varthabharthi


ಸಂಪಾದಕೀಯ

ಕೆಸರಲ್ಲಿ ಹೂತ ಸಾಕ್ಷರತಾ ರಥ

ವಾರ್ತಾ ಭಾರತಿ : 10 Sep, 2020

ಮೂರು ದಶಕಗಳ ಹಿಂದೆ ದೇಶಾದ್ಯಂತ ಚಳವಳಿಯ ರೂಪ ಪಡೆದ ‘ಸಾಕ್ಷರತಾ ಆಂದೋಲನ’ ಈ ದೇಶದ ಅಕ್ಷರ ಜಾಗೃತಿಗೆ ನೀಡಿದ ಕೊಡುಗೆ ಅಗಾಧವಾದುದು. ಯುವಕರು, ವಿದ್ಯಾರ್ಥಿಗಳು ಈ ಆಂದೋಲನದಲ್ಲಿ ನಿಸ್ವಾರ್ಥವಾಗಿ ‘ಸ್ವಯಂಸೇವಕ’ರಾಗಿ ಭಾಗವಹಿಸಿದರು. ಹಳ್ಳಿಹಳ್ಳಿಗಳಲ್ಲಿ ವಯಸ್ಕರಿಗೆ ಅಕ್ಷರ ಶಿಕ್ಷಣವನ್ನು ಕಲಿಸುವ ಪ್ರಯತ್ನ ನಡೆಯಿತು. ಕನಿಷ್ಠ ಅರ್ಧಂಬರ್ಧ ಓದುವುದನ್ನು, ಹೆಬ್ಬೆಟ್ಟಿನ ಬದಲು ಸಹಿ ಹಾಕುವುದನ್ನು ಅವರು ಕಲಿತರು. ಎಲ್ಲಕ್ಕಿಂತ ಮುಖ್ಯವಾಗಿ ಸಾಕ್ಷರತೆಯ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿತು. ವಯಸ್ಕರಿಗೆ ಕಲಿತ ಅಕ್ಷರಗಳು ಎಷ್ಟರಮಟ್ಟಿಗೆ ಸಹಾಯಮಾಡಿತೋ ಬಿಟ್ಟಿತೋ, ತಮ್ಮ ಮಕ್ಕಳಿಗೆ ಅಕ್ಷರ ಕಲಿಸುವ ಅಗತ್ಯವನ್ನು ಅವರು ಮನಗಂಡರು. ಈ ಆಂದೋಲನ ನಡೆದು 30 ವರ್ಷಗಳು ಸಂದಿವೆ. ಈಗ ಈ ದೇಶ ಸಾಕ್ಷರತೆಯಲ್ಲಿ ಎಷ್ಟರಮಟ್ಟಿಗೆ ಸುಧಾರಣೆಯನ್ನು ಕಂಡಿದೆ ಎಂದರೆ, ಸಾಧನೆ ಮತ್ತೆ ನಮಗೆ ನಿರಾಸೆಯನ್ನು ಉಂಟು ಮಾಡುತ್ತದೆ. ಭಾರತದಲ್ಲಿ ಸಾಕ್ಷರರ ಪ್ರಮಾಣವು ಒಟ್ಟು ಜನಸಂಖ್ಯೆಯ ಶೇ.77ರಷ್ಟಿದ್ದು, ಇದು ಶೇ.80ರಷ್ಟಿರುವ ಜಾಗತಿಕ ಸರಾಸರಿಗಿಂತಲೂ ಕಡಿಮೆಯಾಗಿದೆ. ಸಾಕ್ಷರರ ಲಿಂಗಾನುಪಾತದಲ್ಲಿಯೂ (ಪುರುಷರು: ಶೇ.84 ಹಾಗೂ ಮಹಿಳೆಯರು ಶೇ.70.3,) ಭಾರೀ ಅಂತರ ಕಂಡುಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರರ ಪ್ರಮಾಣ ಶೇ.71 ಇದ್ದರೆ, ನಗರ ಪ್ರದೇಶಗಳಲ್ಲಿ ಶೇ. 86. ಇತ್ತೀಚೆಗೆ ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯ (ಎನ್‌ಎಸ್‌ಒ). ಪ್ರಕಟಿಸಿದ ದತ್ತಾಂಶವು, ಶೇ.92.2ರಷ್ಟು ಸಾಕ್ಷರರನ್ನು ಹೊಂದಿರುವ ಕೇರಳವು ದೇಶದಲ್ಲೇ ನಂ. 1 ಸಾಕ್ಷರತಾ ರಾಜ್ಯವೆನಿಸಿದೆ. ಇದೇ ವೇಳೆ ಆಂಧ್ರಪ್ರದೇಶದ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಅಲ್ಲಿನ ಸಾಕ್ಷರತಾ ಪ್ರಮಾಣವು ಕೇವಲ 66.4 ಶೇಕಡ ಆಗಿದೆ. ಸಾಕ್ಷರತೆಯ ಅಸಮತೋಲನ ಆಯಾ ಪ್ರದೇಶಗಳ ಸಾಮಾಜಿಕ, ಆರ್ಥಿಕ ಅಸಮತೋಲನಗಳಿಗೂ ಕಾರಣವಾಗಿರುತ್ತವೆ ಎನ್ನುವ ಅಂಶವನ್ನು ನಾವು ಗಮನಿಸಬೇಕಾಗಿದೆ. ಕಳೆದ ಕೆಲವು ದಶಕಗಳಿಂದ ಶಾಲಾ ದಾಖಲಾತಿ, ಶಾಲಾಶಿಕ್ಷಣವನ್ನು ಅರ್ಧದಲ್ಲೇ ತ್ಯಜಿಸುವುದು,ಶಾಲೆಗಳಲ್ಲಿ ಮೂಲಭೂತಸೌಕರ್ಯಗಳ ಕೊರತೆ, ಪ್ರತಿಕೂಲಕರ ಶಾಲಾ ಪರಿಸರ ಹಾಗೂ ನುರಿತ ಶಿಕ್ಷಕರ ಕೊರತೆ ಹೀಗೆ,ನಮ್ಮ ಶಿಕ್ಷಣರಂಗವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. 2011ರ ದೇಶದ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ 5 ಹಾಗೂ 14 ವರ್ಷದೊಳಗಿನ ಸುಮಾರು 60.5 ಲಕ್ಷ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದು, ಅವರು ಕೃಷಿ ಹಾಗೂ ಗುಡಿಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಇನ್ನು ಶಾಲೆಗಳನ್ನು ಅರ್ಧದಲ್ಲೇ ತ್ಯಜಿಸುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಕುಸಿತವಾಗದಿರುವುದು ಕೂಡಾ ಶಿಕ್ಷಣ ಕ್ಷೇತ್ರದ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. 2016ರ ಯುನೆಸ್ಕೊ ವರದಿಯ ಪ್ರಕಾರ, 4.70 ಕೋಟಿಗೂ ಅಧಿಕ ಮಂದಿ ಯುವಜನರು 10ನೇ ತರಗತಿಯೊಳಗೆ ಶಾಲಾಶಿಕ್ಷಣವನ್ನು ತ್ಯಜಿಸಿದವರಾಗಿದ್ದಾರೆ.

ಅಂತರ್‌ರಾಷ್ಟ್ರೀಯ ಸಾಕ್ಷರತಾ ದಿನವು ಎಲ್ಲಾ ಮಕ್ಕಳು ಓದುವಿಕೆ ಹಾಗೂ ಗಣಿತದಲ್ಲಿ ಪ್ರಾವೀಣ್ಯತೆಯ ಮಟ್ಟವನ್ನು ಗಳಿಸುವ ಗುರಿಯನ್ನು ಇರಿಸಿಕೊಂಡಿದೆ. ಆದಾಗ್ಯೂ, ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ(ಎಎಸ್‌ಇಆರ್, 2018)ಯು, ಐದನೇ ತರಗತಿ ಹಾಗೂ ಎಂಟನೇ ತರಗತಿಯ ಶೇ.49 ಹಾಗೂ ಶೇ.27ರಷ್ಟು ಮಕ್ಕಳಿಗೆ ಎರಡನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದೆ. ಅದೇ ರೀತಿ ಐದನೇ ತರಗತಿಯ ಶೇ.72 ವಿದ್ಯಾರ್ಥಿಗಳು ಹಾಗೂ ಎಂಟನೇ ತರಗತಿಯ ಶೇ.56ರಷ್ಟು ವಿದ್ಯಾರ್ಥಿಗಳಿಗೆ ಅತ್ಯಂತ ಗಣಿತದ ಸರಳವಾದ ಸಮಸ್ಯೆಗಳನ್ನು ಕೂಡಾ ಬಗೆಹರಿಸಲು ಸಾಧ್ಯವಾಗುತ್ತಿಲ್ಲವೆಂಬ ಕಳವಳ ವ್ಯಕ್ತಪಡಿಸಿದೆ.

ಇದಕ್ಕಿಂತಲೂ ಹೆಚ್ಚಾಗಿ, ಶಾಲೆಗಳಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ಸಾಕ್ಷರತೆಯ ಹಿನ್ನಡೆಗೆ ಕಾರಣವಾಗಿದೆ. 2016-17ನೇ ಸಾಲಿನ ಯು-ಡೈಸ್ ವರದಿಯ ಪ್ರಕಾರ ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಟ್ಟದಲ್ಲಿ 92 ಸಾವಿರಕ್ಕೂ ಅಧಿಕ ಏಕ ಶಿಕ್ಷಕ ಸರಕಾರಿ ಶಾಲೆಗಳಿವೆ. 18 ಶೇಕಡಕ್ಕೂ ಅಧಿಕ ಸರಕಾರಿ ಶಾಲಾ ಶಿಕ್ಷಕರು ತರಗತಿಗಳಲ್ಲಿ ಪರಿಣಾಮಕಾರಿ ಬೋಧನಾ ವಿಧಾನಗಳ ಬಗ್ಗೆ ತರಬೇತಿಯನ್ನು ಪಡೆದವರಲ್ಲ. ಇದರ ಜೊತೆಗೆ ಭಾರತದಲ್ಲಿ ಶೇ.25ರಷ್ಟು ಶಿಕ್ಷಕರು, ಶಾಲೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ. ಜಾರ್ಖಂಡ್ (41 ಶೇ.), ಬಿಹಾರ (37 ಶೇ.), ಪಂಜಾಬ್ (34.4 ಶೇ.), ಅಸ್ಸಾಂ (33.8 ಶೇ.), ಉತ್ತರಾಂಚಲ (32.8 ಶೇ.), ಛತ್ತೀಸ್‌ಗಡ (30.6 ಶೇ.) ಹಾಗೂ ಉತ್ತರಪ್ರದೇಶ ( 26.3 ಶೇ.)ದಂತಹ ಆರ್ಥಿಕವಾಗಿ ದುರ್ಬಲವಾಗಿರುವ ರಾಜ್ಯಗಳ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಾತಿ ಎದ್ದು ಕಂಡುಬಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಶಾಲೆಗಳಲ್ಲಿ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ (ಐಸಿಟಿ)ದ ಅನುಷ್ಠಾನವು ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಕಳವಳಕಾರಿ ವಿಷಯವಾಗಿದೆ. 2015-16ರ ಸಾಲಿನ ಡಿಎಸ್‌ಐಇ ಸಮೀಕ್ಷೆಯು ದೇಶಾದ್ಯಂತ ಕೇವಲ ಶೇ.24.01ರಷ್ಟು ಶಾಲೆಗಳು ಮಾತ್ರ ಕಂಪ್ಯೂಟರ್ ಹಾಗೂ ವಿದ್ಯುತ್ ಸೌಲಭ್ಯಗಳನ್ನು ಹೊಂದಿವೆ. 2020ರ ಜುಲೈ 29ರಂದು ಕೇಂದ್ರ ಸಂಪುಟವು ಅನುಮೋದನೆ ನೀಡಿರುವ ನೂತನ ಸಾರ್ವಜನಿಕ ಶಿಕ್ಷಣನೀತಿಯು, ಕಲಿಕಾ ಕ್ಷೇತ್ರದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಬಿಕ್ಕಟ್ಟನ್ನು ಬಗೆಹರಿಸಲು ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕೆಲವೊಂದು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು. 2020ರೊಳಗೆ ದೇಶವು ಶೇ.100ರಷ್ಟು ಸಾಕ್ಷರತೆಯನ್ನು ಸಾಧಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಹಾಗೂ ವ್ಯೆಹಾತ್ಮಕ ಯೋಜನೆಗಳು ಹಾಗೂ ಉಪಕ್ರಮಗಳ ಬಗ್ಗೆ ನೀತಿಯಲ್ಲಿ ವಿವರಿಸಲಾಗಿದೆ.

ಆದರೆ ಈ ಗುರಿಗಳನ್ನು ಸಾಕಾರಗೊಳಿಸಲು ಬೇಕಾದ ಸಂಪನ್ಮೂಲಗಳನ್ನು ಸರಕಾರ ಒದಗಿಸಿಲ್ಲ. ಮುಖ್ಯವಾಗಿ, ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವ ಹಣ ಕಡಿಮೆಯಾಗುತ್ತ ಬರುತ್ತಿದೆ. ಹೀಗಿರುವಾಗ, ಹೊಸ ಉಪಕ್ರಮಗಳು ಅನುಷ್ಠಾನಕ್ಕೆ ತರುವ ಬಗೆಯಾದರೂ ಹೇಗೆ? ಕೊರೋನ ಮತ್ತು ಲಾಕ್‌ಡೌನ್ ಶಿಕ್ಷಣ ಕ್ಷೇತ್ರಕ್ಕೆ ಹೊಸ ಸವಾಲುಗಳನ್ನು ಹಾಕಿವೆ. ಆನ್‌ಲೈನ್ ಶಿಕ್ಷಣ ಈಗಾಗಲೇ ಪ್ರಚಾರಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಶಾಲೆಗಳು ಅಧಿಕೃತವಾಗಿ ತೆರೆಯಬಹುದು. ಆದರೆ ಈ ದೇಶದಲ್ಲಿ ಮೊಬೈಲ್ ಸೌಲಭ್ಯಗಳನ್ನು ಹೊಂದಿರುವ ಕುಟುಂಬಗಳೆಷ್ಟು ಎನ್ನುವುದನ್ನು ಲೆಕ್ಕ ಹಾಕಿದಾಗ, ಮತ್ತೆ ಶಿಕ್ಷಣ ಉಳ್ಳವರ ಸೊತ್ತಾಗಲಿದೆಯೇ ಎಂಬ ಆತಂಕ ಎದುರಾಗುತ್ತದೆ. ಲಾಕ್‌ಡೌನ್ ಸೃಷ್ಟಿಸಿರುವ ನಿರುದ್ಯೋಗ, ಬಡತನ ಇತ್ಯಾದಿಗಳು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಶಾಲೆ ಪ್ರವೇಶಿಸದಂತೆ ಮಾಡುತ್ತಿವೆ. ಈವರೆಗೆ ಎಳೆಯುತ್ತಾ ಬಂದ ಸಾಕ್ಷರತಾ ರಥದ ಚಕ್ರಗಳು ಏಕಾಏಕಿ ಲಾಕ್‌ಡೌನ್ ಕೆಸರಲ್ಲಿ ಹೂತು ಬಿಟ್ಟಿವೆ. ಅವುಗಳನ್ನು ಮೇಲೆತ್ತಲು ಸರಕಾರ ಹೊಸ ಯೋಜನೆಗಳನ್ನು ರೂಪಿಸುವ, ಸಾಕ್ಷರತೆಗಾಗಿ ಇನ್ನಷ್ಟು ಹಣವನ್ನು ಹೂಡುವ ಅಗತ್ಯವಿದೆ. ಇಲ್ಲವಾದರೆ ರಥ ಹಿಂದಕ್ಕೆ ಚಲಿಸುವುದಕ್ಕೆ ಆರಂಭಿಸಬಹುದು. 2009ರ ಶಿಕ್ಷಣದ ಹಕ್ಕು ಮಸೂದೆಯು ಪ್ರತಿಪಾದಿಸಿರುವ ಶೇ.100ರಷ್ಟು ಸಾಕ್ಷರತೆಯನ್ನು ಸಾಧಿಸಲು ಮತ್ತು 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವು ಲಭ್ಯವಾಗುವಂತೆ ಮಾಡಲು ರಾಜ್ಯಗಳು ಪರಸ್ಪರ ಸಮನ್ವಯದೊಂದಿಗೆ ಟೊಂಕಕಟ್ಟಿ ಕಾರ್ಯನಿರ್ವಹಿಸಬೇಕಾದ ಕಾಲ ಈಗ ಸನ್ನಿಹಿತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)