varthabharthi


ಅನುಗಾಲ

ನೀನು ಯಾರು?

ವಾರ್ತಾ ಭಾರತಿ : 6 Aug, 2020

ಅಜ್ಞಾನ ತುಂಬಿದರೆ ಅಧಿಕಾರವು ಜಾತಿಯ ಆಧಾರದಲ್ಲಿ ಅರ್ಹತೆಯನ್ನು ತೀರ್ಮಾನಿಸುತ್ತದೆ. ಇದು ಆಗಾಗ ನಡೆಯುವುದರಿಂದ ಹಾಗೂ ಚರಿತ್ರೆ ಮತ್ತು ವರ್ತಮಾನದ ಮಾಧ್ಯಮಗಳು ಇವನ್ನು ಸ್ಥಾಪಿತ ಹಿತಾಸಕ್ತಿಯ ಪರವಾಗಿ ವಿವರಿಸುತ್ತವೆಯಾದ್ದರಿಂದ ಇವು ಬೆಳಕು ಕಾಣುವುದೇ ಇಲ್ಲ. ಅನೇಕ ಬಾರಿ ಮುಖಕ್ಕೆ ಉಗುಳಿ ಆನಂತರ ಕೈವಸ್ತ್ರವನ್ನು ನೀಡಿ ‘ಉಗುಳನ್ನು ಒರೆಸಿಕೊಂಡು ಶುಚಿಗೊಳಿಸಿ’ ಎಂಬಂತೆ ವ್ಯವಸ್ಥೆ ನಡೆದುಕೊಳ್ಳುತ್ತದೆ. ಕಾಲಯಾನದಲ್ಲಿ ಸದಾ ಇಂತಹ ಸುಳ್ಳು ಸಂದೇಶಗಳೇ ರವಾನೆಯಾಗುತ್ತಿರುತ್ತವೆ.

ಮಹಾಭಾರತದ ಕರ್ಣ ಸೂರ್ಯನ ಮಗ. ಆದರೆ ಕತ್ತಲಲ್ಲಿ ಹುಟ್ಟಿ ಬದುಕಲ್ಲಿ ಬೆಳಕನ್ನೇ ಕಾಣದೆ ಕತ್ತಲಲ್ಲೇ ಸತ್ತವನು. ಅಂಗರಾಜ್ಯಾಧಿಪತಿಯೆಂಬ ತಾಂತ್ರಿಕ ಸ್ಥಾನ-ಮಾನಕ್ಕೆ ಒಡೆಯನಾದರೂ ಅವಮಾನಾಧಿಪತಿಯಾಗಿಯೇ ಉಳಿದವನು. ವ್ಯಕ್ತಿಯೊಬ್ಬ ದಕ್ಕಬೇಕಾದ ಸಾಮಾಜಿಕ ಸ್ಥಾನಮಾನವಂಚಿತನಾಗಿ ಕೊನೆಯವರೆಗೂ ತಾನು ಯಾರು ಎಂಬುದನ್ನು ಹೇಳಲಾಗದೆ ದುರಂತ ಸಾವನ್ನು ಕಾಣುವ ಪಾತ್ರ. ಜಾತಿಯು ಸಮಾಜದ ಸ್ವೀಕೃತ ಮೌಲ್ಯಗಳಲ್ಲಿ ಎಷ್ಟು ಪ್ರಧಾನ ಪಾತ್ರವನ್ನು ವಹಿಸುತ್ತದೆಂಬುದಕ್ಕೆ ಕರ್ಣ ಒಬ್ಬ ಜ್ವಲಂತ ನಿದರ್ಶನ. ಪುರಾಣಗಳನ್ನು ನಂಬುವುದು, ಗೌರವಿಸುವುದು ಅವು ನಿಜವಾಗಿ ನಡೆದಿವೆಯೆಂಬುದಕ್ಕಲ್ಲ. ಇಷ್ಟಕ್ಕೂ ಅವು ಇತಿಹಾಸದ ಭಾಗಗಳಲ್ಲ. ಆದರೆ ಅವು ಪ್ರತಿಫಲಿಸುವ ಮೌಲ್ಯ-ಅಪಮೌಲ್ಯಗಳು ನೆನಪಿರಬೇಕಾದ್ದು ಕಾಲದುದ್ದಕ್ಕೂ ವಿವಿಧ ರೂಪ-ಆಕಾರಗಳಲ್ಲಿ ಪುನರುಜ್ಜೀವಿಸುತ್ತವೆಂಬುದಕ್ಕೆ. ಅಜ್ಞಾನ ತುಂಬಿದರೆ ಅಧಿಕಾರವು ಜಾತಿಯ ಆಧಾರದಲ್ಲಿ ಅರ್ಹತೆಯನ್ನು ತೀರ್ಮಾನಿಸುತ್ತದೆ. ಇದು ಆಗಾಗ ನಡೆಯುವುದರಿಂದ ಹಾಗೂ ಚರಿತ್ರೆ ಮತ್ತು ವರ್ತಮಾನದ ಮಾಧ್ಯಮಗಳು ಇವನ್ನು ಸ್ಥಾಪಿತ ಹಿತಾಸಕ್ತಿಯ ಪರವಾಗಿ ವಿವರಿಸುತ್ತವೆಯಾದ್ದರಿಂದ ಇವು ಬೆಳಕು ಕಾಣುವುದೇ ಇಲ್ಲ. ಅನೇಕ ಬಾರಿ ಮುಖಕ್ಕೆ ಉಗುಳಿ ಆನಂತರ ಕೈವಸ್ತ್ರವನ್ನು ನೀಡಿ ‘ಉಗುಳನ್ನು ಒರೆಸಿಕೊಂಡು ಶುಚಿಗೊಳಿಸಿ’ ಎಂಬಂತೆ ವ್ಯವಸ್ಥೆ ನಡೆದುಕೊಳ್ಳುತ್ತದೆ. ಕಾಲಯಾನದಲ್ಲಿ ಸದಾ ಇಂತಹ ಸುಳ್ಳು ಸಂದೇಶಗಳೇ ರವಾನೆಯಾಗುತ್ತಿರುತ್ತವೆ.

ಜಾತಿಯ, ವರ್ಗದ, ಸಮಾನತೆಯು ಬೇಕಾಗಿರುವುದೇ ಈ ಕಾರಣಕ್ಕೆ. ದಮನಿತರ ಪರವಾಗಿ ಅಥವಾ ಅಧಿಕಾರದ ವಿರುದ್ಧವಾಗಿ ಮಾತನಾಡುವುದೇ ದೇಶದ್ರೋಹವೆಂಬಂತೆ ಬಿಂಬಿಸಲ್ಪಡುವ ಈ ಕಾಲದಲ್ಲಿ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್ ಮುಂತಾದವರ ಬುದ್ಧಿಮತ್ತೆಯಾಗಲೀ, ಪ್ರಜ್ಞಾವಂತಿಕೆಯಾಗಲೀ ಅಧಿಕಾರಸ್ಥರ ಅನುಕಂಪವನ್ನಾಗಲೀ ಗಮನವನ್ನಾಗಲೀ ಸೆಳೆಯುವುದಿಲ್ಲ. ಅವರ ಮಾನವನ್ನು ಕೆಲವೇ ಕೆಲವು ಪೊಲೀಸ್ ಅಧಿಕಾರಿಗಳು ಅಳೆಯುತ್ತಾರೆ. ಮತ್ತು ಈ ಪೊಲೀಸ್ ಅಧಿಕಾರಿಳು ನೀಡುವ ‘ಮೇಲ್ನೋಟದ ಸಾಕ್ಷಗಳ’ ಆಧಾರದಲ್ಲಿ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಸಾಕ್ರೆಟಿಸ್ ಮತ್ತೆ ಮತ್ತೆ ಸಾಯುತ್ತಿರುತ್ತಾನೆ. ಇಂತಹ ಪರಿಸ್ಥಿತಿ ಅನೇಕರಿಗೆ ಬಂದಿದೆ. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿದ್ದ, ಖ್ಯಾತ ನಾಟಕಕಾರರೂ ಚಲನಚಿತ್ರ ನಿರ್ದೇಶಕರೂ, ಸಂಗೀತಗಾರರೂ ಅಲ್ಲದೆ ಸ್ವತಃ ನಟರೂ ಆಗಿದ್ದ ಬಿ.ವಿ.ಕಾರಂತರು ಭೋಪಾಲದಲ್ಲಿ ಇಂತಹ ಘೋರ ಅವಮಾನವನ್ನು ಅನುಭವಿಸಿ ಅನೇಕ ತಿಂಗಳುಗಳ ಕಾಲ ಜೈಲುವಾಸ ಮಾಡಿ ಆನಂತರ ನಿರ್ದೋಷಿಯೆಂದು ಪರಿಗಣಿಸಲ್ಪಟ್ಟು ಹೊರಬಂದರು. ಅಂದರೆ ದಮನನೀತಿಗೆ ಜಾತಿ-ಮತಗಳ, ವರ್ಗಗಳ ಹಂಗಿಲ್ಲ. ಆದರೂ ಹಣ, ಜಾತಿಯ ಪ್ರಭಾವ ಕೆಲವರನ್ನಾದರೂ ಸುಳ್ಳು ದೌರ್ಜನ್ಯದಿಂದ ಮುಕ್ತಿಗೊಳಿಸುತ್ತದೆ. ಮೀಸಲಾತಿಯು ಗುಣಮಟ್ಟಕ್ಕೆ ಅನ್ಯಾಯವೆಸಗುತ್ತದೆಂದು ಹುಯಿಲೆಬ್ಬಿಸುವವರೂ ಮೀಸಲಾತಿಯಿಲ್ಲದಿದ್ದರೆ ಆಧುನಿಕ ಸಮಾಜದಲ್ಲಿ ಜಾತಿಯೇ ಕಾರಣವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದ ಬಹುಪಾಲು ಜನರು ಪ್ರಾಣಿಗಳಂತೆ ಜೀವಿಸಬೇಕಾಗುತ್ತಿತ್ತೆಂಬುದನ್ನು ಮರೆಯುತ್ತಾರೆ. ದುರಂತವೆಂದರೆ ಇವರನ್ನು ಪ್ರತಿನಿಧಿಸುವ ಅಧಿಕಾರಸ್ಥರೂ ತಮ್ಮ ಅನುಕೂಲವನ್ನು ನೋಡುತ್ತಿರುತ್ತಾರೆಯೇ ಹೊರತು ತಮ್ಮ ಬೆಂಬಲಿಗರ ಹಿತವನ್ನು ಕಾಯುವುದಿಲ್ಲ. (ಉತ್ತರ ಪ್ರದೇಶದ ಮಾಯಾವತಿ ಇಂತಹ ವಿರೋಧಾಭಾಸಕ್ಕೆ ಬಹುದೊಡ್ಡ ಉದಾಹರಣೆ.)

*

ಸ್ವಪ್ನಾ ಬರ್ಮನ್ ಎಂಬವಳನ್ನು ದೇಶದ ಕ್ರೀಡಾಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. 1996ನೇ ಅಕ್ಟೋಬರ್ 23ರಂದು ಹುಟ್ಟಿದ ಈಕೆ ಪಶ್ಚಿಮ ಬಂಗಾಳದ ಉತ್ತರಭಾಗದ ಜಲ್‌ಪೈಗುರಿಯ ಒಂದು ಕುಗ್ರಾಮದಲ್ಲಿ ವಾಸವಿರುವ ಪರಿಯಾ ಜನಾಂಗದ ಕೊಚ್ ರಾಜ್‌ವಂಶಿ ಎಂಬ ಪರಿಶಿಷ್ಟ ಜಾತಿಗೆ ಸೇರಿದ ರಿಕ್ಷಾಚಾಲಕನೊಬ್ಬನ ಮಗಳು. (‘ರಾಜ್‌ವಂಶಿ’ ಎಂಬ ಪದವೇ ಈಕೆಯ ಸಂದರ್ಭದಲ್ಲಿ ಎಷ್ಟು ಕ್ರೂರ ವ್ಯಂಗ್ಯ!)

ರಾಜ್‌ವಂಶಿ ಎಂಬುದು ಹೆಸರಿಗೆ ತಕ್ಕಂತೆ ಒಂದು ರಾಜಮನೆತನ ಹೌದು. ಸ್ವಾತಂತ್ರ್ಯಪೂರ್ವದಲ್ಲಿ ಕೂಚ್ ಬಿಹಾರ್ ಸಂಸ್ಥಾನವನ್ನು ಆಳಿದವರು. ಅವರು ಮತ್ತು ಅವರ ಸಮೀಪವರ್ತಿಗಳು ಶ್ರೀಮಂತರು. ಇನ್ನುಳಿದವರು ಸ್ವಪ್ನಾ ಕುಟುಂಬದಂತೆ ಬಡವರು. ಈ ಜಾತಿಯವರು ಭಾರತದ ಪ.ಬಂಗಾಳ, ಅಸ್ಸಾಂ ಮತ್ತು ಮೇಘಾಲಯದಲ್ಲೂ ಬಾಂಗ್ಲಾದೇಶದ ಭಾರತದ ಗಡಿಭಾಗಕ್ಕೆ ಒತ್ತಾಗಿಯೂ ವಾಸವಿದ್ದಾರೆ. ಸುಮಾರು ಎರಡು ಕೋಟಿಗೆ ಸಮೀಪವಿರುವ ಜನಸಂಖ್ಯೆ ಭಾರತದಲ್ಲೇ ಇದೆ. ಜನಪ್ರಿಯ ವ್ಯಕ್ತಿಗಳನ್ನು ಹೆಸರಿಸುವುದಾದರೆ ಜೈಪುರದ ಮಹಾರಾಣಿ ದಿವಂಗತ ಗಾಯತ್ರಿದೇವಿ (ಈಕೆ ಲೋಕಸಭಾ ಸದಸ್ಯರಾಗಿದ್ದರು; ಈಕೆಯ ಪತಿ ವಿದೇಶದಲ್ಲಿ ಭಾರತದ ರಾಯಭಾರಿಯಾಗಿದ್ದವರು.) ಈ ‘ರಾಜ್‌ವಂಶೀ’ಯರು. ಅಸ್ಸಾಮಿನ ಮುಖ್ಯಮಂತ್ರಿಯಾಗಿದ್ದ ಶರತ್‌ಚಂದ್ರಸಿನ್ಹಾ, ಪ.ಬಂಗಾಳದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಉಪೇಂದ್ರನಾಥ ಬರ್ಮನ್ ಇವರನ್ನು ಹೆಸರಿಸಬಹುದು. ನೇಪಾಳದಲ್ಲೂ ಗಣನೀಯ ಸಂಖ್ಯೆಯ ರಾಜವಂಶಿಗಳಿದ್ದಾರೆ.

ಸ್ವಪ್ನಾಳ ತಾಯಿ ಕೂಲಿಕೆಲಸ ಮಾಡುತ್ತಿದ್ದವಳು. ನಾಲ್ಕು ಮಕ್ಕಳಲ್ಲಿ ಸ್ವಪ್ನಾ ಒಬ್ಬಳು. ಪುರಾಣದ ಚಂದ್ರಹಾಸನಿಗೆ ಒಂದು ಪಾದದಲ್ಲಿ ಆರು ಬೆರಳುಗಳಿದ್ದರೆ ಈಕೆಗೆ ಎರಡು ಪಾದಗಳಲ್ಲೂ ಆರು ಬೆರಳುಗಳು. ಇದು ನಡೆಯುವುದಕ್ಕೂ ತೊಡಕಾಗುತ್ತಿತ್ತು. ಬಡತನ ಸಾಲದ್ದಕ್ಕೆ ಈಕೆಯ ತಂದೆ 2013ರ ಸುಮಾರಿಗೆ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿಯಬೇಕಾಯಿತು. ತಾಯಿ ಗಂಡನ ಆರೈಕೆಗಾಗಿ ಕೆಲಸ ಬಿಟ್ಟರೆ, ಓದುತ್ತಿದ್ದ ಗಂಡುಮಕ್ಕಳು ಓದನ್ನು ತ್ಯಜಿಸಿ ಕೆಲಸ ಸೇರಿದರು. ಆದರೆ ಸ್ವಪ್ನಾ ಚಿಕ್ಕಂದಿನಿಂದಲೇ ಅದ್ಭುತ ಕ್ರೀಡಾ ಪ್ರತಿಭೆಯ ಹುಡುಗಿ. ಇದರಿಂದಾಗಿ ತಾಯಿ ಈಕೆಯನ್ನು ಪ್ರೋತ್ಸಾಹಿಸಿದಳು. ಇಡೀ ಕುಟುಂಬವೇ ಈಕೆಯ ಬೆಂಬಲಕ್ಕೆ ನಿಂತಿತು. ಪದವಿಯವರೆಗೆ ಸ್ವಪ್ನಾ ಓದಿದಳು. ಸ್ವಪ್ನಾ ಶಾಲಾಶಿಕ್ಷಣದ ಸಮಯದಲ್ಲಿ ಹೆಪ್ಟಾತ್ಲಾನ್ ಸ್ಪರ್ಧೆಯಲ್ಲಿ ವಿಶೇಷ ಪ್ರತಿಭೆ ಮತ್ತು ಸಾಧನೆಯನ್ನು ಪ್ರದರ್ಶಿಸಿದಳು. ಇದರಿಂದಾಗಿ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿಜಯ ಸಾಧಿಸಿದಳು. (ಕ್ರಿಕೆಟಿಗ) ರಾಹುಲ್ ದ್ರಾವಿಡ್ ಫೌಂಡೇಷನ್‌ನ ರೂ.1.5 ಲಕ್ಷ ಶಿಷ್ಯವೇತನವನ್ನು ಪಡೆದಳು. ಈ ಮತ್ತು ಇತರ ನೆರವಿನಿಂದ ತನ್ನ ಸಾಧನೆಯನ್ನು ಬೆಳೆಸಿ ಮೆರೆಸಿ 2016ರ ದಕ್ಷಿಣ ಏಶ್ಯ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಳು. 2017ರ ಏಶ್ಯನ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಳು.

ಸ್ವಪ್ನಾಳ ಸಾಧನೆಯ ಕಿರೀಟಕ್ಕೆ ನಿಜಕ್ಕೂ ಗರಿ ಬಂದದ್ದು 2018ರ ಏಶ್ಯನ್ ಗೇಮ್ಸ್‌ನಲ್ಲಿ. ಆಕೆಯ ಮೂಲಕ ಭಾರತವು ಮೊದಲ ಬಾರಿಗೆ ಹೆಪ್ಟಾತ್ಲಾನ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಬಾಚಿಕೊಂಡಿತು; ಅರ್ಥಾತ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಅವಳಾಗಿದ್ದಳು. ಇದಕ್ಕಾಗಿ ಆಕೆಗೆ ಪ.ಬಂಗಾಳ ಸರಕಾರವು ರೂ.10 ಲಕ್ಷ ಬಹುಮಾನವನ್ನು ನೀಡಿತು. ರಾಜ್‌ವಂಶಿಯೆಂಬ ಪರಿಶಿಷ್ಟ ಜಾತಿಯ ಹುಡುಗಿಯೊಬ್ಬಳು ಮಾಡಿದ ಸಾಧನೆಗೆ ಸಾಕಷ್ಟು ಮಂದಿ ಹುಬ್ಬೇರಿಸಿದರು. ಕೆಲವರು ಮತ್ಸರಿಸಿದರು ಕೂಡಾ. ಆಕೆಯಿಂದಾಗಿ ಆಕೆಯ ಕುಟುಂಬ, ಜಾತಿ ಮತ್ತು ಊರು ಒಂದೇ ಬಾರಿಗೆ ಪ್ರಸಿದ್ಧವಾಯಿತು. ಆದರೆ ಅವಳಿಗೆ ಉದ್ಯೋಗ ಮಾತ್ರ ಕನಸಾಗಿಯೇ ಉಳಿಯಿತು. ಬದಲಾಗಿ ಆಕೆಯ ಕಿರಿಯ ಸೋದರನಿಗೆ ಒಂದು ಕೆಳದರ್ಜೆಯ ಉದ್ಯೋಗ ಸಿಕ್ಕಿತು! (ಅದೇ ವರ್ಷ ಅಸ್ಸಾಮಿನ ಹಿಮಾದಾಸ್ 400 ಮೀಟರ್ ಓಟ ಮತ್ತು ರಿಲೇ ಸ್ಪರ್ಧೆಗಳಲ್ಲಿ ಬಂಗಾರದ ಪದಕವನ್ನು ಜಯಿಸಿ ಅಸ್ಸಾಮಿನಲ್ಲಿ ಇಂತಹದ್ದೇ ಕೀರ್ತಿ ಪಡೆದಿದ್ದಳು ಮತ್ತು ಡಿವೈಎಸ್‌ಪಿ ಉದ್ಯೋಗವನ್ನು ಪಡೆದಿದ್ದಳು!) 2019ರಲ್ಲಿ ಸ್ವಪ್ನಾಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ದಕ್ಕಿತು. ಇಂತಹ ಸ್ವಪ್ನಾ ಇರುವುದು ಟೀಸ್ಟಾ ನದಿತೀರದ ಕಾಡಿನ ನಡುವೆ. ಸುತ್ತ ಮೀಸಲು ಅರಣ್ಯ. ಲಾಗಾಯ್ತಿನಿಂದ ಅಲ್ಲಿನ ಪರಿಸ್ಥಿತಿಯೆಂದರೆ ಮಳೆಗಾಲದಲ್ಲಿ ನದಿಯಲ್ಲಿ ತೇಲಿಬಂದ ಮರಗಳನ್ನು ಊರಿನವರು ದಡಕ್ಕೆ ತಂದು ಪ್ರಾಯಃ ಕೆಲವರಾದರೂ ಅದನ್ನು ಮಾರಿ ಹಣಗಳಿಸುತ್ತಿದ್ದರು. ಅರಣ್ಯ ಇಲಾಖೆಯವರು ಇದನ್ನು ತಿಳಿದೋ ತಿಳಿಯದೆಯೋ ನಿರ್ಲಕ್ಷಿಸುತ್ತಿದ್ದರು. ಅವೇನೋ ಭಾರೀ ಪ್ರಮಾಣದ ಸಾಗಣೆಯ ಜಾಲಗಳಲ್ಲ. ಹಲವು ಬಾರಿ ದಡ ಸೇರಿದ ಮರದ ದಿಮ್ಮಿಗಳು ಯಾರೂ ಸಾಗಿಸದೆ ಅಲ್ಲೇ ಉಳಿಯುತ್ತಿದ್ದವು.

2020ರ ಜುಲೈ 13ರಂದು ಈ ಅರಣ್ಯವ್ಯಾಪ್ತಿಯ ವಲಯ ಅರಣ್ಯಾಧಿ ಕಾರಿ, ಗಸ್ತು ಅಧಿಕಾರಿಗಳು 6 ಮಂದಿ ಸಶಸ್ತ್ರ ಪಡೆಗಳೊಂದಿಗೆೆ ಎರಡು ಜೀಪುಗಳಲ್ಲಿ ಸ್ವಪ್ನಾಳ ಮನೆಗೆ ದಾಳಿ ಮಾಡಿದರು. ಸಮೀಪದಲ್ಲಿ ಮರಗಳ ದಿಮ್ಮಿಗಳಿವೆಯೆಂದೂ ಅವುಗಳ ದಾಖಲಾತಿಗಳನ್ನು ತೋರಿಸಬೇಕೆಂದೂ ಗದರಿಸಿದರು. ಆಕೆ ತನಗೇನೂ ಗೊತ್ತಿಲ್ಲವೆಂದು ಹೇಳಿದರೂ ಆಕೆಯನ್ನು ಮತ್ತು ಆಕೆಯ ಕಿರಿಯ ಸೋದರನೊಬ್ಬನನ್ನು ಮೈಕೈ ಹಿಡಿದು ಬೆದರಿಸಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸುವುದಾಗಿಯೂ ಅವರು ತಪ್ಪೊಪ್ಪಿಕೊಳ್ಳಬೇಕೆಂದೂ ಬಲಾತ್ಕರಿಸಿದರು. ಈ ಎಲ್ಲ ನಡವಳಿಕೆಗಳನ್ನೂ ವೀಡಿಯೊ ಮಾಡಲಾಯಿತು. ಸ್ವಪ್ನಾ ಅವರಲ್ಲಿ ವೀಡಿಯೊ ಮಾಡಬಾರದೆಂದೂ ತನ್ನ ಗೌರವಕ್ಕೆ ಚ್ಯುತಿ ಬರುತ್ತದೆಂದೂ ಅಂಗಲಾಚಿದಾಗ ಆ ಅಧಿಕಾರಿಗಳು ‘‘ನೀನು ಯಾರು?’’ ಎಂದು ಅಮಾಯಕರಂತೆ ಕೇಳಿದರು. ತಾನು ಅರ್ಜುನ ಪ್ರಶಸ್ತಿ ವಿಜೇತೆಯೆಂದೂ ತಾನಾಗಲೀ ತನ್ನ ಕುಟುಂಬದವರಾಗಲೀ ಅಂತಹ ಕಾರ್ಯಕ್ಕೆ ಉದ್ಯುಕ್ತರಾಗುವ ಪ್ರಶ್ನೆಯೇ ಇಲ್ಲವೆಂದೂ ಆಕೆ ಹೇಳಿದರೂ ಅವರು ಕೇಳದೆ ಪ್ರಕರಣ ದಾಖಲಿಸಿ 30 ದಿನಗಳೊಳಗೆ ದಾಖಲೆಗಳನ್ನು ನೀಡದಿದ್ದರೆ ಪರಿಸ್ಥಿತಿ ತೀವ್ರವಾಗಲಿದೆಯೆಂದು ಬೆದರಿಸಿ ಮರಳಿದರು.

ಇಷ್ಟೇ ಅಗಿದ್ದರೆ ಸಾಕಿತ್ತೇನೋ? ಸ್ವಪ್ನಾಳ ಅದೃಷ್ಟಕ್ಕೆ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಮಾಡಲಾಯಿತು. ಇದು ಕಾಳ್ಗಿಚ್ಚಿನಂತೆ ಪ್ರಸಾರವಾಗಿ ಎಲ್ಲೆಡೆ ಅಧಿಕಾರಿಗಳ ನಡತೆಗೆ ಆಕ್ರೋಶ ವ್ಯಕ್ತವಾಯಿತು. ಕೆಲವು ರಾಜಕಾರಣಿಗಳು ಮತ್ತು ಆಕೆಯ ಸಾಧನೆಯನ್ನು ಮತ್ಸರಿಸಿದ ಕ್ರೀಡಾ ಅಧಿಕಾರಿಗಳು ಮಾತ್ರ ತೀರ್ಪು ನೀಡುವ ಠೀವಿಯಲ್ಲಿ ಆಕೆ ಎಂತಹ ಸಾಧನೆಯೇ ಮಾಡಿರಲಿ ಆಕೆಗೆ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಹೇಳಿಕೆಗಳನ್ನಿತ್ತರು. ಆಕೆ ತಾನು ತಪ್ಪುಮಾಡಿರುವುದಾಗಿ ಒಪ್ಪಿಅಧಿಕಾರಿಗಳ ಮುಂದೆ ಅಂಗಲಾಚಿದಳೆಂಬ ಸುಳ್ಳುಸುದ್ದಿಯನ್ನೂ ಮಾಧ್ಯಮಗಳು ವರದಿಮಾಡಿದವು. ಕರ್ನಾಟಕದ ವೀರಪ್ಪನ್ ಕುರಿತ ವರದಿಗಳ ಮಾದರಿಯಲ್ಲಿ ಸ್ವಪ್ನಾಳನ್ನೂ ‘ಮಾಫಿಯಾ’ ನಾಯಕಿಯಾಗಿ ಚಿತ್ರಿಸಿದವು. (ಆಕೆಗೆ ಈಗಿನ್ನೂ 24 ವರ್ಷಗಳೂ ಆಗಿಲ್ಲ!) ಆದರೆ ಮೇಲಧಿಕಾರಿಗಳು ತನಿಖೆ ಮಾಡಿ ಈ ಪ್ರಕರಣವು ಸುಳ್ಳೆಂದು ಕಂಡುಹಿಡಿದಿವೆ ಮತ್ತು ಅಲ್ಲಿನ ಮರಗಳ್ಳಸಾಗಣೆಯ ನಾಯಕನೊಬ್ಬ ಈ ಮರಗಳನ್ನು ಸಾಗಿಸಲಾಗದೆ ಉಳಿಸಿಹೋಗಿ ತಾನು ಪಾರಾಗುವುದಕ್ಕೆ ಸ್ವಪ್ನಾಳ ವಿರುದ್ಧ ಚೇಷ್ಟೆಯ ಅನಾಮಧೇಯ ದೂರನ್ನು ನೀಡಿದನೆಂದೂ ಇದನ್ನು ನಂಬಿ ಮುಂದಾಲೋಚನೆಯಿಲ್ಲದೆ ಅರಣ್ಯಾಧಿಕಾರಿಗಳು ಕ್ರಮವನ್ನೆಸಗಿದ್ದಾರೆಂದೂ ತಿಳಿದುಬಂದಿದೆ ಮತ್ತು ಸರಕಾರದ ಪ್ರತಿನಿಧಿಗಳು ಆಕೆಯನ್ನು ಭೇಟಿಮಾಡಿ ವಿಷಾದವನ್ನು ವ್ಯಕ್ತಪಡಿಸಿವೆಯಂತೆ. ಇರಲಿ, ಕಾನೂನು ಯಾವ ಅಪರಾಧಿಯನ್ನೂ ಶಿಕ್ಷಿಸಬಹುದು. ಆದರೆ ಸ್ವಪ್ನಾಳಷ್ಟು ಜನಪ್ರಿಯ ಕ್ರೀಡಾಪಟು, ಅದೂ ಬಡ, ವಿದ್ಯಾವಂತ ಪರಿಶಿಷ್ಟ ಮಹಿಳೆಯ ವಿರುದ್ಧ ಕ್ರಮಕೈಗೊಳ್ಳುವುದರ ಮೊದಲು ಅಧಿಕಾರಿಗಳು ವಿವೇಚನೆಯನ್ನು ಮಾಡಬಹುದಿತ್ತಲ್ಲವೇ? ಆಕೆಯ ಸಾಧನೆಯನ್ನು ಅರಿಯದವರೆಂದು ತಾವು ಹೇಳಿಕೊಂಡರೆ ಅದೊಂದು ಸುಳ್ಳು ಮಾತ್ರವಲ್ಲ, ಅಜ್ಞಾನದ ನೇರ ಹಾಸ್ಯಾಸ್ಪದ ಪ್ರದರ್ಶನವಾಗುತ್ತದೆಯೆಂಬ ಪ್ರಾಥಮಿಕ ಸಂಗತಿಯನ್ನೂ ಅಧಿಕಾರ ಮರೆತಿತು. ಈ ಪ್ರಸಂಗವನ್ನು ಗಮನಿಸಿದರೆ ಅಧಿಕಾರ ಯಾರನ್ನೂ ಕುರುಡಾಗಿಸಬಲ್ಲುದು ಮತ್ತು ಅದು ತನ್ನ ದನಿಯನ್ನಷ್ಟೇ ಕೇಳಬಲ್ಲುದು ಎಂದಷ್ಟೇ ಹೇಳಬಹುದು.

ಇದು ಸ್ವಪ್ನಾಳ ಕಥೆಯಲ್ಲ. ಒಂದು ರೂಪಕ, ಅಷ್ಟೇ. ಅಧಿಕಾರಕ್ಕೆ ಬಲಿಯಾಗುವ, ನಲುಗುವ ಎಲ್ಲರ ಕಥೆ. ಅಧಿಕಾರ ಶಾಶ್ವತವಲ್ಲ ಮತ್ತು ಅನುಕಂಪವನ್ನು, ವಿವೇಚನೆಯನ್ನು ಮರೆಸುವ ಶಾಪವಲ್ಲ ಎಂಬುದನ್ನು ರಾಜಕೀಯವಿರಲಿ, ಅಧಿಕಾರಶಾಹಿಯಾಗಿರಲಿ, ಎಲ್ಲರೂ ನೆನಪಿಡಬೇಕು. ಮತ್ತೆ ಮಹಾಭಾರತವನ್ನು ನೆನಪಿಸಿದರೆ ನಹುಷನೆಂಬವನು ಇಂದ್ರ ಪದವಿಗೇರಿ ಅಧಿಕಾರದರ್ಪವನ್ನು ತೋರಿಸಿ ಎಲ್ಲವನ್ನೂ ಕಳೆದುಕೊಂಡು ಶಾಪಗ್ರಸ್ತನಾಗಿ ಭೂಮಿಗೆ ಬಿದ್ದದ್ದನ್ನು ಹೇಳಬಹುದು. ನಮ್ಮ ಬಹಳಷ್ಟು ಅಧಿಕಾರಿಗಳು, ಸಕ್ರಿಯ ರಾಜಕಾರಣಿಗಳು (ಉಚ್ಚ-ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರೂ ಸೇರಿ!) ನಿವೃತ್ತರಾದ ಮೇಲೆ ಜ್ಞಾನೋದಯವಾದಂತೆ ತಮ್ಮ ಕಾಲದಲ್ಲಿ ಇತರರು ನಡೆಸಿದ ಅಕ್ರಮಗಳನ್ನು ಹೇಳುತ್ತಾರೆ; ಕೆಲವರು ಬರೆಯುತ್ತಾರೆ. ಆದರೆ ತಮ್ಮ ಬಗ್ಗೆ ಮಾತ್ರ ಮೌನವಾಗಿರುತ್ತಾರೆ. ನಿವೃತ್ತಿಯೆಂಬ ಮಾಧವ ಕೃಪೆಯು ನಿವೃತ್ತಿಯ ಆನಂತರ ಮೂಕರನ್ನು ವಾಚಾಳಿಯಾಗಿಸುತ್ತಿದೆಯೇ ಎಂಬ ಸಂಶಯ ಹುಟ್ಟುತ್ತದೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)