varthabharthi


ಸಿನಿಮಾ

ವಿ: ವಿಶೇಷವಿಲ್ಲದ ಸಾಧಾರಣ ಚಿತ್ರ

ವಾರ್ತಾ ಭಾರತಿ : 6 Sep, 2020
ಶಶಿಕರ ಪಾತೂರು

‘ವಿ’ ಎನ್ನುವುದು ನಾನಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ. ಬಹು ಕೋಟಿ ವೆಚ್ಚದ ಚಿತ್ರವೂ ಹೌದು. ಆದರೆ ಅಂಥದ್ದೆಲ್ಲ ನಿರೀಕ್ಷೆಯೊಡನೆ ಚಿತ್ರ ನೋಡಿದರೆ ನಿರಾಶೆಯೇ ಹೆಚ್ಚಾದೀತು.

ಚಿತ್ರದ ಒಂದೆಳೆ ಕತೆ ಹೇಳುವುದಾದರೆ ಪೊಲೀಸ್ ಅಧಿಕಾರಿಯೊಬ್ಬ ತನಗೆ ಸಾರ್ವಜನಿಕವಾಗಿ ಪಂಥಾಹ್ವಾನ ನೀಡುವ ಸರಣಿ ಹಂತಕನನ್ನು ಹಿಡಿಯುವ ಪ್ರಯತ್ನವೇ ಚಿತ್ರದ ಹೂರಣ. ಆದರೆ ಆ ಕೊಲೆಗಳಿಗೇನು ಕಾರಣ? ಆತನೋರ್ವ ಸೈಕೊ ಕೊಲೆಗಾರನೇ ಅಥವಾ ಹಿಂದಿನ ಹಗೆತನ ಏನಾದರೂ ಇತ್ತೇ ಎನ್ನುವ ವಿಚಾರ ಚಿತ್ರ ಕ್ಲೈಮ್ಯಾಕ್ಸ್ ತಲುಪುವ ಹೊತ್ತಿಗೆ ಬೆಳಕಿಗೆ ಬರುತ್ತದೆ.

ಕೊಲೆಗಾರ ಮತ್ತು ಪೊಲೀಸ್ ಪತ್ತೆದಾರಿಕೆಯ ಕೆಲಸ ಎಂದಾಗ ನಿರೀಕ್ಷಿಸಬಹುದಾದ ಸಾಧಾರಣ ಕಣ್ಣಾಮುಚ್ಚಾಲೆಗಿಂತ ಹೆಚ್ಚಿನ ಸನ್ನಿವೇಶಗಳು ಚಿತ್ರದಲ್ಲಿಲ್ಲ. ಹಾಗಾಗಿ ತನಿಖೆಯಲ್ಲಿ ಕಾಣಬಹುದಾದ ರೋಚಕತೆಗೆ ಅವಕಾಶ ಇಲ್ಲ. ಪ್ರತಿಯೊಂದು ಕೊಲೆಗಳನ್ನು ಕೂಡ ಎದುರಾಳಿ ಬಹಳ ಸುಲಭದಲ್ಲೇ ಮಾಡಿಕೊಂಡು ಹೋಗುತ್ತಾನೆ ಎನ್ನುವ ಭಾವ ನಮಗೆ ಮೂಡುತ್ತದೆ. ಆಮೇಲೇನು ಎಂದಿನಂತೆ ಒಂದು ಸಾಧಾರಣವಾದ ಕ್ಲೈಮ್ಯಾಕ್ಸ್. ಅದನ್ನು ಕೂಡ ಪೋಷಕ ಪಾತ್ರವೊಂದರ ಮೂಲಕ ಬಹಳ ವೇಗವಾಗಿ ತೋರಿಸಲಾಗಿದೆ. ಭಾವನಾತ್ಮಕತೆಯಿಂದ ದೂರವೇ ಉಳಿಯುವ ಒಂದಷ್ಟು ದೃಶ್ಯಗಳನ್ನು ತೂರಿಸಲಾಗಿದೆ.

ಚಿತ್ರದ ಹೆಸರೇ ವಿ. ಅಂಥದೊಂದು ಅಕ್ಷರದ ಮೂಲಕ ಸೂಚನೆ ನೀಡಿ ಸರಣಿ ಕೊಲೆಗಳನ್ನು ಮಾಡುವವನೇ ವಿಷ್ಣು. ಆ ಪಾತ್ರದ ಮೂಲಕ ಒಬ್ಬ ಸೈಕೊ ಕಿಲ್ಲರ್ ರೂಪದಲ್ಲಿ ಕಾಣಿಸಿಕೊಂಡಿರುವ ನಾನಿ ಮೊದಲ ಸಲ ಇಮೇಜ್ ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಲುಕ್‌ನಿಂದ ಹಿಡಿದು ಕಂಠ, ನಟನೆ ಎಲ್ಲದರಲ್ಲಿಯೂ ಹೊಸತನ ಮೂಡಿಸುವ ಅವರ ಪ್ರಯತ್ನವನ್ನು ಖಂಡಿತವಾಗಿ ಮೆಚ್ಚಬೇಕು. ಆದರೆ ಯಾವುದು ಕೂಡ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ ಎನ್ನುವುದನ್ನು ಕೂಡ ಸ್ಮರಿಸಬೇಕು. ನಾನಿ ಸೈಕೊ ಕೊಲೆಗಾರ ಎನ್ನುವ ನಂಬಿಕೆ ಕೊನೆಯ ತನಕವೂ ಮೂಡುವುದೇ ಇಲ್ಲ! ಅದೇ ವೇಳೆ ಚಿತ್ರದ ಮೊದಲ ದೃಶ್ಯವೇ ಒಂದು ಆಕರ್ಷಕವಾದ ಹೊಡೆದಾಟದೊಂದಿಗೆ ಆರಂಭವಾಗುತ್ತದೆ. ಅದರ ಮೂಲಕ ಮಾಸ್ ಎಂಟ್ರಿ ನೀಡುವ ಪೊಲೀಸ್ ಅಧಿಕಾರಿ ಆದಿತ್ಯನಾಗಿ ಮತ್ತೋರ್ವ ನಾಯಕ ಸುಧೀರ್ ಬಾಬುವನ್ನು ತೋರಿಸಲಾಗಿದೆ. ಹೊಡೆದಾಟದಲ್ಲಿನ ಮೈಕಟ್ಟು, ಪ್ರೇಯಸಿ ಜೊತೆಗಿದ್ದಾಗ ಮುಖದಲ್ಲಿನ ಕ್ಯೂಟು ಹೀಗೆ ಎಲ್ಲ ವಿಭಾಗದಲ್ಲಿಯೂ ಸುಧೀರ್ ಬಾಬುವಿಗೆ ಪ್ರೇಕ್ಷಕರ ಭರ್ಜರಿ ಓಟು! ಉಳಿದಂತೆ ಆದಿತ್ಯನ ಜೋಡಿ ಅಪೂರ್ವ ರಾಮಾನುಜನ್ ಪಾತ್ರದಲ್ಲಿ ನಿವೇದ ಥಾಮಸ್ ನಟಿಸಿದ್ದಾರೆ. ಆದರೆ ಎಂಟ್ರಿ ಕೊಟ್ಟಷ್ಟೇ ವೇಗದಲ್ಲಿ ಅವರ ಪಾತ್ರ ಮರೆಗೆ ಸರಿಯಾಗುತ್ತದೆ. ವಿಷ್ಣುವಿನ ಜೋಡಿಯಾಗಿ ಸಾಹೇಬ ಎನ್ನುವ ಪಾತ್ರದಲ್ಲಿ ಅದಿತಿ ರಾವ್ ಅಭಿನಯಿಸಿದ್ದಾರೆ.

ನಟನೆಯ ವಿಚಾರಕ್ಕೆ ಬಂದರೆ ಇಬ್ಬರಿಗೂ ವಿಶೇಷ ಅವಕಾಶಗಳು ಇಲ್ಲವೆಂದೇ ಹೇಳಬಹುದು. ನಾನಿ ಮತ್ತು ಅದಿತಿ ನಟಿಸಿದ ಒಂದು ಪ್ರೇಮಗೀತೆ ಬಿಟ್ಟು ಉಳಿದ ಹಾಡುಗಳು ಚಿತ್ರ ಮುಗಿದ ಬಳಿಕ ಮರೆತೇ ಬಿಡುತ್ತವೆ. ಪೋಷಕ ಪಾತ್ರಗಳಲ್ಲಿ ಕೂಡ ದಿಗ್ಗಜ ಕಲಾವಿದರೇ ಇದ್ದಾರಾದರೂ ಯಾರ ಅಭಿನಯ ಕೂಡ ಮಸ್ಸಿಗೆ ತಾಕುವಂಥ ದೃಶ್ಯಗಳಿಲ್ಲ. ಹಿರಿಯ ನಟಿ ರೂಪಿಣಿ, ಮಧುಸೂದನ್, ಹರೀಶ್ ಉತ್ತಮನ್, ತನಿಕೆಳ್ಳ ಭರಣಿ ಸೇರಿದಂತೆ ವೆನ್ನಲ ಕಿಶೋರ್ ಮೊದಲಾದ ಕಲಾವಿದರು ಚಿತ್ರದಲ್ಲಿ ಇದ್ದಾರೆ. ಸಾಹಸ ಸಂಯೋಜಕ ರವಿ ವರ್ಮ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳು ಭರ್ಜರಿಯಾಗಿ ಮೂಡಿಬಂದಿವೆ.
ಒಟ್ಟಿನಲ್ಲಿ ವಿ ಎನ್ನುವ ಪ್ರಯತ್ನಕ್ಕೆ ಮೆಚ್ಚಬಹುದೇ ಹೊರತು ವಿಸಲ್ ಹೊಡೆದು ಎಂಜಾಯ್ ಮಾಡಬಹುದಾದ ಚಿತ್ರ ಇದು ಅಲ್ಲ.

ತಾರಾಗಣ: ನಾನಿ, ಸುಧೀರ್ ಬಾಬು
ನಿರ್ದೇಶನ: ಮೋಹನ ಕೃಷ್ಣ ಇಂದ್ರಗಂಟಿ
ನಿರ್ಮಾಣ: ದಿಲ್ ರಾಜು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)