varthabharthi


ಪ್ರಚಲಿತ

ದೇಶಕ್ಕಾಗಿ ಹುತಾತ್ಮರಾದ ಹಿಂದೂ-ಮುಸ್ಲಿಂ ಗುರು ಶಿಷ್ಯರು

ವಾರ್ತಾ ಭಾರತಿ : 17 Aug, 2020

ಗಲ್ಲಿಗೇರುವ ಮುನ್ನ ಶಿಷ್ಯ ಅಶ್ಫಾಕುಲ್ಲಾಖಾನ್‌ಗೆ ಕೊನೆಯ ಪತ್ರ ಬರೆದ ರಾಮಪ್ರಸಾದ್ ‘‘ಶಿಷ್ಯನಾಗಿ ಬಂದು ಪ್ರಾಣ ಮಿತ್ರನಾದ ನಿನ್ನ ಬಲಿದಾನವನ್ನು ಈ ದೇಶ ಎಂದೂ ಮರೆಯುವುದಿಲ್ಲ’’ ಎಂದು ಅಂತರಾಳದ ಅಭಿಮಾನವನ್ನು ವ್ಯಕ್ತಪಡಿಸಿದರು.
ಕೊನೆಗೆ 1927ರ ಡಿಸೆಂಬರ್ 19ರಂದು ರಾಮಪ್ರಸಾದ್ ಮತ್ತು ಅಶ್ಫಾಕುಲ್ಲಾಖಾನ್ ಇಬ್ಬರೂ ಒಂದೇ ದಿನ ಗಲ್ಲುಗಂಬಕ್ಕೇರಿದರು. ರಾಮಪ್ರಸಾದ್ ಗೋಂಡಾ ಜೈಲಿನಲ್ಲಿ ಅಶ್ಫಾಕುಲ್ಲಾಖಾನ್ ಫೈಝಾಬಾದ್ ಸೆರೆಮನೆಯಲ್ಲಿ ದೇಶಕ್ಕಾಗಿ ಗಲ್ಲಿಗೇರಿದರು.


ಕೊರೋನ ನೆಪದಲ್ಲಿ ಈ ಸಲ ಯಾವುದೇ ಸಂಭ್ರಮವಿಲ್ಲದೇ ಸ್ವಾತಂತ್ರ್ಯೋತ್ಸವ ಆಚರಿಸಲ್ಪಟ್ಟಿತು. ದೇಶದ ರಾಜಧಾನಿ ದಿಲ್ಲಿಯಲ್ಲಾಗಲಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಾಗಲಿ ಅಥವಾ ದೇಶದ ಯಾವುದೇ ಊರಿನಲ್ಲಾಗಲಿ ಎಲ್ಲೂ ತ್ರಿವರ್ಣ ಧ್ವಜದ ವಿಜೃಂಭಣೆ ಕಾಣಲಿಲ್ಲ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ದಿನ ಕಂಡ ಉತ್ಸಾಹವೂ ಕಾಣಲಿಲ್ಲ. ಅಪಾರ ತ್ಯಾಗ ಬಲಿದಾನದಿಂದ ರಕ್ತದ ಬೆಲೆ ತೆತ್ತು ಪಡೆದ ಸ್ವಾತಂತ್ರ್ಯದ ದೀಪವೇ ಜಾಗತೀಕರಣ ಮತ್ತು ಕೋಮುವಾದೀಕರಣದ ಬಿರುಗಾಳಿಗೆ ಸಿಲುಕಿದ ಈ ದಿನಗಳಲ್ಲಿ ಈ ದೇಶಕ್ಕಾಗಿ ಹುತಾತ್ಮರಾದ ಅಸಮಾನ್ಯ ಕ್ರಾಂತಿಕಾರರನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಹೀಗೆ ಬಲಿದಾನ ಮಾಡಿದ ಸಹಸ್ರ ಸಹಸ್ರ ಜನರಲ್ಲಿ ಈ ಗುರು ಶಿಷ್ಯರು ಸೇರಿದ್ದಾರೆ. ಗುರುವಿನ ಹೆಸರು ರಾಮಪ್ರಸಾದ್, ಶಿಷ್ಯನ ಹೆಸರು ಅಶ್ಫಾಕುಲ್ಲಾಖಾನ್. ಉತ್ತರ ಪ್ರದೇಶದ ಇವರಿಬ್ಬರ ಕತೆ ರೋಮಾಂಚಕ.

ಉತ್ತರ ಪ್ರದೇಶದ ಶಹಜಾನ್‌ಪುರ ಇವರಿಬ್ಬರ ಹುಟ್ಟೂರು. ಆರ್ಯ ಸಮಾಜಕ್ಕೆ ಸೇರಿದ ಗುರು ಕಡು ಸಂಪ್ರದಾಯವಾದಿಯಾಗಿದ್ದರು. ಆದರೂ ಇವರಿಬ್ಬರ ಬಾಂಧವ್ಯಕ್ಕೆ ಜಾತಿ, ಮತ ಅಡ್ಡಿಯಾಗಲಿಲ್ಲ.ಇವರಿಬ್ಬರೂ ಒಂದೇ ಚಾಪೆಯ ಮೇಲೆ ಮಲಗಿದರು.ಒಂದೇ ತಟ್ಟೆಯಲ್ಲಿ ಉಂಡರು. ಸ್ವತಂತ್ರ ಭಾರತಕ್ಕಾಗಿ ಒಂದೇ ದಿನ ನೇಣುಗಂಬಕ್ಕೆ ಕೊರಳನ್ನೊಡ್ಡಿದರು.ಇವರು ಮಾತ್ರವಲ್ಲ ಇಂತಹ ಸಾವಿರಾರು ಜನ ದೇಶಕ್ಕಾಗಿ ಬಲಿ ವೇದಿಕೆ ಏರಿದರು. ಇಂದಿನ ಪೀಳಿಗೆಗೆ ಜಾತಿ ಮತ ಮೀರಿದ ಸ್ವಾತಂತ್ರ್ಯದ ಕತೆಯನ್ನು ಹೇಳಬೇಕಾಗಿದೆ. ಹಿಂದೂ-ಮುಸಲ್ಮಾನರು ಸೇರಿದಂತೆ ಎಲ್ಲ ಸಮುದಾಯದ ದೇಶ ಪ್ರೇಮಿಗಳ ನೆತ್ತರು ಈ ನೆಲದಲ್ಲಿ ಹರಿದ ಪರಿಣಾಮವಾಗಿ ದೇಶ ಸ್ವಾತಂತ್ರ್ಯ ಪಡೆದು ಈಗ ಮೋದಿ ಎಂಬ ಸಾಮಾನ್ಯ ಮನುಷ್ಯನೂ ಪ್ರಧಾನಿಯಾಗಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವಂತಾಗಿದೆ.

1897ರಲ್ಲಿ ಶಹಜಾನ್‌ಪುರದಲ್ಲಿ ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಜನಿಸಿದ ರಾಮಪ್ರಸಾದ್ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಮೊದಲು ಸೌಮ್ಯ ಮಾರ್ಗದ ಚಳವಳಿಯಲ್ಲಿದ್ದರು. ನಂತರ ಶಹೀದ್ ಭಗತ್ ಸಿಂಗ್ ಅವರ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸೇರಿದರು. ರಾಮಪ್ರಸಾದ್ ವಾಸಿಸುತ್ತಿದ್ದ ಆರ್ಯ ಸಮಾಜದ ಮಂದಿರದಲ್ಲಿ ಹಿಂದೂಗಳಲ್ಲದ ಇತರ ಧರ್ಮೀಯರಿಗೆ ಪ್ರವೇಶವಿರಲಿಲ್ಲ. ಆದರೆ ಅಶ್ಫಾಕುಲ್ಲಾಖಾನ್ ವಿಷಯದಲ್ಲಿ ಮಾತ್ರ ಈ ನಿಯಮವನ್ನು ಸಡಿಲಿಸಲಾಗಿತ್ತು. ರಾಮಪ್ರಸಾದ್‌ರನ್ನು ಭೇಟಿ ಮಾಡಲು ಯಾವಾಗ ಬೇಕಾದರೂ ಅವರು ಅಲ್ಲಿ ಪ್ರವೇಶಿಸಬಹುದಾಗಿತ್ತು

 ಅಶ್ಫಾಕುಲ್ಲಾಖಾನ್ ಕೂಡ ಶಹಜಾನ್‌ಪುರದ ಸಂಪ್ರದಾಯವಾದಿ ಮುಸ್ಲಿಂ ಪಠಾಣ ಕುಟುಂಬದಲ್ಲಿ ಜನಿಸಿದ ಯುವಕ. ಅವರಿಗೆ ಯಾರೂ ಕ್ರಾಂತಿಯ ದೀಕ್ಷೆಯನ್ನು ಕೊಡಲಿಲ್ಲ. ಸ್ವಯಂ ಪ್ರೇರಣೆಯಿಂದ ಅವರು ಸ್ವಾತಂತ್ರ್ಯ ಸಮರದ ರಣರಂಗಕ್ಕೆ ಧುಮುಕಿದರು. ತಮ್ಮ ಊರಿನ ರಾಮಪ್ರಸಾದ್‌ರನ್ನು ಹುಡುಕಿಕೊಂಡು ಬಂದರು. ಈ ಹುಡುಗನನ್ನು ರಾಮಪ್ರಸಾದ್ ಮೊದಲು ಹಚ್ಚಿಕೊಳ್ಳಲಿಲ್ಲ. ಇವನೇನು ಬಾಲಕ ಎಂದು ನಿರ್ಲಕ್ಷ್ಯ ಮಾಡಿದರು. ಆದರೆ ಅಶ್ಫಾಕುಲ್ಲಾಖಾನ್ ಬಿಡಲಿಲ್ಲ. ರಾಮಪ್ರಸಾದ್‌ರ ಎದೆಯ ಕದ ತಟ್ಟಿ ಅವರ ಅಂತರಂಗವನ್ನು ಪ್ರವೇಶಿಸಿದ. ಇವರಿಬ್ಬರೂ ಒಂದಾಗಿರುವುದನ್ನು ಎರಡೂ ಕಡೆಯ ಸಂಪ್ರದಾಯವಾದಿಗಳು ಸಹಿಸಲಿಲ್ಲ. ಆದರೆ ಇಬ್ಬರೂ ಯಾವುದಕ್ಕೂ ಸೊಪ್ಪುಹಾಕಲಿಲ್ಲ. ಹಿಂದೂ- ಮುಸಲ್ಮಾನರ ಏಕತೆಯಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದು ಇವರಿಬ್ಬರೂ ಹೇಳುತ್ತಿದ್ದರು.

ಆರ್ಯ ಸಮಾಜದ ಮಂದಿರದ ಬಾಗಿಲುಗಳು ಅಶ್ಫಾಕುಲ್ಲಾಖಾನ್‌ಗೆ ಸದಾ ತೆರೆದಿದ್ದವು. ಇದಕ್ಕಾಗಿ ಗುರು ಶಿಷ್ಯರು ಭಾರೀ ಬೆಲೆ ತೆರಬೇಕಾಯಿತು.ತಮ್ಮ ತಮ್ಮ ಸಮಾಜಗಳಿಂದ ತಿರಸ್ಕಾರಕ್ಕೆ ಗುರಿಯಾಗಬೇಕಾಯಿತು. ಮುಸಲ್ಮಾನರ ಸಹವಾಸ ಮಾಡಿ ಮೋಸ ಹೋಗಬೇಡ ಎಂದು ರಾಮಪ್ರಸಾದ್ ರಿಗೆ ಹಿಂದೂ ಸಂಪ್ರದಾಯವಾದಿಗಳು ತಿವಿಯುತ್ತಿದ್ದರು.ಅತ್ತ ಅಶ್ಫಾಕುಲ್ಲಾಖಾನ್‌ಗೆ ಕಾಫಿರ ಎಂದು ಅವನ ಬಂಧುಗಳು ಹೀಗೆಳೆಯತೊಡಗಿದರು. ಆದರೆ ಇಬ್ಬರೂ ಯಾವ ಒತ್ತಡಕ್ಕೂ ಮಣಿಯಲಿಲ್ಲ.

ಅಶ್ಫಾಕುಲ್ಲಾಖಾನ್‌ರನ್ನು ದೂರವಿಡುವಂತೆ ಹಿಂದೂ ಸಂಪ್ರದಾಯವಾದಿಗಳು ರಾಮಪ್ರಸಾದ್ ಮೇಲೆ ಒತ್ತಡ ತಂದರು. ಈ ಒತ್ತಡಕ್ಕೆ ಮಣಿಯದ ರಾಮಪ್ರಸಾದ್ ‘‘ಇಸ್ಲಾಮ್‌ನ ವಿಶ್ವ ಬಾಂಧವ್ಯ, ಮಾನವ ಭ್ರಾತೃತ್ವ ತತ್ವ ತನ್ನ ಒಡನಾಡಿ ಅಶ್ಫಾಕುಲ್ಲಾಖಾನ್‌ನಲ್ಲಿ ರಕ್ತಗತವಾಗಿದೆ’’ ಎಂದು ಸಮರ್ಥಿಸಿಕೊಂಡರು. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಒಂದೇ ಚಾಪೆಯ ಮೇಲೆ ಮಲಗುತ್ತಿದ್ದರು. ಅಷ್ಟೇ ಅಲ್ಲ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.

ಹೀಗೆ ಇಬ್ಬರ ಹೋರಾಟದ ಬದುಕು ಸಾಗಿದಾಗ ನಂಬಿದವರಿಂದಲೇ ಮೋಸಕ್ಕೊಳಗಾಗಿ ಇಬ್ಬರೂ ಬಂಧನಕ್ಕೊಳಗಾದರು. ಕಾಕೋರಿ ಖಟ್ಲೆಯಲ್ಲಿ ಅಶ್ಫಾಕುಲ್ಲಾಖಾನ್‌ಗೆ ಗಲ್ಲು ಶಿಕ್ಷೆಯಾಯಿತು.ರಾಮಪ್ರಸಾದ್‌ಗೂ ಕೂಡ ಅದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಯಿತು. ಗಲ್ಲಿಗೇರುವ ಮುನ್ನ ಶಿಷ್ಯ ಅಶ್ಫಾಕುಲ್ಲಾಖಾನ್‌ಗೆ ಕೊನೆಯ ಪತ್ರ ಬರೆದ ರಾಮ ಪ್ರಸಾದ್ ‘‘ಶಿಷ್ಯನಾಗಿ ಬಂದು ಪ್ರಾಣ ಮಿತ್ರನಾದ ನಿನ್ನ ಬಲಿದಾನವನ್ನು ಈ ದೇಶ ಎಂದೂ ಮರೆಯುವುದಿಲ್ಲ’’ ಎಂದು ಅಂತರಾಳದ ಅಭಿಮಾನವನ್ನು ವ್ಯಕ್ತಪಡಿಸಿದರು.

ಕೊನೆಗೆ 1927ರ ಡಿಸೆಂಬರ್ 19ರಂದು ರಾಮಪ್ರಸಾದ್ ಮತ್ತು ಅಶ್ಫಾಕುಲ್ಲಾಖಾನ್ ಇಬ್ಬರೂ ಒಂದೇ ದಿನ ಗಲ್ಲುಗಂಬಕ್ಕೇರಿದರು. ರಾಮಪ್ರಸಾದ್ ಗೋಂಡಾ ಜೈಲಿನಲ್ಲಿ ಅಶ್ಫಾಕುಲ್ಲಾಖಾನ್ ಫೈಝಾಬಾದ್ ಸೆರೆಮನೆಯಲ್ಲಿ ದೇಶಕ್ಕಾಗಿ ಗಲ್ಲಿಗೇರಿದರು.

ಇದು ಈ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಒಂದು ಬಲಿದಾನದ ಕತೆ. ಈ ಮಣ್ಣಿನಲ್ಲಿ ಹಿಂದೂ-ಮುಸಲ್ಮಾನರು-ಕ್ರೈಸ್ತರು ಹೀಗೆ ಎಲ್ಲರ ರಕ್ತವೂ ಹರಿದಿದೆ. ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳಿಂದ ವಿಷ ಪ್ರಾಶನಕ್ಕೊಳಗಾದ ಇಂದಿನ ಅನೇಕ ತರುಣರಿಗೆ, ಮಕ್ಕಳಿಗೆ ಈ ನೆತ್ತರಾರ್ಪಣೆಯ ಕತೆಯನ್ನು ತಿಳಿಸಿ ಹೇಳಬೇಕಾಗಿದೆ. ಅನೇಕ ಪ್ರಾಥಮಿಕ ಶಾಲಾ ಶಿಕ್ಷಕರೂ ಮಕ್ಕಳಲ್ಲಿ ಕೋಮು ವೈರಸ್ ಹರಡುತ್ತಿದ್ದಾರೆ. ಅವರಿಗೂ ಇದರ ಅರಿವು ಮೂಡಿಸಬೇಕಾಗಿದೆ. ‘‘ಹಿಂದೂಸ್ಥಾನ್ ಯಾರಪ್ಪನ ದೇಶವೂ ಅಲ್ಲ. ಇದು ನನ್ನದೂ ಕೂಡ’’ ಎಂಬ ಕವಿ ರಾಹತ್ ಇಂದೋರಿ ಶಾಯಿರಿಯ ಸಂದೇಶ ಎಲ್ಲೆಡೆ ತಲುಪಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)