ನಿಮ್ಮ ಅಂಕಣ
ಲಾಕ್ಡೌನ್ ನಂತರದ ರೈತರ ಬಿತ್ತನೆ ಬಿಕ್ಕಟ್ಟು

ಈಗ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏಳು ಲಕ್ಷವನ್ನೂ ಮೀರಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿ ಜಗತ್ತಿನಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಕರ್ನಾಟಕದಲ್ಲಿ 25 ಸಾವಿರ ಸೋಂಕಿತರನ್ನು ದಾಟಿದೆ. ಮತ್ತೊಂದು ಲಾಕ್ಡೌನ್ ಭಯದಲ್ಲಿ ಜನರು ಆತಂಕಿತರಾಗಿದ್ದಾರೆ. ಬಿತ್ತನೆ ಕಾಲದ ಈ ಹೊತ್ತಲ್ಲಿ ರೈತರು ಹೊಸ ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.
ಕೊರೋನ ಕಾರಣಕ್ಕೆ ಜಾರಿಗೆ ತಂದ ಮೊದಲ ಲಾಕ್ಡೌನ್ ಗ್ರಾಮೀಣ ಪ್ರದೇಶದಲ್ಲಿ ದಿಢೀರ್ ಪರಿಣಾಮ ಬೀರಲಿಲ್ಲ. ಲಾಕ್ಡೌನ್ನಲ್ಲಿಯೂ ಕೃಷಿ ಚಟುವಟಿಕೆಗಳು ನಡೆದಿದ್ದವು. ನೀರಾವರಿ ಜಮೀನುಗಳನ್ನು ಹೊರತುಪಡಿಸಿದರೆ, ಬಹುಪಾಲು ಮಳೆಯಾಶ್ರಿತ ರೈತರು ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದರು. ಸಣ್ಣಪುಟ್ಟ ಬೋರ್ವೆಲ್ ನೀರಾವರಿಯಿಂದ ತರಕಾರಿ ಬೆಳೆದವರು ತಮ್ಮೂರಲ್ಲೇ ಮಾರಿದರು. ತೋಟದ ಫಲಗಳನ್ನು ಟೆಂಪೋಗಳಲ್ಲಿ ಮನೆಮನೆಗೆ ಕೊಂಡೊಯ್ದರು. ಆದರೂ ಹೆಚ್ಚುವರಿ ಹಣ್ಣು ತರಕಾರಿ ಕೊಳೆತ ನಷ್ಟಕ್ಕೆ ಬೆಲೆತೆತ್ತು ಕೆಲವು ರೈತರು ಆತ್ಮಹತ್ಯೆಗೂ ಶರಣಾದರು. ಹೀಗಿರುವಾಗ ಲಾಕ್ಡೌನ್ ನಂತರದಲ್ಲಿ ರೈತರ ಕಷ್ಟಗಳು ಮತ್ತಷ್ಟು ಬಿಗಡಾಯಿಸಲಿವೆ.
ಮುಖ್ಯವಾಗಿ ಬಿತ್ತನೆ ಪೂರ್ವದ ವಲಸೆ ಬಹುಪಾಲು ಬಿತ್ತನೆಗೆ ದುಡ್ಡು ಜೋಡಿಸುವ ದರ್ದಿನಿಂದ ಕೂಡಿರುತ್ತದೆ. ಅಂದರೆ ಸಾಲ ಮಾಡಿ ಬಿತ್ತುವುದಕ್ಕಿಂತ ನಗದು ಹಣ ಖರ್ಚು ಮಾಡಿ ಬಿತ್ತನೆ ಮಾಡುವುದು ರೈತರಿಗೆ ಲಾಭದಾಯಕ. ಹೀಗೆ ಮಾಡಿದರೆ ದಲ್ಲಾಳಿ ಅಂಗಡಿಯವರ ಮರ್ಜಿ ತಪ್ಪುತ್ತದೆ, ಅವರ ಬಡ್ಡಿ, ಚಕ್ರಬಡ್ಡಿಯ ಅಪಾಯದಿಂದ ಮುಕ್ತಿ ದೊರೆಯುತ್ತದೆ. ಬೆಳೆದ ಬೆಳೆಯನ್ನು ಒಳ್ಳೆಯ ಬೆಲೆಗೆ ಮಾರಲು ಕಾಯ್ದಿರಿಸುವ ಸ್ವಾತಂತ್ರ್ಯ ಲಭಿಸುತ್ತದೆ. ಈ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಕಾರಣಕ್ಕೆ ಉತ್ತರ ಕರ್ನಾಟಕದ-ಹೈದರಾಬಾದ್ ಕರ್ನಾಟಕವನ್ನೂ ಒಳಗೊಂಡಂತೆ ನಾಡಿನ ಬಹುಸಂಖ್ಯಾತ ರೈತರು ಬಿತ್ತನೆ ಪೂರ್ವ ವಲಸೆಯನ್ನು ಕೈಗೊಳ್ಳುತ್ತಾರೆ. ಬಿತ್ತನೆಗಾಗಿ ಮಾಡುವ ವಲಸೆ ಈ ಬಾರಿ ಪೂರ್ಣ ಆರಂಭವಾಗಿರಲಿಲ್ಲ, ವಲಸೆ ಹೋದವರು ಲಾಕ್ಡೌನ್ನಿಂದ ಬರಿಗೈಲಿ ಮನೆಗೆ ಮರಳಿದರು. ಈ ವಿದ್ಯಮಾನ ರೈತರ ಬಿತ್ತನೆ ಮೇಲೆ ಪರಿಣಾಮ ಬೀರಲಿದೆ. ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಬಹುಸಂಖ್ಯಾತ ರೈತರು ಈ ಬಗೆಯ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.
ಲಾಕ್ಡೌನ್ ಪರಿಣಾಮದಿಂದಾಗಿ ಇದೀಗ ಸಣ್ಣಪುಟ್ಟ ರೈತರಿಗೆ ಬ್ಯಾಂಕುಗಳು, ದಲ್ಲಾಳಿ ಅಂಗಡಿಯವರು ಸಾಲ ಕೊಡುವುದಿಲ್ಲ. ಹೀಗಾಗಿ ಹಳ್ಳಿಗಳನ್ನು ಮುತ್ತಿಗೆ ಹಾಕಿದ ಹತ್ತಾರು ಫೈನಾನ್ಸ್ಗಳು/ಸ್ವಸಹಾಯ ಗುಂಪುಗಳು ಸಾಲ ಕೊಡಲು ಮುಂದೆ ಬರುತ್ತವೆ. ಹೀಗೆ ರೈತರು ಸಾಲ ಪಡೆಯದಿದ್ದರೆ ಹೊಲವನ್ನು ಬೀಳು ಬಿಡಬೇಕು. ಭಾವನಾತ್ಮಕವಾಗಿ ಹೊಲ ಬಿತ್ತಿದರೆ ರೈತರಿಗೆ ಒಂದು ಬಗೆಯ ಸಮಾಧಾನ. ಹಾಗಾಗಿ ಬಹುಪಾಲು ರೈತರು ಹೊಲದಿಂದ ಎಷ್ಟೇ ನಷ್ಟವಾದರೂ ಬೀಳು ಬಿಡಲಾರರು. ಇದರಲ್ಲಿ ಸರೀಕರ ಎದುರು ತಲೆಯೆತ್ತಿ ನಿಲ್ಲುವ ಸ್ವಾಭಿಮಾನವೂ ಬೆರೆತಿದೆ. ಹೀಗಿರುವಾಗ ಊರಿನ ಸಿರಿವಂತರು/ ಫೈನಾನ್ಸ್/ ಸ್ವಸಹಾಯ ಗುಂಪು ಯಾವ ಮೂಲದಿಂದಾದರೂ ಸಾಲ ಪಡೆದು ಬಿತ್ತನೆ ಮಾಡುವ ಸಾಧ್ಯತೆ ಇದೆ. ಇಂದು ರೈತರಿಗೆ ದೊಡ್ಡಮಟ್ಟದಲ್ಲಿ ಸಾಲ ಕೊಡಲು ಸಜ್ಜಾದ ಫೈನಾನ್ಸ್ಗಳು/ಸ್ವಸಹಾಯ ಗುಂಪುಗಳು ಸಾಲವನ್ನೇನೊ ಕೊಡುತ್ತವೆ. ಬಡ್ಡಿಯ ದರವೂ ಕಡಿಮೆ. ಸಾಲದ ಮರುಪಾವತಿಯನ್ನು ಕಂತುಗಳಲ್ಲಿ ಪ್ರತಿ ವಾರ ಪಾವತಿಸುವ ಷರತ್ತಿಗೆ ಒಳಗಾಗಬೇಕು. ಈ ಫೈನಾನ್ಸ್ ಮತ್ತು ಸ್ವಸಹಾಯ ಗುಂಪುಗಳನ್ನು ಹತ್ತರಿಂದ ಇಪ್ಪತ್ತರಷ್ಟು ಸದಸ್ಯರ ಸಣ್ಣ ಸಣ್ಣ ಗುಂಪುಗಳಾಗಿ ರಚಿಸಲಾಗಿರುತ್ತದೆ.
ಒಬ್ಬರಿಗೆ ಕೊಟ್ಟ ಸಾಲಕ್ಕೆ ಆ ಗುಂಪಿನ ಎಲ್ಲಾ ಸದಸ್ಯರು ಹೊಣೆಗಾರರು. ಯಾರಾದರೂ ಒಂದೆರಡು ವಾರ ಕಂತು ಕಟ್ಟಲು ಸಾಧ್ಯವಾಗದಿದ್ದರೆ, ಗುಂಪಿನ ಅಷ್ಟೂ ಸದಸ್ಯರು ಸಾಲಗಾರನ ಮನೆ ಮುಂದೆ ಕೂರುತ್ತಾರೆ. ಅಕಸ್ಮಾತ್ ಸಾಲಗಾರ ಊರು ಬಿಟ್ಟು ಹೋದರೆ, ಗುಂಪಿನ ಸದಸ್ಯರೇ ಸಾಲದ ಕಂತನ್ನು ಕಟ್ಟಬೇಕಾಗುತ್ತದೆ. ಹೀಗೆ ಫೈನಾನ್ಸ್/ಸ್ವಸಹಾಯ ಗುಂಪುಗಳ ಸಾಲ ಪಡೆದು ವಾರದ ಕಂತು ಕಟ್ಟಲು ರೈತರು ಕೃಷಿಯೇತರ ಕೂಲಿಯನ್ನು ಮಾಡಬೇಕು. ಇಲ್ಲವೇ ಅನಿವಾರ್ಯ ಸಮೀಪದ ನಗರಗಳಲ್ಲಿ ಕೂಲಿ ಅರಸಬೇಕು. ಫೈನಾನ್ಸ್ ಪರಿಣಾಮ ಇನ್ನೂ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿಲ್ಲ. ಇದೀಗ ದಿನದಿಂದ ದಿನಕ್ಕೆ ಕೊರೋನ ಮತ್ತಷ್ಟು ಹರಡುತ್ತಿದೆ. ಹೀಗಿರುವಾಗ ಕೂಲಿ ಮಾಡಿ ವಾರದ ಕಂತುಗಳನ್ನು ಕಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ಹೀಗೆ ಕಂತು ಕಟ್ಟಲಾರದೆ ಫೈನಾನ್ಸ್/ಸ್ವಸಹಾಯ ಗುಂಪುಗಳ ಒತ್ತಡಗಳು ಹೆಚ್ಚಾದರೆ, ಖಂಡಿತ ಇದು ರೈತರನ್ನು ಆತ್ಮಹತ್ಯೆಯೆಡೆಗೆ ದೂಡುವ ಸಂಭವವಿದೆ.
ವಾಸ್ತವ ಹೀಗಿರುವಾಗ ಚಿಕ್ಕ ಹಿಡುವಳಿಗಳ ರೈತರ ಬಿತ್ತನೆಗಾಗಿ ‘ಬಡ್ಡಿ ರಹಿತ ಬಿತ್ತನೆ ಸಾಲ’ವನ್ನು ಗ್ರಾಮ ಪಂಚಾಯತ್, ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಕಾರ ನೀಡಬೇಕಾಗಿದೆ. ಹೀಗೆ ಮಾಡುವ ಮೂಲಕ ಮುಂದೆ ಸಂಭವಿಸಬಹುದಾದ ಆಹಾರದ ಬಿಕ್ಕಟ್ಟನ್ನೂ, ರೈತರ ಆತ್ಮಹತ್ಯೆಗಳನ್ನು ತಪ್ಪಿಸಬಹುದಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ