varthabharthi


ಸಂಪಾದಕೀಯ

ಅಮಾಯಕರ ರಕ್ತದಲ್ಲಿ ನೆಂದ ಖಾಕಿ ಧಿರಿಸು

ವಾರ್ತಾ ಭಾರತಿ : 30 Jun, 2020

ಪ್ರಜಾಸತ್ತೆ ಸರ್ವಾಧಿಕಾರದ ವೈರಸ್‌ಗೆ ಬಲಿಯಾದರೆ ಅದರ ರೋಗ ಲಕ್ಷಣಗಳು ಮೊತ್ತ ಮೊದಲು ಕಂಡು ಬರುವುದು ಪೊಲೀಸ್ ಇಲಾಖೆಯೊಳಗೆ. ಯಾವಾಗ ಪೊಲೀಸರೇ ನ್ಯಾಯವನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಾರೆಯೋ, ಆಗ ನಾವು ಆತಂಕ ಪಡಬೇಕಾಗಿರುವುದು ಈ ದೇಶದ ಹೃದಯವಾಗಿರುವ ಸಂವಿಧಾನದ ಕುರಿತಂತೆ. ಕಳೆದ ಐದು ವರ್ಷಗಳಲ್ಲಿ ದೇಶದ ಕೆಲವು ಕಡೆಗಳಲ್ಲಿ ಜನಸಾಮಾನ್ಯರ ಜೊತೆಗೆ ಪೊಲೀಸರ ವರ್ತನೆಗಳನ್ನು ಗಮನಿಸಿದರೆ, ಇವರು ಈ ದೇಶದ ಸಂವಿಧಾನದ ರಕ್ಷಣೆಗಿರುವ ಯೋಧರೋ ಅಥವಾ ಖಾಕಿ ವೇಷದಲ್ಲಿ ಹೊಂಚಿಕೊಂಡು ಓಡಾಡುತ್ತಿರುವ ರೌಡಿಗಳೋ ಎಂದು ಜನರು ಅನುಮಾನಪಡುವಂತಾಗಿದೆ. ಕೋಮುಗಲಭೆಗಳಲ್ಲಿ ಪೊಲೀಸರು ನೇರ ಪಾತ್ರವನ್ನು ವಹಿಸತೊಡಗಿದ್ದಾರೆ. ಇತ್ತೀಚೆಗಷ್ಟೇ, ಅಮೆರಿಕದಲ್ಲಿ ಪೊಲೀಸನೊಬ್ಬ ಕಪ್ಪು ವರ್ಣೀಯನೊಬ್ಬನ ಕುತ್ತಿಗೆ ಮೇಲೆ ಕಾಲಿಟ್ಟು ಕೊಂದು ಹಾಕಿದ ಘಟನೆ ವಿಶ್ವದಾದ್ಯಂತ ಚರ್ಚೆಗೊಳಗಾಯಿತು. ಭಾರತವೂ ಸೇರಿದಂತೆ ಪ್ರಜಾಸತ್ತೆಯ ಮೇಲೆ, ಮನುಷ್ಯತ್ವದ ಮೇಲೆ ನಂಬಿಕೆಯಿಟ್ಟ ಎಲ್ಲ ದೇಶಗಳೂ ಈ ಕೃತ್ಯವನ್ನು ಖಂಡಿಸಿದ್ದವು. ಈ ದೌರ್ಜನ್ಯಕ್ಕೆ ಸ್ವತಃ ಅಮೆರಿಕ ಪೊಲೀಸರೇ ನಾಚಿಕೊಂಡು, ಪಶ್ಚಾತ್ತಾಪಪೂರ್ವಕವಾಗಿ ತಲೆ ಬಾಗಿ ನಿಂತು ಕ್ಷಮೆ ಯಾಚಿಸಿದರು. ವಿದೇಶಗಳಲ್ಲಿ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಾಗ ನಮ್ಮ ಮನುಷ್ಯತ್ವ ಜಾಗೃತಗೊಳ್ಳುತ್ತದೆ. ಅದೇ ಜನಾಂಗೀಯ ಹಲ್ಲೆ, ದೌರ್ಜನ್ಯಗಳನ್ನು ನಮ್ಮದೇ ಪ್ರಭುತ್ವ, ನಮ್ಮದೇ ದೇಶದ ಜನರ ಮೇಲೆ ಎಸಗಿದಾಗ ಮೌನವಾಗಿ ಬಿಡುತ್ತೇವೆ. ಹಾಗೆಂದು ದೌರ್ಜನ್ಯಗಳಿಗೆ ಇಲ್ಲಿ ಖಂಡನೆಗಳೇ ಇಲ್ಲ ಎಂದಿಲ್ಲ. ಒಂದು ಆನೆ ಪಟಾಕಿ ತಿಂದು ಸತ್ತಾಗ ಅದರ ವಿರುದ್ಧ ಕೇಂದ್ರ ಸಚಿವರಾದಿಯಾಗಿ ರಾಜಕೀಯ ನಾಯಕರು ತಮ್ಮ ಆಘಾತವನ್ನು ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ಇದರ ವಿರುದ್ಧ ಖಂಡನೆಗಳ ಮಹಾಪೂರವೇ ಹರಿಯುತ್ತವೆ. ಇಲ್ಲಿ ದನ, ನವಿಲು, ಹಾವು, ಆನೆಗಳು ಸತ್ತಾಗ ಒಂದು ನಿರ್ದಿಷ್ಟ ಸಮುದಾಯದೊಳಗೆ ಮಾನವೀಯತೆ ತಕ್ಷಣ ಜಾಗೃತವಾಗುತ್ತದೆ. ಕಣ್ಣೀರ ಕೋಡಿ ಹರಿಸುತ್ತದೆ. ಆದರೆ ಮನುಷ್ಯನ ಮೇಲೆ ದೌರ್ಜನ್ಯ ನಡೆದಾಗ ನಮ್ಮೊಳಗಿರುವ ಮಾನವೀಯತೆ ಗೊರಕೆ ಹೊಡೆಯುತ್ತಿರುತ್ತದೆ. ಯಾಕೆಂದರೆ, ಭಾರತ ಮನುಷ್ಯ ಮನುಷ್ಯನ ಮೇಲೆ ನಡೆಸುವ ದೌರ್ಜನ್ಯಗಳಿಗೆ ಶತಶತಮಾನಗಳಿಂದ ಮಾನ್ಯತೆಯನ್ನು ನೀಡುತ್ತಾ ಬಂದಿದೆ. ಜಾತಿ, ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಪೋಷಿಸುತ್ತಾ ಬಂದಿದೆ. ಆದುದರಿಂದಲೇ, ಪ್ರಾಣಿಗಳ ಮೇಲೆ ನಡೆವ ಹಿಂಸೆ ನಮ್ಮನ್ನು ತಟ್ಟಿದಷ್ಟು, ಮನುಷ್ಯರ ಮೇಲೆ ನಡೆಯುವ ಹಿಂಸೆ ತಟ್ಟುವುದಿಲ್ಲ. ಇಲ್ಲದೇ ಇದ್ದಿದ್ದರೆ, ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗ ಲಾಕಪ್‌ನಲ್ಲಿ ಅತ್ಯಂತ ಬರ್ಬರವಾಗಿ ಸತ್ತಾಗ ಇಡೀ ದೇಶ ಬೀದಿಗಿಳಿದು ಅದನ್ನು ಒಂದಾಗಿ ಖಂಡಿಸುತ್ತಿತ್ತು.

ಲಾಕ್‌ಡೌನ್ ಉಲ್ಲಂಘಿಸಿದ್ದಾರೆಂಬ ಆರೋಪದಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ಬಂಧಿತರಾದ ತಂದೆ ಹಾಗೂ ಮಗ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ ಘಟನೆ ಇದೀಗ ಚರ್ಚೆಯಲ್ಲಿದೆ. ಮಾಧ್ಯಮಗಳಿಗೆ ಇದು ಮುಖ್ಯ ವಿಷಯವಾಗದೇ ಇದ್ದರೂ, ಘಟನೆಯ ಭೀಕರತೆಯನ್ನು ಕಂಡು ಅನಿವಾರ್ಯವಾಗಿ ಕೆಲವು ಚಿಂತಕರು, ಸಾಮಾಜಿಕ ಹೋರಾಟಗಾರರು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಬಹುಶಃ ಇವರೆಲ್ಲ ಧೈರ್ಯ ತೋರಿ ಮಾತನಾಡದೇ ಇದ್ದರೆ, ಪೊಲೀಸರ ಈ ಕ್ರೌರ್ಯ ಬೆಳಕಿಗೆ ಬರುತ್ತಲೇ ಇರಲಿಲ್ಲ. ಜನಸಾಮಾನ್ಯರು ಮಾತ್ರವಲ್ಲ, ಪೊಲೀಸರು ಕೂಡ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಹೇಳುತ್ತದೆ ನಮ್ಮ ಸಂವಿಧಾನ. ಆದರೂ ಇದನ್ನು ಮೀರಿ ಪೊಲೀಸರು ಪದೇ ಪದೇ ನ್ಯಾಯಾಂಗದ ಸ್ಥಾನವನ್ನು ಕದ್ದುಮುಚ್ಚಿ ನಿರ್ವಹಿಸುತ್ತಾ ಬರುತ್ತಿದ್ದಾರೆ. ಆದರೆ, ತೂತುಕುಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮೆರೆದಿರುವುದು ಬರ್ಬರ ಕ್ರೌರ್ಯ. ಇಲ್ಲಿ ನಡೆದಿರುವುದು ಕೇವಲ ಕೊಲೆಗಳಷ್ಟೇ ಅಲ್ಲ, ಈ ಕೃತ್ಯ ಎಸಗಿದ ಪೊಲೀಸರಲ್ಲಿ ಸೈಕೋಪಾತ್ ಲಕ್ಷಣಗಳನ್ನು ಗುರುತಿಸಬಹುದು. ಅಮಾಯಕರಿಬ್ಬರ ಕೊಲೆಗಳನ್ನು ಈ ಪೊಲೀಸರು ಎರಡು ದಿನಗಳ ಕಾಲ ಅತ್ಯಂತ ವಿಕೃತವಾಗಿ ರಂಜಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಪೊಲೀಸರ ಲಾಠಿ ಏಟಿಗೆ ಸಂತ್ರಸ್ತರ ಚರ್ಮ ಸುಲಿದು ಬಂದಿತ್ತು. ಗುದದ್ವಾರಗಳಿಗೆ ಲಾಠಿಗಳನ್ನು ತುರುಕಿಸಿರುವುದು ವೈದ್ಯರ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಸಂತ್ರಸ್ತರ ಸ್ಥಿತಿ ನೋಡಿ ಸ್ವತಃ ವೈದ್ಯರೇ ಬೆಚ್ಚಿ ಬಿದಿದ್ದರಂತೆ. ಚಿತ್ರಹಿಂಸೆಯ ಸಂದರ್ಭದಲ್ಲಿ ಪೊಲೀಸ್ ಠಾಣೆಯಾಚೆಗೂ ಸಂತ್ರಸ್ತರ ಆರ್ತನಾದ ಕೇಳಿರುವುದು ಸ್ಥಳೀಯರಿಂದ ಬಹಿರಂಗವಾಗಿದೆ. ಮನೆಯಿಂದ ತಂದ ಎರಡೆರಡು ಬಟ್ಟೆಗಳೂ ರಕ್ತದಿಂದ ಸಂಪೂರ್ಣ ನೆಂದಿದ್ದವಂತೆ. ಕೊನೆಗೂ ರಕ್ತಸ್ರಾವ ನಿಲ್ಲದೆ ಇಬ್ಬರೂ ಮೃತಪಟ್ಟರು.

 ಇಷ್ಟಕ್ಕೂ ಇವರ ಮೇಲೆ ಇದ್ದ ಆರೋಪಗಳಾದರೂ ಏನು? ತಮ್ಮ ಅಂಗಡಿಯನ್ನು ನಿಗದಿತ ಅವಧಿ ಮೀರಿ ಅವರು ತೆರೆದಿಟ್ಟಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೂ ಅವರಿಗೂ ಮಾತಿನ ಚಕಮಕಿಯಾಗಿ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಹೆಚ್ಚೆಂದರೆ, ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕಾಗಿ ಅವರ ಮೇಲೆ ಪ್ರಕರಣವನ್ನು ದಾಖಲಿಸುವ ಅವಕಾಶ ಪೊಲೀಸರಿಗೆ ಇದೆ. ಅಗತ್ಯವಿದ್ದರೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಗಳನ್ನು ಅವರ ಮೇಲೆ ಪೊಲೀಸರು ಹೊರಿಸಬಹುದು. ಅವರ ಮೇಲೆ ದ್ವೇಷವಿದ್ದರೆ ಹಲ್ಲೆ, ಹತ್ಯೆ ಯತ್ನ ಆರೋಪಗಳನ್ನೂ ಪೊಲೀಸರು ದಾಖಲಿಸಬಹುದಾಗಿತ್ತು. ಕೆಲವೊಮ್ಮೆ ಅಪರಾಧಿಗಳ ಬಾಯಿ ಬಿಡಿಸುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಲಯದ ಕಣ್ಣು ತಪ್ಪಿಸಿ ಚಿತ್ರಹಿಂಸೆಯನ್ನು ನೀಡುವುದಿದೆ. ಆದರೆ ಇಲ್ಲಿ, ಆರೋಪಿಗಳಿಗೆ ಚಿತ್ರಹಿಂಸೆ ನೀಡುವ ಅಂತಹ ಅನಿವಾರ್ಯ ಕೂಡ ಪೊಲೀಸರಿಗಿರಲಿಲ್ಲ. ಅವರಿಗಿದ್ದದ್ದು ಈ ತಂದೆ-ಮಗನ ಮೇಲಿರುವ ದ್ವೇಷ ಮಾತ್ರ. ಅದರ ಜೊತೆಗೆ ಖಾಕಿ ಧಿರಿಸನ್ನು ಧರಿಸಿ ಕೊಲೆಗಳನ್ನು ಎಸಗಿದರೂ ಅದನ್ನು ದಕ್ಕಿಸಿಕೊಳ್ಳಬಹುದು ಎನ್ನುವ ಅವರ ಮನಸ್ಥಿತಿ. ಜೊತೆಗೆ, ಪೊಲೀಸರೆಂದು ಕರೆದುಕೊಂಡ ಇವರೊಳಗೇ ಅವಿತುಕೂತಿದ್ದ ಕ್ರಿಮಿನಲ್ ಮನಸ್ಥಿತಿ. ತೂತುಕುಡಿಯಲ್ಲಿ ಈ ಹಿಂದೆ ಹೋರಾಟಗಾರರ ವಿರುದ್ಧ ಬರ್ಬರ ದೌರ್ಜನ್ಯ ಎಸಗಿದ ಹೆಗ್ಗಳಿಕೆಯನ್ನೂ ಈ ಪೊಲೀಸರು ಹೊಂದಿದ್ದಾರೆ. ಪೊಲೀಸರ ಕೈಗೆ ಕಾನೂನನ್ನು ಅಡವಿಟ್ಟರೆ ಅದರ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಈ ಇಬ್ಬರು ಅಮಾಯಕರ ಬರ್ಬರ ಕೊಲೆಯೇ ಉದಾಹರಣೆ.

ಕೊರೋನ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಪ್ಯೂ ಹೇರಲಾಗುತ್ತಿದೆ. ಸಾಧಾರಣವಾಗಿ ಕಾನೂನು ವ್ಯವಸ್ಥೆ ಹದಗೆಟ್ಟಾಗ ಮಾತ್ರ ಕರ್ಫ್ಯೂವನ್ನು ಹೇರಲಾಗುತ್ತದೆ. ಕೋಮುಗಲಭೆ, ದಂಗೆ ಇತ್ಯಾದಿಗಳು ನಡೆದು, ಪರಿಸ್ಥಿತಿ ಕೈ ಮೀರಿದಾಗ ಅನಿವಾರ್ಯವಾಗಿ ಸರಕಾರ ಕರ್ಫ್ಯೂ ವಿಧಿಸುತ್ತದೆ. ಆದರೆ ಕೊರೋನಾಕ್ಕೆ ಸಂಬಂಧಿಸಿ ಹೇರಲ್ಪಟ್ಟ ಕರ್ಫ್ಯೂ ಭಿನ್ನವಾದುದು. ಈ ಕರ್ಫ್ಯೂ ಹಿಂದೆ ಮಾನವೀಯ ಉದ್ದೇಶವಿದೆ. ಕರ್ಫ್ಯೂ ಉಲ್ಲಂಘಿಸಿದಾಕ್ಷಣ ಲಾಠಿ ಬೀಸುವುದಕ್ಕೆ, ಗುಂಡೆಸೆಯುವುದಕ್ಕೆ ಇಲ್ಲಿ ಯಾವ ಅಪರಾಧ ಪ್ರಕರಣಗಳು ನಡೆದಿಲ್ಲ. ಜನರನ್ನು ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಗೊಳಿಸುವುದು ಕರ್ಫ್ಯೂ ಉದ್ದೇಶ. ಆದರೆ, ಪೊಲೀಸ್ ಇಲಾಖೆ ಕರ್ಫ್ಯೂವನ್ನು ತಮಗೆ ಲಾಠಿ ಬೀಸಲು, ಜನಸಾಮಾನ್ಯರ ಮೇಲೆ ದೌರ್ಜನ್ಯ ಎಸಗಲು ಸಿಕ್ಕಿದ ಅವಕಾಶ ಎಂದು ತಿಳಿದುಕೊಂಡಂತಿದೆ. ತೂತುಕುಡಿ ಎಂದಲ್ಲ, ದೇಶದ ಹಲವೆಡೆ ಕರ್ಫ್ಯೂವನ್ನು ಮುಂದಿಟ್ಟುಕೊಂಡು ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಆದರೆ ತಮಿಳುನಾಡಿನಲ್ಲಿ ಅದು ತನ್ನ ಭೀಕರ ರೂಪವನ್ನು ಪ್ರದರ್ಶಿಸಿದೆ. ಬಹುಶಃ ಕೊರೋನಕ್ಕೆ ಇಂದಲ್ಲ ನಾಳೆ ಚಿಕಿತ್ಸೆ ದೊರಕಬಹುದು. ಆದರೆ ಪೊಲೀಸ್ ಇಲಾಖೆಯೊಳಗೆ ಹರಡಿರುವ ಈ ವೈರಸ್‌ಗೆ ಔಷಧಿಯನ್ನು ನೀಡುವವರು ಯಾರು? ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಘಟನೆ ನಡೆದ ಐದು ದಿನಗಳ ಬಳಿಕ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಅಮಾನತುಗೊಳಿಸುವುದರಿಂದಲೋ, ವಜಾಗೊಳಿಸುವುದರಿಂದಲೋ ತಪ್ಪಿತಸ್ಥರಿಗೆ ಶಿಕ್ಷೆಯಾದಂತಾಗುವುದಿಲ್ಲ. ಇದು ಪೊಲೀಸ್ ವೇಷದಲ್ಲಿರುವ ಮಾನಸಿಕ ಅಸ್ವಸ್ಥರು ನಡೆಸಿದ ಉದ್ದೇಶಪೂರ್ವಕ ವಿಕೃತ ಕೊಲೆ. ಆದುದರಿಂದ ತಪ್ಪಿತಸ್ಥರಿಗೆ ಮರಣದಂಡನೆಯಾಗಬೇಕು. ಈ ಮೂಲಕ ಅಮಾಯಕರ ರಕ್ತದಲ್ಲಿ ನೆಂದ ಖಾಕಿ ಧಿರಿಸನ್ನು ಶುಚಿಗೊಳಿಸುವ ಪ್ರಯತ್ನ ನಡೆಯಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)