varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 13 Jul, 2020
ಪಿ.ಎ.ರೈ

‘ಆತ್ಮ ನಿರ್ಭರ ಭಾರತ’ವೆಂದರೆ ಜಗತ್ತಿಗೆ ನಾವು ಬಾಗಿಲುಗಳನ್ನು ಮುಚ್ಚಿದ್ದೇವೆ ಎಂದರ್ಥವಲ್ಲ. ಇಲ್ಲಿ ಹೂಡಿಕೆ ಮಾಡಲು ಎಲ್ಲ ಜಾಗತಿಕ ಕಂಪೆನಿಗಳನ್ನು ಸ್ವಾಗತಿಸುತ್ತೇವೆ
- ನರೇಂದ್ರ ಮೋದಿ, ಪ್ರಧಾನ ಮಂತ್ರಿ

ನಮ್ಮ ಗದ್ದೆಯಲ್ಲಿ ಅವರು ಬಂದು ಶುಂಠಿ ಬೆಳೆಯುವುದೇ ಆತ್ಮನಿರ್ಭರ ಆಗಿರಬಹುದು.


ವಿಕಾಸ್ ದುಬೆ ಇದ್ದ ಪೊಲೀಸ್ ಕಾರು ಪಲ್ಟಿಯಾದ್ದರಿಂದ ಸರಕಾರ ಉಳಿಯಿತು
- ಅಖಿಲೇಶ್ ಯಾದವ್, ಉ.ಪ. ಮಾಜಿ ಮುಖ್ಯಮಂತ್ರಿ
 ಎಷ್ಟಿದ್ದರೂ ನೀವು ಸಾಕಿದ ಹೆಗ್ಗಣವಲ್ಲವೇ?


 ವಿಧಾನಸಭೆ ಚುನಾವಣೆಯಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡಿಂದ
-ರಮೇಶ್ ಜಾರಕಿಹೊಳಿ, ಸಚಿವ
 ಕುಕ್ಕರ್‌ನಲ್ಲಿ ಬೇಯಿಸಿದ್ದು ಮಾತ್ರ ಸಿದ್ದರಾಮಯ್ಯ ಕೊಟ್ಟ ಒಂದು ರೂ. ಅಕ್ಕಿ.


ಕೊರೋನ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಎಷ್ಟೇ ಶ್ರಮಪಟ್ಟರೂ ನಿಗ್ರಹಿಸಲು ಕಷ್ಟವಾಗುತ್ತಿದೆ

- ಜೆ.ಸಿ. ಮಾಧುಸ್ವಾಮಿ, ಸಚಿವ
 ರಾಜಕಾರಣಿಗಳೆಲ್ಲ ಸ್ವಲ್ಪ ದಿನ ಕ್ವಾರಂಟೈನ್‌ನಲ್ಲಿ ಇದ್ದರೆ ಸರಿಯಾದೀತು.


ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಸಿದ್ದರಾಮಯ್ಯ ದಾಖಲೆ ಪರಿಶೀಲಿಸುವುದಾದಲ್ಲಿ ವ್ಯವಸ್ಥೆ ಮಾಡುತ್ತೇನೆ

- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಮೊದಲು ಇದನ್ನು ನಿಮ್ಮ ಪಕ್ಷದೊಳಗಿರುವ ಭಿನ್ನರಿಗೆ ವ್ಯವಸ್ಥೆ ಮಾಡಿ.


ಸೋಂಕಿನ ವಿರುದ್ಧ ಹೋರಾಟವೇ ಹೊರತು ಸೋಂಕಿತರ ಮೇಲಲ್ಲ
-ಡಾ. ಕೆ. ಸುಧಾಕರ್, ಸಚಿವ
ಬಿಲ್ ಪಾವತಿಸುವ ಹೋರಾಟ ಮಾತ್ರ ಸೋಂಕಿತರಿಗೇ ಸಂಬಂಧಿಸಿದ್ದು.


ಸರಕಾರದ ಲೋಪ ಎತ್ತಿಕೊಂಡು ಆರೋಪ ಮಾಡುವ ಕಾಲ ಇದಲ್ಲ. ಜನರ ಜೀವ ಉಳಿಸುವತ್ತ ಗಮನಹರಿಸಬೇಕು

-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಲೋಪ ಸರಿಯಾಗದೆ ಜನರ ಜೀವ ಉಳಿಯುವುದು ಹೇಗೆ?


 ಅಮೆರಿಕ ಭಾರತವನ್ನು ಪ್ರೀತಿಸುತ್ತದೆ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ಚೀನಾವನ್ನು ದ್ವೇಷಿಸುವವರೆಗೆ ಮಾತ್ರವಂತೆ.


ಕೊರೋನ ಚಿಕಿತ್ಸೆಗೆ ಹೆಚ್ಚು ವ್ಯವಸ್ಥೆ ಕಲ್ಪಿಸಬೇಕಾಗುತ್ತದೆಂಬ ಕಾರಣಕ್ಕಾಗಿ ಹೆಚ್ಚಿನ ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣವಾಗುತ್ತಿರುವ ಸರಕಾರವನ್ನು ‘ಕೊಲೆಗಡುಕ ಸರಕಾರ’ಎಂದು ಕರೆದರೆ ತಪ್ಪಾಗುತ್ತದೆಯೇ?

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಖಾಸಗಿ ಆಸ್ಪತ್ರೆಗಳು ಪರೀಕ್ಷೆ ನಡೆಸಿ ಜನರ ಸಾವಿಗೆ ಕಾರಣವಾಗುತ್ತಿರುವುದರ ಬಗ್ಗೆಯೂ ಮಾತನಾಡಿ.


ಸಿಬಿಎಸ್‌ಇಯ ಕೆಲವು ಪಠ್ಯ ಕಿತ್ತು ಹಾಕಿರುವುದರಲ್ಲಿ ಯಾವುದೇ ರಾಜಕೀಯವಿಲ್ಲ
- ರಮೇಶ್ ಪೋಖ್ರಿಯಾಲ್, ಕೇಂದ್ರ ಸಚಿವ

 ಸಂವಿಧಾನವನ್ನು ಕಿತ್ತು ಹಾಕುವ ಮೊದಲು ಇದೆಲ್ಲ ಅಗತ್ಯ ಎನ್ನುವುದು ಸರಕಾರಕ್ಕೆ ಗೊತ್ತಿರಬೇಕು.


ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ, ಜನರು ತಮ್ಮ ಊರುಗಳಿಗೆ ಹೋಗುವುದು ಬೇಡ
-ಬಸವರಾಜ ಬೊಮ್ಮಾಯಿ, ಸಚಿವ
 ರಾಜಕಾರಣಿಗಳ ಬಾಯಿಗಳು ಮೊದಲು ಲಾಕ್‌ಡೌನ್ ಆಗಲಿ


ಗುತ್ತಿಗೆ ವೈದ್ಯರ ಸೇವೆ ಖಾಯಂಗೊಳಿಸುವ ಕುರಿತು ನೀಡಿರುವ ಭರವಸೆಯಲ್ಲಿ ರಾಗಿ ಕಾಳಿನಷ್ಟೂ ಬದಲಾವಣೆಯಾಗಲ್ಲ
-ಬಿ. ಶ್ರೀರಾಮುಲು, ಸಚಿವ
 ರಾಗಿ ಕಾಳು ಮೊಳಕೆ ಒಡೆಯುವುದು ಯಾವಾಗ?


 ದೇಶದ ಇತಿಹಾಸದಲ್ಲಿ ಎಂದೂ ಕೂಡ ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಎಂಟು ತಿಂಗಳ ಕಾಲ ಉಚಿತ ಪಡಿತರ ನೀಡಿರಲಿಲ್ಲ
-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
 ದೇಶದ ಇತಿಹಾಸದಲ್ಲಿ ಎಂದೂ ಕಾರ್ಮಿಕರು ಎಂಟು ತಿಂಗಳು ಕೆಲಸವಿಲ್ಲದೆ ನರಳಿರಲಿಲ್ಲ.


ವೈದ್ಯರು ಕೊರೋನಕ್ಕೆ ಭಯ ಪಡುವ ಅಗತ್ಯವಿಲ್ಲ. ನನ್ನ ಕುಟುಂಬದಲ್ಲೇ ಮೂವರಿಗೆ ಸೋಂಕು ತಗಲಿದ್ದರೂ ನಾನು ಹೆದರಲಿಲ್ಲ. ವೈದ್ಯರಿಗೆ ನಾನೇ ಅಂಬಾಸಿಡರ್

- ಡಾ. ಕೆ. ಸುಧಾಕರ್, ಸಚಿವ
 ಜನರೀಗ ವೈದ್ಯಕೀಯ ಸಚಿವರಿಗೆ ಹೆದರುವಂತಾಗಿದೆ.


ಡಿ.ಕೆ. ಶಿವಕುಮಾರ್ ಮುಳುಗುವ ಹಡಗನ್ನು ಏರಿದ್ದಾರೆ

-ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
 ನೀವು ಬಿಜೆಪಿಯ ಹಡಗನ್ನು ಮುಳುಗಿಸಲು ಏರಿದ ಹಾಗಿದೆ.


ವೈದ್ಯರ ಮೇಲೆ ಹೆಚ್ಚಿನ ಒತ್ತಡ ಹೇರಲ್ಲ

- ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
 ಅಂದರೆ ಜನಸಾಮಾನ್ಯರ ಮೇಲೆಯೇ ಒತ್ತಡ ಹೇರುವ ಹುನ್ನಾರವೇ?


 ಮೊಸರಲ್ಲಿ ಕಲ್ಲು ಹುಡುಕುವಂತಹ ಸಾಕಷ್ಟು ಜನ, ಪಕ್ಷಗಳನ್ನು ನಾನು ಬಹಳಷ್ಟು ಕಂಡಿದ್ದೇನೆ
 ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
 ಇದೀಗ ಮೊಸರಲ್ಲಿ ಕೊರೋನ ಹುಡುಕುವ ಕಾಲ.


ಭಾರತ ಮತ್ತು ಚೀನಾ ಎರಡೂ ಪ್ರಬಲ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ಒಟ್ಟಿಗೆ ಬದುಕಬೇಕು

-ದಲಾಯಿಲಾಮ, ಬೌದ್ಧ ಧರ್ಮಗುರು
ನಿಮ್ಮನ್ನು ಚೀನಾಕ್ಕೆ ಒಪ್ಪಿಸಿದರೆ ಮಾತ್ರ ಅದು ಸಾಧ್ಯ ಎನ್ನುವುದು ಚೀನಾದ ನಿಲುವು.


ಪಶು-ಪಕ್ಷಿಗಳ ಸಂರಕ್ಷಣೆಗೆ ಇದೇ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ

- ಪ್ರಭು ಚವ್ಹಾಣ್, ಕೇಂದ್ರ ಸಚಿವ
 ಕಲ್ಯಾಣ ಮಂಟಪಗಳನ್ನು ಕಟ್ಟಿದರೆ ಉಚಿತ ತಾಳಿಭಾಗ್ಯ ಘೋಷಣೆಯನ್ನೂ ಮಾಡಬಹುದಲ್ಲವೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು