varthabharthi


ಅನುಗಾಲ

ಆಧುನಿಕ ಕನ್ನಡ ಸಾಹಿತ್ಯ ಮತ್ತು ಕಾನೂನು/ನ್ಯಾಯ

ವಾರ್ತಾ ಭಾರತಿ : 16 Jul, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮನುಷ್ಯ ಹೇಗಿರಬೇಕು ಎಂಬುದನ್ನು ಕವಿ ಗೋಪಾಲಕೃಷ್ಣ ಅಡಿಗರ ಒಂದು ಸಾಲು ‘‘ತಕ್ಕಡಿಯ ಮುಳ್ಳಿನೇಕಾಗ್ರಕ್ಕೆ ಭಾರದಡೆ ಇರಬೇಕು ಈಚೆಗಥವಾ ಆಚೆಗೆ’’ ಎಂದು ಹೇಳುತ್ತದೆ. ಯಾವುದೂ ನಿಖರವಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ ಅದು ಸ್ವಲ್ಪವಿಚಲಿತವಾಗಿರಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ತಕ್ಕಡಿಯ ಮುಳ್ಳು ಸ್ವಲ್ಪಆಚೀಚೆಯಾದರೂ ಅದು ತೂಗಿಸಿಕೊಳ್ಳುವವನಿಗೆ ಅನ್ಯಾಯವೆಸಗುತ್ತದೆ ಮಾತ್ರವಲ್ಲ, ತೂಗುವ ಕೈಗೂ ಚುಚ್ಚುತ್ತದೆ.


ಭಾಗ-3

ಮಾಸ್ತಿಯವರ ‘ದುರದೃಷ್ಟದ ಹೆಣ್ಣು’ ಕತೆ ಗಂಡಲ್ಲದ ಗಂಡನ್ನು (ನಪುಂಸಕನನ್ನು) ಮದುವೆಯಾದ ನತದೃಷ್ಟ ಹೆಣ್ಣಿನದ್ದು. ತಾನು ಬೆಂಗಳೂರಿನಲ್ಲಿ ಉದ್ಯೋಗಮಾಡಲು ಹೋಗುವುದಾಗಿಯೂ ಮದುವೆಯಾಗಿಯೇ ಹೋದರೆ ಒಳಿತೆಂದು ಭಾವಿಸಿ ಕನ್ಯಾನ್ವೇಷಣೆಯಲ್ಲಿರು ವುದಾಗಿಯೂ ಹೇಳಿದ ಒಬ್ಬ ಯುವಕನಿಗೆ ಐವರು ಹೆಣ್ಣುಮಕ್ಕಳ ಬಡತಂದೆ ತನ್ನ ಹಿರಿಯ ಮಗಳನ್ನು ಮದುವೆಮಾಡಿಕೊಟ್ಟು ಆನಂತರ ಈ ಜೋಡಿ ಬೆಂಗಳೂರಿಗೆ ಹೋಗಿ ಮನೆಮಾಡುತ್ತಾರೆ. ಅಲ್ಲಿ ಆತ ಸಂಸಾರ ಮಾಡಲು ಅಶಕ್ತನಾಗಿ ಈ ಹೆಣ್ಣನ್ನು ಇತರರಿಗೊಪ್ಪಿಸಿ ಸಂಪಾದನೆ ಮಾಡಲುದ್ಯುಕ್ತನಾಗುತ್ತಾನೆ. ಆಗ ಆತನ ಪುರುಷತ್ವ (ಅಥವಾ ಅದರ ಅಭಾವ) ಬೆಳಕಿಗೆ ಬರುತ್ತದೆ! ಮೊದಮೊದಲು ಒಪ್ಪದಿದ್ದರೂ ಬಡತನ, ಗೌರವ ಇತ್ಯಾದಿ ಮೌಲ್ಯಗಳ ರಕ್ಷಣೆಗಳಿಗಾಗಿ ಆಕೆ ಒಪ್ಪಲೇಬೇಕಾಗುತ್ತದೆ. ತನ್ಮಧ್ಯೆ ಒಬ್ಬ ಸಜ್ಜನ ಯುವಕ ಆಕೆಯನ್ನು ಇಂತಹ ಒಂದು ಸಂದರ್ಭದಲ್ಲಿ ಸಂಧಿಸುತ್ತಾನೆ. ಆತನ ಬಳಿ ಈಕೆ ತನ್ನ ಕಷ್ಟವನ್ನು ಹೇಳಿಕೊಂಡು ತಾನು ಆತನೊಡನೆ ಬಂದು ಸಂಸಾರ ಹೂಡುವುದಕ್ಕೆ ಸಿದ್ಧಳಾಗುತ್ತಾಳೆ. ತನ್ನ ಗಂಡನೆನಿಸಿಕೊಂಡವನಿಗೆ ಹೇಳಿ ಆತನೇ ತನ್ನನ್ನು ಬಿಡುವಂತೆ ಮಾಡಬೇಕಾಗಿ ವಿನಂತಿಸುತ್ತಾಳೆ. ಆ ಯುವಕ ಈಕೆಯ ಗಂಡನನ್ನು ಮಾತನಾಡಿಸಿ ಮದುವೆಯಿಂದ ಬಿಡುಗಡೆಮಾಡಬೇಕಾಗಿ ಹೇಳುತ್ತಾನೆ. ಆತ ಒಪ್ಪದಿದ್ದಾಗ ‘‘ಗಂಡಲ್ಲದೋನು ಮಾಡಿಕೊಂಡ ಮದುವೆ ಮದುವೆ ಅಲ್ಲ.’’ ಎನ್ನುತ್ತಾನೆ. ಈ ಬಗ್ಗೆ ಚರ್ಚೆ ಜಗಳವಾಗಿ ಪರಿಣಮಿಸಿ ಆತ ತಳ್ಳಿ ಕತ್ತನ್ನು ಬಿಗಿಯಾಗಿ ಹಿಡಿದುಕೊಂಡಾಗ ಈಕೆಯ ಗಂಡ ಸತ್ತುಹೋಗುತ್ತಾನೆ. ಆನಂತರ ಶವವನ್ನು ಗುಟ್ಟಾಗಿ ಒಂದು ಜಟಕಾಗಾಡಿಯಲ್ಲಿ ಹೊತ್ತು ದೂರದಲ್ಲಿ ಎಸೆಯುತ್ತಾನೆ. ಈ ಹಿಂದೆ ಈಕೆಯಿಂದ ತಿರಸ್ಕೃತನಾದ ಒಬ್ಬ ಗಂಡಸು ಇದನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡುತ್ತಾನೆ. ಪ್ರಸಂಗ ಕ್ರಿಮಿನಲ್ ತಿರುವನ್ನು ಪಡೆಯುತ್ತದೆ.

ಕತೆಯ ಮುಂದಿನ ವಿವರಣೆಯ ಕೆಲ ಭಾಗಗಳು ಹೀಗಿವೆ:
 ‘ತನಿಖಾಧಿಕಾರಿಯು ಆರೋಪಿ ಯುವಕನ ಮತ್ತು ಈಕೆಯ ಹೇಳಿಕೆಗಳನ್ನು ಸೂಕ್ಷ್ಮವಾಗಿ ಬರೆದುಕೊಂಡು ‘‘ಕೊಲೆ ಮಾಡಿದ್ದು ತಪ್ಪು, ಆದರೆ ಇವನು ಮಾಡಿದ ಅನ್ಯಾಯ, ಇದನ್ನು ಮಾಡಿದನಲ್ಲ ಎಂಬ ಕೋಪದಿಂದ ಹೊಡೆದೆ. ಉದ್ದೇಶ ಇಲ್ಲದೆ ಕೊಲೆ ಆಯಿತು, ಎಂತ ಹೇಳಿದರೆ ಕೋರ್ಟ್ ಕಡಿಮೆ ಶಿಕ್ಷೆ ಕೊಡುತ್ತದೆ. ಈ ಮಾತನ್ನು ಮ್ಯಾಜಿಸ್ಟ್ರೇಟ್ ಎದುರಲ್ಲಿ ಹೀಗೆಯೇ ಹೇಳುತ್ತೀರಾ?’’ ಎಂದು ಇವರಿಬ್ಬರನ್ನೂ ಕೇಳಿದರು. ಇವರು ಹೇಳುತ್ತೇವೆ ಎಂದರು. ಎರಡೂ ಹೇಳಿಕೆ ಒಬ್ಬ ಮ್ಯಾಜಿಸ್ಟ್ರೇಟರ ಮುಂದೆ ರೆಕಾರ್ಡಾದವು.

ಕೋರ್ಟಿನಲ್ಲಿ ಸಾಕ್ಷಿಗಳ ವಿಚಾರಣೆ ಏನೂ ಕಷ್ಟವಾಗಲಿಲ್ಲ. ಮದುವೆಯಾದನೆಂಬ ಅಯೋಗ್ಯ ಆ ಮನುಷ್ಯ ಹುಡುಗಿಗೆ ಮಾಡಿದ ಅನ್ಯಾಯ ಮಾಡಬಾರದ ಅನ್ಯಾಯ, ಇಂಥ ಪಾಪಿಯನ್ನು ಕೊಂದದ್ದು ಒಂದು ಪಾಪ ಅಲ್ಲ ಎಂದು ಸಾಕ್ಷ್ಯವನ್ನು ಕೇಳಿದ ಎಲ್ಲರಿಗೂ ತೋರಿತು.
ಅಪರಾಧಿ ಪರ ಲಾಯರು ‘‘ಇದು ಕೊಲೆ ಆಗುವುದಿಲ್ಲ, ಉದ್ದೇಶವಿಲ್ಲದೆ ನಡೆದ ಸಾವು ಆಗುತ್ತದೆ. ಸಂದರ್ಭವನ್ನು ಗಮನಿಸಿದರೆ ತೀರ ಕಡಿಮೆ ಶಿಕ್ಷೆಯನ್ನು ಕೊಡಬೇಕು ಎಂದು ಕೋರ್ಟ್ ಸನ್ನಿಧಾನಕ್ಕೆ ತೋರಬೇಕು. ಇದನ್ನು ನಾನು ಹೇಳಬೇಕಾಗಿಲ್ಲ’’ ಎಂದು ವಿಜ್ಞಾಪನೆ ಮಾಡಿದರು.
ಅದು ಕೊಲೆಗೆ ಕೊಡುವ ಶಿಕ್ಷೆಯಲ್ಲ. ಒಂದು ವರ್ಷವೋ ಎರಡು ವರ್ಷವೋ ಸೆರೆಗೆ ಹೋಗಬೇಕಾಯಿತು.’

ಈ ಕತೆಯ ಸಾಹಿತ್ಯಕ ಮೌಲ್ಯಗಳನ್ನು ವಿಮರ್ಶಿಸಿದರೆ ಹೆಣ್ಣೊಬ್ಬಳ ಕುರಿತ ಅಮಾನವೀಯ ಶೋಷಣೆ, ಆಕೆ ಪಡೆಯುವ ನ್ಯಾಯ ಇವು ಮಿಳಿತವಾಗಿವೆಯೆಂಬದು ಗೊತ್ತಾಗುತ್ತದೆ. ಅದು ಇಲ್ಲಿ ಪ್ರಸ್ತುತವಲ್ಲ. ಆದರೆ ಕಾನೂನಿನ ಅಂಶಗಳನ್ನು ಗಮನಿಸಿದರೆ ಲೇಖಕರ ನಿಖರತೆ, ಖಚಿತತೆ ಅರಿವಾಗುತ್ತದೆ. ‘ಗಂಡಲ್ಲದೋನು ಮಾಡಿಕೊಂಡ ಮದುವೆ ಮದುವೆ ಅಲ್ಲ’ ಎಂಬ ವಾಕ್ಯವು ಹಿಂದೂ ವಿವಾಹ ಕಾಯ್ದೆ, 1955ರ ಕಲಂ 5 ಮತ್ತು 12ರನ್ವಯ ಕೆಲವು ಪ್ರಸಂಗಗಳ ಮದುವೆಯು ಮದುವೆಯೇ ಅಲ್ಲ ಎಂಬ ಕಾನೂನಿನ ನಿರೂಪಣೆಯಾಗಿದೆ. ಹಾಗೆಯೇ ಉದ್ದೇಶವಿಲ್ಲದೆ ನಡೆ(ಸಿ)ದ ಕೊಲೆ ಭಾರತೀಯ ದಂಡ ಸಂಹಿತೆಯ ಕಲಂ 302ರ ವಿನಾಯಿತಿ (exemption)ಗಳಲ್ಲಿದೆ.

ಅಲ್ಲಿಗೆ ಅಪರಾಧವು ಕಲಂ 300ರ ನಿರೂಪಣೆಗೆ ಒಳಗಾಗಿ ಹೆಚ್ಚೆಂದರೆ 304-ಬಿಯನ್ವಯ ಶಿಕ್ಷೆಗೊಳಗಾಗುವ ಅಪರಾಧವಾಗುತ್ತದೆ. ಅಲ್ಲದೆ ತನಿಖಾಧಿಕಾರಿಯ ಮುಂದೆ ನೀಡುವ ಹೇಳಿಕೆ, ಮ್ಯಾಜಿಸ್ಟ್ರೇಟರ ಮುಂದೆ ನೀಡುವ ಹೇಳಿಕೆ, ಇವು 1973ರ ದಂಡ ಪ್ರಕ್ರಿಯಾ ಸಂಹಿತೆಯ 161, 162 ಮತ್ತು 164ರ ವಿಧಿವಿಧಾನಗಳ ನವಿರಾದ ನಿರೂಪಣೆಯಾಗಿವೆ. ಈ ಕತೆಯು ಸುಮಾರು 1930ರ ದಶಕದಲ್ಲೇ ಬರೆದದ್ದೆಂಬುದನ್ನು ಗಮನಿಸಿದರೆ ಆಗಿನ ವಿವಾಹ ಮತ್ತು ಕ್ರಿಮಿನಲ್ ಕಾನೂನಿನ ಪರಿಚಯವಿಲ್ಲದೆ ಇಂತಹ ಸೂಕ್ಷ್ಮಗಳು ಅರ್ಥವಾಗವೆಂಬುದನ್ನು ಮತ್ತು ಇಂದಿನ ಬಹುಪಾಲು ಸಾಹಿತಿಗಳಿಗೆ ಇಂತಹ ಸೂಕ್ಷ್ಮ ನಿರೂಪಣೆಯ ಸೂಕ್ಷ್ಮತೆ ಇಲ್ಲದಿರುವುದನ್ನು ಗಮನಿಸಬೇಕು. ಮನುಷ್ಯ ಹೇಗಿರಬೇಕು ಎಂಬುದನ್ನು ಕವಿ ಗೋಪಾಲಕೃಷ್ಣ ಅಡಿಗರ ಒಂದು ಸಾಲು ‘‘ತಕ್ಕಡಿಯ ಮುಳ್ಳಿನೇಕಾಗ್ರಕ್ಕೆ ಭಾರದಡೆ ಇರಬೇಕು ಈಚೆಗಥವಾ ಆಚೆಗೆ’’ ಎಂದು ಹೇಳುತ್ತದೆ.

ಯಾವುದೂ ನಿಖರವಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ ಅದು ಸ್ವಲ್ಪವಿಚಲಿತವಾಗಿರಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ತಕ್ಕಡಿಯ ಮುಳ್ಳು ಸ್ವಲ್ಪಆಚೀಚೆಯಾದರೂ ಅದು ತೂಗಿಸಿಕೊಳ್ಳುವವನಿಗೆ ಅನ್ಯಾಯವೆಸಗುತ್ತದೆ ಮಾತ್ರವಲ್ಲ, ತೂಗುವ ಕೈಗೂ ಚುಚ್ಚುತ್ತದೆ. ‘‘ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯಪ್ಪುದೆ?’’ ಎಂದಿದ್ದಾನೆ ವಚನಕಾರ ಅಲ್ಲಮ. ವಕೀಲರು ಮಂಡಿಸಿದ ವಾದ ಹೊನ್ನಾದರೆ ಅದನ್ನು ತೀರ್ಮಾನಿಸುವ ನ್ಯಾಯಾಲಯವು ತ್ರಾಸೆಂದು ಹೇಳಿದರೂ ಸರಿಯೇ! ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಮತ್ತು ಭಾರತೀಯ ವಿದೇಶಾಂಗ ಸೇವೆಯಲ್ಲಿದ್ದು ವಿದೇಶಗಳಲ್ಲಿ ಭಾರತದ ರಾಯಭಾರಿಯ ವರೆಗಿನ ಉನ್ನತ ಪದವಿಗಳನ್ನು ಅಲಂಕರಿಸಿದ ಬಾಗಲೋಡಿ ದೇವರಾಯರೆಂಬ ಕತೆಗಾರರು ಅನೇಕ ಒಳ್ಳೆಯ ಕತೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದವರು. ಅವರ ‘ಹುಚ್ಚ ಮುನಸೀಫ’ ಎಂಬ ಕತೆಯಲ್ಲಿ ಒಬ್ಬ ಸಜ್ಜನ ಆದರೆ ಅನರ್ಥಕಾರಿ ನ್ಯಾಯಾಧೀಶರ ಕತೆಯಿದೆ. ನ್ಯಾಯಪರವಾಗಿ ಯೋಚಿಸಿದರೆ ಸಾಲದು; ಅದು ಕಾನೂನುಬದ್ಧವಾಗಿರಬೇಕು ಎಂಬುದನ್ನು ಯಾವ ಪಕ್ಷವನ್ನೂ ವಹಿಸದೆ ಲೇಖಕರು ಮನದಟ್ಟುಮಾಡಿಕೊಟ್ಟಿದ್ದಾರೆ. ಇಲ್ಲಿನ ಮುನಸೀಫ ಸುಂದರಪ್ಪ ಮೂಲತಃ ಗೋವಳರ ವಂಶದವರು. ದನಗಳೊಂದಿಗೇ ಬೆಳೆದವರು.

ಕಾರಣಾಂತರದಿಂದ ಉಚ್ಚಜಾತಿಯ ಮನೆಗೆ ಸಾಕುಮಗನಾಗಿ ಬಂದವರು. ಆದರೆ ಜನ್ಮದ, ರಕ್ತದ ಆಸಕ್ತಿಗಳು ಕಳೆದುಹೋಗಲೇ ಇಲ್ಲ. ಓದಿ, ಮುನಸೀಫರಾದರೂ, ಕಾನೂನನ್ನು ಬದಿಗಿರಿಸಿ ನ್ಯಾಯವನ್ನು ಪಾಲಿಸಲು ಒದ್ದಾಡುವವರು. ಆದರೆ ಅವು ಕಾನೂನಿನೊಂದಿಗೆ ತಾಳೆಬೀಳದೆ ಮೇಲ್ಮನವಿಯಲ್ಲಿ ರದ್ದಾಗುತ್ತಿದ್ದವು. ನ್ಯಾಯಾಲಯದ ಹೊರಗೆ ಅವರ ತೀರ್ಪುಗಳು ಮೆಚ್ಚುಗೆಗೆ ಅರ್ಹವಾದರೂ ನ್ಯಾಯಾಲಯದ ಒಳಗಲ್ಲ. ಗೋವುಗಳ ವಿಚಾರದಲ್ಲಂತೂ ಅವರು ಕಾನೂನನ್ನು ಗಾವುದ ದೂರ ಮೀರುತ್ತಿದ್ದರು. ಸೋದರರ ನಡುವೆ ಆಸ್ತಿ ವಿಭಾಗದ ದಾವೆ ನಡೆದು ಚರಸ್ವತ್ತುಗಳ ವಿಚಾರ ಬಂದಾಗ ಆಕಳುಗಳನ್ನು ಯಾರಿಗೆ ಹಂಚುವುದು ಎಂಬ ಜಿಜ್ಞಾಸೆ ಎದುರಾಗುತ್ತದೆ. ಈ ಮುನಸೀಫರು ಖುದ್ದು ಹಟ್ಟಿಗೆ ಹೋಗಿ ಅವುಗಳ ‘ಮೈಸವರಿ, ಮೋರೆಗೆ ಮೋರೆ ತಾಕಿಸಿ’ ಮರಳಿ ಬಂದು ಅವುಗಳ ಹಿತಕ್ಕೆಂದು ದಾವೆಯಲ್ಲಿ ಪಕ್ಷಕಾರಳಲ್ಲದ ಆ ಸೋದರರ ಸೋದರಿಯೊಬ್ಬಳಿಗೆ ನೀಡುತ್ತಾರೆ. ಅದು ಮೇಲ್ಮನವಿಯಲ್ಲಿ ಸಹಜವಾಗಿಯೇ ರದ್ದಾಗುತ್ತದೆ.

ಹಾಗೆಯೇ ಯಾವುದೋ ಹಟ್ಟಿಯಲ್ಲಿ ನಡೆದ ಇನ್ನೊಂದು ಕೊಲೆ ಪ್ರಕರಣವು ಬೇರೊಬ್ಬ ನ್ಯಾಯಾಧೀಶರ ಮುಂದಿದ್ದು ಅದರಲ್ಲಿ ಸಾಕ್ಷಿಗಳನ್ನು ಒಲಿಸಿಕೊಂಡು, ‘ಅಲಿಬಿ’ (Alibi) ಯನ್ನು ಪ್ರತಿಪಾದಿಸಿ ಇನ್ನೇನು ಬಿಡುಗಡೆಯಾಗಬೇಕೆೆನ್ನುವಷ್ಟರಲ್ಲಿ ಅ ಪ್ರಕರಣವು ಈ ನ್ಯಾಯಾಧೀಶರ ಮುಂದೆ ಬರುತ್ತದೆ. ಇವರು ಮತ್ತೆ ಹಟ್ಟಿಯಲ್ಲಿ ಕೊಲೆಯಾದ್ದನ್ನು ಆಧರಿಸಿ ಆ ಹಟ್ಟಿಯ ಹಸುಗಳನ್ನು ತರಿಸಿ ಅವುಗಳೊಂದಿಗೆ ಮಾಂತ್ರಿಕ ಸಂಭಾಷಣೆ ನಡೆಸಿ ಕೊಲೆಯಾದದ್ದು ಸಾಬೀತಾಗಿದೆಯೆಂದು ತೀರ್ಪು ನೀಡುತ್ತಾರೆ. ಇದೂ ಮೇಲ್ಮನವಿಯಲ್ಲಿ ರದ್ದಾಗುತ್ತದೆ, ಅಲ್ಲದೆ ಇವರ ವಿರುದ್ಧ ಛೀಮಾರಿಯಾಗುತ್ತದೆ. ಆನಂತರ ಅವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಕೊನೆಯ ಕಾಲಕ್ಕೆ ಅವರಿಗೆ ಅವರ ಪತ್ನಿಯಿಂದಲೇ ಬೆಳ್ಳಿ ಎಂಬ ಕೆಲಸದಾಕೆಯ ಕುರಿತು ಸಂಬಂಧದ ಮಿಥ್ಯಾರೋಪ ಎದುರಾಗಿ ನೊಂದು ತನ್ನ ಪತ್ನಿ ತಯಾರಿಸಿದ ವೀಲುನಾಮೆ (Will)ಗೆ ತನ್ನ ಆದಿಮ ಹೆಸರಾದ ಬಸವ ಎಂದು ಸಹಿ ಹಾಕಿ ಮರಣ ಹೊಂದುತ್ತಾರೆ. ಅದನ್ನು ನೋಡಿ ವಕೀಲರು ಸಪ್ಪೆಮೋರೆ ಹಾಕಿ ಇದರ ಅರ್ಥವೇನಮ್ಮ? ಈ ಉಯಿಲಿಗೆ ಏನೂ ಬೆಲೆಯಿಲ್ಲವಲ್ಲಾ.. ಎಂದು ಹೇಳುತ್ತಾರೆ.

ಈ ಕತೆಯಲ್ಲಿ ಕಾನೂನಿನ ನಿರ್ದಿಷ್ಟ ಅರ್ಥವಿಸುವಿಕೆ, ನ್ಯಾಯವು ಅಪ್ರಸ್ತುತವಾಗುವುದು, ವೀಲುನಾಮೆಗೆ ಹಾಕುವ ಸಹಿಯ ಪ್ರಾಮುಖ್ಯತೆ ಮುಂತಾದವು ನಿರ್ಲಿಪ್ತವಾಗಿ ನಿರೂಪಣೆಯಾಗಿವೆ.
ದಕ್ಷಿಣ ಕನ್ನಡದ ಕೈಂತಜೆ ಗೋವಿಂದ ಭಟ್ಟ ಎಂಬ ವಕೀಲರು 1950ರ ದಶಕದಲ್ಲಿ ಬರೆದ ‘ಚಿರಪರಿಚಿತರು’ ಎಂಬ ಲಲಿತ ಪ್ರಬಂಧ ಸಂಕಲನದಲ್ಲಿ ‘ಕಪ್ಪಣಾಚಾರ್ಯರು’ ಎಂಬ ಪ್ರಬಂಧದಲ್ಲಿ ಆಗಿನ ಭೂಸುಧಾರಣೆಯ ಚಳವಳಿಯ ಕುರಿತ ರಾಜಕೀಯದ ಟೀಕೆಯಿದೆ:
‘‘ಉಳುವವನಿಗೆ ಜಮೀನೆಂದು ಬೊಬ್ಬಿಡುತ್ತ ಉಳುವವನಿಂದ ಚಿಕ್ಕಾಸು ಬಾಕಿಯಾದರೆ ಒಕ್ಕಲೆಬ್ಬಿಸಲು ವ್ಯಾಜ್ಯ ಹೂಡುವ ಬಡವರ ಬಂಧುಗಳಂತೆ ಅವರಲ್ಲ’’ (ಚಿರಪರಿಚಿತರು: ಮೊದಲ ಮುದ್ರಣ 1955 ಪುಟ 35).
ಮುಂದೆ 1961ರಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆ ಜಾರಿಯಾದದ್ದು ಮತ್ತು 1974ರ ತಿದ್ದುಪಡಿಯೊಂದಿಗೆ ಅದು ಕ್ರಾಂತಿಕಾರಕ ಕಾನೂನಾದದ್ದು ಈಗ ಇತಿಹಾಸ.

(ಮುಂದುವರಿಯುವುದು) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)