varthabharthi


ಸಂಪಾದಕೀಯ

ಅನಾರೋಗ್ಯದಿಂದ ಬಳಲುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ

ವಾರ್ತಾ ಭಾರತಿ : 9 Sep, 2020

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಆರು ತಿಂಗಳ ಹಿಂದೆ ಜಾಗತಿಕವಾಗಿ ಹನ್ನೆರಡನೇ ಸ್ಥಾನದಲ್ಲಿ ಇದ್ದ ಭಾರತ ಬ್ರೆಝಿಲ್‌ನ್ನು ಹಿಂದಿಕ್ಕಿ ಈಗ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ವಿಶ್ವದ ಸೋಂಕು ಪೀಡಿತರ ಪೈಕಿ ಶೇಕಡಾ 40ರಷ್ಟು ಭಾರತದಲ್ಲಿ ಇದ್ದಾರೆಂದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಭಾರತದಲ್ಲಿ 42 ಲಕ್ಷಕ್ಕೂ ಅಧಿಕ ಸೋಂಕು ಪೀಡಿತರಿದ್ದಾರೆ. ಇದರಿಂದಾಗಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಕೊರೋನ ಸೋಂಕಿತರ ಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಕೂಡ ಕೊರೋನ ಸೋಂಕು ಪೀಡಿತರ ಸಂಖ್ಯೆ ನಾಲ್ಕು ಲಕ್ಷವನ್ನು ದಾಟಿದೆ. ಲಾಕ್‌ಡೌನ್ ಸಡಿಲುಗೊಳಿಸಿದ ನಂತರ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ರಾಜ್ಯದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆಯನ್ನು ಗಮನಿಸಿದರೆ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಕೋವಿಡ್‌ನಿಂದ ಗುಣಮುಖರಾದವರಲ್ಲಿ ಮರು ಸೋಂಕು ಕಾಣಿಸಿಕೊಳ್ಳುತ್ತಿರುವುದು ಕೂಡ ಕಳವಳ ಪಡಬೇಕಾದ ವಾಸ್ತವವಾಗಿದೆ.

ಪರಿಸ್ಥಿತಿ ಹೀಗೆ ದಿನದಿಂದ ದಿನಕ್ಕೆ ಹದಗೆಡುತ್ತಿರುವಾಗಲೂ ಸರಕಾರ ಲಾಕ್‌ಡೌನ್ ನಿಯಮಗಳನ್ನು ಇನ್ನಷ್ಟು ಸಡಿಲುಗೊಳಿಸಿದೆ. ಬೆಂಗಳೂರಿನಲ್ಲಿ ಮೆಟ್ರೋ ಮತ್ತು ಎಸಿ ಬಸ್ ಸಂಚಾರವನ್ನು ಆರಂಭಿಸಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಈ ವರೆಗೆ ಮೂವತ್ತು ಮಂದಿ ಮಾತ್ರ ಪ್ರಯಾಣಿಸಲು ಅವಕಾಶವಿತ್ತು. ಆದರೆ ಈಗ ಪೂರ್ಣ ಪ್ರಮಾಣದಲ್ಲಿ ಸೀಟುಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ. ಕೊರೋನ ನಂತರ ಹಿನ್ನಡೆ ಅನುಭವಿಸುತ್ತಿರುವ ಆರ್ಥಿಕ ವ್ಯವಸ್ಥೆಗೆ ಪುನಶ್ಚೇತನ ನೀಡಲು ಲಾಕ್‌ಡೌನ್‌ಸಡಿಲುಗೊಳಿಸಲಾಗಿದೆ ಎಂದು ಸರಕಾರ ಹೇಳುತ್ತಿದೆ. ನಿಯಮಗಳನ್ನು ಸಡಿಲುಗೊಳಿಸಿ ಕುಂಟುತ್ತಿರುವ ಆರ್ಥಿಕತೆಯನ್ನು ಸರಿ ದಾರಿಗೆ ತರಲೇಬೇಕಾಗಿದೆ. ಸರಕಾರ ಮೊದಲೇ ಏಕಾಏಕಿ ಅವೈಜ್ಞಾನಿಕವಾದ, ಯಾವುದೇ ಪೂರ್ವ ಸೂಚನೆಗಳಿಲ್ಲದ ಲಾಕ್‌ಡೌನ್ ಹೇರಿದ್ದರಿಂದ ಮೊದಲೇ ದುರ್ಬಲವಾಗಿದ್ದ ದೇಶದ ಆರ್ಥಿಕತೆಗೆ ಚೇತರಿಸಲಾಗದ ಪೆಟ್ಟು ಬಿದ್ದಿದೆ. ಆದ್ದರಿಂದ ಲಾಕ್‌ಡೌನ್ ಸಡಿಲುಗೊಳಿಸುವ ಸರಕಾರದ ತೀರ್ಮಾನ ಅನಿವಾರ್ಯವಾಗಿರಬಹುದು. ಆದರೆ ಅದಕ್ಕಿಂತ ಮೊದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪನೀಡುವುದು ಅಗತ್ಯವಾಗಿದೆ.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಜಾಗತೀಕರಣದ ಶಕೆ ಆರಂಭವಾದ ನಂತರ ಸಂಪೂರ್ಣವಾಗಿ ನಿರ್ಲಕ್ಷಕ್ಕೊಳಗಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅನಾರೋಗ್ಯದಿಂದ ಬಳಲುತ್ತಿದೆ. ಸರಕಾರಿ ಆಸ್ಪತ್ರೆಗಳು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿವೆ. ಆದರೆ ಯಾವ ಆಸ್ಪತ್ರೆಯೂ ಸುಸಜ್ಜಿತವಾಗಿಲ್ಲ. ಬಹುತೇಕ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ.ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಹೆಸರಿಗೆ ಮಾತ್ರ ಸರಕಾರಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಮಂಜೂರಾದ ಹುದ್ದೆಗಳ ಪೈಕಿ 10,549 ಹುದ್ದೆಗಳು ಭರ್ತಿಯಾಗಿಲ್ಲ. ಹೀಗಾಗಿ ಕೋವಿಡ್ ಪೀಡಿತರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಬಂದಿವೆ.

ಕೊರೋನ ಬಂದ ನಂತರ ಪ್ರಮುಖ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳು, ಐಸಿಯು, ವೆಂಟಿಲೇಟರ್, ಪರೀಕ್ಷಾ ಪ್ರಯೋಗಾಲಯಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಅವುಗಳನ್ನು ಬಳಸಿಕೊಳ್ಳಲು ಪರಿಣತರ ಕೊರತೆ ಎದ್ದು ಕಾಣುತ್ತಿದೆ. ಈಗಿರುವ ಸಿಬ್ಬಂದಿಗೆ ಅವುಗಳನ್ನು ಉಪಯೋಗಿಸುವ ಬಗ್ಗೆ ಸೂಕ್ತವಾದ ಪರಿಣತಿ ಇಲ್ಲ. ಜೊತೆಗೆ ಈಗಿರುವ ಕೆಲವೇ ಸಿಬ್ಬಂದಿಯ ಮೇಲೆ ವಿಪರೀತ ಕೆಲಸದ ಒತ್ತಡ ಬೀಳುತ್ತಿದೆ. ಹೀಗಾಗಿ ಕಳೆದ ಆರು ತಿಂಗಳಿಂದ ನಿರಂತರವಾಗಿ ಹಗಲೂ ರಾತ್ರಿ ದುಡಿದ ಶುಶ್ರೂಷಕರಲ್ಲಿ ಅನೇಕರು ರಾಜೀನಾಮೆ ನೀಡಿ ಮನೆ ಸೇರಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಾಯಿಲೆ ಪೀಡಿತರಿಗೆ ಸೂಕ್ತವಾದ ಸೇವೆ ಲಭ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ, ಬಿಸಿ ನೀರು ಲಭ್ಯವಾಗುತ್ತಿಲ್ಲ. ಇದರ ಜೊತೆಗೆ ಆರೋಗ್ಯ ಸಿಬ್ಬಂದಿಯೇ ಸೋಂಕಿಗೆ ಒಳಗಾಗಿ ಪರದಾಡುತ್ತಿದ್ದಾರೆ.

ಇದಷ್ಟೇ ಅಲ್ಲ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೂಡಾ ಪಾವತಿಯಾಗುತ್ತಿಲ್ಲ. ಅದರಲ್ಲೂ ದಾದಿಯರ ಸಂಬಳದಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಬೆಂಗಳೂರಿನ ಸರಕಾರಿ ಆಸ್ಪತ್ರೆಗಳಲ್ಲಿ 33 ಸಾವಿರ ರೂಪಾಯಿ ಸಂಬಳ ಕೊಡಲಾಗುತ್ತಿದ್ದರೆ, ಜಿಲ್ಲಾ ಮಟ್ಟದಲ್ಲಿ 13 ಸಾವಿರ ರೂಪಾಯಿ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಹೊಸದಾಗಿ ನೇಮಕ ಮಾಡಿಕೊಂಡವರಿಗೆ 25 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿದೆ. ಇದಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಪರಿಣತ ವೈದ್ಯರಿಗೆ 1.20 ಲಕ್ಷ ರೂಪಾಯಿ ಹಾಗೂ ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂಪಾಯಿ ಸಂಬಳ ನೀಡಲಾಗುವುದೆಂದು ಆರೋಗ್ಯ ಇಲಾಖೆ ಜಾಹೀರಾತು ಮೂಲಕ ಪ್ರಕಟಿಸಿದರೂ ಸರಕಾರಿ ಸೇವೆಗೆ ಬರಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾದ ಸೇವೆ ಲಭ್ಯವಾಗುತ್ತಿಲ್ಲ.

ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಜನಸಾಮಾನ್ಯರ ಏಕೈಕ ಆಸರೆಯಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಸುಸಜ್ಜಿತಗೊಳಿಸಲು ಮೊದಲ ಆದ್ಯತೆ ನೀಡಬೇಕಾಗಿದೆ. ಈಗಿರುವ ವೈದ್ಯಕೀಯ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಬೇಕು. ಹಾಗಾಗಿ ತುರ್ತಾಗಿ ಖಾಲಿ ಇರುವ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಸಂಬಳ ಪಾವತಿಯಲ್ಲಿ ವಿಳಂಬವಾಗಬಾರದು. ಸಂಬಳದ ತಾರತಮ್ಯ ನಿವಾರಣೆಯಾಗಬೇಕು. ಪ್ರಜೆಗಳಿಗೆ ಈ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗದಿದ್ದರೆ ಅದು ಸರಕಾರದ ಘನತೆಗೆ ಶೋಭೆ ತರುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)