varthabharthi


ಸಂಪಾದಕೀಯ

ಪಾತಾಳಕ್ಕಿಳಿದ ಜಿಡಿಪಿ: ಯಾರು ಹೊಣೆ?

ವಾರ್ತಾ ಭಾರತಿ : 3 Sep, 2020

2014ಕ್ಕಿಂತ ಹಿಂದಿದ್ದ ‘ಬುರೇ ದಿನ’ಗಳನ್ನೇ ‘ಸುವರ್ಣಯುಗ’ವೆಂದು ಕರೆದು ತೃಪ್ತಿ ಪಡಬೇಕಾದ ಸ್ಥಿತಿಗೆ ಭಾರತವನ್ನು ತಂದು ನಿಲ್ಲಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸೋಮವಾರ ಬಿಡುಗಡೆಗೊಳಿಸಿದ್ದ ದತ್ತಾಂಶದ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರವು -23 ಶೇಕಡದಷ್ಟು ಕುಸಿದಿದೆ. ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ಆರ್ಥಿಕ ಪರಿಸ್ಥಿತಿಯು ಡೋಲಾಯಮಾನವಾಗಿದೆ ಎಂಬುದು ಈ ಅಂಕಿಅಂಶಗಳಿಂದ ದೃಢಪಟ್ಟಿದೆ. ಆದರೆ ಕೇಂದ್ರ ಅಂಕಿಅಂಶ ಹಾಗೂ ಯೋಜನಾನುಷ್ಠಾನ ಸಚಿವಾಲಯವು ಈ ಅಂಕಿಅಂಶಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಷ್ಕರಿಸಲಿದ್ದು, ಆಗ ಜಿಡಿಪಿ ಇನ್ನಷ್ಟು ಪಾತಾಳಕ್ಕಿಳಿಯಲಿದೆೆ. ಸ್ವಾತಂತ್ರಾನಂತರ ಭಾರತದ ಇತಿಹಾಸದಲ್ಲೇ ಯಾವತ್ತೂ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ಕನಿಷ್ಠ ಪಕ್ಷ ನಾಲ್ಕು ದಶಕಗಳಲ್ಲಾದರೂ ಭಾರತವು ಯಾವತ್ತೂ ಆರ್ಥಿಕ ಕುಗ್ಗುವಿಕೆಯನ್ನು ಕಂಡಿರಲಿಲ್ಲ. 1996ರಿಂದೀಚೆಗೆ ಭಾರತವು ತ್ರೈಮಾಸಿಕ ಜಿಡಿಪಿ ದತ್ತಾಂಶಗಳನ್ನು ಪ್ರಕಟಿಸಲು ಆರಂಭಿಸಿದಾಗಿನಿಂದ ಭಾರತದಲ್ಲಿ ಋಣಾತ್ಮಕ ಬೆಳವಣಿಗೆಯು ದಾಖಲಾಗಿರುವುದು ಇದೇ ಮೊದಲ ಸಲವಾಗಿದೆ.

ಕೋವಿಡ್-19 ಹಾವಳಿ ಹಾಗೂ ಅದು ಹರಡುವುದನ್ನು ತಡೆಯಲು ಅನಿವಾರ್ಯವಾಗಿ ಲಾಕ್‌ಡೌನ್ ಹೇರಲಾಗಿತ್ತಾದ್ದರಿಂದ ಜಿಡಿಪಿ ಅಧೋಗತಿಗೆ ಕುಸಿದಿದೆಯೆಂದು ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ಸಮಜಾಯಿಷಿ ನೀಡಿದ್ದಾರೆ. ಅಂಕಿಅಂಶ ಸಚಿವಾಲಯವು ಜಿಡಿಪಿ ದತ್ತಾಂಶವನ್ನು ಪ್ರಕಟಿಸುವ ಕೆಲವೇ ದಿನಗಳ ಮೊದಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೂ ಭಾರತ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಈಗ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು, ‘ದೇವರ ಆಟ’ವೆಂದು ಹೇಳಿ ಹೊಣೆಗಾರಿಕೆಯನ್ನು ಜಾರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೊರೋನ ಸೋಂಕಿನ ಹಾವಳಿಯು ವಿಶ್ವದ ಎಲ್ಲಾ ದೇಶಗಳ ಅರ್ಥಿಕ ಪ್ರಗತಿಯನ್ನು ನಿಧಾನಗೊಳಿಸಿದೆ. ಹೀಗಿರುವಾಗ ಭಾರತ ಕೂಡಾ ಆರ್ಥಿಕ ಹಿಂಜರಿತವನ್ನು ಕಂಡಿರುವುದರಲ್ಲಿ ವಿಶೇಷವಾದುದೇನೂ ಇಲ್ಲವೆಂಬ ಸಂದೇಶವನ್ನು ಕೇಂದ್ರ ಸರಕಾರ ದೇಶದ ಜನತೆಗೆ ನೀಡಹೊರಟಿದೆ.

ಇದೇ ಸಂದರ್ಭದಲ್ಲಿ ‘ಏನೂ ಆಗಿಲ್ಲ....ಜಿಡಿಪಿಗೂ ದೇಶದ ಆರ್ಥಿಕತೆಗೂ ಯಾವ ಸಂಬಂಧವೂ ಇಲ್ಲ’ ಎನ್ನುವಂತಹ ತಪ್ಪು ಸಂದೇಶವನ್ನು ತನ್ನ ಕಾರ್ಯಕರ್ತರ ಮೂಲಕ ದೇಶದ ಜನರಿಗೆ ಬಿಜೆಪಿ ನೀಡಲು ಹೊರಟಿದೆ. ಬಿಜೆಪಿ ಪದಾಧಿಕಾರಿಗಳ ನೇತೃತ್ವದ ಆನ್‌ಲೈನ್ ಬೆಂಬಲಿಗರ ಪಡೆಗಳು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಆರ್ಥಿಕ ಕುಸಿತದ ಬಗ್ಗೆ ಗಾಬರಿ ಪಡುವಂತಹದ್ದೇನೂ ಇಲ್ಲವೆಂದು ಹೇಳಿಕೊಳ್ಳುವ ಸಂದೇಶಗಳನ್ನು ಪ್ರಸಾರ ಮಾಡುತ್ತಿವೆ. ಅಮೆರಿಕ ಸೇರಿದಂತೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಎಷ್ಟೋ ಉತ್ತಮವಾಗಿದೆ ಎಂದು ಹೇಳಿಕೊಳ್ಳುತ್ತಿವೆ. ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ಹೇಳುತ್ತಿರುವವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಕಿಡಿಕಾರುತ್ತಿವೆ.

ವಾಸ್ತವ ಏನೆಂಬುದು ಎಲ್ಲರಿಗೂ ನಿಚ್ಚಳವಾಗಿ ಗೋಚರವಾಗುತ್ತಿದೆ. ಕೊರೋನ ಸಾಂಕ್ರಾಮಿಕ ರೋಗವು ಜಗತ್ತಿನ ಪ್ರತಿಯೊಂದು ರಾಷ್ಟ್ರದ ಆರ್ಥಿಕತೆಯನ್ನು ನಿಧಾನಗೊಳಿಸಿದೆಯೆಂಬುದು ನಿಜ. ಆದರೆ ಇತರ ಯಾವುದೇ ಸರಿಸಮಾನವಾದ ದೇಶಗಳ ಜೊತೆ ಹೋಲಿಸಿದರೆ ಭಾರತವು ಅತ್ಯಧಿಕವಾದ ಆರ್ಥಿಕ ಕುಗ್ಗುವಿಕೆಯನ್ನು ಅನುಭವಿಸುತ್ತಿದೆ. ಉದಾಹರಣೆಗೆ, ಅಮೆರಿಕದಲ್ಲಿ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತವು ಶೇ.9.1ರಷ್ಟಿದ್ದರೆ, ಭಾರತದಲ್ಲಿ ಅದು -23.9 ಶೇಕಡದಷ್ಟಾಗಿದೆ. ಜಗತ್ತಿನ ಇತರ ಯಾವುದೇ ಬೃಹತ್ ಆರ್ಥಿಕತೆಯ ರಾಷ್ಟ್ರಗಳಿಗಿಂತ ಭಾರತದ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಜಗತ್ತಿನ ಯಾವುದೇ ರಾಷ್ಟ್ರ ಕೊರೋನ ವೈರಸ್ ಹಾವಳಿಯಿಂದ ಮುಕ್ತವಾಗಿಲ್ಲ. ಆದರೆ ಈ ರೋಗದ ಹರಡುವಿಕೆಯನ್ನು ತಡೆಯಲು ಭಾರತ ಜಾರಿಗೊಳಿಸಿದ ಕಠಿಣವಾದ ಲಾಕ್‌ಡೌನ್ ಕ್ರಮಗಳು ಯಾವುದೇ ದೂರದೃಷ್ಟಿಯನ್ನು ಹೊಂದಿರಲಿಲ್ಲ. ಈ ಲಾಕ್‌ಡೌನ್ ದೇಶದ ಆರ್ಥಿಕತೆಯನ್ನು ಇನ್ನಷ್ಟು ನಾಶ ಮಾಡಿತೇ ಹೊರತು, ಕೊರೋನ ನಿಯಂತ್ರಿಸುವ ವಿಷಯದಲ್ಲಿ ಸಂಪೂರ್ಣ ವಿಫಲವಾಯಿತು. ಇಷ್ಟಕ್ಕೂ ಕೊರೋನವನ್ನು ಭಾರತ ಪ್ರವೇಶಿಸದಂತೆ ತಡೆಯುವುದಕ್ಕೆ ಸರಕಾರಕ್ಕೆ ಎಲ್ಲ ಅವಕಾಶಗಳಿದ್ದರೂ ಅವುಗಳನ್ನು ಸಂಪೂರ್ಣ ಕೈ ಚೆಲ್ಲಿ, ತೀರಾ ತಡವಾಗಿ ಎಚ್ಚರಗೊಂಡಿತು. ಸರಕಾರದ ಈ ಬೇಜವಾಬ್ದಾರಿಯ ಫಲವಾಗಿ ಇಡೀ ದೇಶ ಲಾಕ್‌ಡೌನ್‌ನಿಂದ ತತ್ತರಿಸಬೇಕಾಯಿತು.

ದೇಶದ ಇಂದಿನ ಸ್ಥಿತಿಗೆ ಕೊರೋನ ಕಾರಣ ಎನ್ನುವುದೇ ಅತಿ ದೊಡ್ಡ ಸುಳ್ಳು. ಕೊರೋನ ಕಾಣಿಸಿಕೊಳ್ಳುವುದಕ್ಕೆ ಮೊದಲೇ ದೇಶವು ಆರ್ಥಿಕ ಹಿಂಜರಿತದೆಡೆಗೆ ಸಾಗಿತ್ತು. ಕಾಗೆ ಕುಳಿತುಕೊಳ್ಳುವುದಕ್ಕೂ, ರೆಂಬೆ ಮುರಿಯುವುದಕ್ಕೂ ಸರಿಯಾಯಿತು. ನೋಟು ನಿಷೇಧದ ಬಳಿಕ ನಿರಂತರವಾಗಿ ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಅಂತಿಮವಾಗಿ ಸರಕಾರ ಕೊರೋನ ತಲೆಗೆ ಕಟ್ಟಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ನೋಡುತ್ತಿದೆ. ಕೊರೋನ ಭಾರತದ ಆರ್ಥಿಕತೆಗೆ ಚರಮ ಗೀತೆಯನ್ನು ಬರೆಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆರ್ಥಿಕತೆ ನಾಶಕ್ಕೆ ಕೊರೋನಾ ಕಾರಣ ಎಂದೇ ಇಟ್ಟುಕೊಳ್ಳೋಣ, ಆದರೆ ಕೊರೋನ ಭಾರತಕ್ಕೆ ಪ್ರವೇಶಿಸುವಲ್ಲಿ ಸರಕಾರದ ಬೇಜವಾಬ್ದಾರಿ ಕಾರಣವಾಗಿರುವುದರಿಂದ, ಆರ್ಥಿಕತೆಯ ಸರ್ವನಾಶದ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕು. ಒಂದು ವೇಳೆ ದೇಶದ ಆರ್ಥಿಕತೆಯು ಸದೃಢವಾಗಿರುತ್ತಿದ್ದರೆ ಅದಕ್ಕೆ ಕೊರೋನ ನೀಡಿದ ಆಘಾತದ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಎರಡು ವರ್ಷಗಳಿಂದ ಭಾರತ ಸತತವಾಗಿ ಆರ್ಥಿಕ ಹಿಂಜರಿಕೆಯನ್ನು ಕಾಣುತ್ತಿದ್ದುದರಿಂದ, ಕೊರೋನಾ ಆಘಾತವನ್ನು ಭಾರತ ತಾಳಿಕೊಳ್ಳಲು ವಿಫಲವಾಯಿತು. ಪ್ರಸಕ್ತ ಸನ್ನಿವೇಶವನ್ನು ಗಮನಿಸಿದಾಗ ದೇಶವು ಕ್ಷಿಪ್ರವಾಗಿ ಆರ್ಥಿಕ ಚೇತರಿಕೆಯನ್ನು ಕಾಣುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

ಆದರೆ ಸರಕಾರವು ಅಭಿವೃದ್ಧಿ, ಉದ್ಯೋಗ ಸೃಷ್ಟಿಯಂತಹ ಕಾರ್ಯಗಳಿಗೆ ಭಾರೀ ದೊಡ್ಡ ಮಟ್ಟದಲ್ಲಿ ವೆಚ್ಚ ಮಾಡಿದಲ್ಲಿ ಮಾತ್ರವೇ ಆರ್ಥಿಕ ಪುನಶ್ಚೇತನ ಸಾಧ್ಯವೆಂದು ಪರಿಣತರು ಅಭಿಪ್ರಾಯಿಸಿದ್ದಾರೆ. ಕೋವಿಡ್ ಬಿಕ್ಕಟ್ಟಿಗೂ ಮೊದಲು ಸರಕಾರದ ಸಾಲದ ವ್ಯವಹಾರಗಳು ಅತಿಯಾಗಿತ್ತು. ಅದು ಅಗತ್ಯವಿರುವುದಕ್ಕಿಂತಲೂ ಅಧಿಕ ಸಾಲವನ್ನು ಪಡೆಯುತ್ತಲೇ ಬಂದಿತ್ತು. ಇದರ ಪರಿಣಾಮವಾಗಿ ಈಗ ಅದರ ಕೈಯಲ್ಲಿ ಹೆಚ್ಚು ಹಣವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಸರಕಾರ ತನ್ನೆಲ್ಲ ವೈಫಲ್ಯಗಳನ್ನು ತುಂಬಲು ರಾಮಮಂದಿರ, ಎನ್‌ಆರ್‌ಸಿಯಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿರುವುದರಿಂದ ಭಾರತ ಇನ್ನಷ್ಟು ಅರಾಜಕತೆಗೆ ಜಾರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ, ಬಣ್ಣದ ಭಾಷಣಗಳಿಂದ ದೇಶವನ್ನು ಮೇಲೆತ್ತಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಇನ್ನಾದರೂ ಅರಿತು, ಅಂಬಾನಿಯ ಮೂಗಿನ ನೇರಕ್ಕೆ ದೇಶವನ್ನು ಕೊಂಡೊಯ್ಯದೆ, ಪರಿಣತರ ಸಲಹೆಗಳನ್ನು ಪಡೆದು ಮುಂದಕ್ಕೆ ಹೆಜ್ಜೆಯಿಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)