varthabharthi


ಅನುಗಾಲ

ವೈವಿಧ್ಯದ ಸಾವು

ವಾರ್ತಾ ಭಾರತಿ : 10 Sep, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಮಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಬೇಕೆಂಬವರು ಇತರರಿಗೂ ಅದು ಬೇಕಾಗಬಹುದೆಂದು ಚಿಂತಿಸದಿರುವುದು ವರ್ತಮಾನದ ದೌರ್ಭಾಗ್ಯ ದುರಂತಗಳಲ್ಲೊಂದು. ರಾಜಕೀಯ ಪಕ್ಷಗಳನ್ನು ಗಮನಿಸಿ. ಪ್ರಜಾತಂತ್ರವನ್ನು ಕೊಲೆಮಾಡುತ್ತಿದ್ದೀರೆಂದು ದೂರುವವರು ತಮ್ಮ ಸ್ಥಾನಕ್ಕೆ ಚ್ಯುತಿ ಬರುವಾಗ ಯೋಗ್ಯತೆ, ಅನುಭವ, ಇದ್ಯಾವುದನ್ನೂ ಲೆಕ್ಕಿಸದೆ ನಿಗ್ರಹಿಸುತ್ತಾರೆ. ಇದು ವೈವಿಧ್ಯದ ಸಾವು. ಕಾಡುಪ್ರಾಣಿಗಳಲ್ಲಿ ಮರಗಿಡಗಳಲ್ಲಿರುವಂತೆ ಲಿಂಗಭೇದವನ್ನು ಹೊರತುಪಡಿಸಿ (ಅದೂ ತನ್ನ ಸುಖಕ್ಕಾಗಿ!) ಪ್ರಭೇದಗಳನ್ನು ಮನುಷ್ಯ ಮಾನವತಳಿಯಲ್ಲಿ ಸಹಿಸುವುದಿಲ್ಲವೇನೋ?

ಕನ್ನಡದ ಕಣ್ವ ಎಂದು ಕರೆಯಲ್ಪಟ್ಟ ಬಿ.ಎಂ.ಶ್ರೀಯವರ ಜನ್ಮ ಶತಮಾನೋತ್ಸವದ ಸಂದರ್ಭ ಮಾಡಿದ ಭಾಷಣದಲ್ಲಿ ಕನ್ನಡದ ಇನ್ನೊಬ್ಬ ಶ್ರೇಷ್ಠ ಎ.ಎನ್.ಮೂರ್ತಿರಾಯರು ಒಂದು ಪ್ರಸಂಗವನ್ನು ನೆನಪಿಸುತ್ತಾರೆ: ಹೈಸ್ಕೂಲಿನಲ್ಲಿ ಚರ್ಚಾಕೂಟವೊಂದನ್ನು ಏರ್ಪಡಿಸಿದ್ದರಂತೆ. ಚರ್ಚೆಯ ವಿಷಯ: ಪುರಾತನ ಭಾರತ ಇಂದಿನ ಭಾರತಕ್ಕಿಂತ ಉತ್ತಮವಾಗಿತ್ತು! ಈ ಕೂಟದ ಸಭಾಪತಿಯಾಗಿ ಬಿ.ಎಂ.ಶ್ರೀಯವರನ್ನು ಕೋರಲಾಗಿ ಅವರು ‘‘ಹೌದಾ? ನೀವೊಂದು ಚರ್ಚಾಕೂಟವನ್ನು ಏರ್ಪಡಿಸಿದ್ದೀರಿ... ಪುರಾತನ ಭಾರತ ಇಂದಿನ ಭಾರತಕ್ಕಿಂತ ಉತ್ತಮವಾಗಿತ್ತು! ಭಾರತ ಇತರ ಎಲ್ಲದಕ್ಕಿಂತ ಒಳ್ಳೆಯದು; ಮತ್ತು ಪ್ರಾಚೀನ ಭಾರತವು ಯಾವುದೇ ವಿಚಾರದಲ್ಲೂ ಆಧುನಿಕ ಭಾರತಕ್ಕಿಂತ ಚೆನ್ನಾಗಿತ್ತು! ಸ್ವಸಮರ್ಥನೆಯ ಸೂಚನೆ!’’ ಎಂದು ಅರ್ಥಬರುವಂತೆ (ಇಂಗ್ಲಿಷಿನಲ್ಲಿ) ಹೇಳಿದರಂತೆ. ಎ.ಎನ್.ಮೂರ್ತಿರಾಯರು ಈ ವಿಚಾರವನ್ನು ಪ್ರಸ್ತಾವಿಸಿ ಆ ಕ್ಷಣ ಬಿ.ಎಂ.ಶ್ರೀ.ಯವರ ಮಾತುಗಳು ತಮಗೆ ಏನೂ ಅರ್ಥವಾಗದೆ, ತಮ್ಮನ್ನು ಟೀಕಿಸಿದರೆಂಬ ಭಾವವು ಕವಿದು ನಿರಾಶರಾದರೂ ಆನಂತರ ಈ ಮಾತುಗಳ ಅರ್ಥ ಸ್ಫುಟವಾಯಿತೆಂದು ಹೇಳುತ್ತಾರೆ. (ಬಿ.ಎಂ.ಶ್ರೀ.ಯವರು) ‘‘ಆಗಿನ ಕಾಲದಲ್ಲಿ ಕೂಡ ಭಾರತದ ವಿಷಯದಲ್ಲೇ ಆಗಲಿ, ಇತರ ದೇಶಗಳ ವಿಷಯದಲ್ಲೇ ಆಗಲಿ, ಒಂದು ಬಗೆಯ ನಿಷ್ಪಕ್ಷಪಾತವಾದ ದೃಷ್ಟಿಯನ್ನು ಬೆಳೆಸಿಕೊಂಡಿದ್ದರು. ನಮ್ಮ ದೇಶವನ್ನು ನಾವು ಹೊಗಳಿದರೆ, ನಮ್ಮ ಪೂರ್ವಿಕರನ್ನು ನಾವು ಹೊಗಳಿದರೆ, ಅದು ಎಲ್ಲರೂ ಮೆಚ್ಚಬೇಕಾದ ವಿಷಯ ಅಂತ ನಮ್ಮ ಭಾವನೆ. ಅವರಿಗೆ ಹೊಗಳಿಕೆ ಬೇಡ ಅಂತಲ್ಲ; ಆದರೆ ತಿಳಿದು ಹೊಗಳಬೇಕು. ಏನ್ಷಂಟ್ ಇಂಡಿಯಾದಲ್ಲೂ ಕೇಡಿಗರಿದ್ದಿರಬೇಕು; ತ್ರೇತಾಯುಗದಲ್ಲೂ ಇದ್ದಿರಬೇಕು. ರಾವಣ ಆ ಯುಗದವನು ತಾನೆ! ಹಿಂದೆ ಕೇಡಿಗರಿಲ್ಲದೆ ಇದ್ದರೆ ದೇವರಿಗೆ ಅವತಾರ ಮಾಡೋದಕ್ಕೆ ಅವಕಾಶವೇ ಸಿಕ್ಕುವುದಿಲ್ಲವಲ್ಲ! ಕೆಟ್ಟ ಪ್ರಪಂಚ ಸರಿಪಡಿಸೋದಕ್ಕೆ ತಾನೆ ಅವನು ಅವತಾರ ಮಾಡಬೇಕಾಗಿ ಬಂದದ್ದು! ಇದನ್ನು ಮರೆತು ನಾವು ಆಗಿನ ಕಾಲದಲ್ಲಿದ್ದದ್ದೆಲ್ಲ ಒಳ್ಳೆಯದು, ಈಗಿರೋದೆಲ್ಲ ಕೆಟ್ಟದ್ದು ಅಂದುಕೊಂಡಿದ್ದೆವು. ಅವರು ಈ ದೃಷ್ಟಿಗೆ ಆಗಲೇನೇ ಒಂದು ಪೆಟ್ಟು ಕೊಟ್ಟರು. ನಮ್ಮ ಮನಸ್ಸು ಸರಿಪಡಿಸೋದಕ್ಕೆ ಅವರ ಮಾತು ಸಹಾಯ ಮಾಡಿತು ಅಂತ ಕಾಣುತ್ತೆ.’’ ಎಂದು ಎ.ಎನ್.ಮೂರ್ತಿರಾಯರು ಮಾರ್ಮಿಕವಾಗಿ ಹೇಳುತ್ತಾರೆ. ಬಿ.ಎಂ.ಶ್ರೀ.ಯವರ ಅಭಿಪ್ರಾಯಗಳನ್ನು ಕನ್ನಡದ ಅನೇಕ ಹಿರಿಯರು, ದಾರ್ಶನಿಕರು ಹೇಳಿದ್ದಾರೆ. ಮಂಜೇಶ್ವರ ಗೋವಿಂದ ಪೈಗಳು ಯೇಸುಕ್ರಿಸ್ತನ ಕೊನೆಯ ಕುರಿತ ‘ಗೊಲ್ಗೊಥಾ’ ಖಂಡಕಾವ್ಯವನ್ನು ಬರೆದಿದ್ದಾರೆ. (ಅವರು ಬುದ್ಧನ ಕೊನೆಯ ದಿನಗಳ ಕುರಿತ ‘ವೈಶಾಖಿ’ ಎಂಬ ಖಂಡಕಾವ್ಯವನ್ನೂ ಬರೆದಿದ್ದಾರೆ. ಆದರೆ ಬೌದ್ಧಧರ್ಮವನ್ನು ಪರಕೀಯವೆಂದು ಇನ್ನೂ ಈ ದೇಶ ಆಪಾದಿಸಿಲ್ಲ!) ದೇವುಡು ನರಸಿಂಹ ಶಾಸ್ತ್ರಿಗಳು ಯೇಸುವಿನ ಕೊನೆಯ ದಿನಗಳ ಕುರಿತ ಜಾನ್ ಮೇಸ್‌ಫೀಲ್ಡ್‌ನ ಮಹಾಕಾವ್ಯವನ್ನು ಕನ್ನಡಿಸಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆಯುತ್ತ ಇನ್ನೊಬ್ಬ ಶ್ರೇಷ್ಠ ದಾರ್ಶನಿಕ ಸಾಹಿತಿ ಮಾಸ್ತಿಯವರು ‘‘ಒಂದೊಂದು ಮತದ ಜನರೂ ಇತರ ಎಲ್ಲ ಮತಗಳ ಗುರುಗಳ ವಿಷಯದಲ್ಲಿ, ಅವರ ಅನುಯಾಯಿಗಳ ವಿಷಯದಲ್ಲಿ, ಸಮಾಧಾನ ಬುದ್ಧಿಯಿಂದ ನಡೆದುಕೊಳ್ಳುವುದು ಬಹು ಅವಶ್ಯಕ. ಹೀಗೆ ನಡೆದುಕೊಳ್ಳದ್ದರಿಂದ ಮಾನವ ಚರಿತ್ರೆಯಲ್ಲಿ ಈ ಮೊದಲು ಅನೇಕ ಅನರ್ಥಗಳು ಸಂಭವಿಸಿದ್ದುಂಟು; ಈಗಲೂ ಸಂಭವಿಸುತ್ತಿದೆ. ಇನ್ನು ಮೇಲಾದರೂ ಮಾನವ ವರ್ಗದ ಒಂದು ಮುಖವಾಗಿ ಮುಂದುವರಿಯಬೇಕಾದರೆ ಇಂಥ ಸಮಾಧಾನ ಬುದ್ಧಿ ಬಹಳ ಅಗತ್ಯ.’’; ‘‘ಇತರ ಮತ ಹೇಳುವುದೇನು ಎಂದು ನಮಗೆ ಬೇಕಿಲ್ಲ; ಆದರೆ ನಮ್ಮ ಮತ ದೊಡ್ಡದಿರಬೇಕು ಎಂದು ನಮ್ಮ ಭಾವನೆ. ಅದರಲ್ಲಿ ಹುಟ್ಟಿದ್ದರಿಂದ ಅದು ದೊಡ್ಡದು ಎಂಬುದೇ ಪ್ರಾಯಶಃ ನಮ್ಮ ಆಂತರ್ಯದ ನಂಬಿಕೆ ಎಂಬಂತೆ ಕಾಣುತ್ತದೆ. ಹೀಗೆ ನಾವೆಲ್ಲ ನಮ್ಮ ನಮ್ಮ ಮತಗಳಿಗೆ ನಮ್ಮ ಅಭಿಮಾನದ ಗೊಂಗಡಿಯೊಂದನ್ನು ಹಾಕಿ ಸತ್ಯದ ದೇವರಿಗೆ ಕತ್ತಲ ಹಣತೆಯನ್ನು ಹಚ್ಚಿಟ್ಟು ಪೂಜೆ ಮಾಡುತ್ತೇವೆ. ನಾವು ಕಂಡೆವೆಂಬ ದೇವರನ್ನು ನಮ್ಮ ದೇವರು ಮಾತ್ರ ಎಂದು ಭಾವಿಸಿ ನಮ್ಮ ಬೊಮ್ಮ ಉಳಿದ ಜನರಿಗೆಲ್ಲಾ ಗುಮ್ಮನಾಗುವಂತೆ ನಡೆಯುತ್ತೇವೆ’’; ಮತ್ತು ರೂಪಕಾತ್ಮಕವಾಗಿ ‘‘ತನ್ನ ಮಗುವಿನ ತಂದೆ ತನ್ನ ಸವತಿಯ ಮಗುವಿಗೂ ತಂದೆ ಎಂದು ನೆನೆಯದೆ ಅವನ ತೊಡೆಯ ಮೇಲೆ ಕುಳಿತುಕೊಳ್ಳಕೂಡದೆಂದು ಧ್ರುವನನ್ನು ಅಟ್ಟಿದ ಸುರುಚಿಯಂತೆ ಇವರು ತಮ್ಮವರಲ್ಲವೆಂದವರನ್ನು ಲೋಕೇಶ್ವರನ ಸಮಕ್ಷಮಕ್ಕೆ ಬಿಡುವುದಿಲ್ಲ ಎನ್ನುತ್ತಾರೆ.’’ ಎಂದು ಬರೆದಿದ್ದಾರೆ. ಮತ-ಧರ್ಮ, ಆಸ್ತಿಕ-ನಾಸ್ತಿಕ, ಭಾವ-ವಿಚಾರ, ಈ ಎಲ್ಲ ಸಂಘರ್ಷವನ್ನು ಹೊರತುಪಡಿಸಿ ನೋಡಿದರೂ ಇದು ಎಲ್ಲ ಕಾಲಕ್ಕೂ ಸಲ್ಲುವ ಚರಮ ಸತ್ಯ. ವೈವಿಧ್ಯವುಳಿದರೆ ಸಂಸ್ಕೃತಿಯ ಉಳಿವು. ಪ್ರಾಯಃ ಇಲ್ಲಿ ಉಲ್ಲೇಖಿಸಲಾದ ಬಿ.ಎಂ.ಶ್ರೀ., ಮಾಸ್ತಿ, ಎ.ಎನ್.ಮೂರ್ತಿರಾಯರು ಮಾತ್ರವಲ್ಲ ಅವರ ಸಮಕಾಲೀನರಾದ ಕಾರಂತ, ಕುವೆಂಪು, ಬೇಂದ್ರೆ ಮುಂತಾದ ಅನೇಕ ಶ್ರೇಷ್ಠರೂ ಅದೃಷ್ಟವಂತರು. ಇಂದು ಅವರು ಬದುಕಿದ್ದರೆ ಅವರನ್ನು ಏಕವಚನದಲ್ಲಿ ಹೀಯಾಳಿಸುವ, ಜೀವ ಬೆದರಿಕೆ ಹಾಕುವ ದೊಡ್ಡ ದಂಡೇ ಇರುತ್ತಿತ್ತು. ಅವರ ಪ್ರತಿಭೆ, ಪಾಂಡಿತ್ಯ, ಅನುಭವ ಇತ್ಯಾದಿಗಳನ್ನು ಬದಿಗಿಟ್ಟು ‘‘ನೀವು ಪ್ರಾಚೀನ ಭಾರತದ ಶ್ರೇಷ್ಠ ಪರಂಪರೆಯನ್ನು ಧಿಕ್ಕರಿಸುತ್ತೀರಿ, ನಿಮಗೆ ಅಭಿವ್ಯಕ್ತಿಯ ಮಾತ್ರವಲ್ಲ ಬದುಕುವ ಹಕ್ಕೇ ಇಲ್ಲ’’ ಎಂದು ಖಂಡಿಸುವ ಮಾತುಗಳು ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಮತ್ತು ಇವರ ಕೃತಿಗಳನ್ನು ಬಹಿಷ್ಕರಿಸುವ ಕರೆಕೊಡುತ್ತಿದ್ದವು. ವಿದ್ಯುನ್ಮಾನ ಮಾಧ್ಯಮಗಳಂತೂ ಬೇಕಾಬಿಟ್ಟಿ ತಮ್ಮ ಅನರ್ಥಕೋಶದ ಆಯ್ದ ಪದಗಳಿಂದ ಈ ಎಲ್ಲ ಪೂರ್ವಸೂರಿಗಳನ್ನು ಬೀದಿಗೆಳೆದು ಮಾನಕಳೆಯುತ್ತಿದ್ದವು. ಇವರೆಲ್ಲ ಏನೂ ಗೊತ್ತಿಲ್ಲದವರು ಎಂದು ಮಾಡುವ ಅಬ್ಬರದ ಪ್ರಚಾರದ ನಡುವೆ ಇವರ ಪ್ರತಿನಿಧಿಗಳಾಗಿ ಹೋಗಿ ಆಳುವ ಮಂದಿ ಇವರ ಕೃತಿಗಳನ್ನೆಲ್ಲ ನಿಷೇಧಿಸುವುದು ಮಾತ್ರವಲ್ಲ, ದೇಶದ್ರೋಹಿಗಳೆಂದು ಕ್ರಿಮಿನಲ್ ಪ್ರಕರಣ ಜರುಗಿಸುವ ಸಾಧ್ಯತೆಯೂ ಇತ್ತು. ಭೌತಿಕ ನಶ್ವರತೆ ಈ ಮಹಾನುಭಾವರಿಗೆ ಒಂದು ವರವಾಗಿ ಪರಿಣಮಿಸಿತು. ಅವರಿಲ್ಲವೆಂಬ ಕಾರಣದಿಂದಲೋ ಅಥವಾ ಅವರನ್ನು ಓದುವುದಕ್ಕೆ ಮತ್ತು ಅರ್ಥಮಾಡಿಕೊಳ್ಳುವುದಕ್ಕೆ ಅಬ್ಬರಿಸಿ ಬೊಬ್ಬಿರಿವ ಹಾಲಿ ಸಮರ ಸರ್ವಜ್ಞರಿಗೆ ಬಿಡುವು, ಅವಕಾಶ, ವ್ಯವಧಾನವಿಲ್ಲದ್ದರಿಂದಲೋ ಅವರಿನ್ನೂ ತಮ್ಮ ಕೃತಿಗಳ ಮೂಲಕ ಉಳಿದುಕೊಂಡಿದ್ದಾರೆ. ಪ್ರಾಯಃ ಸರಕಾರ ಈ ಎಲ್ಲ ಸಾಹಿತಿ/ಚಿಂತಕರ ಕೃತಿಗಳನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದರೆ ಅಚ್ಚರಿಪಡಬೇಕಾದ್ದಿಲ್ಲ.

ಇತಿಹಾಸವು ಅವನತಿಯ ಯಾತ್ರೆ. ಯಥಾ ರಾಜಾ ತಥಾ ಪ್ರಜಾಃ; ಅಥವಾ ಯಥಾ ಪ್ರಜಾ ತಥಾ ರಾಜಾ! ಹೇಗೆ ಬರೆದರೂ ಸರಿಯೆ. ಏಕೆಂದರೆ ನಾವು ಅರಸೊತ್ತಿಗೆಯಿಂದ ಪ್ರಜಾತಂತ್ರವೆಂಬ ಶೀರ್ಷಿಕೆಯ ಹೊಸಮಜಲನ್ನು ತಲುಪಿದ್ದೇವೆ. ಈಗ ಆಳುವವರು ತಮ್ಮ ನಿರ್ಧಾರವನ್ನು ಜನರ ಮೇಲೆ ಹೇರುವುದನ್ನು ಕಂಡರೆ ಹಿಂದಿನ ರಾಜರೇ ವಾಸಿಯೆನಿಸುತ್ತದೆ. ಇದಕ್ಕೆ ಕಾರಣ ಸ್ಪಷ್ಟ: ಜನರು ಆಯ್ಕೆ ಮಾಡುವ ವ್ಯಕ್ತಿಗಳು ಸಮಾಜಕ್ಕೆ, ಕಾಲಕ್ಕೆ, ದೇಶಕ್ಕೆ ಮಾತ್ರವಲ್ಲ ತಮಗೆ ಮತವಿತ್ತವರಿಗೆ, ಕೊನೆಗೆ ತಮ್ಮ ಅನುಯಾಯಿಗಳಿಗೂ ಉತ್ತರದಾಯಿತ್ವವನ್ನು ಹೊಂದಿಲ್ಲ. ರಾಜರಿಗೆ ಸಲಹೆ ನೀಡುವುದಕ್ಕೆ, ಪ್ರಜಾ ಪರಿಪಾಲನೆಗೆ ಕೆಲವು ಮಂತ್ರಿಗಳಾದರೂ ಇದ್ದರು. ಈಗ ರಾಜನಿಲ್ಲ; ಮಂತ್ರಿಗಳಿಗೆ ಸಲಹೆ ನೀಡಲು ಯೋಗ್ಯರು ಅಂತಲ್ಲ, ಯಾರೂ ಇಲ್ಲ. ಅವರೇ ಅಧಿಕಾರ ನಿಮಿತ್ತ ಸ್ವಯಂಭೂ ಬ್ರಹ್ಮರು. ಆದ್ದರಿಂದ ಅವರು ನಡೆದದ್ದೇ ದಾರಿ.

ಆಗಲೂ ಕೇಡಿತ್ತು; ಆದರೆ ಅದರಲ್ಲೂ ಒಂದು ನ್ಯಾಯಪರತೆಯಿತ್ತು. ಇಂದು ರಾವಣನಿರುತ್ತಿದ್ದರೆ ಭಿನ್ನತೆಯನ್ನು ವ್ಯಕ್ತಪಡಿಸಿದ ವಿಭೀಷಣನು ಯಾವ ಹಿಂಸೆಗೆ ಒಳಪಡುತ್ತಿದ್ದನೋ? ಕೌರವನಿರುತ್ತಿದ್ದರೆ ವಿದುರನಿಗೆ ಅಲ್ಲೇ ಮರಣದಂಡನೆಯಾಗುತ್ತಿತ್ತೇನೋ? ಅಂದರೆ ಅಲ್ಲೆಲ್ಲ ಎಷ್ಟೇ ಕೆಟ್ಟವರಿದ್ದಾಗಲೂ ಎಲ್ಲೋ ಒಂದುಕಡೆ ಮಾನವತೆ ಉಳಿದಿತ್ತು. ಆದರೆ ಇಂದು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೆಲ್ಲ ಅಸಹನೆ ತಾಂಡವವಾಡುತ್ತಿದೆ. ಇದಕ್ಕೆ ವಿವಿಧ ರೀತಿಯ ಜಿಜ್ಞಾಸುಗಳು ತಮಗೆ ಮತ್ತು ತಮ್ಮನ್ನಾಳುವವರಿಗೆ ಅನುಕೂಲವಾದ ರಾಜಕೀಯ, ಧಾರ್ಮಿಕ (ಇವೆರಡರ ನಡುವೆ ವ್ಯತ್ಯಾಸವಿಲ್ಲದಂತೆ) ಪ್ರಮೇಯಗಳನ್ನು ಮಂಡಿಸುತ್ತಿದ್ದಾರೆ. ಬೇಕೋ ಬೇಡವೋ ಮತ-ಧರ್ಮಗಳು ಉಳಿಯುವುದಕ್ಕಾಗಿಯೇ ಹುಟ್ಟಿಕೊಂಡಿವೆ. ಅವು ಯಾವ ಉದ್ದೇಶಕ್ಕೆ ಹುಟ್ಟಿಕೊಂಡವೋ (ವಿಶ್ವಕುಟುಂಬದ ಉದ್ಧಾರವೆಂಬ ಸಂಶಯದೊಂದಿಗೆ ಹುಟ್ಟಿಕೊಂಡಿರಬೇಕು!) ಅವನ್ನೆಲ್ಲ ಮರೆತು ಈಗ ಆತ್ಮವಿಶ್ವಾಸದ ಬದಲಿಗೆ ಅಹಂಕಾರವನ್ನು ಸೃಷ್ಟಿಸಿವೆ. ಪ್ರೀತಿಯ ಬದಲು ದ್ವೇಷವನ್ನೇ ಹಣೆಯಲ್ಲಿ ಧರಿಸಿವೆ. ಪ್ರಾಣಿಗಳನ್ನು ಬೇಟೆಯಾಡಿ ಹಸಿಮಾಂಸವನ್ನು ತಿಂದುಂಡುವ ಹಂತದಿಂದ ವಿಕಾಸದ ಏಣಿಯನ್ನೇರಿ ನಾಗರಿಕತೆಯೆಂಬ ಸ್ವಪ್ನಸೌಧವನ್ನು ನಿರ್ಮಿಸಿಕೊಂಡ ಮನುಷ್ಯನು ಈಗ ಮನುಷ್ಯರನ್ನೇ ಬೇಟೆಯಾಡುವ ಹಂತಕ್ಕೆ ತಲುಪಿದ್ದಾನೆ.

ಇವೆಲ್ಲ ಜಾಗತಿಕ ಹಂತದಲ್ಲಿ ಮತ-ಧರ್ಮಗಳನ್ನು ಮೀರಿ ಬೆಳೆದಿವೆ. ಈ ಕೇಡು ಸದ್ಯ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಉತ್ತರ ಕೊರಿಯಾದ ಸರ್ವಾಧಿಕಾರಿಯೊಬ್ಬ ತಾನು ಭಾಷಣ ಮಾಡುವಾಗ ತೂಕಡಿಸಿದನೆಂಬ ಆರೋಪದಡಿ ತನ್ನ ಸೇನಾಧಿಕಾರಿಗೆ ಮರಣದಂಡನೆ ನೀಡಿದನು; ತನಗೆ ಹಿತ ಹೇಳಲು ಬಂದ ಸೋದರಮಾವನನ್ನು ತನ್ನ ಅಧಿಕಾರಕ್ಕೆ ಅಡ್ಡಿಮಾಡಿದನೆಂದು ಆಪಾದಿಸಿ ಹತ್ಯೆಮಾಡಿದನು. ಶ್ರೀಲಂಕಾದಲ್ಲಿ ಮರಣದಂಡನೆಗೆ ಗುರಿಯಾದವನೊಬ್ಬ ನೇರ ಸೆರೆಮನೆಯಿಂದಲೇ ಬಂದು ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ್ದು ವರದಿಯಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಯಾವ ಮಟ್ಟಕ್ಕಿಳಿದಿದೆಯೆಂದರೆ ಅಲ್ಲಿ ಭಾರತೀಯರನ್ನು ಆಕರ್ಷಿಸುವುದೇ ಒಂದು ರಾಜಕಾರಣವಾಗಿ ಭಾರತೀಯರು ಮಾರಾಟದ ಸರಕುಗಳೆಂಬ ಅಭಿಪ್ರಾಯಕ್ಕೆ ಗರಿಮೂಡಿದೆ. ಟ್ರಂಪ್ ಸೋತರೆ 9/11ರ ಇನ್ನೊಂದು ದಾಳಿಯಾಗಬಹುದೆಂಬ ಅಭಿಪ್ರಾಯವನ್ನು ಆತನ ಬಂಧುವೊಬ್ಬಳಿಂದಲೇ ಹೇಳಿಸುವ ಹುನ್ನಾರವೂ ನಡೆದಿದೆ. ಒಟ್ಟಿನಲ್ಲಿ ತಾನು ಉಳಿಯಬೇಕು; ತನಗಾಗದವರು ಅಳಿಯಬೇಕು.

ಭಾರತದಲ್ಲಿ ಮತ-ಧರ್ಮಗಳು ಕೇಡಿನ ವಾಹಕಗಳಾಗಿವೆ. ಇವಕ್ಕೆ ಪರಿಕರಗಳಾಗಿ ಎಲ್ಲ ಥರದ ವೈವಿಧ್ಯಗಳನ್ನೂ ಹತ್ತಿಕ್ಕುವ ಹಿಂಸೆ ಬೆಳೆಯುತ್ತಲೇ ಇದೆ. ಇದು ಹಿಂದೆಯೂ ಇತ್ತು; ಇಂದೂ ಇದೆ; ಮುಂದೂ ಇರುತ್ತದೆ. ವ್ಯತ್ಯಾಸವೆಂದರೆ ಅವತಾರವೆತ್ತುವ ದೇವರಿಲ್ಲವೆಂಬುದು ಆತನ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸುವವರಿಗೂ ತಿಳಿದಿದೆ. ಇನ್ನೊಂದೆಡೆ ಮತ-ಧರ್ಮ-ದೇವರುಗಳಷ್ಟು ಉದ್ದೀಪನಾ ಸರಕುಗಳು ಬೇರೆಯಿಲ್ಲವೆಂಬುದನ್ನು ಎಲ್ಲರೂ ತಿಳಿದಂತಿದೆ. ಹಿಂದೆ ರಾಜಾನುಗ್ರಹ-ರಾಜಾಗ್ರಹ ಎರಡೂ ಇದ್ದವು. ಅವು ಒಬ್ಬ ವ್ಯಕ್ತಿಯ ಕೆಲವು ಸ್ವಘೋಷಿತ ನ್ಯಾಯನಿಯಮಗಳನ್ನಾದರೂ ಅನುಸರಿಸುತ್ತಿದ್ದವು. ಆದರೆ ಈಗ ಈ ನಿಯಮಗಳು ಕಾನೂನಿನಡಿ ಅಡ್ಡಾದಿಡ್ಡಿ ಬೆಳೆದಿರುವುದರಿಂದ ಇವನ್ನು ನಿಗ್ರಹಿಸುವ ಯಾವ ವ್ಯವಸ್ಥೆಯೂ ಇಲ್ಲ. ತಮಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಬೇಕೆಂಬವರು ಇತರರಿಗೂ ಅದು ಬೇಕಾಗಬಹುದೆಂದು ಚಿಂತಿಸದಿರುವುದು ವರ್ತಮಾನದ ದೌರ್ಭಾಗ್ಯ ದುರಂತಗಳಲ್ಲೊಂದು. ರಾಜಕೀಯ ಪಕ್ಷಗಳನ್ನು ಗಮನಿಸಿ. ಪ್ರಜಾತಂತ್ರವನ್ನು ಕೊಲೆಮಾಡುತ್ತಿದ್ದೀರೆಂದು ದೂರುವವರು ತಮ್ಮ ಸ್ಥಾನಕ್ಕೆ ಚ್ಯುತಿ ಬರುವಾಗ ಯೋಗ್ಯತೆ, ಅನುಭವ, ಇದ್ಯಾವುದನ್ನೂ ಲೆಕ್ಕಿಸದೆ ನಿಗ್ರಹಿಸುತ್ತಾರೆ. ಇದು ವೈವಿಧ್ಯದ ಸಾವು. ಕಾಡುಪ್ರಾಣಿಗಳಲ್ಲಿ ಮರಗಿಡಗಳಲ್ಲಿರುವಂತೆ ಲಿಂಗಭೇದವನ್ನು ಹೊರತುಪಡಿಸಿ (ಅದೂ ತನ್ನ ಸುಖಕ್ಕಾಗಿ!) ಪ್ರಭೇದಗಳನ್ನು ಮನುಷ್ಯ ಮಾನವತಳಿಯಲ್ಲಿ ಸಹಿಸುವುದಿಲ್ಲವೇನೋ?

ಇದು ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಏಕಾತ್ಮ ಮಾನವತೆಯು ವ್ಯಂಗ್ಯಾರ್ಥದಲ್ಲಿ ಪೂಜೆಗೊಳ್ಳುತ್ತಿದೆ. ಎಲ್ಲವನ್ನೂ ತಮ್ಮ ಮತ್ತು ತಮ್ಮದೇ ಮೂಗಿನ ನೇರಕ್ಕೆ ಒಗ್ಗಿಸುವುದನ್ನು ನಮ್ಮ ಸಮಾಜ ಕಲಿತಿದೆ. ಇದಕ್ಕೆ ನಾಯಕತ್ವವು ರಾಜಕಾರಣಿಗಳದ್ದೇ. ಅಲ್ಲಿ ಒಮ್ಮೆ ಪ್ರತಿಷ್ಠಾಪಿಸಿಕೊಂಡವರು ಇನ್ಯಾರೂ ತಮ್ಮ ಸಮೀಪವೂ ಬಾರದಂತೆ ಏಣಿಯ ಮೆಟ್ಟಲುಗಳನ್ನು ಕತ್ತರಿಸುತ್ತಾರೆ. ಯಾರಾದರೂ ಹಿತವಾದದ್ದನ್ನು ಹೇಳಿದರೆ ಅವರ ಭವಿಷ್ಯವನ್ನು ಭೌತಿಕವಾಗಿ ಅಥವಾ ಬೌದ್ಧಿಕವಾಗಿ ನಿರ್ನಾಮ ಮಾಡುವ ಅಧಿಕಾರ ಯಂತ್ರಗಳು ಚಾಲನೆಯಲ್ಲಿವೆ. ಹಿಂದೆಯೂ ಸತ್ವ ಮತ್ತು ಸತ್ಯವು ಶಕ್ತಿಯೊಂದಿಗೆ ಸೆಣಸುತ್ತಲೇ ಬಂದವು. ಅದು ಅಹರ್ನಿಶಿ ಮುಂದುವರಿದಿದೆ. ನಮ್ಮ ಕಾಲದಲ್ಲಿ ವಿಜ್ಞಾನ ಬಹಳಷ್ಟು ಮುಂದುವರಿದಿರುವುದರಿಂದ ಎಲ್ಲರೂ ಪರಸ್ಪರ ಹೊಡೆದಾಡಲು ದ್ವಾಪರದ ಕೊನೆಗಿಂತಲೂ ಹೆಚ್ಚು ಅವಕಾಶಗಳಿವೆ. ಇದಕ್ಕೆ ವಿದ್ಯೆಯಾಗಲೀ ಬುದ್ಧಿಯಾಗಲೀ ಅಡ್ಡ ಬರುವುದಿಲ್ಲ. ಏಕೆಂದರೆ ಅವಕ್ಕೂ ಒಳ್ಳೆಯ ಮತ್ತು ಕೆಟ್ಟ-ಹೀಗೆ ಎರಡೂ ಮುಖಗಳಿವೆಯಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)