ವ ವ್ಯಕ್ತಿಯ ವರದಿ ಬರುವುದು ಬಾಕಿ ಇದೆ. ಸೋಂಕಿತರೆಲ್ಲರಿಗೂ ಚಿಕ್ಕಮಗಳೂರು ನಗರದ ಕೊರೋನ ಚಿಕಿತ್ಸಾ ಘಟಕದಲ್ಲಿ ನಿಗಾ ವಹಿಸಲಾಗುತ್ತಿದೆ.

- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)