varthabharthi


ಅನುಗಾಲ

ಆತ್ಮನಿರ್ಭರ(ತೆ)ಯ ಅರ್ಥ

ವಾರ್ತಾ ಭಾರತಿ : 13 Aug, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಲೆಯೆತ್ತಿ ನಿಲ್ಲಬೇಕಾದರೆ ತನ್ನ ಕಾಲಲ್ಲಿ ತಾನು ನಿಲ್ಲಬೇಕು. ಇದು ವ್ಯಕ್ತಿಗೂ ಸರಿ; ದೇಶಕ್ಕೂ ಸರಿ. ಹಾಗೆಂದು ಪ್ರಧಾನಿಗಳು ಹೇಳುವಷ್ಟು ಸ್ವಾವಲಂಬಿಯಾಗಿರಲು ಯಾರಿಗೂ ಯಾವ ದೇಶಕ್ಕೂ ಸಾಧ್ಯವಿಲ್ಲ. ನನ್ನದು, ನಮ್ಮದು ಯಾವುದು? ತಿಲಕರು ಹೇಳಿದ ಸ್ವರಾಜ್ಯದಲ್ಲೂ ಗಾಂಧೀಪ್ರಣೀತ ಗ್ರಾಮರಾಜ್ಯದಲ್ಲೂ ಎಲ್ಲವೂ ಸ್ವಂತವಾಗಿರಲು ಸಾಧ್ಯವಿಲ್ಲ. ಪ್ರತೀ ಹಳ್ಳಿಗೂ ಕೃಷಿಕ, ವಣಿಕ, ಚಮ್ಮಾರ, ಶಿಕ್ಷಕ, ಅಕ್ಕಸಾಲಿಗ, ಚಿನಿವಾರ, ವೈದ್ಯ, ಕಟುಕ ಹೀಗೆ ಎಲ್ಲ ವೃತ್ತಿಯವರೂ ಬೇಕು. ಪರಸ್ಪರಾವಲಂಬನೆಯು ಸಮಾಜಕ್ಕೆ ಅನಿವಾರ್ಯ.


ದೇಶದ ನಾಯಕರು ಯಾವುದೇ ಪದವನ್ನಾಡಿದರೂ ಅದು ಮಹತ್ವದ್ದೆಂಬಂತೆ ಬಿಂಬಿಸಲ್ಪಡುತ್ತದೆ. ಅದರ ಹಿಂದೆ ರಾಜಕಾರಣ ಮಾತ್ರವಲ್ಲ, ಸಂಪೂರ್ಣ ಆಡಳಿತ ಯಂತ್ರವೇ ನಿಂತಿರುತ್ತದೆ. ಈ ಪದವನ್ನು ಪ್ರಧಾನಿ ಅಥವಾ ಅವರ ಭಾಷಣವನ್ನು ಸಿದ್ಧಪಡಿಸುವ ಆಡಳಿತ ಯಂತ್ರವು ಉದ್ದೇಶಪೂರ್ವಕವಾಗಿ ಹುಡುಕಿ ಹೇಳಿದರೇ ಎಂಬ ಇತಿಹಾಸ ಬೇಕಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳು ಏನಾದರೂ ಹೇಳಿದರೆ ಅದು ವರದಿಯಾದ ಆನಂತರ ತಾವು ಹಾಗೆ ಹೇಳಿಲ್ಲ ಮತ್ತು ಅದನ್ನು ಮಾಧ್ಯಮಗಳು ತಿರುಚಿವೆ ಎಂಬ ಆರೋಪಗಳು ಹುಟ್ಟಿಕೊಳ್ಳುವುದೇ ಹೆಚ್ಚು. ಇತರ/ಬೇರೆ ಸಂದರ್ಭಗಳಲ್ಲಿ ಅತ್ಯಂತ ಸಹಜವಾಗಿರಬಹುದಾದ ಮೌಖಿಕ ಮತ್ತು ಲಿಖಿತ ಅಭಿವ್ಯಕ್ತಿ ಮತ್ತು ಪ್ರತಿಕ್ರಿಯೆ ಕೂಡಾ ಕೆಲವು ಸಂದರ್ಭಗಳಲ್ಲಿ ತೀರ ಕೃತಕವಾದ, ಹತಾಶಭಾವದ ಧ್ವನಿಯಾಗಿ ಕೇಳಿಸುತ್ತದೆ. ಇವು ಅಕ್ಷರಗಳೋ, ಪದಗಳೋ, ಪದಪುಂಜಗಳೋ, ವಾಕ್ಯಗಳೋ ಆಗಿರಬಹುದು. ‘ಸಾಚಾ’ ಅಥವಾ ‘ಸುಭಗ’ ಎಂಬುದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ಅರ್ಥವನ್ನು ನೀಡಬಹುದು. ಆಡಳಿತ ವ್ಯವಸ್ಥೆಯಲ್ಲಿ ‘ಭರವಸೆ’, ‘ಪರಿಹಾರ’ ‘ನಿರ್ಮೂಲನ’ ‘ಚಿಂತನೆ’ ಮುಂತಾದ ಪದಗಳು ರಾಜಕಾರಣಿಗಳ ನಾಲಗೆಯಿಂದ ಹೊರಬಿದ್ದಾಗ ಅಪಹಾಸ್ಯಕ್ಕೆ ಒಳಗಾಗುವ ಅರ್ಥವನ್ನು ಹೊಮ್ಮಿಸುತ್ತವೆ. (ಇಂತಹ ಪದಗಳು ಎಲ್ಲ ಭಾಷೆಗಳಲ್ಲೂ ಇವೆ.) ಭಾಷಾತಜ್ಞರು ಈ ಕುರಿತು ಹೆಚ್ಚು ಹೇಳಬಹುದು. ಆದ್ದರಿಂದ ಯಾವುದೇ ಪದವು ಆಡಳಿತದಲ್ಲಿ ಮತ್ತು ರಾಜಕೀಯದಲ್ಲಿ ಬಳಕೆಯಾದಾಗ ಅದರ ಅರ್ಥವ್ಯಾಪ್ತಿ/ಮಿತಿ/ಶೂನ್ಯತೆಯನ್ನು ಅಧ್ಯಯನ ಮಾಡಬಹುದು.

ನಮ್ಮ ಪ್ರಧಾನಿ ಕೆಲವು ತಿಂಗಳುಗಳ ಹಿಂದೆ ಘೋಷಿಸಿದ ‘ಆತ್ಮನಿರ್ಭರತೆ’ ಇಂತಹ ಒಂದು ಪದಪುಂಜ. ಇದಕ್ಕೆ ಕಾರಣವಿದೆ. ಈ ಪದವನ್ನು ಆಡುಮಾತಿನಲ್ಲಾಗಲೀ ವ್ಯವಹಾರದಲ್ಲಾಗಲೀ ಗ್ರಂಥಗಳಲ್ಲಾಗಲೀ ಬಳಸಿದ್ದು ಅಪರೂಪ. ಇಲ್ಲವೇ ಇಲ್ಲವೆನ್ನಲು ಸಾಧ್ಯವಿಲ್ಲವಾದರೂ ಅರ್ಥಕೋಶಗಳಲ್ಲೂ ಈ ಪದವನ್ನು ಕಂಡಿಲ್ಲ. ಇಂತಹ ಒಂದು ಅಪರೂಪದ ಪದಜೋಡಣೆಯ ಇತಿಹಾಸವನ್ನು ಹುಡುಕಬೇಕಾದರೆ ಸಾಕಷ್ಟು ಶ್ರಮವಹಿಸಬೇಕು. ಆದರೂ ಅದು ಛಲಪ್ರದವಾದೀತೇ ಹೊರತು ಫಲಪ್ರದವೆಂದು ಹೇಳುವಂತಿಲ್ಲ. ಪ್ರಧಾನಿ ಇದನ್ನು ‘ಸ್ವಾವಲಂಬನೆ’ ಎಂಬ ಅರ್ಥದಲ್ಲಿ ಬಳಸಿದರೆಂಬ ಸೂಚನೆಯಿದೆ. ಸ್ವಾವಲಂಬನೆ ಹೊಸ ತತ್ವ ಅಥವಾ ಸಿದ್ಧಾಂತವೇನೂ ಅಲ್ಲ. ಆದರೂ ಆಧುನಿಕ ಪದ. ಇತ್ತೀಚೆಗಿನ ಚರಿತ್ರೆಯನ್ನು ಕೆದಕಿದರೆ ಗಾಂಧಿ ಸ್ವಾವಲಂಬನೆಯ ಪಾಠವನ್ನು ಹೇಳಿದ್ದರು. ಪರಾವಲಂಬನೆಯಿಲ್ಲದೆ ನಮ್ಮನ್ನು ನಾವೇ ಪೋಷಿಸುವ ಸಂದರ್ಭ ಮತ್ತು ಕೆಲಸವೇ ಸ್ವಾವಲಂಬನೆ.

ಇದು ಸರಳ, ಸಲಿಲ. ಆರನ್ನು ಅರ್ಧ ಡಜನ್ ಎಂದು ಹೇಳಬಹುದು. ಇಪ್ಪತ್ತೈದು ವರ್ಷಗಳನ್ನು ಕಾಲು ಶತಮಾನಗಳೆಂದು ಹೇಳಿ ಅದರ ಘನತೆ, ಗಾಂಭೀರ್ಯ ವನ್ನು ಹೆಚ್ಚಿಸಬಹುದು. ಆದರೆ ಅದು ಒಂದು ಪದವಾಗಿ ದಾಟಿಹೋಗುತ್ತದೆಯೇ ಹೊರತು ಒಂದು ಸಿದ್ಧಾಂತವಾಗಿ ಅಲ್ಲ. ಆದರೆ ಇದನ್ನು ಹೇಳದೆ ಪ್ರಧಾನಿ ‘ಆತ್ಮನಿರ್ಭರತೆ’ ಎಂದು ಹೇಳಿದಾಗ ಹೀಗೇಕೆ ಹೇಳಿದರು ಎಂಬ ಪ್ರಶ್ನೆ ಸಹಜ. ಪ್ರಧಾನಿ ‘ಆತ್ಮನಿರ್ಭರತೆ’ ಎಂಬ ಪದವನ್ನು ಹೇಳಿದ ಮೇಲೆ ಎಲ್ಲರೂ ಅದೊಂದು ಮುತ್ತಿನ ಹಾರವೆಂಬಂತೆ ಧರಿಸುತ್ತಿದ್ದಾರೆ. ದೇಶ-ಭಾಷೆಗಳು ದುರ್ಭರ, ಬರ್ಬರ ಮುಂತಾದ ಪದಗಳನ್ನು ಕಂಡಿವೆ. ಆಳುವವರಿಂದ ಇವನ್ನು ಕೇಳದಿದ್ದರೂ ಜನತೆ ಅನುಭವಿಸುತ್ತಿದ್ದಾರೆ. ‘ಆತ್ಮನಿರ್ಭರ’ ಎಂಬ ಪದ ಸ್ವಯಂಪೂರ್ಣ. ಇದಕ್ಕೆ ‘ತೆ’ ಎಂಬ ಅಕ್ಷರವನ್ನು ಜೋಡಿಸುವ ಅಗತ್ಯವಿಲ್ಲವೆಂದು ಅನ್ನಿಸುತ್ತದೆ. ಸೇರಿಸಿದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ನಮ್ಮಲ್ಲಿ ಕೆಲವಾದರೂ ಭಾಷಾವಿದ್ವಾಂಸರೂ ಸಾಹಿತಿಗಳೂ ‘ತೆ’ಗಳನ್ನು ಪ್ರಯೋಗಿಸುವಲ್ಲಿ ನಿಷ್ಣಾತರು. (ತೆಗಳುವುದು ಸಮಾಜಕ್ಕೆ ಪ್ರೀತಿ!) ‘ವೈಶಿಷ್ಟ್ಯ’ಕ್ಕೆ ‘ವಿಶಿಷ್ಟತೆ’, ‘ವೈಚಿತ್ರ್ಯ’ಕ್ಕೆ ‘ವಿಚಿತ್ರತೆ’, ‘ವೈವಿಧ್ಯ’ಕ್ಕೆ ‘ವಿವಿಧತೆ’, ‘ವೈಶಾಲ್ಯ’ಕ್ಕೆ ‘ವಿಶಾಲತೆ’ ಹೀಗೆ ವಿಕಾರ ಬಂದಲ್ಲೆಲ್ಲ ವೈ(why?)ಯನ್ನು ತ್ಯಜಿಸಿ ‘ತೆ’ಗಳನ್ನು ಹಿಡಿದುಕೊಳ್ಳುತ್ತಾರೆ. (ಇಂತಹ ಇತರ ಪದಗಳೂ ಇವೆ: ಐಕ್ಯ-ಏಕತೆ ಇತ್ಯಾದಿ. ಶಶಿ ತರೂರ್ ಬಳಿ ಇಂತಹ ಇಂಗ್ಲಿಷಿನ ಪದಗಳಿರಬಹುದು!) ಬಹುಜನ ಹೀಗೆ ಹೇಳಿದಾಗ ಪ್ರಜಾಪ್ರಭುತ್ವದ ಅನುಕೂಲ ಮತ್ತು ತತ್ಕಾಲದ ಅಗತ್ಯಗಳಿಗೆ ಹೊಂದಿಸಿ ಅದೇ ಸತ್ಯ (ಸತ್ಯತೆ?) ವಾಗುತ್ತದೆ. ಒಂದು ಪದ ಇಷ್ಟು ಹಗುರಾಗಬಾರದು. ಆದ್ದರಿಂದ ಇದನ್ನು ಗಂಭೀರವಾಗಿ ಜಿಜ್ಞಾಸೆಗಳಿಗೊಳಪಡಿಸೋಣ:

ಆತ್ಮನಿರ್ಭರ(ತೆ)ಯು ದ್ವಿಪದಗಳ ಜೋಡಣೆಯೆಂಬುದು ಸ್ಪಷ್ಟ. ಸಂಸ್ಕೃತ ಮತ್ತಿತರ ಭಾರತೀಯ ಭಾಷಾಕೋಶವು ಆತ್ಮ ಎಂಬ ಪದವನ್ನೊಳಗೊಂಡಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯವು ಆತ್ಮ ಎಂಬ ಪದವನ್ನು ಯಥಾವತ್ತಾಗಿ ಸಂಸ್ಕೃತದಿಂದ ತಂದಿದೆ. ನಿರ್ಭರ(ತೆ) ಎಂಬುದು ಪ್ರತ್ಯೇಕ ಪದ. ಆತ್ಮ ಎಂಬ ಪದವನ್ನು ಮೊದಲು ಅಧ್ಯಾತ್ಮ (ಅಥವಾ ಆಧ್ಯಾತ್ಮ) ಎಂಬ ಪದದೊಂದಿಗೆ ಸಮೀಕರಿಸಿ ಬಳಕೆಮಾಡಿ ನಮ್ಮ ನಡುವೆ ಇರಬೇಕಾದ ಮತ್ತು ಇರದುದನ್ನು ಸೂಚಿಸುತ್ತಿದ್ದರು. ಆದರೆ ನಿಖರವಾದ ಅರ್ಥವಿಲ್ಲ. ಆತ್ಮ ಎಂದರೇನು ಎಂಬುದನ್ನು ವಿವರಿಸುವುದಕ್ಕೂ, ನಿರೂಪಿಸುವುದಕ್ಕೂ, ಅರ್ಥವಿಸುವುದಕ್ಕೂ ವ್ಯತ್ಯಾಸವಿದೆ. ಬಹುಮಂದಿ ಆತ್ಮ ಎಂದರೆ ಇಂಗ್ಲಿಷಿನ 'soul' ಎಂದು ಹೇಳುತ್ತಾರೆಂದು ಹೇಳುತ್ತಾರೇ ವಿನಾ ಅದಕ್ಕೆ ಇನ್ನೊಂದು ದೇಶೀಪದವನ್ನು ನೀಡಲು ಅಸಹಾಯಕರಾಗುತ್ತಾರೆ. ಏಕೆಂದರೆ ಇದು ಭೌತಿಕ ಅನುಭವದ ವಸ್ತುವಲ್ಲ. ‘ಹೃದಯ’ ಎಂಬುದಕ್ಕೆ ಜೀವಶಾಸ್ತ್ರಜ್ಞರು ದೇಹದ ಭಾಗವೆಂದು ವಿವರಿಸಬಹುದು. ಅರ್ಥಕೋಶದಲ್ಲಿ ಕೊನೇ ಪಕ್ಷ ‘ಹೆದೆಯ’ ಎಂಬ ಪರ್ಯಾಯ ಪದವನ್ನು ಪಡೆಯಬಹುದು. ಆದರೆ ‘ಆತ್ಮ’ ಎಂಬ ಪದ ಒಂದು ಅನುಭವವನ್ನು ನೀಡಬಹುದೇ ಹೊರತು ಬೇರೇನನ್ನೂ ಹೇಳದು. ಕಿಟ್ಟೆಲ್ ಸಹಿತ ಅನೇಕ ವಿದ್ವಾಂಸರು ‘ಆತ್ಮ’ ಎಂಬ ಪದವನ್ನು ತಮ್ಮ ಅರ್ಥಕೋಶಗಳಲ್ಲಿ ಸೇರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅನೇಕ ಅರ್ಥಕೋಶಗಳು ಬಂದಿವೆ. ಕುತೂಹಲಕ್ಕಾಗಿ ಕೆಲವನ್ನು ನೋಡಿದರೆ ಕಿಟ್ಟೆಲ್ ಅರ್ಥಕೋಶದಲ್ಲಿ ‘ಆತ್ಮ=ಆತುಮ’ ಎಂಬ ಅರ್ಥವಿದೆ.

ಕನ್ನಡ ಸಾಹಿತ್ಯ ಪರಿಷತ್ತು ಜೀವ, ಚೇತನ, ಕ್ಷೇತ್ರಜ್ಞ, ಶರೀರದಲ್ಲಿ ಅದಕ್ಕಿಂತ ಭಿನ್ನವಾಗಿದ್ದು ನಾನು ಎಂಬ ಭಾವಕ್ಕೆ ಕಾರಣವಾದ ವಸ್ತು ಅಥವಾ ತತ್ವ, ಸ್ವಭಾವ, ಧರ್ಮ, ಪ್ರಯತ್ನ, ಧೃತಿ, ಬುದ್ಧಿ, ಮನಸ್ಸು, ಅಂತರಂಗ, ಶರೀರ, ಪರಬ್ರಹ್ಮ, ಈಶ್ವರ, ಗಾಳಿ, ವಾಯು, ಸೂರ್ಯ, ಅಗ್ನಿ, ಸ್ವಯಂ, ತಾನು ಮುಂತಾದ ಅನೇಕ ಪದಗಳನ್ನು ಹಾಕಿ ಗೊಂದಲದ ಗೂಡಾಗಿಸಿದರೆ, ಶಿವರಾಮ ಕಾರಂತರು ಜೀವ, ದೇಹದಿಂದ ಬೇರೆಯಾಗಿದ್ದು ಅಮರವಾದದ್ದೆಂದು ನಂಬಿರುವ ತತ್ವ ಎಂದು ಅರ್ಥವಿಸಿದ್ದಾರೆ. ಎಚ್.ಅಲ್ಲಿಸಾಬ್ ಅವರ ‘ನಲ್ನುಡಿ ನಿಘಂಟು’ ಜೀವಾತ್ಮ, ಶರೀರ, ಬುದ್ಧಿ, ಧೈರ್ಯ, ಸ್ವಭಾವ, ಯತ್ನ, ಮನಸ್ಸು, ತನ್ನ ಮುಂತಾದ ಪದಗಳನ್ನು ನೀಡಿದೆ. ಈ ಪೈಕಿ ‘ತನ್ನ’ ಎಂಬ ಪದ ಸಹಜವಾದ ಅರ್ಥವನ್ನು ನೀಡಿದೆಯೆಂದನ್ನಿಸುತ್ತದೆ. ಆದರೆ ಈ ಎಲ್ಲ ಅರ್ಥಗಳೂ ಬೇರೊಂದು ಪದದೊಂದಿಗೆ, ಸಾಂದರ್ಭಿಕವಾಗಿ ಪಡೆದವೆನ್ನಿಸುತ್ತದೆ. ‘ನಿರ್ಭರತೆ’ ಎಂಬುದು ಕನ್ನಡದ ಅರ್ಥಕೋಶದಲ್ಲಿ ಕಾಣದು. ನಿರ್ಭರ ಎಂಬ ಸಂಸ್ಕೃತ ಪದಕ್ಕೆ ಕಿಟ್ಟೆಲ್ ‘ನಿಬ್ಬರ’ ಎಂಬ ಕನ್ನಡ ಪದವನ್ನು ನೀಡುವುದರೊಂದಿಗೆ ಅಹಮಿಕೆಯನ್ನು, ಅಹಂಭಾವವನ್ನು (ಚತುರಾಸ್ಯಾ ನಿಘಂಟುವಿನ ಮೂಲಕ ‘ನಿಬ್ಬರಂ ಎನ್ದು, ಒಚ್ಚತಮ್ ಇಲ್ಲೆಮ್ಬುದರ್ಥ’ ಎಂಬ ಸಾಹಿತ್ಯಮೂಲದ ಬಳಕೆಯನ್ನು ಆಧರಿಸಿ) ಸೂಚಿಸಿ ಋಣಾತ್ಮಕವಾದ ಅರ್ಥವನ್ನು ನೀಡಿದ್ದಾರೆ. ಶಿವರಾಮ ಕಾರಂತರು ‘(ನಿಬ್ಬರ), ಸಂಪೂರ್ಣ ಭಾರ, ಬಹಳ, ತುಂಬಿದ, ಅತಿಶಯ, ದುಡುಕು’ ಎಂಬ ಪದಗಳನ್ನು ಸೂಚಿಸಿದ್ದಾರೆ.

ಅಲ್ಲಿಸಾಬ್ ‘ನಿರ್ಭರ’ ಪದವನ್ನು ಕೈಬಿಟ್ಟು ಕನ್ನಡ ಪದವಾದ ನಿಬ್ಬರವನ್ನು ಸೇರಿಸಿ ಅದಕ್ಕೆ ನಿರ್ಭರ ಎಂಬ ಪದವನ್ನು ಕಾಣಿಸಿದ್ದಾರೆ. ಸರಿಯಾದ ಅರ್ಥವನ್ನು ನೋಡಬೇಕೆಂಬ ಆಶಯದಲ್ಲೇ ಇರಬೇಕು ‘ನೋ’ ಎಂದು ಗುರುತು ಹಾಕಿದ್ದಾರೆ. ‘ಆತ್ಮ’ ಎಂಬ ಪದಕ್ಕೆ ಅನೇಕ ಪದಗಳು ಸೇರಿ ಬಳಕೆಯಲ್ಲಿವೆ; ನುಡಿಗಟ್ಟುಗಳಾಗಿವೆ. ಇವಕ್ಕೆಲ್ಲ ಸರಿಯಾದ ಅರ್ಥಗಳಿಲ್ಲ. ಉದಾಹರಣೆಗೆ ‘ಆತ್ಮಹತ್ಯೆ’. ತನ್ನನ್ನು ತಾನು ಕೊಲ್ಲುವುದಕ್ಕೆ ಈ ಪದವನ್ನು ಬಳಸಿದರೆ ಅವಿನಾಶಿ ಆತ್ಮದ ಗತಿಯೇನು? ‘ಆತ್ಮಕಥೆ’, ‘ಆತ್ಮಚರಿತ್ರೆ’ ಮುಂತಾದ ಸಾಹಿತ್ಯಕ ಬಳಕೆಗಳು ಎಷ್ಟು ನೈಜವೆಂಬುದೇ ಪ್ರಶ್ನಾರ್ಹ. ‘ಆತ್ಮಸಾಕ್ಷಿ’, ‘ಆತ್ಮವಿಶ್ವಾಸ’ ‘ಆತ್ಮವಂಚನೆ’, ‘ಆತ್ಮಸ್ತುತಿ’ ಮುಂತಾದ ಕೆಲವು ಪದಗಳು ನೈಜವಾಗಿ, ಸರಿಯಾಗಿ, ಬಳಕೆಯಲ್ಲಿವೆ. ಈ ಪದ ಮತ್ತು ಪದಾರ್ಥಗಳು ಎಲ್ಲವನ್ನೂ ಹೇಳಲಾರವು; ಮತ್ತು ಹಿಂದೀ ಅಥವಾ ಉತ್ತರ ಭಾರತದ ಹಿನ್ನೆಲೆಯಲ್ಲಿ ಬಳಸಿದ ಪದವನ್ನು ನಾವು ಕನ್ನಡದಲ್ಲಿ ಬಳಸಿದರೆ ಅದು ಅಪಾರ್ಥವಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ ‘ಗರ್ವ್’ ಎಂಬ ಪದವಿದೆ.

ಅದರರ್ಥ ಅಭಿಮಾನ. ಅದು ಕನ್ನಡದ ‘ಗರ್ವ’ ಎಂಬ ಪದಕ್ಕೆ ಸಂವಾದಿಯಲ್ಲ. ಆದರೆ ನಮ್ಮಲ್ಲಿ ಅಧಿಕೃತರೇ ‘ಗರ್ವ್‌ಸೇ ಕಹೊ ಹಮ್ ಹಿಂದೂ ಹೈ’ ಎಂಬುದನ್ನು ಕನ್ನಡದಲ್ಲಿ ‘ಗರ್ವದಲ್ಲೇ ಹೇಳಿ ನಾವು ಹಿಂದೂಗಳು’ ಎಂದು ಬಳಸುತ್ತಾರೆ. ತನ್ನ ಬಗ್ಗೆ ಹೇಳುವುದಕ್ಕೆ ಅಭಿಮಾನವಿರಲಿ, ಹೆಮ್ಮೆಯಿರಲಿ; ಯಾರೂ ಅಕ್ಷೇಪಿಸುವಂತಿಲ್ಲ. (ಅಗತ್ಯದ ಪ್ರಶ್ನೆ ಬೇರೆ.) ಆದರೆ ತನ್ನ ಬಗ್ಗೆ ಗರ್ವಪಡುವುದು ತಾಮಸ ಪ್ರಜ್ಞೆ. ಭಾಷೆಯ ಬಳಕೆ ಇಂತಹ ಅಪದ್ಧಗಳನ್ನು ಸೃಷ್ಟಿಸುವುದುಂಟು.


ಇವನ್ನು ಗಮನಿಸಿದರೆ ‘ಆತ್ಮನಿರ್ಭರ’ ಎಂಬುದು ‘ಸ್ವಾವಲಂಬನೆ’ಗಿಂತ ಹೆಚ್ಚು ಕ್ಲಿಷ್ಟವಾದ ಪದ. ಕಷ್ಟವಾದರೂ ಹೊಸ ಫ್ಯಾಷನ್ನಿಗೆ ಹೈಹೀಲ್ಡ್ ಚಪ್ಪಲಿ ಧರಿಸಿದಂತೆ ಹೊಸದೆಂಬ ಹೆಗ್ಗಳಿಕೆಗೆ ಪಾತ್ರವಾದ ಪದ. ಕೊನೆಯ ಹಂತವಾಗಿ ವಾಸ್ತವದ ಅಂಗಳಕ್ಕೆ ಬಂದು ‘ಆತ್ಮನಿರ್ಭರ’ದ ಮಹತ್ವವನ್ನು ಚರ್ಚಿಸಬಹುದು. ಪ್ರಧಾನಿ ಹೇಳಿದ್ದಾರೆನ್ನುವುದನ್ನು ಹೊರತುಪಡಿಸಿದರೆ ಇದರ ತತ್ವ ಹೊಸತೇನೂ ಅಲ್ಲ. ತಲೆಯೆತ್ತಿ ನಿಲ್ಲಬೇಕಾದರೆ ತನ್ನ ಕಾಲಲ್ಲಿ ತಾನು ನಿಲ್ಲಬೇಕು. ಇದು ವ್ಯಕ್ತಿಗೂ ಸರಿ; ದೇಶಕ್ಕೂ ಸರಿ. ಹಾಗೆಂದು ಪ್ರಧಾನಿಗಳು ಹೇಳುವಷ್ಟು ಸ್ವಾವಲಂಬಿಯಾಗಿರಲು ಯಾರಿಗೂ ಯಾವ ದೇಶಕ್ಕೂ ಸಾಧ್ಯವಿಲ್ಲ. ನನ್ನದು, ನಮ್ಮದು ಯಾವುದು? ತಿಲಕರು ಹೇಳಿದ ಸ್ವರಾಜ್ಯದಲ್ಲೂ ಗಾಂಧೀಪ್ರಣೀತ ಗ್ರಾಮರಾಜ್ಯದಲ್ಲೂ ಎಲ್ಲವೂ ಸ್ವಂತವಾಗಿರಲು ಸಾಧ್ಯವಿಲ್ಲ. ಪ್ರತೀ ಹಳ್ಳಿಗೂ ಕೃಷಿಕ, ವಣಿಕ, ಚಮ್ಮಾರ, ಶಿಕ್ಷಕ, ಅಕ್ಕಸಾಲಿಗ, ಚಿನಿವಾರ, ವೈದ್ಯ, ಕಟುಕ ಹೀಗೆ ಎಲ್ಲ ವೃತ್ತಿಯವರೂ ಬೇಕು. ಪರಸ್ಪರಾವಲಂಬನೆಯು ಸಮಾಜಕ್ಕೆ ಅನಿವಾರ್ಯ. ದೇಶಕ್ಕೂ ಹೀಗೆಯೇ: ನಮಗೆ ಬೇಕಾದ ಇಂಧನ, ತೈಲ, ಅಷ್ಟೇ ಅಲ್ಲ, ಇಂದಿನ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳೂ ಆಮದಾಗಲೇಬೇಕು. ಫ್ರಾನ್ಸ್‌ನಿಂದ ರಫೇಲ್ ಬಂದಾಗ ಯಾರೂ ಆತ್ಮನಿರ್ಭರತೆಯ ಮಾತನಾಡಲಿಲ್ಲ. ಇವೆಲ್ಲ ಬಿಡಿ, ಆತ್ಮನಿರ್ಭರತೆಯ ಐಪಿಲ್ ಈ ಬಾರಿ ನಡೆಯುವುದು ವಿದೇಶದಲ್ಲಿ; ಅದೂ ಯುಎಇ ಎಂಬ ಮುಸ್ಲಿಮ್ ದೇಶದಲ್ಲಿ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಬಹುತೇಕ ಕೇಂದ್ರ, ರಾಜ್ಯದ ಮಂತ್ರಿಗಳ ಮಕ್ಕಳು ಓದುತ್ತಿರುವುದು ವಿದೇಶಗಳಲ್ಲಿ. ನಮ್ಮ ರಾಷ್ಟ್ರಪತಿಗಳೂ ಪ್ರಧಾನಿಗಳೂ ಬಳಸುವುದು ವಿದೇಶೀ ಐಷಾರಾಮಿ ಕಾರುಗಳನ್ನೇ! ಇದೇ ನಮ್ಮ ಘೋಷಣೆಗೂ ನಡವಳಿಕೆಗೂ ನಡುವಿರುವ ಹಿಮಗಿರಿಯ ಕಂದರ. ನಮಗೆ ರಾಮನಿಗಿಂತಲೂ ಕೃಷ್ಣನೇ ಮಾದರಿ. ಶ್ರೀರಾಮನು ಮನುಷ್ಯರಂತೆ ಬದುಕಿ ಪುರುಷೋತ್ತಮನಾಗಿ ಹೋದವನು. ಕೃಷ್ಣ ಹಾಗಲ್ಲ; ಆತ ಪೂರ್ಣಾವತಾರಿಯೆಂದು ಸಂಕಲ್ಪ. ಆತ ತಾನು ಹೇಳಿದಂತೆ ನಡೆಯಿರಿ ಎಂದನಷ್ಟೇ ಹೊರತು ತಾನು ನಡೆದಂತೆ ನಡೆಯಿರಿ ಎನ್ನಲಿಲ್ಲ. ಬದುಕು ವೈರುಧ್ಯದ ಗಂಟಾದಾಗ ಘೋಷಣೆಗಳ ಘಂಟಾನಾದಗಳು ಹೆಚ್ಚಾಗುತ್ತವೆ; ಸಾಮಾನ್ಯರಿಗೆ ಅರ್ಥವಾಗದಂತೆ ಹೇಳಬೇಕು ಎನ್ನುವುದು ಮುಖ್ಯವಾಗುತ್ತದೆ. ಎಲ್ಲಿ/ಯಾವಾಗ ಅನುಸರಿಸುವುದಕ್ಕೆ ಏನೂ ಇರುವುದಿಲ್ಲವೋ ಅಲ್ಲಿ/ಆಗ ಮುಂದಾಳುಗಳು ಹೇಳಿದ್ದೇ ಮುಖ್ಯವಾಗುತ್ತವೆ. ‘ಕಿಮಕುರ್ವತ ಸಂಜಯ’ ಎಂಬ ಪ್ರಶ್ನೆ ಅಂಧ ಧೃತರಾಷ್ಟ್ರನಿಗೆ ಅನಿವಾರ್ಯ. ಆದರೆ ಗಾಂಧಾರಿಯ ಹಾಗೆ ಕಣ್ಣುಮುಚ್ಚಿಕೊಂಡವರಿಗೂ ಇದೇ ಗತಿ. ಅರ್ಜುನನು ಕೊನೆಗೂ ಕೃಷ್ಣನಿಗೆ ಹೇಳಿದ್ದು ಇದನ್ನೇ: ‘ಕರಿಷ್ಯೇ ವಚನಂ ತವ!’ ನಾವು ಅನಿವಾರ್ಯವಾಗಿ ನಮ್ಮ ನಾಯಕರಿಗೂ ಇದನ್ನೇ ಹೇಳುತ್ತಿದ್ದೇವೆ. ರಾಮ ಲೆಕ್ಕ-ಕೃಷ್ಣ ಲೆಕ್ಕ ಎಂದು ವ್ಯಾಪಾರಿಗಳು ಹೇಳುವುದೂ ಇದನ್ನೇ!
‘ಆತ್ಮಶೋಧನೆ’ ಮಾಡುವವರು ಕವಿ ವಿ.ಜಿ.ಭಟ್ಟರು ತಮ್ಮ ಇದೇ ಹೆಸರಿನ ಕವಿತೆಯಲ್ಲಿ ಬರೆದಂತೆ ‘‘ಸಿಕ್ಕಿತು! ಸಿಕ್ಕಿತು! ಆತ್ಮವು ನಕ್ಕಿತು ಕಿಟ್ಟೆಲ್ ಕೋಶದ ನೂರಾ ಐವತ್‌ ಮೂರನೆ ಪುಟದಲ್ಲಿ ಹರಿ ಓಂ ಹರ ಓಂ ಹರಿಹರ ಓಂ ಸತ್‌ ಆತ್ಮವು ಇನ್ನೆಲ್ಲಿ? ಹಳಬರು ಹೇಳಿದ ಆತ್ಮವು ಇನ್ನೆಲ್ಲಿ?’’ ಎಂದು ಹುಡುಕುವುದು ಒಳಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)