varthabharthi


ಅನುಗಾಲ

ಕರ್ನಾಟಕದಲ್ಲಿ ಕೃಷಿ ಭೂಮಿಯ ಪರಭಾರೆ

ವಾರ್ತಾ ಭಾರತಿ : 17 Jun, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೊಡುವುದು, ಕೊಳ್ಳುವುದು ಅನಾದಿಯ ವ್ಯವಹಾರ. ಅದು ವ್ಯಾಪಾರೀಕರಣಗೊಂಡಿದ್ದರೆ ಕಾಲ-ದೇಶ ಸಂದರ್ಭವನ್ನವಲಂಬಿಸಿದೆಯೇ ಹೊರತು ಇತರ ಪರಿಸ್ಥಿತಿ-ಮನಸ್ಥಿತಿಗಳನ್ನಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಬಯಸುತ್ತಾನೆ. ಇದಕ್ಕೆ ಬೇಕಾದ ಮಾರ್ಗೋಪಾಯಗಳಲ್ಲಿ ತನ್ನ ಆಸ್ತಿ-ಸ್ವತ್ತುಗಳ ವಿನಿಮಯವೂ ಒಂದು.

ಕರ್ನಾಟಕ ಸರಕಾರದ ಸಚಿವ ಸಂಪುಟವು ಕೃಷಿಭೂಮಿಯ ಪರಭಾರೆಗೆ ಇದ್ದ ಎಲ್ಲ ನಿಷೇಧಗಳನ್ನು, ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಣಯವನ್ನು ಮಾಡಿದೆ. ಅದೀಗ ಕಾನೂನಾಗಿ ಬರುವುದಷ್ಟೇ ಬಾಕಿಯಿದೆ. ಅಗತ್ಯ ಮಸೂದೆ, ಅಂಕಿತ, ಅನುಮೋದನೆ ಇತ್ಯಾದಿಗಳು ಬರುವಾಗ ಇನ್ನೊಂದಷ್ಟು ತಿಂಗಳುಗಳು ದಾಟಬಹುದು; ಅಥವಾ ಸುಗ್ರೀವಾಜ್ಞೆಯ ಮೂಲಕ ತಕ್ಷಣ ಜಾರಿಯಾಗಲೂಬಹುದು. ಇದೀಗ ಅದರ ಪರ-ವಿರೋಧ ರಾಜಕೀಯ ಮತ್ತು ಸೈದ್ಧಾಂತಿಕ ವಾದಗಳು, ಅಭಿಮತಗಳು, ಹೋರಾಟದ ಎಚ್ಚರಿಕೆಗಳು ಪ್ರಕಟವಾಗುತ್ತಿವೆ. ಆಡಳಿತ ಪಕ್ಷದ ರಾಜಕೀಯ ಧುರೀಣರು ಸಹಜವಾಗಿಯೇ ಈ ನಿರ್ಣಯವು ಹೇಗೆ ರೈತರಿಗೆ ಅನುಕೂಲವೆಂದು ಪ್ರತಿಪಾದಿಸಿದರೆ, ವಿರೋಧ ಪಕ್ಷಗಳು (ಅವೂ ಸಹಜವಾಗಿಯೇ!) ಇದು ಹೇಗೆ ನಮ್ಮ ಕೃಷಿಕ್ಷೇತ್ರವನ್ನು ಮತ್ತು ರೈತಾಪಿ ಜನರನ್ನು ನಾಶಮಾಡುತ್ತದೆಂದು ವಿವರಿಸುತ್ತಿವೆ. ಜೊತೆಗೆ ಅನೇಕ ಸಾಮಾಜಿಕ ಮತ್ತು ರೈತಾಪಿ ಸಂಘಟನೆಗಳು, ಹೋರಾಟಗಾರರು, ತಮ್ಮತಮ್ಮ ತಾತ್ವಿಕ ನೆಲೆಯಲ್ಲಿ ಅಹವಾಲುಗಳನ್ನು ಮಂಡಿಸುತ್ತಿವೆ. ಇವುಗಳು ಕಾನೂನಿನಡಿ ಮತ್ತು ಒಟ್ಟಾರೆ ಸಾಮಾಜಿಕ ದೃಷ್ಟಿಕೋನದಲ್ಲಿ ಹೇಗೆ ಪ್ರಸ್ತುತವೆನ್ನುವುದನ್ನು ಹಾಗೂ ಅಗತ್ಯವೇ, ಕ್ಷೇಮಕರವೇ ಎಂಬುದನ್ನು ಅಧ್ಯಯನಮಾಡಬಹುದು. ಹೀಗೆ ವಾದ-ಪ್ರತಿವಾದಗಳನ್ನು ಗಮನಿಸಬೇಕಾದರೆ ಈ ವಿಷಯದ ಹಿನ್ನೆಲೆಯನ್ನೂ ಅರಿಯಬೇಕು. ಭಾರತ ಸಂವಿಧಾನದ 246ನೇ ಅನುಚ್ಛೇದದಡಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಕಾನೂನನ್ನು ರೂಪಿಸಲು ಹಂಚಿದ ಅಧಿಕಾರಗಳು ಏಳನೆಯ ಅನುಸೂಚಿಯಲ್ಲಿ ಅಡಕವಾಗಿವೆ. ಇದರಲ್ಲಿ ಮೂರು ಪಟ್ಟಿಗಳಿದ್ದು ಮೊದಲನೆಯದು ‘ಸಂಘ ಪಟ್ಟಿ’ ಎಂದರೆ ಕೇಂದ್ರ ಸರಕಾರದ ಅಧಿಕಾರ ವ್ಯಾಪ್ತಿಯ ವಿಷಯಗಳು, ಎರಡನೆಯ ‘ರಾಜ್ಯ ಪಟ್ಟಿ’ ಎಂದರೆ ರಾಜ್ಯಗಳ ಅಧಿಕಾರ ವ್ಯಾಪ್ತಿಯ ವಿಷಯಗಳು ಹಾಗೂ ಮೂರನೆಯ ‘ಸಮವರ್ತಿ ಪಟ್ಟಿ’ ಎಂದರೆ ಕೇಂದ್ರ ಹಾಗೂ ರಾಜ್ಯಗಳ ಸಮವರ್ತಿ ಅಧಿಕಾರ ವ್ಯಾಪ್ತಿಯ ವಿಷಯಗಳು ಹೀಗೆ ವಿಷಯವ್ಯಾಪ್ತಿಯ ಮಿತಿ ಹಾಗೂ ವಿಸ್ತರಣೆಯನ್ನು ಮೂರು ಪಟ್ಟಿಗಳಲ್ಲಿ ನಮೂದಿಸಲಾಗಿದೆ. ಕೃಷಿ, ಶಿಕ್ಷಣ ಮತ್ತು ಸಂಶೋಧನೆ, ಕೀಟಗಳ ವಿರುದ್ಧ ರಕ್ಷಣೆ ಮತ್ತು ಸಸ್ಯರೋಗಗಳ ನಿವಾರಣೆ- ಇವುಗಳನ್ನೊಳಗೊಂಡ ಕೃಷಿ ವಿಷಯ ರಾಜ್ಯ ಪಟ್ಟಿಯ 14ನೇ ಕ್ರಮಾಂಕದಲ್ಲಿ ನಮೂದಾಗಿದೆ. ಹಾಗೆಯೇ ಭೂಮಿಗೆ ಸಂಬಂಧಿಸಿದ ಇತರ ವಿಷಯಗಳು ಎಂದರೆ, ಕೃಷಿಯನ್ನೂ ಒಳಗೊಂಡಂತೆ ಭೂಮಿಯಲ್ಲಿನ ಅಥವಾ ಅದರ ಮೇಲಿನ ಹಕ್ಕುಗಳು, ಭೂಒಡೆಯನ ಮತ್ತು ಗೇಣಿದಾರನ ಸಂಬಂಧವನ್ನೊಳಗೊಂಡು ಭೂಹಿಡುವಳಿಗಳು ಮತ್ತು ಗೇಣಿವಸೂಲಿ; ವರ್ಗಾವಣೆ ಮತ್ತು ಪರಭಾರೆ; ಭೂಮೇಲ್ಪಾಟು ಮತ್ತು ಕೃಷಿಸಾಲಗಳು, ವಸಾಹತು ಸ್ಥಾಪನೆ, ಕಂದಾಯದ ನಿರ್ಧರಣೆ ಮತ್ತು ವಸೂಲಿ, ಭೂದಾಖಲೆಗಳ ನಿರ್ವಹಣೆ, ಕಂದಾಯದ ಉದ್ದೇಶಗಳಿಗಾಗಿ ಮೋಜಣಿ; ಮತ್ತು ಹಕ್ಕುಗಳ ದಾಖಲೆ ಮತ್ತು ಕಂದಾಯದ ಪರಭಾರೆಯನ್ನೊಳಗೊಂಡು ಭೂಕಂದಾಯ, ಕೃಷಿಆದಾಯ ತೆರಿಗೆಗಳು, ಉತ್ತರಾಧಿಕಾರದ ಬಗ್ಗೆ ಸುಂಕಗಳು, ಎಸ್ಟೇಟ್ ಡ್ಯೂಟಿ, ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆಗಳು, ಇವೆಲ್ಲ ರಾಜ್ಯಪಟ್ಟಿಗೆ ಸೇರಿವೆ. (ಕೃಷ್ಯೇತರ ವಿಷಯಗಳು ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿವೆ.)

ಕಳೆದ ಏಳು ಸ್ವತಂತ್ರ ದಶಕಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳು, ತಿದ್ದುಪಡಿಗಳನ್ನು ಈ ದೇಶ ಕಂಡಿದೆ. ಭಾರತವು ಕೃಷಿಪ್ರಧಾನ ದೇಶವೆನಿಸಿಕೊಂಡಿದೆ. ದೇಶಕ್ಕೊಂದು ಕೃಷಿನೀತಿಯೆಂಬುದಿದೆ. 1960ರ ದಶಕದಲ್ಲೇ ‘ಜೈ ಜವಾನ್’ ಜೊತೆಯಲ್ಲಿ ‘ಜೈಕಿಸಾನ್’ ಘೋಷಣೆಯೂ ಹೊಮ್ಮಿದೆ. ಕೃಷಿಗೆ ಅನುಕೂಲವಾಗಲೆಂದು ಸಾಕಷ್ಟು ಅಣೆಕಟ್ಟುಗಳು, ಕೃಷಿ ಮತ್ತು ನೀರಾವರಿ ಯೋಜನೆಗಳು ಜಾರಿಗೆ ಬಂದಿವೆ. ಕರ್ನಾಟಕದಲ್ಲಿ ಲಾಗಾಯ್ತಿನಿಂದ ಭೂಸುಧಾರಣಾ ಕಾಯ್ದೆಯಿದೆ. ಇತರ ರಾಜ್ಯಗಳಲ್ಲೂ ಇಂತಹ ಕಾಯ್ದೆಯಿದೆ. ಇವೆಲ್ಲ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಗೇಣಿ ಮತ್ತಿತರ ವ್ಯವಸ್ಥೆಗಳನ್ನು ಮುಂದುವರಿಸಿವೆ. 1961ರಲ್ಲಿ ಅಧಿಕೃತವಾಗಿ ಭೂಸುಧಾರಣಾ ಕಾಯ್ದೆಯು ಜಾರಿಗೆ ಬಂದರೂ ಅದೇನೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರಲಿಲ್ಲ. ಆದರೆ ದೇವರಾಜ ಅರಸು ಸರಕಾರವು 1974ರಲ್ಲಿ ‘ಉಳುವವನೇ ಭೂಮಿಯೊಡೆಯ’ ಎಂಬ, ಸಮಾಜವಾದಿ ಚಿಂತನೆಯ ಭಾಗವೆನ್ನಬಹುದಾದ, (ಬಡತನದ ನಿರ್ಮೂಲ ಈ ವಾದದ ಇನ್ನೊಂದು ಮುಖ), ಮಹತ್ವದ ಬದಲಾವಣೆಗಳನ್ನು ತಂದಿತು. ಸ್ಥಳೀಯ ವ್ಯಾಪ್ತಿಯಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಟ್ಟು ಐವರು ಸದಸ್ಯರ ಭೂನ್ಯಾಯಮಂಡಳಿಗಳ ಮೂಲಕ ಗೇಣಿದಾರರಿಗೆ ಕೃಷಿಭೂಮಿಯನ್ನು ಮತ್ತು ಕೃಷಿಕಾರ್ಮಿಕರಿಗೆ ಅವರು ವಾಸಿಸುವ ಸ್ಥಳದ ಅನುಭೋಗದ ಹಕ್ಕನ್ನು ಮತ್ತು ಒಂದು ಅವಧಿಯ ಆನಂತರ ಮಾಲಕತ್ವವನ್ನು ಪಡೆಯುವ ಅವಕಾಶವನ್ನು ನೀಡಿತು. ಭೂಮಂಜೂರಾತಿಯ ನಿಯಮಗಳಂತೆ 15 ವರ್ಷಗಳ ಪರಭಾರೆ ನಿಷೇಧವನ್ನೂ ಕಲ್ಪಿಸಿತು. ಭೂಮಾಲಕರಿಗೆ ಸರಕಾರವು ಗೊತ್ತುಪಡಿಸಿದ ಪರಿಹಾರವನ್ನು ಪಡೆಯಲು ಅವಕಾಶ ಕಲ್ಪಿಸಿತು. ಹಾಲಿ/ಮಾಜಿ ಸೈನಿಕರು ಮತ್ತಿತರ ನಿರ್ದಿಷ್ಟ ವ್ಯಕ್ತಿಗಳಿಗೆ ಈ ಕಾಯ್ದೆಯು ಭಾರವಾಗದಂತೆ ನಿರ್ಬಂಧಿಸಿತು. ಕಂಪೆನಿ ಮುಂತಾದ ಸಂಸ್ಥೆಗಳು ಕೃಷಿಭೂಮಿಯನ್ನು ಹೊಂದುವುದನ್ನು, ಅಲ್ಲದೆ ಮುಂದೆ ಇಂತಹ ಸಮಸ್ಯೆಗಳು ಉದ್ಭವಿಸದಂತೆ ಕೃಷಿಭೂಮಿಯನ್ನು ಕೃಷಿಕರಲ್ಲದವರಿಗೆ ಅಥವಾ ಸಂಸ್ಥೆಗಳಿಗೆ ಅಥವಾ ಕೃಷಿಕರಾಗಿದ್ದೂ ಒಂದು ಮಿತಿಯನ್ನು ಮೀರಿದ ಕೃಷ್ಯೇತರ ಆದಾಯವನ್ನು ಹೊಂದಿದವರಿಗೆ ಪರಭಾರೆ ಮಾಡುವುದನ್ನು ನಿಷೇಧಿಸಿತು. (ಇದರಿಂದಾಗಿ ಅನೇಕ ಕೃಷಿಕರೂ ಕೃಷಿಭೂಮಿಯನ್ನು ಖರೀದಿಸಲು ಅಸಾಧ್ಯವಾಯಿತು. ಹಾಗೆಯೇ ಕೃಷಿಕರಲ್ಲದ ಆದರೆ ಕೃಷಿಕರಾಗಬಯಸುವವರೂ ಕೃಷಿಕರಾಗುವ ಅವಕಾಶದಿಂದ ವಂಚಿತರಾದರು.) ಈ ಕಾಯ್ದೆ ಸಹಕಾರಿ ಕೃಷಿ ಪದ್ಧತಿಯಂತಹ ಇನ್ನಿತರ ಅನೇಕ ಪೂರಕ ತಿದ್ದುಪಡಿಗಳನ್ನೊದಗಿಸಿತು. ಮಾತ್ರವಲ್ಲ ಕೃಷಿಯೆನಿಸಿಕೊಂಡಿದ್ದ ಪ್ಲಾಂಟೇಷನ್ ಬೆಳೆಗಳಾದ ಕಾಫಿ, ಏಲಕ್ಕಿ, ಚಹ, ರಬ್ಬರ್, ಮುಂತಾದ ದೊಡ್ಡ ವಿಸ್ತೀರ್ಣದಲ್ಲಿ ಕೃಷಿಯನ್ನು ಮಾಡಬೇಕಾದ ಬೆಳೆಗಳಿಗೆ ಈ ಕಾಯ್ದೆಯಿಂದ ವಿನಾಯಿತಿಯನ್ನೊದಗಿಸಿತು. ಯಾವುದೇ ಕಾನೂನಾದರೂ ಅದರ ಜನಹಿತದ ಘೋಷಣೆಯ ಹೊರತಾಗಿಯೂ ಅನುಷ್ಠಾನ ಮತ್ತು ಪಾಲನೆಯು ಅಧಿಕಾರಶಾಹಿಯ ಮತ್ತು ಬಹುಪಾಲು ಭ್ರಷ್ಟರ ಮೂಲಕವೇ ನಡೆಯುವುದರಿಂದ ಇಲ್ಲೂ ಬೇಕಷ್ಟು ಅನ್ಯಾಯಗಳು ನಡೆದವು. ಭೂನ್ಯಾಯಮಂಡಳಿಗಳ ತೀರ್ಪೇ ಅಂತಿಮವಾದ್ದರಿಂದ ಅದರ ವಿರುದ್ಧ ಸಂವಿಧಾನದ 226-227ರ ವಿಧಿಯನ್ವಯ ಉಚ್ಚ ನ್ಯಾಯಾಲಯದಲ್ಲೇ ಪ್ರಶ್ನಿಸಬೇಕಾಗಿತ್ತು. ಭೂನ್ಯಾಯಮಂಡಳಿಯ ಬಹಳಷ್ಟು ತೀರ್ಪುಗಳು ಭ್ರಷ್ಟರ ಮತ್ತು ಕಾನೂನು ಜ್ಞಾನದ ಅಭಾವದ, ಅಧಿಕಾರಿಗಳ, ರಾಜಕೀಯವಾಗಿ ನೇಮಕಗೊಂಡ ಸದಸ್ಯರ ಮೂಲಕ, ಕಾನೂನಿನಂತೆ ನಡೆಯದೇ ಸಾವಿರಾರು ಮಂದಿ ಉಚ್ಚ ನ್ಯಾಯಾಲಯದ ಕದ ತಟ್ಟಿ ಅಲ್ಲಿಂದ ಮತ್ತೆ ಭೂನ್ಯಾಯಮಂಡಳಿ ಹೀಗೆ ಕಾಲ್ಚೆಂಡಾಟದಲ್ಲಿ ದಶಕಗಳ ಕಾಲ ಹೋರಾಡಬೇಕಾಯಿತು. ಈ ಪರಿತಾಪವನ್ನು ಗಮನಿಸಿ 1980ರ ದಶಕದಲ್ಲಿ ಭೂನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಜಿಲ್ಲಾಮಟ್ಟದ ಮೇಲ್ಮನವಿ ಪ್ರಾಧಿಕಾರಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಸ್ವಲ್ಪ ತಿಳಿಯಾಗಿಸಿತು.

ಅಂತೂ ಭೂಸುಧಾರಣೆಯಿಂದಾಗಿ ಸಾವಿರಾರು ಭೂಮಾಲಕರು ಭೂಮಿಯನ್ನು ಕಳೆದುಕೊಂಡರೆ, ಸಹಜವಾಗಿಯೇ ಅಷ್ಟೇ ಅಥವಾ ಅದಕ್ಕೂ ಮಿಕ್ಕಿದ ಸಂಖ್ಯೆಯ ಗೇಣಿದಾರರು ಭೂಮಿಯ ಒಡೆತನವನ್ನು ಪಡೆದರು. ಅಪವಾದಗಳನ್ನು ಬಿಟ್ಟರೆ ಬಹುತೇಕ ಎಲ್ಲ ಪ್ರಕರಣಗಳೂ ಇತ್ಯರ್ಥವಾಗಿವೆ. ಗೇಣಿಕಾನೂನಿನ ಮೂಲಕ ಮಾತ್ರವಲ್ಲ, ಭೂಹೀನತೆಯ ಆಧಾರದಲ್ಲಿ ಸರಕಾರದಿಂದ ಕೃಷಿಭೂಮಿ, ಮನೆ ನಿವೇಶನ ಪಡೆದ ಅನೇಕರು ನಿರ್ಬಂಧಿತ ಅವಧಿ ದಾಟಿದ ಬಳಿಕ ಮಾರಿದ ಪ್ರಸಂಗಗಳು ಅಸಂಖ್ಯ. ಇದರಿಂದಾಗಿ ಉಳುವವರೆಲ್ಲರೂ ಇಂದು ಕೃಷಿಕರಾಗಿ ಉಳಿದಿದ್ದಾರೆನ್ನುವಂತಿಲ್ಲ. ಒಂದರ್ಥದಲ್ಲಿ ‘ಉಳಿದವರೇ ಭೂಮಿಯೊಡೆಯರು’ ಎಂಬಂತಾಗಿದೆ. ಈ ಗತಿ-ಸ್ಥಿತಿಯನ್ನು ಹೋಗಲಾಡಿಸಲು, ಸುಧಾರಿಸಲು ನಮ್ಮ ಯಾವ ಪ್ರಗತಿಪರರೂ ಮನಮಾಡಿಲ್ಲ. ಸದ್ಯ ‘ಕೃಷಿ ಭೂಮಿಯನ್ನು ಖರೀದಿಸಲು ಇದ್ದ ನಿಷೇಧ/ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ’ ಎಂಬುದನ್ನು ವಿರೋಧಿಸುವವರು ಇದರಿಂದಾಗಿ ಕೃಷಿಭೂಮಿಯು ದೊಡ್ಡ ಭೂಮಾಲಕರ, ಕೈಗಾರಿಕೋದ್ಯಮಿಗಳ, ವ್ಯಾಪಾರಸ್ಥರ ಸ್ವಾಧೀನವಾಗುತ್ತದೆಂದು ಕೃಷಿಕರು ಭೂಮಿಯನ್ನು ಕಳೆದುಕೊಂಡು ಅತಂತ್ರರಾಗಿ ಬೀದಿಗೆ ಬೀಳುತ್ತಾರೆಂದೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮೂಲಭೂತವಾಗಿ ಈ ವಾದದ ಪೊಳ್ಳುತನವಿರುವುದೇ ಈ ತಿದ್ದುಪಡಿಯು ಯಾರ ಸ್ವಾತಂತ್ರ್ಯವನ್ನೂ ಹತ್ತಿಕ್ಕುವುದಿಲ್ಲವೆಂಬುದನ್ನು ಗಮನಿಸದೇ ಇರುವುದರಲ್ಲಿ. ಇದೇ ತಿದ್ದುಪಡಿಯನ್ನು ‘ಕೃಷಿಭೂಮಿಯನ್ನು ಪರಭಾರೆ ಮಾಡಲು ಇದ್ದ ನಿಷೇಧ/ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ’ ಎಂದು ಓದಿಕೊಂಡರೆ ಈ ವಾದವು ಬಿದ್ದುಹೋಗಬಹುದು. ಸರಕಾರವು ಭೂಮಾಲಕರಿಂದ ಗೇಣಿದಾರರಿಗೆ ಕೊಡಿಸಿದ ಭೂಮಿಯ ಪರಭಾರೆಯ ನಿಷೇಧ ಮತ್ತು ನಿರ್ಬಂಧಗಳನ್ನಷ್ಟೇ ತೆಗೆದುಹಾಕುವುದಿಲ್ಲ, ಬದಲಾಗಿ ಯಾವುದೇ ಭೂಮಿಗೆ ಸಂಬಂಧಿಸಿದಂತೆಯೂ ಭೂಪರಭಾರೆಯ ನಿಷೇಧ ಮತ್ತು ನಿರ್ಬಂಧಗಳನ್ನು ತೆಗೆದುಹಾಕಿದೆ, ಮಾತ್ರವಲ್ಲ ಕೃಷ್ಯೇತರ ಉದ್ದೇಶಗಳಿಗಾಗಿ ಪರಿವರ್ತನೆಗೂ ಅವಕಾಶಮಾಡಿದೆ. ನಾನು ಬಲ್ಲ ಕೆಲವಾದರೂ ಸ್ವಘೋಷಿತ ಪ್ರಗತಿಪರರ ನಿವೇಶನಗಳೂ ಮನೆಗಳೂ ನಿಂತಿರುವುದೇ ಇಂತಹ ಪರಿವರ್ತಿತ ಕೃಷಿಭೂಮಿಯಲ್ಲಿ! ಇದಕ್ಕಿಂತಲೂ ಕಠಿಣವಾದ ಭೂಸ್ವಾಧೀನ ಕಾಯ್ದೆಯಡಿ ಸಾರ್ವಜನಿಕ ಅಗತ್ಯಗಳಿಗೆ ಭೂ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಲು ಭೂಮಾಲಕನಿಗೆ ಅಧಿಕಾರವಿಲ್ಲ. ಭೂಸ್ವಾಧೀನದ ಅಗತ್ಯವನ್ನು ಆತ ಪ್ರಶ್ನಿಸಬಹುದು. ಆದರೆ ಒಮ್ಮೆ ಅದು ಸಾರ್ವಜನಿಕ ಅಗತ್ಯವೆಂದು ಸೂಕ್ತ ಪ್ರಾಧಿಕಾರವು ಮನಗಂಡರೆ, ಭೂಮಾಲಕನಿಗೆ ಹಣರೂಪದ ಅಥವಾ ಭೂಹೀನತೆಯ, ನಿರ್ವಸಿತತೆಯ ಮತ್ತು ಇನ್ನಿತರ ಕೆಲವು ದುರ್ಭರ ಸಂದರ್ಭಗಳಲ್ಲಿ ಪರಿಹಾರದ ಅರ್ಹತೆಯಷ್ಟೇ ಉಳಿಯುತ್ತದೆ. ಈ ಕಾಯ್ದೆಯಡಿ ಕೃಷಿ ಅಥವಾ ಕೃಷ್ಯೇತರವೆಂಬ ತಾರತಮ್ಯಗಳಿಲ್ಲ. ಲಕ್ಷಾಂತರ ಭೂಮಾಲಕರು ಹೀಗೆ, ಕೈಗಾರಿಕೆಗಳಿಗೆ, ಅಣೆಕಟ್ಟುಗಳಿಗೆ, ರಸ್ತೆಗಳಿಗೆ, ಮುಂತಾದ ಸಾರ್ವಜನಿಕ ಹಿತಕ್ಕಾಗಿ ತಮ್ಮ ಬಳಕೆಯೋಗ್ಯ ಭೂಮಿಯನ್ನು ಕಳೆದುಕೊಂಡಿದ್ದಾರೆ. ಯಾರೂ ತನ್ನ ಭೂಮಿಯನ್ನು ಮಾರಲೇಬೇಕೆಂದಿಲ್ಲ. ಭೂಮಿತಾಯಿಯನ್ನು ಪ್ರೀತಿಸುವವರೆಂದು ತಿಳಿದ ಬಹಳಷ್ಟು ಜನರು ಭೂಮಿಯನ್ನು ಮಾರಿಹೋದ ಉದಾಹರಣೆಗಳಿವೆ. ಅಂತಹವರು ಹಣದ ಅವಶ್ಯಕತೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತಿತರ ಸಮಾರಂಭಗಳು, ವೈದ್ಯಕೀಯ ಮತ್ತಿತರ ಅಗತ್ಯಗಳು, ಮುಂತಾದ ಕಾರಣಗಳನ್ನು, ಸಮರ್ಥನೆಯನ್ನು ನೀಡುತ್ತಾರೆ. ಮಕ್ಕಳು ಬೆಂಗಳೂರಿನಲ್ಲೋ, ಇನ್ನಿತರ ಮಹಾನಗರಗಳಲ್ಲೋ, ಇತರೆಡೆಯಲ್ಲೋ, ವಿದೇಶಗಳಲ್ಲೋ ಉದ್ಯೋಗವನ್ನು ಪಡೆದರೆ ಅವರೊಂದಿಗೆ ವಾಸಿಸುವುದಕ್ಕಾಗಿ ತಮ್ಮ ಕೃಷಿಭೂಮಿಯನ್ನು ಮಾರಿದ ನಿದರ್ಶನಗಳಿವೆ. ಕೃಷಿಭೂಮಿಯೆಂಬ ವರ್ಗೀಕರಣವೇಕೆ? ಸಣ್ಣಪುಟ್ಟ ಗ್ರಾಮೀಣ ಪರಿಸರದಲ್ಲಿ ಕೃಷ್ಯೇತರ ಭೂಮಿ, ವಾಸದ ಮನೆಯಷ್ಟೇ ಇದ್ದವರೂ ಅವನ್ನು ಮಾರಿಹೋಗಿದ್ದಾರೆ. ಅಂದರೆ ಮುಖ್ಯವಾಗಿ ಇಂತಹ ಪರಭಾರೆಗಳಲ್ಲಿ ಅಗತ್ಯ-ಅನಿವಾರ್ಯತೆಗಳು ಶೇಕಡಾವಾರು ಅಲ್ಪಪ್ರಮಾಣವನ್ನು ಹೊಂದಿದ್ದರೆ ಉಳಿದ ಭಾರೀ ಪ್ರಮಾಣದ ಪರಭಾರೆಗಳು ನಗರೀಕೃತ ಸಂಸ್ಕೃತಿಯಿಂದ ನಡೆದಿವೆ. ಕೃಷಿವಿಜ್ಞಾನಿಗಳೂ, ಕೃಷಿಪರಿಣತರೂ ಸೇರಿದಂತೆ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದವರೂ ತಮ್ಮ (ಕೃಷಿ)ಭೂಮಿಯನ್ನು ಮಾರಿದ ಪ್ರಸಂಗಗಳಿವೆ. ಹೀಗಾಗಿ ಭೂಮಿಯನ್ನು ಕಳೆದುಕೊಳ್ಳುವುದರಲ್ಲಿ ಆಂತರಿಕ ಒತ್ತಡವಿರಬಹುದೇ ಹೊರತು ಬಾಹ್ಯ ಒತ್ತಡವಿರುವುದಿಲ್ಲ; ಆಕ್ರಮಿತ ಬಲಾತ್ಕಾರವಂತೂ ಇರುವುದಿಲ್ಲ. ಕೊಡುವುದು, ಕೊಳ್ಳುವುದು ಅನಾದಿಯ ವ್ಯವಹಾರ. ಅದು ವ್ಯಾಪಾರೀಕರಣ ಗೊಂಡಿದ್ದರೆ ಕಾಲ-ದೇಶ ಸಂದರ್ಭವನ್ನವಲಂಬಿಸಿದೆಯೇ ಹೊರತು ಇತರ ಪರಿಸ್ಥಿತಿ-ಮನಸ್ಥಿತಿಗಳನ್ನಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಬಯಸುತ್ತಾನೆ. ಇದಕ್ಕೆ ಬೇಕಾದ ಮಾರ್ಗೋಪಾಯಗಳಲ್ಲಿ ತನ್ನ ಆಸ್ತಿ-ಸ್ವತ್ತುಗಳ ವಿನಿಮಯವೂ ಒಂದು. ಭಾರತದ ಸಂದರ್ಭದಲ್ಲಿ ಗೃಹಲಕ್ಷ್ಮೀಯ ಚಿನ್ನದ ಮಾರಾಟವೂ ಹೀಗೇ ಮತ್ತು ಇಂತಹದೇ ಭಾವುಕ ಆಕ್ಷೇಪಗಳನ್ನೊಳಗೊಂಡಿರುತ್ತದೆ. ಸಾಲಕೊಟ್ಟವನನ್ನು ಈ ಕಾರಣಕ್ಕೇ ಖಳನಾಯಕನನ್ನಾಗಿಸಿದ ಪ್ರಸಂಗಗಳು ಬೇಕಷ್ಟಿವೆ. ಕೃಷಿಮಾರುಕಟ್ಟೆಯಲ್ಲೂ ಶೋಷಣೆ ಇದ್ದೇ ಇದೆ. ತನ್ನ ಭೂಮಿಯನ್ನು ತಾನು ಇಟ್ಟುಕೊಳ್ಳಬೇಕೆಂದು ತಿಳಿಯುವುದು ಹೇಗೆ ವಿವೇಕವೋ ಅದನ್ನು ಹಣಕ್ಕೋ ಇನ್ನಿತರ ಆದಾಯರೂಪದ ವಸ್ತುವಿಗೋ ವಿನಿಮಯಗೊಳಿಸುವುದು ಅವನ ಹಕ್ಕು. ಹೊಳೆನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಡವಷ್ಟೇ! ಹೀಗೆ ಮಾರಲಿಟ್ಟ ಆಸ್ತಿಯನ್ನು ಕೊಳ್ಳುವವರನ್ನು ಬಕ(ಸ್ವ)ರೂಪೀ ದೆವ್ವಗಳಂತೆ, ಶೋಷಕರಂತೆ ನಿರೂಪಿಸುವುದನ್ನು ಒಪ್ಪಲಾಗದು. ಬಡ ರೈತರು ಹಣದ ಆಮಿಷಕ್ಕೆ ಬಲಿಯಾಗುತ್ತಾ ರೆಂಬ ದೂರಿದೆ. ಇದು ರೈತರಿಗೆ ಅಂತಲ್ಲ, ಎಲ್ಲ ಬಡವರಿಗೂ ಅನ್ವಯಿಸುತ್ತದೆ. ವಿವೇಕಕ್ಕೆ ಬಡ-ಶ್ರಿಮಂತ ಎಂಬ ವರ್ಗೀಕರಣ ಸಾಧುವಾಗದು. ನಮ್ಮ ಹೋರಾಟಗಾರರಲ್ಲಿ ಎಷ್ಟು ಜನರು ಹಳ್ಳಿಗಳಲ್ಲಿದ್ದಾರೆ? ವಿಶ್ವವಿದ್ಯಾಲಯಗಳಲ್ಲಿ, ರಾಜಧಾನಿಗಳಲ್ಲಿ ನಡೆಯುವ ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ, ಜನಪ್ರಿಯ ವೇದಿಕೆಗಳಲ್ಲಿ, ಪತ್ರಿಕೆಗಳ ಕೃಷಿವೇದಿಕೆಗಳ ಪುಟಗಳಲ್ಲಿ ರಾರಾಜಿಸುವವರು ಈಗಲೂ ಸಮಯ ಮಿಂಚಿಲ್ಲವೆಂದು ತಿಳಿದು ಹಳ್ಳಿಗಳಿಗೆ ವಲಸೆ ಹೋಗಿ ಅಲ್ಲಿ ನೆಲೆ ನಿಂತು ಕೃಷಿಯ ಮತ್ತು ಭೂಮಿಯ ಪ್ರಾಧಾನ್ಯತೆಯನ್ನು ಮಾತ್ರವಲ್ಲ, ಅನಿವಾರ್ಯತೆಯನ್ನು ಹೇಳಿ ಭೂಮಾಲಕರಿಗೆ ಗೌರವ ಮತ್ತು ಲಾಭವಾಗುವಂತೆ ಅವರಿಗೆ ಮತ್ತು ಅವರ ಬೆಳೆಗಳಿಗೆ ಒಳ್ಳೆಯ ಬೆಲೆ ದಕ್ಕುವಂತೆ ಮಾಡಿದರೆ ಮತ್ತು ನಮ್ಮ ಪ್ರಗತಿಪರರು ಈ ನಿಟ್ಟಿನಲ್ಲಿ ಸಕ್ರಿಯವಾಗಿ ದುಡಿದರೆ, ಸರಕಾರದ ಈ ತಿದ್ದುಪಡಿಯು ಶಕ್ತ, ಪ್ರಾಮಾಣಿಕ ಭೂಒಡೆಯರನ್ನು ಬಾಧಿಸು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)