varthabharthi


ಅನುಗಾಲ

ಮಾಸ್ತಿ ಕಂಡ ವಾಲ್ಮೀಕಿ ರಾಮಾಯಣ

ವಾರ್ತಾ ಭಾರತಿ : 27 May, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಉತ್ತರಕಾಂಡದಲ್ಲಿ ಬರುವ ಸೀತಾಪರಿತ್ಯಾಗ ಪ್ರಸಂಗವನ್ನು ಮಾಸ್ತಿ ಪ್ರಜ್ಞಾಪೂರ್ವಕವಾಗಿ (ಪ್ರಕ್ಷಿಪ್ತವೆಂಬ ಕಾರಣಕ್ಕ್ಕಾಗಿ) ಕೈಬಿಟ್ಟಿದ್ದಾರೆ. ಕೃತಿನಿಷ್ಠೆಯ ಈ ಧೋರಣೆ ಮಹತ್ವದ್ದು. ತನ್ನ, ತಮ್ಮ ಸಿದ್ಧಾಂತಗಳಿಗೆ ಕೃತಿಯನ್ನೂ ಕವಿಯನ್ನೂ ಒಗ್ಗಿಸುವ, ಬಾಗಿಸುವ ಇಂದಿನ ಕೆಲವು ವಿಮರ್ಶಾ ಪ್ರವೃತ್ತಿಗಿಂತ ಇದು ಭಿನ್ನ, ಆರೋಗ್ಯಪೂರ್ಣ ಮತ್ತು ಸ್ವಾಗತಾರ್ಹ.


ಭಾಗ-3

(21/05/2020ರಿಂದ ಮುಂದುವರಿದದ್ದು)

ರಾಮನ ವ್ಯಕ್ತಿತ್ವವನ್ನು ವಿವರಿಸುವಾಗ ಮಾಸ್ತಿಯವರು ಆತನ ಕುರಿತು ಇರುವ ಆಕ್ಷೇಪಗಳನ್ನೂ ಅವುಗಳಿಗೆ ಕವಿ ನೀಡುವ ಸಮಾಧಾನವನ್ನೂ ವಿವರಿಸುತ್ತಾರೆ. ಮುಖ್ಯವಾಗಿ ಇದು ವಾಲಿವಧೆಯ ಮತ್ತು ಸೀತೆಯ ಅಗ್ನಿಪ್ರವೇಶದ ಪ್ರಸಂಗಗಳಿಗೆ ಸಂಬಂಧಿಸಿದ್ದು. ಉತ್ತರಕಾಂಡದಲ್ಲಿ ಬರುವ ಸೀತಾಪರಿತ್ಯಾಗ ಪ್ರಸಂಗವನ್ನು ಮಾಸ್ತಿ ಪ್ರಜ್ಞಾಪೂರ್ವಕವಾಗಿ (ಪ್ರಕ್ಷಿಪ್ತವೆಂಬ ಕಾರಣಕ್ಕಾಗಿ) ಕೈಬಿಟ್ಟಿದ್ದಾರೆ. ಕೃತಿನಿಷ್ಠೆಯ ಈ ಧೋರಣೆ ಮಹತ್ವದ್ದು. ತನ್ನ, ತಮ್ಮ ಸಿದ್ಧಾಂತಗಳಿಗೆ ಕೃತಿಯನ್ನೂ ಕವಿಯನ್ನೂ ಒಗ್ಗಿಸುವ, ಬಾಗಿಸುವ ಇಂದಿನ ಕೆಲವು ವಿಮರ್ಶಾ ಪ್ರವೃತ್ತಿಗಿಂತ ಇದು ಭಿನ್ನ, ಆರೋಗ್ಯಪೂರ್ಣ ಮತ್ತು ಸ್ವಾಗತಾರ್ಹ. ವಾಲ್ಮೀಕಿಯು ತನ್ನ ಪಾತ್ರಗಳ ಮೂಲಕ ಯಾವ ವಾದವನ್ನು ಹೇಳಿಸಿದನೋ ಅದು ಕಾವ್ಯಸತ್ಯ. ಹಾಗೆ ಹೇಳಿದ್ದು ಸರಿಯೋ, ತಪ್ಪೋ ಎಂಬುದು ವಿಮರ್ಶೆಗೆ ಹೊರತು.

ಮರೆಯಿಂದ ಬಾಣಬಿಟ್ಟು ರಾಮನೆಸಗಿದ ವಾಲಿವಧೆಯ ಪ್ರಸಂಗದಲ್ಲೇ ಮಾಸ್ತಿ ಸಾಂಪ್ರದಾಯಿಕರ ‘ರಾಮನು ದೇವರು, ಅವನು ಮಾಡಿದ್ದು ತಪ್ಪಲ್ಲ’ ಎಂಬ ವಾದವನ್ನು ತಿರಸ್ಕರಿಸುತ್ತಾರೆ. ಈ ಧೋರಣೆಯ ದೌರ್ಬಲ್ಯವನ್ನು ಅವರು ಹೀಗೆ ವಿವರಿಸುತ್ತಾರೆ: ‘ಈ ದೋಷದ ಹೊರೆ ಅವರಿಗೆ ಭಾರವಾಗಿ ಕಾಣುತ್ತಿತ್ತು. ಅದನ್ನು ಇಳಿಸಿಕೊಳ್ಳುವುದಕ್ಕಾಗಿ ಅವರು ವಾಲಿಯನ್ನು ಕೃಷ್ಣಾವತಾರದಲ್ಲಿ ಒಬ್ಬ ಬೇಡನನ್ನಾಗಿ ಮಾಡಿ ಕೃಷ್ಣನನ್ನು ಅವನಿಂದ ಕೊಲ್ಲಿಸಿದರು. ರಾಮನು ವಾಲಿಯನ್ನು ಕೊಂದು ಕಟ್ಟಿಕೊಂಡ ಸಾಲವನ್ನು ಬೇಡನಿಂದ ಜೀವಬಿಟ್ಟು ಕೃಷ್ಣನು ತೀರಿಸಿದನು. ಕೃಷ್ಣನಿಗೆ ತಾನು ರಾಮ ಎಂಬ ತಿಳಿವಳಿಕೆಯೂ ಬೇಡನಿಗೆ ತಾನು ವಾಲಿಯೆಂಬ ತಿಳಿವಳಿಕೆಯೂ ಇದ್ದಿದ್ದ ಪಕ್ಷದಲ್ಲಿ ಈ ಸಾಲ ಹೀಗೆ ಹರಿಯುವುದಕ್ಕೆ ಏನೂ ಅಡ್ಡಿಯಿಲ್ಲ. ಈ ವಿಚಾರದಲ್ಲಿ ಧೈರ್ಯವಾದ ನಂಬಿಕೆ ಉಳ್ಳವರು ಈ ಮುಯ್ಯಿಗೆ ಮುಯ್ಯಿಂದ ಸಮಾಧಾನವನ್ನು ಹೊಂದಬಹುದು. ದೇವರಿಗಾದರೂ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬಿದರಡಿಯ ಭಾವನೆಯೂ ಗಂಭೀರವಾದದ್ದು. ದೇವರು ತಪ್ಪನ್ನು ಮಾಡುವುದಾದರೂ ಏಕೆ ಎನ್ನುವ ಪ್ರಶ್ನೆಗೆ ಮಾತ್ರ ಇಲ್ಲಿ ಸಮಂಜಸವಾದ ಉತ್ತರ ದೊರೆಯುವುದಿಲ್ಲ. ಸಂಪ್ರದಾಯದವರ ಮನಸ್ಸಿನ ಸ್ಥಿತಿ ಹೀಗಿರಲಾಗಿ ಆಧುನಿಕ ಕಾಲದ ವಿಮರ್ಶೆ ಅಂದು ಕವಿ ಎತ್ತಿ ಮುಗಿಸಿದ ಆಕ್ಷೇಪವನ್ನು ಮತ್ತೆ ಎತ್ತುತ್ತದೆ. ಎರಡು ಪಕ್ಷದವರನ್ನೂ ವಿಚಾರಿಸದೆ ರಾಮನು ಸುಗ್ರೀವನ ಪಕ್ಷವನ್ನು ವಹಿಸಕೂಡದಾಗಿತ್ತು; ಹಾಗೆ ವಹಿಸಿದರೂ ವಾಲಿಯನ್ನು ಯುದ್ಧಕ್ಕೆ ಕರೆದು ಅವನನ್ನು ಕೊಲ್ಲಬೇಕಾಗಿತ್ತು; ಇದೇ ಈಗಣ ನಾವು ಹೇಳುವ ಮಾತು’ ಎನ್ನುತ್ತ ಆಗಿನ ವಿಚಾರವನ್ನು ಇಂದಿನ ಮಾನದಂಡದಿಂದ ಕಾಣಬಾರದೆನ್ನುತ್ತಾರೆ.

ಜೊತೆಗೆ ವಾಲಿ ವಾನರನೆಂಬ ಕಾವ್ಯಸತ್ಯದ ಮೂಲಕವೇ ‘ಹುಲಿಯನ್ನು ಕೊಲ್ಲುವವನು ಅದರ ಜೊತೆಗೆ ಮೈದಾನದಲ್ಲಿ ನಿಂತು ಯುದ್ಧಮಾಡಬೇಕಾದದಿಲ್ಲ’ ಎಂದು ಹೇಳುತ್ತಾರೆ. (ವಾನರ ಸುಗ್ರೀವನೊಂದಿಗೆ ರಾಮನು ಕಾನೂನು/ನ್ಯಾಯ ಸಮ್ಮತ ಒಪ್ಪಂದ, ಸಖ್ಯ, ಸ್ನೇಹಸಂಬಂಧ ಬೆಳೆಸಿದ್ದು ಸರಿಯೇ ಎಂಬ ಪ್ರತಿವಾದ ಅವರನ್ನು ನಿರುತ್ತರರನ್ನಾಗಿಸಲೂಬಹುದು!) ಕೊನೆಗೆ ‘ರಾಮನು ಕಂಡಂತೆ ಅಧರ್ಮವನ್ನು ಮಾಡಿದನೆಂದು ಯಾರೂ ಹೇಳಲಾರರು; ಅವನು ಮಾಡಿದ ಕೆಲಸದ ಧರ್ಮದಲ್ಲಿ ಸ್ವಲ್ಪ ಕೊರತೆ ಕಾಣುತ್ತದೆ ಎಂದೇ ಪ್ರಾಯಶಃ ಹೇಳುವರು’ ಮತ್ತು ‘ರಾಮನ ನಡತೆಯಲ್ಲಿ ಇದು ಒಂದು ಕುಂದಾಗಿರಬಹುದು; ಆದರೆ ಅವನ ಒಳ್ಳೆಯತನದ ಮೊತ್ತದಲ್ಲಿ ಇದರ ತೂಕ ಬಹಳವಾಗಲಾರದು.’ ‘ರಾಮನು ಮನುಷ್ಯನೆಂಬ ದೃಷ್ಟಿಗೆ ಈ ದೋಷವು ಕ್ಷಮ್ಯವಾಗಿ ಕಾಣಬೇಕು. ರಾಮನು ದೇವಕಲ್ಪನು; ಆದರೂ ಮನುಷ್ಯನು’ ಎನ್ನುವ ಮೂಲಕ ಈ ವಿವಾದಕ್ಕೆ ಕೊನೆಹಾಡುತ್ತಾರೆ. ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ತಮ್ಮ ‘ಶ್ರೀನಿವಾಸ’ ಶೀರ್ಷಿಕೆಯ ಮಾಸ್ತಿ ಬದುಕು-ಬರೆಹದ ಕೃತಿಯಲ್ಲಿ ಈ ಕುರಿತು ವಿವೇಚಿಸಿದ್ದಾರೆ.

ಅವರು ‘ಆದಿಕವಿ ವಾಲ್ಮೀಕಿ- ವಾಲ್ಮೀಕಿ ರಾಮಾಯಣವನ್ನು ಭಕ್ತಿಯಿಂದ ಪಾರಾಯಣ ಮಾಡಿ, ಆನಂತರ ಅದರ ಮೌಲ್ಯಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡಲು ಯತ್ನಿಸುವ ಕೃತಿ’ ಎಂದಿದ್ದಾರೆ. ಆದರೆ ಈ ಅಭಿಪ್ರಾಯವು ತಪ್ಪುಗ್ರಹಿಕೆಗೆ ಕಾರಣವಾಗಬಹುದು. ಏಕೆಂದರೆ ಮಾಸ್ತಿಯವರು ಈ ಕೃತಿಯನ್ನು ‘ಪಾರಾಯಣ’ ಮಾಡಿದಂತೆ ಅನ್ನಿಸುವುದಿಲ್ಲ. ‘ಅಧ್ಯಯನ’ ಮಾಡಿದ್ದಾರೆ ಅನ್ನಿಸುತ್ತದೆ. ಅಲ್ಲದೆ ಕೃತಿಯನ್ನು ಪರಿಚಯಮಾಡಿಸುವುದು ಮೊದಲ ಹಂತ. ಈ ಕೃತಿ ಅದರಿಂದಾಚೆಗೆ ಅಂದರೆ ಶೋಧದತ್ತ ನಡೆದಿದೆ. ವಾಲಿವಧೆಯ ಪ್ರಸಂಗದ ಕುರಿತು ಸಿದ್ದಲಿಂಗಯ್ಯನವರು ‘(ಮಾಸ್ತಿಯವರು) ರಾಮನ ಪಾತ್ರವನ್ನು ಸಮರ್ಥಿಸಿಕೊಳ್ಳುವ ರೀತಿ ಒಪ್ಪಿಕೊಳ್ಳುವಂಥದ್ದಲ್ಲ’ ಎಂದಿದ್ದಾರೆ. ಮೇಲೆ ಹೇಳಿದ ಭಾಗವನ್ನು ಮತ್ತು ಅದರ ಹಿಂದಿನ-ಮುಂದಿನ ಭಾಗಗಳನ್ನೂ ಉಲ್ಲೇಖಿಸಿ ‘ಇಂಥ ಕಡೆ ಮಾಸ್ತಿಯವರ ರಾಮಭಕ್ತಿ ಪ್ರಧಾನವಾಗಿ ವಿಮರ್ಶೆ ಸೋಲುತ್ತದೆ’ ಎಂದು ಹೇಳುತ್ತಾರೆ. ಆದರೆ ಈ ಕೃತಿಯಲ್ಲಿ ಈ ಮೊದಲೇ ಹೇಳಿದಂತೆ ‘ರಾಮಭಕ್ತಿ’ಗೆ ಒತ್ತು ಇಲ್ಲ. ಕೃತಿಯು ರಾಮಾಯಣವನ್ನು ಕಾವ್ಯದಂತೆಯೂ, ರಾಮನನ್ನು ಮನುಷ್ಯನಂತೆಯೂ ಕಂಡಿದೆ; ಅತಿಮಾನುಷನಾಗಿ ಕಾಣಿಸಿಲ್ಲ. ‘ರಾಮಾಯಣವಾಗಲಿ ಭಾರತವಾಗಲಿ ನಮ್ಮ ದೇಶದ ಸಂಸ್ಕೃತಿಯನ್ನು ರೂಪಿಸುವ ಗ್ರಂಥ ಎನ್ನುವ ಅವರ ಪ್ರಧಾನ ದೃಷ್ಟಿಯ ಬಗೆಗೆ ಮಾತ್ರ ಯಾರೂ ಆಕ್ಷೇಪವೆನ್ನುವಂತಿಲ್ಲ’ ಎಂಬಾಗ, ಈ ‘ಪ್ರಧಾನ ದೃಷ್ಟಿ’ಯೇ ಕೃತಿಯ ಸ್ಥಾಯೀಭಾವವೆಂಬುದನ್ನು ಅವರು ಅಲಕ್ಷಿಸಿದ್ದಾರೆ.

ಇಂತಹ ಸಿದ್ಧ ದೃಷ್ಟಿಯೇ ಮಾಸ್ತಿಯವರ ಈ ಕೃತಿಯ ಕುರಿತು ಇಂದಿನ ವಿಮರ್ಶಕರಿಗಿರುವ ಪೂರ್ವಗ್ರಹೀತ ಅಸಡ್ಡೆಗೆ ಹೇತುವಾದಂತೆ ಕಾಣಿಸುತ್ತದೆ. ಇದೇ ಮಾನದಂಡವನ್ನು ಪ್ರಯೋಗಿಸಿದರೆ ಡಿವಿಜಿಯವರ ‘ಶ್ರೀರಾಮ ಪರೀಕ್ಷಣಂ’, ‘ಶ್ರೀಕೃಷ್ಣ ಪರೀಕ್ಷಣಂ’, ಪುತಿನ ಅವರ ಕೆಲವು ನೃತ್ಯ/ನಾಟಕರೂಪಕಗಳು, ಗೋಪಾಲಕೃಷ್ಣ ಅಡಿಗರ ‘ಶ್ರೀರಾಮನವಮಿಯ ದಿವಸ’, ‘ಆನಂದತೀರ್ಥರಿಗೆ’ ಅಥವಾ ಬೇಂದ್ರೆಯವರ ‘ನೃಸಿಂಹ ಸ್ತೋತ್ರ’ ಮುಂತಾದ ಕವನಗಳೂ ಭಕ್ತಿಪಂಥದವೇ ಎಂಬ ವಿಮರ್ಶೆ ಪ್ರಕಟವಾದರೆ ಅಚ್ಚರಿಯಿಲ್ಲ! ಸೀತೆಯ ಅಗ್ನಿಪ್ರವೇಶದ ಕುರಿತೂ ಇಂತಹ ವಿಶ್ಲೇಷಣೆಯಿದೆ; ಮತ್ತು ಕಾವ್ಯದೊಳಗೇ ನ್ಯಾಯವಾದ ಸಮಾಧಾನವಿದೆ. ಎಲ್ಲ ಕಠಿಣ ಕ್ರಮಗಳೂ ಶಿಕ್ಷೆಯಲ್ಲ; ಅನ್ಯಾಯವಲ್ಲ. ಮಾಸ್ತಿಯವರು ನೀಡುವ ಸಾಂಸಾರಿಕ ಉದಾಹರಣೆಯು ಮನೋಜ್ಞವಾಗಿದೆ: ‘ಬೆಂಕಿಯ ಹತ್ತಿರ ಹೋಗಬೇಡವೋ ಎಂದು ಕೂಗುತ್ತಿರುವಾಗ ಹುಡುಗನು ಅದಕ್ಕೆ ಕೈಹಾಕಿ ಸುಟ್ಟುಕೊಂಡರೆ, ಅವನನ್ನು ಹೊರಕ್ಕೆ ಎಳೆದು ಕೋಪದಿಂದ ಬಯ್ಯುವ, ಹೊಡೆಯುವ ತಾಯಿಯ ಮನೋಧರ್ಮವನ್ನು ತಿಳಿಯಬೇಕು’. ರಾಮನು ಬಾಳಿನಲ್ಲಿ ಅಪೇಕ್ಷಿಸಿದ್ದು ಧರ್ಮದಲ್ಲಿ ಪ್ರತಿಷ್ಠಿತವಾದ ಸುಖವನ್ನು; ಧರ್ಮಕ್ಕೆ ಬೆನ್ನು ತಿರುಗಿಸಿ ಅವನು ಸುಖಕ್ಕೆ ಕೈನೀಡಲಿಲ್ಲ. ತನ್ನ ಸತ್ಯವನ್ನು ತೋರಿಸುವ ಯತ್ನದಲ್ಲಿ ಸೀತೆ ಅಗ್ನಿಯಲ್ಲಿ ಸುಟ್ಟು ಮುಗಿದಿದ್ದರೆ ಅವನು ದುಃಖಪಡುತ್ತಿದ್ದನು; ಆದರೆ ಅವಳು ಅಗ್ನಿಯನ್ನು ಹೊಕ್ಕ ವಿಷಯದಲ್ಲಿ ಪಶ್ಚಾತ್ತಾಪ ಪಡುತ್ತಿರಲಿಲ್ಲ’.

ಈ ಕುರಿತ ಟೀಕೆಗಳಿಗೆ ಅವರು ನೀಡುವ ಸಮಾಧಾನ ಹೀಗಿದೆ; ‘ನಮ್ಮ ಕಾಲದ ಜನಕ್ಕೆ ಸಾವೆನ್ನುವುದು ಬಹು ಭಯಂಕರವಾದ ಘಟನೆಯೆಂದು ಕಾಣುತ್ತದೆ. ಸುತ್ತ ಇರುವ ಸಾವನ್ನು, ನಮ್ಮ ಬಾಳನ್ನೆ ನುಂಗುತ್ತಿರುವ ಸಾವನ್ನು, ನೋಡಲಾರದೆ ನಾವು ಮುಖವನ್ನು ಬೇರೆಯ ಕಡೆ ತಿರುಗಿಸಿಕೊಳ್ಳುತ್ತಿದ್ದೇವೆ;’ ಸೀತೆಯ ಅಗ್ನಿಪ್ರವೇಶಪ್ರಸಂಗದ ಕುರಿತ ಅತಿಪ್ರತಿಕ್ರಿಯೆಗೆ ಈ ಮನೋಭಾವ ಕಾರಣವಾಗಿದೆಯೆಂದು ಅವರು ಹೇಳುವ ಮಾತುಗಳು ಅರ್ಥಪೂರ್ಣ. ಅವರು ರೂಪಕಾತ್ಮಕವಾಗಿ ಹೇಳುವ ‘ಅಗ್ನಿಯನ್ನು ಹೊಕ್ಕದ್ದು ಸೀತೆ ಮಾತ್ರವಲ್ಲ, ಅವಳ ಜೊತೆಯಲ್ಲಿ ರಾಮನೂ ಒಂದು ಅಗ್ನಿಯನ್ನು ಹೊಕ್ಕನು’ ಎಂಬುದು ಒಂದು ‘ಅಗ್ನಿದಿವ್ಯ’ವನ್ನು ದೃಷ್ಟಿಸಿದೆ; ಸೃಷ್ಟಿಸಿದೆ. ಸೀತಾಪಹಾರದ ಕುರಿತೂ ಇದೇ ರೀತಿಯ ಮಾನವೀಯ ವಿಶ್ಲೇಷಣೆಯನ್ನು ಮಾಸ್ತಿ ಮಾಡುತ್ತಾರೆ. ಸಾಂದರ್ಭಿಕವಾಗಿ ತೋರುವ ತೀರಾಸಾಮಾನ್ಯವಾದ ಪ್ರತಿಕ್ರಿಯೆಗಳಿಗೆ ರಾಮಾಯಣದ ಯಾವ ಪಾತ್ರವೂ ಹೊರತಲ್ಲವಾದರೂ ಈ ಸಂದರ್ಭದಲ್ಲಿ ಸೀತೆಯ ವರ್ತನೆ, ಭಾಷೆ, ಅದಕ್ಕೆ ಪರೋಕ್ಷವಾಗಿ ಬಲಿಯಾದ ಲಕ್ಷ್ಮಣ ಇವು ಈ ಸನ್ನಿವೇಶವನ್ನು ಅನಿವಾರ್ಯವಾಗಿಸುತ್ತದೆ.

ಲಕ್ಷ್ಮಣನ ಸ್ಥಿತಿಯ ಕುರಿತು ಮಾಸ್ತಿಯವರು ಮಾರ್ಮಿಕವಾಗಿ ‘ಇದು ಎಲ್ಲ ಸೇವಕರ ಗತಿ’ ಎನ್ನುತ್ತಾರೆ. ಹಾಗೆಯೇ ಮಾಸ್ತಿಯವರ ವಿಮರ್ಶಾಪ್ರಜ್ಞೆಗೆ ದ್ಯೋತಕವಾಗಿ ಅವರು ವಾಲ್ಮೀಕಿಯ ರಾವಣನನ್ನು ವಿಶ್ಲೇಷಿಸಿದ ರೀತಿಯನ್ನು ನೋಡಬಹುದು. ಎಲ್ಲೂ ಅವರು ರಾವಣನನ್ನು ‘‘ಖಳನಾಯಕ’ನೆಂದಿಲ್ಲ; ‘ಪ್ರತಿನಾಯಕ’ನೆಂದಿದ್ದಾರೆ. ಈ ದೃಷ್ಟಿಕೋನವನ್ನೇ ಕುವೆಂಪು ತಮ್ಮ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ವಿಸ್ತರಿಸಿದರು. ಒಂದರ್ಥದಲ್ಲಿ ರಾವಣನು ಶೇಕ್ಸ್‌ಪಿಯರ್ ನಾಟಕದ ದುರಂತ ನಾಯಕರಂತೆ. ಎಲ್ಲ ಅರ್ಹತೆ, ಗುಣಗಳಿದ್ದೂ ಒಂದು ಅವಗುಣ, ದೋಷ ದುರಂತದತ್ತ ತಳ್ಳುತ್ತದೆ. ಮಾಸ್ತಿ ದಾಂಪತ್ಯದ ಶೀಲದ ಕುರಿತು ಪರಿಣಾಮಕಾರೀ ನಿರೂಪಣೆಯನ್ನು ತಮ್ಮ ಕತೆಗಳಲ್ಲಿ ಮಾಡಿದವರು. ಇಲ್ಲೂ ಸಂಸ್ಕೃತಿಯನ್ನು, ನಾಗರಿಕತೆಯನ್ನು, ವ್ಯವಹಾರವನ್ನು, ರಾಜ್ಯವ್ಯವಸ್ಥೆಯನ್ನು, ಶೋಧಿಸುವಲ್ಲಿ ಈ ಕಲ್ಪನೆ ಅವರಿಗೆ ಬಹಳಷ್ಟು ನೆರವಾಗಿದೆ. ಹಾಗೆಯೆ ರಾಮಾಯಣದ ಕಾಲವನ್ನು ಉದ್ದೇಶಪೂರ್ವಕವಾಗಿ ಮರೆತು ಇಂದಿನ ಮಾನದಂಡವನ್ನು ಬಳಸಿ ಅದನ್ನು, ವಾಲ್ಮೀಕಿಯ ಕಾವ್ಯ ದರ್ಶನವನ್ನು ವಿಶ್ಲೇಷಿಸುವುದು ಕವಿಗೂ ಕೃತಿಗೂ ಮಾಡಬಹುದಾದ ಪರಮ ಅನ್ಯಾಯವೆಂದು ಅವರು ಹೇಳುತ್ತಾರೆ. ಹಾಗೆಯೇ ರಾಮಾಯಣಕ್ಕೆ ವಿಪರೀತ ವೇದಾಂತವನ್ನು ಲೇಪಿಸುವುದನ್ನೂ ಅವರು ಟೀಕಿಸುತ್ತಾರೆ. ಇಂತಹ ಹತ್ತು ಹಲವು ಪ್ರತಿಭಾನ್ವಿತ, ಪಾಂಡಿತ್ಯಪೂರ್ಣ ಒಳನೋಟಗಳು ಈ ಕೃತಿಯಲ್ಲಿ ಸಿಗುತ್ತವೆ. ರಾಮಾಯಣ ಕಾವ್ಯದಲ್ಲಿ ಮೂಡಿದ ಪ್ರಕೃತಿ ವರ್ಣನೆಯೂ ಈ ಕೃತಿಯಲ್ಲಿ ವಿಮರ್ಶೆಗೊಂಡಿದೆ. ಮಾಸ್ತಿ ಉಲ್ಲೇಖಿಸಿದ ಭಾಗಗಳು ನಿಜಕ್ಕೂ ರಮಣೀಯವಾಗಿದೆ. ಅವುಗಳ ವಿಶ್ಲೇಷಣೆ, ಮೂಲ ವಾಲ್ಮೀಕಿ ರಾಮಾಯಣ ಕಾವ್ಯವನ್ನು ಮತ್ತೆ ಓದುವಂತೆ ಮಾಡುತ್ತವೆ.

ಪಾಶ್ಚಾತ್ಯ ಸಾಹಿತ್ಯದ ‘pathetic fallacy’ಯನ್ನು ಮಾಸ್ತಿ ಅನ್ವಯಿಸಿ ವಿಮರ್ಶಿಸಿದ್ದಾರೆ. ಹಾಗೆಯೇ ಕಥನ ಕೌಶಲದಡಿ ‘ಕಥೆ ಹೇಳಿರುವ ರೀತಿ’ಯನ್ನು ಮಾಸ್ತಿ ವಿಷದಪಡಿಸಿದ್ದಾರೆ. ವರ್ಣನೆಗಳ ನಡುವೆ ಕವಿ ಕಥೆಯನ್ನು ಮರೆತಿದ್ದಾನೋ ಎಂದು ಒಮ್ಮಿಮ್ಮೆ ಅನ್ನಿಸುತ್ತದೆಯೆನ್ನುವ ಮಾಸ್ತಿ ಮಹಾಕಾವ್ಯದಲ್ಲಿ ವರ್ಣನೆಗಳ ಸ್ಥಾನ ಅವಕ್ಕಿದೆ ಎಂದು ಸಮರ್ಥಿಸಿ ‘ನಿಜವಾಗಿ ಕವಿ ಏನನ್ನೂ ಮರೆತಿಲ್ಲ; ಮರೆವು ನಮ್ಮದು’ ಎಂದೂ ‘ಬರೆಯುವವನು ಇಲ್ಲಿ ಆತುರಪಡದೆ ಬರೆದಿದ್ದಾನೆ; ಓದುವವರೂ ಆತುರಪಡದೆ ಓದಬೇಕು’ ಎನ್ನುತ್ತಾರೆ. ಹಾಗೆಯೇ ‘ವಿಧಿವಿಲಾಸದ ರೂಪಣ’ ಎಂಬ ಅಧ್ಯಾಯದಲ್ಲಿ ಸೀತಾಪಹಾರದ ಕುರಿತು ಹೇಳುತ್ತ ‘ಒಳಗೆ ಕೆಟ್ಟುದನ್ನು ಎಣಿಸುತ್ತ ಯತಿಯ ವೇಷವನ್ನು ಧರಿಸಿ ಬ್ರಹ್ಮಘೋಷ ಮಾಡಿದವರಲ್ಲಿ ರಾವಣನು ಪ್ರಾಯಶಃ ಮೊದಲನೆಯವನೂ ಅಲ್ಲ ಕೊನೆಯವನೂ ಅಲ್ಲ. ವಾಲ್ಮೀಕಿ ಅಂಥ ಕೆಲವರನ್ನು ನೋಡಿದ್ದನೆಂದು ಕಾಣುತ್ತದೆ’ ಎನ್ನುವ ಮೂಲಕ ವೈರಾಗ್ಯದ ವೇಷವನ್ನು ಭಂಗಿಸುತ್ತಾರೆ ಮತ್ತು ಸಾರ್ವಕಾಲಿಕವಾಗಿ ಮಾಡುತ್ತಾರೆ. ಕವಿಯ ಶಬ್ದ ಭಂಡಾರ, ಶೈಲಿ, ಉಪಮೆ, ಅಲಂಕಾರಗಳು ಇವನ್ನು ದೃಷ್ಟಾಂತಮೂಲಕ ವಿವರಿಸಿದ್ದಾರೆ; ವಾಲ್ಮೀಕಿಯ ಉಪಮೆ ಕಾಳಿದಾಸನ ಉಪಮೆಯ ಮಾತೃಸ್ಥಾನವೆಂದು ಕೊಂಡಾಡಿದ್ದಾರೆ. ‘ಹೋಮರನ ಉಪಮೆಯಂತೆ ತನ್ನ ದಾರಿಯನ್ನು ಹಿಡಿಯುವ, ಆದರೂ ಸುಂದರವಾದ, ಉಪಮಾನ ಇವನಲ್ಲಿ ಇಲ್ಲ’ ಎಂದಿದ್ದಾರೆ. ಹೀಗೆ ಐತಿಹಾಸಿಕ ವ್ಯಕ್ತಿಗಳ ರಚನೆಯೊಂದಿಗೆ ಹೋಲಿಸುವ ಮೂಲಕ ರಾಮಾಯಣವನ್ನು ಸ್ವರ್ಗದಿಂದ ಇಳಿಸಿ ನೆಲದಲ್ಲೇ ಉಳಿಯುವ ಕಾವ್ಯವಾಗಿಸಿದ್ದಾರೆ.

ಮಾಸ್ತಿಯವರ ವಸ್ತುನಿಷ್ಠೆ ಅನನ್ಯವಾದದ್ದು. ಅವರು ಇಲ್ಲಿ ಪರಂಪರೆಯ ಹರಿಕಾರರಲ್ಲ. ಅನ್ವೇಷಕ ಪ್ರವೃತ್ತಿಯವರು. ಚರ್ಚೆಗೆ ಆಹ್ವಾನವಿತ್ತವರು. ಇನ್ನಷ್ಟು ಓದಿ ಎಂಬ ಕರೆನೀಡಿದವರು. ಮಾಸ್ತಿಯವರ ಎಲ್ಲ ಕೃತಿಗಳ ಬಗ್ಗೆ ಸ್ಪರ್ಧಾತ್ಮಕವಾಗಿ ಬರೆದವರೂ ಈ ಕೃತಿಯ ಬಗ್ಗೆ ಘೋರ ಮೌನವನ್ನು ತಾಳಿದ್ದು ವಿಶೇಷ. ಕೃತಿಯ ಕೊನೆಗೆ ಕುವೆಂಪು ಅವರು ಸೊಗಸಾದ ಬೆನ್ನುಡಿಯನ್ನು ಬರೆದು ತಮ್ಮ ಗೌರವವನ್ನು ನೀಡಿದ್ದಾರೆ. ಕೃತಿಯ ಹಲವು ವಿಚಾರಗಳನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕಿದ ಕುವೆಂಪು ‘ಮಾಸ್ತಿಯವರ ಆದಿಕವಿ ವಾಲ್ಮೀಕಿಯನ್ನು ಓದಿದರೆ ಅಲ್ಲಿ ಉತ್ತಮನಾದ ಮಾರ್ಗದರ್ಶಿ ದೊರೆಯುತ್ತಾನೆ’ ಎಂದು ಹೊಗಳಿದ್ದಾರೆ. ಕುವೆಂಪು ‘ಕವಿಯ ಕೀರ್ತಿಯೆ ಕವಿಗೆ ಅಡ್ಡವಾಗುತ್ತದೆ. ಬೂದಿಯೆ ಬೆಂಕಿಗೆ ಮರೆಯಾಗುವಂತೆ. ಪೂಜೆಯೂ ಒಮ್ಮಾಮ್ಮೆ ಪ್ರಚ್ಛನ್ನ ತಿರಸ್ಕಾರವಾಗುವುದುಂಟು. ಮಿಲ್ಟನ್‌ನ್ನು ಸ್ತುತಿಸುವವರ ಸಂಖ್ಯೆ ಏರಿದಂತೆಲ್ಲ ಅವನನ್ನು ಓದುವವರ ಸಂಖ್ಯೆ ಇಳಿಯುತ್ತದಂತೆ! ಹೊಗಳುವ ಸಾವಿರ ಮಂದಿಯಲ್ಲಿ ಒಬ್ಬನಾದರೂ ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನು ಪೂರ್ತಿಯಾಗಿ ಅಧ್ಯಯನ ಮಾಡಿರುತ್ತಾನೆಂದು ಹೇಳುವುದಕ್ಕೆ ಧೈರ್ಯ ಬರುವುದಿಲ್ಲವಂತೆ. ನಮ್ಮ ಆದಿಕವಿಗೂ ಆದಿಕಾವ್ಯಕ್ಕೂ ಅಂಥಾ ಪೂಜೆ ತಕ್ಕ ಮಟ್ಟಿಗೆ ಆಗಿದೆ; ಆಗುತ್ತಿದೆ’ ಎಂಬುದನ್ನು ಓದುವಾಗ ಅವರು ಪರೋಕ್ಷವಾಗಿ ಆದಿಕವಿ, ಆದಿಕಾವ್ಯದೊಂದಿಗೆ ಮಾಸ್ತಿಯವರನ್ನೂ ಸೇರಿಸಿ ಹೇಳುತ್ತಿದ್ದಾರೇನೋ ಅನ್ನಿಸುತ್ತದೆ!

 ಆದಿಕವಿ ವಾಲ್ಮೀಕಿ ಕೃತಿಯಲ್ಲಿ ಉಲ್ಲೇಖಿಸಬೇಕಾದ ಕಾವ್ಯಾತ್ಮಕವಾದ, ರೂಪಕಾತ್ಮಕವಾದ ಪ್ರತಿಭಾನ್ವಿತ, ಪಾಂಡಿತ್ಯಪೂರ್ಣ ದರ್ಶನಗಳು ಇನ್ನೂ ಬೇಕಷ್ಟಿವೆ. ಈ ಕೃತಿ ಕನ್ನಡದ ಆಸ್ತಿಯಾಗಿರುವುದು ಓದುಗರ ಭಾಗ್ಯ. ಇದು ಮಾಸ್ತಿಯವರ ಕತೆ, ಕಾದಂಬರಿಗಳಷ್ಟೇ ಅಥವಾ ಅದಕ್ಕೂ ಒಂದು ಪಟ್ಟು ಮಿಕ್ಕಿದ ಕೃತಿಯೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. (ಮುಗಿಯಿತು) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)