varthabharthi


ಗಲ್ಫ್ ಸುದ್ದಿ

ಕೋವಿಡ್ 19 ಮಾರ್ಗಸೂಚಿಗಳ ಪಾಲನೆ

ಅರಫಾ ಬೆಟ್ಟದಲ್ಲಿ ಜಮಾಯಿಸಿದ ಹಜ್ ಯಾತ್ರಿಕರು

ವಾರ್ತಾ ಭಾರತಿ : 30 Jul, 2020

ಫೊಟೊ ಕೃಪೆ: twitter.com/wasim_dr

ಮಕ್ಕಾ (ಸೌದಿ ಅರೇಬಿಯ), ಜು. 30: ಹಜ್ ಯಾತ್ರೆಯ ಅತ್ಯಂತ ಮಹತ್ವದ ವಿಧಿವಿಧಾನವನ್ನು ಪೂರೈಸುವುದಕ್ಕಾಗಿ ಹಜ್ ಯಾತ್ರಿಗಳು ಗುರುವಾರ ಸೌದಿ ಅರೇಬಿಯದ ಅರಫಾ ಬೆಟ್ಟದಲ್ಲಿ ಜಮಾಯಿಸಿದ್ದಾರೆ.

ಮಕ್ಕಾ ನಗರದ ಹೊರವಲಯದಲ್ಲಿರುವ ಬೆಟ್ಟದ ಬುಡದ ಸುತ್ತ ಬಿಗಿ ಭದ್ರತಾ ವಲಯವನ್ನು ನಿರ್ಮಿಸಲಾಗಿದೆ. ಮುಖಗವಸುಗಳನ್ನು ಧರಿಸಿದ ಯಾತ್ರಿಗಳನ್ನು ಸುರಕ್ಷಿತ ಅಂತರದೊಂದಿಗೆ ಬಸ್‌ಗಳಲ್ಲಿ ನೆರೆಯ ಮಿನಾದಿಂದ ಕರೆತರಲಾಗುತ್ತಿದೆ ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಆಧುನಿಕ ಕಾಲದ ಹಜ್ ಯಾತ್ರೆಗಳಿಗೆ ಹೋಲಿಸಿದರೆ, ಈ ಬಾರಿಯ ಯಾತ್ರೆಯು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸೋಂಕು ಹರಡುವುದನ್ನು ತಡೆಯಲು ಈಗಾಗಲೇ ಸೌದಿ ಅರೇಬಿಯದಲ್ಲಿರುವ ಕೇವಲ 10,000 ಮಂದಿಗೆ ಮಾತ್ರ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ವಿದೇಶಿ ಯಾತ್ರಿಕರಿಗೆ ಅವಕಾಶ ನೀಡಲಾಗಿಲ್ಲ. ಕಳೆದ ವರ್ಷ 25 ಲಕ್ಷಕ್ಕೂ ಅಧಿಕ ಯಾತ್ರಿಕರು ಭಾಗವಹಿಸಿದ್ದರು.

ಯಾತ್ರಿಕರನ್ನು ದೇಹದ ಉಷ್ಣತೆ ತಪಾಸಣೆಗೆ ಒಳಪಡಿಸಲಾಗಿದೆ. ಅರಫಾ ಬೆಟ್ಟಕ್ಕೆ ತೆರಳುವ ಮುನ್ನ ಅವರು ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 10 ಭಾಷೆಗಳಲ್ಲಿ ಪ್ರವಚನವನ್ನು ನೀಡಲಾಗಿದೆ.

ಈ ಬಾರಿಯ ಹಜ್ ದೃಶ್ಯಗಳು ಹಿಂದಿನ ವರ್ಷಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಹಿಂದಿನ ವರ್ಷಗಳಲ್ಲಿ ಅರಫಾದಲ್ಲಿ ಜನಸಾಗರ ಮತ್ತು ಅವರನ್ನು ನಿಯಂತ್ರಿಸಲು ಸಾವಿರಾರು ಭದ್ರತಾ ಸಿಬ್ಬಂದಿಯಿದ್ದರೆ, ಈ ಬಾರಿ ಯಾತ್ರಿಕರ ಸಂಖ್ಯೆ ಕಡಿಮೆ ಇದೆ.

ಯಾತ್ರಿಕರು ಅರಫಾ ಬಳಿಕ ಇನ್ನೊಂದು ಪವಿತ್ರ ಸ್ಥಳ ಮುಝ್ದಲಿಫಾಕ್ಕೆ ತೆರಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)