varthabharthi


ಅನುಗಾಲ

ಚೆಲ್ಲಾಪಿಲ್ಲಿ ಎಲ್ಲ, ಕೂಡಿ ಹಿಡಿಯುವ ಶಕ್ತಿ ಕೇಂದ್ರಕ್ಕಿಲ್ಲ....

ವಾರ್ತಾ ಭಾರತಿ : 4 Jun, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೊರೋನದಿಂದ ಸಂಕಷ್ಟಕ್ಕೆ ಬಿದ್ದ ಜನರನ್ನು ಎತ್ತುವ ಪ್ರಧಾನಿ ಘೋಷಿತ 20 ಲಕ್ಷ ಕೋಟಿ ರೂ. ಯೋಜನೆಯ ಫಲಿತಾಂಶ ಇನ್ನೂ ಕಾಣದಾಗಿದೆ. ಕೇಂದ್ರ-ರಾಜ್ಯಗಳ ಸಂಬಂಧದಲ್ಲಿ ಸಹಜವಾಗಿಯೇ ಕೇಂದ್ರವು ಹಿರಿಯಣ್ಣ. ಅದೀಗ ಜಿಎಸ್‌ಟಿಯಲ್ಲಿ ಸಂಗ್ರಹವಾದ ಹಣದ ಶಾಸನಬದ್ಧ ಅರ್ಧಪಾಲನ್ನೂ ರಾಜ್ಯಗಳಿಗೆ ನೀಡದೆ ಸತಾಯಿಸುತ್ತಿದೆ. ಅಷ್ಟೇ ಅಲ್ಲ, ‘ಪಿಎಮ್ ಕೇರ್ಸ್’ ಎಂಬ ತೆರಿಗೆ ಮುಕ್ತ ಖಾಸಗಿ ನಿಧಿಯನ್ನು ಸಂಗ್ರಹಿಸಿ ಅದರ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ಇಲ್ಲವಾಗಿಸಿದೆ. ಈ ತನಕ ಇದ್ದ ಪ್ರಧಾನಿ, ಮುಖ್ಯಮಂತ್ರಿಗಳ ನಿಧಿಗೆ ಬರುವ ಹಣವನ್ನು ಇಲ್ಲಿಗೆ ಹರಿಸಿದೆ. ಇದನ್ನೂ ರಾಜ್ಯಗಳಿಗೆ ಕೊಡುವ ಲಕ್ಷಣಗಳಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಬೇರೆ ಕೇಂದ್ರ ಬೇರೆಯೆಂದಾದರೆ ದೇಶ ಒಂದೊ ನಾಶವಾದೀತು; ಇಲ್ಲವೆ ಹರಿದು ಹಂಚಾದೀತು!


19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಪೂರ್ವಾರ್ಧದಲ್ಲಿ ಬದುಕಿದ ಜನಪ್ರಿಯ ಮತ್ತು ಶ್ರೇಷ್ಠ ಆಂಗ್ಲ ಕವಿ ಯೇಟ್ಸ್ ಕನ್ನಡದ ಕವಿಗಳಾದ ಕೆ.ಎಸ್.ನ. ಮತ್ತು ಅಡಿಗರಂತೆ ರಮ್ಯ ಸಂಪ್ರದಾಯದಲ್ಲಿ ಬೆಳೆದು ಬಳಿಕ ನವ್ಯ ಸಂಪ್ರದಾಯಕ್ಕೆ ಹೊರಳಿಕೊಂಡವನು. ಆತನ ಪ್ರಸಿದ್ಧ ಕವಿತೆಗಳಲ್ಲೊಂದಾದ ‘ಪುನರಾಗಮನ’ (the second coming) ಕುಸಿತ, ಭ್ರಮನಿರಸನ ಹಾಗೂ ಹೊಸ ನಿರೀಕ್ಷೆಗಳ ಕುರಿತು ಮಾರ್ಮಿಕ ಒಳನೋಟಗಳನ್ನು ಬೀರುತ್ತದೆ. ಕವಿ ಬರೆಯುತ್ತಾನೆ- ‘ಚೆಲ್ಲಾಪಿಲ್ಲಿ ಎಲ್ಲ, ಕೂಡಿ ಹಿಡಿಯುವ ಶಕ್ತಿ ಕೇಂದ್ರಕ್ಕಿಲ್ಲ..’ ಮತ್ತು ಮುಂದೆ ‘ಅರಾಜಕತೆಯನ್ನೇ ವಿಶ್ವದ ಮೇಲೆ ಛೂಬಿಟ್ಟ ಹಾಗಿದೆ’. ಕೊನೆಗೆ ಎಲ್ಲವೂ ಕರಗಿ ಹೊಸದೇನೋ ಬರುವುದೆಂಬ ಆತಂಕಿತ ನಿರೀಕ್ಷೆಯಲ್ಲಿ (‘ತೂಗು ತೊಟ್ಟಿಲು ಕೊಟ್ಟ ಶಾಪಕ್ಕೆ ಶತಮಾನವಿಪ್ಪತ್ತು ನಿದ್ರೆ ಭಂಗಿಸಿದ ದುಸ್ವಪ್ನ ತನ್ನ ಹುಟ್ಟಿನ ಘಳಿಗೆ ಬಂತೇನೋ ಎಂಬಂತೆ ಬೆತ್ಲೆಹೆಮಿನೆಡೆಗೆ ನಡೆಯುವುದೆ ಮರುಹುಟ್ಟಿಗೆ?’) ಎಂಬಲ್ಲಿಗೆ ಕವಿತೆ ಮುಗಿಯುತ್ತದೆ. ಈ ಕವಿತೆಯ ಸಾಲುಗಳ ಶೀರ್ಷಿಕೆಯ ಕಾದಂಬರಿ ೞಜ್ಞಿಜ ಊಚ್ಝ್ಝ ಅಚ್ಟಠಿೞನ್ನು ಆಫ್ರಿಕನ್ ಸಾಹಿತಿ ಚಿನುವಾ ಅಚುಬೆ ಬರೆದಿದ್ದಾನೆ. ಒಂದಲ್ಲ ಒಂದು ಕಾರಣಕ್ಕೆ ಮತ್ತು ಹೆಚ್ಚಾಗಿ ತನ್ನ ಸಾರ್ವಕಾಲಿಕ ಪ್ರಸ್ತುತತೆಗಾಗಿ ಯೇಟ್ಸ್ಸ್‌ನ ಈ ಕವಿತೆ ಮಹತ್ವವನ್ನು ಪಡೆದಿದೆ. ಬರಹಗಾರನೊಬ್ಬ ಪ್ರವಾದಿಯಾಗುವುದು ತನ್ನ ಸತ್ಯನಿಷ್ಠೆ, ವಸ್ತುನಿಷ್ಠೆ ಮತ್ತು ಕಲ್ಪನಾಶಕ್ತಿಯಿಂದಲೇ ಹೊರತು ಪಾಂಡಿತ್ಯದಿಂದಲ್ಲ. ಸಾಹಿತಿಗಳು ಅನಭಿಷಿಕ್ತ ಜನಪ್ರತಿನಿಧಿಗಳೆಂದು ಆಂಗ್ಲ ಕವಿ ಶೆಲ್ಲಿ ಹೇಳಿದ್ದು ಈ ಅರ್ಥ ಮತ್ತು ಭಾವನೆಯಿಂದಲೇ ಇರಬೇಕು.

  


 

ಕುವೆಂಪು ಅವರ ಪ್ರಸಿದ್ಧ ನಾಟಕ ‘ಶ್ಮಶಾನ ಕುರುಕ್ಷೇತ್ರಂ’ನಲ್ಲಿ ಸೂತ್ರವಾಕ್ಯಗಳೇ ಹೀಗಿವೆ: ‘..ವಿಶೇಷತೆಗಾಗಿ ಸಾಮಾನ್ಯರ ಆಹುತಿ. ಸಂಸ್ಕೃತಿ ನಾಗರಿಕತೆ ಪ್ರಗತಿ ಎಲ್ಲ ಶ್ಮಶಾನರುದ್ರನ ಮೆಯ್ಗೆ ಭಸ್ಮಲೇಪನವಾಗುತ್ತದೆ. ಸರಿ, ಪುನರ್‌ಸೃಷ್ಟಿಯ ಪ್ರಾರಂಭ, ನಾಟಕಾರಂಭ: ವಿಶ್ವಲೀಲೆ ಸಾಗುತ್ತದೆ.’ ಆದರೆ ನಮ್ಮ ಬಹುಪಾಲು ಬರಹಗಾರರು ತಮ್ಮ ಮುಸುಕಿನೊಳಗಿನ ಕನಸುಗಳನ್ನೇ ಜಗತ್ತು ಮತ್ತು ಅಲ್ಲಿನ ಜನರು ನನಸೆಂದು ತಿಳಿಯಬೇಕೆಂದು ಭಾವಿಸಿದಂತಿದೆ. ತನ್ನ ಸಮಕಾಲೀನ ಸಮಾಜದ ತವಕ-ತಲ್ಲಣಗಳಿಗೆ ಕಿವಿಕೊಟ್ಟರೂ ಮಾತನಾಡದ, ಬರೆದು ಸದ್ದುಮಾಡದ ಅನೇಕ ಏಕಾಗ್ರಚಿತ್ತರು ಇದ್ದಾರೆ. ಅವರನ್ನು ಜನಪ್ರತಿನಿಧಿಗಳೆಂದು ಕರೆಯುವುದು ಸಾಧುವಾಗದು. ಫಾಸ್ಟನ ಮೆಫಿಸ್ಟೋಫಿಲಿಸ್ ತನ್ನ ಕಬಂಧ ಬಾಹುಗಳಿಂದ ಮನುಷ್ಯರನ್ನು ಹೆಡೆಮುರಿಕಟ್ಟಿದೆ. ಮನುಷ್ಯ ಮಿಸುಕಾಡಲಸಾಧ್ಯನಾಗಿ ನೇಣುಶಿಕ್ಷೆಗೆ ಗುರಿಯಾದವನಿಗೆ ಎಲ್ಲ ಮೇಲ್ಮನವಿಗಳೂ ಮುಗಿದು ಕ್ಷಮಾದಾನವೂ ಸಿಕ್ಕದೆ ಬದುಕಿನ ಕೊನೆಯ ಕ್ಷಣಗಳಿಗಾಗಿ ಕಾದಂತಿದೆ. ಕೊರೋನಎಂಬ ವೈರಾಣುವು ಮಾಡಿದ ಹಾನಿಯ ನಡುವೆಯೂ ಆಸೆಗಣ್ಣುಗಳಿಂದ ಯಾರಾದರೂ ಬದುಕುವುದು ಸಾಧ್ಯವೆಂದು ಸಾಬೀತುಮಾಡಿದರೆ ಹೊಸದೊಂದು ಭ್ರಮಿತ ಜಗತ್ತು ಸಿದ್ಧಿಸಬಹುದು. ಕೋವಿಡ್-19ರ ಭಾರತೀಯ ‘ಲಾಕ್‌ಡೌನ್’ ಇದೀಗ ಭರ್ಜರಿ 3ನೆಯ ತಿಂಗಳಿನಲ್ಲಿ ತುಂಬಿದ ಗೃಹಗಳಿಗೆ ಪ್ರದರ್ಶಿತವಾಗುತ್ತಿದೆ. ಇಡೀ ವಿಶ್ವಕ್ಕೆ ಸಂಬಂಧಿಸಿದ ಈ ಘೋರ ವಿಪತ್ತಿನಲ್ಲ್ಲಿ ಭಾರತ ತಾನೆ ಏನು ಮಾಡಬಹುದು ಎಂಬ ತಾತ್ವಿಕ ಮತ್ತು ರಾಜಕೀಯವಾಗಿ ಅನುಕೂಲಕರ ಪಲಾಯನವಾದವನ್ನು ಮಂಡಿಸಿ ಪಾರಾಗುವ ಸುಖದಲ್ಲಿ ದೇಶದ ಬಹುಮತ ಬೆಂಬಲಿತರೂ ಬೆಂಬಲಿಗರೂ ಇದ್ದಾರೆ. ಕಳೆದ ಎರಡೂವರೆ ತಿಂಗಳಿನ ಹಿಮ್ಮುಖ ಚಲನೆಯೆ ನಮ್ಮ ಸೂತ್ರವೆಂಬಂತಿದೆ. ಆರಂಭದಲ್ಲಿ ಅಲಕ್ಷ, ಆನಂತರ ಕೆಲವೇ ಪ್ರಕರಣಗಳಿದ್ದಾಗ ಭಾರೀ ಕಟ್ಟುನಿಟ್ಟು, ಬಳಿಕ ಆಸ್ಪತ್ರೆಗಳು ತುಂಬಿದಾಗ ‘ಲಾಕ್‌ಡೌನ್’ ಸಡಿಲದ ನೆಪದಲ್ಲಿ ಕುಸಿತವನ್ನು ಕಂಡಿದ್ದೇವೆ. ವಲಸೆ ಕಾರ್ಮಿಕರು ಬಹುಪಾಲು ಯಾತನೆಯನ್ನು ಅನುಭವಿಸಿದ ನಂತರ ನ್ಯಾಯಾಂಗವು ಪ್ರವೇಶಿಸಿದೆ. ಹಿಂಸೆಯನ್ನು ಅನುಭವಿಸುವ ಜನತೆಯ ಮುಂದೆ ಗಿಲಿಗಿಲಿ ಇಂದ್ರಜಾಲದ ಕೊಡುಗೆಗಳನ್ನು ನೀಡಿ ಅನಿವಾರ್ಯ ನೋವು-ಸಾವನ್ನು ಶಮನಮಾಡುವ ತಂತ್ರಗಾರಿಕೆಯಲ್ಲಿ ನಮ್ಮನ್ನಾಳುವವರು ಸಿದ್ಧಿಬದ್ಧರಾಗಿದ್ದಾರೆ. ಎಲ್ಲವೂ ಸರಿಯಿದೆಯೆನ್ನುತ್ತಿದ್ದಾರೆ. ಸರಿಯಿಲ್ಲವೆಂದು ಹೇಳಿದರೆ ‘ನಿನಗೆಲ್ಲೋ ತಲೆಕೆಟ್ಟಿದೆ’ ಎನ್ನುತ್ತಿದ್ದಾರೆ. ಮಾರಕ ಕಾಯಿಲೆಯೊಂದನ್ನು ನಿವಾರಣೆ ಮಾಡಬೇಕಾದರೆ ಸರಿಯಾದ ಯೋಜನೆ, ಯೋಚನೆ, ಸಂಶೋಧನೆ, ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯವಾದ ನಿಲುವು ಬೇಕೇ ವಿನಾ ಶಿಸ್ತಿನ ಹೆಸರಿನ ಶಕ್ತಿಪ್ರದರ್ಶನದಿಂದ ಏನೂ ಸಾಧನೆಯಾಗದು. ಆದರೆ ಭಾರತದಲ್ಲಿ ವೈದ್ಯರಿಗಿಂತ, ಆರೋಗ್ಯ ಕಾರ್ಯಕರ್ತರಿಗಿಂತ ಹೆಚ್ಚಾಗಿ ಪೊಲೀಸರೂ ಅಧಿಕಾರಶಾಹಿಗಳೂ ಆಳುವ ರಾಜಕಾರಣಿಗಳೂ ವಿಜೃಂಭಿಸಿದ್ದಾರೆ. ಆಡಳಿತವಿರುವುದೇ ಜನದಮನಕ್ಕಾದರೆ ಕೊನೆಗೆ ಹರಿಶ್ಚಂದ್ರನಂತೆ ಸಾಯುವುದಕ್ಕೂ ಜನರಿಲ್ಲದ ಶ್ಮಶಾನವನ್ನೇ ಆಳಬೇಕಾದೀತೆಂಬುದನ್ನು ದೊರೆಗಳು ಮರೆತಿದ್ದಾರೆ. ಇವು ಸೂತ್ರವಾಕ್ಯಗಳಂತೆ ಅನ್ನಿಸಬಹುದು. ಈಗ ಸರಕಾರ ನೀತಿಯೆಂದು ಸಾರಿದ ಕೆಲವು ವಿಚಾರಗಳನ್ನು ಗಮನಿಸಿದರೆ ಸರಕಾರದ ಉದ್ದೇಶಗಳು ಒಂದೊಂದಾಗಿ ಬೆಳಕಿಗೆ (ಅಥವಾ ಕತ್ತಲಿಗೆ?) ಬರುತ್ತಿವೆ. ಇಂತಹ ದುರ್ಭರ ಪ್ರಸಂಗಗಳಲ್ಲಿ ಯಾವ ಸರಕಾರವಾದರೂ ಬಡವಾಗಬಹುದು. ಅವನ್ನು ಹೇಗೆ ಭರಿಸುವುದೆಂಬ ಬಗ್ಗೆ ಅರ್ಥತಜ್ಞರು ಚಿಂತಿಸಬೇಕು. ಕದಿಯುವುದನ್ನು ಬಿಟ್ಟು ಇತರ ಎರಡು ದಾರಿಗಳು- ಭಿಕ್ಷೆಬೇಡಿ ಅಥವಾ ಸಾಲತಂದಾದರೂ ಹಣವನ್ನೊದಗಿಸಬೇಕು. ಈ ದೇಶದ ಶೇ.90 ಸಂಪತ್ತನ್ನು ಹೊಂದಿದ ಶೇ.1 ಸಿರಿವಂತರು ಸರಕಾರಕ್ಕೂ ಸಾಲ ನೀಡುವ ಶಕ್ತಿಯನ್ನು ಹೊಂದಿದ್ದಾರೆ. ಅಂತಹವರು ಒಂದಷ್ಟು ದಾನ ನೀಡಿ ತೃಪ್ತರಾದರೆ ಪ್ರಯೋಜನವಿಲ್ಲ. ಅಂತಹವರ ಮೇಲೆ ಕೋವಿಡ್ ತೆರಿಗೆಯನ್ನು ವಿಧಿಸಬಹುದೆಂದು ಕೆಲವಾದರೂ ಆರ್ಥಿಕ ತಜ್ಞರು ಸಲಹೆ ನೀಡಿದರು. ಆದರೆ ಸರಕಾರಕ್ಕೆ ಇವು ರುಚಿಸಲಿಲ್ಲ. ಏಕೆಂದರೆ ಒಮ್ಮೆ ಜನಮತದಿಂದ ಆಯ್ಕೆಯಾದರೆ ಆನಂತರ ಈ ಲಕ್ಷ್ಮೀಪುತ್ರರ ಜೊತೆಗೇ ಸರಕಾರದ ಸಖ್ಯ. ಆದ್ದರಿಂದ ಸರಕಾರ ಈ ಹಾದಿಯನ್ನು ಹಿಡಿಯದಾಯಿತು. ಆದರೆ ಹೇಗಾದರೂ ಬಡವರ ಪುಟ್ಟ ತುತ್ತಿನ ಚೀಲಕ್ಕೆ ಕೈಯಿಟ್ಟು ಹಣಸಂಪಾದಿಸುವ ಏಕೈಕ ಉದ್ದೇಶದಿಂದ ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡಲಾಯಿತು. ಒಂದೆಡೆ ಸರಕಾರವೇ ಮದ್ಯಪಾನ ಸಂಯಮ ಮಂಡಳಿಯನ್ನು ಸ್ಥಾಪಿಸುತ್ತಿದೆ. ಗಾಂಧಿಯನ್ನು ವರುಷಕ್ಕೆರಡುಬಾರಿ ನೆನಪಿಸುತ್ತದೆ; ಆದರೆ ಮದ್ಯಪಾನದ ವಿಚಾರ ಬಂದಾಗ ಅದು ನಿಧಿ 
  
ತರುವ ಲಕ್ಷ್ಮೀಯೆಂಬಂತೆ ಪೂಜೆಮಾಡುತ್ತದೆ. ಕೊರೋನದ ಜೊತೆಗೆ ಅಥವಾ ಕೊರೋನದ ಬದಲಿಗೆ ಇದರ ಮೂಲಕ ಜನರು ಸಾಯಲಿ ಎಂಬ ಒಳತಂತ್ರವೂ ಸರಕಾರಕ್ಕಿರಬಹುದು. ಕುಡುಕರೂ ಮಾತ್ರವಲ್ಲ, ಅವರ ಚಟಕ್ಕೆ ಸಿಕ್ಕಿ ಅವರ ಮನೆಯ ಮಂದಿ ಬಲಿಯಾಗುವ ವರದಿಗಳೂ ಇವೆ. ಈಗ 5ನೇ ಹಂತದ ‘ಲಾಕ್‌ಡೌನ್’ ಘೋಷಣೆಯಾದ ಬಳಿಕ ಜೂನ್ 8ರಿಂದ ಕೆಲವು ದುರಂತಕಾರಣಗಳು ಶೋಭಿಸಲಿವೆೆ: ಮಂದಿರ, ಚರ್ಚ್ ಮಸೀದಿ ಮುಂತಾದ ಪೂಜಾಗೃಹಗಳು: ಬೆಳಗ್ಗೆ ತೆರೆಯಬೇಕಾದ ಬಾಗಿಲನ್ನು ಮಧ್ಯರಾತ್ರಿ ತೆರೆದರೆ ದೇವರುಗಳು ಪ್ರತ್ಯಕ್ಷರಾಗರು; ಭೂತಪಿಶಾಚಿಗಳು (ಈಗ ಹೊಸದಾಗಿ ಜೋಂಬಿಗಳೆಂಬ ಭಯಾನಕ ಕಲ್ಪಿತ ತಲೆಮಾರು) ಒಳಬಂದಾವು. ಪೂಜಾಸ್ಥಾನಗಳನ್ನು ತೆರೆಯಲು ಎಲ್ಲಿಲ್ಲದ ಬೇಡಿಕೆ; ಉತ್ಸಾಹ. ತಮಾಷೆಯೆಂದರೆ ಆನ್‌ಲೈನ್ ಪೂಜೆಗೆ ಅನುಮತಿ; ಇತ್ತಲಿಂದ ಪೂಜಾ ಸರಕು ನಿಷಿದ್ಧ; ಅತ್ತಲಿಂದ ತೀರ್ಥ-ಪ್ರಸಾದ ನಿಷಿದ್ಧ. ಆದರೆ ಕುಣಿಯುವ ಕುರುಡು ಕಾಂಚಾಣಕ್ಕೆ ಅವಕಾಶ. ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತಿತರ ಅತಿಥಿಗೃಹಗಳು: ಇವು ಜನರನ್ನು ಉಳಿಯಲು ಉಳಿಸಲು ಮಾಡಿದ ಯೋಜನೆಯೇ ಅಥವಾ ಅವರನ್ನು ಅಳಿಸಲು ಹೂಡಿದ ವ್ಯೆಹವೇ ಗೊತ್ತಿಲ್ಲ. ಭಾರತೀಯ ಪರಂಪರೆಯನ್ನು, ಅವ್ಯವಸ್ಥೆಯನ್ನು ಅರ್ಥಮಾಡಿಕೊಂಡ ಮಂದಿಗೆ ಇದರ ಭಯಾನಕ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಮಾಲ್‌ಗಳು: ಮಹಾನಗರಗಳಲ್ಲಿ ಇವು ವ್ಯಾಪಾರಿ ಕೇಂದ್ರಗಳು ಹೇಗೊ ಹಾಗೆಯೇ ಸಂತೆಯಂತೆ ಸುಮ್ಮನೆ ಸುತ್ತುವ ಕೇಂದ್ರಗಳೂ ಹೌದು. ಆದರೂ ಪರಸ್ಪರ ಸಂಪರ್ಕಿಸಲು, ಬಲಿಯಾಗಲು ಇದಕ್ಕಿಂತ ಭೀಕರ ಸಂದರ್ಭ ಬೇರೆ ಇರದು. ಇಷ್ಟು ಮಾಡಿದವರಿಗೆ ಬಸ್‌ಗಳಲ್ಲಿ, ರೈಲುಗಳಲ್ಲಿ, ಮಾರುಕಟ್ಟೆಗಳಲ್ಲಿ ನೂಕುನುಗ್ಗಲು ಆದರೂ ದುಃಖವಾಗದು. ನಮ್ಮ ಮಕ್ಕಳ ಅದೃಷ್ಟ. ಶಾಲಾಕಾಲೇಜುಗಳು ಇನ್ನೂ ಶುರುವಾಗಿಲ್ಲ. ಶಿಕ್ಷಣಕ್ಕೆ ಆನ್‌ಲೈನ್ ವೇದಿಕೆಯೇ ಅಲ್ಲ. ಅದು ಪಾಠ ಹೇಳುವ, ಕಲಿಯುವ, ಆ ಮೂಲಕ ವಿಕಾಸವಾಗುವ ವಾತಾವರಣವನ್ನು ಸೃಷ್ಟಿಸದು. ತಿಂಗಳುಗಳೋ, ವರುಷವೋ ವ್ಯರ್ಥವಾದರೆ ಚಿಂತೆಯಿಲ್ಲ. ಹೆತ್ತವರ ಪ್ರೀತಿಯಾದರೂ ದಕ್ಕೀತು. ಮನೆಯೇ ಮೊದಲ ಪಾಠಶಾಲೆ ಹೌದಲ್ಲ!

ಕೊರೋನದ ಹಾವಳಿಯ ನಡುವೆಯೂ ಕೊಳಕು ರಾಜಕಾರಣ ನಡೆಯುತ್ತಲೇ ಇದೆ. ದ್ವೇಷಭಾಷಣಗಳು, ಕಾನೂನಿನ ಹೆಸರಿನ ಕ್ರೌರ್ಯದ ಕ್ರಮಗಳು ಮುಂದುವರಿದಿವೆ. ಇಂತಹ ದುರ್ಭರ ಸನ್ನಿವೇಶದಲ್ಲೂ ಸಂವಿಧಾನದಲ್ಲಿ ನೀಡಲಾದ ರಾಜ್ಯಾಂಗ ನೀತಿಯ ನಿರ್ದೇಶಿತ ತತ್ವಗಳನ್ನು ಅನುಷ್ಠಾನಗೊಳಿಸಲು, ಹೋಗಲಿ, ಮೂಲಭೂತ ಹಕ್ಕುಗಳನ್ನು ಉಳಿಸಲೂ ಆಡಳಿತವು ಸಿದ್ಧವಾಗಿಲ್ಲ. ಒಂದಿಲ್ಲ ಒಂದು ನೆಪಗಳ ಮೂಲಕ ಜನರನ್ನು ನಿಯಂತ್ರಿಸಲು ಮಾತ್ರವಲ್ಲ ಹತ್ತಿಕ್ಕಲು ಕ್ರಮಗಳನ್ನು ಜೋಡಿಸುತ್ತಿದೆ. ಕಾಶ್ಮೀರದಲ್ಲಿ ಕಳೆದ ಒಂದು ವರುಷದಿಂದ ಪರಿಸ್ಥಿತಿ ಹೇಗಿದೆಯೆಂಬುದು ಗೊತ್ತಿದ್ದರೂ ಅಲ್ಲಿನ ಜನರಿಗೆ ಮುಕ್ತಿ ಸಿಕ್ಕಿಲ್ಲ. ಭಯೋತ್ಪಾದನೆಯ, ದೇಶದ್ರೋಹದ ಹೆಸರಿನಲ್ಲಿ ಮುಗ್ಧರನ್ನೂ, ಬುದ್ಧಿವಂತರನ್ನೂ ಹೊಸಹೊಸ ಪ್ರಕರಣಗಳನ್ನು ದಾಖಲಿಸುವ ಮೂಲಕ ನಿರ್ಮೂಲನಕ್ಕೆ ಸರಕಾರ ತೊಡಗಿದೆ. ಇದಕ್ಕೆ ಅಧಿಕಾರಶಾಹಿ ಕಾರ್ಯಾಂಗದ ಹೆಸರಿನಲ್ಲಿ ಭಾರೀ ನೆರವು ನೀಡುವುದು ವಿಷಾದದ ಸಂಗತಿ. ನಮ್ಮ ರಾಜಕಾರಣಿಗಳಲ್ಲೂ ಇದೇ ಮನೋಭಾವವಿರುವುದರಿಂದಲೇ ಈ ದೇಶದ ಸ್ಥಿತಿ ಹೀಗಿರುವುದು. ಮುಂದೆ ತನಗೂ ದುರಾಡಳಿತದ ಈ ಸಾಂಕ್ರಾಮಿಕ ಪಿಡುಗು ಸೋಂಕಬಹುದೆಂದು ಮತ್ತು ಬಾಧಿಸಬಹುದೆಂದು ತಿಳಿದಿದ್ದರೂ ಈಗ ತನ್ನ ಕಾಲವೆಂಬಂತೆ ಇತರರನ್ನು ಸದೆಬಡಿಯಲು ಆಳುವ ನಿಯಮಗಳನ್ನು ರೂಪಿಸುವ ಮನುಷ್ಯರನ್ನು ಮನುಷ್ಯರೆಂದು ಹೇಗೆ ಕರೆಯೋಣ? ಕೊರೋನದಿಂದ ಸಂಕಷ್ಟಕ್ಕೆ ಬಿದ್ದ ಜನರನ್ನು ಎತ್ತುವ ಪ್ರಧಾನಿ ಘೋಷಿತ 20 ಲಕ್ಷ ಕೋಟಿ ರೂ. ಯೋಜನೆಯ ಫಲಿತಾಂಶ ಇನ್ನೂ ಕಾಣದಾಗಿದೆ. ಕೇಂದ್ರ-ರಾಜ್ಯಗಳ ಸಂಬಂಧದಲ್ಲಿ ಸಹಜವಾಗಿಯೇ ಕೇಂದ್ರವು ಹಿರಿಯಣ್ಣ. ಅದೀಗ ಜಿಎಸ್‌ಟಿಯಲ್ಲಿ ಸಂಗ್ರಹವಾದ ಹಣದ ಶಾಸನಬದ್ಧ ಅರ್ಧಪಾಲನ್ನೂ ರಾಜ್ಯಗಳಿಗೆ ನೀಡದೆ ಸತಾಯಿಸುತ್ತಿದೆ. ಅಷ್ಟೇ ಅಲ್ಲ, ‘ಪಿಎಮ್ ಕೇರ್ಸ್’ ಎಂಬ ತೆರಿಗೆ ಮುಕ್ತ ಖಾಸಗಿ ನಿಧಿಯನ್ನು ಸಂಗ್ರಹಿಸಿ ಅದರ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ಇಲ್ಲವಾಗಿಸಿದೆ. ಈ ತನಕ ಇದ್ದ ಪ್ರಧಾನಿ, ಮುಖ್ಯಮಂತ್ರಿಗಳ ನಿಧಿಗೆ ಬರುವ ಹಣವನ್ನು ಇಲ್ಲಿಗೆ ಹರಿಸಿದೆ. ಇದನ್ನೂ ರಾಜ್ಯಗಳಿಗೆ ಕೊಡುವ ಲಕ್ಷಣಗಳಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಬೇರೆ ಕೇಂದ್ರ ಬೇರೆಯೆಂದಾದರೆ ದೇಶ ಒಂದೊ ನಾಶವಾದೀತು; ಇಲ್ಲವೆ ಹರಿದು ಹಂಚಾದೀತು!
   
 
ಭಾರತದಲ್ಲಿನ ಕೊರೋನದಿಂದ ನಿಜವಾಗಿ ಲಾಭವಾದದ್ದು ಪಾಕಿಸ್ತ್ತಾನಕ್ಕೆ. ಆಶ್ಚರ್ಯವಾದರೂ ನಿಜವೆಂಬ ಶೀರ್ಷಿಕೆಯಲ್ಲಿ ಇದನ್ನು ಪ್ರಕಟಿಸಬಹುದು. ದಿನನಿತ್ಯ ಸುಪ್ರಭಾತದಂತೆ ಪಾಕಿಸ್ತಾನವನ್ನು ಜಪಿಸುವ ಭಾರತದ ಕೋಮುವಾದಕ್ಕೆ ಇದ್ದಕ್ಕಿದ್ದಂತೆ ಕೊರೋನ ಲಗಾಮು ಹಾಕಿದೆ. ನಮ್ಮ ಮಾಧ್ಯಮಗಳು ಈ ಅಂಶವನ್ನು ಏಕೆ ಗಮನಿಸಿಲ್ಲವೊ ಗೊತ್ತಿಲ್ಲ. ನೆರೆಯ ನೇಪಾಳವೂ ಗಡಿಯ ಕುರಿತು ಧ್ವನಿಯೆಬ್ಬಿಸಿದೆ. ಸಿಎಎಯ ಆನಂತರ ಬಾಂಗ್ಲಾದೇಶವೂ ಭಾರತದೊಂದಿಗಿಲ್ಲ. ಜೊತೆಗೆ ಚೀನಾವು ಕೊರೋನದ ಲಾಭವನ್ನು ಪಡೆಯಲು ಉತ್ತರದ ಗಡಿಯಲ್ಲಿ ತಕರಾರನ್ನೆತ್ತಿ ಸಮರಸಾರುತ್ತಿದೆ. ‘ಪಿಒಕೆ’ (ಪಾಕ್ ಆಕ್ರಮಿತ ಕಾಶ್ಮೀರ) ಎಂದಷ್ಟೇ ತಿಳಿದಿದ್ದ ದೇಶಭಕ್ತರಿಗೆ ಸಿಒಕೆ (ಚೀನಾ ಆಕ್ರಮಿತ ಕಾಶ್ಮೀರ)ವೂ ಇದೆಯೆಂಬುದು ನಿಧಾನವಾಗಿಯಾದರೂ ತಿಳಿಯುತ್ತಿದೆ. ದುರ್ಬಲ ಪಾಕಿಸ್ತಾನದೊಂದಿಗೆ ನಮಗಿರುವುದು ‘ಗಡಿನಿಯಂತ್ರಣ ರೇಖೆ’ (ಎಲ್‌ಒಸಿ) ಯಾದರೆ, ಬಲಿಷ್ಠ ಚೀನಾದೊಂದಿಗಿರುವುದು ‘ವಾಸ್ತವ ಗಡಿನಿಯಂತ್ರಣ ರೇಖೆ’ (ಎಲ್‌ಎಸಿ). ಭಾರತ ಸರಕಾರವು ಚೀನಾದೊಂದಿಗೆ ಗಡಿಯಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತಿಳಿಸುತ್ತಿಲ್ಲ. ಇದರಲ್ಲಿ ದೇಶದ ಹಿತದೃಷ್ಟಿಯೆಷ್ಟು, ಸ್ವಹಿತಾಸಕ್ತಿಯ ರಾಜಕೀಯವೆಷ್ಟು ಎಂಬುದು ಇನ್ನಷ್ಟೇ ಗೊತ್ತಾದೀತು! ನೆರೆಹೊರೆಯ ದೇಶಗಳೆಲ್ಲ ದೂರಸರಿದರೆ ಅಮೆರಿಕದಂತಹ ದೂರದ ದೊಡ್ಡಣ್ಣ ನೆರೆಯವನಾಗಲಾರ. ಹೊರೆಯಾದಾನು. ಇವೆಲ್ಲವನ್ನು ಗಮನಿಸಿದರೆ ಕೇಂದ್ರ ಸರಕಾರಕ್ಕೆ ತನ್ನೊಳಗಿನ ಮತ್ತು ಹೊರಗಿನ ವ್ಯವಹಾರಗಳಲ್ಲಿ ನಿಯಂತ್ರಣವಿಲ್ಲವೆಂಬುದು ಕಾಣಿಸುತ್ತಿದೆ. ಇಂತಹ ದುರ್ಭರ ಸಂದರ್ಭದಲ್ಲಿ ಬರ್ಬರತೆಯಾಗಲೀ, ನಿರ್ಭರತೆಯಾಗಲೀ ದೇಶವನ್ನು ರಕ್ಷಿಸದು. ಪ್ರಜಾತಂತ್ರ ಮತ್ತು ದಕ್ಷ ಒಕ್ಕೂಟ ವ್ಯವಸ್ಥೆ, ಮಾನವೀಯ ಅನುಕಂಪ, ಪ್ರಾಮಾಣಿಕ ಜನನಿಷ್ಠೆ ಮಾತ್ರ ದೇಶವನ್ನು ರಕ್ಷಿಸಬಲ್ಲುದು. ಅದೂ ಮರೆಯಾದರೆ ಉದ್ಧರಿಸುವುದಕ್ಕೆ ಯಾವ ದೇವರೂ ಮತ್ತೆ ಅವತಾರವೆತ್ತಲಾರ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)