varthabharthi


ಕಾಲಂ 9

ನ್ಯಾಯಾಂಗದ ಪ್ರಜಾತಂತ್ರೀಕರಣಕ್ಕೆ ಅಗತ್ಯವಾಗಿರುವ ಎರಡು ಚುಚ್ಚುಮದ್ದುಗಳು

ಪ್ರಶಾಂತ್ ಭೂಷಣ್ ಮತ್ತು ಜಸ್ಟೀಸ್ ಕರ್ಣನ್

ವಾರ್ತಾ ಭಾರತಿ : 26 Aug, 2020
ಶಿವಸುಂದರ್

ಸುಪ್ರೀಂಕೋರ್ಟ್ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬ ಹಾಲಿ ನ್ಯಾಯಾಧೀಶರನ್ನು ನ್ಯಾಯಾಂಗ ನಿಂದನೆಯ ಅಪರಾಧದ ಮೇಲೆ ಆರು ತಿಂಗಳು ಜೈಲುಶಿಕ್ಷೆಯನ್ನೂ ನೀಡಿತು ಹಾಗೂ ಕರ್ಣನ್ ಅವರಿಗೆ ನೀಡಿದ ಶಿಕ್ಷೆಯನ್ನು ಆಗ ಪ್ರಶಾಂತ್ ಭೂಷಣ್ ಕೂಡಾ ಸ್ವಾಗತಿಸಿದ್ದರು.

ಆದರೆ ಇಂದು ಪ್ರಶಾಂತ್ ಭೂಷಣ್ ಅವರನ್ನು ಕೂಡಾ ಅದೇ ಬಗೆಯ ಆರೋಪಗಳ ಮೇಲೆ ಸುಪ್ರೀಂಕೋರ್ಟ್ ಶಿಕ್ಷಿಸ ಹೊರಟಿದೆ. ಆದರೆ ವ್ಯತ್ಯಾಸವೇನೆಂದರೆ ಭೂಣ್ ಅವರ ಮೇಲೆ ಸುಪ್ರೀಂಕೋರ್ಟ್ ತೆಗೆದುಕೊಳ್ಳುತ್ತಿರುವ ಕ್ರಮವನ್ನು ಜಸ್ಟೀಸ್ ಕರ್ಣನ್ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರನ್ನೂ ಒಳಗೊಂಡಂತೆ ದೇಶ ಹಾಗೂ ವಿದೇಶಗಳ ನಾಗರಿಕ ಸಮಾಜ ದೊಡ್ಡ ರೀತಿಯಲ್ಲಿ ಪ್ರತಿಭಟಿಸುತ್ತಿದೆ.

‘‘ನಾನು ಈಗಲೂ ಸಂಪೂರ್ಣವಾಗಿ ನಂಬುವ ವಿಷಯದ ಬಗ್ಗೆ ಕ್ಷಮೆ ಕೇಳುವುದು ನನ್ನ ಅಂತಸ್ಸಾಕ್ಷಿಯ ನಿಂದನೆ ಆಗುತ್ತದೆ ಹಾಗೂ ಅಪ್ರಾಮಾಣಿಕತೆಯೂ ಆಗುತ್ತದೆ.. ಆದ್ದರಿಂದ ಈ ದೇಶದ ನ್ಯಾಯಾಂಗದ ಘನೆತೆಯನ್ನು ಎತ್ತಿಹಿಡಿಯಲು ನಾನು ಮಾಡಿದ ಟ್ವೀಟ್‌ನ ಬಗ್ಗೆ ಕ್ಷಮೆ ಕೋರಲಾರೆ’’ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.

ಭೀತಿಗೋ, ಆಮಿಷಕ್ಕೋ ಬಲಿಯಾಗಿ ಈ ದೇಶ ಮೆರೆಸಿದ ಹೀರೋಗಳು ಹಚ್ಚಿಕೊಂಡ ಬಣ್ಣಗಳೆಲ್ಲಾ ಕರಗಿಹೋಗುತ್ತಿರುವಾಗ ಈ ದೇಶದ ಪ್ರಜಾತಂತ್ರವನ್ನು ಉಳಿಸುವ ಸಲುವಾಗಿ ತನ್ನನ್ನು ತಾನು ಶಿಕ್ಷೆಗೆ ಒಡ್ಡಿಕೊಂಡ ಪ್ರಶಾಂತ್ ಭೂಷಣ್ ಅವರು ಸುತ್ತ ಕವಿದಿರುವ ಹತಾಷೆಯ ಮಧ್ಯೆ ಹೊಸ ಭರವಸೆಯನ್ನು ಹುಟ್ಟಿಸಿದ್ದಾರೆ. ಅದಕ್ಕಾಗಿ ಈ ದೇಶ ಅವರಿಗೆ ಕೃತಜ್ಞವಾಗಿದೆ.

ಸುಪ್ರೀಂ ಎಂದರೆ ದೋಷಾತೀತ ಎಂದಲ್ಲ: 

ಅಂಬೇಡ್ಕರ್ ಅವರು ಹೇಳಿದ ಹಾಗೆ ದೇಶದ ಮುಖ್ಯ ನ್ಯಾಯಾಧೀಶರು ಮಹತ್ವದ ಸ್ಥಾನದಲ್ಲಿ ಕೂತಿದ್ದರೂ ಅವರು ಸಹ ಮನುಷ್ಯ ಸಹಜ ಬಲಹೀನತೆಗಳು ಮತ್ತು ಪೂರ್ವಗ್ರಹಗಳಿಂದ ಕೂಡಿರುವುದು ಸಹಜ. ಆದರೆ ಅವರು ಕೂತಿರುವ ಸ್ಥಾನವು ಈ ದೇಶದ, ಸಮುದಾಯಗಳ, ಜನರ ಬದುಕು, ಅಭಿವ್ಯಕ್ತಿ ಸ್ವಾತಂತ್ರ್ಯಗಳ ಹಣೆಬರಹವನ್ನು ನಿರ್ಧರಿಸುತ್ತದೆ. ಹೀಗಾಗಿ ಪರಮಾಧಿಕಾರವನ್ನು ಹೊಂದಿರುವ ಸ್ಥಾನದಲ್ಲಿರುವ ವ್ಯಕ್ತಿಯ ಪೂರ್ವಗ್ರಹಗಳು ಮತ್ತು ಬಲಹೀನತೆಗಳ ಮೇಲೆ ಒಂದು ಪ್ರಜಾತಾಂತ್ರಿಕ ಮೇಲ್ವಿಚಾರಣೆ ಹಾಗೂ ನಿಯಂತ್ರಣವು ಅತ್ಯಗತ್ಯ. ಅದರಲ್ಲಿ ಅತಿ ಮುಖ್ಯವಾದದ್ದು ಸಾರ್ವಜನಿಕ ವಿಮರ್ಶೆ. ಸಾಂಸ್ಥಿಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವ. ಈ ದೇಶದ ಪ್ರಜಾತಂತ್ರದ ಅಂತಿಮ ರಕ್ಷಕನಾಗಿರುವ ಸುಪ್ರೀಂಕೋರ್ಟ್ ಸ್ವಪ್ರೇರಣೆಯಿಂದ ಇಂಥಾ ವಿಮರ್ಷೆಗಳಿಗೆ ಒಳಪಡುವುದು ಒಂದು ಆರೋಗ್ಯಕರ ಪ್ರಜಾತಂತ್ರದ ಸಂಕೇತವಾಗುತ್ತಿತ್ತು. ಆದರೆ ಸಾರ್ವಜನಿಕ ಹಾಗೂ ಸಕಾರಣ ವಿಮರ್ಶೆಯನ್ನು ‘ನಿಂದನೆ’ ಎಂದು ಪರಿಗಣಿಸಿ ಶಿಕ್ಷಿಸಲು ಹೊರಟಿರುವ ಸುಪ್ರೀಂಕೋರ್ಟ್ ನ್ಯಾಯಾಂಗ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ. ಹೀಗಾಗಿ ಪ್ರಶಾಂತ್ ಭೂಷಣ್ ಅವರು ಒಡ್ಡಿರುವ ಸವಾಲು ನ್ಯಾಯಾಂಗ ಸರ್ವಾಧಿಕಾರಕ್ಕೆ ಅಗತ್ಯವಾಗಿ ನೀಡಬೇಕಿದ್ದ ಚುಚ್ಚುಮದ್ದೇ ಆಗಿದೆ.

ಕರ್ಣನ್ ಏಕೆ ಸಹ್ಯವಾಗಲಿಲ್ಲ?:

ಹಾಗೆ ನೋಡಿದರೆ, ಸುಪ್ರೀಂಕೋರ್ಟ್‌ನ ಸರ್ವಾಧಿಕಾರಿ ಧೋರಣೆಗೆ ಹಾಗೂ ಜಾತಿವಾದಿ ಮನಸ್ಸತ್ವಕ್ಕೆ ಕೋಲ್ಕತಾ ಹಾಗೂ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ದಲಿತ ನ್ಯಾಯಾಧೀಶ ಕರ್ಣನ್ ಅವರೂ ಸಹ ಮತ್ತೊಂದು ರೀತಿಯಲ್ಲಿ ಸವಾಲು ಹಾಕಿದ್ದರು. ಆದರೆ ಆ ಪ್ರತಿರೋಧ ಈಗ ಭೂಷಣ್ ಅವರು ಒಡ್ಡುತ್ತಿರುವ ಸವಾಲಿನಷ್ಟು ನೇರ ಹಾಗೂ ಸರಳವಾಗಿರದೆ ಸ್ವಲ್ಪಸಂಕೀರ್ಣವಾಗಿತ್ತು. ಅದೇನೇ ಇದ್ದರೂ ಆ ಪ್ರತಿರೋಧದ ಸಾರವನ್ನು ಗ್ರಹಿಸದೆ ಹೋದ ಸುಪ್ರೀಂಕೋರ್ಟ್, ಮಾಧ್ಯಮಗಳು ಹಾಗೂ ಪ್ರತಿಷ್ಠಿತ ವರ್ಗದ ನಾಗರಿಕ ಸಮಾಜ ಅದನ್ನು ಒಬ್ಬ ನ್ಯಾಯಾಧೀಶರ ಅರಾಜಕ ನಡೆಯೆಂದು ಪರಿಗಣಿಸಿತು. ಮಾತ್ರವಲ್ಲದೆ ಸುಪ್ರೀಂಕೋರ್ಟ್ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬ ಹಾಲಿ ನ್ಯಾಯಾಧೀಶರನ್ನು ನ್ಯಾಯಾಂಗ ನಿಂದನೆಯ ಅಪರಾಧದ ಮೇಲೆ ಆರು ತಿಂಗಳು ಜೈಲುಶಿಕ್ಷೆಯನ್ನೂ ನೀಡಿತು ಹಾಗೂ ಕರ್ಣನ್ ಅವರಿಗೆ ನೀಡಿದ ಶಿಕ್ಷೆಯನ್ನು ಆಗ ಪ್ರಶಾಂತ್ ಭೂಷಣ್ ಕೂಡಾ ಸ್ವಾಗತಿಸಿದ್ದರು.

ಆದರೆ ಇಂದು ಪ್ರಶಾಂತ್ ಭೂಷಣ್ ಅವರನ್ನು ಕೂಡಾ ಅದೇ ಬಗೆಯ ಆರೋಪಗಳ ಮೇಲೆ ಸುಪ್ರೀಂಕೋರ್ಟ್ ಶಿಕ್ಷಿಸ ಹೊರಟಿದೆ. ಆದರೆ ವ್ಯತ್ಯಾಸವೇನೆಂದರೆ ಭೂಷಣ್ ಅವರ ಮೇಲೆ ಸುಪ್ರೀಂಕೋರ್ಟ್ ತೆಗೆದುಕೊಳ್ಳುತ್ತಿರುವ ಕ್ರಮವನ್ನು ಜಸ್ಟೀಸ್ ಕರ್ಣನ್ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರನ್ನೂ ಒಳಗೊಂಡಂತೆ ದೇಶ ಹಾಗೂ ವಿದೇಶಗಳ ನಾಗರಿಕ ಸಮಾಜ ದೊಡ್ಡ ರೀತಿಯಲ್ಲಿ ಪ್ರತಿಭಟಿಸುತ್ತಿದೆ.

ಇದು ಸಹಜವಾಗಿಯೇ ಭೂಷಣ್ ಮತ್ತು ಕರ್ಣನ್ ಅವರ ಪ್ರಕರಣಗಳ ಹಾಗೂ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿನ ವ್ಯತ್ಯಾಸಗಳ ಕಾರಣಗಳ ಬಗ್ಗೆ ಜಿಜ್ಞಾಸೆಯನ್ನು ಹುಟ್ಟುಹಾಕಿದೆ ಹಾಗೂ ಕರ್ಣನ್ ಪ್ರಕರಣದಲ್ಲಿ ಈಗ ವ್ಯಕ್ತವಾಗುತ್ತಿರುವಷ್ಟು ವಿರೋಧ ವ್ಯಕ್ತವಾಗದಿರುವುದಕ್ಕೆ ನಾಗರಿಕ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಪೂರ್ವಗ್ರಹಗಳೂ ಕಾರಣವಲ್ಲವೇ ಎಂಬ ಸಕಾರಣ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ನಾಗರಿಕ ಸಮಾಜ ಈ ಪ್ರಶ್ನೆಗಳನ್ನು ಈಗಲಾದರೂ ಅದರ ಒಟ್ಟಾರೆ ಸಂಕೀರ್ಣತೆಯಲ್ಲಿ ಹಾಗೂ ಸಮಗ್ರತೆಯಲ್ಲಿ ಗ್ರಹಿಸುವ ಅಗತ್ಯವಿದೆ. ಅದಕ್ಕಾಗಿ ಮೊದಲು ಕರ್ಣನ್ ಪ್ರಕರಣದ ಸಂಕೀರ್ಣತೆಯನ್ನು ಗ್ರಹಿಸಬೇಕಾಗುತ್ತದೆ.

ಸರಳವಾದ ಆದರೆ ಸಂಕೀರ್ಣಗೊಂಡ ಕರ್ಣನ್ ಕಥೆ:

1955ರಲ್ಲಿ ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಕರ್ಣನ್ ಅವರು 1983ರಲ್ಲಿ ಲಾ ಪದವಿಯನ್ನು ಪಡೆದು 25 ವರ್ಷಗಳ ಕಾಲ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದರು. 2009ರಲ್ಲಿ ಅವರನ್ನು ಆಗಿನ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗಂಗೂಲಿಯವರು ಹೈಕೋರ್ಟ್‌ನ ಜಡ್ಜ್ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ಶಿಫಾರಸು ಮಾಡಿದರು. ಅದನ್ನು ಒಪ್ಪಿಕೊಂಡ ಆಗಿನ ಮುಖ್ಯ ನ್ಯಾಯಮೂರ್ತಿ ಕೆ.ಜೆ. ಬಾಲಕೃಷ್ಣನ್ ನೇತೃತ್ವದ ಕೊಲಿಜಿಯಂ ಅವರನ್ನು 2009ರಲ್ಲಿ ಹೈಕೋರ್ಟ್‌ನ ಜಡ್ಜ್ ಆಗಿ ನೇಮಿಸಿದರು. ಅಲ್ಲಿ ಅವರು 2016ರ ತನಕ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಜಸ್ಟೀಸ್ ಕರ್ಣನ್ ಅವರು ಹೈಕೋರ್ಟ್‌ನ ಕೆಲವು ಇತರ ಜಡ್ಜ್‌ಗಳ ಭ್ರಷ್ಟಾಚಾರದ ಬಗ್ಗೆ 2011ರಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ಮಾಡಿ ಒರಟಾದ ಭಾಷೆಯಲ್ಲಿ ಆರೋಪಗಳನ್ನು ಮಾಡಿದ್ದರು. ತಮ್ಮ ಜಾತಿ ಹಿನ್ನೆಲೆಯ ಕಾರಣಕ್ಕಾಗಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ತಮಗೆ ಮಹತ್ವದ ಕೇಸುಗಳನ್ನು ನೀಡುತ್ತಿಲ್ಲ ಎಂದು ಹಲವಾರು ಸಾರಿ ದೂರಿದ್ದರು. ಮಾತ್ರವಲ್ಲ ಹಲವಾರು ಬಾರಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳಲ್ಲಿರುವ ಜಾತೀಯತೆ, ಸ್ವಜನ ಪಕ್ಷಪಾತದ ಬಗ್ಗೆ ಒರಟಾದ ಭಾಷೆಯಲ್ಲಿ ಎಲ್ಲರೆದುರು ಮಾತನಾಡಿದ್ದರು. ಕೆಳಹಂತದ ಜಡ್ಜ್‌ಗಳ ಆಯ್ಕೆ ಮತ್ತು ನೇಮಕಾತಿ ವಿಷಯದಲ್ಲಿ ನಡೆಯುತ್ತಿದ್ದ ಪ್ರಕರಣದಲ್ಲಿ ತನ್ನನ್ನು ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿ ಆಕ್ಷೇಪಿಸಿದ್ದರು. ಇದೆಲ್ಲಕ್ಕೂ ತನ್ನ ಬಗ್ಗೆ ಇರುವ ಜಾತಿ ಪೂರ್ವಗ್ರಹವೇ ಕಾರಣ ಎಂದು ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೂ ದೂರಿತ್ತಿದ್ದರು. ಅವರ ಆರೋಪದ ಬಗ್ಗೆ ವಿಚಾರಣೆ ನಡೆಸದ ಆಗಿನ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಸಂಜಯ್ ಕೌಲ್ ಅವರು ಕರ್ಣನ್ ಅವರನ್ನು ಬೇರೆ ಕೋರ್ಟ್‌ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಅನ್ನು ಕೋರಿಕೊಂಡರು. ಅದರಂತೆ ಅವರನ್ನು ಕೊಲಿಜಿಯಂ ಕೋಲ್ಕತಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತು. ಆದರೆ ಕರ್ಣನ್ ಅವರು ತಮ್ಮ ಅಧಿಕಾರವನ್ನು ಬಳಸಿ ವರ್ಗಾವಣೆಯನ್ನು ರದ್ದುಗೊಳಿಸುವ ಆದೇಶವನ್ನು ಮಾಡಿಕೊಂಡರು. ಆ ನಂತರ ಆಗಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಖೇಹರ್ ಅವರು ಕರ್ಣನ್ ಅವರನ್ನು ತಮ್ಮ ಚೇಂಬರಿಗೆ ಕರೆಸಿ ಮನ ಒಲಿಸಿದ ನಂತರ ಅವರು ಕೋಲ್ಕತಾ ಹೈಕೋರ್ಟ್‌ಗೆ ಹೋದರು. 2016ರಲ್ಲಿ ಕೋಲ್ಕತಾ ಹೈಕೋರ್ಟ್‌ಗೆ ಹೋದ ನಂತರ ಜಸ್ಟೀಸ್ ಕರ್ಣನ್ ಅವರು ಸುಪ್ರೀಂಕೋರ್ಟ್‌ನ ಹಾಗೂ ಹೈಕೋರ್ಟ್‌ನ 32 ನ್ಯಾಯಾಧೀಶರು ಹೇಗೆ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ವಿವರಿಸುತ್ತಾ ಒಂದು ಸುದೀರ್ಘ ಹಾಗೂ ಗೋಪ್ಯ ಪತ್ರವನ್ನು ಪ್ರಧಾನಿಗೆ ಬರೆದು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಆದರೆ ಪ್ರಧಾನಿ ಮೋದಿ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಅದನ್ನು ಯಥಾವತ್ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಾಧೀಶ ಖೇಹರ್ ಅವರಿಗೆ ವರ್ಗಾಯಿಸಿದರು. ಖೇಹರ್ ಅವರು ಕರ್ಣನ್ ಅವರ ಆರೋಪಗಳ ಬಗ್ಗೆ ಯಾವುದೇ ಸ್ವತಂತ್ರ ತನಿಖೆಯನ್ನು ಮಾಡದೆ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಕರ್ಣನ್ ಅವರ ಮೇಲೆ ಸ್ವಪ್ರೇರಿತವಾಗಿ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನು ಹೂಡಿದರು ಮತ್ತು ಅದರ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನ ಆಗಿನ ಏಳು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ರಚಿಸಿದರು.

ಈ ನಡೆಗೆ ಪ್ರತಿಕ್ರಿಯೆಯಾಗಿ ಜಸ್ಟೀಸ್ ಕರ್ಣನ್ ಅವರು ತಾವು ದಲಿತರಾಗಿದ್ದರಿಂದಲೇ ಈ ಬಗೆಯ ಅಪಮಾನಮಾಡಲಾಗುತ್ತಿದೆಯೆಂದು ಆರೋಪಿಸಿ ಆ ಏಳು ನ್ಯಾಯಾಧೀಶರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಯನ್ನು ಉಲ್ಲಂಘಿಸಿ ಕರ್ಣನ್ ಅವರ ಪೀಠಕ್ಕೆ ಯಾವುದೇ ಪ್ರಕರಣವನ್ನು ಸಲ್ಲಿಸಬಾರದೆಂದು ಕೋಲ್ಕತಾ ಹೈಕೋರ್ಟ್‌ಗೆ ತಾಕೀತು ಮಾಡಿತು. ಹಾಗೂ ಕರ್ಣನ್ ಅವರ ಮಾನಸಿಕ ಸ್ಥಿತಿ ಸರಿ ಇದೆಯೆ ಎಂದು ಕಡ್ಡಾಯವಾಗಿ ಮೆಡಿಕಲ್ ಪರೀಕ್ಷೆ ಮಾಡಲು ಆದೇಶಿಸಿತು. ಇದಕ್ಕೆ ಪ್ರತಿಯಾಗಿ ಜಸ್ಟೀಸ್ ಕರ್ಣನ್ ಅವರು ಸುಪ್ರೀಂಕೋರ್ಟ್‌ನ ಏಳೂ ನ್ಯಾಯಾಧೀಶರನ್ನು ಅತ್ಯಾಚಾರ ಕಾಯ್ದೆಯಡಿ ಬಂಧಿಸಿ ತನ್ನ ಗೃಹ ಕಚೇರಿಗೆ ಹಾಜರು ಪಡಿಸಬೇಕೆಂದು ದಿಲ್ಲಿ ಪೊಲೀಸರಿಗೆ ಆದೇಶಿಸಿದರು. ಸುಪ್ರೀಂಕೋರ್ಟ್ ಯಾವುದೇ ವಿಚಾರಣೆಯನ್ನು ಮಾಡದೆ ಕರ್ಣನ್ ಅವರ ಎಲ್ಲಾ ಆದೇಶಗಳನ್ನು ರದ್ದುಪಡಿಸಿತು ಹಾಗೂ ಕರ್ಣನ್ ಅವರ ಆದೇಶಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಬಾರದೆಂದು ಮಾಧ್ಯಮಗಳಿಗೂ ಆದೇಶ ನೀಡಿ 2017 ರ ಮೇ 9ರಂದು ನ್ಯಾಯಾಂಗ ನಿಂದನೆಯ ಆರೋಪದ ಮೇಲೆ ಕರ್ಣನ್ ಅವರಿಗೆ ಆರು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿತು.

ನಾಗರಿಕ ಸಮಾಜದ ಜಾತಿಗುರುಡು:

ಈ ಇಡೀ ವಿದ್ಯಮಾನಗಳಲ್ಲಿ ಮಾಧ್ಯಮಗಳು ಹಾಗೂ ನಾಗರಿಕ ಸಮಾಜಕ್ಕೆ ಎದ್ದು ಕಂಡದ್ದು ಅಥವಾ ಪ್ರಧಾನವಾಗಿ ಕಂಡದ್ದು ಜಸ್ಟೀಸ್ ಕರ್ಣನ್ ಅವರ ‘ಅರಾಜಕ’ ಹಾಗೂ ‘ಅಸ್ಥಿಮಿತ’ ಪ್ರತಿಕ್ರಿಯೆಗಳು ಮಾತ್ರ. ಕರ್ಣನ್ ಅವರ ಪ್ರತಿಕ್ರಿಯೆಗಳಲ್ಲಿ ಖಂಡಿತ ಆ ಎರಡೂ ಅಂಶಗಳೂ ಇವೆ. ಆದರೆ ಒಂದು ಸಂಸ್ಥೆಯಾಗಿ ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಕರ್ಣನ್ ವಿಷಯದಲ್ಲಿ ನಡೆದುಕೊಂಡ ಅರಾಜಕ ಹಾಗೂ ಸಂವಿಧಾನ ಬಾಹಿರ ಕ್ರಮಗಳಿಗೆ ಸಂಸತ್ತು, ಸರಕಾರ, ಸಮಾಜ ಹಾಗೂ ಮಾಧ್ಯಮಗಳು ಕುರುಡಾದದ್ದು ಹೇಗೆ ಮತ್ತು ಏಕೆ? ಮೊದಲನೆಯದಾಗಿ ನ್ಯಾಯಾಧೀಶರ ಭ್ರಷ್ಟಾಚಾರದ ಬಗ್ಗೆ ಕರ್ಣನ್ ಅವರು ಮಾಡಿದ ಆರೋಪಗಳ ಬಗ್ಗೆ ಈವರೆಗೆ ಸುಪ್ರೀಂಕೋರ್ಟ್ ಒಂದು ಸ್ವತಂತ್ರ ಒಳ ತನಿಖೆಯನ್ನೂ ಕೂಡ ನಡೆಸದೆ ಅವೆಲ್ಲಾ ಕಫೊಲ ಕಲ್ಪಿತ ಆಪಾದನೆ ಹಾಗೂ ಅದರಿಂದ ನ್ಯಾಯಾಂಗ ನಿಂದನೆ ಎಂದು ಹೇಗೆ ತೀರ್ಮಾನಕ್ಕೆ ಬಂದಿತು? ಹಾಗೆ ನೋಡಿದಲ್ಲಿ 2009ರಲ್ಲಿ ಪ್ರಶಾಂತ್ ಭೂಷಣ್ ಅವರೂ ಸಹ ಹಿಂದಿನ 16 ಮುಖ್ಯ ನ್ಯಾಯಾಧೀಶರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಭ್ರಷ್ಟರು ಎಂದು ಬರೆದಿದ್ದಾರೆ. ಅಷ್ಟು ಮಾತ್ರವಲ್ಲ. 2016ರ ಆಗಸ್ಟ್ 9ರಂದು ಅರುಣಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿ ಕಾಲಿಕೋ ಫೂಲ್ ಅವರು ಅಂದಿನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಖೇಹರ್ ಅವರು ಭ್ರಷ್ಟ್ರಾಗಿರುವುದರಿಂದ ತನಗೆ ನ್ಯಾಯ ಸಿಗುವುದಿಲ್ಲ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡರು. ಹೀಗಾಗಿ ಕರ್ಣನ್ ಅವರ ಆರೋಪ ಬುನಾದಿ ರಹಿತವಾದದ್ದೇನಲ್ಲ ಮತ್ತು ಅವರು ತಮ್ಮ ಆರೋಪಗಳನ್ನು ಸಂವಿಧಾನ ಬಾಹಿರವಾಗಿಯೂ ಮಾಡಲಿಲ್ಲ. ನ್ಯಾಯಾಧೀಶರ ಬಗ್ಗೆ ಕ್ರಮ ತೆಗೆದುಕೊಳ್ಳಬಹುದಾದ ಅಧಿಕಾರ ಇರುವ ಸಂಸತ್ತಿನ ಆಳುವ ಪಕ್ಷದ ನಾಯಕನಾದ ಪ್ರಧಾನಿಗೆ ಪತ್ರ ಬರೆದರು. ಆದರೆ ಆ ಪ್ರಧಾನಿ ಅದರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಯಾರ ಮೇಲೆ ಆರೋಪ ಇತ್ತೋ ಅವರಿಗೇ ವರ್ಗಾಯಿಸಿದರು. ಈ ವಿಷಯದ ಬಗ್ಗೆ ನಾಗರಿಕ ಸಮಾಜ ಕುರುಡಾದದ್ದು ಏಕೆ?

ಎರಡನೆಯದಾಗಿ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಸುಪ್ರೀಂಕೋರ್ಟ್ ನ ನ್ಯಾಯಾಧೀಶರನ್ನು ಬಂಧಿಸಲು ಆದೇಶಿಸುವುದು ಅತಿರೇಕದ ಕ್ರಮ. ಅದೂ ಅಪರಾಧಗಳು ಸಾಬೀತಾಗುವ ಮೊದಲೇ. ಇಲ್ಲಿ ಕರ್ಣನ್ ಅವರು ತಪ್ಪೆಸಗಿದ್ದಾರೆ.

ಆದರೆ ಅದಕ್ಕಿಂತ ದೊಡ್ಡ ತಪ್ಪನ್ನು ಸುಪ್ರೀಂಕೋರ್ಟ್ ಎಸಗಿದೆ. ಸಂವಿಧಾನದ 129 ಮತ್ತು 142ರ ಕಲಮುಗಳ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳೆರಡೂ ಸಾಂವಿಧಾನಿಕವಾಗಿ ಸಮಾನಸ್ಥಾಯಿ ಇರುವ ಕೋರ್ಟ್‌ಗಳಾಗಿವೆ. ನ್ಯಾಯಿಕ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಅಂತಿಮವಾದರೂ ಸಾಂವಿಧಾನಿಕವಾಗಿ ಹೈಕೋರ್ಟ್‌ಗಳು ಸುಪ್ರೀಂಕೋರ್ಟ್ ಗಳ ಅಧೀನವಲ್ಲ. ಅಲ್ಲದೆ ಸಾಂವಿಧಾನಿಕವಾಗಿ ಒಬ್ಬ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಿ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಸುಪ್ರೀಂಕೋರ್ಟ್‌ಗೂ ಆ ಅಧಿಕಾರ ಇಲ್ಲ. ಹಾಗಿರುವಾಗ ಕರ್ಣನ್ ವಿಷಯದಲ್ಲಿ ಅವರಿಗೆ ಯಾವುದೇ ಪ್ರಕರಣಗಳನ್ನು ವರ್ಗಾಯಿಸ ಬಾರದೆಂಬ ಅಧಿಕಾರಚ್ಯುತಿ ಆದೇಶವನ್ನು ಯಾವ ಕಾನೂನಿನಡಿಯಲ್ಲಿ ಆದೇಶಿಸಿತು? ಸಂವಿಧಾನದ ಯಾವ ಕಲಮಿನ ಆಧಾರದಲ್ಲಿ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದು ಮಾತ್ರವಲ್ಲದೆ ಏಳು ಜನರ ಪೀಠವನ್ನು ರಚಿಸಿತು? ಇವೆಲ್ಲವೂ ಅಸಾಂವಿಧಾನಿಕ ಮಾತ್ರವಲ್ಲ...ಅತ್ಯಂತ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಕ್ರಮವಾಗಿದೆ. ಇದು ಸುಪ್ರೀಂಕೋರ್ಟ್ ನ ಸಾಂಸ್ಥಿಕ ಅರಾಜಕತೆಯಾಗಿದೆ. ಇದು ಒಬ್ಬ ವ್ಯಕ್ತಿಯಾಗಿ ಜಸ್ಟೀಸ್ ಕರ್ಣನ್ ಅವರ ವ್ಯಕ್ತಿಗತ ಅರಾಜಕತೆಗಿಂತ ಹೆಚ್ಚು ಖಂಡನಾರ್ಹವಾದದ್ದು. ನಾಗರಿಕ ಸಮಾಜ ಈ ವಿಷಯಕ್ಕೆ ಕುರುಡಾದದ್ದು ಹೇಗೆ?

ಒಂದೇ ಬಗೆಯ ತಪ್ಪಿಗೆ ಎರಡೆರಡು ಮಾನದಂಡಗಳು ತರವೇ?:

ಕರ್ಣನ್ ಅವರು 2011ರಲ್ಲಿ ತಮ್ಮ ಸಹೋದ್ಯೋಗಿಗಳ ವಿರುದ್ಧ ಸಂಪ್ರದಾಯಗಳನ್ನು ಮೀರಿ ಪತ್ರಿಕಾಗೋಷ್ಠಿಯನ್ನು ಮಾಡಿದರು. ಅದನ್ನು ಅತಿರೇಕ ಎನ್ನಲಾಯಿತು. ಮತಿಗೇಡಿತನ ಎನ್ನಲಾಯಿತು. 2018ರ ಜನವರಿ 12ರಂದು ಸುಪ್ರೀಂಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರು ತಮ್ಮ ಸಹೋದ್ಯೋಗಿ ನ್ಯಾಯಾಧೀಶರ ನಡೆಯಿಂದ ದೇಶವೇ ಆಪತ್ತಿನಲ್ಲಿದೆ ಎಂದು ಪತ್ರಿಕಾಗೋಷ್ಠಿ ಮಾಡಿದರು. ಅದನ್ನು ಮಾತ್ರ ನಾಗರಿಕ ಸಮಾಜ ಅತ್ಯಗತ್ಯ ನ್ಯಾಯಿಕ ಬಂಡಾಯವೆಂದು ಪರಿಗಣಿಸಿತು.ಎರಡು ಪತ್ರಿಕಾ ಗೋಷ್ಟಿಗಳ ವಸ್ತು ನ್ಯಾಯಂಗದ ಭ್ರಷ್ಟಾಚಾರವೇ ಆಗಿತ್ತು. ಅದರೂ ಒಂದನ್ನು ಸಹಜವಾಗಿ ಒಪ್ಪಿಕೊಂಡ ನಾಗರಿಕ ಸಮಾಜ ಮತ್ತೊಂದನ್ನು ಮಾತ್ರ ಏಕೆ ಅತಿರೇಕದ ಶಿಷ್ಟಾಚಾರಗಳ ಅರಿವಿಲ್ಲದ ಮತಿಗೇಡಿತನವೆಂದು ಪರಿಗಣಿಸಿತು? ಹಾಗೆ ನೋಡಿದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಕರ್ಣನ್ ನಿರಂತರತೆ ಮತ್ತು ಸ್ಥಿಮಿತತೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ ರಂಜನ್ ಗೊಗೋಯಿರಂತಹ ನ್ಯಾಯಾಧೀಶರು ಅಧಿಕಾರ ಹಾಗೂ ಇನ್ನಿತರ ಫೇವರ್‌ಗಳು ಸಿಕ್ಕ ಕೂಡಲೇ ಅಸ್ಥಿಮಿತತೆ ತೋರಿದ್ದಾರೆ. ಆದರೂ ನಾಗರಿಕ ಸಮಾಜ ಕರ್ಣನ್ ಅವರ ಬಗ್ಗೆ ವ್ಯಗ್ರವಾಗಿರುವಷ್ಟು ಗೊಗೋಯಿ ಬಗ್ಗೆ ಏಕೆ ವ್ಯಗ್ರವಾಗುವುದಿಲ್ಲ.?

ಕರ್ಣನ್ ಅವರು ತಮ್ಮ ಬೆಂಚಿಗೆ ಬರಬೇಕಾದ ಪ್ರಕರಣವನ್ನು ಬೇರೊಂದು ಬೆಂಚಿಗೆ ವರ್ಗಾಯಿಸಿದ್ದರ ಬಗ್ಗೆ ಶಿಷ್ಟಾಚಾರಗಳನ್ನು ಮೀರಿ ಬಹಿರಂಗವಾಗಿ ಆಕ್ಷೇಪಿಸಿದರು. ಇದೂ ಕೂಡ ಅತಿರೇಕದ ಕ್ರಮವೇ. ಆದರೆ 2018ರಲ್ಲಿ ಆಗಿನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ಮತ್ತೊಬ್ಬ ಹಿರಿಯ ನ್ಯಾಯಾಧೀಶ ಚಲಮೇಶ್ವರ್ ವಿಚಾರಣೆ ನಡೆಸುತ್ತಿದ್ದ ಪ್ರಕರಣವನ್ನು ಊಟದ ಬಿಡುವಿನಲ್ಲಿ ರದ್ದುಮಾಡಿದರು. ನಂತರದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ಮಹಿಳಾ ಸಹೋದ್ಯೋಗಿ ಒಬ್ಬರು ತನ್ನ ಮೇಲೆ ಮಾಡಿದ ಆರೋಪದ ವಿಚಾರಣೆಯನ್ನು ತಾನೇ ನಡೆಸಿದರು. ನಮ್ಮ ನಾಗರಿಕ ಸಮಾಜ ಇವೆಲ್ಲವನ್ನೂ ಕೂಡಾ ‘ಕರ್ಣನ್’ ಪ್ರಕರಣದಂತೆ ಮತಿಗೇಡಿತನದ, ಸತತ ನ್ಯಾಯಾಂಗ ನಿಂದನೆಯ ಕ್ರಮಗಳಿಗೆ ಉದಾಹರಣೆಯನ್ನಾಗಿ ಪರಿಗಣಿಸಲಿಲ್ಲ. ಏಕೆ?

ಪ್ರಜಾತಾಂತ್ರಿಕ ನೈತಿಕತೆ ಮತ್ತು ಪ್ರತಿರೋಧದ ಬ್ರಾಹ್ಮಣ್ಯ:

ಹೌದು. ಕರ್ಣನ್ ಅವರ ಪ್ರತಿರೋಧವು ಭೂಷಣ್ ಮತ್ತು ಸುಪ್ರೀಂಕೋರ್ಟ್ ನಡುವಿನ ಸಂಘರ್ಷದಷ್ಟು ನೇರ ಹಾಗೂ ಸರಳವಾಗಿಲ್ಲ. ಏಕೆಂದರೆ ಇಲ್ಲಿ ಕರ್ಣನ್ ಕೂಡಾ ಅಧಿಕಾರಯುತ ನ್ಯಾಯಾಧೀಶರೇ ಆಗಿದ್ದು ತಮಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿರುವ ಸುಪ್ರೀಂಕೋರ್ಟ್‌ನ ಸಾಂಸ್ಥಿಕ ಅಹಂಕಾರಕ್ಕೆ ಹಾಗೂ ಜಾತಿ ಪೂರ್ವಗ್ರಹಗಳನ್ನು ಹೊಂದಿದ್ದ ನಾಗರಿಕ ಸಮಾಜದ ಮನಸ್ಥಿತಿಗೆ ಸವಾಲು ಹಾಕಿದ್ದಾರೆ. ಆ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ನ ಜಡ್ಜ್ ಗಳಿಗೆ ತರವಲ್ಲದ ರೀತಿಯಲ್ಲಿ ನಡವಳಿಕೆ ಹಾಗೂ ಆದೇಶಗಳನ್ನು ನೀಡಿದ್ದಾರೆ. ಹೀಗಾಗಿ ಭೂಷಣ್‌ರ ಪ್ರಕರಣದಲ್ಲಿ ಕಾಣುವಷ್ಟು ಪರಿಶುದ್ಧ ಪ್ರತಿರೋಧ ಇದರಲ್ಲಿ ಕಾಣದೆ ಹೋಗಬಹುದು. ಆದರೆ ಸಾರದಲ್ಲಿ ಅವರ ಪ್ರತಿರೋಧ ನ್ಯಾಯಿಕ ಅಧಿಕಾರದ ಪ್ರಜಾತಾಂತ್ರೀಕರಣಕ್ಕಾಗಿಯೇ ಇದೆ. ಹೀಗಾಗಿ ಅದಕ್ಕೆ ಪ್ರಜಾತಾಂತ್ರಿಕ ನೈತಿಕತೆ ಇದೆ. ಅದನ್ನು ಕಾಣದೆ ಅವರ ನಡೆಗಳಲ್ಲಿ ಕೇವಲ ವಿವೇಚನೆ ಇಲ್ಲದ ನಡವಳಿಕೆ ಮತ್ತು ಅಸಂಬದ್ಧ ಆದೇಶಗಳನ್ನು ಮಾತ್ರ ಗುರುತಿಸುವುದು ಪ್ರತಿರೋಧದ ಬ್ರಾಹ್ಮಣ್ಯವಾಗುತ್ತದೆ. ನ್ಯಾಯಾಂಗದ ಪ್ರಜಾತಾಂತ್ರೀಕರಣಕ್ಕೆ ಭೂಷಣ್ ಹಾಗೂ ಕರ್ಣನ್ ಇಬ್ಬರೂ ಅತ್ಯಗತ್ಯ ಚುಚ್ಚು ಮದ್ದುಗಳೇ ಆಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)