varthabharthi


ಅನುಗಾಲ

ಕೊಲ್ಲುವ ಕಲೆ ಮತ್ತು ಸಂಸ್ಕೃತಿಯ ಸಾವು

ವಾರ್ತಾ ಭಾರತಿ : 10 Jun, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅವಕಾಶ ಸಿಕ್ಕಿದರೆ ಎಲ್ಲರು ಕೆಟ್ಟವರೇ ಎಂಬ ಮಾತು ಸಾಧುವೆನಿಸುತ್ತದೆ. ಪತ್ರಿಕೆ ಮತ್ತಿತರ ಮಾಧ್ಯಮಗಳನ್ನವಲೋಕಿಸಿದರೆ ‘ಮೃಗೀಯ’ ವೆಂದು ಕರೆಸಿಕೊಳ್ಳುತ್ತಿದ್ದ ವರ್ತನೆಗಳು ಇಂದು ಮೃಗಗಳಲ್ಲಿಲ್ಲ. ಅವು ಮನುಷ್ಯನಲ್ಲೇ ಮನೆಮಾಡಿದಂತಿವೆ. ಅತ್ಯಾಚಾರ, ಕೊಲೆ ಮುಂತಾಗಿ ಜನರಲ್ಲಿ ಬೇರುಬಿಟ್ಟಿರುವ ಇವನ್ನು ದಾಖಲಿಸುವುದೂ ಒಂದು ಅಮಾನವೀಯ ಕೆಲಸವೇ ಇರಬಹುದು.

ಅಮೆರಿಕದ ಮಿನಪೊಲಿಸ್ ನಗರದಲ್ಲಿ ಜಾರ್ಜ್ ಫ್ಲಾಯ್ಡಾ ಎಂಬಾತನ ಕತ್ತಿನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಮೊಣಕಾಲನ್ನೊತ್ತಿ ಉಸಿರುಗಟ್ಟಿಸಿ ಕೊಂದ ಸುದ್ದಿ ಕಳೆದ ಎರಡುವಾರಗಳಿಂದ ಜಗತ್ತನ್ನೇ ತಲ್ಲಣಿಸಿದೆ. ಜಗತ್ತನ್ನೇ ಎಂಬ ಮಾತು ಸ್ವಲ್ಪ ಉತ್ಪ್ರೇಕ್ಷಿತ. ಏಕೆಂದರೆ ಇಂದು ಬಹುಪಾಲು ಮನುಷ್ಯರು ಎಷ್ಟು ಸ್ವಕೇಂದ್ರಿತರಾಗಿದ್ದಾರೆಂದರೆ ಅವರಿಗೆ ಇತರರ ಕುರಿತು ತಿಳಿಯುವ ಕುತೂಹಲವಿಲ್ಲ. ಇನ್ನು ಕೆಲವರು ಮುಗ್ಧರು; ಅವರಿಗೆ ಜಗತ್ತಿನ ವಿದ್ಯಮಾನಗಳ ತಿಳಿವಳಿಕೆಯಿರುವುದಿಲ್ಲ. ಇನ್ನೂ ಕೆಲವರು ಹಿಂಸಾಸಕ್ತರು; ಕ್ರೌರ್ಯಾಸಕ್ತರು. ಅವರಿಗೆ ಈ ಸುದ್ದಿ ಮನರಂಜನೆಯೋ ಕುತೂಹಲಕಾರಿಯೋ ಅಥವಾ ಇದಕ್ಕಿಂತಲೂ ಹಿಂಸ್ರರೀತಿಯ ಕೊಲೆಯ ಮಾದರಿಯ ಸಂಶೊಧನಾ ಅಗತ್ಯವೋ ಆಗಿರುತ್ತದೆ. (ನಮ್ಮ ಸಿನೆಮಾಗಳು ಕ್ರೌರ್ಯದ ಮಾದರಿಗಳ ಪಾಠಶಾಲೆಗಳಂತಿವೆ!) ಇನ್ನೂ ಕೆಲವರಿಗೆ ಇದೊಂದು ‘ಸುದ್ದಿ’, ಅಷ್ಟೇ. ಆದರೆ 21ನೆಯ ಶತಮಾನದ ಎರಡನೆಯ ದಶಕದ ಅಂತ್ಯಕ್ಕೆ ಇಂತಹ ಒಂದು ಘಟನೆ ನಡೆದಿದೆಯೆನ್ನುವುದು ತಲೆಯಿದ್ದವರೆಲ್ಲ ತಗ್ಗಿಸುವ ಸಂದರ್ಭವನ್ನು ಸೃಷ್ಟಿಸಿದೆ. ಆದರೂ ಸಂವೇದನಾಶೀಲ ಮನಸ್ಸುಗಳು ಈ ಹಿಂಸೆಯನ್ನು ಮತ್ತು ಅದು ತಂದಿತ್ತ ಅನ್ಯಾಯವನ್ನು ಅಮೆರಿಕಾದ್ಯಂತ ಚಳವಳಿಯಾಗಿ, ಹೋರಾಟವಾಗಿ, ರೂಪಕವಾಗಿ, ಪರಿವರ್ತಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ‘ಯಶಸ್ಸು’ ಎಂಬ ಪದವೂ ವ್ಯಂಗ್ಯವೇ. ಫ್ಲಾಯ್ಡಾ ಕೊನೆಗೆ ಅಡಿದನೆನ್ನಲಾದ ‘ನನಗೆ ಉಸಿರಾಡಲಾಗುತ್ತಿಲ್ಲ’ ಎಂಬ ಮಾತುಗಳು ಒಂದು ಪ್ರಾತಿನಿಧಿಕವಾದ, ಸಾಂಕೇತಿಕವಾದ ವಾತಾವರಣವನ್ನೇ ಸೃಷ್ಟಿಸಿದೆ. ಜಾಗತಿಕವಾಗಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡ, ಅಮೆರಿಕವನ್ನು ಕಂಗಾಲಾಗಿಸಿದ, ಕೋವಿಡ್-19ರ ಭೀಕರ ದುರಂತದ ನಡುವೆಯೂ ಅದು ಸಮಾಜವನ್ನು ಅಲ್ಲೋಲಕಲ್ಲೋಲವಾಗಿಸಿದೆ; ಅಲ್ಲಿನ ಜನರ ಪ್ರಜ್ಞೆಯನ್ನು ಕೆಣಕಿದೆ; ಡೊನಾಲ್ಡ್ ಟ್ರಂಪ್ ಎಂಬ ಡಾನ್ ಕ್ವಿಕ್ಸೋಟ್ ಅಥವಾ ನೀರೋ ಮಾದರಿಯ ಅಧ್ಯಕ್ಷರ ನಿದ್ರೆಗೆಡಿಸಿದೆ. ಅವರು ಈ ಚಳವಳಿಯನ್ನು ಹತ್ತಿಕ್ಕಲು ತಾನು ಸೇನೆಯನ್ನು ಪ್ರಯೋಗಿಸುವುದಾಗಿ ಎಚ್ಚರಿಕೆಯನ್ನಿತ್ತರು. ಇದಕ್ಕೆ ಪ್ರತಿಯಾಗಿ ಅಲ್ಲಿನ ಸೇನಾ ಮುಖ್ಯಸ್ಥರು ಸೇನೆಯಿರುವುದು ಸಂವಿಧಾನವನ್ನು ರಕ್ಷಿಸುವುದಕ್ಕಾಗಿಯೇ ಹೊರತು ಸರಕಾರವನ್ನಾಗಲೀ ಅಧ್ಯಕ್ಷರನ್ನಾಗಲೀ ಬೆಂಬಲಿಸುವುದಕ್ಕೆ ಅಥವಾ ರಕ್ಷಿಸುವುದಕ್ಕೆ ಅಲ್ಲ ಎಂಬ ಉತ್ತರವಿತ್ತರು. ಚಳವಳಿಯನ್ನೆದುರಿಸುತ್ತಿದ್ದ ಪೊಲೀಸರು ಮೊಣಕಾಲೂರಿ ಶರಣಾಗತಿಯ ಆರ್ತ ಪ್ರಾರ್ಥನೆಯನ್ನು ಮಾಡಿ ಅದನ್ನು ಒಂದಿಷ್ಟಾದರೂ ಶಮನಗೊಳಿಸಬೇಕಾಯಿತು. ಮಿನಪೊಲಿಸಿನ ಆಡಳಿತವು ಪೊಲೀಸ್‌ಪಡೆಯನ್ನೇ ಬರ್ಖಾಸ್ತು ಮಾಡುವ ವಿಚಾರವನ್ನು ಹೊಂದಿದೆ. ಇತರ ಅನೇಕ ರಾಷ್ಟ್ರಗಳಲ್ಲೂ ಇದು ಮರುಧ್ವನಿಯಾಯಿತು. ಮೊಣಕಾಲು ಮತ್ತು ಉಸಿರು ಒಂದು ತಲೆಮಾರಿನ ಜಾಗತಿಕ ಕೂಗಾಗಿ ಉಳಿಯುವ ಎಲ್ಲ ಸಾಧ್ಯತೆಗಳಿವೆ. ಕರಿ-ಬಿಳಿ ತಾರತಮ್ಯ ಲಾಗಾಯ್ತಿನಿಂದ ಬಂದದ್ದು. ವಿಶ್ವದ ಬಿಳಿಯರು ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸ್ಥಾಪಿಸಿದಲ್ಲೆಲ್ಲ ವರ್ಣದ್ವೇಷದ ಭಯಾನಕ ಕರಿನೆರಳಿದೆ. ನೆರಳೂ ಕಪ್ಪಿರುವುದು, ಈ ದಬ್ಬಾಳಿಕೆಯ, ಅಸಹನೆಯ ಕರಾಳಮುಖವಾಗಿರುವುದು ಮನುಷ್ಯನು ಪ್ರಕೃತಿಯನ್ನು ದಾಟಿ ಸಂಸ್ಕೃತಿಯನ್ನು ತುಳಿದು ವಿಕೃತಿಯತ್ತ ದಾಪುಗಾಲಿಟ್ಟದ್ದಕ್ಕೆ ಗಂಭೀರವಾದ ಸಾಕ್ಷಿಯಾಗಿದೆ. ಮಧ್ಯಯುಗದ ಚರಿತ್ರೆಯಲ್ಲಿ ವರ್ಣದ್ವೇಷವು ರಕ್ತಹೆಜ್ಜೆಗಳನ್ನು ದಾಖಲಿಸಿತ್ತು. ಆಧುನಿಕತೆಯೊಂದಿಗೆ ಇಂತಹ ಜನಾಂಗೀಯ ದ್ವೇಷವು ಕೊನೆಗಾಣಬಹುದೆಂಬ ನಿರೀಕ್ಷೆಯು ಸುಳ್ಳಾಗಿದೆ. ವಿಶ್ವದ ಅಗ್ರಮಾನ್ಯ ರಾಷ್ಟ್ರವೆಂಬ (ಕು)ಖ್ಯಾತಿಯನ್ನು ಹೊಂದಿದ ಅಮೆರಿಕದಲ್ಲಿ ಇದು ಈ ಗಾತ್ರದಲ್ಲಿ ಇದ್ದರೆ ಉಳಿದ ಬಿಳಿಯ ರಾಷ್ಟ್ರಗಳಲ್ಲ್ಲಿ ಸದ್ದಿಲ್ಲದೇ ನಡೆಯುತ್ತಿದೆಯೆಂಬುದಕ್ಕೆ ಬೇರೆ ವ್ಯಾಖ್ಯಾನ ಬೇಡ. ಬಣ್ಣವೆಂಬುದು ವಯಸ್ಸಿನಂತೆ ಒಂದು ದಾಟಿಹೋಗುವ ಪರಿಭಾಷೆಯಲ್ಲದೆ ಇನ್ನೇನೂ ಅಲ್ಲ. ಸೌಂದರ್ಯವು ಚರ್ಮದಷ್ಟೇ ಆಳವೆಂಬ ಮಾತೂ ಇದೇ ಕಾರಣದಿಂದ ಬಂದಿರಬೇಕು. ಕನ್ನಡ ಪದ್ಯವೊಂದರಲ್ಲಿ ಬರುವ ‘ನಾ ಕರಿಯಳೆಂದು ನೀ ಜರಿಯಬೇಡ ಬಿಳಿಗೆಳತಿ ಗರ್ವದಿಂದ’ ಎಂಬ ಸಾಲು ತನ್ನ ಬಳಗದ ಇತರ ಸಾಲುಗಳೊಂದಿಗೆ ಈ ಸಾಮಾಜಿಕ ಪಿಡುಗಿಗೆ ನೇರ ಸವಾಲನ್ನೇ ಎಸೆದಿತ್ತು. ಆದರೆ ಅದ್ಯಾಕೋ ಬಿಳಿಯೆಂದರೆ ಚಂದವೆಂದೂ, ಧನಾತ್ಮಕವೆಂದೂ ಕಪ್ಪೆಂದರೆ ಕುರೂಪವೆಂದೂ, ಋಣಾತ್ಮಕವೆಂದೂ ಜನರು ನಂಬುವ ಮಟ್ಟಿಗೆ ಈ ತರತಮ ಧೋರಣೆ ತನ್ನ ವಿಷವನ್ನು ಕಕ್ಕಿದೆ. ಇಂದು ವಿಶ್ವದಲ್ಲಿ ಬಣ್ಣದ ಆಧಾರದ ಸಾಧನೆ ಕಡಿಮೆ. ಅಮೆರಿಕದಲ್ಲಂತೂ ಕರಿಯರ (ಅವರನ್ನು ‘ಕರಿಯ’ರೆಂದು ಗುರುತಿಸುತ್ತಿರುವುದೇ ಸಮಾನತೆಯ ಸಿದ್ಧಾಂತದ ಪ್ರತಿಪಾದನೆಯ ವಿರೋಧಾಭಾಸವಾದರೂ ಈ ಪ್ರಯೋಗ ಅನಿವಾರ್ಯ!) ಸಾಧನೆ ಅದ್ವಿತೀಯ. ಆರ್ಥರ್ ಆಷೆಯಂತಹ ಟೆನಿಸ್‌ಪಟುವಾಗಲೀ ಮುಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಯಂತಹ ಬಾಕ್ಸರ್ ಆಗಲೀ, ಹ್ಯಾಲಿಬೇರಿ, ವಿಲ್‌ಸ್ಮಿತ್‌ರಂತಹ ನಟರಾಗಲೀ, ಮೈಕೆಲ್‌ಜಾಕ್ಸನ್‌ರಂತಹ ಗಾಯಕರಾಗಲೀ, ಬರಾಕ್‌ಒಬಾಮರಂತಹ ನಾಯಕರಾಗಲೀ ಬಣ್ಣವನ್ನು ಅಪ್ರಸ್ತುತವಾಗಿಸಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್‌ಮಂಡೇಲಾ ವಿಶ್ವದ ಮಹೋನ್ನತರ ಸಾಲಿನಲ್ಲಿ ನಿಲ್ಲುವವರು. ಅವರನ್ನು ಅವರ ವರ್ಣದ ಕಾರಣಕ್ಕಾಗಿ ದೂರವಿಡುವುದು ಕಲ್ಪನೆಯಲ್ಲೂ ಸಾಧ್ಯವಿಲ್ಲ ಮಾತ್ರವಲ್ಲ ಮೂರ್ಖತನದ ಶಿಖರವಾದೀತು. ಭಾರತವೂ ಸೇರಿದಂತೆ ಏಶ್ಯ ಪರಿಸರದ ಭೂಭಾಗದಲ್ಲಿ ಬಿಳಿಯರು ಅನ್ನಿಸಿಕೊಂಡವರ ಸಂತತಿ ಕಡಿಮೆ. ಅಲ್ಲಿ ಇತರ ‘ಬಿಳಿಚಿಕೊಂಡಂತಿರುವ’ ಮತ್ತು ಕರಿ-ಬಿಳಿಯ ನಡುವಣ ‘ಕಂದು’ ಮನುಷ್ಯರೇ ಹೆಚ್ಚು. ಒಂದರ್ಥದಲ್ಲಿ ಕರಿ-ಬಿಳಿಯ ನಡುವಿದ್ದೂ ಭಾರತ ಜಾತೀಯ, ಮತೀಯ, ಸಾಮಾಜಿಕ, ತಾರತಮ್ಯವನ್ನು ಪೋಷಿಸಿಕೊಂಡೇ ಬಂದಿದೆ. ಮನುಷ್ಯ-ಮನುಷ್ಯರ ನಡುವೆ ವರ್ಗೀಕೃತ ಕೃತಕ ಗಡಿರೇಖೆಗಳನ್ನು ಗೀಚುವುದರಲ್ಲಿ ಬೇರೆಲ್ಲಾ ಭೇದಗಳಿಗಿಂತ ಬಣ್ಣವೇ ‘ವರ್ಣ’ವೆಂಬ ಅಭಿದಾನದೊಂದಿಗೆ ತೀವ್ರ ಪರಿಶ್ರಮವನ್ನು ಪಟ್ಟಿದೆ. ಹಿಂಸೆಗೆ, ದಬ್ಬಾಳಿಕೆಗೆ, ಶೋಷಣೆಗೆ, ಕೇಡಿಗರಿಗೆ ಈ ಚರ್ಮದಾಳದ ದಾಳ ತೀರ ಉಪಯುಕ್ತವೆನ್ನಿಸಿದೆ. ಇದನ್ನು ಮೀರಿ ಬೆಳೆದವರಿದ್ದಾರಾದರೂ ಅವರು ಅಪವಾದದಂತಿದ್ದಾರೆಯೇ ವಿನಾ ನಿಯಮಗಳಾಗಿಲ್ಲ. ಆಧುನಿಕತೆ, ಪ್ರಗತಿ, ಆರ್ಥಿಕ ಮುನ್ನಡೆ, ಶಿಕ್ಷಣ, ಆರೋಗ್ಯದ ಪರಿಸ್ಥಿತಿ- ಇವೆಲ್ಲ ಸುಧಾರಣೆಯಾಗುವುದರೊಂದಿಗೆ ಒಂದು ಸ್ವರ್ಗ ಸೃಷ್ಟಿಯಾಗುತ್ತದೆಂಬ ಅಪೇಕ್ಷೆ ಇನ್ನೂ ನಿರೀಕ್ಷೆಯ ಹಂತದಲ್ಲೇ ಇರುವುದು ವಿಪರ್ಯಾಸ. ಅಮೆರಿಕವನ್ನು ಬಿಟ್ಟು ನಮ್ಮದೇ ದೇಶದ ಲಕ್ಷಣಗಳನ್ನು ಗಮನಿಸಿದರೆ ದೇಶಾಭಿಮಾನದ ಬಣ್ಣ ಹಚ್ಚಿದರೂ ನಿರಾಶೆಯಾಗುತ್ತದೆ. ಮನುಷ್ಯರ ವಿಚಾರಣೆ, ಶಿಕ್ಷೆ ನಡೆಸುವ ನ್ಯಾಯಾಲಯಗಳು ತಮ್ಮಿಷ್ಟದಂತೆ ನಡೆದುಕೊಳ್ಳುವ ಮೂಲಕ ಪ್ರಜ್ಞಾವಂತರನ್ನು ದಿಗ್ಭ್ರಮೆಗೊಳಿಸಿವೆ. ಅತ್ಯಾಚಾರಿಗೆ ಜಾಮೀನು ಸಿಕ್ಕಿದರೂ ಅತ್ಯಾಚಾರಕ್ಕೊಳಗಾದವಳಿಗೆ ಇನ್ನೂ ಜಾಮೀನು ಸಿಕ್ಕದ ನಿದರ್ಶನವೂ ಇದೆ. ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ತಕ್ಷಣ ಅಗತ್ಯ ನೆರವಿಗೆ ಬಂದ ನ್ಯಾಯಾಲಯ ಇತರರ ಪ್ರಕರಣದಲ್ಲಿ ಈ ಅವಸರವನ್ನು ತೋರಿಸಿಲ್ಲ. ಸಿಎಎ ಚಳವಳಿಗೆ ಸಂಬಂಧಿಸಿದಂತೆ ಸೆರೆಮನೆಗೆ ಹೋದವರಲ್ಲಿ ಗರ್ಭಿಣಿಯೂ ಸೇರಿದಂತೆ ಅನೇಕರು ಇನ್ನೂ ಬಿಡುಗಡೆಗೆ ಕಾಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆಗಸ್ಟ್‌ನಲ್ಲಿ ಬಂಧನಕ್ಕೊಳಗಾದ ರಾಜಕೀಯ ಕೈದಿಗಳು (-ಅವರಲ್ಲಿ ಮಾಜೀ ಮುಖ್ಯಮಂತ್ರಿಗಳೂ ಮಾಜಿ ಕೇಂದ್ರ ಮಂತ್ರಿಗಳೂ ಸೇರಿದ್ದಾರೆ!) ತುರ್ತು ವಿಚಾರಣೆಯನ್ನು ಕೋರಿದರೂ ಸರ್ವೋಚ್ಚ ನ್ಯಾಯಾಲಯ ಮನಸ್ಸುಮಾಡುತ್ತಿಲ್ಲ. ‘ವೈಪರೀತ್ಯಕ್ಕೆ ಬೆದರಲಾಗದು ಸ್ವಾಮಿಕಾರ್ಯವಿದು’ ಎಂದು ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಉದಾಹರಿಸಿದ್ದು ಇದಕ್ಕೇ ಇರಬೇಕು!

 ಅವಕಾಶ ಸಿಕ್ಕಿದರೆ ಎಲ್ಲರು ಕೆಟ್ಟವರೇ ಎಂಬ ಮಾತು ಸಾಧುವೆನಿಸುತ್ತದೆ. ಪತ್ರಿಕೆ ಮತ್ತಿತರ ಮಾಧ್ಯಮಗಳನ್ನವಲೋಕಿಸಿದರೆ ‘ಮೃಗೀಯ’ ವೆಂದು ಕರೆಸಿಕೊಳ್ಳುತ್ತಿದ್ದ ವರ್ತನೆಗಳು ಇಂದು ಮೃಗಗಳಲ್ಲಿಲ್ಲ. ಅವು ಮನುಷ್ಯನಲ್ಲೇ ಮನೆಮಾಡಿದಂತಿವೆ. ಅತ್ಯಾಚಾರ, ಕೊಲೆ ಮುಂತಾಗಿ ಜನರಲ್ಲಿ ಬೇರುಬಿಟ್ಟಿರುವ ಇವನ್ನು ದಾಖಲಿಸುವುದೂ ಒಂದು ಅಮಾನವೀಯ ಕೆಲಸವೇ ಇರಬಹುದು. ಭಾರತದಲ್ಲಿ ಕೋವಿಡ್-19ರ ದೈತ್ಯ ನರ್ತನ ದಾವಾನಲದಂತೆ ವ್ಯಾಪಿಸುತ್ತಿದೆ. ಕೊರೋನ ಬಂದದ್ದೇ ತಡ, ಸಿಎಎ ಮುಂತಾದ ಚಳವಳಿಗಳೆಲ್ಲ ಸ್ತಬ್ಧ ಚಿತ್ರಗಳಂತೆ ನಿಂತವು. ಈ ಮಾರಕ ಕಾಯಿಲೆಯ ನಡುವೆ ಮನೆಗೆ ಮರಳುವ ವಲಸೆಕಾರ್ಮಿಕರ ಬವಣೆ ದೇಶಾದ್ಯಂತ ಪ್ರಕಟವಾದರೂ ಎಚ್ಚರವಾಗಬೇಕಾದವರು, ಎಚ್ಚರವಿರಬೇಕಾದವರು ಕುಂಭಕರ್ಣನನ್ನೇ ಕುಲದೇವರಾಗಿರಿಸಿಕೊಂಡರು. ಉಳಿದೆಲ್ಲ ವಿಚಾರ-ಭಾವ ಭಿನ್ನತೆಗಳನ್ನು, ಮರೆತು ಒಟ್ಟಾಗುವುದಕ್ಕೆ ದೇಶಕ್ಕೆ ಇದಕ್ಕಿಂತ ದೊಡ್ಡ ನೋಹನನೌಕೆ ಬೇರೊಂದಿರಲಿಲ್ಲ. ಆದರೆ ಇಂತಹ ಸಂದರ್ಭದಲ್ಲೂ ರಾಜಕಾರಣ ಮತ್ತು ಅಧಿಕಾರಶಾಹಿ ತನ್ನ ಕೊಳಕು ಮತ್ತು ಕೊಳೆತ ತಲೆಯನ್ನೆತ್ತ್ತುತ್ತಲೇ ಇದೆ. ಭ್ರಷ್ಟಾಚಾರದಂತಹ ಕೆಡುಕುಗಳು ಕೊರೋನಕ್ಕಿಂತಲೂ ಶಕ್ತವಾಗಿವೆ. ಇಂತಹ ಕಾಳಿಂಗನರ್ತನವನ್ನು ಮರ್ದಿಸುವ ದೊಡ್ಡ ಶಕ್ತಿ ಇಲ್ಲಿ ದೇವರ ರೂಪಿನಿಂದಾಗಲೀ ಮನುಶ್ಯವತಾರಿಯಾಗಿಯಾಗಲೀ ಪ್ರತ್ಯಕ್ಷವಾಗಲಿಲ್ಲ. ಮಸಣದ ಬೆಂಕಿಯಲ್ಲಿ ಯಾರೂ ಚಳಿಕಾಯಿಸಬಾರದು. ಆದರೆ ಯಾವುದೇ ದುರಂತವನ್ನೂ, ವಿಷಾದವನ್ನೂ ತಮ್ಮ ಅನುಕೂಲಕ್ಕೆ ಪರಿವರ್ತಿಸುವುದಕ್ಕೆ ಭಾರತದಂತಹ ಪುಣ್ಯಭೂಮಿ ಬೇರೊಂದಿಲ್ಲವೆನ್ನಿಸುತ್ತದೆ. ಈ ದೇಶದ ಜನರು ಅಮೆರಿಕದ ಜಾರ್ಜ್‌ಫ್ಲಾಯ್ಡಾ ಕುರಿತು ತೋರಿದ ಅನುಕಂಪವನ್ನು ಇಲ್ಲೇ ದಬ್ಬಾಳಿಕೆಗೆ ತುತ್ತಾಗಿ ಪರಿತಪಿಸುವ ಮಂದಿಯ ಕುರಿತು, ಪ್ರಾಣಿಗಳ ಕುರಿತು ತೋರಿಸುತ್ತಿಲ್ಲ. ಕೆಲವು ಘಟನೆಗಳು ಕನಸಿನಲ್ಲೂ ಕಾಡುತ್ತವೆ. ಕೇರಳದ ಪಾಲಕ್ಕಾಡಿನಲ್ಲಿ ಗರ್ಭಿಣಿ ಆನೆಯೊಂದಕ್ಕೆ ಸಿಡಿಮದ್ದನ್ನು ಅವಿಸಿಟ್ಟ ಅನಾನಸು ಹಣ್ಣನ್ನು ನೀಡಿ ಅದು ಅಸಹಾಯಕ ವೇದನೆಯೊಂದಿಗೆ ನೀರಿನಲ್ಲಿ ಕೊನೆಗೊಂಡದ್ದನ್ನು ಕೇಳಿದ್ದೇವೆ. ಗರ್ಭಿಣಿಯಲ್ಲದೇ ಹೋಗಿದ್ದರೂ ಅದರ ಸಾವು ಕಲ್ಪನೆಗೆ ಮೀರಿದ್ದು; ಭಯಾನಕವಾದದ್ದು. ಇದು ನಿರ್ಭಯಾ ಪ್ರಕರಣಕ್ಕೆ ಕಡಿಮೆಯೇನಲ್ಲ. ಈ ಬಗ್ಗೆ ಮರುಕ, ಅನುಕಂಪದ ಅಭಿವ್ಯಕ್ತಿಗಿಂತಲೂ ಇದನ್ನು ಪಕ್ಷ ಮತ್ತು ಮತೀಯ ರಾಜಕಾರಣಕ್ಕೆ ಹೇಗೆ ಬಳಸಬಹುದೆಂದು ಉನ್ನತ ಮಟ್ಟದಲ್ಲಿ ಯೋಚನೆ, ಯೋಜನೆ ಸಿದ್ಧವಾದಂತಿದೆ. ಪಾಲಕ್ಕಾಡಿನಿಂದ ಈ ಘಟನೆಯನ್ನು ನೆರೆಯ ಅಲ್ಪಸಂಖ್ಯಾತ ಬಾಹುಳ್ಯದ ಜಿಲ್ಲೆಗೆ ವರ್ಗಾಯಿಸುವುದಕ್ಕೆ ಅಭಿಜಾತ ಪ್ರಾಣಿಪ್ರೇಮಿ ಮೇನಕಾ ಗಾಂಧಿ ಪ್ರಯತ್ನಿಸಿದ್ದು ವರದಿಯಾಗಿದೆ. ಇದು ಹಿಂಸಾಪ್ರೇಮಿಗಳಿಗೆ ಹೊಸ ದಿಕ್ಕನ್ನು ತೋರಿಸಿದೆ. ಹಿಮಾಚಲ ಪ್ರದೇಶದಲ್ಲಿ ಇದೇ ಮಾದರಿಯಲ್ಲಿ ಗೋವೊಂದಕ್ಕೆ ಸಿಡಿಮದ್ದನ್ನಿಡಲಾಯಿತು. ಇಂತಹ ಘಟನೆಗಳು ಅನೇಕ ಕಡೆಗಳಲ್ಲಿ ನಡೆದಿರಬಹುದು. ಕೆಲವು ಬೆಳಕು ಕಾಣುತ್ತವೆ. ಇನ್ನು ಕೆಲವು ಮೂಕ ವೇದನೆಯಲ್ಲೇ ಕಳೆದುಹೋಗುತ್ತವೆ. ವಿಜ್ಞಾನಿಗಳು, ಆಳುವವರು, ತಜ್ಞರು ಒಪ್ಪಲಿ, ಒಪ್ಪದಿರಲಿ, ಈ ದೇಶ ದೀರ್ಘ ದುರಂತದ ಯುಗವೊಂದಕ್ಕೆ ಪ್ರವೇಶಿಸುವಂತೆ ಕಾಣಿಸುತ್ತದೆ. ಈ ಕೆಲವು ವಾರ-ತಿಂಗಳುಗಳಲ್ಲಿ ಇಲ್ಲಿ ಸಂಭವಿಸಿದ ಚಂಡಮಾರುತವಿರಲಿ, ಭೂಕಂಪನಗಳಿರಲಿ, ಚೀನಾದಿಂದ ನಡೆಯುತ್ತಿರುವ ಭೂ ಆಕ್ರಮಣವಿರಲಿ (ಅದೀಗ ಕಳೆದ ಎಪ್ರಿಲ್‌ನಿಂದೀಚೆಗೆ ಸುಮಾರು 69 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಸ್ವಾಧೀನಪಡಿಸಿದೆಯೆಂದು ವರದಿಯಾಗಿದೆ!), ನಮ್ಮ ಅಸಹಾಯಕತೆಯನ್ನು ಅನಾವರಣಗೊಳಿಸುತ್ತಿವೆ. ಇದಕ್ಕೆ ಯಾವ ನೆಹರೂ ಕೂಡಾ ಹೊಣೆಗಾರರಲ್ಲ. 1962ರ ಸಿದ್ಧೌಷಧ ಆರೋಪ ಎಲ್ಲ ಕಾಲದ ಕಾಯಿಲೆಗಳಿಗೆ ಉತ್ತರವಾಗಲಾರದು. ಆರ್ಥಿಕತೆಗೆ ಮತ್ತು ರಕ್ಷಣೆಗೆ ಸಂಬಂಧಿಸಿದ ಒಂದು ಉದಾಹರಣೆಯನ್ನು ನೀಡುವುದಾದರೆ, 2018ರಲ್ಲಿ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ನಮ್ಮ ಪ್ರಧಾನಿಯವರು ಜಾಗತೀಕರಣವನ್ನು ಸಮರ್ಥಿಸುತ್ತ ನಮ್ಮ ಸುತ್ತಲಿನ ಕೆಲವು ದೇಶಗಳು ಆಮದನ್ನು ಕಡಿಮೆಗೊಳಿಸಿ, ದೇಶೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಆರ್ಥಿಕತೆಯ ಶಕ್ತಿಯನ್ನು ವಿರೋಧಿಸುವ, ಕುಂದಿಸುವ, ಚಟುವಟಿಕೆಯನ್ನು ಮಾಡುತ್ತಿವೆಯೆಂದೂ ಅದು ಭಯೋತ್ಪಾದನೆಗಿಂತ, ಪರಿಸರಹಾನಿಗಿಂತ ಕಡಿಮೆ ಅಪರಾಧವೇನೂ ಅಲ್ಲವೆಂದೂ ಪ್ರತಿಪಾದಿಸಿದ್ದರು. ಮೊನ್ನೆ ಅಂದರೆ 2020ರ ಮೇ 31ರಂದು ಪ್ರಧಾನಿ ಆತ್ಮನಿರ್ಭರತೆಯ ಘೋಷಣೆಯನ್ನು ಮಾಡಿದರು. ಇದಕ್ಕೆ ಪೂರಕವಾಗಿ ಚೀನಾವನ್ನು ವಿರೋಧಿಸುವ ಒಂದು ಹಂತವಾಗಿ ಅಲ್ಲಿನ ಉತ್ಪನ್ನವನ್ನು ಬಹಿಷ್ಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಒಳ್ಳೆಯದೇ. ಆದರೆ ನಮ್ಮ ಮೊಬೈಲ್ ಮತ್ತಿತರ ವಿದ್ಯುನ್ಮಾನ ಮಾರುಕಟ್ಟೆಯ ಶೇಕಡಾ 60ಕ್ಕಿಂತಲೂ ಹೆಚ್ಚು ಭಾಗೀದಾರನಾದ ಚೀನಾವನ್ನು ಹೀಗೆ ಮಟ್ಟಹಾಕಲು ಸಾಧ್ಯವೇ ಎಂಬ ವಾಸ್ತವ ಅರ್ಥಶಾಸ್ತ್ರ ಆಳುವವರಿಗೆ ಅರ್ಥವಾದಂತಿಲ್ಲ. ನಮಗೀಗ ವಸುಧೈವ ಕುಟುಂಬಕಂ ಮತ್ತು ಆತ್ಮನಿರ್ಭರತೆಯ ನಡುವೆ ದಾರಿ ಕಾಣದಂತಿದೆ. ಅಪ್ರಮದಿತವ್ಯ ತಿರುವಿನಲ್ಲಪಘಾತ ನಡೆಯದೆಂದು ಆಶಿಸೋಣವೇ? ದೇಶದ ಮಾತು ಬಹುಪಾಲು ನಿಂತಿದೆ. ‘ಮೂಕಂ ಕರೋತಿ ವಾಚಾಲಂ’ ಆಗುವುದಕ್ಕೆ ದೇವರ ಕೃಪೆ ಕಾಣುತ್ತಿಲ್ಲ. ಕಷ್ಟಪರಂಪರೆಯಿಂದ ಬಚ್ಚಿಟ್ಟುಕೊಳ್ಳಲು ಜಾಗವಿಲ್ಲ. 1930ರ ದಶಕದಲ್ಲೇ ಮಾಸ್ತಿಯವರು ತಮ್ಮ ಕೃತಿಯೊಂದರಲ್ಲಿ ಮಾತು ಸೋತ ಕಡೆ ಮೌನ ತನ್ನ ಕೆಲಸವನ್ನು ಸಾಧಿಸುತ್ತದೆಯೆಂದಿದ್ದಾರೆ. ಇದೇ ಆಶಯವನ್ನು ಭಾಗಶಃ ಡಾ.ಯು.ಆರ್.ಅನಂತಮೂರ್ತಿಯವರು ‘ಮಾತು ಸೋತ ಭಾರತ’ ಎಂದು ನಿರೂಪಿಸಿದ್ದಾರೆ. ಈಗ ಕೊಲ್ಲುವುದೂ ಒಂದು ಕಲೆಯಾದಾಗ, ಸಂಸ್ಕೃತಿಯೇ ಸೋತು ಸಾವಿನ ಕಡೆ ಹೆಜ್ಜೆಯಿಡುತ್ತಿರುವಾಗ ಯಾರು ಮಾತನಾಡಬೇಕು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)