varthabharthi


ಅನುಗಾಲ

ಚೀನಾ ತಂದ ಆತಂಕ

ವಾರ್ತಾ ಭಾರತಿ : 25 Jun, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸರಕಾರವು ತನ್ನ ವೈಫಲ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬದಲಿಗೆ ಅದನ್ನು ಅಡಗಿಸುತ್ತಿದೆ. ದೇಶದ ಪ್ರಜೆಗಳನ್ನು ಹಾದಿ ತಪ್ಪಿಸುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಹಾಗೆ ಮಾಡಿದರೆ ನಮ್ಮ ಮುಗ್ಧ ಜನರು ವಾಸ್ತವವನ್ನರಿಯದೆ ನಾವೇ ಮುಂದೆ ಎಂದುಕೊಳ್ಳುತ್ತಾರೆ ಮತ್ತು ಬೆಂಕಿಗೆ ಬೀಳುವ ಹುಳಗಳಂತೆ ಭಾವೋದ್ರೇಕಕ್ಕೆ ಬಲಿಯಾಗುತ್ತಾರೆ.

ಇತ್ತೀಚೆಗೆ ಚೀನಾ-ಭಾರತ ನಡುವಣ ವಿವಾದ ಬಗೆಹರಿಯದ ಮಟ್ಟಕ್ಕೆ ಬೆಳೆದಿದೆ. ಒಂದು ತಿಂಗಳಿನಿಂದಲೂ ಹೊಗೆಯಾಡುತ್ತಿದ್ದ ವಾಸ್ತವ ನಿಯಂತ್ರಣ ರೇಖೆಯ ಆಚೀಚೆಯ ಕಲಹ ಜೂನ್ 15ರಂದು ಇದ್ದಕ್ಕಿದ್ದಂತೆಯೇ ನಿಯಂತ್ರಣ ತಪ್ಪಿ ಭಾರತದ 20ಕ್ಕೂ ಹೆಚ್ಚು ಹಿರಿ-ಕಿರಿಯ ಯೋಧರ ಸಾವಿನೊಂದಿಗೆ ಮತ್ತು ಅನೇಕ ಸಂಖ್ಯೆಯ ಯೋಧರ ಬಂಧನದೊಂದಿಗೆ ಮತ್ತು ಬಳಿಕ ಅವರ ಬಿಡುಗಡೆಯೊಂದಿಗೆ ಪರ್ಯಾವಸಾನವಾಯಿತು. ಇದು ಸುಖಾಂತವಲ್ಲ; ದುರಂತದ ತೇಪೆ. ಇದು ಹೇಗಾಯಿತು ಎಂಬ ರಹಸ್ಯ ಮತ್ತು ಇದರ ಹಿಂದಿನ ತರ್ಕ ಇನ್ನೂ ಪರಿಹಾರವಾಗಿಲ್ಲ. ಹೇಗೂ ಇರಲಿ, ಅವರು ನಮ್ಮ ಹೆಮ್ಮೆಯ ಯೋಧರು. ಸೇನೆಗೆ ಮಾರ್ಗದರ್ಶಕರು ಆಳುವವರು. ಪಾಕಿಸ್ತಾನದಂತಹ ಅತಂತ್ರ ದೇಶಗಳಲ್ಲಿ ಮಾತ್ರ ಸೇನೆ ಸ್ವತಂತ್ರವಾಗಿ ಮತ್ತು ನಿರಂಕುಶವಾಗಿ ಕಾರ್ಯವೆಸಗುತ್ತದೆ ಮಾತ್ರವಲ್ಲ, ಸರಕಾರದ ಮೇಲೆ ಹತೋಟಿ ಸಾಧಿಸುತ್ತದೆ. ಯಾವನೇ ರಾಜಕೀಯ ನಾಯಕನೂ ಸುರಕ್ಷಿತವಾಗಿರಬೇಕಾದರೆ ಸೇನೆಯ ಕೃಪೆಯನ್ನು ಪಡೆಯಬೇಕು. ಆದರೆ ಭಾರತ ಈ ದೃಷ್ಟಿಯಿಂದ ಅದೃಷ್ಟಶಾಲಿ ಎನ್ನಬೇಕು. ಇಲ್ಲಿ ಸೇನೆ ರಾಜಕೀಯದಲ್ಲಾಗಲೀ, ಆಡಳಿತದಲ್ಲಾಗಲೀ ಮೂಗು ತೂರಿಸುವಂತಿಲ್ಲ. ಸೇನೆಗೆ ದೇಶ ಮತ್ತು ಪ್ರಜೆಗಳು ಇವಿಷ್ಟೇ ತಮ್ಮ ಕಾಳಜಿಯ ಮಾನಚಿಹ್ನೆಗಳು; ಧರ್ಮ, ಜಾತಿ, ಮತ, ಭಾಷೆ, ಜನಾಂಗಗಳಲ್ಲ. ಯಾವುದೇ ಕಾರಣಕ್ಕೂ ಸೇನೆಯಲ್ಲಿ ರಾಜಕೀಯ ಉದ್ಭವವಾಗಬಹುದೆಂಬ ಕಾರಣಕ್ಕೇ ಭೂ, ವಾಯು, ಜಲವೆಂಬ ಮೂರು ವಿಭಾಗದ ಸೇನಾವಿಭಾಗಗಳನ್ನು ಪ್ರತ್ಯೇಕವಾಗಿಟ್ಟು ಅವು ಸರಕಾರದ ನೇರ ನಿಯಂತ್ರಣದಲ್ಲಿರುವುದು. (ಸೇನೆ ತನಗಿಷ್ಟಬಂದಂತೆ ನಡೆದುಕೊಳ್ಳಬಹುದು ಎಂಬ ಅಪಾಯಕಾರೀ ನಿರ್ದೇಶನವನ್ನು ನಮ್ಮ ಸರಕಾರ ಮಾಡಿದ್ದರ ಬಗ್ಗೆ ದೇಶ ಚಿಂತಿಸಬೇಕು!) ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಅಧಿಕಾರವ್ಯಾಪ್ತಿಯ ಹಂಚಿಕೆಯೂ ಇದೇ ಮಾನದಂಡವನ್ನವಲಂಬಿಸಿದೆ. ಅಮೆರಿಕದಂತಹ ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಮನೋವೃತ್ತಿಗೆ ಹೆಚ್ಚು ಅವಕಾಶವಿದೆಯಾದರೂ ಅಲ್ಲಿನ ಒಕ್ಕೂಟ ಪ್ರಜಾತಂತ್ರ ವ್ಯವಸ್ಥೆ ಇದನ್ನು ಬೆಳೆಯಲು ಬಿಟ್ಟಿಲ್ಲ. ಪ್ರಾಯಃ ಇದೇ ಕಾರಣಕ್ಕೆ ಉದ್ಯಮಿಯೂ ಮಹತ್ವಾಕಾಂಕ್ಷಿಯೂ ಆಗಿರುವ ಡೊನಾಲ್ಡ್ ಟ್ರಂಪ್‌ರಂತಹವರೂ ಅಮೆರಿಕದಲ್ಲಿ ಪ್ರಜಾತಂತ್ರಕ್ಕೆ ಶರಣಾಗಬೇಕಾದ ಅನಿವಾರ್ಯತೆಯಿದೆ. ಅಧಿಕಾರಕ್ಕೇರಿದವನು ದುರ್ಮತಿಯಾದರೆ, ಮತಾಂಧ-ಮದಾಂಧನಾದರೆ ಅಥವಾ ನಿರಂಕುಶಮತಿಯಾದರೆ ದೇಶಕ್ಕೆ ಮತ್ತು ಮುಖ್ಯವಾಗಿ ಅಧಿಕಾರಬಳಕೆಯ ವಿಧಿವಿಧಾನವನ್ನು ಟೀಕಿಸುವವರಿಗೆ ಗಂಡಾಂತರ ತಪ್ಪಿದ್ದಲ್ಲ. ಆಫ್ರಿಕಾಖಂಡದ, ದಕ್ಷಿಣ ಅಮೆರಿಕದ ಮತ್ತು ರಶ್ಯ, ಚೀನಾ, ಉತ್ತರ ಕೊರಿಯಾ, ಮುಂತಾದೆಡೆೆ ಈ ದಮನಕಾರಿ ಪ್ರವೃತ್ತಿ ಕಂಡುಬಂದಿದೆ. ಪೌರುಷ ಮತ್ತು ಪರಾಕ್ರಮ - ಇವೆರಡೂ ಸಮಾನಾರ್ಥವನ್ನು ಧ್ವನಿಸುವ ಪದಗಳು. ಮೊದಲನೆಯದು ಮನೆ, ಸ್ವಂತ ನೆಲ, ಕೊನೆಗೆ ಕನಸಿನಲ್ಲೂ, ಭ್ರಮೆಯಲ್ಲೂ ಕೆಲಸಮಾಡಿದರೆ ಪರಾಕ್ರಮವು ನಿಜದ ನೆಲೆಯಲ್ಲಿ ಕೆಲಸಮಾಡುತ್ತದೆ. ಮಹಾಭಾರತದ ವಿರಾಟಪರ್ವದ ಉತ್ತರಕುಮಾರನ ಕಥೆ ಈ ವ್ಯತ್ಯಾಸವನ್ನು ಮನಗಾಣಿಸುವುದಕ್ಕೇ ಬಂದಿದೆಯೆಂದುಕೊಂಡಿದ್ದೇನೆ. ನಮ್ಮ ದೇಶಭಕ್ತಿಯ ಕೆಚ್ಚೆದೆ ಎಷ್ಟೇ ಧೈರ್ಯವನ್ನಿತ್ತರೂ ವಾಸ್ತವದ ಅರಿವಿಲ್ಲದಿದ್ದರೆ ಯುದ್ಧವೆಂಬ ಕುದುರೆಯ ಒಂದೇ ನೆಗೆತಕ್ಕೆ ಸವಾರನು ಮಣ್ಣುಪಾಲಾಗಬಹುದು. ಚೀನಾದ ವಿರುದ್ಧ ಈ ಹಿಂದೆ ಪಾಕಿಸ್ತಾನದ ವಿರುದ್ಧ ನಡೆಸಿದಂತಹ ಆಕ್ರಮಣಕಾರಿ ಪ್ರವೃತ್ತಿಗಳು ದುಸ್ಸಾಹಸವಾಗುತ್ತವೆಂಬ ಅರಿವು ಭಾರತಕ್ಕಿದೆ. ಪಾಕಿಸ್ತಾನ ಭಾರತಕ್ಕೆ ಹೋಲಿಸಿದರೆ ಒಂದು ಶಕ್ತಿಯೇ ಅಲ್ಲ. ಅದು ಸಾಕಷ್ಟು ಅಣ್ವಸ್ತ್ರ-ಶಸ್ತ್ರಗಳನ್ನು ಹೊಂದಿದೆಯೆಂದು ಹೇಳಿಕೊಂಡರೂ ಅದರ ಆಂತರಿಕ ಸಮಸ್ಯೆಗಳಿಂದಾಗಿ ಅದು ಯುದ್ಧದಂತಹ ಹುಂಬಸಾಹಸಕ್ಕೆ ಉದ್ಯುಕ್ತವಾಗುವುದಿಲ್ಲವೆಂಬ ನಂಬಿಕೆ ನಮ್ಮವರಿಗಿದೆ. ಆದರೆ ಚೀನಾ ಹೀಗಲ್ಲ. ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿರುವ ಐದು ರಾಷ್ಟ್ರಗಳಲ್ಲೊಂದು. ಅದರ ಜಿಡಿಪಿ ನಮಗಿಂತ ಹೆಚ್ಚಿದೆ. ಅದರ ಸೈನ್ಯ ಶಕ್ತಿ ನಮಗಿಂತ ದೊಡ್ಡದು. ವಿಶ್ವವೇದಿಕೆಯಲ್ಲಿ ಅದು ನಮಗಿಂತ ಶಕ್ತ ಪ್ರಭಾವವನ್ನು ಹೊಂದಿದೆ. ಆದ್ದರಿಂದಲೇ ನಮ್ಮ ನಾಯಕರು ಈ ಹಿಂದಿನಂತೆ ‘ಸರ್ಜಿಕಲ್ ಸ್ಟ್ರೈಕ್’ ಆಗಲಿ, ಗಡಿಯಾಚೆಗೆ ಯಾವಾಗೆಂದರೆ ಆಗ ನಾವು ದಾಳಿ ಮಾಡಿಯೇವು ಎಂಬ ಕುತರ್ಕಗಳನ್ನು ಹೇಳುತ್ತಿಲ್ಲ. ಅದಲ್ಲವಾದರೆ ಈಗಾಗಲೇ ಪಾಕಿಸ್ತಾನದ ಕುರಿತು ಹೇಳಿದಂತೆ ಒಂದು ಭಾರತೀಯ ಸೈನಿಕನ ತಲೆಗೆ ಹತ್ತು ವೈರಿತಲೆಗಳ ಆಹುತಿಯೆಂಬ ವೀರಾವೇಶದ ಮಾತುಗಳು ಬರುತ್ತಿದ್ದವು. ಅದು ಹೇಗೂ ಇರಲಿ, ನಮ್ಮ ದೇಶದ, ಅದರ ಶಕ್ತಿಯ ಕುರಿತು ನಮಗೆ ಹುಚ್ಚು ಅಭಿಮಾನ ಬೇಕು. ಆದ್ದರಿಂದ ಯಾವುದೇ ವೈರಿರಾಷ್ಟ್ರದ ಜೊತೆಗೆ ದೇಶದ ವ್ಯವಹರಣೆಯಲ್ಲಿ ಒಗ್ಗಟ್ಟು ಅವಶ್ಯಕ. ಒಕ್ಕೊರಲಿನಿಂದ ನಾವು ದೇಶಹಿತದ ಕುರಿತು ಚಿಂತಿಸಬೇಕು.

ಈ ಒಕ್ಕೊರಲೆಂದರೆ ಇಡೀ ರಾಷ್ಟ್ರದ ಧ್ವನಿ ಎಂದರ್ಥ. ಒಬ್ಬ ವ್ಯಕ್ತಿ ಆತ ಎಷ್ಟೇ ದೊಡ್ಡವನಾದರೂ ಆತನ ಧ್ವನಿಯೆಂದರ್ಥವಲ್ಲ. ದುರದೃಷ್ಟವಶಾತ್ ನಮ್ಮನ್ನಾಳುವವರು ಈ ಒಕ್ಕೊರಲಿಗೆ ಒಬ್ಬ ವ್ಯಕ್ತಿಯ ಧ್ವನಿಯೆಂಬರ್ಥ ನೀಡಿ ಆತ ಹೇಳಿದ್ದನ್ನು ಎಲ್ಲರೂ ತಥಾಕಥಿತ ಸತ್ಯವೆಂದು ಒಪ್ಪಬೇಕು ಮತ್ತು ಅದಕ್ಕೆ ವಿರುದ್ಧವಾದದ್ದೆಲ್ಲವೂ ರಾಷ್ಟ್ರದ್ರೋಹ ಎಂಬಂತೆ ಕಹಳೆ ಮೊಳಗಿಸುತ್ತಿದ್ದಾರೆ. ದೇಶದ ಒಕ್ಕೊರಲೆಂದರೆ ಕೈಚಪ್ಪಾಳೆಯೂ ಅಲ್ಲ; ಶಂಖ ಜಾಗಟೆಯ ಧ್ವನಿಯೂ ಅಲ್ಲ. ಒಕ್ಕೊರಲೆಂದರೆ ಎಲ್ಲ ಧ್ವನಿಗಳಿಗೂ ಧ್ವನಿ ಕೊಡಬಲ್ಲ ಕೊರಳು ಎಂದರ್ಥ.

ಚೀನಾದೊಂದಿಗೆ ಬಲಾಬಲಪ್ರದರ್ಶನ ವ್ಯರ್ಥ. ಆದರೆ ನಮ್ಮನ್ನಾಳುವವರು ನೆನಪಿಡಬೇಕಾದ್ದೆಂದರೆ ಈ ಸಮಯ-ಸಂದರ್ಭದಲ್ಲಿ ದೇಶದೊಳಗಿನ ರಾಜಕೀಯಕ್ಕೆ ಧ್ವನಿ ನೀಡುವುದೂ ತಪ್ಪು. ಇನ್ನೊಂದು ದೇಶದೊಂದಿಗೆ ಯುದ್ಧವೆಂದರೆ ದೇಶದೊಳಗಣ ಚುನಾವಣಾ ಪ್ರಚಾರ ಅಥವಾ ಆಂತರಿಕ ಭಿನ್ನಾಭಿಪ್ರಾಯಗಳ ಸೇಡಿನ ರಾಜಕಾರಣವಾಗಬಾರದು. ಸದ್ಯದ ಸ್ಥಿತಿಯಲ್ಲಿ ಈ ದೇಶದ ನಾಯಕತ್ವವು ಯಾವ ಪರಿಣತಿಯನ್ನೂ ರಾಜಕೀಯ ನಿಷ್ಠೆಯ ಅಳತೆಗೋಲಿನಲ್ಲೇ ಅಳೆಯುತ್ತಿದೆ. ಇದು ಹೊಸ ಬೆಳವಣಿಗೆಯೆಂದೇನಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಇದು ನಡೆದಿದೆ. ಬಾಂಗ್ಲಾದೇಶದ ಮುಕ್ತಿಯಾದ ತಕ್ಷಣ ದೇಶದ ಚುನಾವಣೆ ನಡೆಸಲಾಯಿತು. ನಿರೀಕ್ಷಿಸಿದಂತೆ ವಿರೋಧಪಕ್ಷಗಳು ಗುಡಿಸಲ್ಪಟ್ಟವು. ತುರ್ತುಪರಿಸ್ಥಿತಿಯ ಆನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಲಿಯಾಯಿತು. ಕಳೆದ ಒಂದೆರಡು ಚುನಾವಣೆಗಳಲ್ಲಿ ರಾಜ್ಯದ್ದಿರಲಿ, ದೇಶದ್ದಿರಲಿ, ಪಾಕಿಸ್ತಾನದ ವಿರುದ್ಧದ ಕೇಕೆಯು ದೇಶದೊಳಗೆ ಸದ್ದು ಮಾಡಿದಷ್ಟು ಹೊರಗೆ ಮಾಡಿರಲಿಲ್ಲ. ಒಂದು ದೃಷ್ಟಿಯಿಂದ ವೈರಿರಾಷ್ಟ್ರಗಳೇ ಈ ದೇಶದ ಕೆಲವು ಚುನಾವಣೆಗಳ ಫಲಿತಾಂಶವನ್ನಾದರೂ ನಿರ್ಧರಿಸಿವೆ.

 ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂಬ ಬಗ್ಗೆ ಊಹಾಪೋಹಗಳೇ ಹೊರತು ವಾಸ್ತವದ ಚಿತ್ರಣವನ್ನು ಕೊಡುವುದಕ್ಕೆ ಸರಕಾರವು ಹಿಂಜರಿಯುತ್ತಿದೆ. ಅಂತರ್‌ರಾಷ್ಟ್ರೀಯ ರಾಜಕಾರಣದಲ್ಲಿ ವೈಫಲ್ಯಗಳನ್ನು ಎಲ್ಲರೂ ಹೊತ್ತುಕೊಳ್ಳಬೇಕೇ ವಿನಾ ಒಬ್ಬ ನಾಯಕನಲ್ಲ. ಇದನ್ನು ಈಗಲೂ ಅನುಸರಿಸಬೇಕು. ಈ ದೃಷ್ಟಿಕೋನಕ್ಕೆ ಆಳುವವರೇ ಅಡ್ಡಿಯಾಗುತ್ತಿದ್ದಾರೆ. ಕಾರಣವೆಂದರೆ 1962ರ ಭಾರತ-ಚೀನಾ ವಿವಾದದಲ್ಲಿ ಭಾರತ ತನ್ನ ಭೂಪ್ರದೇಶದ ನಷ್ಟವನ್ನನುಭವಿಸಬೇಕಾಯಿತು. ಅದನ್ನೇ ಇಂದಿಗೂ ಹೇಳುತ್ತ ನೆಹರೂ ಅವರನ್ನು ಆರೋಪಿಸುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ಭಾರತವು ಚೀನಾದ ವಿರುದ್ಧ ಗೆಲುವು ಸಾಧಿಸಿದ್ದು ಒಂದೇ ಸಲ-1967ರಲ್ಲಿ. ಆಗ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು; ಸ್ವತಂತ್ರವಾಗಿದ್ದ ಸಿಕ್ಕಿಂ ಭಾರತದ ರಾಜ್ಯವಾದದ್ದೂ ಕಾಂಗ್ರೆಸ್ ಸರಕಾರದ; ಪಾಕಿಸ್ತಾನದ ವಿರುದ್ಧ ನಮ್ಮ ಭಾರೀ ಗೆಲುವು ಸಂಭವಿಸಿದ್ದು 1971ರಲ್ಲಿ; ಬಾಂಗ್ಲಾದೇಶದ ಮುಕ್ತಿಯಲ್ಲಿ. ಈ ಎಲ್ಲ ಸಂದರ್ಭಗಳಲ್ಲೂ ಇಂದಿರಾ ಪ್ರಧಾನಿಯಾಗಿದ್ದರು. ಇವೆಲ್ಲವೂ ಭಾರತದ ಗೆಲುವೆಂದು ಭಾವಿಸಬೇಕೇ ಹೊರತು ಸಂಬಂಧಿಸಿದ ರಾಜಕೀಯ ಪಕ್ಷದ್ದೆಂದಲ್ಲ. ಆದರೆ ಈಗಿನ ಸರಕಾರವು ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಮುತ್ಸದ್ದಿತನವನ್ನು ಬಿಟ್ಟು ತನ್ನ ಪಡೆಗಳಿಂದ ಇತಿಹಾಸವನ್ನು ಕೆದಕುತ್ತ ಆರೋಪ ಪಟ್ಟಿಯನ್ನು ಸಿದ್ಧಗೊಳಿಸುವುದರಲ್ಲಿ ಮತ್ತು ಅದಕ್ಕೆ ಬೇಕಾದಂತಹ ಸಂಕುಚಿತ ವ್ಯೆಹಗಳನ್ನು ಸೃಷ್ಟಿಸುವುದರಲ್ಲಿ ತನ್ನ ಅಮೂಲ್ಯ ರಾಜಕಾರಣವನ್ನು ಕಳೆದುಕೊಳ್ಳುತ್ತಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಕುಖ್ಯಾತ ಪಾಕ್‌ಭಯೋತ್ಪಾದಕರನ್ನು ಕೇಂದ್ರ ಸರಕಾರವೇ ಬಿಡುಗಡೆಮಾಡಿ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿತ್ತು. ಇದು ಅವರ ವೈಫಲ್ಯವೆಂದು ಹೇಳಬಹುದೇ? ಈಗ ಸೆರೆಯ ನಿರ್ಬಂಧದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಬೇಗಂ ಮುಫ್ತಿ ಅವರ ಅಪಹರಣವಾದಾಗ ರಾಷ್ಟ್ರಹಿತದಲ್ಲಿ ಅಂತಹ ಅನಿವಾರ್ಯ ಕ್ರಮವನ್ನು ಕೈಗೊಂಡಿತೆಂದೇ ಹೇಳಬೇಕು. ಆದರೆ ಶೋಚನೀಯ ಸ್ಥಿತಿಯೆಂದರೆ ನಮ್ಮ ರಾಜಕೀಯದ ಕುಸಿದ ಗುಣಮಟ್ಟ. ದೇಶದ ಗೌರವವನ್ನೇ ಮಣ್ಣುಪಾಲುಮಾಡುವ ಕೆಳಹಂತದಲ್ಲಿ ನಾವಿದ್ದೇವೆ. ಸಂಸತ್ತಿನಲ್ಲಿ, ಶಾಸನ ಸಭೆಗಳಲ್ಲಿ ವಿಶ್ವಮಟ್ಟದ ರಾಜಕಾರಣವನ್ನು ಮಾಡಬಲ್ಲ ಅರ್ಹತೆ ಯಾರಿಗೂ ಇಲ್ಲವೆನ್ನುವ ಮಟ್ಟಕ್ಕೆ ನಾವಿಳಿದಿದ್ದೇವೆ. ರಾಜಕಾರಣವೆಂದರೆ ‘ತತ್ಕಾಲ್’ ಯೋಜನೆಯಲ್ಲ. ಅದು ಶಾಶ್ವತವಾದ ಮೈಲಿಗಲ್ಲುಗಳನ್ನು ಸೃಷ್ಟಿಮಾಡುವ ಇಂದ್ರಜಾಲ. ಸದ್ಯ ಸರಕಾರವು ತನ್ನ ವೈಫಲ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬದಲಿಗೆ ಅದನ್ನು ಅಡಗಿಸುತ್ತಿದೆ. ದೇಶದ ಪ್ರಜೆಗಳನ್ನು ಹಾದಿ ತಪ್ಪಿಸುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಹಾಗೆ ಮಾಡಿದರೆ ನಮ್ಮ ಮುಗ್ಧ ಜನರು ವಾಸ್ತವವನ್ನರಿಯದೆ ನಾವೇ ಮುಂದೆ ಎಂದುಕೊಳ್ಳುತ್ತಾರೆ ಮತ್ತು ಬೆಂಕಿಗೆ ಬೀಳುವ ಹುಳಗಳಂತೆ ಭಾವೋದ್ರೇಕಕ್ಕೆ ಬಲಿಯಾಗುತ್ತಾರೆ. ಸರಕಾರವು ಆತ್ಮಶ್ಲಾಘನೆಯೊಂದಿಗೆ ಘೋಷಿಸಿಕೊಳ್ಳುತ್ತಿರುವ ಆತ್ಮನಿರ್ಭರತೆಯೆಂದರೆ ಸ್ವಾವಲಂಬನೆ. ಒಳಗೆ ಗೋಳಿಸೊಪ್ಪು ತುಂಬಿಕೊಂಡು ಹೊರಗೆ ವಿಶ್ವಗುರುವೆಂದು ಶೃಂಗರಿಸುವುದಲ್ಲ. ಇಲ್ಲವಾದರೆ ಅದು ಮುಂದೊಂದು ದಿನ ಆತ್ಮಹತ್ಯೆಯೇ ಆಗಬಹುದು!

ಇದಕ್ಕೊಂದು ಚಿಕ್ಕ ಆದರೆ ಮಹತ್ವದ ಮತ್ತು ಸಾಕಷ್ಟು ಸುದ್ದಿ ಮಾಡುತ್ತಿರುವ ಉದಾಹರಣೆಯನ್ನು ನೀಡಬಹುದು: ಚೀನಾದೊಂದಿಗೆ ನೇರ ಯುದ್ಧ ಮಾಡಿದರೆ ಗೆಲುವು ಸಾಧ್ಯವೂ ಇಲ್ಲ; ಸಾಧುವೂ ಅಲ್ಲ. ಆದರೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಗ್ರಾಹಕ ಬಳಕೆಯ ಚೀನಾದ ಸರಕುಗಳು ಮಾರಾಟವಾಗುತ್ತಿವೆ. ನಮ್ಮಲ್ಲಿ ತಯಾರಾಗುತ್ತಿದ್ದ ಅನೇಕ ವಸ್ತುಗಳನ್ನು ಅವುಗಳ ಅರ್ಧಬೆಲೆಗೆ ಚೀನಾ ಮಾರುಕಟ್ಟೆಗೆ ನೀಡುತ್ತಿದ್ದು ನಮ್ಮ ನಿರ್ಮಾಣ ನಿಂತಿದೆ. ಜಾಗತೀಕರಣ ಮತ್ತು ವಿಶ್ವ ವ್ಯಾಪಾರ ಒಪ್ಪಂದದ ಪ್ರಕಾರ ಈ ವಿದೇಶಿ ಸರಕುಗಳಿಗೆ ಕಡಿವಾಣ ಹಾಕುವುದು ಸುಲಭವಲ್ಲ. ಆದ್ದರಿಂದ ಕೊಳ್ಳುವವರಿರುವ ವರೆಗೆ ಭಾರತ ಸರಕಾರವು ಇವುಗಳನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಇಷ್ಟೇ ಅಲ್ಲ, ರಾಷ್ಟ್ರೀಯ ನಿಲುವುಗಳು ಅಂತರ್‌ರಾಷ್ಟ್ರೀಯ ನಿಲುವುಗಳಿಗೆ ಭಿನ್ನವಾಗಿರಲೂ ಸಾಧ್ಯವಿಲ್ಲ. ಇದರ ಅರಿವು ನಮ್ಮ ನಾಯಕರಿಗಿದೆ. ಆದ್ದರಿಂದಲೇ ಎಷ್ಟೇ ಸ್ವದೇಶಿ ನಿಲುವಿದ್ದಾಗಲೂ, ದೇಶಭಕ್ತಿಯಿದ್ದಾಗಲೂ ಅಂತಹ ನಿಲುವುಗಳನ್ನು ಬಹಿರಂಗ ವೇದಿಕೆಗಳಲ್ಲಿ (ಭಾರತದ ಪ್ರಧಾನಿಯವರು 2018ರ ವಿಶ್ವ ವ್ಯಾಪಾರ ಮೇಳದಲ್ಲಿ ಮಾಡಿದ ಭಾಷಣವನ್ನು ನೆನಪಿಸಿಕೊಳ್ಳಿ) ಭಾರತದ ಪ್ರಧಾನಿ ಖಂಡಿಸಿದ್ದಾರೆ. ಅದು ಭಯೋತ್ಪಾದನೆಯಷ್ಟೇ ಕೇಡಿನದ್ದೆಂದು ಘೋಷಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾದ್ದನ್ನು ಭಾರತೀಯರು ಮಾಡಬಹುದೇ? ಮಾಡಿದರೆ ಅದರ ಪರಿಣಾಮ, ಫಲಿತಾಂಶಗಳೇನು? ಸರಕಾರ ಮಾಡದ್ದನ್ನು, ಜನರು ಮಾಡಬಹುದೇ? ಜನರು ಮಾಡಿದರೆ ಸರಕಾರ ಅವರನ್ನು ದಂಡಿಸಬಹುದೇ?

ಈಗ ದೇಶದಲ್ಲಿ ಚೀನಿ ಸರಕುಗಳನ್ನು ಬಹಿಷ್ಕರಿಸುವ ಕರೆ ಮೊಳಗುತ್ತಿದೆ. ಭಾವುಕ ಮುಗ್ಧರು ತಮ್ಮ ವ್ಯಾವಹಾರಿಕ ವಾಸ್ತವವನ್ನೂ ಶಿಸ್ತನ್ನೂ ಮರೆತು ತಮಗೇ ನಷ್ಟಮಾಡಿಕೊಳ್ಳುತ್ತ ಚೀನಿ ಟಿವಿ, ಚೀನಿ ಮೊಬೈಲ್, ಚೀನಿ ಆ್ಯಪ್‌ಗಳನ್ನು ನಾಶಮಾಡುತ್ತಿದ್ದಾರೆ. ಬಾಲ್ಕನಿಯಿಂದ ಚೀನಿ ನಿರ್ಮಾಣದ ಟಿವಿಯನ್ನೆಸೆಯುವ ದೃಶ್ಯವೊಂದು ದೇಶಭಕ್ತಿಯ ಹೆಸರಿನಲ್ಲಿ ಪ್ರದರ್ಶಿತವಾಗಿದೆ. ಈ ನಷ್ಟವನ್ನು ಸರಕಾರವಾಗಲೀ ಈ ಎಸೆತದ ಕರೆಕೊಟ್ಟವರಾಗಲೀ ಭರಿಸುವುದಿಲ್ಲ. ಕಷ್ಟಪಟ್ಟು ಮೊಬೈಲ್ ಕೊಂಡವನಿಗೆ ಅನೇಕ ಬಾರಿ ಅದು ಯಾವ ದೇಶದ್ದೆಂದೂ ಗೊತ್ತಿರುವುದಿಲ್ಲ. ಅಮೆರಿಕದಿಂದ ಬಂದ ಅತಿಥಿಯೊಬ್ಬರು ನನಗೆ ಒಂದು ಜಾಕೆಟನ್ನು ಉಡುಗೊರೆಯಾಗಿ ನೀಡಿದ್ದರು. ನೋಡಿದರೆ ಅದು ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ತಯಾರಾಗಿತ್ತು! ಗಾಂಧಿ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆಕೊಟ್ಟಾಗ ಬ್ರಿಟಿಷ್ ಉಡುಗೆಗಳನ್ನು, ಬಟ್ಟೆ ಗಳನ್ನು ಅನೇಕರು ಸುಟ್ಟರು. ಆಗ ರವೀಂದ್ರನಾಥ್ ಠಾಗೋರ್ ಅವರು ಬಟ್ಟೆಗಳನ್ನು ಸುಡುವುದರಿಂದ ಪ್ರಯೋಜನವಾಗದು; ಅದನ್ನು ನಿರ್ಗತಿಕರಿಗೆ ದಾನಮಾಡುವುದು ಮಾನವತೆಯಲ್ಲವೇ ಎಂದಿದ್ದರು. ಸಂದರ್ಭ ಬೇರೆಯಾದರೂ ತತ್ವ ಅದೇ.

ಕೊಳ್ಳುವುದನ್ನು ನಿಲ್ಲಿಸಿ ಎನ್ನಬಹುದು. ಆದರೂ ಕಡಿಮೆ ಬೆಲೆಗೆ ಸಿಗುವ ಯಾವುದೇ ವಸ್ತುವನ್ನು ನಮ್ಮದೆಂಬ ಕಾರಣಕ್ಕೆ ಹೆಚ್ಚು ಬೆಲೆಗೆ ಕೊಳ್ಳುವ ನಿಲುವು ತಾಳಬೇಕಾದರೆ ದೇಶದ ವ್ಯಾಪಾರ ನೀತಿಯೇ ಬದಲಾಗಬೇಕು. ಅಲ್ಲಿಯವರೆಗೆ ಯಾವುದೇ ಸಂದರ್ಭದಲ್ಲೂ ದೇಶಭಕ್ತಿಯ ಹೆಸರಿನಲ್ಲಿ ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಭಾವುಕ ಕಾರ್ಯವನ್ನು ನಿಲ್ಲಿಸುವುದೇ ನೈಜ ದೇಶಭಕ್ತಿಯಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)