varthabharthi


ಸಿನಿಮಾ

‘ಕಮರ್ಷಿಯಲ್’ ಚಿತ್ರಗಳ ಬಗ್ಗೆ ಕಾಸರವಳ್ಳಿ ಮಾತು

ವಾರ್ತಾ ಭಾರತಿ : 8 Aug, 2020
ಸಂದರ್ಶನ: ಶಶಿಕರ ಪಾತೂರು

ಗಿರೀಶ್ ಕಾಸರವಳ್ಳಿಯವರು ಒಂದು ಸಿನೆಮಾ ತಯಾರು ಮಾಡಿದ್ದಾರೆ. ಚಿತ್ರದ ಹೆಸರು ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’. ವಿಶೇಷ ಏನೆಂದರೆ ಇದು ಕವಿ, ಸಾಹಿತಿ ಜಯಂತ ಕಾಯ್ಕಿಣಿಯವರು ರಚಿಸಿದ ‘ಹಾಲಿನ ಮೀಸೆ’ ಎನ್ನುವ ಕತೆಯನ್ನು ಆಧಾರಿಸಿರುವ ಚಿತ್ರ. ಕಾಯ್ಕಿಣಿಯವರ ‘ಅಮೃತ ಬಳ್ಳಿಯ ಕಷಾಯ’ ಎನ್ನುವ ಕಥಾ ಸಂಕಲನದಿಂದ ಆಯ್ದಿರುವ ಈ ಕತೆಗೆ ಈಗಾಗಲೇ ಕಾಸರವಳ್ಳಿಯವರು ಸಿನೆಮಾ ರೂಪ ನೀಡಿದ್ದಾರೆ. ಚಿತ್ರ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಸಾಕಷ್ಟು ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಇನ್ನೇನು ಚಿತ್ರ ಬಿಡುಗಡೆಗೊಳಿಸಬೇಕು ಎನ್ನುವ ಹಂತದಲ್ಲಿ ಲಾಕ್‌ಡೌನ್ ಶುರುವಾಗಿತ್ತು. ಲಾಕ್‌ಡೌನ್ ಮತ್ತು ಅದರಿಂದ ಸಿನೆಮಾರಂಗದ ಮೇಲೆ ಆಗಿರುವಂಥ ಪರಿಣಾಮಗಳ ಬಗ್ಗೆ ಸ್ವತಃ ಗಿರೀಶ್ ಕಾಸರವಳ್ಳಿ ‘ವಾರ್ತಾಭಾರತಿ’ಯೊಂದಿಗೆ ಆಡಿರುವ ಮಾತುಗಳು ಹೀಗಿವೆ.


ಪ್ರ: ಈಗಿನ ಕಾಲಕ್ಕೆ ಕಾದಂಬರಿಗಳಿಗಿಂತ ಕಿರುಗಥೆಗಳನ್ನು ಸಿನೆಮಾ ಮಾಡುವುದೇ ಉತ್ತಮ ಎಂದು ಅನಿಸಿದೆಯೇ?

ಗಿರೀಶ್: ಹಾಗೇನಿಲ್ಲ. ಎಲ್ಲ ಕಾಲಕ್ಕೂ ಕಾದಂಬರಿಗಳನ್ನು ಸಿನೆಮಾ ಮಾಡಬಹುದು. ಹಿಂದೆ ಪುಟ್ಟಣ್ಣ, ದೊರೈ ಭಗವಾನ್, ಲಕ್ಷ್ಮೀನಾರಾಯಣ್, ಸಿದ್ದಲಿಂಗಯ್ಯ ಎಲ್ಲರೂ ಕಾದಂಬರಿ ಆಧಾರಿತ ಚಿತ್ರ ಮಾಡಿ ಗೆದ್ದಿದ್ದಾರೆ. ನಾನು ಮಾಡಿದಂಥ ದ್ವೀಪ, ನಾಯಿ ನೆರಳು ಸೇರಿದಂತೆ ಬಹುತೇಕ ಸಿನೆಮಾಗಳೆಲ್ಲವೂ ಕಾದಂಬರಿ ಆಧಾರಿತವಾದವುಗಳೇ. ಇತ್ತೀಚೆಗೆ ಶೇಷಾದ್ರಿ ನಿರ್ದೇಶಿಸಿದ ‘ಮೂಕಜ್ಜಿಯ ಕನಸು’ ಕೂಡ ಕಾದಂಬರಿ ಆಧಾರಿತವೇ ತಾನೇ? ಜಯಂತ್ ಕಾಯ್ಕಿಣಿಯ ಕತೆಗಳು ಅಂದರೆ ನನಗೆ ಇಷ್ಟ. ಅದರಲ್ಲಿ ಕೂಡ ‘ಹಾಲಿನ ಮೀಸೆ’ಯಲ್ಲಿ ಸಿನೆಮಾ ಮಾಡುವಂತಹ ವಿಷಯ ಇತ್ತಾದ ಕಾರಣ ಅದನ್ನು ಆರಿಸಿಕೊಂಡೆ. ಸಿನೆಮಾಕ್ಕಾಗಿ ಆಯ್ದುಕೊಳ್ಳುವುದು ಕತೆಯೋ, ಕಾದಂಬರಿಯೋ ಎನ್ನುವುದಕ್ಕಿಂತ ನಿರ್ದೇಶಕ, ಚಿತ್ರಕಥಾ ಲೇಖಕ ಅದನ್ನು ಸಿನೆಮಾವಾಗಿ ಹೇಗೆ ಬರೆಯುತ್ತಾನೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿದೆ.

ಪ್ರ: ಕಾದಂಬರಿಯಲ್ಲಿ ಬದಲಾವಣೆ ಮಾಡಬಾರದೆನ್ನುವ ಲೇಖಕರ ಬಗ್ಗೆ ಏನು ಹೇಳುತ್ತೀರಿ?
ಗಿರೀಶ್: ನನ್ನ ಯಾವ ಸಿನೆಮಾಗಳು ಕೂಡ ಮೂಲ ಕಾದಂಬರಿಯಂತೆಯೇ ಇಲ್ಲ. ನನ್ನ ‘ತಾಯಿ ಸಾಹೇಬ’, ‘ನಾಯಿ ನೆರಳು’, ‘ಕೂರ್ಮಾವತಾರ’, ‘ಗುಲಾಬಿ ಟಾಕೀಸ್’ ಎಲ್ಲದರಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದೇನೆ. ಅದಕ್ಕೆ ಯಾವ ಕಾದಂಬರಿಕಾರರೂ ವಿರೋಧಿಸಿಲ್ಲ. ಎಲ್ಲರೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಈ ಬಗ್ಗೆ ಭೈರಪ್ಪನವರಲ್ಲೇ ನನ್ನ ಬದಲಾವಣೆಯನ್ನು ನೀವು ಯಾಕೆ ವಿರೋಧಿಸಿಲ್ಲ? ಎಂದು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಹೀಗಿದೆ. ನೀವು ನನ್ನ ಕಾದಂಬರಿಯನ್ನು ವ್ಯಾಪಾರೀಕರಣಕ್ಕಾಗಿ ಬದಲಾಯಿಸುತ್ತಿಲ್ಲ. ಒಂದು ಸೃಜನಾತ್ಮಕ ವಿಚಾರಕ್ಕಾಗಿ ಬದಲಾಯಿಸುತ್ತಿದ್ದೀರಿ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕಮರ್ಷಿಯಲ್ ವಿಚಾರಗಳಿಗಾಗಿ ಕತೆ ಬದಲಾಯಿಸಲು ನಾನು ಒಪ್ಪುವುದಿಲ್ಲ ಎಂದಿದ್ದರು. ಬಹುಶಃ ಸಿನೆಮಾ ಮಾಡುವಾಗ ಯಾವ ಕಾರಣಕ್ಕೆ ಬದಲಾಯಿಸುತ್ತೇವೆ ಎನ್ನುವುದು ಲೇಖಕರಿಗೆ ಮುಖ್ಯವೆನಿಸಬಹುದು.

 ಪ್ರ: ಲಾಕ್‌ಡೌನ್ ಬಳಿಕ ಸಿನೆಮಾಗಳು ಒಟಿಟಿಯಲ್ಲೇ ಸಕ್ರಿಯವಾಗುವಂತಿವೆ?
ಗಿರೀಶ್: ಸದ್ಯದ ಮಟ್ಟಿಗೆ ಒಟಿಟಿ ಫ್ಲಾಟ್‌ಫಾರ್ಮ್ ವರವಾಗಿ ಬಂದಿರುವಂತಿದೆ. ಆದರೆ ನಮ್ಮ ತರಹದ ಸಿನೆಮಾಗಳಿಗೆ ಉಪಯೋಗಲಿದೆಯಾ ಎನ್ನುವುದು ಗೊತ್ತಿಲ್ಲ. ಯಾಕೆಂದರೆ ನಮ್ಮ ಸಿನೆಮಾಗಳು ವಿದೇಶೀಯರನ್ನು ಕೂಡ ತಲುಪಬೇಕು. ಈಗ ಕನ್ನಡ ಸಿನೆಮಾಗಳನ್ನು ನೋಡಿ ವಿದೇಶದಿಂದ ಫೋನ್ ಮಾಡುತ್ತಿರುವವರು ಕನ್ನಡಿಗರೇ ಆಗಿದ್ದಾರೆ. ಆದರೆ ನಮ್ಮ ಸಿನೆಮಾ ವಿದೇಶದಲ್ಲಿರುವ ವಿದೇಶೀಯರಿಗೆ ಕೂಡ ತಲುಪುವಂತಾಗಬೇಕು. ಬೇರೆ ದೇಶ, ಬೇರೆ ಭಾಷೆಯವರನ್ನು ಕೂಡ ತಲುಪುವ ಅನುಕೂಲವನ್ನು ನಮ್ಮ ಒಟಿಟಿ ಮಾಡಬೇಕು ಎನ್ನುವುದು ನನ್ನ ನಿರೀಕ್ಷೆಯಾಗಿದೆ. ಒಟಿಟಿಯ ಮೂಲಕ ಆ ರೀತಿಯ ರೀಚ್ ನಮ್ಮ ಸಿನೆಮಾಗಳಿಗೆ ಅಲ್ಲಿ ಸಿಗಬೇಕು. ಅವುಗಳಿಂದಾಗಿ ಚಿತ್ರಮಂದಿರಗಳು ಸಂಪೂರ್ಣವಾಗಿ ಮುಚ್ಚುತ್ತದೆ ಎನ್ನುವುದು ಸುಳ್ಳು. ಒಟಿಟಿಗಳು ಯಾವತ್ತಿಗೂ ಥಿಯೇಟರ್‌ಗಳಿಗೆ ಬದಲಿಯಾಗಲಾರವು. ವಿದೇಶಗಳಲ್ಲಿ ಹಿಂದೆಯೇ ಒಟಿಟಿಗಳಿವೆ. ಹಿಂದಿ ಸಿನೆಮಾಗಳನ್ನು ಬಹಳ ಹಿಂದೆಯೇ ಮುಂಬೈ, ದಿಲ್ಲಿಗಳಲ್ಲಿ ಮೊಬೈಲ್‌ಗೆ ಹಾಕಿ ಕೊಡುತ್ತಿದ್ದರು. ಇವು ಯಾವುದೂ ಅಲ್ಲಿ ಸಿನೆಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಹೋಗದಂತೆ ಮಾಡಿಲ್ಲ.

ಪ್ರ: ಲಾಕ್‌ಡೌನ್ ದಿನಗಳನ್ನು ನೀವು ಹೇಗೆ ಕಳೆದಿರಿ?
ಗಿರೀಶ್: ದೊಡ್ಡ ಸಮಸ್ಯೆ ಏನೆಂದರೆ ಲಾಕ್‌ಡೌನ್ ಯಾರನ್ನೂ ಭೇಟಿಯಾಗಲು, ಯಾರೊಂದಿಗೂ ಚರ್ಚೆ ಮಾಡಲು ಸಾಧ್ಯವಾಗದಂತೆ ಮಾಡಿತು. ಆದರೆ ಅದೇ ಸಮಯವನ್ನು ಎಷ್ಟೋ ವರ್ಷಗಳಿಂದ ನೋಡದಿರುವ ಸಿನೆಮಾಗಳಿಗೆ, ಓದಬೇಕೆಂದುಕೊಂಡ ಪುಸ್ತಕಗಳಿಗೆ ಮೀಸಲಾಗಿರಿಸಿದೆ. ಇದರ ಜತೆಗೆ ಒಂದು ಭೇಟಿ, ಸಂವಾದಗಳಿಗೆ ಅವಕಾಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಯಾವತ್ತೂ ಬರೆಯದೇ ಇದ್ದ ನಾನು ತುಂಬ ಬರೆಯುತ್ತಾ ಇದ್ದೇನೆ. ಒಂದಷ್ಟು ವೆಬ್ ಸೀರೀಸ್ ಮೊದಲಾದವನ್ನು ಇನ್ನೂ ನೋಡುತ್ತಿದ್ದೇನೆ. ‘ಇ ಫಿಲ್ಮ್ ಫೆಸ್ಟಿವಲ್’ ಸಿನೆಮಾಗಳಲ್ಲಿ ನೋಡಿದ ಚಿತ್ರಗಳಲ್ಲಿ ಒಂದು ಮಲಯಾಳಂ, ಇನ್ನೊಂದು ಬಂಗಾಳಿ ಸಿನೆಮಾ ಇಷ್ಟವಾಯಿತು. ಒಂದಷ್ಟು ಡಾಕ್ಯುಮೆಂಟರಿಗಳನ್ನು ನೋಡಿದೆ. ನನ್ನ ಸಂಗ್ರಹದಲ್ಲಿದ್ದ ಹಳೆಯ ಸಿನೆಮಾಗಳನ್ನು ಮತ್ತೆ ಹಾಕಿ ನೋಡಿದೆ.

ಪ್ರ: ನೀವು ಕನ್ನಡದ ಕಮರ್ಷಿಯಲ್ ಸಿನೆಮಾಗಳನ್ನು ವೀಕ್ಷಿಸುತ್ತೀರ?
ಗಿರೀಶ್: ಕಮರ್ಷಿಯಲ್ ಎನ್ನುವ ಪದ ಪ್ರಯೋಗವನ್ನೇ ನಾನು ಇಷ್ಟಪಡುವುದಿಲ್ಲ. ನನ್ನ ದೃಷ್ಟಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಸಿನೆಮಾಗಳಷ್ಟೇ ಇರುವುದು. ನಾನು ಎಲ್ಲ ಸಿನೆಮಾಗಳನ್ನು ನೋಡುವುದಿಲ್ಲ. ಆದರೆ ಯಾರಾದರೂ ಸ್ನೇಹಿತರು ಚೆನ್ನಾಗಿದೆ ಅಂದರೆ ನೋಡುತ್ತೇನೆ. ಕತೆ ಹೇಗೆ ಬಂದಿದೆ, ಯಾವ ವಿಚಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ನೋಡಿ ಚಿತ್ರ ನೋಡುವ ನಿರ್ಧಾರ ಮಾಡುತ್ತೇನೆ. ಎಲ್ಲದಕ್ಕೂ ಗ್ರಾಫಿಕ್ಸ್ ಮಾಡಿ, ತಂತ್ರಜ್ಞಾನವನ್ನು ಅನಗತ್ಯವಾಗಿ ಬಳಸುವ ಚಿತ್ರಗಳು ನನಗೆ ಇಷ್ಟವಾಗದು. ಅವುಗಳನ್ನು ತಾಂತ್ರಿಕ ಲೋಲುಪತೆ ಎನ್ನಬಹುದು. ತಂತ್ರವು ಕತೆಯ ಒಳಸುಳಿಗಳನ್ನು ಹೊರಗೆ ಹಾಕುವಂತಿರಬೇಕು. ತಂತ್ರವೇ ಪ್ರಧಾನವಾಗಿರುವುದು ನನಗೆ ಇಷ್ಟವಾಗುವುದಿಲ್ಲ. ಇತ್ತೀಚೆಗೆ ಒಂದಷ್ಟು ಮಂದಿ ಕತೆಯನ್ನು ಹೆಚ್ಚು ಹಿಂದೆ ಮುಂದೆ ಮಾಡಿ ತೋರಿಸಿ ತುಂಬ ಗೊಂದಲ ಮೂಡಿಸುತ್ತಾರೆ. ಅದು ಕೂಡ ನನಗೆ ಇಷ್ಟವಾಗಲ್ಲ. ಸಸ್ಪೆನ್ಸ್ ಸೃಷ್ಟಿಸಿ ಅದನ್ನು ನಿವಾರಿಸುವುದೇ ಕತೆಯ ಉದ್ದೇಶವಾಗಿರಬಾರದು. ಅಂತಹ ಚಿತ್ರಗಳನ್ನು ನೋಡುವುದಿಲ್ಲ. ಅನಿವಾರ್ಯವಾಗಿ ನೋಡಿದರೂ ಅರ್ಧ ಗಂಟೆಗೆ ಮರೆತು ಬಿಡುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)