varthabharthi


ಗಲ್ಫ್ ಸುದ್ದಿ

ದುಬೈನಲ್ಲಿ ಭಾರತೀಯ ದಂಪತಿಯ ಬರ್ಬರ ಹತ್ಯೆ: ಓರ್ವನ ಬಂಧನ

ವಾರ್ತಾ ಭಾರತಿ : 24 Jun, 2020

ದುಬೈ, ಜೂ.23:ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಅವರ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬನನ್ನು ದುಬೈ ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಆರೋಪಿಯು ಜೂನ್ 18ರಂದು ಉದ್ಯಮಿ ದಂಪತಿಯನ್ನು ಇಲ್ಲಿನ ಅರೇಬಿಯನ್ ರ್ಯಾಂಚಸ್ ಪ್ರದೇಶದಲ್ಲಿರುವ ಅವರ ನಿವಾಸಲ್ಲಿ ಇರಿದು ಪರಾರಿಯಾಗಿದ್ದನು.ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು 24 ತಾಸುಗಳೊಳಗೆ ದುಬೈ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಘಟನೆಯ ಬಗ್ಗೆ ದಂಪತಿಯ ಪುತ್ರಿಯು ದುಬೈ ಪೊಲೀಸರ ಕಮಾಂಡ್ ರೂಂಗೆ ಕರೆ ಮಾಡಿ ತಿಳಿಸಿದ್ದಳು ಎಂದು ದುಬೈ ಪೊಲೀಸರ ಕ್ರಿಮಿನಲ್ ತನಿಖಾ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಾಫ್ ತಿಳಿಸಿದ್ದರು.

 ಮೃತ ಉದ್ಯಮಿಯು ಕಂಪೆನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ 18 ಹಾಗೂ 13 ವಯಸ್ಸಿನ ಇಬ್ಬರು ಪುತ್ರಿಯರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಕಾನ್ಸುಲ್ ಜನರಲ್ ಕಾರ್ಯಾಲಯವು, ಹತ್ಯೆಯಾದ ದಂಪತಿಯನ್ನು ಹಿರೇನ್ ಅಧಿಯಾ ಹಾಗೂ ವಿಧಿ ಅಧಿಯಾ ಎಂದು ಗುರುತಿಸಿದೆ.

 ಕುಟುಂಬವು ನಿದ್ರಿಸುತ್ತಿದ್ದಾಗ ನಿವಾಸದೊಳಗೆ ನುಗ್ಗಿದ ಶಂಕಿತನು, ಅಲ್ಲಿದ್ದ 2 ಸಾವಿರ ದಿರ್ಹಂ ಹಣವಿದ್ದ ಪರ್ಸ್ ಅಪಹರಿಸಿದ್ದ. ಇನ್ನಷ್ಟು ಬೆಲೆಬಾಳುವ ವಸ್ತುಗಳಿಗಾಗಿ ಅತ ಬೆಡ್‌ರೂಂನೊಳಗೆ ಪ್ರವೇಶಿಸಿದ್ದ. ಆಗ ಎಚ್ಚರಗೊಂಡ ದಂಪತಿಯನ್ನು ಆತ ಚೂರಿಯಿಂದ ಇರಿದಿದ್ದ. ಆನಂತರ ಎಚ್ಚರಗೊಂಡ ದಂಪತಿಯ 18 ವರ್ಷ ವಯಸ್ಸಿನ ಪುತ್ರಿ ಧಾವಿಸಿ ಬಂದಾಗ, ದಾಳಿಕೋರನು ಆಕೆಯ ಕುತ್ತಿಗೆಗೆ ಇರಿದು ಪರಾರಿಯಾದನೆಂದು ಬ್ರಿಗೇಡಿಯರ್ ಅಲ್ ಜಲಾಫ್ ತಿಳಿಸಿದ್ದಾರೆ.

ಸಣ್ಣಪುಟ್ಟ ಗಾಯಗಳಾದ ಪುತ್ರಿಯು ಪೊಲೀಸರಿಗೆ ಕರೆ ಮಾಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಂತಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದಾಗ ಆತ ಇನ್ನೊಂದು ಎಮಿರೇಟ್‌ನಲ್ಲಿರುವುದು ಪತ್ತೆಹಚ್ಚಿ, ಆತನನ್ನು ಬಂಧಿಸಿದ್ದಾರೆ.

ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಹಾಗೂ ಮನೆಯೊಳಗೆ ದರೋಡೆ ಮಾಡಲು ಸಂಚು ರೂಪಿಸಿದ್ದುದಾಗಿ ಹೇಳಿಕೊಂಡಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)