ಅಂತಾರಾಷ್ಟ್ರೀಯ
ನೇಪಾಳ ಪ್ರಧಾನಿ ಕೆ.ಪಿ.ಒಲಿ
‘ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ, ಶ್ರೀರಾಮ ನೇಪಾಳಿ ಹೊರತು ಭಾರತೀಯನಲ್ಲ’

ಹೊಸದಿಲ್ಲಿ: ಶ್ರೀ ರಾಮ ಜನಿಸಿದ ಅಯೋಧ್ಯೆ ಇರುವುದು ಕಠ್ಮಂಡು ಸಮೀಪದ ಗ್ರಾಮದಲ್ಲಿ ಎಂದು ನೇಪಾಳ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಒಲಿ ಹೇಳಿದ್ದಾರೆ.
ಶ್ರೀ ರಾಮ ಭಾರತೀಯನಲ್ಲ, ಬದಲಾಗಿ ನೇಪಾಳಿ ಎಂದವರು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತ ಸಾಂಸ್ಕೃತಿಕ ಆಕ್ರಮಣ ಮತ್ತು ದಬ್ಬಾಳಿಕೆ ನಡೆಸಿದೆ ಮತ್ತು ನೇಪಾಳ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
“ರಾಜಕುಮಾರ ರಾಮನಿಗೆ ನಾವು ಸೀತೆಯನ್ನು ನೀಡಿದೆವು ಎಂದು ನಾವು ಈಗಲೂ ನಂಬುತ್ತೇವೆ. ನಾವು ಅಯೋಧ್ಯೆಯಿಂದ ರಾಮನನ್ನೂ ನೀಡಿದ್ದೇವೆ. ಆದರೆ ಭಾರತದಿಂದ ಅಲ್ಲ. ಅಯೋಧ್ಯೆಯು ಬಿರ್ಗುಂಜ್ ನಲ್ಲಿರುವ ಸಣ್ಣ ಗ್ರಾಮದಲ್ಲಿದೆ (ಕಠ್ಮಂಡುವಿನಿಂದ 1350 ಕಿ.ಮೀ.)” ಎಂದವರು ಹೇಳಿದರು.
“ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ಹೊರತು ಭಾರತದಲ್ಲಿ ಅಲ್ಲ” ಎಂದು ಅವರು ಹೇಳಿದ್ದಾಗಿ ಎಎನ್ ಐ ವರದಿ ಮಾಡಿದೆ.
ಒಲಿ ಹೇಳಿಕೆಗೆ ಸಂತರ ಖಂಡನೆ
ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಶ್ರೀರಾಮನ ಬಗ್ಗೆ ನೀಡಿದ ಹೇಳಿಕೆಯನ್ನು ಅಯೋಧ್ಯೆಯ ಸಾಧು ಸಂತರು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಸಂತರ ಪ್ರಮುಖ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷದ್, ನೇಪಾಳದ ಪ್ರಧಾನಿ ಅವರ ಹೇಳಿಕೆ ದುರಾದೃಷ್ಟಕರ ಹಾಗೂ ದುರುದ್ದೇಶಪೂರಿತ ಎಂದಿದ್ದಾರೆ. ನಿಜವಾದ ಅಯೋಧ್ಯೆ ಉತ್ತರಪ್ರದೇಶದಲ್ಲಿ ಇದೆ ಹಾಗೂ ಶ್ರೀರಾಮ ಇಲ್ಲಿ ಜನಿಸಿದ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳು ಇವೆ. ಈ ವಿಷಯದ ಬಗ್ಗೆ ಯಾರೊಬ್ಬರೂ ಗೊಂದಲ ಸೃಷ್ಟಿಸುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ