varthabharthi


ಕರ್ನಾಟಕ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ14ರಿಂದ ಲಾಕ್​ಡೌನ್: ರಾಜ್ಯ ಸರಕಾರ ಆದೇಶ

ವಾರ್ತಾ ಭಾರತಿ : 11 Jul, 2020

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ರಾಜ್ಯದಲ್ಲಿ ದಿನೇ ದಿನೇ ಭಾರಿ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಜು.14ರ ಮಂಗಳವಾರ ರಾತ್ರಿ 8 ಗಂಟೆಯಿಂದ 7 ದಿನಗಳ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಸಲಾಗುವುದು. ಲಾಕ್‍ಡೌನ್ ಸಂದರ್ಭದಲ್ಲಿ ಜನರು ಯಾವುದೆ ಆತಂಕಕ್ಕೆ ಒಳಗಾಗದೆ ಸಹಕರಿಸಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸುರಕ್ಷಿತ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರಕಾರ ಹೊರಡಿಸುವ ಲಾಕ್‍ಡೌನ್ ಸಂಬಂಧಿತ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ. ಸಾರ್ವಜನಿಕರು ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೆ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದು ಅವರು ಕೋರಿದ್ದಾರೆ.

ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರಳು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಎಲ್ಲ ಅಧಿಕಾರಿಗಳು, ಸ್ವಯಂ ಸೇವಕರು ಮನೆ ಮನೆಗೂ ಕೋವಿಡ್-19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ನಾನು ಇನ್ನೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಲ್ಲೂ ಲಾಕ್‍ಡೌನ್?: ಸದ್ಯಕ್ಕೆ ಹೋಂ ಕ್ವಾರಂಟೈನ್‍ನಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಬಳಿ ಈಗಾಗಲೆ ರಾಜ್ಯದಲ್ಲಿನ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಲಾಕ್‍ಡೌನ್ ಹೇರಿಕೆ ಮಾಡುವುದರಿಂದ, ಆರ್ಥಿಕ ಪರಿಸ್ಥಿತಿ ಹಾಗೂ ಜನ ಜೀವನದ ಮೇಲೆ ಆಗುವಂತಹ ಪರಿಣಾಮದ ಕುರಿತು ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಎಂಟು ವಲಯಗಳನ್ನು ರಚಿಸಿ, ವಲಯವಾರು ಒಬ್ಬೊಬ್ಬ ಸಚಿವರಿಗೆ ಆಯಾ ವಲಯಕ್ಕೆ ಸಂಬಂಧಿಸಿದ ಶಾಸಕರು, ಬಿಬಿಎಂಪಿ ಸದಸ್ಯರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳ ಸಭೆ ನಡೆಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.

ಅದರಂತೆ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ ಸೇರಿದಂತೆ ಇನ್ನಿತರರು ತಮ್ಮ ವಲಯಗಳ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗೆ ತಲುಪಿಸಿದ್ದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ರಾಜ್ಯದಲ್ಲಿ ಲಾಕ್‍ಡೌನ್ ಹೇರುವ ಕುರಿತು ಅನೌಪಚಾರಿಕ ಚರ್ಚೆ ನಡೆಸಲಾಗಿತ್ತು. ಈ ವೇಳೆ ಇಡೀ ರಾಜ್ಯಕ್ಕೆ ಲಾಕ್ ಡೌನ್ ಹೇರುವ ಬದಲು ಅಂತರ್ ಜಿಲ್ಲಾ ಸಾರ್ವಜನಿಕ ಪ್ರಯಾಣವನ್ನು ನಿರ್ಬಂಧಿಸಿ, ಬೆಂಗಳೂರು ನಗರ ಸೇರಿದಂತೆ ಹೆಚ್ಚಿನ ಸೋಂಕು ಇರುವಂತಹ ಇನ್ನಿತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಹೇರಿಕೆ ಮಾಡುವುದು ಉತ್ತಮ ಎಂದು ಕೆಲವು ಸಚಿವರು ಸಲಹೆ ನೀಡಿದ್ದರು.

ಸಚಿವರು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಂಡಿರುವ ಮುಖ್ಯಮಂತ್ರಿ, ಸೋಮವಾರ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಆಯಾ ಜಿಲ್ಲೆಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ.

ಈಗಾಗಲೆ, ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ರವಾನಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿರುವ ಇರುವಂತಹ ಕೋವಿಡ್ ಪ್ರಕರಣಗಳು, ಸೋಂಕು ಹರಡಲು ಪ್ರಮುಖ ಕಾರಣಗಳು, ಕೋವಿಡ್ ಕೇರ್ ಸೆಂಟರ್‍ಗಳ ಕಾರ್ಯನಿರ್ವಹಣೆ, ಹೋಂ ಕ್ವಾರಂಟೈನ್ ಪಾಲನೆ, ಖಾಸಗಿ ಆಸ್ಪತ್ರೆಗಳ ಸ್ಪಂದನೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಬೇಕೆ ಅಥವಾ ಸೋಂಕು ನಿಯಂತ್ರಣಕ್ಕಾಗಿ ಯಾವ ರೀತಿಯ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಕುರಿತು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)