varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 27 Jul, 2020
ಪಿ.ಎ.ರೈ

ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ.
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹೊಸ ಪುಸ್ತಕ ಕೊಂಡು ಹೊಸ ಅಧ್ಯಾಯ ಪ್ರಾರಂಭಿಸುವ ಯೋಚನೆ ಇದೆಯೆ?


ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ -ಸುರೇಶ್‌ಕುಮಾರ್, ಸಚಿವ
ಆನ್‌ಲೈನ್‌ನಲ್ಲಿ ಗೋಶಾಲೆ ತೆರೆಯುವ ಉದ್ದೇಶವಿದೆಯಂತೆ. 


ಬೇರೆ ಪಕ್ಷದಿಂದ ಬಿಜೆಪಿಗೆ ಹೋಗಿರುವ ಯಾರೂ ಏಳಿಗೆ ಸಾಧಿಸಿಲ್ಲ - ದಿಗ್ವಿಜಯಸಿಂಗ್, ಕಾಂಗ್ರೆಸ್ ಮುಖಂಡ
ಕಾಂಗ್ರೆಸ್‌ನಲ್ಲಿ ಸಂಪೂರ್ಣ ಏಳಿಗೆಯಾದ ಬಳಿಕ ಅವರು ಬಿಜೆಪಿ ಸೇರುವುದು.


ಗುಡಿಸಲು ಮುಕ್ತ ಕರ್ನಾಟಕ ಮಾಡಲು ಕೆಲಸ ಮಾಡುತ್ತಿದ್ದೇನೆ - ವಿ.ಸೋಮಣ್ಣ, ಸಚಿವ

 ಬುಲ್ಡೋಜರ್ ಬಳಕೆ ಮಾಡುವ ಮೂಲಕವೆ?


ಚೀನಾ ಆಕ್ರಮಣ ಮುಚ್ಚಿಹಾಕಲು ಬಿಜೆಪಿ ಮಾಧ್ಯಮಗಳನ್ನು ಬೆದರಿಸುತ್ತಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಮಾಧ್ಯಮಗಳ ಮೇಲಿನ ಆಕ್ರಮಣ, ಚೀನಾ ಆಕ್ರಮಣಕ್ಕಿಂತ ಭೀಕರವಾದುದು.


ಐಪಿಎಲ್ 13ನೇ ಆವೃತ್ತಿ ನಡೆಯುವ ವಿಶ್ವಾಸ ನಾವು ಕಳೆದು ಕೊಂಡಿಲ್ಲ. - ಸೌರವ್‌ ಗಂಗುಲಿ, ಬಿಸಿಸಿಐ ಅಧ್ಯಕ್ಷ

ಮೊದಲು ಬಿಪಿಎಲ್‌ನ ಜನರಿಗೆ ರೇಷನ್ ಕುರಿತಂತೆ ವಿಶ್ವಾಸ ಹುಟ್ಟಿಸುವುದು ಎಂದು?


ಕಾಂಗ್ರೆಸ್‌ನವರು ಜೆಡಿಎಸ್‌ನವರನ್ನು ನೋಡಿ ಕಲಿಯಬೇಕು -ಆರ್.ಅಶೋಕ್, ಸಚಿವ
ಬಿಜೆಪಿಯ ಜೊತೆಗೆ ಪಾಲು ಹಂಚುವ ಕೊಳ್ಳುವ ಕುರಿತಂತೆ ಇರಬೇಕು.


ನನ್ನ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಯಾಗಿದ್ದ ಸಚಿನ್ ಪೈಲಟ್ ಒಬ್ಬ ನಾಲಾಯಕ್ ಹಾಗೂ ಸೋಮಾರಿ. - ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

ಆದರೆ ಅವರ ಇತ್ತೀಚಿನ ಬಿರುಸಿನ ಚಟುವಟಿಕೆ ನೋಡುವಾಗ ಸೋಮಾರಿಯಂತೆ ಕಾಣುವುದಿಲ್ಲ.


ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕು ಪೀಡಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. -ಕೋಟ ಶ್ರೀನಿವಾಸ ಪೂಜಾರಿ, ಸಚಿವ

ಗರ್ಭಿಣಿಯರಿಗೆ ಪ್ರವೇಶವನ್ನೇ ನಿರಾಕರಿಸಿದರೆ ಆಯಿತು ಎಂದರಂತೆ ವೈದ್ಯರು.


ಅಧಿಕಾರಕ್ಕೆ ಬರುವುದಕ್ಕಾಗಿ ನರೇಂದ್ರ ಮೋದಿ ತಾನು ಶಕ್ತಿವಂತ ಎಂಬ ನಕಲಿ ವರ್ಚಸ್ಸು ಸೃಷ್ಟಿಸಿಕೊಂಡಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನಕಲಿಯಾದರೇನು ವರ್ಚಸ್ಸು ವರ್ಚಸ್ಸೇ ತಾನೆ.


ಕೋವಿಡ್-19 ನಡುವೆಯೂ ಬಂಡವಾಳ ಹೂಡಲು ಭಾರತ ಪ್ರಶಸ್ತ ದೇಶವಾಗಿದೆ -ನರೇಂದ್ರ ಮೋದಿ, ಪ್ರಧಾನಿ

ಕೋವಿಡ್ ಮೇಲೆ ಬಂಡವಾಳ ಹೂಡುತ್ತಿರಬೇಕು.


ಕೊರೋನ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ- ಶ್ರೀರಾಮುಲು, ಸಚಿವ

 ಸಾಬೀತಾಗಬೇಕಾದರೆ ತನಿಖೆ ನಡೆಯಬೇಡವೆ? 


ರಾಜ್ಯದಲ್ಲಿ ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ -ಬಿ.ಸಿ.ಪಾಟೀಲ್, ಸಚಿವ

 ಭೂಸುಧಾರಣೆ ಕಾಯ್ದೆ ತಿದ್ದುಪಡಿಯ ಬಳಿಕ ಭೂಮಿಯದ್ದೇ ಕೊರತೆಯಂತೆ.


ಗುಜರಾತ್ ವ್ಯಕ್ತಿಗಳಿಗೆ ಪ.ಬಂಗಾಳವನ್ನು ಆಳಲು ಬಿಡುವುದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ
 ಪ.ಬಂಗಾಳ ಭಾರತದೊಳಗೆ ಬರುವುದಿಲ್ಲವೆ? 


ಕಾಂಗ್ರೆಸ್ ತನ್ನ ನಾಯಕರನ್ನು ಒಬ್ಬೋಬ್ಬರನ್ನಾಗಿ ಕಳೆದುಕೊಳ್ಳುತ್ತಿದೆ -ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
 ಒಳ್ಳೆಯ ವಿಷಯ. ಹೊಸಬರಿಗೆ ಇನ್ನಾದರೂ ಅವಕಾಶ ದೊರಕಲಿ.


ನಾನು ಭಾರತ ಮತ್ತು ಚೀನಾದ ಜನರನ್ನು ಪ್ರೀತಿಸುತ್ತೇನೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ನಿಮ್ಮ ಪ್ರೀತಿಯ ಕಾರಣದಿಂದಲೇ, ಭಾರತ ಕೊರೋನದಿಂದ ನರಳುತ್ತಿರುವುದು.


ಜನಸೇವೆಗೆ ಮತ್ತೊಂದು ಅವಕಾಶ ಸಿಕ್ಕಿರುವುದು (ವಿ.ಪ.ಸದಸ್ಯ) ಸಂತೋಷ ಉಂಟುಮಾಡಿದೆ -ಎಚ್.ವಿಶ್ವನಾಥ್, ವಿ.ಪ.ನೂತನ ಸದಸ್ಯ

ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ಸಿಕ್ಕಂತಾಯಿತು.


ಉತ್ತರ ಪ್ರದೇಶ ಸರಕಾರವು ಜನರಿಗೆ ‘ರಾಮರಾಜ್ಯ’ದ ಭರವಸೆ ನೀಡಿ ‘ಗೂಂಡಾರಾಜ್ಯ’ ನೀಡಿದೆ -ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಗೂಂಡಾಗಳಿಂದಲೇ ರಾಮರಾಜ್ಯ ನಿರ್ಮಾಣ ಮಾಡುವ ಉದ್ದೇಶವಿರಬೇಕು.


ತ್ರಿವಳಿ ತಲಾಖ್ ನಿಷೇಧಿಸಿ ಕೇಂದ್ರ ಸರಕಾರ ಕಾನೂನು ಜಾರಿ ಮಾಡಿದ ನಂತರ ಪ್ರಕರಣಗಳಲ್ಲಿ ಶೇ.82 ಇಳಿಕೆ ಕಂಡುಬಂದಿದೆ. -ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ತಲಾಖ್ ನೀಡದೆಯೇ ಮಹಿಳೆಯರನ್ನು ತ್ಯಜಿಸುತ್ತಿರಬೇಕು.


ಎಲ್ಲರ ಜೀವನದಲ್ಲೂ ಗುರು ಅಗತ್ಯ. -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

ಚಂಡಾಲ ಶಿಷ್ಯರಿಗೆ ಚೋರ ಗುರು.


ಕಾಂಗ್ರೆಸ್ ನಾಯಕರು ಅವರ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು, ನಮ್ಮ ತಟ್ಟೆಯಲ್ಲಿ ನೊಣ ಹುಡುಕಲು ಬಂದಿದ್ದಾರೆ. -ಡಾ.ಕೆ.ಸುಧಾಕರ್, ಸಚಿವ
 ಅದು ನೊಣ ಅಲ್ಲ, ಕೊರೋನ ಸಂತ್ರಸ್ತರ ಹೆಣ.


ಡೊನಾಲ್ಡ್ ಟ್ರಂಪ್ ಅಮೆರಿಕ ಕಂಡ ವರ್ಣಭೇದ ನಿಲುವಿನ ಪ್ರಥಮ ಅಧ್ಯಕ್ಷ - ಜೋ ಬಿಡೆನ್, ಅಮೆರಿಕ ಅಧ್ಯಕ್ಷ ಚುನಾವಣೆಯ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ

 ಅದುವೇ ಅವರ ಹೆಗ್ಗಳಿಕೆಯಂತೆ. 


ಉತ್ತರ ಪ್ರದೇಶದಲ್ಲಿ ಕೊರೋನ ವೈರಸ್‌ಗಿಂತ ಅಪರಾಧದ ವೈರಾಣು ಹೆಚ್ಚು ಸಕ್ರಿಯವಾಗಿದೆ -ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ

 ವೈರಾಣುಗಳೆಲ್ಲ ಸೇರಿ, ಶಿಲಾನ್ಯಾಸಕ್ಕೆ ಸಿದ್ಧರಾಗುತ್ತಿದ್ದಾರೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು