varthabharthi


ಪ್ರಚಲಿತ

ರಾಜಕಾರಣದ ಹಳ್ಳಿಹಕ್ಕಿ

ವಾರ್ತಾ ಭಾರತಿ : 30 Jul, 2020
ಸನತ್ ಕುಮಾರ್ ಬೆಳಗಲಿ

ವೈಚಾರಿಕರು ವಿವಾದಾತೀತರಾಗಲು, ಅಜಾತಶತ್ರುಗಳಾಗಲು ಸಾಧ್ಯವಿಲ್ಲ. ಇಂತಹ ವಿಶ್ವನಾಥ್ ಈಗ ರಾಜಕೀಯಕಾರಣದಿಂದಾಗಿ ಸಾಹಿತ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅಂಕಿತವನ್ನು ಅನ್ವರ್ಥವಾಗಿಸುವುದು ಅವರ ಹೊಣೆ.


ಕರ್ನಾಟಕ ಸರಕಾರವು 2020ರ ಮಧ್ಯಭಾಗದಲ್ಲಿ ಐವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದೆ. ಇವು ಕಲೆ, ಸಾಹಿತ್ಯ, ಸಮಾಜಸೇವೆ, ವಿಶಿಷ್ಟಸೇವೆ ಮತ್ತು ಶಿಕ್ಷಣ ಕ್ಷೇತ್ರಗಳಿಂದ ಮಾಡಬೇಕಾದ ಆಯ್ಕೆ. ಇವುಗಳಿಗೆ ಅನುಕ್ರಮವಾಗಿ ಅಡಗೂರು ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ ಮತ್ತು ಸಾಬಣ್ಣ ತಳವಾರ್ ನಾಮಕರಣಗೊಂಡಿದ್ದಾರೆ. ಇವುಗಳಲ್ಲಿ ಕೊನೆಯ ಎರಡು ಹೆಸರುಗಳನ್ನು ಹೊರತು ಪಡಿಸಿ ಉಳಿದ ಆಯ್ಕೆಗಳು ರಾಜಕೀಯವೇ ಆಗಿದ್ದವು. ಶಾಂತಾರಾಮ ಸಿದ್ದಿ ಬಹುಕಾಲದಿಂದ ಅವಗಣನೆಗೆ ತುತ್ತಾಗಿರುವ ಮತ್ತು ಅನಾಮಿಕರಂತೆ ಉಳಿದು ಹೋದ ಸಮುದಾಯಕ್ಕೆ ಸೇರಿದ ಪ್ರತಿನಿಧಿ. ರಾಜಕಾರಣದಲ್ಲಿ ಅಷ್ಟೇನೂ ಹೆಸರು ಮಾಡದ ವ್ಯಕ್ತಿ. ಶ್ರಮಿಕ. ಸಾಬಣ್ಣ ತಳವಾರ್ ಉಪನ್ಯಾಸಕ/ಪ್ರಾಧ್ಯಾಪಕ. ಶಿಕ್ಷಣ ಎಂದಾಕ್ಷಣ ಕಾಲೇಜು, ವಿಶ್ವವಿದ್ಯಾನಿಲಯದಲ್ಲಿರುವವರೇ ಆಯ್ಕೆಯಾಗುವ ಕಾಲ ಇದು. ಪ್ರತ್ಯೇಕವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಅವಕಾಶ ಮತ್ತು ಸಂದರ್ಭವಿದ್ದರೂ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡ ಪ್ರಭಾವಿಗಳಿಗೆ ಮಣೆಯೆಂಬುದನ್ನು ಕಳೆದ ಅನೇಕ ದಶಕಗಳ ಆಯ್ಕೆ ತೋರಿಸಿಕೊಟ್ಟಿದೆ. ಇಲ್ಲಿ ಆ ಮಿತಿಯಿಲ್ಲದ್ದರಿಂದ ಈ ಆಯ್ಕೆಯೂ ಸ್ವಾಗತಾರ್ಹವೇ. ಇನ್ನುಳಿದ ವಿಶಿಷ್ಟ ಸೇವಾ ಕ್ಷೇತ್ರದಿಂದ ಆಯ್ಕೆಯಾದವರು ಮಹಿಳೆ ಮತ್ತು ಆಳುವ ಪಕ್ಷದೊಂದಿಗೆ ಸಕ್ರಿಯ ವಾಗಿ ಗುರುತಿಸಿಕೊಂಡವರು. ಯಾವೊಂದು ಇತರ ಕ್ಷೇತ್ರದಲ್ಲಿ ಗುರುತಿಸಲಾಗದವರನ್ನು ಈ ಕ್ಷೇತ್ರದಿಂದ ಗುರುತಿಸಬಹುದು. ಇದೊಂದು ಥರದ ಅಧ್ಯಾತ್ಮ. ನಿರೂಪಣೆಗೆ, ವಿವರಣೆಗೆ ಸಿಕ್ಕದ್ದು. ಈ ಅರ್ಥದಲ್ಲಿ-ವ್ಯಂಗ್ಯವಾದರೂ ಸರಿಯೆ, ಇಂದಿನ ರಾಜಕಾರಣದಲ್ಲಿ ರಾಜಕೀಯಕ್ಕಿಂತ ವಿಶಿಷ್ಟ ಸೇವೆ ಬೇರೊಂದಿಲ್ಲ. ಆದ್ದರಿಂದ ಈ ಆಯ್ಕೆಯ ಕುರಿತು ಚರ್ಚೆಯಾಗಬೇಕಿದ್ದರೂ ನಮಗೇಕೆ ಇವರ ಗೊಡವೆ ‘ಹಾಳಾಗಿ ಹೋಗಲಿ’ ಎಂಬ ಹಾಗೆ ಜನತೆ ಸುಮ್ಮನಿದೆ.

ಕಲಾಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಹಾಗೂ ಸಾಹಿತ್ಯ ಕ್ಷೇತ್ರದಿಂದ ಅಡಗೂರು ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಸಕ್ರಿಯ ರಾಜಕಾರಣದ ಮತ್ತು ಸದಾ ನೆಲೆಹುಡುಕುವ ಈ ಇಬ್ಬರೂ ಕಲೆ ಮತ್ತು ಸಾಹಿತ್ಯವನ್ನು ನಾಚಿಸುವಂತೆ ಆಯ್ಕೆಯಾಗಿದ್ದಾರೆ. ಇಬ್ಬರೂ ಸಕ್ರಿಯ ರಾಜಕಾರಣಿಗಳು. ರಾಜಕೀಯದ ತೆರೆ-ಅಲೆಗಳಲ್ಲಿ ಮುಳುಗೇಳುತ್ತ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತ ಅಲೆಯುವವರು. ಈ ಪೈಕಿ ಯೋಗೇಶ್ವರ್ ಕಲಾವಿದ ಎಂದು ನಂಬೋಣವೇ? ಅವರೂ ಒಂದು ಸಿನೆಮಾದಲ್ಲಿ ಅಭಿನಯಿಸಿದ್ದಾರೆ. (ಬೇರೆ ವಿವರಗಳು ನನಗೆ ಗೊತ್ತಿಲ್ಲ.) ಅದೂ ಗಲ್ಲಾಪೆಟ್ಟಿಗೆಯಲ್ಲಿ ತೋಪಾದ್ದು ಮಾತ್ರವಲ್ಲ, ಅದು ಅವರಿಗೆ ಮೌಲಿಕವಾಗಿಯೂ ಯಾವ ಜನಪ್ರಿಯತೆಯನ್ನೂ ತಂದುಕೊಟ್ಟಿಲ್ಲ. ಆದರೆ ಅವರು ಒಂದು ಸಮುದಾಯದ ನಾಯಕನಾಗಿ ತನ್ನ ಸುತ್ತಲೂ ಒಂದು ಅನುಯಾಯಿಗಳ ಕೋಟೆ ಕಟ್ಟಿಕೊಂಡು ಮಾತ್ರವಲ್ಲ, ಆಡಳಿತಸೂತ್ರದಲ್ಲಿ ವ್ಯೆಹರಚನೆಯ ಸರದಾರನಾಗಿ ರಾಜ್ಯಮಟ್ಟದ ರಾಜಕೀಯಕ್ಕೆ ಅಗತ್ಯವಾಗಿ ಬಂದವರು. ರಾಮನಗರ, ಚನ್ನಪಟ್ಟಣ ಈ ಸುತ್ತ ಇರುವ ಇತರ ಪಕ್ಷಗಳ ಪ್ರಭಾವಿ ರಾಜಕಾರಣಿಗಳನ್ನು ಎದುರಿಸಲು ಆಳುವವರ ಸರ್ಪಾಸ್ತ್ರದಂತಿರುವವರು; ತಲೆಯುರುಳಿಸಲಾಗದಿದ್ದರೂ ಕಿರೀಟವನ್ನು ಉರುಳಿಸಲು ಶಕ್ತರಾದವರು. ‘ಕಲೆ’ಯ ಹೆಸರಿನಲ್ಲಿ ನಾಮಕರಣಗೊಂಡರೂ ರಾಜ್ಯದ ಯಾವೊಬ್ಬ ಕಲಾವಿದರೂ ಈ ಆಯ್ಕೆಯ ಕುರಿತು ಚಿಂತೆ ಮಾಡಿದಂತಿಲ್ಲ.

ಕಲೆಯ ಒಂದು ಭಾಗವೇ ಆಗಿರುವ ಸಾಹಿತ್ಯಮೂಲದಿಂದ ಆಯ್ಕೆಯಾದವರು ವಿಶ್ವನಾಥ್. ನಮ್ಮಲ್ಲಿ ಸಾಹಿತಿಗಳನ್ನು ಯಾರೂ ಕಲಾವಿದರೆಂದು ತಿಳಿದೇ ಇಲ್ಲ. ಇನ್ನು ಸಾಹಿತ್ಯದೊಳಗೇ ಇಳಿದರೂ ಅಲ್ಲಿ ಸಾಹಿತಿ ಬೇರೆ, ಕವಿ ಬೇರೆ ಎಂಬಂತೆ ಮಾತನಾಡುವವರೇ ಹೆಚ್ಚು. ‘‘ಇವರು ಕವಿಗಳೂ, ಸಾಹಿತಿಗಳೂ, ಬರಹಗಾರರೂ, ಲೇಖಕರೂ ಆಗಿದ್ದಾರೆ’’ ಎಂದು ಪರಸ್ಪರ ಸಂಬಂಧವಿಲ್ಲದ ವಿಭಾಗಗಳಂತೆ ಬಹಳ ದೊಡ್ಡ ಮಟ್ಟದ ವೇದಿಕೆಗಳಲ್ಲಿ ಪರಿಚಯಿಸುವುದನ್ನು ಕಾಣಬಹುದು. ಆದ್ದರಿಂದ ವರ್ತಮಾನದ ರೂಢಿಗತ ಅಪಮೌಲ್ಯಗಳ ಆಧಾರದಲ್ಲಿ ಸಾಹಿತ್ಯವನ್ನು ಕಲೆಯಿಂದ ಪ್ರತ್ಯೇಕಿಸಿ ಮಾತನಾಡಿದರೆ ತಪ್ಪಿಲ್ಲ. ವಿಶ್ವನಾಥ್ ರಾಜ್ಯದ ಪ್ರಭಾವಿ ರಾಜಕಾರಣಿ. ಅವರು ಯಾವುದೆಲ್ಲ ಪಕ್ಷಗಳಲ್ಲಿದ್ದರೆಂಬುದು ಇತರರಿಗೆ ಸಂಬಂಧಿಸಿದ್ದಲ್ಲ. ಏಕೆಂದರೆ ಬಹುತೇಕ ಯಾವುದೇ ರಾಜಕೀಯ ಪಕ್ಷಗಳನ್ನು ಗಮನಿಸಿದರೂ ಅದರಲ್ಲಿರುವ ಬಹುಪಾಲು ಮಂದಿ ವಿಚ್ಛೇದನಗೊಂಡವರೇ. ಇಂತಹ ರಾಜಕಾರಣಿಗಳನ್ನು ಅವರ ಪೂರ್ವಾಶ್ರಮವನ್ನು ಹೇಳಿ ಹಳಿದರೆ ಎಲ್ಲರೂ ಅದಕ್ಕೆ ತುತ್ತಾಗುವವರೇ. ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ, ನೀನೇ ನನ್ನ ಹೆಂಡತಿ ಎಂಬಂತಹ ಸುಖದಾಂಪತ್ಯವನ್ನು ಬದುಕುವ ಮಂದಿ ರಾಜಕೀಯದಲ್ಲಂತೂ ಹುಡುಕಿದರೆ ಸಿಗುವುದು ಕಷ್ಟ.

ಇತ್ತೀಚೆಗಿನ ರಾಜಕೀಯದಲ್ಲಿ ವರ್ತಮಾನವೊಂದೇ ಶಾಶ್ವತ. ಕುವೆಂಪು ಹಾಡಿದಂತೆ ‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬುದನ್ನು ರಾಜಕಾರಣಿಗಳಷ್ಟು ಪರಿಣಾಮಕಾರಿಯಾಗಿ ಅನುಸರಿಸಿ ದವರು ಇರಲಾರರು. ಸಿದ್ಧಾಂತಗಳನ್ನು, ನಂಬಿಕೆಗಳನ್ನು, ಬದಲಾಯಿಸಿಕೊಂಡ ಬುದ್ಧಿವಂತರ ದೊಡ್ಡ ತಂಡವೇ ಇದೆ. ‘‘ಹಿಂದೆ ಹೀಗೆ ಹೇಳಿದ್ದರು, ಈಗ ಹೀಗೆ ಹೇಳುತ್ತಿದ್ದಾರೆ’’ ಎಂಬ ಟೀಕೆಯು ಅನಂತಮೂರ್ತಿಯಂತಹವರನ್ನೂ ಬಿಟ್ಟಿಲ್ಲ. ಆದ್ದರಿಂದ ವಿಶ್ವನಾಥ್ ಆಯ್ಕೆಯನ್ನು ರಾಜಕೀಯ ಕಾರಣಗಳಿಗಾಗಿ ಆಕ್ಷೇಪಿಸುವಂತಿಲ್ಲ. ಆದರೂ ಅವರ ಆಯ್ಕೆಯನ್ನು ಸಾಹಿತ್ಯ ಕ್ಷೇತ್ರದ ಕೆಲವರಾದರೂ ಆಕ್ಷೇಪಿಸಿದರು. ಪ್ರಾಯಃ ಈ ಐವರಲ್ಲಿ ಅವರ ಆಯ್ಕೆಯೊಂದೇ ಆಕ್ಷೇಪಾರ್ಹವೆಂಬಂತೆ ಟೀಕಿಸಿದವರಿದ್ದರು. ವಿಶ್ವನಾಥ್ ಅವರಿಗಿಂತ ದೊಡ್ಡ ಸಾಹಿತಿ ಇರಲಿಲ್ಲವೆಂದಲ್ಲ. ಆ ಕಾರಣಕ್ಕೆ ಅವರ ಆಯ್ಕೆಯಲ್ಲಿ ದೋಷವನ್ನು ಕಾಣಲಾಗದು. ಹಾಗೆ ನೋಡಿದರೆ ವಿಧಾನಪರಿಷತ್ತಿಗೆ, ರಾಜ್ಯಸಭೆಗೆ ನಾಮಕರಣಗೊಂಡ ನಮ್ಮ ‘ಜನಪ್ರಿಯ’ ಸಾಹಿತಿಗಳಿಗಿಂತ ಶ್ರೇಷ್ಠರು ಬೇಕಷ್ಟಿದ್ದರೂ ಅವರ ಮೇಲೆ ರಾಜಕಾರಣಿಗಳ ಕೃಪಾಕಟಾಕ್ಷವಿಲ್ಲದ್ದರಿಂದ ಅಂಥವರು ನಾಮಕರಣಗೊಂಡಿಲ್ಲ! ಯೋಗೇಶ್ವರ್ ಅವರಿಗಿಂತ ಹಿರಿಯ ಕಲಾವಿದರಿರಲಿಲ್ಲವೇ ಎಂಬ ಸಮಾಧಾನವನ್ನು ತಕ್ಷಣಕ್ಕೆ ಹೇಳಬಹುದು. ಆದರೆ ಯೋಗೇಶ್ವರ್ ಅವರು ಕಲೆಯನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚು ಮೌಲಿಕವಾಗಿ ವಿಶ್ವನಾಥ್ ಅವರ ನಾಮಕರಣ ವಾಗಿದೆಯೆಂಬುದನ್ನು ಹೇಳಬಹುದು. ಇದಕ್ಕೆ ಸಮರ್ಥನೆಗಳೂ ಇವೆ.

ಸಾಹಿತ್ಯ ಕ್ಷೇತ್ರವು ರಾಜಕಾರಣಕ್ಕೆ ಸಮೀಪವೂ, ರಾಜಕಾರಣಕ್ಕಿಂತ ತುಸು ಕಡಿಮೆ ಗುಲ್ಲೆಬ್ಬಿಸುವ ಕ್ಷೇತ್ರವೂ ಆಗಿದೆ. ಕೆಲವು ಸಾಹಿತಿಗಳು ಮಾಡುವ ರಾಜಕಾರಣವನ್ನು ಗಮನಿಸಿದರೆ ಅವರನ್ನು ತಕ್ಷಣ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೋ/ಸಲಹೆಗಾರರಾಗಿಯೋ ಮಾಡಬಹುದು. ಅವರೇಕೆ ಸಕ್ರಿಯ ರಾಜಕಾರಣಿಗಳಾಗಿಲ್ಲವೆಂಬ ಪ್ರಶ್ನೆ ತಲೆದೋರಬಹುದು. ಒಂದು ವಾದದ ಪ್ರಕಾರ ‘ನಿಮ್ಮೆಡನಿದ್ದೂ ನಿಮ್ಮಂತಾಗದ’ ವ್ಯಕ್ತಿತ್ವ ಅನೇಕರಿಗಿಷ್ಟ. ಇನ್ನೊಂದು ವಾದದ ಪ್ರಕಾರ ಸಕ್ರಿಯ ರಾಜಕಾರಣದಲ್ಲಿ ಆಡಂಬರದ ಗೌರವಕ್ಕೆ ಕೆಲವೊಮ್ಮೆ ಚ್ಯುತಿ ಬರಬಹುದು. ಹೊರಗುಳಿದು ಮಾಡುವ ರಾಜಕಾರಣದಿಂದ ಬಹಿರಂಗವಾಗಿ ಗೌರವಕ್ಕೆ ಚ್ಯುತಿ ಬಾರದು. ಈ ವಾದದಂತೆ ಸಾಹಿತಿಗಳು ಅಲ್ಪತೃಪ್ತರು. ಇದರ ಅಲ್ಪ ಪ್ರಯೋಜನವೆಂದರೆ ಅಕಾಡಮಿ, ಪ್ರಾಧಿಕಾರ, ಮತ್ತಿತರ ಸರಕಾರೀ ನಿಯಂತ್ರಿತ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ. ಪ್ರಶಸ್ತಿ, ವೇದಿಕೆ, ಜನಪ್ರಿಯತೆ ಮುಂತಾದ ಸಂದರ್ಭಗಳನ್ನಷ್ಟೇ ಬಯಸುವವರು. ಹೆಚ್ಚೆಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಷ್ಟು ಬೇಕೋ ಅಷ್ಟರ ಮಟ್ಟಿಗೆ ರಾಜಕಾರಣಿಗಳನ್ನು ಬಲ್ಲವರು; ಚಳಿಯಾಗದಷ್ಟು ಹತ್ತಿರವೂ ಸುಡದಷ್ಟು ದೂರವೂ ಇರುವವರು.

ಅರಿಕೇಸರಿಯನ್ನು ಪಂಪ ಹೊಗಳಿದಂತೆ ತಮ್ಮ ಒಡೆಯರನ್ನು ರೂಪಕ, ಉಪಮಾಲಂಕಾರಗಳಿಂದ ಪ್ರದರ್ಶಿಸುತ್ತ, ವೈಭವೀಕರಿಸುತ್ತ ಉಳಿಯುವವರು. ರಾಜಕಾರಣ ಮಾಡಿ ಉಳಿದಂತೆ ಪಂಪ, ರನ್ನ, ಕುಮಾರವ್ಯಾಸ ಎಂದು ಆಡುತ್ತ, ಹಾಡುತ್ತ, ಓದುತ್ತ, ಬರೆಯುತ್ತ, ಮಾತನಾಡುತ್ತ ಇರಬಹುದು. ಇದು ಇತ್ತ ‘ಸಕ್ರಿಯ’ವೂ ಅಲ್ಲದ, ಅತ್ತ ‘ನಿಷ್ಕ್ರಿಯ’ವೂ ಅಲ್ಲದ ‘ಅಲ್ಪಕ್ರಿಯಾ’ ರಾಜಕಾರಣ. ಇಂತಹವರ ನಡುವೆ ವಿಶ್ವನಾಥ್ ಸಾಹಿತಿಯೆಂದೆನ್ನಿಸಿಕೊಳ್ಳುವುದಿಲ್ಲ. ಅವರು ವೀರಪ್ಪಮೊಯ್ಲಿಯವರಂತೆ ಪೂರ್ಣ ರಾಜಕಾರಣಿಯಾಗಿಯೂ ಸಾಹಿತ್ಯಕ್ಷೇತ್ರದಲ್ಲೂ ದುಡಿದವರು. (ಆದರೆ ವಿಶ್ವನಾಥ್ ಮೊಯ್ಲಿಯವರಷ್ಟು ಸಾಹಿತ್ಯಜನಪ್ರಿಯರಲ್ಲ. ಮೊಯ್ಲಿಯವರ ಸುತ್ತ ಒಂದಷ್ಟು ವಿಮರ್ಶಕರ ವ್ಯೆಹವೇ ಇತ್ತು. ಮೊಯ್ಲಿ ಸದಾ ಬೌದ್ಧಿಕವಲಯದಲ್ಲಿ ವ್ಯವಹರಿಸುವಷ್ಟು ಪ್ರಭಾವವನ್ನು ಬೆಳೆಸಿಕೊಂಡಿದ್ದರು.) ಹೋಚಿಮಿನ್ ರಾಜಕಾರಣಿಯೂ ಹೌದು; ಕವಿಯೂ ಆಗಿದ್ದ. ಈ ದೇಶದಲ್ಲಿ ಇಂತಹ ಸಾಕಷ್ಟು ಉದಾಹರಣೆಗಳಿವೆ. ನಾನು ಬಲ್ಲಂತೆ ವಿಶ್ವನಾಥ್ ಅವರ ಮೂರು ಪುಸ್ತಕಗಳು ಪ್ರಕಟವಾಗಿವೆ: 2007ರಲ್ಲಿ ಪ್ರಕಟವಾದ ‘ಹಳ್ಳಿಹಕ್ಕಿಯ ಹಾಡು’ ಎಂಬ ಆತ್ಮ ಕಥನ, (ಈ ಕೃತಿ 2014ರ ಹೊತ್ತಿಗೆ 4 ಮುದ್ರಣಗಳನ್ನು ಕಂಡಿದೆ!); 2013ರಲ್ಲಿ ಪ್ರಕಟವಾದ ‘ಆಪತ್ ಸ್ಥಿತಿಯ ಆಲಾಪಗಳು’ (ಈ ಕೃತಿಯೂ 2014ರಲ್ಲಿ 2ನೇ ಮುದ್ರಣವನ್ನು ಕಂಡಿದೆ); ಮತ್ತು 2014ರಲ್ಲಿ ಪ್ರಕಟವಾದ ‘ಮಲ್ಲಿಗೆಯ ಮಾತು’. ‘ಹಳ್ಳಿಹಕ್ಕಿಯ ಹಾಡು’ ಸಾಕಷ್ಟು ಜನಪ್ರಿಯವಾಗಿರ ಬಹುದೆಂದು ವಿಶ್ವನಾಥ್ ಅವರ ನಾಮಕರಣದ ಆನಂತರದಲ್ಲಿ ಅವರನ್ನು ‘ಹಳ್ಳಿಹಕ್ಕಿ’ಯೆಂದು ಕೆಲವು ಸಾಹಿತಿಗಳಾದರೂ ಟೀಕಿಸಿದ್ದರಿಂದಲೇ ಗೊತ್ತಾಗುತ್ತದೆ! ಇಂದು ಬರುವ ಅನೇಕ ಸಾಹಿತ್ಯ ಕೃತಿಗಳಿಗಿಂತ ಇದು ಚೆನ್ನಾಗಿದೆ-ಎಂದರೆ ಪ್ರಾಮಾಣಿಕವಾಗಿದೆ ಮತ್ತು ಆತ್ಮನಿಷ್ಠವಾಗಿದೆ.

ವೈಯಕ್ತಿಕ ಮತ್ತು ಸಾರ್ವಜನಿಕ ಬದುಕುಗಳನ್ನು ಸಮತೂಕದಲ್ಲಿ ಕಂಡ ಕೃತಿಯಿದು. ಲೇಖಕನೊಬ್ಬ ರಾಜಕಾರಣಿಯಾದ ಮಾತ್ರಕ್ಕೇ ಆತನನ್ನು ದೂರುವುದು ಎಷ್ಟು ತಪ್ಪೋ ಅಷ್ಟೇ ತಪ್ಪು ರಾಜಕಾರಣಿಯೊಬ್ಬ ಬರೆದ ಸಾಹಿತ್ಯಕೃತಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸದೆ ದೂರುವುದು. ಈ ಕೃತಿಯುದ್ದಕ್ಕೂ ವಿಶ್ವನಾಥ್ ಅವರ ಓದಿನ ವೈಶಾಲ್ಯ ಕಾಣಿಸುತ್ತದೆ. ತಮ್ಮ ರಾಜಕೀಯದ ಏಳುಬೀಳುಗಳನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಹಾಗೆಯೇ ಅವರ ಮನದೊಳಗಣ ಮಾತು ಎಂಬ ಅಧ್ಯಾಯದಲ್ಲಿ ಬರುವ ಸ್ನೇಹದ ಸಂಕೋಲೆಯೊಳಗೆ ಎಂಬ ಘಟನೆಯು ಹೃದಯಸ್ಪರ್ಶಿ ಮಾತ್ರವಲ್ಲ, ಮಾರ್ಮಿಕವಾಗಿದೆ. ಪ್ರಾಯಃ ಅವರು ಈಗ ಇಂತಹ ಕೃತಿಯನ್ನು ಬರೆದಿದ್ದರೆ ಅದರಲ್ಲಿ ಇನ್ನೂ ರೋಚಕ, ಮನರಂಜಕ ಮತ್ತು ವೈರುಧ್ಯಗಳ ಅನುಭವವಿರುತ್ತಿತ್ತೇನೋ? ‘ಆಪತ್ ಸ್ಥಿತಿಯ ಆಲಾಪಗಳು’ ಎಂಬ ಅವರ ಕೃತಿಯು ಕಥೆಯೂ ಹೌದು; ವ್ಯಥೆಯೂ ಹೌದು. ಸೃಜನಶೀಲ, ಸಂವೇದನಾಶೀಲ ಮನಸ್ಸಿನ ಗೊಂದಲಗಳು ಇಲ್ಲೂ ಇವೆ. ಪಕ್ಷವೊಂದು ಕೈಗೊಂಡ ನಿರ್ಧಾರಗಳನ್ನು ಸಮರ್ಥಿಸಿಬೇಕಾದ ಅನಿವಾರ್ಯ ಮತ್ತು ಅದರೊಳಗಿರುವ ಸಂದಿಗ್ಧ ಇವನ್ನು ಅವರು ಬಿಚ್ಚುಮನಸ್ಸಿನಿಂದ ಬರೆದಿದ್ದಾರೆ.

ಅವರ ಇನ್ನೊಂದು ಕೃತಿ ‘ಮಲ್ಲಿಗೆಯ ಮಾತು’. ಇಲ್ಲಿ ತಮ್ಮ ನೂರು ವಿಚಾರಬಿಂದುಗಳನ್ನು ಸರಳವಾಗಿ ಹೇಳಿದ್ದಾರೆ. ‘‘ಈ ದೇಶದ ಮಹಾನ್ ಚರಿತ್ರೆಯಲ್ಲಿ ನಾನೊಂದು ನೀರಬಿಂದು ಮಾತ್ರ’’ ಎಂಬ ಸೌಜನ್ಯ ಈ ಕೃತಿಯಲ್ಲಿದೆ. ಅವರು ಬರೆದ ಕೆಲವು ವಾಕ್ಯಗಳಾದರೂ ನೆನಪಿಡಲು ಅರ್ಹ: ‘‘ನನ್ನ ಮಟ್ಟಿಗೆ ನಂಬಿಕೆಯೇ ದೇವರು.’’, ‘‘ಚುನಾವಣೆಯೇ ಹಾಗೆ, ನೀವೇನೇ ಹೇಳಿ, ಎಲ್ಲ ವ್ಯವಹಾರಗಳೂ ಹೇಗೋ ಏನೋ ಅವ್ಯವಹಾರಗಳಾಗಿಬಿಡುತ್ತವೆ.’’, ‘‘ಮೌನವಾಗಿದ್ದು ಸಂಪಾದಿಸಿದ ವರ್ಚಸ್ಸನ್ನೂ ಕೆಲವು ಮಾತುಗಳು ಕಳೆದುಬಿಡುತ್ತವೆ.’’, ‘‘ಆದರೆ ಒಂದಂತೂ ಹೇಳಿಬಿಡುತ್ತೇನೆ: ನಿಜಕ್ಕೂ ಮಾತಾಡದೆ ಇರುವುದು ಮಾತನಾಡುವುದಕ್ಕಿಂತ ಕಷ್ಟ.’’, ‘‘ಹೆಣ್ಣುಮಕ್ಕಳ ಸಬಲೀಕರಣ ಮಾಡುವುದೆಂದರೆ ಸ್ವಲ್ಪನಾವೆಲ್ಲ ಬದಿಗೆ ಸರಿದು ದಾರಿ ಬಿಡುವುದು ಅಷ್ಟೇ’’. ವಿಶ್ವನಾಥ್ ಅವರಿಗೆ ಜನಪ್ರಿಯ ಪ್ರಕಾಶಕರು ಸಿಗಲಿಲ್ಲವೋ ಅಥವಾ ಅವರು ಅದನ್ನು ಬಯಸಲಿಲ್ಲವೋ ಹೇಳುವುದು ಕಷ್ಟ. ಅಧಿಕಾರಸ್ಥರನ್ನು ಸಾಹಿತ್ಯ ಅರಸಿಕೊಂಡು ಬರುವ ಕಾಲ ಇದು. ರಾಜಕಾರಣದಲ್ಲಿ ಪರಸ್ಪರ ದೋಷಾರೋಪಣೆ ಸಹಜ. ದುರದೃಷ್ಟವೆಂದರೆ ರಾಜಕೀಯದಲ್ಲಿ ಎಂತಹ ಅಯೋಗ್ಯನೂ ಎಂತಹ ಯೋಗ್ಯನನ್ನೂ ಸಂಖ್ಯಾಬಲದಿಂದ ಸೋಲಿಸಬಹುದು. ಮಾಧ್ಯಮದವರು ಸದಾ ಬೆನ್ನಟ್ಟುತ್ತಿರುವುದರಿಂದ (ಅಥವಾ ಇತ್ತೀಚೆಗಿನ ಚರ್ಯೆಯಂತೆ ಹಿಂಬಾಲಿಸುತ್ತಿರುವುದರಿಂದ) ಒಂದಿಷ್ಟು ವೀರಾವೇಶದ ಮಾತುಗಳ ಮೂಲಕ ಮೂದಲಿಸುವುದು ಸಹಜ. ಮಹಾಭಾರತದ ಕರ್ಣಾರ್ಜುನ ಕಾಳಗದ ಒಂದು ಸಂದರ್ಭದಲ್ಲಿ ‘ಮೂದಲಿಸಿ ಮಾತನಾಡಿದರ್’ ಎಂಬ ಉಲ್ಲೇಖವಿದೆ. (ಆದ್ದರಿಂದ everything is fair in love and war ಎಂಬಲ್ಲಿ of words ಎಂದು ಬಳಸಬಹುದು!) ಹೀಗಾಗಿ ಸಾಹಿತ್ಯದ ಗಂಧಗಾಳಿಯಿಲ್ಲದಿರುವವರು ರಾಜಕಾರಣದ ವೇದಿಕೆಯಲ್ಲಿ ಅವರ ನಾಮಕರಣವನ್ನು ಮೂದಲಿಸಿದರು. ಶುದ್ಧ ಸಾಹಿತಿಗಳೆಂದು ಅನ್ನಿಸಿಕೊಂಡವರೇ ಸಾಹಿತ್ಯ ಕ್ಷೇತ್ರದ ಹೆಸರಿನಲ್ಲಿ ಹೀಗೆ ಸದಸ್ಯರಾಗಿ ಮಾಡಿದ ಸಾಧನೆ ಅಷ್ಟರಲ್ಲೇ ಇದೆ. ಅಧಿಕಾರ ಸಿಕ್ಕಿದರೆ ಸಾಲದು; ಅದನ್ನು ಬಳಸಲು ಬೇಕಾದ ಶಕ್ತಿ ಬೇಕು. ವಿಶ್ವನಾಥ್ ವಿಧಾನಪರಿಷತ್ ಸದಸ್ಯರಾದ ತಕ್ಷಣ ಅವರು ಸಾಹಿತ್ಯಕ್ಕೆ ಇಂದ್ರಜಾಲ ಮಾಡುತ್ತಾರೆಂದೇನೂ ಇಲ್ಲ. ಆದರೆ ಅವರಿಗೆ ಆಡಳಿತದ ಅಪಾರ ಅನುಭವವಿದೆ. ಜನರ ಸಂಪರ್ಕವಿದೆ. ಅದನ್ನು ಸದುಪಯೋಗ ಮಾಡಿದರೆ ಅವರ ಕುರಿತ ಟೀಕೆಗಳು ಮುಳುಗಬಹುದು. ವೈಚಾರಿಕರು ವಿವಾದಾತೀತರಾಗಲು, ಅಜಾತಶತ್ರುಗಳಾಗಲು ಸಾಧ್ಯವಿಲ್ಲ. ಇಂತಹ ವಿಶ್ವನಾಥ್ ಈಗ ರಾಜಕೀಯಕಾರಣದಿಂದಾಗಿ ಸಾಹಿತ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅಂಕಿತವನ್ನು ಅನ್ವರ್ಥವಾಗಿಸುವುದು ಅವರ ಹೊಣೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)