varthabharthi


ಬೆಂಗಳೂರು

ಬೆಂಗಳೂರು: ಮತ್ತೊಮ್ಮೆ ಲಾಕ್‍ಡೌನ್‍ಗೆ ಉದ್ಯಮಿಗಳಿಂದ ವಿರೋಧ

ವಾರ್ತಾ ಭಾರತಿ : 2 Jul, 2020

ಬೆಂಗಳೂರು, ಜು.2: ಕೊರೋನ ಸೋಂಕು ನಿವಾರಣೆಗಾಗಿ ಸರಕಾರ ಘೋಷಿಸಿದ್ದ ಲಾಕ್‍ಡೌನ್‍ ಅನ್ನು ಅನ್‍ಲಾಕ್ ತೀರ್ಮಾನ ಹೊರಬಿದ್ದ ಬಳಿಕ ನಾನಾ ಉದ್ಯಮಗಳು ಚೇತರಿಕೆಯ ಹಾದಿ ಹಿಡಿದಿವೆ. ಮನೆಯಲ್ಲಿಯೇ ಬಂಧಿಯಾಗಿದ್ದ ಲಕ್ಷಾಂತರ ಕಾರ್ಮಿಕರು ಮರಳಿ ಉದ್ಯೋಗ ಕೈಗೊಂಡಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಸಹಿತ ಸ್ವಯಂ ಉದ್ಯೋಗಿಗಳು ನಿಧಾನವಾಗಿ ಆದಾಯ ಕಂಡುಕೊಳ್ಳುತ್ತಿದ್ದಾರೆ. ಸರಕಾರಿ ಕಚೇರಿಗಳು ಕೂಡ ಪೂರ್ಣವಾಗಿ ಸಾರ್ವಜನಿಕರಿಗೆ ತೆರೆದಿವೆ. ಈ ಹಂತದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದು ತರವಲ್ಲ ಎಂಬುದು ಎಲ್ಲ ಉದ್ಯಮಿಗಳ ಅಭಿಮತವಾಗಿದೆ.

ಬೆಂಗಳೂರು ಉತ್ಪಾದನಾ ಹಬ್ ಆಗಿರುವ ಜತೆಗೆ ಸರಕಾರಕ್ಕೆ ಆದಾಯದ ಮೂಲವೂ ಆಗಿದೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ.65ರಷ್ಟು ಬೆಂಗಳೂರಿನಿಂದಲೇ ಬೊಕ್ಕಸ ಸೇರುತ್ತಿದೆ. ಲಾಕ್‍ಡೌನ್‍ನಿಂದ ಆದಾಯದ ಪ್ರಮಾಣ ಕುಸಿದಿದೆ. ಇದು ಸರಕಾರದ ಗಮನಕ್ಕೂ ಬಂದಿದೆ.

ರಿಯಲ್‍ ಎಸ್ಟೇಟ್, ಆಸ್ತಿ ನೋಂದಣಿ ಮೂಲಕ ಒಂದಿಷ್ಟು ಚೇತರಿಕೆ ಕಂಡಿದೆ. ಉದ್ಯೋಗ ಸ್ಥಳದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿಯೇ ಕೆಲಸ ಕೈಗೊಳ್ಳಲಾಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಸಾರ್ವಜನಿಕ ಸ್ಥಳ ಹಾಗೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು, ನೈರ್ಮಲ್ಯಕ್ಕೆ ಕಾಳಜಿ ವಹಿಸದಿರುವುದು ರೋಗ ಉಲ್ಭಣಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕೇ ಹೊರತು ಜನರ ಆರ್ಥಿಕಾಭಿವೃದ್ಧಿಗೆ ಬೆನ್ನೆಲುಬಾಗಿರುವ ಉದ್ಯಮದ ಮೇಲೆ ಪ್ರಹಾರ ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಠಿಣ ನಿಯಮದಿಂದ ಉದ್ಯೋಗ ನಷ್ಟ: ಕೋವಿಡ್-19 ಸೋಂಕು ತಡೆಯಲು ಕೈಗೊಂಡಿರುವ ಲಾಕ್‍ಡೌನ್ ಅವಧಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಇನ್ನಷ್ಟು ಲಾಕ್‍ಡೌನ್ ಬೇಡವೇ ಬೇಡ. ಕಠಿಣ ನಿಯಮಗಳಿಂದಾಗಿ ಈಗಾಗಲೇ ಕೆಲ ಉದ್ಯಮಗಳು ಪುನರಾರಂಭವಾಗಿದ್ದರೂ, ಹಿಂದಿನಷ್ಟು ಲಾಭ ಗಳಿಸಲಾಗುತ್ತಿಲ್ಲ ಎಂಬುದೇ ಬಹುತೇಕ ಉದ್ಯಮಿಗಳ ಅಳಲಾಗಿದೆ.

ಈಗಿನ ಸ್ಥಿತಿಯಲ್ಲಿ ಲಾಕ್‍ಡೌನ್ ಅನಗತ್ಯ. ಬಹುತೇಕ ಉದ್ಯಮಿಗಳು ನಷ್ಟಕ್ಕೆ ಒಳಗಾಗಿದ್ದಾರೆ. ಘಟಕಗಳ ಬಾಡಿಗೆ, ಇಎಂಐ ಪಾವತಿ, ಬ್ಯಾಂಕ್ ಸಾಲದಿಂದ ಕಂಗೆಟ್ಟಿದ್ದೇವೆ. ಉದ್ಯಮ ಸೊರಗಿರುವ ಸಮಯದಲ್ಲಿ ಉತ್ಪಾದನಾ ಚಟುವಟಿಕೆಗೆ ಸರಕಾರ ಬೆಂಬಲ ನೀಡುವುದು ಸೂಕ್ತ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಹೇಳಿದ್ದಾರೆ.

ರಾತ್ರಿ ಕಫ್ರ್ಯೂಗೆ ಬೆಂಬಲ: ಸೋಂಕು ತಡೆ ಹಿನ್ನೆಲೆಯಲ್ಲಿ ಸರಕಾರ ಮತ್ತೆ ಜಾರಿಗೊಳಿಸಿರುವ ರಾತ್ರಿಕಫ್ರ್ಯೂಗೆ ಉದ್ಯಮರಂಗ ಬೆಂಬಲ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳ ಕಾಯಿದೆ ಅಡಿ ಬರುವ ಚಟುವಟಿಕೆ ಹೊರತುಪಡಿಸಿ ಇನ್ನುಳಿದವುಗಳನ್ನು ನಿರ್ಬಂಧಿಸುವುದು ಸರಿ. ಇದು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುತ್ತದೆ. ಸೋಂಕು ಹರಡದಿರಲು ಈ ನಿಯಮವೇ ಉತ್ತಮ ನಡೆ ಎಂದು ಕೈಗಾರಿಕೆಗಳ ಸಂಘಟನೆ ಪ್ರತಿಪಾದಿಸಿವೆ.

ಸೋಂಕು ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಸರಕಾರ ಏಕಾಏಕಿ ನಿರ್ಧಾರಗಳನ್ನು ಕೈಗೊಳ್ಳಬಾರದು. ಬೇಕಿದ್ದರೆ ರಾತ್ರಿಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿ. ವಾರಾಂತ್ಯ ಕೈಗಾರಿಕೆಗಳಿಗೆ ರಜೆಘೋಷಣೆ ಮಾಡಲಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಮಂಜಸ ಕ್ರಮ ಕೈಗೊಳ್ಳಲಿ ಎಂದು ಕಾಸಿಯಾ ಮಾಜಿ ಅಧ್ಯಕ್ಷ ಆರ್.ರಾಜು ಅಭಿಪ್ರಾಯಪಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)