varthabharthi


ಪ್ರಚಲಿತ

ನ್ಯಾಯ ತಬ್ಬಲಿಯಾಗಿ ನಿಂತ ಈ ಕಾಲದ ಸಂಕಟ

ವಾರ್ತಾ ಭಾರತಿ : 24 Aug, 2020
ಸನತ್ ಕುಮಾರ್ ಬೆಳಗಲಿ

ಈ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನತೆ ನಂಬಿಕೆ ಕಳೆದುಕೊಳ್ಳಬಾರದು.ಒಟ್ಟಾರೆ ನೂರಾಮೂವತ್ತು ಕೋಟಿ ಜನರಿಗೆ ಆಸರೆಯಾದ ಈ ಭಾರತ ಜಗತ್ತಿನ ಹೆಮ್ಮೆಯ ರಾಷ್ಟ್ರವಾಗಿ ಹೊರಹೊಮ್ಮಬೇಕು. ಇದಾಗಬೇಕೆಂದರೆ ಮೇಲ್ಕಂಡ ಲೋಪಗಳೆಲ್ಲ ಸರಿ ಪಡಬೇಕು ಹಾಗೂ ನ್ಯಾಯದಾನವೋ ನ್ಯಾಯ ನಿರ್ಣಯವೋ ಏನಾದರೂ ಅನ್ನಿ ಅದು ಪಾರದರ್ಶಕವಾಗಿರಬೇಕು. ಸಂವಿಧಾನದ ಆಶಯಗಳಿಗೆ ಚ್ಯುತಿ ಬರಬಾರದು.


ಈಘಟನೆ ನಡೆದು ಏಳು ವರ್ಷಗಳಾದವು. ಆಗಸ್ಟ್ 20, 2013ನೇ ಇಸವಿ. ಆ ಕರಾಳ ದಿನದ ಮುಂಜಾವಿನಲ್ಲಿ ಪುಣೆಯ ಓಂಕಾರೇಶ್ವರ ಸೇತುವೆಯ ಮೇಲೆ ಒಂದು ಘೋರ ಹತ್ಯೆ ನಡೆಯಿತು. ಮಹಾರಾಷ್ಟ್ರದ ಹೆಸರಾಂತ ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಅವರ ಎದೆ ಹೊಕ್ಕ ಗುಂಡುಗಳು ಅವರನ್ನು ನೆಲಕ್ಕುರುಳಿಸಿದವು.

ದಾಭೋಲ್ಕರ್ ಹತ್ಯೆಯೊಂದಿಗೆ ಅಂಧ ಶ್ರದ್ಧೆ, ಕಂದಾಚಾರಗಳ ವಿರುದ್ಧ ದಣಿವಿಲ್ಲದ ಸಮರ ಸಾರಿದ ಧ್ವನಿಯೊಂದು ಮೌನವಾಯಿತು. ಈ ಧ್ವನಿ ತನ್ನ ವೈಚಾರಿಕ ವಿರೋಧಿಗಳೊಂದಿಗೆ ಚರ್ಚೆ ಮತ್ತು ಸಂವಾದವನ್ನು ಬಯಸಿತ್ತು. ಆದರೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ, ಸಂವಾದ ನಡೆಸುವ ಸಾಮರ್ಥ್ಯ ಅವರಿಗಿರಲಿಲ್ಲ. ದಾಭೋಲ್ಕರ್ ಮಾತನ್ನು ಮೌನವಾಗಿಸಲು ಅವರು ಪಿಸ್ತೂಲನ್ನು ಬಳಸಿಕೊಂಡರು.
ಮೂಢನಂಬಿಕೆ, ಜ್ಯೋತಿಷ್ಯದ ಹೆಸರಿನಲ್ಲಿ ನಡೆಯುತ್ತಿದ್ದ ಮೋಸ ವಂಚನೆಗಳನ್ನು ಬಯಲಿಗೆಳೆದು ಜನ ಜಾಗ್ರತಿ ಮೂಡಿಸುತ್ತಿದ್ದ ಡಾ.ದಾಭೋಲ್ಕರ್ ವೃತ್ತಿಯಲ್ಲಿ ವೈದ್ಯರು. ಅಂಧ ಶ್ರದ್ಧೆ ನಿರ್ಮೂಲನಾ ಸಮಿತಿಯ ಮೂಲಕ ವೈಚಾರಿಕ ಬೆಳಕನ್ನು ಚೆಲ್ಲುವುದು ಅವರ ಪ್ರವೃತ್ತಿ.ವೈದ್ಯರಾಗಿ ಮಾತ್ರವಲ್ಲ ಲೇಖಕರಾಗಿ, ಪತ್ರಿಕೆಯೊಂದರ ಸಂಪಾದಕ ರಾಗಿ ಅವರು ಹೆಸರು ಮಾಡಿದ್ದರು.
ನರೇಂದ್ರ ದಾಭೋಲ್ಕರ್ ಹತ್ಯೆ ನಡೆದು ಎರಡು ವರ್ಷಗಳಾಗಿರಲಿಲ್ಲ 2015 ರ ಫೆಬ್ರವರಿ 16 ರಂದು ಅದೇ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಗಿನ ಜಾವದಲ್ಲೇ ಇನ್ನೊಂದು ಹತ್ಯೆ ನಡೆಯಿತು. ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಸಮರವನ್ನು ಸಾರಿದ್ದ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಗೋವಿಂದ ಪನ್ಸಾರೆ ಅವರ ಎದೆಯನ್ನು ಹೊಕ್ಕ ಗುಂಡುಗಳು ಅವರನ್ನು ನೆಲಕ್ಕುರುಳಿಸಿದವು. ಮತಾಂಧತೆಯ ವಿರುದ್ಧ ಗುಡುಗುತ್ತಿದ್ದ ಇನ್ನೊಂದು ಧ್ವನಿ ಮೌನವಾಯಿತು.
  ವೃತ್ತಿಯಲ್ಲಿ ವಕೀಲರಾಗಿದ್ದ ಗೋವಿಂದ ಪನ್ಸಾರೆ ಪ್ರವೃತ್ತಿಯಲ್ಲಿ ಹೋರಾಟಗಾರರಾಗಿದ್ದರು. ಹೋರಾಟ ಗಾರರೆಂದರೆ ಬರೀ ಸಂಬಳ, ಭತ್ತೆಗಳನ್ನು ಕೊಡಿಸುವ ಹೋರಾಟಗಾರರಲ್ಲ. ಅದರೊಂದಿಗೆ ವಿಚಾರದ ಬೆಳಕನ್ನು ಚೆಲ್ಲುವ ನಂದಾದೀಪವಾಗಿದ್ದರು. ಮತೀಯ ಶಕ್ತಿಗಳು ಶಿವಾಜಿ ಮಹಾರಾಜರನ್ನು ಹಿಂದೂ ಸಾಮ್ರಾಟರನ್ನಾಗಿ ಮಾಡಿ ಕೋಮು ದ್ವೇಷಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸುತ್ತ ಬಂದಿದ್ದ ಪನ್ಸಾರೆ ಬರೀ ಮಾತಾಡಿ ಸುಮ್ಮನಿರಲಿಲ್ಲ.ಶಿವಾಜಿ ಮಹಾರಾಜರ ಬಗ್ಗೆ ಆಳವಾದ ಅಧ್ಯಯನ ಮಾಡಿ ಶಿವಾಜಿ ಹೇಗೆ ಎಲ್ಲ ಧರ್ಮೀಯರ ಬಡವರ ರಾಜನಾಗಿದ್ದ, ಅವನ ಸೈನ್ಯದ ಉನ್ನತ ಸ್ಥಾನದಲ್ಲಿ ಎಷ್ಟು ಜನ ಮುಸಲ್ಮಾನರಿದ್ದರು, ಪುರೋಹಿತಶಾಹಿ ಶಕ್ತಿಗಳು ಅವರನ್ನು ಹೇಗೆ ಕಾಡಿದವು ಎಂದೆಲ್ಲಾ ವಿಶ್ಲೇಷಣೆ ಮಾಡಿ ‘ಶಿವಾಜಿ ಕೋನ್ ಹೈ’ (ಶಿವಾಜಿ ಯಾರು) ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕ ಮರಾಠಿ ಮಾತ್ರವಲ್ಲ ಅನೇಕ ಭಾಷೆಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಪನ್ಸಾರೆ ಅವರ ಜೊತೆ ವಾದ ಮಾಡಿ ಗೆಲ್ಲುವ, ಸಂವಾದ ನಡೆಸಿ ಮಣಿಸುವ ಸಾಮರ್ಥ್ಯ ಅವರ ವೈಚಾರಿಕ ವಿರೋಧಿಗಳಿಗಿರಲಿಲ್ಲ.ಅಂತಲೇ ಪನ್ಸಾರೆ ಧ್ವನಿಯನ್ನು ಅಡಗಿಸಲು ಪಿಸ್ತೂಲಿನ ಮೊರೆ ಹೋದರು.

ಪನ್ಸಾರೆ ಅವರ ಹತ್ಯೆ ನಡೆದು ಎಂಟು ತಿಂಗಳಾಗಿರಲಿಲ್ಲ. 2015, ಸೆಪ್ಟಂಬರ್ 30 ರಂದು ಧಾರವಾಡದಲ್ಲಿ ಈ ದೇಶದ ಖ್ಯಾತಿವೆತ್ತ ಸತ್ಯ ಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಅವರ ಮನೆ ಬಾಗಿಲಲ್ಲಿ ಹಂತಕನ ಪಿಸ್ತೂಲಿನ ಗುಂಡಿಗೆ ನೆಲಕ್ಕುರುಳಿದರು. ಹಾಡ ಹಗಲೇ ಬೆಳಗಿನ ಜಾವ ಈ ಹತ್ಯೆ ನಡೆಯಿತು. ಗುಂಡಿಕ್ಕಿ ಕೊಂದವರು ಬೈಕ್ ನಲ್ಲಿ ಪರಾರಿಯಾದರು. ಕಲಬುರ್ಗಿಯವರು ಹತ್ಯೆಗೀಡಾದಾಗ ಯಾವುದೋ ಆಸ್ತಿ ಜಗಳಕ್ಕಾಗಿ ಅವರ ಕೊಲೆ ನಡೆಯಿತೆಂದು ಕೆಲ ದುಷ್ಟ ಶಕ್ತಿಗಳು ವದಂತಿ ಹರಡಿದವು. ಆದರೆ ಅದನ್ನು ಕಲಬುರ್ಗಿ ಅವರ ಕುಟುಂಬದವರು ತಳ್ಳಿ ಹಾಕಿದರು.
ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಅದು ಜೈನ, ಬೌದ್ಧ ಧರ್ಮಗಳಂತೆ ಪ್ರತ್ಯೇಕ ವಾದ ಅವೈದಿಕ ಧರ್ಮ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಕಲಬುರ್ಗಿ ಅವರು ಅದಕ್ಕಾಗಿ ಹಲವಾರು ಅಮೂಲ್ಯವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು. ಹೀಗಾಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ದಾಭೋಲ್ಕರ್, ಪನ್ಸಾರೆ ಹತ್ಯೆಯೊಂದಿಗೆ ಕಲಬುರ್ಗಿ ಹತ್ಯೆಯೂ ನಂಟು ಹೊಂದಿರುವ ಸಂಗತಿ ಬಯಲಿಗೆ ಬಂತು.
 ಕಲಬುರ್ಗಿ ಅವರ ಹತ್ಯೆ ನಡೆದ ಎರಡು ವರ್ಷಗಳ ನಂತರ 2017, ಸೆಪ್ಟಂಬರ್ 5 ರಂದು ಕರಾಳ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ಬಾಗಿಲಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆಯಿತು. ತಂದೆಯ ಸಾವಿನ ನಂತರ ಅವರ ಲಂಕೇಶ್ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡು ಸಾಮಾಜಿಕ ಬದ್ಧತೆಯಲ್ಲಿ ತಂದೆಗಿಂತ ಒಂದು ಹೆಜ್ಜೆ ಮುಂದಿದ್ದ ಗೌರಿ ಕಗ್ಗೊಲೆಯಿಂದ ಕರ್ನಾಟಕ ಮಾತ್ರವಲ್ಲ ಭಾರತವೇ ತತ್ತರಿಸಿತು. ನಾನು ಆ ದಿನ ಬೆಂಗಳೂರಿನಲ್ಲೇ ಇದ್ದೆ. ಸುದ್ದಿ ಕೇಳಿ ದಿಗಿಲು ಕವಿಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ಹೋದಾಗ ನಾಡಿನ ನಾನಾ ಮೂಲೆಗಳಿಂದ ಬಂದಿದ್ದ ಅವರ ಅಭಿಮಾನಿಗಳು, ಸಮಾನ ಮನಸ್ಕರು ಕಣ್ಣೀರು ಹಾಕುತ್ತಿದ್ದರು.
ದಾಭೋಲ್ಕರ್, ಪನ್ಸಾರೆ, ಡಾ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಈ ನಾಲ್ವರಿಗೂ ಯಾವ ವೈಯಕ್ತಿಕ ವಿರೋಧಿಗಳು ಇರಲಿಲ್ಲ. ಇವರು ಯಾರ ಮನಸ್ಸನ್ನು ನೋಯಿಸಿದವರಲ್ಲ. ಯಾರ ಆಸ್ತಿ ಲಪಟಾಯಿಸಿದವರಲ್ಲ. ಆದರೆ ಅವರು ಪ್ರತಿಪಾದಿಸುತ್ತಿದ್ದ ವಿಚಾರಗಳೇ ಅವರ ಹತ್ಯೆಗೆ ಕಾರಣವಾದವು.
    ಈ ನಾಲ್ವರಿಗೂ ಹಿಂದೂ ವಿರೋಧಿಗಳುಎಂದುಅಪಪ್ರಚಾರ ಮಾಡಿ ಹತ್ಯೆಗೆ ಮೊದಲು ಅದಕ್ಕೆ ಸಮರ್ಥನೆ ಒದಗಿಸುವ ಹುನ್ನಾರ ನಡೆಯಿತು.ಮೊದಲು ಗುಂಡಿಗೆ ಬಲಿಯಾದ ದಾಭೋಲ್ಕರ್ ಹತ್ಯೆ ನಡೆದು ಏಳು ವರ್ಷಗಳಾದವು. ಇದುವರೆಗೆ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲು ಸಾಧ್ಯವಾಗಿಲ್ಲ.ಈ ಕುರಿತು ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ನೇರವಾಗಿ ತನಿಖಾ ಕಾರ್ಯ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ವಿನೋದ ತಾವಡೆ ಮತ್ತು ವಿನಯ ಪವಾರ್ ಎಂಬ ಹಿಂದುತ್ವ ಉಗ್ರವಾದಿ ಸಂಘಟನೆಗೆ ಸೇರಿದ ಇಬ್ಬರನ್ನು ಬಂಧಿಸಲಾಗಿದೆ.ಆದರೆ ತನಿಖಾ ಕಾರ್ಯ ಪೂರ್ಣಗೊಂಡಿಲ್ಲ. ಈ ಬಗ್ಗೆ ಮುಂಬೈ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಪನ್ಸಾರೆ ಹತ್ಯೆ ಪ್ರಕರಣದಲ್ಲೂ ಹೆಚ್ಚಿನ ಪ್ರಗತಿಯಾಗಿಲ್ಲ. ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಇದೇ ಸ್ಥಿತಿ. ಆದರೆ ಕರ್ನಾಟಕದಲ್ಲಿ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ಪಡೆ ರಚಿಸಿದ ಪರಿಣಾಮವಾಗಿ ಗೌರಿ ಹತ್ಯೆಯ ಹಿಂದಿನ ಜಾಲ ಬಯಲಿಗೆ ಬಂತು.ಅಷ್ಟೇ ಅಲ್ಲ ಅದರೊಂದಿಗೆ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ ಹತ್ಯೆಯ ಪ್ರಕರಣಗಳ ಬಗ್ಗೆ ಒಂದಿಷ್ಟು ಸುಳಿವು ಸಿಕ್ಕಿತು.ಆದರೆ ಸಿಬಿಐ ತನಿಖಾ ಕಾರ್ಯ ಮಾತ್ರ ಕುಂಟುತ್ತಾ ಸಾಗಿದೆ.
 ಪ್ರಜಾಪ್ರಭುತ್ವದಲ್ಲಿ ನ್ಯಾಯ ನಿರ್ಣಯ ಪಕ್ಷಾತೀತವಾಗಿರಬೇಕು.ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ನ್ಯಾಯವಿರಬಾರದು. ಇತ್ತೀಚೆಗೆ ನಡೆದ ಹಿಂದಿ ಚಿತ್ರ ನಟ ಸುಶಾಂತ್ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ 2016 ರಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಿಂದ ಎಬಿವಿಪಿ ಕಾರ್ಯಕರ್ತ ರಿಂದ ಹಲ್ಲೆಗೊಳಗಾದ ನಂತರ ಏಕಾ ಏಕಿ ನಾಪತ್ತೆಯಾದ ಪ್ರತಿಭಾವಂತ ವಿದ್ಯಾರ್ಥಿ ನಜೀಬ್ ಎಲ್ಲಿದ್ದಾರೆ ಎಂಬುದು ಈವರೆಗೆ ಪತ್ತೆಯಾಗಿಲ್ಲ.ತನ್ನ ಇದ್ದೊಬ್ಬ ಮಗನಿಗಾಗಿ ಹಲುಬುತ್ತಿರುವ ನಜೀಬ್ ತಾಯಿಗೆ ಈ ವರಗೆ ನ್ಯಾಯ ಸಿಕ್ಕಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದ್ದರೂ ಹೆಚ್ಚಿನ ಪ್ರಗತಿಯಾಗಿಲ್ಲ.ಯಾವ ಟಿ.ವಿ.ಸುದ್ದಿ ವಾಹಿನಿಯೂ ನಜೀಬ್ ತನಿಖೆ ಎಲ್ಲಿಗೆ ಬಂತು ಎಂದು ಕೇಳುತ್ತಿಲ್ಲ.
 ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಕೂಡ ನಿಜವಾದ ಪಾತಕಿಗಳನ್ನು ಪತ್ತೆ ಹಚ್ಚಿ ದಂಡಿಸಲು ಸಾಧ್ಯವಾಗಿಲ್ಲ. ಈ ನೆಲದ ಸಾಂಸ್ಕೃತಿಕ ಸಂಪತ್ತಾದ ಚಿಂತಕರು, ಲೇಖಕರು, ಪತ್ರಕರ್ತರ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ಎಂಬುದು ಮರೀಚಿಕೆಯಾದರೆ, ಇಡೀ ನ್ಯಾಯಾಂಗ ವ್ಯವಸ್ಥೆ ಮಾತ್ರವಲ್ಲ ಪ್ರಜಾಪ್ರಭುತ್ವದಲ್ಲಿ ಜನರಿಗೆ ನಂಬಿಕೆ ಹೊರಟು ಹೋಗುತ್ತದೆ.
 ಹಾಗೆಂದು ಸರಕಾರದ ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದಲ್ಲ. ಸೈದ್ಧಾಂತಿಕ ವಿರೋಧಿಗಳಾದ ಕವಿ ವರವರರಾವ್, ಹೆಸರಾಂತ ಚಿಂತಕ ಆನಂದ್ ತೇಲ್ತುಂಬ್ಡೆ, ( ಅಂಬೇಡ್ಕರ್ ಅವರ ಸಮೀಪದ ಬಂಧು) ಗೌತಮ ನವ್ಲಾಖಾ ಪ್ರೊ. ಸಾಯಿಬಾಬಾ ಮುಂತಾದ 22 ಮಂದಿಯ ಮೇಲೆ ಭೀಮಾ ಕೋರೆಗಾಂವ ಗಲಭೆ ಮತ್ತು ಪ್ರಧಾನಿ ಹತ್ಯೆಯ ಸಂಚಿನ ಆರೋಪ ಹೊರಿಸಿ ಜೈಲಿಗೆ ತಳ್ಳಿ ಎರಡು ವರ್ಷಗಳಾದವು. ಇವರ ಮೇಲೆ ಅತ್ಯಂತ ಉಗ್ರವಾದ ಯು.ಎ.ಪಿ.ಎ. ಅಡಿ ಪ್ರಕರಣ ದಾಖಲಿಸಲಾಗಿದೆ.ಇವರಿಗೆ ಜಾಮೀನು ಮೇಲೆ ಬಿಡುಗಡೆ ಮಾಡಲೂ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ.) ತಕರಾರು ಮಾಡುತ್ತಿದೆ.
ಎಂಭತ್ತು ವರ್ಷದ ವರವರರಾವ್ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಅರವತ್ತಾರು ವರ್ಷದ ಆನಂದ್ ತೇಲ್ತುಂಬ್ಡೆ ಆರೋಗ್ಯವೂ ಗಂಭೀರವಾಗಿದೆ. ಶೇಕಡಾ ತೊಂಭತ್ತರಷ್ಟು ಅಂಗ ವೈಫಲ್ಯದಿಂದ ಬಳಲುತ್ತಿರುವ ಪ್ರೊ.ಸಾಯಿಬಾಬಾ ಅವರ ತಾಯಿ ತೀರಿಕೊಂಡಾಗಲೂ ಅಂತಿಮ ದರ್ಶನಕ್ಕೆ ಬಿಡುಗಡೆ ಮಾಡಲಿಲ್ಲ.
ಇದು ಈ ದೇಶದ ಇಂದಿನ ಸ್ಥಿತಿ. ಕೋವಿಡ್ ನಂತರವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪ್ರತಿರೋಧ, ಪ್ರತಿಭಟನೆಗಳೆಲ್ಲ ಆನ್ ಲೈನ್ ಗೆ ಸೀಮಿತವಾದಂತೆ ಕಾಣುತ್ತದೆ. ಪ್ರಶಾಂತ್ ಭೂಷಣ ಪ್ರಕರಣದಲ್ಲಿ ಕ್ಷಮೆ ಯಾಚಿಸಲು ಸರ್ವೋಚ್ಚ ನ್ಯಾಯಾಲಯವೇ ಮತ್ತೆ ಕಾಲಾವಕಾಶ ನೀಡುವ ಪರಿಸ್ಥಿತಿ ಬಂದಿದೆ.ಇದೆಲ್ಲ ನಾವು ಆತಂಕ ಪಡಬೇಕಾದ ಬೆಳವಣಿಗೆ.
ಈ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತ ವಾಗಿ ಉಳಿಯಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನತೆ ನಂಬಿಕೆ ಕಳೆದುಕೊಳ್ಳಬಾರದು.ಒಟ್ಟಾರೆ ನೂರಾ ಮೂವತ್ತು ಕೋಟಿ ಜನರಿಗೆ ಆಸರೆಯಾದ ಈ ಭಾರತ ಜಗತ್ತಿನ ಹೆಮ್ಮೆಯ ರಾಷ್ಟ್ರ ವಾಗಿ ಹೊರಹೊಮ್ಮಬೇಕು. ಇದಾಗಬೇಕೆಂದರೆ ಮೇಲ್ಕಂಡ ಲೋಪಗಳೆಲ್ಲ ಸರಿ ಪಡಬೇಕು ಹಾಗೂ ನ್ಯಾಯದಾನವೋ ನ್ಯಾಯ ನಿರ್ಣಯವೋ ಏನಾದರೂ ಅನ್ನಿ ಅದು ಪಾರದರ್ಶಕವಾಗಿರಬೇಕು.ಸಂವಿಧಾನದ ಆಶಯಗಳಿಗೆ ಚ್ಯುತಿ ಬರಬಾರದು. ಇದೊಂದೇ ಎಲ್ಲರ ಆಶಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)