varthabharthi


ವಿಶೇಷ-ವರದಿಗಳು

ಹಜ್ ಮತ್ತು ಬಕ್ರೀದ್ ಟಿಪ್ಪಣಿಗಳು

ವಾರ್ತಾ ಭಾರತಿ : 31 Jul, 2020
ಹವ್ವಾ ಶಾಹಿದಾ, ಪುತ್ತಿಗೆ

ಇಸ್ಲಾಮ್ ಧರ್ಮದ ನಿಯಮಗಳ ಪ್ರಕಾರ, ಶಾರೀರಿಕವಾಗಿ ಮತ್ತು ಆರ್ಥಿಕವಾಗಿ ಮಕ್ಕಾ ನಗರದ ತನಕ ಪ್ರಯಾಣಿಸಿ ಹಿಂದಿರುಗುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಜೀವನದಲ್ಲೊಮ್ಮೆ ಹಜ್ ಕಡ್ಡಾಯವಾಗಿದೆ. ಆದರೂ, ಜೀವನದಲ್ಲೊಮ್ಮೆ ಹಜ್‌ಗೆ ಹೋಗಬೇಕೆಂಬುದು ಹೆಚ್ಚಿನೆಲ್ಲಾ ಮುಸ್ಲಿಮರ ಮಹತ್ವಾಕಾಂಕ್ಷೆಯಾಗಿರುತ್ತದೆ. ತುಂಬಾ ಶ್ರೀಮಂತರಲ್ಲದ ಅದೆಷ್ಟೋ ಮಂದಿ, ಹಲವಾರು ವರ್ಷಗಳ ಅವಧಿಯಲ್ಲಿ ತಾವು ಸ್ವಲ್ಪ ಸ್ವಲ್ಪವಾಗಿ ಉಳಿತಾಯಮಾಡಿ ಸಂಗ್ರಹಿಸಿದ ಹಣದಿಂದ ಹಜ್‌ಗೆ ಹೋಗಲು ಸಿದ್ಧತೆ ನಡೆಸಿರುತ್ತಾರೆ. ಅಂತಹ ಅನೇಕ ಮಂದಿ ಈ ಬಾರಿ ತುಂಬಾ ನಿರಾಶರಾಗಿದ್ದಾರೆ.


2012ರಲ್ಲಿ ದಾಖಲೆ 31 ಲಕ್ಷ ಮಂದಿ ಹಜ್‌ನಲ್ಲಿ ಭಾಗವಹಿಸಿದ್ದರು. ಆ ಬಳಿಕ ಕಾಬಾ ಮಸೀದಿಯ ಸುತ್ತಮುತ್ತ ಕಟ್ಟಡ ಹಾಗೂ ಸವಲತ್ತುಗಳ ವಿಸ್ತರಣೆಯ ಕಾರ್ಯ ಆರಂಭವಾದ್ದರಿಂದ ಸೌದಿ ಸರಕಾರವು ಯಾತ್ರಿಕರ ಸಂಖ್ಯೆಯ ಮೇಲೆ ನಿರ್ಬಂಧ ಹೇರಿತು. ಆದರೆ ಸೌದಿ ಸರಕಾರದ ಮಹತ್ವಾಕಾಂಕ್ಷಿ ವಿಷನ್ 2030 ಪ್ರಕಾರ ಸರಕಾರವು ಯಾತ್ರಿಕರ ಸಂಖ್ಯೆಯ ಮೇಲಿನ ನಿರ್ಬಂಧವನ್ನು ಕ್ರಮೇಣ ತೆರವುಗೊಳಿಸಲಿದೆ, ಮಾತ್ರವಲ್ಲ, ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡಲಿದೆ. 2030ರ ಹೊತ್ತಿಗೆ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಿ 3 ಕೋಟಿಗೆ ತಲುಪಿಸಬೇಕೆಂಬುದು ಸರಕಾರದ ಗುರಿಯಾಗಿದೆ.


2018ರ ಹಜ್ ಸಂಬಂಧಿ ಮಾಹಿತಿಗಳ ಪ್ರಕಾರ ಆ ವರ್ಷ ಜುಲೈ 10 ಮತ್ತು ಆಗಸ್ಟ್ 19ರ ನಡುವೆ 40 ದಿನಗಳ ಅವಧಿಯಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಹಜ್ ಯಾತ್ರಿಕರನ್ನು ತರುವ ಒಟ್ಟು 16,888 ವಿಮಾನಗಳು ಸೌದಿ ಅರೇಬಿಯಾದಲ್ಲಿ ಬಂದಿಳಿದಿದ್ದವು. ಆ ಪೈಕಿ 13,128 ವಿಮಾನಗಳು ಜಿದ್ದಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೆ 3,760 ವಿಮಾನಗಳು ಮದೀನಾದ ವಿಮಾನ ನಿಲ್ದಾಣದ ಮೂಲಕ ಬಂದಿದ್ದವು. ಆ ವರ್ಷ ಆಗಸ್ಟ್ 13ರಂದು ಒಂದೇ ದಿನ ಹಜ್ ಯಾತ್ರಿಕರ 524 ವಿಮಾನಗಳು ಸೌದಿ ಅರೇಬಿಯಾದಲ್ಲಿ ಬಂದಿಳಿದಿದ್ದವು.


ಕಳೆದ ವರ್ಷ ಹಜ್ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆಯಿಂದ ಆಗಮಿಸಿದ್ದ ಸುಮಾರು 25 ಲಕ್ಷ ಜನ ಯಾತ್ರಿಕರು ಸೌದಿ ಅರೇಬಿಯಾದಲ್ಲಿರುವ ಮಕ್ಕಾ ನಗರದಲ್ಲಿ ಸೇರಿದ್ದರು. ಅವರಲ್ಲಿ ಕನಿಷ್ಠ 6 ಲಕ್ಷ ಮಂದಿ ಅದೇ ಸೌದಿ ದೇಶದ ವಿವಿಧ ಭಾಗಗಳಿಂದ ಬಂದ ಸ್ಥಳೀಯರು ಮತ್ತು ಸೌದಿಯಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ವಿದೇಶಿಗಳಾಗಿದ್ದರು. ಒಟ್ಟು ಯಾತ್ರಿಕರ ಪೈಕಿ ಸುಮಾರು ಅರ್ಧದಷ್ಟು ಮಹಿಳೆಯರಿದ್ದರು. ಭಾರತದಿಂದಲೂ ಸುಮಾರು 2 ಲಕ್ಷ ಜನ ಹೋಗಿದ್ದರು. ಸೌದಿ ಸರಕಾರವು ಹಜ್ ಸ್ಥಳದಲ್ಲಿ ನಡೆಯುತ್ತಿರುವ ವ್ಯಾಪಕ ವಿಸ್ತರಣೆ ಹಾಗೂ ನಿರ್ಮಾಣ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಯಾತ್ರಿಕರ ಸಂಖ್ಯೆಯ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ಹೇರಿದೆ. ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿನ 10 ಲಕ್ಷ ಮುಸ್ಲಿಮ್ ಪ್ರಜೆಗಳ ಪೈಕಿ ಕೇವಲ ಒಂದು ಸಾವಿರ ಅರ್ಜಿದಾರರಿಗೆ ಮಾತ್ರ ಹಜ್ ಯಾತ್ರೆಗಾಗಿ ವೀಝ ನೀಡಲಾಗುವುದು ಎಂಬ ಸೌದಿ ಸರಕಾರದ ನಿರ್ಧಾರದಿಂದಾಗಿ ಇದೀಗ ವಿದೇಶಿ ಹಜ್ ಯಾತ್ರಿಕರ ಸಂಖ್ಯೆ ಹೆಚ್ಚೆಂದರೆ 20 ಲಕ್ಷಕ್ಕೆ ಸೀಮಿತವಾಗಿದೆ. ಅನ್ಯಥಾ ಈ ಸಂಖ್ಯೆ ಲಕ್ಷಗಳ ಗಡಿಮೀರಿ ಕೋಟಿಯ ಅಂಚಿಗೆ ತಲುಪುವ ಎಲ್ಲ ಸಾಧ್ಯತೆಗಳಿದ್ದವು.

***

ಕೊರೋನ ತಂದ ವಿಷಮ ಸ್ಥಿತಿ: ಸೀಮಿತ ಹಜ್  

ಈ ವರ್ಷ ಹಜ್‌ನ ಸ್ವರೂಪ ತೀರಾ ಭಿನ್ನವಾಗಲಿದೆ. ಜಗತ್ತೆಲ್ಲ ಕೋವಿಡ್‌ನ ಕರಿನೆರಳಲ್ಲಿ ನರಳುತ್ತಿರುವ ಈ ದಿನಗಳಲ್ಲಿ ಹಜ್ ಯಾತ್ರೆಯನ್ನು ಎಂದಿನಂತೆ ನಡೆಸಿದರೆ ಸಾವಿರಾರು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸೌದಿ ಸರಕಾರವು ಈ ಬಾರಿ ಕೇವಲ ಹತ್ತು ಸಾವಿರ ಮಂದಿಯನ್ನು ಮಾತ್ರ ಸೇರಿಸಿ ಹಜ್ ಯಾತ್ರೆಯನ್ನು ಏರ್ಪಡಿಸುವ ನಿರ್ಧಾರ ಕೈಗೊಂಡಿದೆ. ಸೌದಿ ಅರೇಬಿಯಾದೊಳಗಿರುವ, ವಿವಿಧ ಮೂಲದ ವಿದೇಶಿಗಳನ್ನು ಆರಿಸುವ ಮೂಲಕ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಲಾಗುವುದು. ಸೌದಿಯ ಒಳಗೆ ಇರುವವರ ಪೈಕಿಯೇ ಬೇರೆ ಬೇರೆ ದೇಶಗಳ ನಾಗರಿಕರನ್ನು ಆರಿಸಿ ಪ್ರಸ್ತುತ ಒಂದು ಸಾವಿರ ಯಾತ್ರಿಕರನ್ನು ಸೇರಿಸಲಾಗುವುದೆಂದು ಅಲ್ಲಿನ ಸರಕಾರವು ಪೂರ್ವ ಭಾವಿಯಾಗಿಯೇ ಪ್ರಕಟಿಸಿದ್ದು, ಆ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿತ್ತು.

ನೂರಾರು ವರ್ಷಗಳ ಹಜ್ ಇತಿಹಾಸದಲ್ಲಿ ಈ ರೀತಿ ತೀರಾ ಸೀಮಿತ ಸಂಖ್ಯೆಯ ಯಾತ್ರಿಕರೊಂದಿಗೆ ಹಜ್ ನಡೆಯುತ್ತಿರುವುದು ಇದೇನೂ ಮೊದಲ ಬಾರಿಯೇನಲ್ಲ. ಮಹಾಮಾರಿಗಳಿಂದಾಗಿ ಅಥವಾ ಯುದ್ಧಗಳಿಂದಾಗಿ, ಈ ಹಿಂದೆಯೂ ಹಲವು ಬಾರಿ ತೀರಾ ಸೀಮಿತ ಸಂಖ್ಯೆಯ ಯಾತ್ರಿಗಳೊಂದಿಗೆ ಹಜ್ ನಡೆಸಲಾಗಿದೆ. ಅನಿವಾರ್ಯ ಸನ್ನಿವೇಶಗಳಲ್ಲಿ ಹಜ್ ಅನ್ನು ರದ್ದುಗೊಳಿಸಲಾದ ನಿದರ್ಶನಗಳೂ ಇವೆ. ಸಾಂಕ್ರಾಮಿಕ ರೋಗಗಳು ಈ ಲೋಕದಲ್ಲಿ ಮಾನವರು, ಪ್ರಾಣಿಗಳು ಮತ್ತು ಸಸ್ಯಗಳ ಸಹಿತ ಎಲ್ಲ ಬಗೆಯ ಜೀವಿಗಳ ಹಳೆಯ ಸಂಗಾತಿಗಳಾಗಿವೆ. ಒಂದು ಹೋಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ಬಂದು ಬಿಡುತ್ತದೆ. ಕ್ರಿ.ಶ. 967 ಮತ್ತು 1831ರಲ್ಲಿ ಮಾರಕ ಪ್ಲೇಗ್ ಪಿಡುಗಿನಿಂದಾಗಿ ಹಜ್ ರದ್ದಾಗಿತ್ತು. 1837ರಿಂದ 1858ರವರೆಗಿನ ಎರಡು ದಶಕಗಳ ಅವಧಿಯು ಪ್ಲೇಗ್, ಕಾಲರಾ ಸಹಿತ ಹಲವು ಪಿಡುಗುಗಳ ಅವಧಿಯಾಗಿತ್ತು. ಈ ಮಧ್ಯೆ ಹಜ್ ನಡೆದಾಗ ಸಾವಿರಾರು ಯಾತ್ರಿಗಳು ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡಿದ್ದರು. ಆದ್ದರಿಂದ ಈ ಅವಧಿಯಲ್ಲಿ 1840, 1846 ಮತ್ತು 1858 ಹೀಗೆ 3 ಬಾರಿ ಹಜ್ ರದ್ದಾಗಿತ್ತು. ಇದಲ್ಲದೆ, ಕೆಲವೊಮ್ಮೆ ರಾಜಕೀಯ ಬಿಕ್ಕಟ್ಟುಗಳು ಮತ್ತು ಯುದ್ಧಗಳ ಸನ್ನಿವೇಶದಲ್ಲೂ ಯಾತ್ರಿಕರ ಭದ್ರತೆಯ ದೃಷ್ಟಿಯಿಂದ ಹಜ್ ಅನ್ನು ರದ್ದುಗೊಳಿಸಲಾದ ನಿದರ್ಶನಗಳೂ ಇವೆ.

ಇಸ್ಲಾಮ್ ಧರ್ಮದ ನಿಯಮಗಳ ಪ್ರಕಾರ, ಶಾರೀರಿಕವಾಗಿ ಮತ್ತು ಆರ್ಥಿಕವಾಗಿ ಮಕ್ಕಾ ನಗರದ ತನಕ ಪ್ರಯಾಣಿಸಿ ಹಿಂದಿರುಗುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಜೀವನದಲ್ಲೊಮ್ಮೆ ಹಜ್ ಕಡ್ಡಾಯವಾಗಿದೆ. ಆದರೂ, ಜೀವನದಲ್ಲೊಮ್ಮೆ ಹಜ್‌ಗೆ ಹೋಗಬೇಕೆಂಬುದು ಹೆಚ್ಚಿನೆಲ್ಲಾ ಮುಸ್ಲಿಮರ ಮಹತ್ವಾಕಾಂಕ್ಷೆಯಾಗಿರುತ್ತದೆ. ತುಂಬಾ ಶ್ರೀಮಂತರಲ್ಲದ ಅದೆಷ್ಟೋ ಮಂದಿ, ಹಲವಾರು ವರ್ಷಗಳ ಅವಧಿಯಲ್ಲಿ ತಾವು ಸ್ವಲ್ಪ ಸ್ವಲ್ಪವಾಗಿ ಉಳಿತಾಯಮಾಡಿ ಸಂಗ್ರಹಿಸಿದ ಹಣದಿಂದ ಹಜ್‌ಗೆ ಹೋಗಲು ಸಿದ್ಧತೆ ನಡೆಸಿರುತ್ತಾರೆ. ಅಂತಹ ಅನೇಕ ಮಂದಿ ಈ ಬಾರಿ ತುಂಬಾ ನಿರಾಶರಾಗಿದ್ದಾರೆ.

***

ಸುಸಂಘಟಿತ ವಿಶ್ವ ಸಮ್ಮೇಳನ 
ವಿಶ್ವ ಭ್ರಾತೃತ್ವದ ದ್ಯೋತಕವಾಗಿ ಹಜ್ ವೇಳೆ ಪುರುಷರೆಲ್ಲ ಒಂದೇ ಬಗೆಯ ಸರಳ, ಬಿಳಿಯ ಸಮವಸ್ತ್ರದಲ್ಲಿರುತ್ತಾರೆ. ಆ ಸಮವಸ್ತ್ರವು ಹತ್ತಿಯಿಂದ ತಯಾರಿಸಿದ, ಹೊಲಿಗೆ ಇಲ್ಲದ, ಎರಡು ಶಾಲುಗಳ ರೂಪದಲ್ಲಿರುತ್ತದೆ. ಯಾತ್ರಿಕರು ಅದರಲ್ಲಿ ಒಂದು ವಸ್ತ್ರವನ್ನು ಲುಂಗಿಯಂತೆ ಧರಿಸಿ ಇನ್ನೊಂದನ್ನು ಮೇಲ್ವಸ್ತ್ರವಾಗಿ ಬಳಸುತ್ತಾರೆ. ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳಿಂದ ಬರುವ, ತೀರಾ ವಿಭಿನ್ನ ಭಾಷೆಗಳನ್ನು ಮಾತನಾಡುವ ಮತ್ತು ವಿಭಿನ್ನ ವರ್ಣ ಹಾಗೂ ಜನಾಂಗಗಳನ್ನು ಪ್ರತಿನಿಧಿಸುವ ಈ ಯಾತ್ರಿಕರೆಲ್ಲ ಒಟ್ಟಾಗಿ ವಿಶ್ವದ ಸೃಷ್ಟಿಕರ್ತನಾದ ಅಲ್ಲಾಹನನ್ನು ಮನಸಾರೆ ಸ್ಮರಿಸುತ್ತಿರುತ್ತಾರೆ. ಅವರೆಲ್ಲಾ ಒಕ್ಕೊರಲಿನಿಂದ ಅವನೇ ಮಹಾನನೆಂಬ ಘೋಷಣೆ ಕೂಗುತ್ತಿರುತ್ತಾರೆ. ಜಗತ್ತಿನ ಈ ಅತಿದೊಡ್ಡ ವಾರ್ಷಿಕ ಸಮ್ಮೇಳನವು ತನ್ನ ಅತ್ಯಂತ ಸುಸಜ್ಜಿತ, ಸುಸಂಘಟಿತ ಹಾಗೂ ಶಿಸ್ತು ಬದ್ಧ ಸ್ವರೂಪಕ್ಕಾಗಿ ಖ್ಯಾತವಾಗಿದೆ. ಕಳೆದ ವರ್ಷ ಜಗತ್ತಿನಲ್ಲಿ ಹಲವೆಡೆ ಎಬೋಲಾದಂತಹ ಮಹಾಮಾರಿಗಳ ಕಾಟವಿದ್ದಾಗಲೂ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ತಲೆದೋರದಂತೆ ಹಜ್ ವಿಶ್ವ ಸಮ್ಮೇಳನವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಸೌದಿ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿತ್ತು.

***

ಆಧ್ಯಾತ್ಮಿಕ ಆಯಾಮ  
ಇಸ್ಲಾಮ್ ಧರ್ಮದಲ್ಲಿರುವ ಬೇರೆಲ್ಲ ಆರಾಧನಾ ಕರ್ಮಗಳಂತೆ ಹಜ್‌ನಲ್ಲೂ ಮುಖ್ಯ ಉದ್ದೇಶ, ಪ್ರತಿಯೊಬ್ಬನ ಮನದೊಳಗೆ ಅಲ್ಲಾಹನ ಸ್ಮರಣೆಯನ್ನು ಹಾಗೂ ಅವನ ಮಹಿಮೆ ಮತ್ತು ಪ್ರಭುತ್ವದ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಮತ್ತು ಅವನಿಗೆ ಶರಣಾಗಿ, ವಿಧೇಯರಾಗಿ ಬದುಕುವ ಸಂಕಲ್ಪವನ್ನು ನವೀಕರಿಸುವುದೇ ಆಗಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಹಜ್ ಯಾತ್ರೆಯುದ್ದಕ್ಕೂ ಸೃಷ್ಟಿಕರ್ತನಾದ ಅಲ್ಲಾಹನೇ ಎಲ್ಲ ಭಕ್ತರ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರ ಬಿಂದುವಾಗಿರುತ್ತಾನೆ. ಹಜ್ ಋತುವಿನಲ್ಲಿ ಹಜ್ ಯಾತ್ರಿಕರು ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಇರುವ ಧರ್ಮ ನಿಷ್ಠ ಮುಸ್ಲಿಮರು, ಹಗಲಿರುಳೆನ್ನದೆ, ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಾ, ಅವನ ವಿವಿಧ ನಾಮಗಳನ್ನು ಉಚ್ಚರಿಸುತ್ತಾ, ಅವನ ಅನನ್ಯ, ಅಪಾರ ಶಕ್ತಿ ಸಾಮರ್ಥ್ಯಗಳನ್ನು ಮತ್ತು ಮಹಿಮೆಯನ್ನು ಪ್ರಸ್ತಾಪಿಸುತ್ತಾ, ಅವನ ಮುಂದೆ ಸಂಪೂರ್ಣ ಹಾಗೂ ನಿಶ್ಶರ್ತ ಶರಣಾಗತಿಯನ್ನು ಪ್ರಕಟಿಸುತ್ತಾ, ಬದುಕಿನುದ್ದಕ್ಕೂ ಅವನ ಆದೇಶಗಳನ್ನು ಪಾಲಿಸುತ್ತಾ ಅವನಿಗೆ ಮಾತ್ರ ನಿಷ್ಠರಾಗಿ ಬದುಕುತ್ತೇವೆ ಎಂಬ ಬದ್ಧತೆಯನ್ನು ಘೋಷಿಸುತ್ತಾ, ಅವನ ಪ್ರಸನ್ನತೆಯನ್ನು ಮಾತ್ರ ಸದಾ ತಮ್ಮ ಧ್ಯೇಯವಾಗಿಸುತ್ತೇವೆ ಎಂಬ ಸಂಕಲ್ಪವನ್ನು ದೃಢಪಡಿಸುತ್ತಾ ಇರುತ್ತಾರೆ.

ಮಕ್ಕಾದಲ್ಲಿ ಹಜ್ ನಡೆಯುತ್ತಿರುವ ದಿನಗಳಲ್ಲೇ ಹಜ್‌ನ ವಿಸ್ತರಣೆಯ ರೂಪದಲ್ಲಿ ಜಗತ್ತಿನ ಬೇರೆಲ್ಲೆಡೆ ಮುಸ್ಲಿಮ್ ಸಮುದಾಯದವರು ಈದುಲ್ ಅಝ್‌ಹಾ ಎಂಬೊಂದು ಹಬ್ಬವನ್ನು ಆಚರಿಸುತ್ತಾರೆ. ಚಾಂದ್ರಮಾನ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್ಹಜ್ ತಿಂಗಳ 10ನೇ ದಿನ ಆಚರಿಸಲಾಗುವ ಪ್ರಸ್ತುತ ಹಬ್ಬವನ್ನು ಬಕ್ರೀದ್, ಬಲಿದಾನದ ಹಬ್ಬ, ದೊಡ್ಡ ಹಬ್ಬ ಎಂದಿತ್ಯಾದಿಯಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಹಜ್‌ನಲ್ಲಿ ಭಾಗವಹಿಸದ ಅನೇಕ ಮುಸ್ಲಿಮರು ದುಲ್ಹಜ್ ತಿಂಗಳ 1ರಿಂದ 9ನೇ ದಿನದವರೆಗೆ ನಿತ್ಯ ಉಪವಾಸ ಆಚರಿಸುತ್ತಾರೆ. ಅದರಲ್ಲೂ 9ನೇ ದಿನದ ಉಪವಾಸಕ್ಕೆ ತುಂಬಾ ಮಹತ್ವ ನೀಡುತ್ತಾರೆ. ಈ ಹಬ್ಬದ ದಿನ ಮತ್ತು ಮುಂದಿನ ಮೂರು ದಿನಗಳ ಕಾಲ ಮುಸ್ಲಿಮರೆಲ್ಲಾ ಅಲ್ಲಾಹನೇ ಎಲ್ಲರಿಗಿಂತ ಮಹಾನನು, ಅವನೊಬ್ಬನೇ ಪೂಜಾರ್ಹನು, ಪ್ರಶಂಸೆಗಳೆಲ್ಲಾ ಅವನಿಗೆ ಮಾತ್ರ ಮೀಸಲು ಎನ್ನುತ್ತಾ ಅವನ ಕೀರ್ತನೆ ಮಾಡುತ್ತಿರುತ್ತಾರೆ.

***

ಐತಿಹಾಸಿಕ ಆಯಾಮ    
ಹಜ್ ಮತ್ತು ಈದುಲ್ ಅಝ್‌ಹಾದ ಹಿಂದಿರುವ ಇತಿಹಾಸದಲ್ಲಿ ಪ್ರಧಾನವಾಗಿರುವುದು, ಪ್ರವಾದಿ ಇಬ್ರಾಹೀಮ್(ಅ) ಅವರ ಸ್ಫೂರ್ತಿದಾಯಕ, ಆದರ್ಶ ಬದುಕು ಮತ್ತು ಅವರು ಬಿಟ್ಟು ಹೋದ ಏಕದೇವತ್ವದ ಹಾಗೂ ಅಚಲ ಸತ್ಯ ನಿಷ್ಠೆಯ ಸಂದೇಶ. ಪ್ರವಾದಿ ಇಬ್ರಾಹೀಮ್ (ಅ) ನಾಲ್ಕು ಸಹಸ್ರಮಾನಗಳ ಹಿಂದೆ, ಕ್ರಿ.ಪೂ. ಎರಡನೇ ಸಹಸ್ರಮಾನದ ಆದಿಯಲ್ಲಿ ಇರಾಕ್‌ನಲ್ಲಿ ಜನಿಸಿದವರು. ಅವರ ತ್ಯಾಗ ಸಂಪನ್ನ ವ್ಯಕ್ತಿತ್ವವನ್ನು ಹಲವು ವಿಶೇಷತೆಗಳಿಗಾಗಿ ಸ್ಮರಿಸಲಾಗುತ್ತದೆ:

* ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮ್ ಎಂಬ ಜಗತ್ತಿನ ಮೂರು ಪ್ರಮುಖ ಧರ್ಮಗಳಲ್ಲಿ ಇಬ್ರಾಹೀಮ್ (ಅ)ರಿಗೆ ಅಪಾರ ಗೌರವ ಹಾಗೂ ಮಹತ್ವವಿದೆ.

* ಪ್ರಸ್ತುತ ಮೂರು ಸಮುದಾಯಗಳೂ ನಂಬುವ ಅನೇಕ ದೂತರು ಮತ್ತು ಪ್ರವಾದಿಗಳು ಇಬ್ರಾಹೀಮ್ (ಅ)ರ ಸಂತತಿಯಲ್ಲಿ ಜನಿಸಿದವರು.

* ಸ್ವತಃ ಪ್ರವಾದಿ ಮುಹಮ್ಮದ್ (ಸ), ಇಬ್ರಾಹೀಮ್ (ಅ)ರ ವಂಶಸ್ಥರು.

* ಜಗತ್ತಿನ ಯಾವುದೇ ಭಾಗದಲ್ಲಿರುವ ಮುಸ್ಲಿಮರು ತಮ್ಮ ನಿತ್ಯದ ಆರಾಧನೆಗೆ ನಿಲ್ಲುವಾಗ, ಕಡ್ಡಾಯವಾಗಿ ಮಕ್ಕಾದಲ್ಲಿರುವ ಕಾಬಾ ಎಂಬ ಮಸೀದಿಯ ದಿಕ್ಕಿಗೆ ಮುಖಮಾಡಿ ನಿಲ್ಲುತ್ತಾರೆ. ಆ ಮಸೀದಿಯನ್ನು ನಿರ್ಮಿಸಿದವರು ಇಬ್ರಾಹೀಮ್ (ಅ).

* ಹಜ್ ಮತ್ತು ಅದರ ಜೊತೆಗೆ ಬರುವ ಜಾಗತಿಕ ಹಬ್ಬದ ವೇಳೆ ಪಾಲಿಸಲಾಗುವ ಹೆಚ್ಚಿನ ಆಚರಣೆಗಳು ನೇರವಾಗಿ ಇಬ್ರಾಹೀಮ್ (ಅ) ರ ಬದುಕಿಗೆ ಸಂಬಂಧಿಸಿವೆ.

* ಪ್ರವಾದಿ ಇಬ್ರಾಹೀಮ್ (ಅ) ಈ ಲೋಕದಿಂದ ತೆರಳಿ ನಾಲ್ಕು ಸಹಸ್ರಮಾನಗಳು ಕಳೆದರೂ ಇಂದು ಕೂಡ ಅವರ ಬದುಕಿನ ಅಧ್ಯಯನ ಮಾಡುವವರಿಗೆ ಹಲವು ಅನುಕರಣೀಯ ಪಾಠಗಳು ಕಲಿಯಲು ಸಿಗುತ್ತವೆ. ಮಾತ್ರವಲ್ಲ, ಸತ್ಯನಿಷ್ಠ ಹಾಗೂ ತ್ಯಾಗಶೀಲ ಬದುಕಿಗೆ ಬೇಕಾದ ಧಾರಾಳ ಪ್ರೇರಣೆ ಮತ್ತು ಅದಮ್ಯ ಸ್ಫೂರ್ತಿ ಕೂಡಾ ಸಿಗುತ್ತದೆ.

***

ಇಬ್ರಾಹೀಮ್ (ಅ)ರ ಬದುಕಿನ ಕೆಲವು ಕಿರಣಗಳು 

ಇಬ್ರಾಹೀಮ್ (ಅ) ಇರಾಕ್ ದೇಶದ ಉರ್ ಎಂಬಲ್ಲಿ ಒಂದು ವಿಗ್ರಹಾರಾಧಕ ಜನಾಂಗದಲ್ಲಿ ಜನಿಸಿದವರು. ಅವರ ತಂದೆ ವಿಗ್ರಹಾರಾಧಕ ಮಾತ್ರವಲ್ಲ ವಿಗ್ರಹ ಶಿಲ್ಪಿಯೂ ಆಗಿದ್ದನು. ಬಾಲ್ಯದಿಂದಲೇ ಸತ್ಯಶೋಧಕರಾಗಿದ್ದ ಇಬ್ರಾಹೀಮರು ಯಾವುದನ್ನೂ ಸಂಪ್ರದಾಯದ ಹೆಸರಲ್ಲಿ ಕಣ್ಣು ಮುಚ್ಚಿ ಸ್ವೀಕರಿಸಲು ಸಿದ್ಧರಿರಲಿಲ್ಲ. ಅವರು ತಮಗೆ ಸರಿಕಾಣದ ಎಲ್ಲವನ್ನೂ ಪ್ರಶ್ನಿಸತೊಡಗಿದ್ದರು. ಚಿಂತನ ಶೀಲರಾಗಿದ್ದ ಇಬ್ರಾಹೀಮ್ (ಅ) ತಮ್ಮ ಹದಿಹರೆಯದಲ್ಲಿ ಪ್ರಕೃತಿಯ ಸೂಕ್ಷ್ಮ ವೀಕ್ಷಕರಾಗಿದ್ದರು. ನಿಸರ್ಗದಲ್ಲಿ ಸತ್ಯವನ್ನು ಹುಡುಕುತ್ತಿದ್ದರು. ಅವರಿದ್ದ ಸಮಾಜದಲ್ಲಿ ಜನರು ತಾರೆ, ಚಂದ್ರ, ಸೂರ್ಯ ಇತ್ಯಾದಿ ಹಲವು ವಸ್ತುಗಳನ್ನು ದೇವರೆಂದು ನಂಬಿ ಪೂಜಿಸುತ್ತಿದ್ದರು. ಅಂತಹ ಸಮಾಜದಲ್ಲಿ ಇಬ್ರಾಹೀಮರು ಆಕಾಶಲೋಕವನ್ನು ನೋಡಿ ಸತ್ಯದ ಹಾದಿಗೆ ಮಾರ್ಗದರ್ಶನ ಪಡೆಯಲು ಶ್ರಮಿಸಿದ್ದರು. ನಕ್ಷತ್ರದ ಸೊಬಗು ಕಂಡು ಅದು ದೇವರಿರಬಹುದೇ ಎಂದು ತರ್ಕಿಸಿದ್ದರು. ಚಂದ್ರನನ್ನು ಕಂಡಾಗ ಅವರಿಗೆ ಅದು ದೇವರಿರಬಹುದೇ ಎಂಬ ಜಿಜ್ಞಾಸೆ ಕಾಡಿತ್ತು. ಸೂರ್ಯನ ವೈಭವ ಕಂಡು ಅದು ಬಹುದೊಡ್ಡ ದೇವರಿರಬಹುದು ಎಂದು ಸಂಶಯಿಸುವಷ್ಟು ಪ್ರಭಾವಿತರಾಗಿದ್ದರು. ಕೊನೆಗೆ, ನಿರ್ದಿಷ್ಟ ಸಮಯಗಳಲ್ಲಿ ಪ್ರತ್ಯಕ್ಷರಾಗಿ ಕಣ್ಮರೆಯಾಗುವ ಪ್ರಸ್ತುತ ಎಲ್ಲ ವಸ್ತುಗಳು ಯಾವುದೋ ವ್ಯವಸ್ಥೆಯ ದಾಸರಾಗಿದ್ದು, ತನ್ನ ಸೃಷ್ಟಿಕರ್ತರಂತೂ ಅಲ್ಲ ಎಂಬುದು ಅವರಿಗೆ ಮನವರಿಕೆಯಾಯಿತು. (ವಿವರಗಳಿಗೆ - ಪವಿತ್ರ ಕುರ್‌ಆನ್, 6: 75ರಿಂದ 80)

ಜನರು, ತಾವೇ ಸೃಷ್ಟಿಸಿಕೊಂಡ ವಸ್ತುಗಳನ್ನು ದೇವರೆಂದು ನಂಬಿ ಪೂಜಿಸುವ ಸಂಪ್ರದಾಯವನ್ನು ಅವರು ಪ್ರಶ್ನಿಸಿದರು. ತಮ್ಮ ಕುಟುಂಬದವರ ವಿಗ್ರಹಾಲಯದೊಳಗೆ ಹೋಗಿ ಅಲ್ಲಿದ್ದ ವಿಗ್ರಹಗಳನ್ನು ಮಾತನಾಡಿಸಲು ಪ್ರಯತ್ನಿಸಿದ್ದರು. ವಿಗ್ರಹಗಳಿಂದ ಉತ್ತರ ಸಿಗದಿದ್ದಾಗ ಅವುಗಳನ್ನು ಕಿತ್ತೊಗೆದು ಊರವರ ಕೋಪಕ್ಕೆ ತುತ್ತಾಗಿದ್ದರು.

ಸತ್ಯವನ್ನರಿಯಲು ಸದಾ ಚಡಪಡಿಸುತ್ತಿದ್ದ ಇಬ್ರಾಹೀಮರಿಗೆ, ಕೊನೆಗೂ ದಿವ್ಯ ಮಾರ್ಗದರ್ಶನ ಪ್ರಾಪ್ತವಾಯಿತು. ಬಾಲ್ಯದಿಂದ ಅವರನ್ನು ಕಾಡುತ್ತಿದ್ದ ಅವರೊಳಗಿನ ಪ್ರಶ್ನೆಗಳ ಸರಮಾಲೆಗೆ ಉತ್ತರ ಸಿಕ್ಕಿ ಬಿಟ್ಟಿತು. ಆ ಬಳಿಕ ಅವರು ಎಲ್ಲ ಮಿಥ್ಯ ದೇವರುಗಳ ದೇವತ್ವವನ್ನು ಪ್ರಶ್ನಿಸುತ್ತಾ ಜನರಿಗೆ ಅವರ ನೈಜ ಸೃಷ್ಟಿಕರ್ತನನ್ನು ಪರಿಚಯಿಸಲು ಆರಂಭಿಸಿದರು. ಇಬ್ರಾಹೀಮ್ (ಅ)ರ ಕಾಲದಲ್ಲಿ ದೊರೆಯಾಗಿದ್ದ ನಮ್ರೂದ್ ನಿಗೆ ದೇವನಿಷ್ಠೆಗಿಂತ ರಾಜನಿಷ್ಠೆ ಮುಖ್ಯವಾಗಿತ್ತು. ಯಾವ ದೇವರೂ ತನಗಿಂತ ಮೇಲಲ್ಲ ಎಂಬ ಅಹಂಭಾವ ಅವನಲ್ಲಿತ್ತು. ಅವನೊಂದಿಗೆ ಮುಖಾಮುಖಿಯಾದಾಗ ಇಬ್ರಾಹೀಮರು ಎದೆಗುಂದದೆ, ಅವನ ಭವ್ಯ ಅರಮನೆಯಲ್ಲೇ, ಅವನಿಗೆ ಅವನ ಇತಿಮಿತಿಗಳನ್ನು ತಿಳಿಸಿದರು ಮತ್ತು ಅವನ ಮುಂದೆ ಅಲ್ಲಾಹನ ಅಮಿತ ಸಾಮರ್ಥ್ಯಗಳನ್ನು ವಿವರಿಸಿದರು. (ವಿವರಗಳಿಗೆ -ಪವಿತ್ರ ಕುರ್‌ಆನ್ 2:258) ಒಂದು ಹಂತದಲ್ಲಿ ಇಬ್ರಾಹೀಮ್ (ಅ)ರು ಅಲ್ಲಾಹನ ಸೂಚನೆಯ ಮೇರೆಗೆ ತಮ್ಮ ಪತ್ನಿ ಮತ್ತು ಪುತ್ರನನ್ನು ನಿರ್ಜನ ಮರಳುಗಾಡಿನಲ್ಲಿ ಬಿಟ್ಟು ಬಂದಿದ್ದರು. ಇನ್ನೊಂದು ಹಂತದಲ್ಲಿ ಸ್ವಪ್ನ ಮೂಲಕ ದೊರೆತ ದಿವ್ಯ ಸೂಚನೆಯಂತೆ ತಮ್ಮ ಪುತ್ರನ ಬಲಿದಾನ ನೀಡುವುದಕ್ಕೂ ಅವರು ಸಜ್ಜಾಗಿದ್ದರು. ದೇವಾದೇಶ ಪ್ರಕಾರ, ಏಕದೇವತ್ವದ ಜಾಗತಿಕ ಕೇಂದ್ರವಾಗಿ ಮಕ್ಕಾದ ಪವಿತ್ರ ಕಾಬಾ ಮಸೀದಿಯನ್ನು ಇಬ್ರಾಹೀಮ(ಅ)ರು ನಿರ್ಮಿಸಿದ್ದರು. ಹಜ್ ಮತ್ತು ಬಕ್ರೀದ್ ಸಂದರ್ಭಗಳಲ್ಲಿ ಇಬ್ರಾಹೀಮ್ (ಅ)ರ ಬದುಕು, ಅವರು ಸಾರಿದ, ರಾಜಿ ಇಲ್ಲದ, ಕಟ್ಟುನಿಟ್ಟಿನ ಏಕದೇವತ್ವದ ಸಂದೇಶ ಮತ್ತು ಅವರ ಆದರ್ಶ ಜೀವನದ ಸ್ಫೂರ್ತಿದಾಯಕ ಘಟನೆಗಳು ಇವೆಲ್ಲವನ್ನೂ ಸ್ಮರಿಸಲಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)