varthabharthi


ಗಲ್ಫ್ ಸುದ್ದಿ

ತಾಯ್ನಾಡಿಗೆ ವಾಪಸಾಗಲು ಕಾತರದಿಂದ ಕಾಯುತ್ತಿರುವ ಅನಿವಾಸಿ ಕನ್ನಡಿಗರು

ಕತರ್‌ನಲ್ಲಿ 3000ಕ್ಕೂ ಹೆಚ್ಚು ಕನ್ನಡಿಗರು ಅತಂತ್ರ

ವಾರ್ತಾ ಭಾರತಿ : 4 Jun, 2020

ದೋಹಾ/ಮಂಗಳೂರು, ಜೂ.4: ಕೊರೋನ ಸಂಕಷ್ಟದಲ್ಲಿ ಕತರ್‌ನಲ್ಲಿನ ಸಾವಿರಾರು ಕನ್ನಡಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ತಾಯ್ನಾಡಿಗೆ ಮರಳಲು ಸೂಕ್ತ ವ್ಯವಸ್ಥೆ ಇಲ್ಲದೇ ತೊಂದರೆಗೆ ಸಿಲುಕಿದ್ದಾರೆ. ಇತ್ತ ಉದ್ಯೋಗವೂ ಇಲ್ಲ, ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ತಲೆದೋರಿದೆ. 

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಈಗಾಗಲೇ ದುಬೈ, ಸೌದಿ ಅರೇಬಿಯ, ಕುವೈತ್ ಸಹಿತ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಮೂಲಕ ಕರೆಸಿಕೊಳ್ಳಲು ಆರಂಭಿಸಲಾಗಿದೆ. ಆದರೆ ಕತರ್ ದೇಶದಲ್ಲಿ ಸಿಲುಕಿರುವ ಕನ್ನಡಿಗರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. 

ಕತರ್‌ನಲ್ಲಿ 30,000ಕ್ಕೂ ಹೆಚ್ಚು ಸಂಖ್ಯೆಯ ಕನ್ನಡಿಗರು ಜೀವನೋಪಾಯ ಕಂಡುಕೊಂಡಿದ್ದಾರೆ. ಈ ಪೈಕಿ 3,000ಕ್ಕೂ ಹೆಚ್ಚು ಜನ ತಾಯ್ನಾಡಿಗೆ ಮರಳಲು ಕಾತರರಾಗಿದ್ದಾರೆ. ಉದ್ಯೋಗವೂ ಇಲ್ಲದೇ ಕೈಯಲ್ಲಿ ಖರ್ಚಿಗೆ ಹಣವೂ ಇಲ್ಲದೇ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಿಸುವ ಪ್ರಸಂಗ ಏರ್ಪಟ್ಟಿದೆ. ಕೊರೋನ ಕಾರಣದಿಂದ ಗಲ್ಫ್ ರಾಷ್ಟ್ರಗಳಲ್ಲಿ ನಿರ್ಮಾಣ ಕಾರ್ಯಗಳು ಸ್ತಬ್ಧಗೊಂಡಿದ್ದು, ಚಿಕ್ಕ ಕಂಪೆನಿಗಳು ಮುಚ್ಚಿವೆ. ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕನ್ನಡಿಗರು ಅತಂತ್ರರಾಗಿದ್ದಾರೆ.

ಗಲ್ಫ್‌ನಲ್ಲಿ ಕನ್ನಡಿಗರ ಪರದಾಟ: ಕತರ್‌ನಲ್ಲಿ ಉದ್ಯೋಗ ಕಳೆದುಕೊಂಡಿರುವ ಕನ್ನಡಿಗರು ಅಕ್ಷರಶಃ ಪರದಾಡುವಂತಾಗಿದೆ. ಕಳೆದ ನಾಲ್ಕು ತಿಂಗಳಿಂದ ಉದ್ಯೋಗವಿಲ್ಲದೆ ಕನ್ನಡಿಗರು ತಮ್ಮ ರೂಮಿನಲ್ಲಿ ಬಂಧಿಯಾಗಿದ್ದಾರೆ. ತಾಯ್ನಾಡಿಗೆ ಮರಳಲು ಯತ್ನಿಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ರಾಯಭಾರಿ ಕಚೇರಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕತರ್‌ನ ಮುಹಮ್ಮದ್ ನೂರುದ್ದೀನ್ ಉಪ್ಪಿನಂಗಡಿ ಗಲ್ಫ್ ಕನ್ನಡಿಗರ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸ್ವದೇಶಕ್ಕೆ ವಾಪಸಾಗಲು ರಾಯಭಾರಿ ಕಚೇರಿಯಲ್ಲಿ ಈಗಾಗಲೇ ಸಾವಿರಾರು ಕನ್ನಡಿಗರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ತಾಯ್ನಾಡಿಗೆ ಕರೆಸಿಕೊಳ್ಳುವುದಾಗಿ ಭರವಸೆ ನೀಡಿದ್ದ ಸರಕಾರಗಳು ಮೌನಕ್ಕೆ ಶರಣಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮನೆಯಿಂದ ಹೊರಗೆ ಹೋಗಲು ಕೂಡ ಅವಕಾಶವಿಲ್ಲ. ಮೊಬೈಲ್‌ನಲ್ಲಿ ಕೊವೀಡ್ ಸುರಕ್ಷಾ ಆ್ಯಪ್, ಮಾಸ್ಕ್ ಇಲ್ಲದೇ ಹೊರ ಕಾಲಿಟ್ಟರೆ ಲಕ್ಷಗಟ್ಟಲೇ ದಂಡ ವಿಧಿಸುತ್ತಾರೆ. ಜತೆಗೆ ಮೂರು ವರ್ಷಕ್ಕೂ ಹೆಚ್ಚಿನ ಜೈಲು ಶಿಕ್ಷೆಯ ಕಾನೂನುಗಳು ಜಾರಿಯಲ್ಲಿವೆ. ಯಾವ ಕಡೆಗೂ ಒಂದು ಹೆಜ್ಜೆ ಇಡದಂತಹ ಕರಾಳ ಸ್ಥಿತಿ ಎದುರಿಸುವ ಪರಿಸ್ಥಿತಿ ಗಲ್ಫ್ ಕನ್ನಡಿಗರದ್ದಾಗಿದೆ ಎಂದು ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ ನೂರುದ್ದೀನ್.

"ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರ, ರಾಜ್ಯ ಸಚಿವರು"

ಕತರ್‌ನಲ್ಲಿ ಸಹಸ್ರ ಸಂಖ್ಯೆಯಲ್ಲಿ ಕನ್ನಡಿಗರು ನಲುಗಿ ಹೋಗಿದ್ದಾರೆ. ಮೇ 22ರಂದು ಕತರ್‌ನಿಂದ ಕರ್ನಾಟಕಕ್ಕೆ ವಿಮಾನವೊಂದು ತೆರಳಿದ್ದು, ಅದರಲ್ಲಿ ರಾಜ್ಯದ 171 ಪ್ರಯಾಣಿಕರಿದ್ದರು. ಈ ಪೈಕಿ ಸುಮಾರು 40 ಜನ ಕರಾವಳಿಯವರು. ಅದೇ ಮೊದಲ ಮತ್ತು ಕೊನೆಯ ವಿಮಾನ. ಇನ್ನುಳಿದ 3,000ಕ್ಕೂ ಹೆಚ್ಚು ಕನ್ನಡಿಗರನ್ನು ಕರೆಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಬಂಟ್ಸ್ ಸಂಘ ಕತರ್ ಅಧ್ಯಕ್ಷ ದೀಪಕ್ ಶೆಟ್ಟಿ.

ಕೇಂದ್ರ ಸಚಿವರಾದ ಸದಾನಂದ ಗೌಡ, ಸುರೇಶ್ ಅಂಗಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವರಾದ ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸಹಿತ ಕರಾವಳಿಯ ಎಲ್ಲ ಶಾಸಕರನ್ನೂ ಸಂಪರ್ಕಿಸಲಾಗಿದೆ. ಕೇಂದ್ರ ಸಚಿವರು ರಾಜ್ಯ ಸಚಿವರನ್ನು ಕೇಳಿಕೊಳ್ಳಿ ಎನ್ನುತ್ತಾರೆ. ರಾಜ್ಯ ಸಚಿವ-ಶಾಸಕರು ಕೇಂದ್ರ ಸಚಿವರನ್ನೇ ವಿಚಾರಿಸಿ ಎನ್ನುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೀಪಕ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿನ ಭಾರತೀಯರನ್ನು ಕರೆಸಿಕೊಳ್ಳುವ ಬಗ್ಗೆ ಎಲ್ಲ ರಾಜ್ಯಗಳಿಗೂ ಸಮಿತಿ ರಚಿಸಲಾಗಿದೆ. ಕರ್ನಾಟಕದ ಸಮಿತಿಯಲ್ಲಿ ನಾನೂ ಸೇರಿದಂತೆ ನಾಗೇಶ್ ರಾವ್, ಖಲೀಲ್, ಸಂದೀಪ್ ರೆಡ್ಡಿ, ಶಶಿಧರ್ ಹೆಬ್ಬಾಳ್ ನೇತೃತ್ವದ ತಂಡದಿಂದ ಪ್ರತಿದಿನವೂ ಪ್ರಯತ್ನಿಸಲಾಗುತ್ತಿದೆ. ಕರ್ನಾಟಕ ಸಂಘ ಕತರ್, ತುಳುಕೂಟ, ಬಂಟ್ಸ್ ಕತರ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್, ಮಂಗಳೂರು ಕ್ರಿಕೆಟ್ ಕ್ಲಬ್, ಮಂಗಳೂರು ಕಲ್ಚರಲ್ ಅಸೋಸಿಯೇಶನ್, ಕತರ್ ಬಿಲ್ಲವಾಸ್ ಸಂಘಟನೆಗಳೂ ಶ್ರಮಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕತರ್ ರಾಯಭಾರಿ ಕಚೇರಿಯ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಮ್ಮ ಕೇಂದ್ರ, ರಾಜ್ಯ ಸಚಿವರು, ಶಾಸಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರವಂತೂ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ.
- ದೀಪಕ್ ಶೆಟ್ಟಿ, ಬಂಟರ ಸಂಘದ ಕತರ್ ಅಧ್ಯಕ್ಷ

ಕತರ್‌ಗೆ ಕರ್ನಾಟಕದಿಂದ ದುಡಿಯಲು, ಸಂಬಂಧಿಕರನ್ನು ಭೇಟಿಯಾಗಲು, ಸರಕಾರಿ ಕೆಲಸದ ನಿಮಿತ್ತ ಭೇಟಿಯಾಗಲು, ಚಿಕಿತ್ಸೆಗೆ ಬಂದ ರೋಗಿಗಳ ಸಂಖ್ಯೆಯೇ ಅಧಿಕವಿದೆ. ಸರಕಾರಗಳು ಸ್ಪಂದಿಸುತ್ತಿಲ್ಲ. ಇನ್ನಾದರೂ ಗಲ್ಫ್ ಕನ್ನಡಿಗರನ್ನು ಸರಕಾರಗಳು ಕರೆಸಿಕೊಳ್ಳುವಂತಾಗಲಿ.
- ಮುಹಮ್ಮದ್ ನೂರುದ್ದೀನ್ ಉಪ್ಪಿನಂಗಡಿ,ಕತರ್‌ನಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)