varthabharthi


ಅನುಗಾಲ

ದೈವಘಟನೆ

ವಾರ್ತಾ ಭಾರತಿ : 3 Sep, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೈಚೆಲ್ಲಿ ಅಥವಾ ತಲೆಗೆ ಕೈಹೊತ್ತು ಕುಳಿತು ‘ದೇವರೇ ಗತಿ’ ಎನ್ನುವುದಕ್ಕೂ ಅರ್ಥಮಂತ್ರಿಗಳು ಹೇಳಿದ್ದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಆಡಳಿತದ ಸೂತ್ರಧಾರರು ತಮ್ಮ ನಂಬಿಕೆಗನುಸಾರವಾಗಿ ಪ್ರಜೆಗಳ ಕಷ್ಟಕೋಟಲೆಗಳ ನಿವಾರಣೆಗೆ ಪ್ರಾರ್ಥನೆ ಮಾಡಲಿ; ಆದರೆ ಅದನ್ನು ಅವರು ಪ್ರಜೆಗಳಿಗೆ ಹೇಳಿ ತಮ್ಮ ಹೊಣೆಯಿಂದ ಕಳಚಿಕೊಳ್ಳಬಹುದೇ?


ಭಾರತದ ಘನ ಅರ್ಥಮಂತ್ರಿಗಳು ಈ ದೇಶದ ದುಸ್ಥಿತಿಯ ಕುರಿತು ಮರುಗಿ ಕೊನೆಗೂ ಜ್ಞಾನೋದಯವಾದಂತೆ ಇದೊಂದು ‘ದೈವಘಟನೆ’ ಎಂದು ಹೇಳಿದರೆಂದು ವರದಿಯಾಗಿದೆ. ಇದನ್ನು ಕಾನೂನಿನ/ನ್ಯಾಯಶಾಸ್ತ್ರದ ಪರಿಭಾಷೆಯಲ್ಲಿ ‘ವಿಸ್ ಮೇಜರ್’ (vis major) ಎಂದು ಹೇಳಲಾಗುತ್ತದೆ. ಕಾನೂನು ಪದಕೋಶವು ಇದನ್ನು ‘ದೈವಘಟನೆ’ ಎಂದೇ ಅನುವಾದಿಸಿದೆ. ಮಾಧ್ಯಮವೂ ಸೇರಿದಂತೆ ಬಹಳಷ್ಟು ಮಂದಿ ಈ ಪದವನ್ನು ‘ದೇವರ ಆಟ’ ಎಂದು ಕನ್ನಡಿಸುತ್ತಿದ್ದಾರೆ. ‘‘ಪಡ್ಡೆ ಹುಡುಗರಿಗೆ ನೊಣಗಳು ಹೇಗೋ ಹಾಗೆ ನಾವು ದೇವರುಗಳಿಗೆ. ಅವರು ತಮ್ಮ ಆಟಕ್ಕಾಗಿ ನಮ್ಮನ್ನು ಕೊಲ್ಲುತ್ತಾರೆ.’’ ಎಂಬ ಮಾತುಗಳನ್ನು ಶೇಕ್ಸ್‌ಪಿಯರ್ ತನ್ನ ‘ಕಿಂಗ್ ಲಿಯರ್’ ನಾಟಕದಲ್ಲಿ ಬರೆದಿದ್ದಾನೆ. ಈ ಅರ್ಥದಲ್ಲಿ ಇದು ಆಟವೇ; ಆದರೆ ಪರಿಣಾಮ ಮಾತ್ರ ಭೀಕರವಾದದ್ದು; ಗಂಭೀರವಾದದ್ದು. ಮುಂದುವರಿಸುವ ಮೊದಲು ಈ ಪದದ ಬಗ್ಗೆ ಒಂದಿಷ್ಟು: ಮನುಷ್ಯನ ನಿಯಂತ್ರಣವನ್ನು ಮೀರಿ ನಡೆಯುವ ಯಾವುದೇ ಘಟನೆಯನ್ನು ‘ದೈವಘಟನೆ’ ಎಂದೇ ಹೇಳಲಾಗುತ್ತದೆಯಾದರೂ ಇದು ಅಸಹನೀಯ ಹಿಂಸೆಗೆ ಮತ್ತು ಅನಿಯಂತ್ರಿತ ದಾಳಿಯ ಕುರಿತು ಹೇಳುವ ಪದ. ಆಕಸ್ಮಿಕ ಮತ್ತು ಅನಿರೀಕ್ಷಿತ ಘಟನೆಗಳಿಗೆ ಸಂಬಂಧಿಸಿ ಇದನ್ನು ಬಳಸಲಾಗುತ್ತದೆಯಾದರೂ ಒಂದು ವೇಳೆ ನಿರೀಕ್ಷಿತವಾಗಿದ್ದರೂ ನಿಯಂತ್ರಿಸಲಾಗದ ಮತ್ತು ಎದುರಿಸಲಾಗದ ಘಟನೆಗಳೂ ‘ದೈವಘಟನೆ’ಗಳೆಂದೇ ಅರ್ಥವಿಸಲಾಗಿದೆ.

ಕೈಚೆಲ್ಲಿ ಅಥವಾ ತಲೆಗೆ ಕೈಹೊತ್ತು ಕುಳಿತು ‘ದೇವರೇ ಗತಿ’ ಎನ್ನುವುದಕ್ಕೂ ಅರ್ಥಮಂತ್ರಿಗಳು ಹೇಳಿದ್ದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಆಡಳಿತದ ಸೂತ್ರದಾರರು ತಮ್ಮ ನಂಬಿಕೆಗನುಸಾರವಾಗಿ ಪ್ರಜೆಗಳ ಕಷ್ಟಕೋಟಲೆಗಳ ನಿವಾರಣೆಗೆ ಪ್ರಾರ್ಥನೆ ಮಾಡಲಿ; ಆದರೆ ಅದನ್ನು ಅವರು ಪ್ರಜೆಗಳಿಗೆ ಹೇಳಿ ತಮ್ಮ ಹೊಣೆಯಿಂದ ಕಳಚಿಕೊಳ್ಳಬಹುದೇ?

ಆದರೆ ಪ್ರಶ್ನೆಯಿರುವುದು ಯಾವುದು ದೈವಘಟನೆ? ಆಡಳಿತದ ಅಥವಾ ಸಮಾಜದ ಮುನ್ನಡೆಯ ಹೊಣೆಯಿಲ್ಲದ ಪ್ರಜೆ ಹೀಗೆ ‘ದೈವಘಟನೆ’ಯನ್ನು ಉಲ್ಲೇಖಿಸಿ ತನ್ನ ಬಾಧ್ಯತೆಯಿಂದ ಪಾರಾಗಬಹುದೇ? ಬ್ಯಾಂಕಿನಿಂದ ಸಾಲ ಪಡೆದವನು ಕೋವಿಡ್-19, ಅದರಿಂದುಂಟಾದ ದುಷ್ಪರಿಣಾಮಗಳು, ನಿರುದ್ಯೋಗ ಇತ್ಯಾದಿಗಳನ್ನು ‘ದೈವಘಟನೆ’ಯೆಂದು ಉಲ್ಲೇಖಿಸಿ ತಾನು ಸಾಲ ಮರುಪಾವತಿಮಾಡಲಾರೆನೆಂದು ಹೇಳಿದರೆ ಬ್ಯಾಂಕುಗಳು ಮತ್ತು ಸರಕಾರ ಅವನ್ನು ಮನ್ನಿಸುತ್ತವೆಯೇ? ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಪಾಸಾಗದವನು ತನ್ನ ವೈಫಲ್ಯವನ್ನು ‘ದೈವಘಟನೆ’ ಎಂದು ಹೇಳಬಹುದೇ? ಹಾಗೆ ಹೇಳುವುದರ ಮೂಲಕ ಆತನು ತೇರ್ಗಡೆಯಾಗಬಹುದೇ?

ಅರ್ಥಮಂತ್ರಿಗಳ ಈ ವರ್ತನೆಗೆ ಮತ್ತು ಮಾತಿಗೆ ಟೀಕೆಗಳೇ ಎದುರಾಗಿವೆ. ಇದನ್ನು ಅವರದೇ ಪರಿವಾರವೂ ಸಮರ್ಥಿಸಿಲ್ಲ. ಜ್ಯೋತಿಷ್ಯ, ಆಸ್ತಿಕತೆ, ದೈವಘಟನೆ ಇವೆಲ್ಲ ಸಾಮಾಜಿಕ ವಲಯದಲ್ಲಿ ನಂಬಿಕೆಯ ಪ್ರಶ್ನೆಗಳು. ಇವಕ್ಕೆ ನಡೆಯಲು ಕಾಣುವ ಕಾಲುಗಳಿಲ್ಲ. ಇವು ನಡೆಯುತ್ತವೆಂದು ನಂಬಬೇಕೇ ಹೊರತು ಸಾಬೀತುಮಾಡಲು ಸಾಧ್ಯವಾಗದು. ಕಾಕತಾಳೀಯವಾಗಿ ನಡೆಯುವುದನ್ನು ಹೋಲಿಸಿ ಅಥವಾ ಉದಾಹರಣೆಯಾಗಿ ನೀಡಿ ನಂಬಿಸಬೇಕೇ ಹೊರತು ಇವನ್ನು ವೈಜ್ಞಾನಿಕವಾಗಿ ವ್ಯವಹರಿಸಬೇಕಾದ ಜಗತ್ತು ಸರಿಯೆಂದು ಬಿಂಬಿಸಬಾರದು. ಇಂತಹ ನಡವಳಿಕೆ ಆಡಳಿತ ನಡೆಸುವವರ ಬಾಯಲ್ಲಿ ಬಂದರೆ ಅದು ಹತಾಶೆಯ ಮತ್ತು ವೈಫಲ್ಯದ ಒಪ್ಪಿಗೆಪತ್ರದಂತೆ. ನಾವೇನೂ ಮಾಡಲಾರೆವು ಎಂಬುದರ ಅಂಕಿತ. ಪ್ರಾಯಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕೇಂದ್ರ ಮಂತ್ರಿಯೊಬ್ಬರು ತಮ್ಮ ಖಾತೆಗೆ ಸಂಬಂಧಪಟ್ಟಂತೆ ಹೀಗೆ ಹೇಳಿರುವುದು ಇದೇ ಪ್ರಥಮ.

ಆದರೆ ಇದಕ್ಕೆ ಮುನ್ನುಡಿಯೆಂಬಂತೆ ಇತ್ತೀಚೆಗೆ ಕೋವಿಡ್-19ರಿಂದ ಜಾರಿಕೊಳ್ಳುವುದಕ್ಕೆ ಪ್ರಧಾನಿಗಳೇ ಕೈಚಪ್ಪಾಳೆ ತಟ್ಟುವ, ದೀಪಹಚ್ಚುವ, ಶಂಖ-ಜಾಗಟೆ-ಘಂಟೆ ಬಾರಿಸುವ, ಒಣ ಆದರೆ ಜನಪ್ರಿಯ ತಂತ್ರಕ್ಕೆ ನಾಯಕತ್ವ ವಹಿಸಿದರು. ಇಡೀ ದೇಶವೇ ಸಮ್ಮೋಹನಕ್ಕೆ ಒಳಗಾದಂತೆ ಅವರ ಕರೆಯನ್ನು ಸ್ವೀಕರಿಸಿ ಚಾಚೂತಪ್ಪದೆ ಮಾತ್ರವಲ್ಲ ಅವರು ಹೇಳಿದಕ್ಕಿಂತಲೂ ಹೆಚ್ಚಾಗಿ ಅನುಷ್ಠಾನಕ್ಕೆ ತಂದರು. ಈ ಪೈಕಿ ಅನೇಕರು ಆನಂತರದ ದಿನಗಳಲ್ಲಿ ಸೋಂಕಿಗೆ ಮತ್ತು ಅದರ ಎಲ್ಲ ಪರಿಣಾಮಗಳಿಗೆ ತುತ್ತಾಗಿ ಇಂತಹ ಆಟಗಳಿಗೆ ಪಶ್ಚಾತ್ತಾಪ ಪಟ್ಟ ಉದಾಹರಣೆಗಳಿವೆ. ಸದ್ಯ ಭಾರತವೆಂಬ ಈ ದೇಶವು ನಭೂತೋ ಎಂಬಷ್ಟು ಸಮಸ್ಯೆಗಳನ್ನೆದುರಿಸುತ್ತಿದೆ. ಇದನ್ನು ನಿಭಾಯಿಸಲು ಮಾತುಗಳು ಸಾಕಾಗುವುದಿಲ್ಲ; ಕ್ರಿಯೆಗಳು ಬೇಕು. ಈಗಾಗಲೇ ಪಾತಾಳದ ವರೆಗೆ ಬೇರುಬಿಟ್ಟಿರುವ ಭ್ರಷ್ಟಾಚಾರ, ಪೊಲೀಸ್ ದೌರ್ಜನ್ಯ, ಬಡತನ, ಅನಾರೋಗ್ಯ, ಅನಕ್ಷರತೆಗಳ ಜೊತೆಗೆ ಹೊಸದಾಗಿ ಪ್ರವೇಶಿಸಿರುವ ಅತೀವ ಆರ್ಥಿಕ ದುರವಸ್ಥೆ, ಕೋವಿಡ್-19, ನೆರೆಹೊರೆಯವರೊಂದಿಗಿನ ವೈರ ಅಥವಾ ಶಿಥಿಲ ಸಂಬಂಧ, ಸಂಕುಚಿತ ಬಹುಸಂಖ್ಯಾತ ಮತೀಯ ಮನೋಭಾವ ಮತ್ತು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಜನಪ್ರಿಯವಾಗಿರುವ ಸರ್ವಾಧಿಕಾರ ಧೋರಣೆ ಮನುಷ್ಯಘಟನೆಯೇ ಹೊರತು ದೈವಘಟನೆಯಾಗಲು ಸಾಧ್ಯವಿಲ್ಲವೆಂದು ಇತಿಹಾಸ ಮತ್ತೆ ಮತ್ತೆ ಹೇಳಿದೆ.

ಒಂದೇ ಒಂದು ಸಮಾಧಾನದ ವಿಚಾರವೆಂದರೆ ಮೊದಲ ಬಾರಿಗೆ ನೆಹರೂ ಈ ಅಪವಾದದಿಂದ ಪಾರಾಗಿದ್ದಾರೆ. ನಮ್ಮ ಸಮಸ್ಯೆಗಳನ್ನು ಮತ್ತು ವೈಫಲ್ಯಗಳನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳುವ ಬಹುಮತವಿಲ್ಲವಾದ್ದರಿಂದ ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿಭಾಯಿಸಲು ವಿಫಲವಾಗಿರುವುದರಿಂದ ಕೊಳೆತುಹೋಗುತ್ತಿರುವ ಕುಂಬಳಕಾಯಿಗಳೇ ಮಾರಾಟವಾಗುತ್ತಿವೆ. ಎಲ್ಲವೂ ಸರಿಯಿದೆಯೆಂಬ ಘೋಷಣೆಯೊಂದಿಗೆ ಸಮಾಜದ ಹೆಚ್ಚಿನ ಜನರು ಬೃಹನ್ನಳೆಗಳಾಗಿ ಮಾತೇ ಜ್ಯೋತಿರ್ಲಿಂಗವಾಗಿದೆ. ಪುಟ್ಟ ಮಗುವು ಬೆತ್ತಲೆಯೆಂದು ಸಾರಿದ ಆನಂತರವೂ ರಾಜನ ಮೆರವಣಿಗೆ ಯಥಾಪ್ರಕಾರ ಮುಂದುವರಿದಿದೆ. ಸದ್ಯಕ್ಕೆ ಕಣ್ಣಿರುವ ಮಂದಿ ಕಣ್ಣಿಗೆ ಬಟ್ಟೆಕಟ್ಟಿಕೊಳ್ಳುವುದೇ ಉಳಿದಿರುವ ದಾರಿ. ವಿರೋಧಾಭಿವ್ಯಕ್ತಿಯನ್ನು, ಪ್ರತಿರೋಧವನ್ನು, ವಿನಾಕಾರಣ ದೌರ್ಜನ್ಯಕ್ಕೊಳ ಪಡಿಸುವ ಕಾನೂನುಗಳು ಅನೇಕವಿವೆ. ಅವುಗಳ ದುರ್ಲಾಭ ಪಡೆದು ಸರಕಾರವು ಈಗಾಗಲೇ ಅನೇಕರ ಸ್ವರವನ್ನು ನಿಲ್ಲಿಸಲು ಹೊರಟಿದೆ. ಇಂದಿರಾ ಗಾಂಧಿ ತುರ್ತುಸ್ಥಿತಿಯನ್ನು ಘೋಷಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕ್ರಮ ಕೈಗೊಂಡರೆ ಈಗಿನ ಸರಕಾರವು ಯಾವುದೇ ತುರ್ತುಸ್ಥಿತಿಯ ಘೋಷಣೆಯಿಲ್ಲದೆ ಕಾನೂನು, ಪೊಲೀಸು ಮತ್ತು ಕೆಲವಾದರೂ ನ್ಯಾಯಾಲಯಗಳ ಮೂಲಕ ಏಕಮುಖ ಸಮಾಜವನ್ನು ಸೃಷ್ಟಿಸಲು ಹೊರಟಿದೆ.

ವರವರರಾವ್, ಸುಧಾ ಭಾರದ್ವಾಜ್, ತೇಲ್ತುಂಬ್ಡೆ, ಡಾ.ಕಫೀಲ್ ಖಾನ್ (ಅವರೀಗ ಬಿಡುಗಡೆಯ ಆದೇಶವನ್ನು ಪಡೆದಿದ್ದಾರೆ!) ಮುಂತಾದ (ಈ ಪಟ್ಟಿ ಬಹು ದೀರ್ಘವಿದೆ!) ಅನೇಕ ಚಿಂತಕರನ್ನು ದಸ್ತಗಿರಿಮಾಡಿ ನಮ್ಮ ಕಾನೂನಿನ ಸಿಕ್ಕುಗಳ ಲಾಭ ಪಡೆದು ಅವರ ಮಾತನ್ನು ಕಟ್ಟಿಹಾಕಿದೆ. ಇಲ್ಲಿ ವಿಶೇಷವೆಂದರೆ ಇದು ಜಾತಿ-ಮತಗಳ ಆಧಾರದಲ್ಲಿ ನಡೆಯುತ್ತಿರುವ ದೌರ್ಜನ್ಯವಲ್ಲ. ಹಾಗಿದ್ದಿದ್ದರೆ ಈ ಬಲಿಪಶುಗಳಲ್ಲಿ ಬಹುಮಂದಿ ಹಿಂದೂಗಳಾಗಿರಲು ಸಾಧ್ಯವಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗೆ ಅಡ್ಡಿಯಾಗುವವರೆಲ್ಲರೂ ಇಂತಹ ದೌರ್ಜನ್ಯವನ್ನೆದುರಿಸಲೇಬೇಕು. ವಿಷಾದವೆಂದರೆ ಆರೋಪಗಳು ನಿರಾಧಾರವೆಂದು ನ್ಯಾಯಾಲಯಗಳಿಗೆ ಅನ್ನಿಸುವ ಹೊತ್ತಿಗೆ ಈ ವ್ಯಕ್ತಿಗಳ ಅಮೂಲ್ಯವಾದ ಅದೆಷ್ಟೋ ಆಯುಷ್ಯ ಕಳೆದಿರುತ್ತದೆ. ಅದನ್ನು ತುಂಬಿಕೊಡುವವರು ಯಾರು? ‘ನ್ಯಾಯ’ ವ್ಯವಸ್ಥೆಯು ನಗೆಪಾಟಲಿಗೀಡಾಗುವುದು ಇಂತಹ ಪರಿಸ್ಥಿತಿಯಿಂದ. ಪೊಲೀಸರಂತೂ ಬಹುಕಾಲದಿಂದ ಪ್ರಯೋಗಿಸದ ಲಾಠಿ-ಕೋವಿಗಳನ್ನು ಈಗ ಅತ್ಯುತ್ಸಾಹದಿಂದಲೇ ಬಳಸಿ ಅನ್ನದ ಋಣವನ್ನು ತೀರಿಸುತ್ತಿದ್ದಾರೆ. ಭಿನ್ನಧ್ವನಿಯ ಕಲಬುರ್ಗಿ, ಗೌರಿ, ದಾಭೋಲ್ಕರ್ ಮುಂತಾದವರನ್ನು ಹತ್ಯೆ ಮಾಡಿದ ದುಷ್ಟಶಕ್ತಿಗಳನ್ನು ಪತ್ತೆಮಾಡಲು ವಿಫಲವಾದ ತನಿಖಾ ದಳಗಳು ಗೌರವದ ವ್ಯಕ್ತಿಗಳನ್ನು ವಿಶ್ವವಿದ್ಯಾನಿಲಯದ ತರಗತಿಗಳಲ್ಲಿ ಪಾಠ ಹೇಳುವಲ್ಲಿಂದಲೇ ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ ದುಶ್ಶಾಸನನಿಗೂ ನಾಚಿಕೆಯಾಗಬೇಕು. ಕಕ್ಕಾಯಂ ಕ್ಯಾಂಪು ಮುಗಿಯುವುದೆಂದು? ಇವೆಲ್ಲ ಜಾಗತಿಕ ಮಟ್ಟದ ಅಮಾನವೀಯ ಸಂಸ್ಕೃತಿಯ ಭಾಗವಾಗಿದೆಯೆಂದು ಸಮಾಧಾನ ಹೇಳಬಹುದಾದರೂ ಸ್ವತಂತ್ರ ಭಾರತದ ಮಟ್ಟಿಗೆ ಇನ್ನಷ್ಟು ವಿಸ್ತರಿಸುತ್ತಿರುವ ಸುದೀರ್ಘ ರಾತ್ರಿಯ ಪಯಣವಾಗುತ್ತಿರುವುದು ನಮ್ಮ ‘ಸಂಸ್ಕೃತಿ’ಯು ‘ವಿಕೃತಿ’ಯತ್ತ ಸಾಗುತ್ತಿರುವ ದ್ಯೋತಕ.

ಕೋವಿಡ್-19 ಇಡೀ ವಿಶ್ವವನ್ನು ಬಾಧಿಸುತ್ತಿರುವ ಸಮಸ್ಯೆ. ಆದ್ದರಿಂದ ಇದರಲ್ಲಿ ನಾವೇನೂ ಮಾಡಬೇಕಾಗಿಲ್ಲ ಅಥವಾ ಮಾಡಲು ಸಾಧ್ಯವಿಲ್ಲವೆಂಬ ನೀತಿ ಸಲ್ಲದು. ನಮ್ಮಲ್ಲಿ ಇದು ಬಾಧಿಸುವುದಿಲ್ಲವೆಂಬಂತೆ ಪ್ರಧಾನಿಗಳು ವಿಜಯ ಪತಾಕೆಯನ್ನು ಹಿಡಿದದ್ದೇ ಹಿಡಿದದ್ದು. ಎಲ್ಲ ಥರದ ಪೊಳ್ಳು ಧಾರ್ಮಿಕ, ಜನಪ್ರಿಯ ಮಾತು-ಮಂತ್ರಗಳಿಂದಲೇ ಇದನ್ನು ಜಯಿಸಲು ಹೊರಟು ದೇಶವೇ ಹಾಸ್ಯಾಸ್ಪದವಾಗಿದೆ. ಹಿಂದೆಲ್ಲ ಹಳ್ಳಿಗಳ ಸಂತೆ-ಜಾತ್ರೆ-ಉತ್ಸವಗಳಲ್ಲಿ ತಾಜ್‌ಮಹಲ್ ನೋಡು, ಕುತುಬ್‌ಮಿನಾರು ನೋಡು, ಕೆಂಪುಕೋಟೆ ನೋಡು, ಎಂದೆಲ್ಲ ಫೋಟೊ ಸ್ಲೈಡುಗಳನ್ನು ತೋರಿಸಿ ಮರುಳುಮಾಡಿ ರಾತ್ರಿ ಬೆಳಗಾಗಬೇಕಾದರೆ ನೂರಾರು ರೂಪಾಯಿ ಸಂಪಾದನೆ ಮಾಡುವ ಕಿಲಾಡಿಗಳಿದ್ದರು. ಈಗ ಇವೆಲ್ಲ ನಶಿಸಿಹೋದವೆಂದು ಭಾವಿಸಿದರೆ ಹೊಸಬಗೆಯಲ್ಲಿ ಪ್ರವೇಶಿಸಿವೆ. ದುಡ್ಡು ಕೊಟ್ಟು ಹೊಳೆ ನೀರಲ್ಲಿ ಮಿಂದ ಎಂಬಂತೆ ಅಪಾರ ಜನರನ್ನು ಮೂರ್ಖತನದ ದಾರಿಯಲ್ಲಿ ಕುಣಿಸಿದ್ದು ಬಿಟ್ಟರೆ ಫಲಿತಾಂಶ ಶೂನ್ಯ! ಮೂಲಭೂತವಾಗಿ ಈ ದೇಶದ ಆಡಳಿತದ ಸೂತ್ರ ಹಿಡಿದವರಿಗೆ ವಿಜ್ಞಾನದಲ್ಲಿ ನಂಬಿಕೆಯಿಲ್ಲ. ಋಷಿ-ಮುನಿಗಳ ವರ-ಶಾಪಗಳ ಹಂತಕ್ಕೆ ನಾವು ಮರಳುತ್ತಿದ್ದೇವೆ. ಈಗ ಭಾರತವು ಕೋವಿಡ್ ಸೋಂಕಿನಲ್ಲಿ ವಿಶ್ವಗುರುವಾಗುವ ಸನಿಹದಲ್ಲಿದೆ. ನಾವು ವಿದೇಶಗಳಿಗೆ ನಮ್ಮನ್ನು ಹೋಲಿಸುವಾಗ ಅವುಗಳ ಜನಸಂಖ್ಯೆಯನ್ನು ಗಮನಿಸಬೇಕು. ಅವೆಲ್ಲ ಕಡಿಮೆ ಜನಸಂಖ್ಯೆಯ ದೇಶಗಳು. ಅವುಗಳ ಯಾವುದೇ ತಂತ್ರವೂ 135 ಕೋಟಿಯ ಈ ದೇಶಕ್ಕೆ ಅನ್ವಯಿಸದು. ಇಲ್ಲಿ ಜೀವದೊಂದಿಗೆ ಜೀವನವೂ ಸವಾಲೇ. ಆರಂಭದಲ್ಲಿ ಎಲ್ಲರನ್ನೂ ಕಾಪಾಡಲು ಸರಕಾರವು ಕೈಗೊಂಡ ತಪ್ಪು ನಿರ್ಧಾರಗಳು ವಿಫಲವಾದವು. ದೇಶವು ತನ್ನ ಅರ್ಥ ವ್ಯವಸ್ಥೆಯನ್ನು ದುರಂತದೆಡೆಗೆ ನೂಕಿತು. ತೀರ ತಡವಾಗಿ ಸರಕಾರವು ತನ್ನ ಕೈಗಳನ್ನು ಸಡಿಲಗೊಳಿಸಿದೆ. ಪರಿಣಾಮವಾಗಿ ಸದ್ಯ ಈ ಸೋಂಕಿನಿಂದ ಮುಕ್ತಿಯಿಲ್ಲ.

‘‘ಕೊರೋನದೊಂದಿಗೆ ಬದುಕಲು ಕಲಿಯಿರಿ’’ ಎಂಬ ಹುಸಿ ಘೋಷವಾಕ್ಯದೊಂದಿಗೆ ಸರಕಾರವು ನಿಜಾರ್ಥದಲ್ಲಿ ಕೊರೋನದೊಂದಿಗೆ ಸಾಯಲು ಇಲ್ಲವೇ ಉಪವಾಸವಿರಲು ಕಲಿಯಿರಿ ಎಂದು ಪಾಠಮಾಡುತ್ತಿದೆ! ಇವೆಲ್ಲದರ ಸಮುಷ್ಟಿ ಉತ್ತರವು ನಮ್ಮ ಜಿಡಿಪಿಯು ಶೇ.-23.9ಕ್ಕೆ ತಲುಪಿದ್ದರಲ್ಲಿದೆ. ಆದರೆ ಸರಕಾರವು ಇದನ್ನು ದೈವಘಟನೆಯೆಂದು ಹೇಳುವ ಹಂತಕ್ಕಿಳಿದಿದೆ. ಸಾಲಮಾಡಿ ಮನೆ ಕೊಂಡವರು, ಕಟ್ಟಿದವರು, ವಾಹನ ಖರೀದಿಸಿದವರು ಮಾಸಿಕ ಕಂತು ಕಟ್ಟಲಾಗದೆ ಸಾಲದ ಬಲೆಯೊಳಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಹೊರತರುವ ಮಾರ್ಗೋಪಾಯವಿಲ್ಲದ ಸರಕಾರವು ಎಲ್ಲವನ್ನೂ ಭಾರತೀಯ ರಿಸರ್ವ್ ಬ್ಯಾಂಕಿನ ಕೊರಳಿಗೆ ಕಟ್ಟಿ ಜಾರಿಕೊಳ್ಳುವ ಹಂತದಲ್ಲಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಾಯಬೇಕಾದ ಸ್ಥಿತಿ ನಾಗರಿಕರದ್ದು. ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದ ಸರಕಾರವು ಅಷ್ಟೇ ಸಂಖ್ಯೆಯ ನಿರುದ್ಯೋಗವನ್ನು ಹೊಸದಾಗಿ ಸೃಷ್ಟಿಸಿದೆ. ಇನ್ನೊಂದೆಡೆ ಚೀನಾ ಮತ್ತೆ ಭಾರತದ ಭೂಭಾಗವನ್ನು ವಶಪಡಿಸಿದೆಯೆಂಬ ಆತಂಕದ ವರದಿಗಳು ಲಭ್ಯವಿವೆ. ಇದನ್ನು ಸರಕಾರವು ನಿರಾಕರಿಸುತ್ತಲೇ ಬಂದಿದೆ. ಈಗ ಸರಕಾರವು ಆತ್ಮನಿರ್ಭರತೆ ಹೋಗಲಿ, ಆತ್ಮ ನಿರ್ಭಯತೆಯನ್ನು ಹೇಳುವ ಸ್ಥಿತಿಯಲ್ಲೂ ಇಲ್ಲ. ಮರ್ಕಟಸ್ಯ ಸುರಾಪಾನಂ.. ಎಂಬ ಸಂಸ್ಕೃತ ಸುಭಾಷಿತದಲ್ಲಿ ಮೊದಲೇ ಮಂಗ, ಅದರ ಮೇಲೆ ಸುರಾಪಾನ ಮಾಡಿದೆ, ಚೇಳು ಕುಟುಕಿದೆ, ಅಮಾವಾಸ್ಯೆಯ ರಾತ್ರಿ, ಭೂತ ಸಂಚಾರ.. ಇಂತಹ ಪರಿಸ್ಥಿತಿಯಲ್ಲಿ ಅದರ ನಡೆ ಹೇಗಿರಬಹುದು? ಭಾರತ ಸದ್ಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಇಂತಹ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಕುಳಿತಿದೆ. ಒಂದರ್ಥದಲ್ಲಿ ಮೌನವಾಗಿರುವ ದೇವರಂತೆ ವರ್ತಿಸುತ್ತಿರುವ ಸರಕಾರ ಈ ಎಲ್ಲ ವೈಪರೀತ್ಯಗಳನ್ನು ದೈವಘಟನೆಯೆಂದು ಹೇಳುವುದೂ ಸರಿ. ದೈವಘಟನೆಯೋ ಮನುಷ್ಯನಟನೆಯೋ? ವಿಸ್ಮತಿಯಿಂದ ಕಳಚಿಕೊಳ್ಳದೆ ತಿಳಿಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)